ಬುಧವಾರ, ಡಿಸೆಂಬರ್ 5, 2012

ಬಳ್ಳಾರಿ ಜಿಲ್ಲೆ :ಸಾಹಿತ್ಯದ ಹೊಸ ತಲೆಮಾರು


-ಡಾ.ಅರುಣ್ ಜೋಳದಕೂಡ್ಲಿಗಿ

  ಬಳ್ಳಾರಿ ಜಿಲ್ಲೆ ವಡ್ಡಾರಾಧನೆಯ ಕೇಶಿರಾಜನಿಂದ ಇಂದಿನ ದೈತ್ಯ ಕಥೆಗಾರ ಕುಂವಿ ವರೆಗೂ ಸಾಹಿತ್ಯವಲಯ ಸೂಕ್ಷ್ಮತೆಯನ್ನು ಕಾಪಿಟ್ಟುಕೊಂಡೆ ಬಂದಿದೆ. ಕಾಲಕಾಲಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಬರಹಗಾರರು ತಮ್ಮದೇ ಆದ ಸೃಜನಶೀಲ ಹುಡುಕಾಟ ಮಾಡಿಕೊಂಡು ಬಂದವರೆ ಆಗಿದ್ದಾರೆ. ಸದ್ಯಕ್ಕೆ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಬರೆವ ಬರಹಗಾರರ ಸಂಖ್ಯೆ ದೊಡ್ಡದಿದೆ. ಅಂತಹ ಕೆಲವು ಬರಹಗಾರರನ್ನು ಪರಿಚಯಿಸುವ ಟಿಪ್ಪಣಿ ರೂಪದ ಬರಹವಿದು. ಇಲ್ಲಿ ನನ್ನ ಗಮನಕ್ಕೆ ಬರದ ಬರಹಗಾರರು ಇರಬಹುದು ಎನ್ನುವುದು ನನ್ನ ನಂಬಿಕೆ. ನನ್ನ ಓದಿಗೆ ಸಿಕ್ಕ ಸಾಹಿತ್ಯದ ಹೊಸ ತಲೆಮಾರಿನ ಒಂದು ಚಿತ್ರವನ್ನು ಕಟ್ಟಿಕೊಡಲು ಇಲ್ಲಿ ಪ್ರಯತ್ನಿಸಿದ್ದೇನೆ.

ಕನ್ನಡದಲ್ಲಿ ಹೊಸ ತಲೆಮಾರು:

  ನನ್ನ ಮಾತುಗಳನ್ನು ಹೆಚ್. ಎಸ್. ಶಿವಪ್ರಕಾಶ್ ಅವರು ಕೇಂದ್ರ ಸಾಹಿತ್ಯ ಅಕಾದೆಮಿಯ ಇಂಡಿಯನ್ ಲಿಟರೇಚರ್ ಮ್ಯಾಗಜಿನ್ನಿಗೆ ಬರೆದ ಮಾತುಗಳ ಮೂಲಕ ಆರಂಭಿಸುತ್ತೇನೆ. ಅವು ಹೀಗಿವೆ: ‘ಯಾವುದೇ ಚಳವಳಿ ಇಲ್ಲದ ಈ ಕಾಲದಲ್ಲಿ, ಕನ್ನಡ ಕವಿಗಳು ತಮ್ಮದೇ ಆದ ತಾತ್ವಿಕ ಭಿತ್ತಿಯೊಂದನ್ನು ರೂಪಿಸಿಕೊಂಡು ಬರೆಯುತ್ತಿದ್ದಾರೆ. ಹೀಗೆ ಚಳವಳಿ ಇಲ್ಲದಿದ್ದರ  ಶಕ್ತಿ ಮತ್ತು ದೌರ್ಬಲ್ಯ ಎರಡನ್ನೂ ಒಳಗೊಂಡು  ತಮ್ಮದೇ ಆದ ಆ ಕ್ಷಣದ ಹೊಳಹುಗಳನ್ನು ಕಟ್ಟಿಕೊಡುತ್ತಾ ಒಂದು ಬಗೆಯ ಸಮ್ಮಿಶ್ರ ರೂಪಕಗಳನ್ನು ಸೃಷ್ಠಿಸುತ್ತಿದ್ದಾರೆ. ಹಾಗಾಗಿ ಸಂವೇದನಾಶೀಲತೆಯ ತೀವ್ರತೆಯ ಕೊರತೆ ಈ ಹೊತ್ತಿನ ಕಾವ್ಯದಲ್ಲಿ ಕಂಡು ಬರುತ್ತದೆ. ಒಳ್ಳೆಯ ಕವಿತೆ ಬರೆಯಬೇಕೆನ್ನುವ ಉತ್ಕಟತೆಗಿಂತ, ಕವಿ ನ್ನಿಸಿಕೊಳ್ಳಬೇಕೆನ್ನುವ ದಾವಂತಕ್ಕೆ ಕಟ್ಟುಬಿದ್ದು ಕಾವ್ಯ ಬರೆಯುತ್ತಾರೆ’ ಎನ್ನುತ್ತಾರೆ. ಈ ಮಾತು ಕನ್ನಡದ ಯುವ ಕವಿಗಳನ್ನು ಕುರಿತಾದದ್ದು. ಇದು ಪೂರ್ಣ ನಿಜವಲ್ಲದಿದ್ದರೂ ಈ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ.

  ಕನ್ನಡದಲ್ಲಿ ಹೊಸ ತಲೆಮಾರು ತುಂಬಾ ಕ್ರಿಯಾಶೀಲವಾಗಿದೆ. ಮುಖ್ಯವಾಗಿ ಕನ್ನಡದ ಹೊಸ ತಲೆಮಾರನ್ನು ಗುರುತಿಸುವ ಮತ್ತು ಚರ್ಚಿಸುವ ವಾತಾವರಣ ಉಂಟಾಗಿದೆ. ಅದು ತುಂಬಾ ಗಂಭೀರವಾದ ವಿಷಯ. ಪ್ರೊ. ರಹಮತ್ ತರೀಕೆರೆ ಅವರು ಹೊಸ ತಲೆಮಾರಿನ ತಲ್ಲಣ ಎನ್ನುವ ಒಂದು ಪುಸ್ತಕವನ್ನೇ ಸಂಪಾದಿಸಿದರು. ಅಲ್ಲಿ ಕನ್ನಡದ ಬಹುಮುಖ್ಯ ಯುವ ಬರಹಗಾರರು ತಮ್ಮ ಬರಹದ ತಲ್ಲಣಗಳನ್ನು ಹಂಚಿಕೊಂಡಿದ್ದಾರೆ. ತರೀಕೆರೆಯವರು ಯುವ ಬರಹಗಾರರನ್ನು ಕುರಿತು ಹೇಳುವ ಮಾತು ಹೀಗಿದೆ: ‘ಹೆಚ್ಚಿನವರು ಪ್ರಾಮಾಣಿಕವಾಗಿ ಗಂಬಿsರವಾಗಿ ಜೀವನೋತ್ಸಾಹ, ಶ್ರದ್ಧೆ ಮತ್ತು ಸೂಕ್ಷ್ಮತೆಗಳಿಂದ ಬರೆಯುತ್ತಿದ್ದಾರೆ. ತಮ್ಮ ಸುತ್ತಣ ವಿದ್ಯಮಾನಗಳ ಜತೆ ಕುತೂಹಲ, ಅವನ್ನು ಪರಿಶೀಲಿಸುವ ಎಚ್ಚರ, ಅವುಗಳ ಒಳಗಿನ ವೈರುಧ್ಯಗಳನ್ನು ಗಮನಿಸುವ ಸೂಕ್ಷ್ಮತೆ ಮತ್ತು ಅವನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ನಿಷ್ಠುರತೆ ಅವರಲ್ಲಿದೆ. ಕೆಲವರು ಈಗಷ್ಟೇ ಮೊದಲ ಬರೆಹದಲ್ಲೇ ಪ್ರತಿಭೆ ಪ್ರಕಟಿಸಿರುವವರು; ಕೆಲವರು ತಮ್ಮ ಅಸ್ಮಿತೆಯನ್ನು ಹುಡುಕಿಕೊಳ್ಳುತ್ತಿರುವರು. ಈ ಲೇಖಕರು ಪ್ರಕಟಿಸುತ್ತಿರುವ ಲೋಕದೃಷ್ಟಿ ಒಂದೇ ಅಲ್ಲ. ಹಲವು. ಆದರೆ ಹೆಚ್ಚಿನದೆಲ್ಲವೂ ಕನ್ನಡದ ಮಾನವತಾವಾದಿ ಪರಂಪರೆಯ ಚೌಕಟ್ಟಿನೊಳಗಿದೆ.  ಅತ್ಯುತ್ತಮ ಮನುಷ್ಯನ ಹುಡುಕಾಟ ಮತ್ತು ಅತ್ಯುತ್ತಮ ಸಮಾಜದ ಸೃಷ್ಟಿಯ ಹಂಬಲ ಇವರ ಬರೆಹದ ಆಶಯವಾಗಿದೆ.
    ತಲ್ಲಣ, ಅಸ್ಪಷ್ಟತೆ, ಹುಡುಕಾಟ, ಉತ್ಸಾಹ, ಉಮೇದುಗಳೆಲ್ಲವೂ ಸೇರಿದಂತಹ ಒಂದು ಸಂಕೀರ್ಣ ಸನ್ನಿವೇಶದಲ್ಲಿ ಬರೆಯುತ್ತಿರುವ ಹೊಸತಲೆಮಾರಿನ ಲೇಖಕರ ಬರೆಹದ ಮೂಲಕ, ಕನ್ನಡ ಸಾಹಿತ್ಯವು ೨೧ನೇ ಶತಮಾನದ ಈ ಮೊದಲ ಪಾದದಲ್ಲಿ, ಹೊಸ ಹೊರಳಿಕೆಯನ್ನು ಪಡೆಯಲು ಯತ್ನಿಸುತ್ತಿದೆ. ಈ ತಲೆಮಾರಿನ ಬರೆಹ ದೊಡ್ಡ ಸಾಧನೆ  ಮಾಡುವ ಸಾಧ್ಯತೆಗಳನ್ನಂತೂ ಪ್ರಕಟಿಸಿದೆ. ನಿಸ್ಸಂಶಯವಾಗಿ ಹೊಸತಾದುದು ಹುಟ್ಟುವ ಸಾಧ್ಯತೆಯಿರುವುದು ಈ ತಲೆಮಾರಿಂದಲೇ ಹೀಗೆ ಸಾಹಿತ್ಯದ ಹೊಸ ತಲೆಮಾರನ್ನು ಗುರುತಿಸಲು ಸಾದ್ಯವಿದೆ’ ಎನ್ನುತ್ತಾರೆ. ಈ ಮಾತುಗಳು ಕನ್ನಡ ಸಾಹಿತ್ಯದ ಹೊಸ ತಲೆಮಾರಿನ ಒಂದು ಲಕ್ಷಣವನ್ನು ಹೇಳುತ್ತಿವೆ. ಅಂತೆಯೇ ನಟರಾಜ ಹುಳಿಯಾರ ಅವರ ಸಂಪಾದಕತ್ವದಲ್ಲಿ ಬಂದ ಕನ್ನಡ ಟೈಮ್ಸ ಪತ್ರಿಕೆಯಲ್ಲಿಯೂ ಹೊಸ ತಲೆಮಾರು ಎಂದು ವಿಶೇಷ ಸಂಚಿಕೆಯನ್ನು ರೂಪಿಸಿ ಇಂತದ್ದೇ ಮಾತುಗಳನ್ನು ಆಡಿದ್ದರು.

  ಕರ್ನಾಟಕದಲ್ಲಿ ಹೊಸ ತಲೆಮಾರೊಂದು ತುಂಬಾ ಶಕ್ತಿಯುತವಾಗಿ ಬರೆಯುತ್ತಾರೆ. ಪೀರ್ ಭಾಷಾ, ವಿಕ್ರಮ ವಿಸಾಜಿ, ಚಿದಾನಂದ ಸಾಲಿ, ಕಲಿಗಣನಾಥ ಗುಡದೂರು, ತುರುವಿಹಾಳ ಚಂದ್ರು, ತಾರಿಣಿ ಶುಭದಾಯಿನಿ, ಕೆ. ಅಕ್ಷತಾ, ಅರವಿಂದ ಚೊಕ್ಕಾಡಿ, ಶಶಿ ಸಂಪಳ್ಳಿ, ವಿನಯಾ ವಕ್ಕುಂದ, ಎಂ.ಡಿ. ಒಕ್ಕುಂದ, ಸುನಂದಾ ಪ್ರಕಾಶ ಕಡಮೆ, ಚ.ಹ. ರಘುನಾಥ, ಸರ್ಜಾಶಂಕರ ಹರಳೀಮಠ, ರಮೇಶ್ ಅರೋಲಿ, ನಾಗಣ್ಣ ಕಿಲಾರಿ, ದೇವು ಪತ್ತಾರ, ಚಿದಾನಂದ ಕಮ್ಮಾರ್, ವಸುದೇಂದ್ರ, ಬಿ.ಶ್ರೀನಿವಾಸ, ಮಾಧವಿ ಭಂಡಾರಿ, ಶ್ರೀದೇವಿ ಕೆರೆಮನೆ, ಶಿವರಾಜ ಬೆಟ್ಟದೂರು, ಗಣೇಶ್ ಹೊಸಮನೆ, ಸಂದೀಪ ನಾಯಕ, ನಾಗಮಂಗಲ ಕೃಷ್ಣಮೂರ್ತಿ, ಟೀನಾ ಶಶಿಕಾಂತ, ವಿಕಾಸ ನೇಗಿಲೋಣಿ, ಕೆ. ಕರಿಸ್ವಾಮಿ, ಆರಿಫ್ ರಾಜಾ, ವೀರಣ್ಣ ಮಡಿವಾಳರ, ರೂಪಾ ಹಾಸನ, ಜ್ಯೋತಿ ಗುರುಪ್ರಸಾದ್, ಅನಸೂಯ ಕಾಂಬಳೆ, ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಡೆಯೇ ಇದೆ. ಇಲ್ಲಿ ಕಾವ್ಯ ಕಥೆ ಪ್ರಬಂಧ ಮುಂತಾದ ಪ್ರಾಕಾರಗಳಲ್ಲಿ ಒಂದು ಪ್ರಯೋಗ ನಡೆಯುತ್ತಿದೆ

  ಈ ಪ್ರಬಂಧದಲ್ಲಿ ಬಳ್ಳಾರಿ ಜಿಲ್ಲೆಯ ಯುವ ಬರಹಗಾರನ್ನಿಟ್ಟುಕೊಂಡು ಟಿಪ್ಪಣಿ ಮಾಡಿದ್ದೇನೆ. ಯಾಕೆಂದರೆ ಎಷ್ಟೋ ಬಾರಿ ರಾಜ್ಯದ ಯುವ ಬರಹಗಾರರು ಎಂದಾಗ ಕೆಲವರು ಮಾತ್ರ ಪರಿಗಣಿಸಲ್ಪಟ್ಟು ಬಹುತೇಕರು ಕಡೆಗಣಿಸಲ್ಪಡುತ್ತಾರೆ. ಹಾಗಾಗಿ ಬಳ್ಳಾರಿ ಜಿಲ್ಲೆಯ ಯುವ ಬರಹಗಾರರು ಇಂದು ಏನನ್ನು ಬರೆಯುತ್ತಿದ್ದಾರೆ? ಈ ಬರಹದ ಮೂಲಕ ನಾಡಿನ ಹೊಸ ತಲೆಮಾರಿಗೆ ಏನನ್ನು ಸೇರಿಸುತ್ತಿದ್ದಾರೆ? ಎನ್ನುವುದನ್ನು ಮುಖ್ಯವಾಗಿಟ್ಟುಕೊಂಡಿದ್ದೇನೆ. ಇಲ್ಲಿ ಸಾದ್ಯವಾದಷ್ಟು ಬಳ್ಳಾರಿ ಜಿಲ್ಲೆಯ ಬರಹಗಾರರನ್ನು ಗಮನಹರಿಸಲು ಪ್ರಯತ್ನಿಸಿದ್ದೇನೆ.
ಬಳ್ಳಾರಿ ಜಿಲ್ಲೆಯಲ್ಲಿ ಹೊಸ ತಲೆಮಾರು:
  ಬಳ್ಳಾರಿ ಜಿಲ್ಲೆಯಲ್ಲಿ ಕವಿಗಳ ಸಂಖ್ಯೆ ಹೆಚ್ಚಿದೆ. ಬಿ. ಪೀರ್ ಭಾಷಾ, ಮಲ್ಲಿಕಾರ್ಜುನಗೌಡ ತೂಲಹಳ್ಳಿ, ವೆಂಕಟಗಿರಿ ದಳವಾಯಿ, ಸಿದ್ದರಾಮ ಹಿರೇಮಠ, ಕಂಪ್ಲಿ ಶಿವಕುಮಾರ್, ಸಿದ್ದು ದೇವರಮನಿ, ಅಕ್ಕಿ ಬಸವೇಶ, ರಾಮಪ್ಪ ಮಾದರ, ಅಂಬಿಗರ ಮಂಜುನಾಥ, ಎಸ್. ಮಂಜುನಾಥ, ಕೆ.ಶಿವಲಿಂಗಪ್ಪ ಹಂದಿಹಾಳು, ಅಜಯ್ ಬಣಕಾರ್, ನಾಗರಾಜ ಬಣಕಾರ್, ಸೈಫ್ ಜಾನ್ಸೆ ಕೊಟ್ಟೂರು, ಸುಧಾ ಚಿದಾನಂದಗೌಡ, ಸುಜಾತ ಅಕ್ಕಿ, ಟಿ.ಎಂ. ಉಷಾರಾಣಿ, ಛಾಯಾ ಭಗವತಿ, ಪದ್ಮಾ ಜಾಗಟಗೇರಿ, ಗಿರಿಜಾ ಬೂದೂರು, ನಾಗಮಂಜುಳಾ ಜೈನ್ ಮುಂತಾದವರನ್ನು ಪ್ರಮುಖವಾಗಿ ಗುರುತಿಸಬಹುದು.

  ಬಿ.ಪೀರ್ ಭಾಷಾ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ತುಂಬಾ ಶಕ್ತಿಯುತವಾದ ಕವಿ. ಸಮಾಜವಾದಿ ಹೋರಾಟಗಾರರ ಸಂದರ್ಶನದ ಎರಡು ಸಂಪುಟಗಳನ್ನು ಪ್ರಕಟಿಸುವ ಮೂಲಕ ಸಂಶೋಧನೆ ವಿಮರ್ಶೆಯಲ್ಲಿಯೂ ಗಂಭೀರ ಕೆಲಸ ಮಾಡುತ್ತಿದ್ದಾರೆ. ಜೀವಬಂತು ಹಾದಿಗೆ, ಜಾಲಿ ಹೂಗಳ ನಡುವೆ, ದೇವರುಗಳೆಲ್ಲಾ ಮನುಷ್ಯರಾದ ದಿನ, ಈಚೆಗೆ ಅಕ್ಕ ಸೀತಾ ನೀನು ನನ್ನಂತೆ ಶಂಕಿತ ಎನ್ನುವ ಸಂಕಲನಗಳ ಮೂಲಕ ಕನ್ನಡ ಕಾವ್ಯಕ್ಕೆ ಬೇರೆಯದೇ ಆದ ಶಕ್ತಿಯನ್ನು ತುಂಬಿದವರು. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಎನ್ನುವ ಪದ್ಯದಲ್ಲಿ ಹೌದು ಅಕ್ಕ ಸೀತಾ/ ನಿನ್ನಂತೆ ನಾನೂ ಶಂಕಿತ/ನಿನ್ನ ಪಾತಿವ್ರತ್ಯದಂತೆಯೇ ನನ್ನ ದೇಶಭಕ್ತಿ/ ಸಾಬೀತು ಪಡಿಸುವುದಾದರೂ ಹೇಗೆ ಹೇಳು ಶೀಲ? ಯಾವ ಸಾಕ್ಷಿಗಳನ್ನು ತರುವುದು ಎಲ್ಲಿಂದ/ ನಮ್ಮ ಮನೆಯಲ್ಲಿಯೇ ನಾವು ನಿರಾಶ್ರಿತರು/ತುಂಬಿದ ನಾಡೊಳಗೆ ಪರಕೀಯರು/ನಮ್ಮ ನೆತ್ತರಿನಿಂದ ಅವರು/ ನಮ್ಮ ನೆಮ್ಮದಿಯನ್ನು ಕಿತ್ತುಕೊಂಡಿದ್ದಾರೆ/ಅಪವಾದದ ಹಸ್ತ್ರಗಳಿಂದ ಹೃದಯ/ ಗಾಯಗೊಳಿಸಿದ್ದಾರೆ.
ಅಕ್ಕ ಸೀತಾ/ ನಾವು ಈ ನೆಲದ ಮಕ್ಕಳು/ಪರೀಕ್ಷೆಯೆಂಬ ಪಿತೂರಿಯ/ ಬೆಂಕಿಯಲ್ಲೇಕೆ ನಾವು ಬೇಯಬೇಕು/ ಬೆನ್ನಿಗೆ ಬಾಣ ಬಿಡುವ ಕ್ರೌರ್ಯವೇಕೆ ನಮ್ಮನ್ನಾಳಬೇಕು. ಎಂದು ಸೂಕ್ಷ್ಮವಾಗಿ ಪ್ರಶ್ನಿಸುತ್ತಾರೆ. ಈ ಸಂಕಲನದ ಅಷ್ಟೂ ಕವಿತೆಗಳು ನಮ್ಮ ಕಾಲದ ವರ್ತಮಾನದ ಬಿಕ್ಕಟ್ಟುಗಳನ್ನು ಭಿನ್ನವಾಗಿ ತೋರಿಸುತ್ತಿವೆ.
  ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ನಮ್ಮ ನಡುವಿನ ಒಳ್ಳೆಯ ಕವಿ. ಅವರ ಶರೀಫನ ಬೊಗಸೆ ಮೂಲಕ ಹೊಸ ನುಡಿಗಟ್ಟುಗಳ ಶೋಧದಲ್ಲಿ ತೊಡಗಿದ್ದಾರೆ. ಕಣ್ಣಕದವಿಕ್ಕಿಕೊಂಡು/ ಅಳುತ್ತಿರುವ ಹೃದಯಗಳೇ/ ಬನ್ನಿ/ ನಿಮ್ಮೆಲ್ಲರಿಗೆ/ ಶರೀಪನ ಬೊಗಸೆಯಾಗುವೆ./ ಪ್ರೇಮ ವಂಚನೆಗೊಂಡು/ ಬೇಯುತ್ತಿರುವ ಮನಸ್ಸುಗಳೇ/ಬನ್ನಿ/ ನಿಮ್ಮೆಲ್ಲರಿಗೆ/ ಅಕ್ಕನ ದಾರಿ ತೋರುವೆ. ಎಂದು ಬರೆಯುತ್ತಾರೆ.
 
 ವೆಂಕಟಗಿರಿ ದಳವಾಯಿ ವಿಮರ್ಶೆ ಸಂಶೋಧನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಅಪಮಾನಗಳಿಗಿಲ್ಲ ವಿರಾಮ ಎನ್ನುವ ಮೊದಲ ಕಾವ್ಯ ಸಂಕಲನ ಒಂದು ಉತ್ತಮ ಪ್ರಯತ್ನವಾಗಿದೆ. ಸ್ಥಾವರಕ್ಕಳಿವುಂಟು ಎನ್ನುವ ಕವನದಲ್ಲಿ ಸ್ಮರಣೆಯ ನಾಲಿಗೆಗೆ ನೆಟ್ಟ ಮುಳ್ಳನು/ ಕಣ್ಣಿಂದ ಕೀಳಬೇಕಿದೆ ಹೂವಿನಂತೆ/ ಅಲ್ಲಮನ ಬಯಲು, ಕನಕನ ಕೋಣನ ಭಕ್ತಿ/ಷರೀಫನ ಸತೀತನಕ್ಕೆ ತೊಡಕಾಗುವ/ ಮುನ್ನ ಸುಡಬೇಕಿದೆ ಈ ಮುಳ್ಳನು ಬೇರು ಸಮೇತ. ಹೀಗೆ ಸ್ಥಾಪಿನ ನಂಬಿಕೆಗಳನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ.
   ಕೂಡ್ಲಿಗಿಯ ಸಿದ್ದರಾಮ ಹಿರೇಮಠ ಅವರು ಅವರ ಮೂವತ್ತೈದು ಗಜಲುಗಳು ೪೫ ಹೈಕುಗಳು ಎನ್ನುವ ಸಂಕಲನದಲ್ಲಿ ಗಜಲ್ ಪ್ರಾಕಾರವನ್ನು ಭಿನ್ನವಾಗಿ ದುಡಿಸಿಕೊಂಡಿದ್ದಾರೆ. ಬಂದೂಕಿನ ಬಾಯಲ್ಲಿ ಗುಂಡು ಸಿಡಿದರೂ ಗುಬ್ಬಿ ಗೂಡು ಕಟ್ಟಿದರೂ/ಬೆನ್ನು ಬಾಗಿಸಿ ಬೂಟು ಒರೆಸುವುದು ಇನ್ನೂ ತಪ್ಪಿಲ್ಲ ಈ ಕನಸುಗಳೇ ಹೀಗೆ!/ಪ್ರತಿ ಮನೆಯಲ್ಲೂ ಕಂಬನಿದುಂಬಿದ ಕಣ್ಣುಗಳಿವೆ/ಕಣ್ಣೊರೆಸುವ ಬಗೆಯ ತಿಳಿಯದಿರುವೆ ಹೇಗೆ ತೊಡೆಯಲಿ ಸಾಕಿ! ಎನ್ನುತ್ತಾ ಗಝಲ್ ಪ್ರಕಾರಕ್ಕೆ ತಮ್ಮದೇ ಆದ ವಿಶಿಷ್ಟತೆಯನ್ನು ಸೇರಿಸಿದ್ದಾರೆ.
 
   ಸಿರುಗುಪ್ಪ ಭಾಗದ ವಿ.ಹರಿನಾಥ ಬಾಬು ಕಾವ್ಯವನ್ನು ನಿರಂತರವಾಗಿ ಬರೆಯುತ್ತಿದ್ದಾರೆ. ಅವರ ಬೆಳಕ ಹೆಜ್ಜೆಯನರಸಿ ಸಂಕಲನ ಕಾವ್ಯಾಸಕ್ತರ ಗಮನ ಸೆಳೆದಿದೆ. ಬರೆಯಲಾರೆ ಮಗು ಕ್ಷಮಿಸು, ನಿನ್ನ ನಗು ಅಳುವಿಗಿಂತ ದೊಡ್ಡ ಕವಿತೆ ಎಂದು ವಿನಯದಿಂದಲೇ ಕೇಳುವ ಕವಿ ಸೂರ್ಯ ನಿನ್ನದೆಂಥ ಬಿಸಿಲು/ನಮ್ಮ ಹೊಟ್ಟೆಯ ಹಸಿವಿನ ಮುಂದೆ? /ಮೋಡಗಳೇ ನಿಮ್ಮದೆಂಥ ಮಳೆಯೋ/ ನಮ್ಮ ಬಡತನದ ಕಣ್ಣೀರ ಮುಂದೆ? ಎಂದು ತಣ್ಣಗೆ ಪ್ರಶ್ನಿಸುತ್ತಲೇ ಸಮಾಜದ ನಿಜ ಬದುಕನ್ನು ಕಾಣಿಸುತ್ತಾರೆ.
   ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಸಮೀಪದ ಜೋಗಿನಕಲ್ಲು ಗ್ರಾಮದ ಬಿ. ಶ್ರೀನಿವಾಸ ಅವರು ‘ಉರಿವ ಒಲೆಯ ಮುಂದೆ’ ಸಂಕಲನ ಪ್ರಕಟಿಸಿ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಸಾಲು ಸಾಲು ಪರದೆಗಳ ಹಿಂದೆ/ ಅದೆಷ್ಟು ಸವಾಲುಗಳಿವೆ? ಜಾಹೀರಾತಿನ ಪರದೆಯ ಹಿಂದೆ/ ಅದೆಷ್ಟು ಜೋಪಡಿಗಳಿವೆ? ಈತಹ ಸೂಕ್ಷ್ಮ ಸೆಳಕುಗಳು ಅವರ ಕಾವ್ಯದಲ್ಲಿದೆ. ಬಿ. ಶ್ರೀನಿವಾಸ್ ಕಥೆಗಾರರೂ ಕೂಡ. ಅವರ ಕಾಣದಾಯಿತೋ ಊರುಕೇರಿ ಸಂಕಲನದಲ್ಲಿ ಗಂಭೀರ ಕಥೆಗಳಿವೆ.
 
  ಅಗ್ನಿ ಕಿರೀಟ ಕವನ ಸಂಕಲನದ ಮೂಲಕ ಗಮನ ಸೆಳೆದ  ಶಿವಕುಮಾರ ಕಂಪ್ಲಿ ಅವರ ಒಂದು ಪದ್ಯ ಹೀಗಿದೆ:  ಸವಾಲಿಗೆ ಸೊಲ್ಲಾಗಿ/ಬೆಳಕಾದರೂನೂ ಬೆತ್ತಲೆ ಬಯಸುವ ಕಣ್ಣಿರುವಾಗ/ಗುಡಿಯಾದರೇನಂತೆ ರವಿಕೆ /ಸರಿಯಾಗಿದೆಯೇ ಇಣುಕಬೇಕು/ ಹೆಣ್ಣ ಬಣ್ಣಗಳೆಲ್ಲಾ ಜಾಗತೀಕರಣಕೆ ಸರಕು/ಚರಿತೆ ಸರಿದರೂ ಮತ್ತೆ ಬಡಜನರೇ ಬೇಕು ಬಲಿಗೆ  ||  /ಕಾಡು, ನೆಲ, ನೀರೆಲ್ಲಾ ಯಂತ್ರಗಳ ಕೈಸೇರಿ/ ದುಡಿದು ತಿನ್ನುವ  ಜನರು ಗುಳೆ ಎದ್ದು ಹೋದಾಗ/ಒಂಟಿ ಬಾಣತಿ ಕೂಸು ನಾಯಿ ಬಾಯಿಯ ತುತ್ತು/ಜೀವ ಹನಿಹನಿಯಾಗಿ ಕೆರೆ ಹಳ್ಳ ನಡುಗಿತ್ತು||
   ಡಾ. ಜಾಜಿ ದೇವೇಂದ್ರಪ್ಪ ಬಾನಬೆಡಗು ಎಂಬ ಕಾವ್ಯ ಸಂಕಲನವನ್ನೂ, ವಿಜಲುಗಳು ಎಂಬ ಗಝಲ್ ಮಾದರಿಯ ಕವನ ಸಂಕಲನವನ್ನೂ ತಂದಿದ್ದಾರೆ. ದೇವೇಂದ್ರಪ್ಪ ಸಂಶೋಧನೆ ಮತ್ತು ಅನುವಾದದಲ್ಲಿ ತಮ್ಮ ಸೃಜನಶೀಲ ಹುಡುಕಾಟವನ್ನು ಮುಂದುವರಿಸಿದ್ದಾರೆ. ವ್ಯಕ್ತಿನಾಮಗಳ ಬಗ್ಗೆ ಒಂದು ಗಂಭೀರ ಸಂಶೋಧನೆ ಮಾಡಿದ್ದಾರೆ. ಕಂಚ ಐಲಯ್ಯ ಅವರ ಪುಸ್ತಕವೊಂದನ್ನು ಅನುವಾದಿಸುತ್ತಿದ್ದಾರೆ. ಅದನ್ನು ಲಡಾಯಿ ಪ್ರಕಾಶನ ಪ್ರಕಟಿಸುತ್ತಿದೆ.
    ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’  ಸಂಕಲನದ ಮೂಲಕ ತನ್ನದೇ ಆದ ಒಂದು ವಿಶಿಷ್ಟ ಲಯವನ್ನು ಕಂಡುಕೊಂಡವರು ಸಿದ್ದು ದೇವರಮನಿ. ಒಂದು ಅಂಗಡಿಯಲ್ಲಿ ಕೂತು ಈ ಜಗತ್ತನ್ನು ಗ್ರಹಿಸಿದ ಒಬ್ಬರ ಗ್ರಹಿಕೆಗಳಾಗಿ ನನಗೆ  ಸಿದ್ದು ಅವರ ಕಾವ್ಯ ಕಾಣುತ್ತದೆ. ಬರದ ಭ್ರಮೆಗಳು ಎನ್ನುವ ಕವನದ ಸಾಲುಗಳು ಹೀಗಿವೆ: ಅಲ್ಲೆಲ್ಲೋ .. ಓಡುವ ಮೋಡ ನಿ೦ತು ಮಿ೦ಚಿದ೦ತೆ/ಅವಮಾನದ ಹಸಿವು ಮತ್ತೊಮ್ಮೆ ಕು೦ತು ಹೊ೦ಚಿದ೦ತೆ/ಗುಡಿ ಮೆಟ್ಟಿಲ ಹಣ್ಣು ಜೀವಕ್ಕೆ ಮರೆಯಾದ ಗ೦ಡನಲ್ಲದಿದ್ದರೂ/ಹನಿ ಮಳೆಯಾದರೂ ಬ೦ದೀತೆ೦ಬ ನಿರೀಕ್ಷೆ!/ಕೂಳು ಕಾದ ಕ೦ಗಳ ದ್ರವ ಜೀವಗಳೆಲ್ಲವು/ಕಾಣದ ಕತ್ತಲೆಯ ಮುಕ್ತಿಗೆ ಸೋಲಬೇಕೆ೦ದು ಸಾಲು ನಿ೦ತಿವೆ !/ಹರಿದ ತಾಳಿ ಒಡತಿಯ  ಕಣ್ಣೀರಿಗೆ ,ಬಿಸಿಲಲ್ಲದೆ/ಜೀವನದ ಯಾವ ಜಾದುವೂ ಜರ್ರಾ ಸಹಾಯಕ್ಕೆ ಬ೦ದ ನೆನಪಿಲ್ಲ ! ಹೀಗೆ ಕಾವ್ಯದ ಯಾವ ಪಟ್ಟುಗಳನ್ನು ಕಲಿಯದೆ ಸಹಜವಾಗಿ ಕಾವ್ಯ ಬರೆದು ಗಮನಸೆಳೆದಿದ್ದಾರೆ.
  ಹಗರಿಬೊಮ್ಮನಹಳ್ಳಿಯ ಭಾಗದಲ್ಲೊಂದು ಯುವ ಬರಹಗಾರರ ಪಡೆಯೇ ಸಿದ್ದಗೊಳ್ಳುತ್ತಿದೆ. ಅಕ್ಕಿ ಬಸವೇಶ ಈ ಭಾಗದ ಗಮನಸೆಳೆಯುವಂತಹ ಕವಿ ‘ಕೊಲ್ಲಬಹುದು ಯಾರಾದರೂ ಕವಿಯನ್ನು, ಆದರೆ ಸಾಯಬಲ್ಲವೆ ಅವನ ಕವಿತೆಗಳು’ ಎಂದು ಕೇಳುವ ಬಸವೇಶ ‘ನಿಜದ ಬೆಳಗು’ ಸಂಕಲನದ ಮೂಲಕ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ಬಸವೇಶ ಮೂಲತಃ ಪ್ರೇಮಕವಿ. ಆತನ ಕಾವ್ಯಗಳಲ್ಲಿ ಪ್ರೀತಿಯ ನವಿರಾದ ಸೆಳಕುಗಳು ಕಾಣುತ್ತವೆ. ಆತನ ಕವಿತೆಗಳು ಎನ್ನುವ ಕವನವೊಂದು ಹೀಗಿದೆ: ಮೊನ್ನೆ/ಹೇಳಿದರು ನಿನ್ನ ಕವಿತೆಗಳು/ ತಿನ್ನಲಿಕ್ಕೆ ಬರವು/ ಉಣ್ಣಲಿಕ್ಕೂ ಬರವು/ ಬಿಟ್ಟುಬಿಡು ಅವುಗಳ ಸಂಗ ಎಂದು/ಆದರೆ/ ಅವರಿಗೇನು ಗೊತ್ತು/ನನ್ನ ಕವಿತೆಗಳು ನನ್ನವಳ ಪ್ರೀತಿಯಂತೆ/ಪ್ರೀತಿಯನ್ನು ತಿನ್ನಲಿಕ್ಕೂ ಬರದು/ ಉಣ್ಣಲಿಕ್ಕೂ ಬರದು/ಯಾಕೋ ಪ್ರೀತಿಯಿಲ್ಲದೆ ಬದುಕಲಿಕ್ಕೂ ಬಾರದು.
ಬಸವೇಶ ‘ಹಾದಿ’ ಎನ್ನುವ ಕವನದಲ್ಲಿ ತನ್ನ ಬದುಕಿನ ಹಾದಿಯನ್ನೂ ಕಾಣಿಸಿದ್ದಾರೆ: ಈ ಹಾದಿ ಯಾರದೋ ಏನೋ/ನಡೆಯುತ್ತಲೇ ಇದ್ದೇನೆ ನಿರಂತರ/ಸವೆಸಬೇಕು ಕಲ್ಲುಮುಳ್ಳುಗಳ ಹಾದಿಯನ್ನು/ಸಹಿಸಬೇಕು ಕಡು ಬಿಸಿಲ ತಾಪವನ್ನು/ಬಯಸಬೇಕು ಕೊನೆಗೆ/ ದಾರಿ ಬದಿಯ ಮರಗಳ ನೆರಳನ್ನು / ಎನ್ನುತ್ತಾರೆ.
  ಅಂಬಿಗರ ಮಂಜುನಾಥ ಈಚೆಗೆ ಕೆಂಪು ದೀಪ ಎನ್ನುವ ಸಂಕಲನವನ್ನು ತಂದಿದ್ದಾರೆ. ವಿಳಾಸವಿಲ್ಲದವರು ಎನ್ನುವ ಪದ್ಯದಲ್ಲಿ : ಸದಾ ಉರುಳುವ ಕಾಲ ಚಕ್ರಕ್ಕೆ/ ತಲೆ ಒಡ್ಡುವವರು /ಇವರು; ತಲೆ ಹೋದರೂ ಪರವಾಗಿಲ್ಲ/ನೆಲೆ ಕಾಣಬೇಕೆನ್ನುವ/ ದಡ್ಡರು ಇವರು ಎನ್ನುವ  ತರಹದ ಹೊಳಹುಗಳಿರುವ ಪದ್ಯಗಳನ್ನು ಮಂಜುನಾಥ ಬರೆದಿದ್ದಾರೆ. ಹೂವಿನ ಹಡಗಲಿ ಹತ್ತಿರದ ಹಳ್ಳಿಯ ರಾಮಪ್ಪ ಮಾದರ ಅವರು ಕೆರ ಹೊತ್ತ ಬಸವ ಎನ್ನುವ ಸಂಕಲನವನ್ನು ತಂದಿದ್ದಾರೆ. ಈ ಸಂಕಲನ ವಿವಾದಕ್ಕೂ ಕಾರಣವಾಗಿತ್ತು. ಈ ಸಂಕಲನದಲ್ಲಿ ನನ್ನ ತಂಗಿಯನ್ನು ಕೊಂದರು ಎನ್ನುವ ಪದ್ಯ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಜೀವಂತವಾಗಿರುವ ಗೌಡಿಕೆಯ ದಬ್ಬಾಳಿಕೆಯನ್ನು ಹಳ್ಳಿಗಳಲ್ಲಿ ದಲಿತರ ಅಸಹಾಯಕತೆಯನ್ನು ತೋರಿಸುತ್ತಿದೆ.
   ಅರುಣ್ ಜೋಳದಕೂಡ್ಲಿಗಿ ‘ನೆರಳು ಮಾತನಾಡುವ ಹೊತ್ತು’ ‘ಅವ್ವನ ಅಂಗನವಾಡಿ’ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಸಂಡೂರು ಭೂ ಹೋರಾಟ ಸಂಶೋಧನ ಕೃತಿಗೆ ಗುಲ್ಬರ್ಗಾ ವಿವಿಯ ರಾಜ್ಯೋತ್ಸವ ಪ್ರಶಸ್ತಿಯೂ, ಕಸಾಪ ನೀಡುವ ‘ಅರಳು’ ಪ್ರಶಸ್ತಿಯೂ ದೊರೆತಿದೆ. ಅವರ ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು ಪಿಹೆಚ್ ಡಿ ಸಂಶೋಧನ ಕೃತಿ ಪ್ರಕಟವಾಗಿದೆ. ಅರುಣ್ ಕಾವ್ಯಕ್ಕೆ ಪ್ರಜಾವಾಣಿ, ಸಂಚಯ, ಸಂಕ್ರಮಣ ಪ್ರಶಸ್ತಿಗಳೂ ಬಂದಿವೆ. ಪ್ರೆಂಚ್ ಸಿನೆಮಾ ದಿ ಆರ‍್ಟಿಸ್ಟ್: ಕನ್ನಡ ನೋಟ, ಮಂಜಮ್ಮ ಜೋಗತಿಯ ಆತ್ಮಕಥನ ಪ್ರಕಟಣೆಯ ಹಂತದಲ್ಲಿವೆ.
  ಬಳ್ಳಾರಿಯ ಎಸ್. ಮಂಜುನಾಥ ಅವರು ಚುಕ್ಕಿ ಚಂದ್ರಮ ಎನ್ನುವ ವಿಜ್ಞಾನ ಪದ್ಯಗಳನ್ನೂ ವೈಚಾರಿಕ ಕವನಗಳು ಎನ್ನುವ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಯೋಗಾತ್ಮಕವಾಗಿ ಈ ಎರಡೂ ಸಂಕಲನಗಳನ್ನು ನೋಡಬಹುದಾದರೂ ಸಾಹಿತ್ಯಿಕ ಗುಣಗಳು ಮಂಜುನಾಥ ಅವರ ಪದ್ಯಗಳಿಗಿನ್ನು ದೊರಕಿಲ್ಲವೆಂದೇ ಹೇಳಬೇಕು. ಬಳ್ಳಾರಿ ಪಕ್ಕದ ಹಂದಿಹಾಳಿನ ಶಿವಲಿಂಗಪ್ಪ ಅವರ ನಾನು ಮತ್ತು ಕನ್ನಡಕ ಎನ್ನುವ ಕವನ ಸಂಕಲನದ ಮೂಲಕ ಗಮನಸೆಳೆದಿದ್ದಾರೆ. ಕಲ್ಲು ಕುಟ್ಟುವವರು ಎನ್ನುವ ಪದ್ಯದಲ್ಲಿ  ಆಕಾಶದ ಚಪ್ಪರದಡಿಯಲ್ಲಿ/ನೆಲದಾಸಿಗೆಯ ಮೇಲ್ಕೂತು/ಗೂಡೆ ಇಲ್ಲದ ನಾಡಲ್ಲಿ/ಬಾಳೇ ಇಲ್ಲದೆ ಬೀದಿಗಿಳಿದವರು/ಉಳಿ-ಸುತ್ತಿಗೆ ಹಿಡಿದು ಬಡಿದು/ ಅಳಿಯುತ್ತಿರುವವರು/ಕುಟ್ಟುವೆವು ನಾವು ಕಲ್ಲು/ ನಾವು ನಿಮ್ಮೊಂದಿಗೇ ಹುಟ್ಟಿದವರು/ನಿಮಗೆ ಸಂಬಂಧ ಪಟ್ಟರೂ ನಿಮ್ಮವರಾಗದವರು/ನಾವು ಕಲ್ಲು ಕುಟ್ಟುವವರು. ಎಂದು ಬರೆಯುತ್ತಾರೆ.
 ಕೊಟ್ಟೂರಿನ ಬಣಕಾರ ಸಹೋದರರಾದ ನಾಗರಾಜ, ಅಜಯ ಕಾವ್ಯ ಕಟ್ಟುವ ಕೆಲಸದಲ್ಲಿ ನಿರತರಾದವರು. ನಾಗರಾಜ ‘ಕನಸು ಕರಗುವ ಸಮಯ’ ಸಂಕಲನದಲ್ಲಿ ಭರವಸೆ ಮೂಡಿಸುತ್ತಾರೆ. ಪ್ರೀತಿ ಪದ್ಯಗಳನ್ನು ನವಿರಾಗಿ ಬರೆವ ನಾಗರಾಜ ಅವರು, ಆದರ್ಶ, ನೆನಪು, ಮಾತು ಎಲ್ಲವೂ ಬರಿ ನೆಪ ಮಾತ್ರ ಅವಳ ಮೌನ ಪ್ರೀತಿಯ ಮುಂದೆ ಎನ್ನುತ್ತಾರೆ. ರೋಡ್ ಅಗಲೀಕರಣದ ಭರಾಟೆಯಲ್ಲಿ ಕಾವ್ಯದಲ್ಲಿ ರಸ್ತೆ ಅಗಲೀಕರಣದ ಅಮಾನವೀಯ ಮುಖವೊಂದನ್ನು ಚೆನ್ನಾಗಿ ಹಿಡಿದಿದ್ದಾರೆ. ಅಜಯ್ ನೀನಿರದ ಭೂಮಿಯಲ್ಲಿ ಕವಿತೆಗಳಲ್ಲಿ ಹೊಸ ಹೊಳವುಗಳನ್ನು ಕಾಣಿಸಿದ್ದಾರೆ. ಮನೆ ಕಟ್ಟುವ ಮಹಿಳೆ ಕವಿತೆಯಲ್ಲಿ ‘ಮನೆ ಯಾರದಾದರೂ/ ಕಾಯಕದಿ ಮೋಸ ಗೈಯದೆ/ತನಗಿಲ್ಲದ ಮನೆಯ ನೆನೆಯದೆ/ಹೆಂಡೆ ರಾಶಿಯ ನಡುವೆ/ಮಗುವಿಗಾಲುಣಿಸಿ/ಜಲ್ಲಿಕಲ್ಲಿನ ಮೇಲೆ ಕೂಡಿಸಿ/ನೆಗೆವಳು ಜಿಂಕೆಯಂತೆ ಹೀಗೆ ಮಾನವೀಯ ತುಡಿತಗಳಿರುವ ಪದ್ಯಗಳನ್ನು ಅಜಯ್ ಬರೆದಿದ್ದಾರೆ.
   ಈಚೆಗೆ ಕೊಟ್ಟೂರಿನ ಸೈಫ್ ಜಾನ್ಸೆ ಕೊಟ್ಟೂರು ‘ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು’ ಎನ್ನುವ ಸಂಕಲನದ ಮೂಲಕ ಗಟ್ಟಿಯಾದ ಹೆಜ್ಜೆಯನ್ನು ಇರಿಸಿದ್ದಾನೆ. ಈ ಸಂಕಲನಕ್ಕೆ ೨೦೧೨ನೇ ಸಾಲಿನ ಬೇಂದ್ರೆ ಕಾವ್ಯ ಪ್ರಶಸ್ತಿ ಮತ್ತು ಅರಳು ಸಾಹಿತ್ಯ ಪ್ರಶಸ್ತಿ ಬಂದಿದೆ. ಮೆಟಲಿಂಗ್ ಕಲ್ಲುಗಳು ಪದ್ಯದಲ್ಲಿ ‘ರಸ್ತೆಯ ಬದಿಗೆ ಬಿದ್ದ/ಮೆಟಲಿಂಗ್ ಕಲ್ಲುಗಳು ಉಳಿಯಿಂದಾದ/ಗಾಯಗಳ ತೋರಿಕೊಂಡು ಅಳುತ್ತಿವೆ/ವಾಹನದ ದೇಹಗಳಿಂದ/ತುಳಿಸಿಕೊಂಡು , ತೂರಿಕೊಂಡು/ಸಿಡಿದು ಜನರನ್ನು ಗಾಯಗೊಳಿಸುವ/ಮೂಲಕ ತಮ್ಮ ಅಸಹನೆಯನ್ನು/ಹೊರದಬ್ಬುತ್ತಿವೆಯಾದರೂ ,/ಜನರು ಬ್ಯಾಂಡೇಜಿನಿಂದ ಮುಚ್ಚಿ/ಹಗಲು ಕಣ್ಣಾ - ಮುಚ್ಚಾಲೆ ಆಡುತ್ತಿದ್ದಾರೆ  ! ಎನ್ನುತ್ತಾರೆ. ಚಪ್ಪಲಿಗಳು ಪದ್ಯದಲ್ಲಿ ದೇಹದ ಅಷ್ಟು ಅಕಾಲ/ಅನ್ಯಾಯಗಳನ್ನು ಹೊತ್ತರೂ/ವಿಧೇಯತೆಯ ಷರಾ/ಪ್ರಕಟಿಸುತ್ತಾ ಮನಸ್ಸನ್ನು/ಹಗುರಾಗಿಸಿವೆ  !

ಕವಯಿತ್ರಿಯರು:
    ಬಳ್ಳಾರಿ ಜಿಲ್ಲೆಯ ಮಹಿಳಾ ಕಾವ್ಯಕ್ಕೆ ಒಂದು ಪರಂಪರೆ ಇದೆ. ಬೆಳೆಗೆರೆ ಪಾರ್ವತಮ್ಮ, ಹಗರಿಬೊಮ್ಮನಹಳ್ಳಿಯ ಪದ್ಮಾ ವಿಠಲ, ಎಂ.ಡಿ. ವೆಂಕಮ್ಮ, ಸುಶೀಲ ಶಿರೂರು, ಸುಧಾ ಚಿದಾನಂದ ಗೌಡ,  ಡಾ.ಟಿ.ಎಂ.ಉಷಾರಾಣಿ, ಛಾಯಾ ಭಗವತಿ, ಪದ್ಮಾ ಜಾಗಟಗೇರಿ, ಡಾ. ಗಿರಿಜಾ ಬೂದೂರ್(ವಸಂತ ಬಂದನು ಕವನ ಸಂಕಲನ), ನಾಗಮಂಜುಳ ಜೈನ್, ನಿರ್ಮಲಾ ಶಿವನಗುತ್ತಿ, ಮುಂತಾದವರು ಹೆಸರಿಸಬಹುದು.
  ಸುಜಾತ ಅಕ್ಕಿ ಕವಯಿತ್ರಿಯಾಗಿ, ಸಂಶೋಧಕಿಯಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ರಂಗ ನಟಿಯರ ಬಗ್ಗೆ ಅವರ ಸಂಶೋಧನೆ ಒಳ್ಳೆಯ ಮಾಹಿತಿ ಸಂಗ್ರಹವಾಗಿದೆ. ಸಾರತಿ ಎನ್ನುವ ಭಿನ್ನ ಕೃತಿಯನ್ನು ರಚಿಸಿದ್ದಾರೆ. ಈಚೆಗೆ ಚಾಮ ಚಲುವೆ ಎನ್ನುವ ನಾಟಕ ಬರೆದು ಗಮನ ಸೆಳೆದಿದ್ದಾರೆ. ಇದನ್ನು ಮಂಡ್ಯ ರಮೇಶ್ ಅವರ ತಂಡ ನಾಟಕ ಮಾಡಿಯೂ ಗಮನಸೆಳೆದಿದೆ.
  ಸುಧಾ ಚಿದಾನಂದ ಗೌಡ ಬಳ್ಳಾರಿ ಜಿಲ್ಲೆಯ ಸೂಕ್ಷ್ಮ ಬರಹಗಾರ್ತಿ. ಇವರು ೧೯೯೮ ರಲ್ಲಿ ಯುವಕರ ಸಂಘ ರಾಮನಗರ ಪ್ರಕಾಶನದಿಂದ ತಮ್ಮ ಮೊದಲ ಕಥಾ ಸಂಕಲನ ‘ಬದುಕು ಪ್ರಿಯವಾಗುವ ಬಗೆ’ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಜಾಣಗೆರೆ ಪತ್ರಿಕೆಯಲ್ಲಿ ನಿರಂತರವಾಗಿ ೫೨ ವಾರ ‘ಸ್ತ್ರೀದ್ವನಿ’ ಅಂಕಣ ಬರೆಯುವ ಮೂಲಕ ಸ್ತ್ರೀ ಸಂವೇದನೆಯ ಭಿನ್ನ ಟಿಪ್ಪಣಿಗಳನ್ನು ಬರೆದಿದ್ದಾರೆ. ಅವರ ಎರಡನೆ ಕಥಾ ಸಂಕಲನ ನಂತರದ ಅವರ ‘ದಿಟ್ಟಿಯು ನಿನ್ನೊಳು ನೆಟ್ಟಿರೆ’ ಸಂಕಲನದಲ್ಲಿ ಮೊದಲ ಸಂಕಲನದ ಮಿತಿಗಳನ್ನು ಮೀರಲು ಯತ್ನಿಸಿರುವುದು ಗೋಚರಿಸುತ್ತದೆ.
   ಸುಧಾ ಅವರ ಷೇಕ್ಸ್‌ಪಿಯರ್ ಸೃಷ್ಠಿಸಿದ ಅನನ್ಯಯರು ಒಂದು ಉತ್ತಮ ಸಂಶೋಧನೆ. ಷೇಕ್ಸ್‌ಪಿಯರ್ ಅವರು ಸೃಷ್ಠಿಸಿದ ಮಹಿಳಾ ಪಾತ್ರಗಳನ್ನು ತುಂಬಾ ಭಿನ್ನವಾಗಿ ನೋಡಿದ್ದಾರೆ. ಈ ಕಾರಣಕ್ಕೆ ಸುಧಾ ಅವರು ಕತೆಗಾರ್ತಿ, ಕವಯಿತ್ರಿ ಮಾತ್ರವಲ್ಲದೆ ಸಂಶೋಧಕಿಯೂ ಕೂಡ. ಈಚೆಗೆ ಸುಧಾ ಅವರ ಮೂರನೆ ಕಥಾ ಸಂಕಲನ ‘ಕನ್ನಡಿಯನ್ನು ನೋಡಲಾರೆ’ ಪ್ರಕಟಿಸಿದ್ದಾರೆ. ಈ ಕೃತಿಗೆ ಅಮ್ಮ ಪ್ರಶಸ್ತಿಯೂ ಲಭಿಸಿದೆ. 
  ಟಿ.ಎಂ.ಉಷಾರಾಣಿ ಅವರು ಅಣ್ಣ, ಅಮ್ಮನ ಪದ್ಯಗಳ ಸೇರಿಸಿ ‘ನಮ್ಮೊಳಗೆ’ ಎನ್ನುವ ಸಂಕಲನವನ್ನು ಪ್ರಕಟಿಸಿದ್ದಾರೆ. ಈಚೆಗೆ ಬರೆದ ಬಿಡಿ ಬಿಡಿ ಪದ್ಯಗಳಲ್ಲಿ ಉಷಾ ತುಂಬಾ ಆಪ್ತವಾದ ಸಂವೇದನೆಯನ್ನು ತೀರಾ ಭಿನ್ನವಾಗಿ ಗ್ರಹಿಸುತ್ತಿದ್ದಾರೆ. ಅವರ ‘ಒಂದು ದಿನಚರಿ’ ಎಂಬ ಪದ್ಯದ ಸಾಲುಗಳು ಹೀಗಿವೆ:ಕಣ್ಣು ತೆರೆಯಲೇ ಭಯ/ಹೆದರಿ ಮಂಜುಗತ್ತಲೆಗಲ್ಲ/ಬೆಳಕಿಗೆ ಕೊಡಬೇಕಾದ/ ಉತ್ತರದಿಂದ  /ನೆತ್ತಿ ಸೆರಗು ಜಾರದಂತೆ/ಮನೆಯ ಹೊಸ್ತಿಲಿನೊಂದಿಗೆ/ಹೃದಯಕ್ಕೂ ಮೊಳೆ/ಬಡಿಸಿಕೊಂಡ ದಿನದಿಂದ/ಗಂಡನ ಹೆಸರೇಳಿ/ತನ್ನನ್ನೇ ಮರೆತ ಮರೆವು/ಕುಳಿ ಬಿದ್ದ ಕಣ್ಣಿಗೆ/ಮರೀಚಿಕೆಯಾದ ಕನಸುಗಳು/ಬೆಳದಿಂಗಳ ಬಯಕೆಗಳ/ಸುಟ್ಟ ಕಾಮಕೇಳಿಯ ರಾತ್ರಿಗಳು/ಸಾಂತ್ವಾನ ಹೇಳಲರಿಯದ ಮೂಲೆಗೆ/ಅರ್ಥವಾಗದ ನಿವೇದನೆ/ಚುಕ್ಕಿಗಳ ನೋಡಿ ನೋಟ/ಮರೆತಾಳೆಂದರೂ/ಮುಗಿಲ ಮರೆಮಾಚಿದ ಮಾಳಿಗೆ/ಯಾತನೆಯ ಮೌನದ ಪುಟಕ್ಕೆ/ಸ್ವಚ್ಛಂದ ಬಯಸಿ ಗೆಳತಿ/ಬರೆದಿಟ್ಟ ದಿನಚರಿ. /ಧರಿಸಿದ್ದೆಲ್ಲವ ಕಳಚಿ/ಹಂಡೆ ಕಟ್ಟೆಗಿಟ್ಟು/ಬೆನ್ನ ಮೇಲೆ ನಿರಾಳ/ಹೆರಳ ರಾಶಿ ಚೆಲ್ಲಿ/ಹಾಯೆನಿಸುವ/ ಬಿಸಿನೀರಿನ ಆವಿಯೊಂದಿಗೆ/ತನ್ನ ಬಿಡುಗಡೆ/ಇಡೀ ಜಗತ್ತು/ಬಚ್ಚಲು ಮನೆಯಾದಂದು! ಎಂದು ಸೂಕ್ಷ್ಮವಾದಿ ಬರೆಯುತ್ತಾರೆ. ಉಷಾರಾಣಿಯು ಸಂಶೋಧಕಿಯೂ ಕೂಡ. ಮಹಿಳಾಸಾಹಿತ್ಯದ ಅಭಿವ್ಯಕ್ತಿ ನೆಲೆಗಳು ಕುರಿತಂತೆ ತುಂಬಾ ಗಂಭೀರವಾಗಿ ಸಂಶೋಧನೆಯನ್ನು ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುವಿಕೆಯಲ್ಲಿ ತಮ್ಮ ಸೃಜನಶೀಲತೆಯನ್ನು ಬಳಸಿಕೊಳ್ಳುತ್ತಿದ್ದಾರೆ.
 
  ಛಾಯಾ ಭಗವತಿ ಹಗರಿಬೊಮ್ಮನಹಳ್ಳಿಯವರು, ಸದ್ಯಕ್ಕೆ ಬೆಂಗಳೂರಿನಲ್ಲಿರುವ ಛಾಯಾ ಅವರು ಮೊದಲ ಸಂಕಲನದ ಪುಟಾಣಿ ಕೆಂಪು ಶೂ ಲೋಹಿಯಾ ಪ್ರಕಾಶನದಿಂದ ಬಂತು. ನಿಜಕ್ಕೂ ಛಾಯಾ ಮೊದಲ ಸಂಕಲನದಲ್ಲೇ  ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ‘ಕಳೆದು ಹೋದ ಪುಟಾಣಿ ಕೆಂಪು ಶೂ’ ಏನೋ ತರಲೆಂದು ಬಟ್ಟೆಯಂಗಡಿಗೆ ಹೋದಾಗ/ತರುವುದನೆ ಮರೆತು ಮರುಳಾದದ್ದು/ಪುಟ್ಟ ಪುಟ್ಟ ಕೆಂಪು ಶೂಗಳಿಗೆ/ಬಗಲ ಕಂದನ ಚೋಟು ಪಾದಕ್ಕೆ ಅವು ತುಸು ದೊಡ್ಡವೆನಿಸಿದರೂ/ಆಸೆಯಾಗಿ ತಂದಿಟ್ಟುಕೊಂಡು ಕಾದದ್ದಾಯಿತು/ಪಾದ ಉದ್ದವಾಗಲೆಂದು/ ಮಗು ಬೆಳೆಯಿತು./ ಶೂಗಳು ಕಾತರದಿಂದ ಹೊರಬಂದು/ಮೃದುವಾದ ಪುಟಾಣಿ ಪಾದಗಳ/ಸುತ್ತಿಕೊಂಡವು/ಪೇಟೆಗೆ ಹೊರಟು ನಿಂತ ಆ ಕ್ಷಣ ಎಂಥ ಸಂಭ್ರಮ/ಮಗುವಿನ ಕಾಲುಗಳು ಬಡಿದಂತೆಲ್ಲ ಮೈ ಪುಳಕ/ಬಜಾರೆಲ್ಲ ಸುತ್ತಿ, ಗುಡಿಯ ದೇವರಿಗೊಂದು ಶರಣೆಂದು,/ಆಗಾಗ ಕೂಸಿನ ಕಾಲುಗಳತ್ತಲೇ ಗಮನ/ಕಣ್ಣು ನಿರುಕಿಸಿ, ‘ಇವೆ ಇವೆ ಉದುರಿಲ್ಲ’/ಸಮಾಧಾನ ಪಟ್ಟುಕೊಂಡು/ ಕಬ್ಬಿನ ಹಾಲೆಂದು ಹೊರಟು, ಅಲ್ಲಿ ಭಲೇ ಗಲಾಟೆ/ಹಾಗೂ ಹೀಗೂ ರಸ ಹೀರಿ, ನೊರೆಯೊರೆಸಿಕೊಂಡು/ಸ್ಕೂಟರೇರಿ ಮನೆಗೆ ಬಂದು/ಮಗುವಿನ ಉಚ್ಚೆ ಪಟ್ಟಿ ಸಡಿಲಿಸೋಣ ಅಂತ/ಶಾಲಿನ ಬಿಗಿಯಿಂದ ಅದ ಹೊರ ತೆಗೆದಾಗಲೇ/ಎದೆ ಝಲ್ಲೆಂದ ಕ್ಷಣ/ಒಂದು ಶೂ ಇಲ್ಲ.....!/ಬಂಗಾರದೊಡವೆ ಕಳೆದಾಗಲೂ ಆಗದ ನೋವು/ಅಯ್ಯೋ ಒಂದು ಕಳೆದೇ ಹೋಯಿತಲ್ಲ!/ಮತ್ತೊಂದ ಕೊಂಡು ತಂದೇನು....ಆದರೂ..../ಉಳಿದೊಂದು ಶೂ ಕಪಾಟಿನಲ್ಲಿ ಕುಳಿತಿದೆ/ಭದ್ರವಾಗಿ/ಕಳೆದು ಹೋದ ತನ್ನ ಜೊತೆಗಾರನ ನೆನೆಯುತ್ತ... ಎನ್ನುತ್ತಾರೆ.
 
  ಹೊಸಪೇಟೆಯ ಎಂ.ಪಿಪ್ರಕಾಶ್ ನಗರದ ಡಾ.ಗಿರಿಜಾ ಬೂದೂರು ಅವರು ವಸಂತ ಬಂದನು ಸಂಕಲನದ ಮೂಲಕ ಕಾವ್ಯಕ್ಕೆ ಪ್ರವೇಶ ಪಡೆದಿದ್ದಾರೆ. ಈ ಸಂಕಲನದಲ್ಲಿ ತೀರಾ ಗಟ್ಟಿ ಹೆಜ್ಜೆಗಳು ಇಲ್ಲವಾದರೂ, ಮುಂದೆ ಬರೆಯಬಲ್ಲರೆಂಬ ಒಂದು ನಿರೀಕ್ಷೆಯನ್ನಂತು ಹುಟ್ಟಿಸಿದ್ದಾರೆ. ಅವರ ಮಾತೆ ಎನ್ನುವ ಕವನದ ಸಾಲುಗಳು ಹೀಗಿವೆ: ಬೆಂಕಿಯಲ್ಲಿ ಅರಳಿದ್ದರೂ/ ಸುತ್ತಲೂ ಅದರ ಝಳವಿದ್ದರೂ/ಹಸನ್ಮುಖಳಾಗಿ ಸಾಗಿರುವೆ/ಕೆಂಡವು ಮಡಿಲಲ್ಲಿದ್ದರೂ/ಬಾಡಲಿಲ್ಲ ಈ ಮೊಗ/ಮರುಗಲಿಲ್ಲ ಈಮನ/ ನಿತ್ಯ ಸಾವಿಗೆ ಕಣ್ಣೀರು ಒರೆಸುವರಾರೆಂಬಂತೆ/ಅಳುಕದೆ ಅಂಜದೆ ನಡೆದಿರುವೆ ನೀ ಮುಂದೆ/ ವಿಧಿ ತೋರಿದ ಹಾದಿಯಲ್ಲಿ.

   ಅನಾಥ ರಸ್ತೆಗಳಿಗೆ ಮರದ ನೆರಳೇ ರಂಗೋಲಿ ಎಂದು ಬರೆಯುವ ಕೊಟ್ಟೂರಿನ ಪದ್ಮಾ ಜಾಗಟಗೆರೆ ಅವರ ಪದ್ಯಗಳು ಈ ಕಾಲದ ಎಚ್ಚರದ ದ್ವನಿಯಾಗುವಲ್ಲಿಯೂ ಯಶಸ್ವಿಯಾಗಿವೆ. ಪದ್ಮಾ ಜಾಗಟಗೆರೆ ಅವರು ಕೆರೆಯ ನೀರನು ಕೆರೆಗೆ ಚೆಲ್ಲಿ, ಹುಗ್ಗೇರ ಹಾಲಜ್ಜ ಮುಂತಾದ ಕಥೆಗಳ ಮೂಲಕ ಕಥನದ ಕ್ಷೇತ್ರದಲ್ಲಿ ಭರವಸೆ ಹುಟ್ಟಿಸುವ ಹಾಗೆ ಬರೆದಿದ್ದಾರೆ.
 
ಮಾಧ್ಯಮ:
   ಮಾದ್ಯಮ ಕ್ಷೇತ್ರದಲ್ಲಿಯೂ ಬಳ್ಳಾರಿ ಜಿಲ್ಲೆಯ ಹೊಸತಲೆಮಾರೊಂದು ಕ್ರಿಯಾಶೀಲವಾಗಿದೆ. ಉಜ್ಜಿನಿ ರುದ್ರಪ್ಪ ಅವರು ತುಂಬಾ ಕ್ರಿಯಾಶೀಲವಾಗಿ ಬರವಣಿಗೆ ಮಾಡುತ್ತಿದ್ದಾರೆ. ಅವರ ಬರಹಗಳ ಸಂಕಲನ ‘ಕೌತುಕ’ ಪ್ರಕಟವಾಗಿದೆ. ಭೀಮಣ್ಣ ಗಜಾಪುರ ನೋವಿನ ಬಣ್ಣಗಳು, ಕನಸುಗಳಿಗೆ ರೆಕ್ಕೆ ಕಟ್ಟಿದವರು ಎಂಬ ಪತ್ರಿಕಾ ಬರಹಗಳ ಸಂಕಲನಗಳನ್ನು ತಂದಿದ್ದಾರೆ.  ಸ್ವರೂಪಾನಂದ ಕೊಟ್ಟೂರು ಪೋಲೀಸ್ ಇಲಾಖೆಯಲ್ಲಿದ್ದೂ ನಿರಂತರವಾಗಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಸಿದ್ದರಾಮ ಹಿರೇಮಠ ಅವರು ಒಡೇವು ಎನ್ನುವ ಪತ್ರಿಕಾ ಬರಹದ ಸಂಕಲನವನ್ನು ಪ್ರಕಟಿಸಿದ್ದಾರೆ. ಪರಮೇಶ ಸೊಪ್ಪಿನಮಠ, ಡಬ್ಲೂ ಬಸವರಾಜ, ಹುಡೇಂ ಕೃಷ್ಣ ಮೂರ್ತಿ, ಸೋಮೇಶ್ ಉಪ್ಪಾರ್ ಮುಂತಾದವರು ಪತ್ರಿಕೆ ಬರಹದಲ್ಲಿಯೂ ತಮ್ಮದೇ ಆದ ಸೃಜನಶೀಲತೆಯನ್ನು ಕಂಡುಕೊಳ್ಳುತ್ತಿದ್ದಾರೆ.
ಕಥೆಗಾರರು:
 ಕೊಟ್ಟೂರಿನ ವಿಶ್ವನಾಥ ಅಡಿಗ ಅವರು ‘ಕೇಳದೆ ನಿಮಗೀಗ’ ಎನ್ನುವ ಕಥಾ ಸಂಕಲನವನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ. ಅವರ ಮತ್ತೊಂದು ಸಂಕಲನವೂ ಪ್ರಕಟವಾಗಿದೆ. ಕೊಟ್ಟೂರಿನ ಬೆಣ್ಣೆ ಪ್ರಭು, ಪದ್ಮಾ ಜಾಗಟಗೆರೆ ಬಿಡಿ ಬಿಡಿಯಾಗಿ ಕಥೆಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ.

  ಹಗರಿ  ದಂಡೆ  ಕಥಾ  ಸಂಕಲನದ ಮೂಲಕ ಕಥಾ ಜಗತ್ತನ್ನು ಪ್ರವೇಶಿಸಿದ ವೆಂಕಟೇಶ್ ಉಪ್ಪಾರ ಅವರು ಗಮನಸೆಳೆದಿದ್ದಾರೆ. ಹಲವು  ವಿಮರ್ಶಕರಿಂದ  ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಅವರ ಅವಶೇಷ ಎನ್ನುವ ಎರಡನೇ ಕಥಾಸಂಕಲನವೂ ಪ್ರಕಟವಾಗಿದೆ. ಸದ್ಯಕ್ಕೆ ನಾಧವಿಲ್ಲದ ನದಿ ಎನ್ನುವ  ಕಾದಂಬರಿ ಬರೆವ ತಯಾರಿಯಲ್ಲಿದ್ದಾರೆ. ಇವರ ಗದ್ಯದಲ್ಲಿ  ಬಳ್ಳಾರಿ ಭಾಗದ, ಹಗರಿ ದಂಡೆಯ ಭಾಷೆಯ ವೈಶಿಷ್ಟ್ಯತೆ ಇದೆ
 
  ಸಂಪಿಗೆ ನಾಗರಾಜ ಅವರ ಕಥಾ ಸಂಕಲನ ‘ಖಾಲಿ ಕಣ್ಣಿನ ನಾನು’ ಮೂಲಕ ಕಥೆಗಾರರಾಗಿ ಭರವಸೆ ಹುಟ್ಟಿಸಿದ್ದಾರೆ. ನಾಗರಾಜ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ‘ಇಪ್ಪತ್ತನೆ ಶತಮಾನದ ಕೊನೆಯ ದಶಕಗಳಲ್ಲಿ ಸಾಂಸ್ಕೃತಿಕ ಪ್ರಶ್ನೆ’ (ಸಣ್ಣ ಕಥೆಗಳನ್ನು ಆಧರಿಸಿ) ಸಂಶೋಧನಾ ಪ್ರಬಂಧಕ್ಕೆ ಪಿಹೆಚ್.ಡಿ ಪದವಿಯನ್ನೂ ಪಡೆದಿದ್ದಾರೆ. ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಪುಸ್ತಕಗಳನ್ನು ಪ್ರಕಟಿಸುತ್ತಾ, ಸಾಹಿತ್ಯ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿಡುವ ಪ್ರಯತ್ನ ನಡೆದಿದೆ.
  ಮೂಲತಃ ಸಂಡೂರಿನವರಾದ ವಸುದೇಂದ್ರ ಅವರು ತಮ್ಮದೆ ಆದ ಕಥಾ ಲಯವೊಂದನ್ನು ಕಂಡುಕೊಂಡಿದ್ದಾರೆ. ಅವರ ಯುಗಾದಿ, ಚೇಳು, ಹಂಪಿ ಎಕ್ಸಪ್ರೆಸ್ ಮುಂತಾದ ಕಥಾ ಸಂಕಲನಗಳು ವಿಶಿಷ್ಟವಾಗಿವೆ. ವಸುದೇಂದ್ರ ಅವರು ಪ್ರಬಂಧ ಸಾಹಿತ್ಯದಲ್ಲಿಯೂ ಪ್ರಯೋಗ ಮಾಡಿದ್ದಾರೆ. ನಮ್ಮಮ್ಮ ಅಂದ್ರೆ ನಂಗಿಷ್ಟ ಪ್ರಬಂಧ ಸಂಕಲನ ತುಂಬಾ ಭಿನ್ನವಾಗಿದೆ. ಅವರ ಒಟ್ಟು ಬರಹ ಲಹರಿರೂಪದ್ದಾಗಿರುವುದೇ ಹೆಚ್ಚು. ಅವರ ಛಂದ ಪ್ರಕಾಶನದಿಂದ  ಸ್ಪರ್ಧೆ ಏರ್ಪಡಿಸುವುದು, ಪುಸ್ತಕ ಪ್ರಕಟಿಸುವುದೂ ಇದೆ.

   ಸಂಡೂರು ಭಾಗದ ಕಲಾವಿದ ಸೃಜನ್ ಕೂಡ ಬಳ್ಳಾರಿ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಗಮನಿಸಬೇಕಾದ ಹೆಸರು. ತಮ್ಮ ಕಲಾಕೃತಿಗಳ ಮೂಲಕ ನಾಡಿನ ಹಿರಿ ಕಿರಿಯ ಸಾಹಿತಿಗಳ ಕಾವ್ಯ, ಕಥೆ, ಪುಸ್ತಕಗಳಿಗೆ ತಮ್ಮದೇ ಆದ ವಿಶಿಷ್ಟ ಕಲೆಯ ಮೂಲಕ ಜೀವಂತಿಕೆಯನ್ನು ತಂದಿದ್ದಾರೆ. ಈಚೆಗೆ ತೆಲುಗಿನಿಂದ ಅನುವಾದಗಳನ್ನು ಮಾಡುತ್ತಿದ್ದಾರೆ. ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರ ಆತ್ಮ ಕಥನವನ್ನು ಕನ್ನಡಕ್ಕೆ ತರುತ್ತಿದ್ದಾರೆ.

 ಸಂಶೋಧನೆ:

  ಸಂಶೋಧನೆಯಲ್ಲಿ ಹೊಸ ತಲೆಮಾರೊಂದು ಕ್ರಿಯಾಶೀಲವಾಗಿದೆ.  ಡಾ. ಜಾಜಿ ದೇವೇಂದ್ರಪ್ಪ, ಡಾ. ಸಣ್ಣ ಪಾಪಯ್ಯ, ಡಾ. ಸತೀಶ್ ಪಾಟೀಲ್, ಡಾ.ಇಸ್ಮಾಯಿಲ್ ಜಬ್ಬೀರ್, ಡಾ. ಚಂದ್ರಪ್ಪ ಸೊಬಟಿ, ಡಾ. ಜೆ.ಕುಮಾರ್, ಡಾ. ಎಂ. ವಾಗೀಶ್, ಡಾ.ಟಿ.ಎಂ. ಉಷಾರಾಣಿ, ಡಾ.ಸುಜಾತ ಹಕ್ಕಿ, ಡಾ. ಬಿ.ಜಿ.ಕಲಾವತಿ, ಡಾ. ಗಿರಿಜಾ ಬೋದೂರು, ಗವಿಸಿದ್ದಪ್ಪ ಹಂದ್ರಾಳ್, ಡಾ.ಅರುಣ್ ಜೋಳದಕೂಡ್ಲಿಗಿ ಹೀಗೆ ಪಿಹೆಚ್.ಡಿ ಗಾಗಿ ಸಂಶೋಧನೆ ಮಾಡಿದ ಇನ್ನು ಹಲವಾರು ಪ್ರತಿಭಾವಂತ ಯುವಕ, ಯುವತಿಯರಿದ್ದಾರೆ, ಈ ಕುರಿತು ಪ್ರತ್ಯೇಕವಾಗಿ ಬರಹ ಮಾಡಿ ಗುರುತಿಸಬೇಕಿದೆ.
ಹೊಸ ತಲೆಮಾರನ್ನು ಪರಿಚಯಿಸುವ ಕೆಲಸವೂ ಇಲ್ಲಿ ನಡೆಯುತ್ತಿದೆ:

   ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಈ ಕೆಲಸವನ್ನು ತುಂಬಾ ಅರ್ಥಪೂರ್ಣವಾಗಿ ಆರಂಭಿಸಿದರು. ವಿಕ್ರಮ್ ವಿಸಾಜಿ, ಪೀರ್ ಭಾಷ, ದಸ್ತಗಿರಿ ಸಾಬ್ ದಿನ್ನಿ ಮುಂತಾದವರನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಹೆಚ್ಚುಗಾರಿಕೆ ಲೋಹಿಯಾ ಚನ್ನಬಸವಣ್ಣ ಅವರದು. ಅವರದೇ ಪ್ರಕಾಶನದಿಂದ ಬಂದ ಛಾಯಾ ಭಗವತಿ ಅವರ ಪೂಟಾಣಿ ಕೆಂಪು ಶೂ ಎನ್ನುವ ಸಂಕಲನದ ಮೂಲಕ ಒಬ್ಬ ಉತ್ತಮ ಕವಯಿತ್ರಿಯನ್ನು ಬೆಳಕಿಗೆ ತಂದರು.

  ಹಗರಿಬೊಮ್ಮನಹಳ್ಳಿಯ ಹಿರಿಯ ಸಾಹಿತಿಗಳಾದ ಗುರುಮೂರ್ತಿ ಪೆಂಡಕೂರ್ ಅವರು ತಮ್ಮ ಗೆಳೆಯರ ಬಳಗ ಪ್ರಕಾಶನದ ಮೂಲಕ ಹಲವು ಯುವ ಬರಹಗಾರರನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಕುಂ.ವಿ ಅವರ ಮೊದಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ಈ ಪ್ರಕಾಶನಕ್ಕಿದೆ. ಈಚೆಗೆ ಈಪ್ರಕಾಶನ ಒಂದಷ್ಟು ಮಂಕಾದಂತೆ ಕಾಣುತ್ತಿದೆ.

   ಈ ಕೆಲಸವನ್ನು ಚನ್ನಪಟ್ಟಣದ ಡಾ. ಕೆ. ವೆಂಕಟೇಶ್ ಅವರು ಪಲ್ಲವ ಪ್ರಕಾಶನದ ಮೂಲಕವೂ ಮಾಡುತ್ತಿದ್ದಾರೆ. ಸೈಫ್ ಜಾನ್ಸೆಯ ‘ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು’ ವಿಠ್ಠಲ ದಳವಾಯಿ ಅವರ ‘ಬೋದಿ ನೆರಳಿನ ದಾರಿ’ ಮುಂತಾದ ಯುವ ಸಾಹಿತಿಗಳ ಕೃತಿಗಳನ್ನು ತುಂಬಾ ಮುತುವರ್ಜಿಯಿಂದ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ.  ಕಂಪ್ಲಿ ಶಿವಕುಮಾರ್ ಅವರು ತಮ್ಮದೇ ಆದ ಕೆಂಗುಲಾಬಿ ಪ್ರಕಾಶನವನ್ನು ಮಾಡಿ ವೀರಣ್ಣ ಮಡಿವಾಳರ ಅವರ ನೆಲದ ಕರುಣೆಯ ದನಿ ಸಂಕಲನವನ್ನೂ, ಅನಸೂಯ ಕಾಂಬಳೆ ಅವರ ಮತ್ಸ್ಯಗಂಧಿಯ ಹಾಡು ಸಂಕಲನವನ್ನೂ ತಂದಿದ್ದಾರೆ. ನೆಲದ ಕರುಣೆಯ ದನಿ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾದೆಮಿ ಯುವ ಪ್ರಶಸ್ತಿ ಬಂದಿರುವುದನ್ನು ಗಮನಿಸಬಹುದು.
 ಸಿ.ಮಂಜುನಾಥ ಅವರು ಭರಣಿ ಸಾಂಸ್ಕೃತಿಕ ವೇದಿಕೆಯಿಂದ ಪ್ರಶಸ್ತಿಗಳನ್ನು ಕೊಡುವುದು, ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡುತ್ತಿದ್ದಾರೆ. ಈಚೆಗೆ ವಿ.ಆರ್. ಕಾರ್ಪೆಂಟರ್ ಅವರ ನೀಲಿಗ್ರಾಮ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಸುಭಾಷ್ ಭರಣಿಯವರ ವ್ಯಕ್ತಿ ವೈಭವೀಕರಣದ ಮಿತಿಯೂ ಈ ಕೆಲಸದ ಹಿಂದೆ ಇದೆ.
  ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ನಾವು ನಮ್ಮಲ್ಲಿ ಕಾರ್ಯಕ್ರಮದ ಈ ಮೂಲಕ ಹೊಸ ತಲೆಮಾರು ಒಂದೆಡೆ ಸೇರಿ ಸಂವಾದ ಚರ್ಚೆ ಮಾಡಲು ಅನುವಾಗುವಂತಹ ಒಂದು ಸಮಾಸಕ್ತರ ವೇದಿಕೆ. ಇದು ದೊಡ್ಡ ಬಳಗವನ್ನೇ ಹೊಂದಿದೆ. ಅಂಚೆ ಕೊಟ್ರೇಶ್, ಹೆಚ್. ಎಂ. ನಿರಂಜನ್, ಆನಂದ ಋಗ್ವೇದಿ, ಚಿದಾನಂದ ಸಾಲಿ, ವಿಕ್ರಮ ವಿಸಾಜಿ, ಮುಂತಾದ ಇಂದು ಬರೆಯುತ್ತಿರುವ ಹೊಸ ತಲೆಮಾರಿನ ಬರಹಗಾರರಿಗೆ ನಾವು ನಮ್ಮಲ್ಲಿ ವೇದಿಕೆಯಾಗಿರುವುದು ಕೂಡ ಬಳ್ಳಾರಿ ಜಿಲ್ಲೆಗೆ ಸಲ್ಲುವ ಒಂದು ಗೌರವ ಅಂತಲೇ ಭಾವಿಸಬಹುದಾಗಿದೆ.
  ನಾವು ನಮ್ಮಲ್ಲಿ ಬಳಗ ಮೈಸೂರಿನಲ್ಲಿ ‘ವರ್ತಮಾನ ಕರ್ನಾಟಕ’ ಚಿತ್ರದುರ್ಗದಲ್ಲಿ ‘ಮಾದ್ಯಮ ಕರ್ನಾಟ’ ಕುಪ್ಪಳ್ಳಿಯಲ್ಲಿ ‘ಕರ್ನಾಟಕ ಕಂಡ ಚಳವಳಿಗಳು’ ಕಾರ್ಯಕ್ರಮವನ್ನು ಮಾಡುವ ಮೂಲಕ ಕರ್ನಾಟಕದ ವಿದ್ವತ್ ಲೋಕವು ಗಂಭೀರವಾಗಿ ಗಮನಿಸುವಂತೆಯೂ, ಆಲೋಚಿಸುವಂತೆಯೂ ಮಾಡಿದೆ. ನಾವು ನಮ್ಮಲ್ಲಿ ಬಳಗ ಶಿವಮೊಗ್ಗದ ಅಹರ್ನಿಷಿ ಪ್ರಕಾಶನದ ಒಟ್ಟುಗೂಡಿ ಅರುಣ್ ಜೋಳದಕೂಡ್ಲಿಗಿ ‘ಅವ್ವನ ಅಂಗನವಾಡಿ’  ಎಸ್. ಕುಮಾರ್ ಅವರ ‘ಚಳಿಗಾಲದ ಎಳೆಸಾಲು’ ಟಿ.ಕೆ. ದಯಾನಂದ ಅವರ ‘ರಸ್ತೆ ನಕ್ಷತ್ರ’ ಪುಸ್ತಕಗಳನ್ನು ಪ್ರಕಟಿಸಿದೆ.
  ಸಿರಿಗೆರೆಯ ಅನ್ನಪೂರ್ಣ ಪ್ರಕಾಶನವೂ ಕೆಲವು ಪುಸ್ತಕಗಳನ್ನು ಪ್ರಕಟಿಸುವ ಮೂಲಕ, ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಜೀವಂತಗೊಳಿಸಿದೆ. ಸಿರಿಗೆರೆ ಯರಿಸ್ವಾಮಿ ಅವರು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

  ಮೂಲತಃ ಬಳ್ಳಾರಿಜಿಲ್ಲೆಯವರಾದ ಅನೇಕ ಬರಹಗಾರರು ಬದುಕಿನ ಅನಿವಾರ್ಯತೆಗೆ ಬೇರೆ ಬೇರೆಡೆ ನೆಲೆಸಿರುವುದೂ ಇದೆ. ಕನ್ನಡದ ಬಹುದೊಡ್ಡ ಇತಿಹಾಸಕಾರರಾದ ಷ.ಶೆಟ್ಟರ್ ಅವರೂ ಕೂಡ ಹಗರಿಬೊಮ್ಮನಹಳ್ಳಿ ತಾಲೂಕಿನವರು. ಹೀಗೆ ಅನೇಕರನ್ನು ಗುರುತಿಸಬಹುದು. ಇಲ್ಲಿ ಮುಖ್ಯವಾಗಿ ಯುವ ಬರಹಗಾರರನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ. ನನ್ನ ಗಮನಕ್ಕೆ ಬರದ ಬರಹಗಾರರ ಹೆಸರು ಬಿಟ್ಟುಹೋಗಿರುವ ಸಾದ್ಯತೆಯೂ ಇದೆ. ಈ ಮಿತಿಯ ಮಧ್ಯೆಯೂ ಬಳ್ಳಾರಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಹೊಸ ನಡಿಗೆಯೊಂದನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ.
***

ಗುರುವಾರ, ಜುಲೈ 12, 2012

ಪ್ರಭುತ್ವದ ಓಲೈಕೆ ಪ್ರಜ್ಞಾವಂತಿಕೆಯ ಲಕ್ಷಣ ಅಲ್ಲ - ಡಾ. ರಹಮತ್ ತರೀಕೆರೆ




ಪ್ರಭುತ್ವದ ಓಲೈಕೆ ಪ್ರಜ್ಞಾವಂತಿಕೆಯ ಲಕ್ಷಣವಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಡಾ. ರಹಮತ್ ತರೀಕೆರೆ ಅಭಿಪ್ರಾಯ ಪಟ್ಟರು. ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ   ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

  ನಮ್ಮ ಆಲೋಚನೆ ಹಾಗು ಧೋರಣೆಗಳು ಮಾನವನ ಒಳಿತಿಗಾಗಿಯೇ ಬಳಕೆಯಾಗಬೇಕು ಎಂದರಲ್ಲದೆ ಪ್ರಭುತ್ವದ ಯಜಮಾನಿಕೆಯ ವಿರುದ್ದ ಧ್ವನಿಯತ್ತಿದ ಹರಿಹರ,ಬಸವಣ್ಣ ಮತ್ತು ಕುವೆಂಪು ಅಂತವರು ಚರಿತ್ರೆಯಲ್ಲಿ ಜೀವಂತವಾಗಿದ್ದಾರೆ.  ವರ್ತಮಾನದ ದಿನಗಳಲ್ಲಿ ಧರ್ಮ, ಜಾತಿಯಂತಹ ಕೆಡಕಿನ ಸಂಗತಿಗಳೇ ಹೆಚ್ಚು ವಿಜೃಂಬಿಸಿತ್ತಿರವುದು ಅಪಾಯಕರ ಎಂದರಲ್ಲದೆ, ಬರಹಗಾರರು ಇಂಥ ಜೀವವಿರೋಧಿ ಸಂಗತಿಗಳ ವಿರುದ್ಧ ಧ್ವನಿಯತ್ತಬೇಕಾಗಿರುವುದು ಇಂದಿನ ತುರ್ತು ಎಂದರು.


ನಂತರ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಮತ್ತು ಮಾಜಿ ಸಚಿವೆ ಬಿ.ಟಿ.ಲಲಿತನಾಯಕ ಮಾತನಾಡಿಸಂವಿಧಾನದ ಕೇಂದ್ರವಾದ ವಿಧಾನಸೌಧಂತಹ ಸ್ಥಳಗಳಲ್ಲಿ ಹೋಮಹವನ ಮತ್ತು ಜ್ಯೋತಿಷ್ಯದಂತಹ ಮೌಢ್ಯಗಳು ಜರುಗುತ್ತಿರುವುದು ದುರಷ್ಟಕರ ಎಂದರುರಾಜಕಾರಣzಲ್ಲಿ ಬದ್ಧತೆಯೇ ಮಾಯವಾಗಿರುವ ದಿನಗಳಲ್ಲಿ ನಾವಿದ್ದೇವೆ ಎಂದರಲ್ಲದೆ ನಾಡಿನ ಅಪರೂಪದ ಸಂಪತ್ತು ಬಂಡವಾಳಶಾಹಿಗಳ ಪಾಲುಗುತ್ತಿರುವುದರ ಪರಿಣಾಮ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿರುವುದು ಎಂದರು.

       ಕವಿಗೋಷ್ಠಿಯಲ್ಲಿ ಅರುಣ ಜೋಳದಕೂಡ್ಲಿಗಿಡಾ.ಕೆ.ಪನ್ನಂಗಧರಡಾ. ಬಿ.ಜಿ.ಕನಕೇಶಮೂರ್ತಿಹೆಚ್.ಬಿ.ರವೀಂದ್ರ ಸಾಗರ,  ವಿ.ಹರಿನಾಥಬಾಬುಸೋಮೇಶ ಉಪ್ಪಾರಟಿ.ಎಂ.ಉಷಾರಾಣಿಡಾ.ಎಂ.ಮಲ್ಲಿಕಾರ್ಜುನಹೆಚ್.ಎಂ.ಜಂಬುನಾಥಪಂಪಾಮಹೇಶನೂರ್ ಜಹಾನ್ಉಮಾಮಹೇಶ್ವರಸೈಯದ್ ಹುಸೇನ್ ಮತ್ತು ಡಿ.ಬಿ.ನಾಯಕ್ ಕವಿತೆ ವಾಚಿಸಿದರು.
                ಅಧ್ಯಕ್ಷತೆ ವಹಿಸಿದ್ದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಅರವಿ ಬಸವನಗೌಡರವರು ಹಂಪಿ ಪರಿಸರದಲ್ಲಿರುವ ಹೊಸಪೇಟೆ ತಾಲೂಕು ಕ.ಸಾ.ಪ.ಘಟಕ ಬೆಳದು ಹೆಮ್ಮರವಾಗಲಿ ಎಂದು ಹಾರ‍್ಯೆಸಿದರು,


ಸಮಾರಂಭದಲ್ಲಿ ಸಾಲಿ ಸಿದ್ದಯ್ಯ ಸ್ವಾಮಿಎಲ್.ಸಿದ್ದನಗೌಡಷಾ. ರತನ್‌ಚಂದ್ಖಾಜಾ ಹುಸೇನ್ ನಿಯಾಜಿಜಿಲ್ಲಾ ಕ.ಸಾ.ಪ.ದ ಕಾರ್ಯದರ್ಶಿ ಸಿದ್ದರಾಮ ಕಲ್ಮಠ,  .ಎಸ್. ನಾಗರತ್ನಮ್ಮವಿದ್ಯಾಧರಎಸ್.ಎಂ.ಶಶಿಧರ,  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಕೆ.ವೆಂಕಟೇಶ  ಕಾರ್ಯದರ್ಶಿಗಳಾದ ಟಿ.ಹೆಚ್.ಬಸವರಾಜಅಗಳಿ ಪಂಪಾಪತಿಲಿಂಗಾರೆಡ್ಡಿಟಿ.ಎಂ.ನಾಗಭೂಷಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ.ಸಾ.ಪ. ನಿಕಟ ಪೂರ್ವ ಅಧ್ಯಕ್ಷರಾದ ಸುಜಾತ ರೇವಣಸಿದ್ದಪ್ಪರವರನ್ನು ಸನ್ಮಾನಿಸಲಾಯಿತು.

ಭಾನುವಾರ, ಜೂನ್ 24, 2012

ಸುಧಾ ಚಿದಾನಂದ ಗೌಡ

ಸುಧಾ ಚಿದಾನಂದ ಗೌಡ


ಟಿಪ್ಪಣಿ: ಅರುಣ್ ಜೋಳದಕೂಡ್ಲಿಗಿ


   ಕಳೆದ ವರ್ಷ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಳ್ಳಾರಿ ಜಿಲ್ಲಾ ಯುವ ಬರಹಗಾರರ ಬಗ್ಗೆ ಮಾತನಾಡಲು ಹೋಗಿದ್ದೆ. ಸರಿಸುಮಾರು ನನ್ನ ತಲೆಮಾರಿನ, ನನಗಿಂತ ಸ್ವಲ್ಪ ಹಿರಿಯರ ಕುರಿತು ಟಿಪ್ಪಣಿ ರೂಪದ ಮಾತನಾಡಿದೆ. ಅದೇ ಸಭೆಯಲ್ಲಿ ಮಹಿಳಾ ಸಾಹಿತ್ಯ ಕುರಿತಂತೆ ಸುಧಾ ಚಿದಾನಂದ ಗೌಡ ಅವರು ಮಾತನಾಡಲು ಬಂದಿದ್ದರು. ಪ್ರಮಾಣಿಕವಾಗಿ ಹೇಳಬೇಕೆಂದರೆ, ನಾನು ಮೊದಲು ಅವರ ಹೆಸರನ್ನು ಕೇಳಿದ್ದು ಆ ಸಭೆಯಲ್ಲಿ. ಆ ದಿನ ನನ್ನ ಮಾತುಗಳಲ್ಲಿ ಸುಧಾ ಅವರ ಹೆಸರನ್ನು ನಾನು ಪ್ರಸ್ತಾಪಿಸಿರಲಿಲ್ಲ. ಆಗ ಚಿದಾನಂದ ಗೌಡ ಅವರು ನಿಮಗೆ ಬಳ್ಳಾರಿ ಜಿಲ್ಲಾ ಬರಹಗಾರರ ಬಗ್ಗೆ ತಿಳಿದಿಲ್ಲ ಎಂದು ಪ್ರಶ್ನಿಸಿದ್ದರು. ಅವರು ಯಾವ ವಿಷಯವಾಗಿ ಹೇಳುತ್ತಿದ್ದಾರೆ ಎಂದು ನನಗೆ ಅರ್ಥವಾಗಿರಲಿಲ್ಲ.


  ಕೆಂಡಸಂಪಿಗೆ ವೆಬ್ ಮ್ಯಾಗಜಿನ್‌ನಲ್ಲಿ ಸುಧಾ ಅವರ ಬರಹ ನೋಡಿದ್ದೆನಾದರೂ ಅವರೇ ಇವರೆಂದು ತಿಳಿದಿರಲಿಲ್ಲ. ಬದಲಾಗಿ ಇವರು ಬಳ್ಳಾರಿ ಜಿಲ್ಲೆಗೆ ಸೇರಿದವರೆಂದೂ ಗೊತ್ತಿರಲಿಲ್ಲ. ಆ ನಂತರ ಟಿ.ಎಂ.ಉಷಾರಾಣಿ ಅವರಲ್ಲಿ ಅವರ ಬಗ್ಗೆ ಕೇಳಿ ತಿಳಿದೆ. ಆ ನಂತರ ಅವರ ಬರಹಗಳನ್ನು ಓದುತ್ತಾ, ಈ ಮೇಲ್,ಫೇಸ್ ಬುಕ್ ಮುಂತಾದ ಕಡೆ ಮಾತುಕತೆ ಸಾದ್ಯವಾಗಿ ಪರಿಚಯ ಗಟ್ಟಿಯಾಯಿತು. ಆ ನಂತರ ಅವರ ಪುಸ್ತಕಗಳನ್ನು ತರಿಸಿಕೊಂಡು ಓದಿದಾಗಲಂತೂ ಅವರ ಪರಿಚಯ ಸಾಹಿತ್ಯಿಕವಾಗಿಯೂ ನೆನಪಿನಲ್ಲಿ ಉಳಿಯುವಂತಾಯಿತು. ಹಿರಿಯರಾದ ಸುಧಾ ಚಿದಾನಂದಗೌಡ ಅವರಿಂದ ನಾವು ಕಲಿಯುವುದಿದೆ ಅನ್ನಿಸಿತು.


  ಇರಲಿ, ಸುಧಾ ಚಿದಾನಂದಗೌಡ ಅವರ ಬಗ್ಗೆ ಒಂದು ಪರಿಚಯಾತ್ಮಕ ಸಣ್ಣ ಟಿಪ್ಪಣಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವೆ. ಸುಧಾ ಅವರ ಜನನ ೧೯೭೧ ರ ಅಗಷ್ಟ್ ೧೭. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ. ೭ ನೇ ತರಗತಿಯಲ್ಲೇ ಕವಿತೆ ರಚನೆಯ ಗೀಳು ಹತ್ತಿಸಿಕೊಂಡ ಇವರು ೧೯೯೮ ರಲ್ಲಿ ಯುವಕರ ಸಂಘ ರಾಮನಗರ ಪ್ರಕಾಶನದಿಂದ ತಮ್ಮ ಮೊದಲ ಕಥಾ ಸಂಕಲನ ‘ಬದುಕು ಪ್ರಿಯವಾಗುವ ಬಗೆ’ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಜಾಣಗೆರೆ ಪತ್ರಿಕೆಯಲ್ಲಿ ನಿರಂತರವಾಗಿ ೫೨ ವಾರ ‘ಸ್ತ್ರೀದ್ವನಿ’ ಅಂಕಣ ಬರೆಯುವ ಮೂಲಕ ಸ್ತ್ರೀ ಸಂವೇದನೆಯ ಭಿನ್ನ ಟಿಪ್ಪಣಿಗಳನ್ನು ಬರೆದಿದ್ದಾರೆ.

   ಬದುಕು ಪ್ರಿಯವಾಗುವ ಬಗೆ ಸಂಕಲನದಲ್ಲಿ ಮೊದಲ ಕಥೆಗಳಿಗೆ ಇರುವ ಸಾಮಾನ್ಯ ಮಿತಿಗಳು ಇವೆ. ನಂತರದ ಅವರ ‘ದಿಟ್ಟಿಯು ನಿನ್ನೊಳು ನೆಟ್ಟಿರೆ’ ಸಂಕಲನದಲ್ಲಿ ಮೊದಲ ಸಂಕಲನದ ಮಿತಿಗಳನ್ನು ಮೀರಲು ಯತ್ನಿಸಿರುವುದು ಗೋಚರಿಸುತ್ತದೆ. ಕೇರಾಫ್ ಕಿಚನ್ ದಿನಗಳಲ್ಲಿ ತನ್ನ ಬಗ್ಗೆ ಮಾತನಾಡುತ್ತಾ ನನ್ನ ಪ್ರಪಂಚ ಸದಾ ಚಿಕ್ಕದೇ ಎಂದು ಹೇಳುತ್ತಲೇ ಕತೆಗಳಲ್ಲಿ ಅದನ್ನು ಮೀರಲು ಪ್ರಯತ್ನಿಸುತ್ತಾರೆ. ಅವರ ಲೇಡಿ ಲಕ್ಕವ್ವ ಕಥೆ ಹೆಣ್ಣಿನ ಬದುಕಿನ ಒಂದು ವಿಚಿತ್ರ ಮಗ್ಗಲನ್ನು ಕಾಣಿಸಲು ಯತ್ನಿಸಿದ್ದಾರೆ.  ಅಂತರಂಗದ ಆಯಾಮ ಕಥೆಯಲ್ಲಿ ಅಹಲ್ಯೆ ಬಗೆಗಿನ ಕಥನವನ್ನು ಮುರಿದುಕಟ್ಟಲು ಪ್ರಯತ್ನಿಸಿದ್ದಾರೆ. ಈ ಮೂಲಕ ಪುರಾಣದ ಕಥೆಯನ್ನು ವರ್ತಮಾನದ ಕಣ್ಣೋಟದಿಂದ ನೋಡುವ ವಿಶಿಷ್ಟ ಕ್ರಮ ಈ ಕಥೆಯಲ್ಲಿ ಕಾಣುತ್ತದೆ.  ಕಾಯುತಿದೆ ಬದುಕು ಕಥೆಯಲ್ಲಿ ಹೆಣ್ಣಿನ ಒಂದು ಸಂದಿಗ್ಧ ಜೀವನ ಗಾಥೆಯನ್ನು ತೋರಿಸಿದ್ದಾರೆ. ಹೀಗೆ ಅವರ ಹಲವು ಕಥನದಲ್ಲಿ ಹೆಣ್ಣಿನ ಭಿನ್ನ ಲೋಕಗಳನ್ನು ಕಾಣಿಸಲು ಪ್ರಯತ್ನಿಸಿರುವುದು ಕಾಣುತ್ತದೆ.

   ಸುಧಾ ಅವರ ಕಥನದಲ್ಲಿ ನನಗೆ ಎದ್ದು ಕಂಡದ್ದು ಕಥನದೊಳಗಿನ ನಾಟಕೀಯ ಗುಣ. ಇದನ್ನು ನೋಡಿದರೆ ಇವರು ನಾಟಕ ಬರೆದರೆ ಯಶಸ್ವಿ ನಾಟಕಕಾರರಾಗುವ ಎಲ್ಲಾ ಲಕ್ಷಣಗಳು ಅವರ ಕಥನದಲ್ಲಿ ಕಾಣುತ್ತದೆ.  ಅವರ ಕಥೆಗಳ ಶಿಲ್ಪದಲ್ಲಿ ಸಾಂದ್ರತೆಯ ಅಂಶ ಕಡಿಮೆ ಇದೆ ಅನ್ನಿಸುತ್ತದೆ. ಕಥನ ತಂತ್ರದ ಭಿನ್ನತೆಯೂ ಅಷ್ಟಾಗಿ ಕಾಣುವುದಿಲ್ಲ . ಕಥನ ಕ್ರಮದಲ್ಲಿ ಅವರದ್ದೇ ಆದ ಒಂದು ವಿಶಿಷ್ಟ ಲಯ ಇನ್ನು ಸಿದ್ದಿಸಿಲ್ಲ. ಹಾಗಾಗಿ ಅವರ ಕಥನಕ್ರಮದಲ್ಲಿ ಹಲವಾರು ಪ್ರಭಾವ ಪ್ರೇರಣೆಗಳು ಕಾಣುತ್ತವೆ. ಇಂತಹ ಕೆಲವು ಮಿತಿಗಳನ್ನು ಅವರ ಕಥನದ ಬಗ್ಗೆ ಹೇಳಬಹುದು.  ಅವರ ಕನ್ನಡಿಯನ್ನು ನೋಡಲಾರೆ ಹೊಸ ಕಥಾ ಸಂಕಲನವನ್ನು ಓದಲಾಗಿಲ್ಲ. ಅದರಲ್ಲಿ  ನಾನು ಗುರುತಿಸಿದ ಈ ಮೇಲಿನ ಮಿತಿಗಳನ್ನು ಮೀರಿದ್ದಾರೆಯೇ ನೋಡಬೇಕು. ಇರಲಿ ಇಲ್ಲಿನ ಮಾತುಗಳು ಈ ತಲೆಮಾರಿನ ಓದುಗನೊಬ್ಬ ಓದಿದಾಗ ಅನ್ನಿಸಿದ ಪ್ರಾಮಾಣಿಕ ಅನಿಸಿಕೆಗಳನ್ನು ಮಾತ್ರ ಹೇಳಿಕೊಂಡಿದ್ದೇನೆ. ಇದನ್ನು ವಿಮರ್ಶೆ ಎಂದು ತಿಳಿಯಬೇಕಾಗಿಲ್ಲ.

  ಸುಧಾ ಅವರ ಷೇಕ್ಸ್‌ಪಿಯರ್ ಸೃಷ್ಠಿಸಿದ ಅನನ್ಯಯರು ಒಂದು ಉತ್ತಮ ಸಂಶೋಧನೆ. ಷೇಕ್ಸ್‌ಪಿಯರ್ ಅವರು ಸೃಷ್ಠಿಸಿದ ಮಹಿಳಾ ಪಾತ್ರಗಳನ್ನು ತುಂಬಾ ಭಿನ್ನವಾಗಿ ನೋಡಿದ್ದಾರೆ. ಈ ಕಾರಣಕ್ಕೆ ಸುಧಾ ಅವರು ಕತೆಗಾರ್ತಿ, ಕವಯಿತ್ರಿ ಮಾತ್ರವಲ್ಲದೆ ಸಂಶೋಧಕಿಯೂ ಕೂಡ. ಅವರ ಸಂಶೋಧನೆಯ ವ್ಯಾಪ್ತಿ ವಿಸ್ತಾರವಾಗಲಿ. ಅವರ ಕಥನದ ಸಾದ್ಯತೆಗಳು ಹೆಚ್ಚಲಿ, ಇನ್ನಷ್ಟು ಮತ್ತಷ್ಟು ಶಕ್ತಿಯುತವಾದದ್ದನ್ನು ಬರೆಯಲಿ ಎಂದು ಆಶಿಸುತ್ತಾ ಈ ಪುಟ್ಟ ಟಿಪ್ಪಣಿಯನ್ನು ಮುಗಿಸುವೆ.

ಸೋಮವಾರ, ಮೇ 21, 2012

ಸಣ್ಣ ಕಥೆ: ಕಾಯುತಿದೆ ಬದುಕು






(ಹಗರಿಬೊಮ್ಮನಹಳ್ಳಿಯ ಸುಧಾ ಚಿದಾನಂದಗೌಡ ಅವರು ದಶಕಗಳಿಂದ ಕಥೆಗಳನ್ನು ಬರೆಯುತ್ತಾ ಬಂದಿದ್ದಾರೆ. ಅವರ ಕಥೆಗಳು ಮಹಿಳಾ ಮೂಲದ ಸೂಕ್ಷ್ಮ ಶೋಧದಂತಿವೆ.  ಇಲ್ಲಿ ಪ್ರಕಟಿಸಲಾದ ಕಥೆ ಕೂಡ ಹೆಣ್ಣು ತಣ್ಣನೆಯ ಕ್ರೌರ್ಯದಲ್ಲಿ ಬಳಲುವಿಕೆಯನ್ನು ಸೂಕ್ಷ್ಮವಾಗಿ ದಾಖಲಿಸಿದ್ದಾರೆ.)


-ಸುಧಾ ಚಿದಾನಂದಗೌಡ.







“ಜಲ್ದೀ ಕೊಡ್ರೀ..ಜಲ್ದೀ ಕೊಡ್ರೀ.. ಲೇಟಾತು..” ಅವಸರದ ದನಿ ಕೇಳಿ, ಪರಿಚಿತವೆನ್ನಿಸಿ, ಪಕ್ಕಕ್ಕೆ ತಿರುಗಿದೆ.
“ಅರೆರೆ.. ಏನ್ ಮೇಷ್ಟ್ರೇ.. ನಮಸ್ತೆ. ಹೇಗಿದ್ದೀರಿ?”
“ಯಾರೂ.. ಓಹ್ ಮೀನಾಕ್ಷಿ.. ನೀನಾ ತಾಯಿ..? ಹೆಂಗಿದ್ದೀ..? ಏನ್ ಮಾಡ್ತಿದ್ದೀ..?”
“ನಿಮ್ ಆಶೀರ್ವಾದ ಮೇಷ್ಟ್ರೇ ಚೆನ್ನಾಗಿದ್ದೀನಿ. msw ಮಾಡಿಕೊಂಡೆ. ಸ್ವಲ್ಪ ದಿನ ಆಯ್ತು ಯೂನಿವರ್ಸಿಟಿಯಿಂದ ಬಂದು. ಇಲ್ಲಿನ ಎನ್‌ಜಿಒನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡ್ತದೀನಿ. ಏನಿಲ್ಲಿ? ತುಂಬ ಅವಸರದಲ್ಲಿದೀರಿ?”
“ಹೌದಮ್ಮಾ. ನನ್ನ ಮಗಳು ಈವೊತ್ತು ಗಂಡನ ಮನೆಗೆ, ಎರಡ್ನೇ ಹೆರಿಗೆ ಮುಗಿಸಿಕೊಂಡು ಹೊಂಟಾಳ. ದೊಡ್ಡ ಮೊಮ್ಮಗಳಿಗೆ ಹೊಸ ಬಟ್ಟಿ ತಗೊಂಡು, ಒಂದಿಷ್ಟು ಆಟದ ಸಮಾನು ತಗೊಂಡು , ಕೊಟ್ಟು ಕಳಿಸೋಣ ಅಂತ ಮಧ್ಯಾಹ್ನವೇ ಮನೆ ಬಿಟ್ಟೆ. ತಡ ಆಗಿಬಿಡ್ತು.”




ಮೇಷ್ಟ್ರು ಆಯಾಸದಿಂದ ಏದುಸಿರು ಬಿಡುವುದು ನೋಡಲಾರದೆ, ಅವರ ಕೈಯಿಂದ ಚೀಲಗಳನ್ನು ತೆಗೆದುಕೊಂಡೆ.
“ಅದೇನ್ ತಗೋಬೇಕೋ ತಗೊಳ್ಳಿ ಮೇಷ್ಟ್ರೇ, ನಾನು ಹಿಡ್ಕೊಂಡಿರ್ತೀನಿ.”
“ಅಯ್ಯೋ ಬೇಡಮ್ಮಾ, ನಿನಗ್ಯಾಕೆ ತೊಂದ್ರೆ?”
“ಇಲ್ಲ ಸರ್ ನೀವು ಹೀಗೆ ಹೇಳಿದ್ರೆ ನನ್ ಮನಸಿಗೆ ತೊಂದ್ರೆಯಾಗುತ್ತೆ ನೋಡಿ. ನೀವು ಪ್ರೈಮರಿ ಶಾಲೆಯಲ್ಲಿ ಅಆಇಈ ಹೇಳಿಕೊಡದಿದ್ರೆ ನಾವು ಇಷ್ಟೊಂದು ಓದೋದಿಕ್ಕೆ ಆಗುತ್ತಿತ್ತೇ? ಬುನಾದಿ ಹಾಕಿದವರೇ ನೀವಲ್ವೇ?”

“ಎಷ್ಟು ಚೆನ್ನಾಗಿ ಮಾತಾಡ್ತೀಯಮ್ಮಾ.? ದೊಡ್ಡೊಳಾಗಿಬಿಟ್ಟಿದೀಯಾ.!”
ಕ್ಷೀಣವಾಗಿ ನಕ್ಕ ಮೇಷ್ಟ್ರು ಮೊಮ್ಮಗಳಿಗೆ ನೆರಿಗೆನೆರಿಗೆಯ ಫ್ರಾಕು ತೆಗೆದುಕೊಳ್ಳುವುದನ್ನೇ ನೋಡುತ್ತಾ ನಿಂತೆ.. ನಂತರ, “ನಿಮ್ ಮನೆಗೆ ನಾನೂ ಬರ್ತೀನಿ ನಡೀರಿ ಮೇಷ್ಟ್ರೇ.”
“ಬಾ..ಬಾ..ಚಾ ಕುಡಿದು ಹೋಗುವಂತೆ.”
ಶಾಲೆಯ ಪಕ್ಕದಲ್ಲೇ ಮೇಷ್ಟ್ರ ಮನೆ. ಎರಡು-ಮೂರನೆಯ ತರಗತಿಯಲ್ಲಿ ಇದೇ ದಾರಿಯಲ್ಲೇ ಓಡಾಡಿದ ಬಾಲ್ಯದ ನೆನಪೇ ಸುಂದರ. ಮೇಷ್ಟ್ರು ಆತ್ಮೀಯತೆಯಿಂದ ಮಾತಾಡುತ್ತಾ ನಡೆದರು.


“ಮಗಳ ಬಗ್ಗೆಯೇ ನನಗೆ ಚಿಂತೆ ನೋಡು. ಆಕಿ ಗಂಡ ಬಾರೀ ವೀರಭಧ್ರನಂಥಾ ಮನುಷ್ಯ. ಭಾರೀ ದೌರ್ಜನ್ಯ. ಸ್ಟ್ರಿಕ್ಟು. ಎಷ್ಟು ಹೇಳಿದೆ-ಇನ್ನೊಂದೆರಡು ದಿನ ಬಿಟ್ಟು ಕಳಿಸ್ತೀನಪಾ ಅಂತ. ಎರಡು ಸಣ್ಣಹುಡುಗರನ್ನೂ ಇಟುಗೊಂಡು ಹೆಂಗೆ ಮಾಡಿಕೊಂತಾಳ ಮನ್ಯಾಗ ಅಂತ. ಈವೊತ್ತು ಕಳಿಸ್ಬೇಕು ಅಂದ್ರೆ ಕಳಿಸ್ಬೇಕು ಅಂತಾನೆ. ತಡ ಅಗ್ಹೋಯ್ತು ನೋಡು.”
ಮಾತಾಡುತ್ತಾ, ಮಾತಾಡುತ್ತಾ ಮನೆಯ ಬಳಿ ಬಂದ ಮೇಷ್ಟ್ರು ಅವಾಕ್ಕಾಗಿ ನಿಂತರು.
“ಅರೆ.. ಮನೆ ಬೀಗ ಹಾಕೈತಲ್ಲಾ.. ಗೌರಿ..?”
ನನಗೂ ಗಾಬರಿಯಾಗಿ ಚೀಲವನ್ನು ಕಟ್ಟೆಯ ಮೇಲಿಟ್ಟೆ.
“ಬೀಗ ತಗೋರಿ. ಗೌರಿ ಆಗಲೇ ಹೋದ್ಲು.”
ಪಕ್ಕದ ಮನೆಯ ಹೆಂಗಸು ಹೇಳಿದಾಗ, ಮೇಷ್ಟ್ರು ಬೆಚ್ಚಿಬಿದ್ದದ್ದು ಸ್ಪಷ್ಟವಾಗಿತ್ತು.
“ಹಂ.. ಯಾಕೆ ಹೋದ್ಲು? ಹೆಂಗೆ ಹೋದ್ಲು..?”
“ಸಣ್ಣ ಹುಡುಗೀನ್ನ ಎತ್ತಿಕೊಂಡು, ದೊಡ್ಡ ಹುಡುಗೀನ್ನ ನಡೆಸಿಕೊಂಡು ಹೋದ್ಲುರೀ. ಏನೂ ಹೇಳ್ಲಿಲ್ಲ. ನಾನು ಹೋಗೀನಿ ಅಂತ ಹೇಳಿ ಅಪ್ಪಗ ಬೀಗ ಕೊಡ್ರಿ ಅಂತ ಅಷ್ಟೇ ಹೇಳಿದ್ಳು.”

ಪಕ್ಕದ ಮನೆಯಾಕೆ ವಿವರಿಸಿದಳು. ಒಂದು ಕ್ಷಣ ಮೇಷ್ಟರಿಗೆ ಏನೂ ಅರ್ಥವಾದಂತೆ ತೋರಲಿಲ್ಲ. ನಾನೇ ಬೀಗ ತೆಗೆದುಕೊಂಡು, ಬಾಗಿಲು ತೆಗೆದು, ಚೀಲ ಒಳಗಿಟ್ಟೆ. ಅವರ ಮನೆಯಲ್ಲಿ ಅವರಿಗೇ ಉಪಚಾರ ಮಾಡಬೇಕಾದ ಮುಜುಗರ ಮುಚ್ಚಿಡಲು ಯತ್ನಿಸುತ್ತಾ, “ಕೂತ್ಕೊಳ್ಳಿ ಮೇಷ್ಟ್ರೇ. ಯಾಕೆ ಇದ್ದಕ್ಕಿದ್ದಂತೆ ಹೋಗಿರಬಹುದು ನಿಮ್ಮ ಮಗಳು?”
“ಇನ್ನೇಕೆ ಹೋಗಿರ್ತಾಳೆ? ಗಂಡನ ಮನೆಗೆ ಹೋಗಿರ್ತಾಳೆ ಅಥವಾ ಎಲ್ಲಾದರೂ ಸಾಯೋಕೆ ಹೋಗಿರ್ತಾಳೆ.”
ಬೆಚ್ಚಿ ಬೀಳುವ ಸರದಿ ಈಗ ನನ್ನದು. ವಾತ್ಸಲ್ಯದಿಂದ ಪಾಠ ಹೇಳಿದ ಮೇಷ್ಟ್ರು.. ಕಠೋರ ಮಾತುಗಳ ಅಪ್ಪ..! ಎಷ್ಟು ವ್ಯತ್ಯಾಸ..!
“ಸರ್, ಯಾಕೆ? ಏನ್ ವಿಷ್ಯ?”
“ಏನ್ ವಿಷ್ಯ ಅಂತ ಹೇಳ್ಲಿ ಮೀನಾಕ್ಷಿ? ತಾಯಿ ಇದ್ದಾಗ ಇಬ್ರೂ ಹಠ ಮಾಡಿದ್ರು ಅಂತ ಓದಿಸ್ದೆ. ಕೆಲಸ ಮಾಡ್ತೀನಿ ಅಂತ ಹಠ ಮಾಡೋ ಹೊತ್ತಿಗೆ ಅವರಮ್ಮ ತೀರ್ಕೊಂಡ್ಲು. ಬೆಳೆದ ಹುಡುಗೀನ್ನ ಮನೇಲಿಟ್ಕೊಳ್ಳೊಕೆ ಭಯವಾಗಿ, ತಕ್ಷಣ ಮದುವೆ ಮಾಡಿ ಮುಗಿಸ್ದೆ. ಅವ್ನೂ ಒಳ್ಳೆಯವನೇ. ಆದ್ರೆ ಭಾರೀ ದೌರ್ಜನ್ಯ. ಒಂದೊಂದು ನಿಮಿಷಾನೂ ಎಲ್ಲಿದ್ದೆ, ಎಲ್ಲಿದ್ದೆ ಅಂತ ಕೇಳಿ ಕೇಳಿ ಅವಳನ್ನು ಹೆದರಿಸಿಬಿಟ್ಟಿದಾನೆ. ಕೆಲಸ ಮಾಡೋಕೂ ಬಿಡೋಲ್ಲ. ತಾನೂ ಸರಿಯಾಗಿ ಕಾಳಜಿ ಮಾಡೋದಿಲ್ಲ. ಮಾತು ಮಾತಿಗೂ ಗದರಿಸ್ತಾನೆ. ಈ ನಡುವೇನೇ ಎರಡು ಮಕ್ಕಳನ್ನೂ ಮಾಡಿಕೊಂಡಿದಾಳೆ. ಫಜೀತಿ. ಎರಡು ದಿನ ಇಲ್ಲಿರೋಕೆ ಬಿಡೋದಿಲ್ಲ. ಈ ಭಾಗ್ಯಕ್ಕೆ ಮದುವೆ ಬೇರೆ ಕೇಡು. ಯಾವಾಗಲೂ ಅಳ್ತಿರ್ತಾಳೆ. ಅದನ್ನು ನೋಡೋದಿಕ್ಕಿಂತ ಅವರಮ್ಮನ ಜೊತೆಗೆ ಇವಳೂ ಸತ್ತ್ಹೋದ್ರೆ ಸಾಕು ಅನಿಸಿದೆ. ಮುಖ ಎತ್ತಿಕೊಂಡಾದ್ರು ಓಡಾಡಬಹುದು.”
ಒಂದೇ ಉಸಿರಿಗೆ ಹೇಳಿ ಮುಗಿಸಿದರು. ನೀರವ ಮೌನದ ನಂತರ, “ಇಲ್ಲಿಗೇ ಕರ್ಕಂಬಂದುಬಿಡಿ ಸರ್,” ಎಂದೆ.
“ಕರ್ಕೊಂಬಂದು ತಲೆ ಮೇಲೆ ಸುರಕೊಳ್ಳೇನು? ಅಷ್ಟೆಲ್ಲಾ ವರದಕ್ಷಣೆ ಸುರಿದು ಮದುವೆ ಮಾಡಿ ಮುಗಿಸುವಷ್ಟರಲ್ಲಿ ಹಣ್ಣಾಗಿ ಹೋಗಿದೀನಿ. ಮಾಡ್ಕೊಂಡೋನಿಗೆ ಅರಿವಿರಂಗಿಲ್ಲೇನು? ನೋಡ್ಕೊಂತಾನೆ ಬಿಡು. ನಾನೇನು ಮಾಡ್ಲಿ?”

ನನ್ನ ಗಾಬರಿ ಹೆಚ್ಚಾಯ್ತು. ಗೌರಿ ನಿಜಕ್ಕೂ ಏನಾದರೂ ಅನಾಹುತ ಮಾಡಿಕೊಂಡಿದ್ದರೆ..? ಮೇಷ್ಟ್ರನ್ನು ಅಲ್ಲೇ ಬಿಟ್ಟು, ಎದ್ದು ಬಂದು ಬಿಟ್ಟೆ. ಎಲ್ಲಿಗೆ ಹೋಗಿದಾಳೆ ಅಂತ ಕೂಡಾ ಯೋಚಿಸ್ತಿಲ್ಲವಲ್ಲ ಇವ್ರು.? ಎಲ್ಲೀಂತ ಹುಡುಕೋದು?
ಗೌರಿಯನ್ನು ನೋಡಿ ತುಂಬ ದಿನಗಳೇ ಆಗಿಹೋದವು. ಎದುರಿಗೇ ಬಂದರೂ ನನ್ನನ್ನು ಅವಳು, ಅವಳನ್ನು ನಾನು ಗುರುತು ಹಿಡಿಯಲಾರೆವೇನೋ? ಇದನ್ನು ಹೀಗೇ ಬಿಡೋದಿಕ್ಕಂತೂ ನನ್ನಿಂದಾಗದು! ಮತ್ತೆ ಒಳಬಂದೆ.
“ಮೇಷ್ಟ್ರೇ, ನೀವು ಮಗಳೀಗಾಗಿ ಏನೇನೋ ಪರ್ಚೆಸ್ ಮಾಡಿಕೊಂಡು ಬಂದಿದೀರಿ. ಕೊಟ್ಟಾದ್ರೂ ಬರೋಣ ಬನ್ನಿ.”
“ಇಲ್ಲ. ನನಗೆ ಹೇಳದೆ, ಕೇಳದೆ ಮನೆ ಬಿಟ್ಟು ಹೋಗಿದಾಳೆ. ನನಗ್ಯಾಕೆ ಬೇಕು ಉಸಾಬರಿ. ಅವ್ನು ನೊಡ್ಕೊಂತಾನೆ ಬಿಡು.”
ದಿಗ್ಭ್ರಮೆಯೆನಿಸಿತು. ಮನುಷ್ಯರಿಗೆ ಎಷ್ಟೊಂದು ಮುಖ! ಏನು ಮಾಡಲಿ? ಬಾಗಿಲಲ್ಲಿ ನಿಂತು ಒಂದು ಕ್ಷಣ ಯೋಚಿಸಿದೆ. ಬೀಗದ ಕೈ ಕೊಟ್ಟಿದ್ದ ಹೆಣ್ಣುಮಗಳು ತಮ್ಮ ಮನೆಯ ಬಾಗಿಲಲ್ಲಿ ನಿಂತು ಇತ್ತಲೇ ನೋಡುತ್ತಿದ್ದುದನ್ನು ಗಮನಿಸಿದೆ. ಸೀದ ಅಲ್ಲಿಗೇ ಬಂದೆ.

“ಗಂಡನ ಮನೆಗೇ ಹೋಗಿದಾಳೇನ್ರೀ?” ಕೇಳಿದೆ.
“ಗೊತ್ತಿಲ್ಲ. ಏನೂ ಸರ್ಯಾಗಿ ಹೇಳ್ಲಿಲ್ಲ.” ಆಕೆ ಗಲಿಬಿಲಿಯಿಂದ ಹೊರಬಂದು, ನಂತರ ಮುಂದುವರಿಸಿದಳು.
“ಗಂಡನ ಮನ್ಯಾಗ ಸರಿ ಇಲ್ಲಂತೆ ಬಿಡ್ರೀ. ದಿನಾ ಜಗಳ ಆಡ್ತಿರ್ತಾರಂತ. ಇಲ್ಲಿ ಇರಾಕನೂ ಬಿಡಂಗಿಲ್ಲ ಆಯಪ್ಪ. ಏನೋ, ಏನ್ ಕಥಿನೋ..?”
“ಅವ್ರ ಮನಿ ನೋಡೀರೇನ್ರೀ? ಅಲ್ಲಿಗೇ ಹೋಗಿರಬಹುದಾ?”
“ಏನೋ ಗೊತ್ತಿಲ್ಲ್ರೀ..”
“ನಿಂ ಮನೇಲಿ ಯಾರಾದ್ರೂ ಸಣ್ಣ ಹುಡುಗರಿದ್ದರೆ..ಅವರೇನಾದ್ರೂ ನೋಡಿದಾರಾ..?”
ಆಕೆ, “ಇಲ್ಲ ಬಿಡ್ರೀ” ಅನ್ನುವಷ್ಟರಲ್ಲಿ,
“ಗೌರಕ್ಕನ ಮನೇನ..? ನಾ ನೋಡೀನ್ರೀ..!” ಎಂದು ಮುಂದೆ ಬಂದೇ ಬಿಟ್ಟ ಹತ್ತು ವರ್ಷದ ಪೋರ! ನನ್ನ ಪಾಲಿನ ಅವಧೂತ!
“ನನ್ನನ್ನ ಕರೆದುಕೊಂಡು ಹೋಗ್ತೀಯಾ ಪುಟ್ಟ?” ಕೇಳಿದ್ದಕ್ಕೆ
“ಹೂನ್ರೀ, ತೋರಿಸ್ತೀನ್ರೀ” ಎಂದು ತಾಯಿಯ ಅನುಮತಿಗೂ ಕಾಯದೆ ಹೊರಟುಬಿಟ್ಟ.
ಮರಳಿ ಮೇಷ್ಟ್ರ ಮನೆಯತ್ತ ನೋಡಿದರೆ, ಅವರು ಬಾಗಿಲ ಬಳಿಯಲ್ಲೇ ನಿಂತಿದ್ದರು.
“ಸರ್, ನಾನಾದ್ರೂ ಹೋಗಿಬರ್ಲಾ? ನೀವು ತಂದು ಕೊಟ್ಟಿರೊದನ್ನ ಕೊಟ್ಟು, ಮಾತಾಡ್ಸಿಯಾದ್ರೂ ಬರ್ತೀನಿ. ಆಗಬಹುದಾ?”
ಬೇಡ ಎಂದೇನಾದರೂ ಹೇಳಿದರೆ, ಖಂಡಿತವಾಗಿ ಜಗಳ ಆಡೆಬಿಡ್ತೀನಿ ಎಂದು ಮನಸಿನಲ್ಲೇ ನಿರ್ಧರಿಸುತ್ತಿರುವಾಗಲೇ, ಮೇಷ್ಟ್ರು, “ಸರಿ ತಗೊಂಡು ಹೋಗು. ಆದರೆ ನಾನಂತೂ ಬರಲ್ಲ,” ಎಂದರು.
ಅಬ್ಬಾ, ಅಷ್ಟಾದರೂ ಹೇಳಿದರಲ್ಲ! ತಡ ಮಾಡದೆ ಚೀಲಗಳನ್ನು ಹಿಡಿದು ಹೊರಬಂದು, ಆ ಹುಡುಗನನ್ನು ಬಾರೋ ಎಂದು ಕರೆದುಕೊಂಡು ಹೊರಟುಬಿಟ್ಟೆ.
“ಗೌರಕ್ಕ ಭಾಳ ಒಳ್ಳೇಕಿ. ತಿನ್ಲಿಕ್ಕೆ ತಿಂಡಿ, ಚಾ ಎಲ್ಲ ಕೊಡ್ತಿದ್ಲು. ಮಗಳನ್ನು ನನ್ನ ಹತ್ರ ಬಿಟ್ಟು ಆಟ ಆಡಿಸ್ತಿರು. ಚಾಕ್ಲೇಟು ಕೊಡಿಸ್ತೀನಿ ಅಂತಿದ್ಲು. ಆದ್ರ ಯಾವಾಗರ ಅತ್ಕೋತ ಕೂತಿರ್ತಿದ್ದು. ಈವೂತ್ತು ಹೋಗುವಾಗಲೂ ಅಳುಮಾರಿ ಮಾಡಿಕೊಂಡಿದ್ಲು..”
ಪುಟ್ಟ ದಾರಿಯುದ್ದಕ್ಕೂ ಹೇಳುತ್ತಲೇ ಇದ್ದ.
“ಅದೋ, ಅದೇ ನೋಡ್ರಿ ಗೌರಕ್ಕನ ಮನಿ… ಅಲ್ಲಿ ಭಾಳ ಜನ ನಿಂತಾರಲ…ಅದಾ..”
ದೇವ್ರೇ, ಜನ ಯಾಕೆ ನಿಂತಿದಾರೆ ಗೌರಿ ಮನೆ ಹತ್ರ..?! ಮಕ್ಕಳು ಬೇರೆ ಹೊತೇಲಿದ್ರು..! ಅನಾಹುತ ಮಾಡಿಕೊಂಡೇಬಿಟ್ಟಿದಾಳಾ..?! ನಾನು ಬರೋದು ತಡವಾಗಿ ಹೋಯ್ತೇ..? ಧಾವಂತದಿಂದ ಜೋರಾಗಿ ಓಡುನಡಿಗೆಯಲ್ಲಿ ಮನೆ ಬಳಿ ಬರುತ್ತಿದ್ದಂತೆ.. ಗಟ್ಟಿಯಾದ ಗಂಡಸಿನ ದನಿ ಕೇಳಿಸಿತು..
“ಯಾರ ಹತ್ರ ಮಾಡ್ತಿದೀ ನಾಟ್ಕಾನಾ..? ಐದು ಘಂಟಿಗೆ ಇಲ್ಲಿರಬೇಕು ಅಂತ ಹೇಳಿದ್ದಿಲ್ಲ? ಆರೂವರೆ ಆಗೇತಿ ಈಗ ಬಂದಿದೀ..? ಹೇಳಾರು ಕೇಳಾರು ಯಾರೂ ಇಲ್ಲ ನಿನಗ..? ಯಾರ ಜೊತಿ ಏನ್ ಮಾಡ್ಲಕ್ಹತ್ತಿದ್ದೀ..? ಆಂ..? ಮದುವ್ಯಾದ ಮ್ಯಾಲ ನನ್ನ ಮಾತಿಗೆ ಬೆಲಿ ಇರಬೇಕು, ತಿಳೀತ..? ಕಸ, ನೀರು, ಒಲಿ ನೋಡಾರು ದಿಕ್ಕಿಲ್ಲ ಈ ಮನ್ಯಾಗ. ಅಷ್ಟೂ ಅರುವಾಗಂಗಿಲ್ಲೇನು..?”
ಕಷ್ಟಪಟ್ಟು ಜನರ ಮಧ್ಯೆ ಜಾಗ ಮಾಡಿಕೊಂಡು ಮುಂದೆ ಬಂದು ನೋಡಿದೆ ಅತ್ಯಾತಂಕದಿಂದ.
ಉರಿಮುಖ ಮಾಡಿಕೊಂಡು, ಕೈ ಝಾಡಿಸುತ್ತಾ ಮಾತವಾಡುತ್ತಿದ್ದ ಗಂಡಸಿನ ಎದುರಿಗೆ ಸುಮ್ಮನೆ ಕಲ್ಲಿನಂತೆ ನಿಂತಿದ್ದವಳೇ..ಹೌದು..ಯಾರೂ ಪರಿಚಯ ಮಾಡಿಕೊಡೋದೇ ಬೇಡ.. ಅವಳೇ ಗೌರಿ! ಕಂಕುಳಲ್ಲಿದ್ದ ಪುಟ್ಟಮಗು ಗಾಬರಿಯಿಂದ ಸಣ್ಣದನಿಯಲ್ಲಿ ಅಳುತ್ತಿದ್ದ..!!
ಅವನಿಗಿಂತ ಸ್ವಲ್ಪವೇ ದೊಡ್ಡದಾದ ಮಗಳು ತಾಯಿಯ ಸೀರೆ ನೆರಿಗೆಗಳಲ್ಲಿ ಅವಿತುಕೊಂಡು, ಅಮ್ಮನ ಕಾಲ್ಗಳನ್ನು ಅಪ್ಪಿಕೊಂಡು ಭಯದಿಂದ ಅಳುವುದನ್ನೂ ಮರೆತಂತೆ ನಿಂತಿದ್ದಳು. ಒಂದು ಕ್ಷಣ ಹೃದಯ ಅರಾಮಾಗಿ, ಎದೆ ಹಗುರಾಗಿ ಉಸಿರಾಡುವಂತಾಯ್ತು. ಗೌರಿ ಮತ್ತು ಮಕ್ಕಳು ಜೀವದಿಂದಲಾದರೂ ಇದಾರಲ್ಲ..ಅಷ್ಟೇ ಸಾಕು..!
“ಏನ್ರೀ, ತಮಾಷೆ ನೋಡ್ತಾ ಇದೀರಲ್ಲ? ನಿಂ ಮನೇಲೇನು ತೂತಿಲ್ಲದ ದೋಸೆ ಹೊಯ್ತಿರೇನು..? ನಡ್ರಿ, ನಡ್ರಿ.. ನೋಡೋದೇನಿದೆ ಇಲ್ಲಿ ಸ್ಪೆಷಲ್ಲು?”
ಆದಷ್ಟೂ ದನಿಯನ್ನು ಒರಟಾಗಿಸಿ ನೆರೆದಿದ್ದವರನ್ನು ಚೆದುರಿಸುವ ಪ್ರಯತ್ನ ಮಾಡತೊಡಗಿದಾಗ, ಗಂಡ ಹೆಂಡತಿ ಬಾಗಿಲಿನತ್ತ, ನನ್ನತ್ತ ತಿರುಗಿ ನೋಡಿದರು.ಚೀಲವನ್ನು ಕೈಯಲ್ಲಿ ಹಿಡಿದು ಸೀದಾ ಒಳಗೆ ಕಾಲಿಟ್ಟೆ.
“ಏನ್ ಗೌರಿ, ಹೇಳದೆ, ಕೇಳದೆ ಬಂದ ಬಿಡೋದೇ..? ನಾನು, ಅಪ್ಪ ಎಷ್ಟು ಗಾಬರಿಯಾಗಿದೀವಿ ಗೊತ್ತಾ?”
ಸಲಿಗೆಯಿಂದ ಹಳೆಯ ಗೆಳತಿಯಂತೆ ಜೋರುದನಿ ತೆಗೆದಾಗ, ಯಾರಿವರು?ಎಂಬ ಗಲಿಬಿಲಿ, ಗೊಂದಲಗಳೊಂದಿಗೆ ಗೌರಿಯ ಮುಖ ಕೊಂಚ ಕಳೆಯಾಯಿತು.
“ನಾನು ಗೌರಿಗೆ ಅಕ್ಕ ಆಗಬೇಕ್ರಿ. ವಿದ್ಯಾಭ್ಯಾಸದ ಕಾರಣದಿಂದ, ಮನೆಯಿಂದ ಭಾಳ ದಿನ ಹೊರಗಿದ್ದೆ. ಹಂಗಾಗಿ ನೀವು ನನ್ನನ್ನ ನೋಡಿಲ್ಲ. ಅಪ್ಪ ಗೌರಿಗೆ ಮತ್ತು ಮಕ್ಕಳಿಗೆ ಬಟ್ಟೆ ತರೋದಿಕ್ಕ ಬಜಾರಕ್ಕೆ ಹೋಗಿದ್ರು. ಸ್ವಲ್ಪ ಲೇಟಾಯ್ತು. ಅಷ್ಟರೊಳಗೆ, ಈಕಿ ತಾನ ಹೊಂಟುಬಂದುಬಿಟ್ಟಿದಾಳೆ. ನೋಡ್ರಿ. ಅಪ್ಪಾರಿಗೆ ಬ್ಯಾರೆ ಕೆಲಸವಿತ್ತು. ಅದಕ್ಕ ನಾನ ಬಂದೆ.”
ಹೇಳುತ್ತ ಹೇಳುತ್ತ ಬ್ಯಾಗನ್ನು ಇರಿಸಿ, ಪುಟ್ಟ ಮಗುವನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದೆ. ಅವನು ಇನ್ನಷ್ಟು ತಾಯಿಗೆ ಕವುಚಿಕೊಂಡ. ಮಗಳತ್ತ ಕೈ ಚಾಚಿದರೆ, ಅವಳೂ ಅಷ್ಟೇ..! ಅಮ್ಮನ ಕಾಲ್ಗಳನ್ನು ಇನ್ನಷ್ಟು ತಬ್ಬಿಕೊಂಡಳು. ಗೌರಿ ಗಂಡ, “ಏನ್ ಮಹಾ ಸಾಮಾನು ತಂದಿರ್ತಾನೆ ಇವರಪ್ಪ? ಇದು ಬೇರೆ ಕೇಡು.” ಗೊಣಗುತ್ತ ಚಪ್ಪಲಿ ಮೆಟ್ಟಿ, ಹೊರಹೋದ. ಒಳ್ಳೇದೇ ಆಯ್ತು. “ಕೂತ್ಕೋ ಗೌರಿ.” ಎಂದು ನಾನೂ ಕುಳಿತೆ.
“ನಾನು ಏಳನೆಯ ಕ್ಲಾಸಿನಲ್ಲಿ ಓದುತ್ತಿದ್ದಾಗ ನೀನು ಐದನೆಯದು ಓದುತ್ತಿದ್ದೆ. ಈಗ ನೋಡು, ನಾನಿನ್ನೂ ಮದುವೇನೇ ಆಗಿಲ್ಲ. ನೀನಾಗಲೇ ಎರಡು ಮಕ್ಕಳ ತಾಯಿ. ಎಷ್ಟು ಮುದ್ದಾಗಿದಾವೆ ಹುಡುಗರು!”
ಗೌರಿಯ ಮುಖದಲ್ಲಿ ಬೆಳಕು ಪೂರಾ ಹೊತ್ತಿಕೊಂಡಿತು.
“ಹಾಂ! ಮೂಲಿ ಮನಿ ಮೀನಕ್ಕ!? ದಿನಾ ದಾಸವಾಳ ಹೂ ತಂದುಕೊಡ್ತಿದ್ದಿ! ಈಗ ಹೀಂಗ ..!”
ಉದ್ಗರಿಸಿ ಸುಮ್ಮನಾದಳು. ನಾನೂ ಮೌನವಾಗಿದ್ದೆ. ಮಕ್ಕಳೂ ಸೈಲೆಂಟಾಗಿದ್ದವು… ಅಪ್ಪ ಹೊರಗೆ ಹೋಗಿದ್ದೇ ಸಾಕೆಂಬಂತೆ..! ನೀರವ ಮೌನ ಕೆಲಹೊತ್ತು ಬಿದ್ದುಕೊಂಡಿತು. ಕೆಲನಿಮಿಷದ ಬಳಿಕ, ಗೌರಿ ಮೆಲ್ಲಗೆ ಉಸುರಿದಳು..
“ಅಪ್ಪ ಎಷ್ಟು ಬೇಜಾರು ಮಾಡಿಕೊಂಡರೋ ಏನೋ..? ಏನನ್ಕೊಂಡ್ರೋ.. ಹೇಳದೆ ಬಂದುಬಿಟ್ಟೆ.!.. ಲೇಟಾಗಿ ಬಂದ್ರೆ ಇವ್ರು ಬಾಯಿಗೆ ಸಿಕ್ಕಂತೆ ಬೈತಾರೆ.. ಅಕ್ಕಪಕ್ಕದವರೆಲ್ಲಾ ಬಂದುಬಿಡ್ತಾರೆ.. ಸುಮ್ಮನೆ ಗಲಾಟೆ.. ಮರ್ಯಾದೆ ಹೋದ್ಹಾಗಾಗುತ್ತೆ..”
“ಮರ್ಯಾದೆ ಬಗ್ಗೆ ಹೆಣ್ಣೇ ಯಾಕೆ ಯೋಚಿಸ್ಬೇಕು? ಗಂಡಿಗೆ ಮರ್ಯಾದೆ ಇರೋಲ್ವೇನು..?”
ಆದಷ್ಟೂ ಹಗುರಾಗಿ, ಅರಾಮಾಗಿ ಹೇಳಲು ಯತ್ನಿಸಿದೆ.
“ಅಪ್ಪನ ಬಗ್ಗೆ ಚಿಂತಿಸ್ಬೇಡ. ಅವರೇನೂ ತಿಳ್ಕಳ್ಳೋದಿಲ್ಲ. ಅವರಿಗಷ್ಟು ಅರ್ಥವಾಗೋಲ್ವೇ..? ಏನೂ ಯೋಚ್ನೆ ಮಾಡಬೇಡ.” ಎಂದೆ. ಸತ್ಯ ಹೇಳಿ ಮತ್ತಷ್ಟು ಅಳಿಸುವುದೇಕೆ? ಮತ್ತೆ ಮೌನ ತಡೆಯಲಾಗದೆ, ಅವಳ ಕೈ ಹಿಡಿದು ಹೇಳಿದೆ..
“ನನಗೆ ತುಂಬಾ ಹೆದರಿಕೆಯಾಗಿತ್ತು ಕಣೇ! ನಿನ್ನ ನೋಡಿ ತುಂಬಾ ಸಂತೋಷವಾಯಿತು.”
“ಸಂತೋಷ ಪಡೋಕೆ ಏನಿದೆ ಬಿಡಿ ಮೀನಕ್ಕ.  ಸಾಕಾಗ್ಹೋಗಿದೆ.. ಸಾಯೋದೇ ಒಳ್ಳೇದು. ನನ್ನಂಥೋರಿಂದ ಯಾರಿಗೇನು ಪ್ರಯೋಜನ..?” ಗೌರಿ ಬಿಕ್ಕಿದಳು.
ಮನೆ ತೋರಿಸಿದ್ದ ಹುಡುಗ ಗೌರಿಯ ಮಗಳನ್ನಾಗಲೇ ಕರೆದೊಯ್ದಿದ್ದ. ಇಬ್ಬರ ನಗುವನ್ನು ಕೇಳಿಸಿಕೊಳ್ಳುತ್ತಾ ಹೇಳಿದೆ..
“ಎಲ್ಲರಿಗೂ ಒಂದಲ್ಲ ಒಂದು ದಿನ ಸಾಕಾಗ್ಹೋಗುತ್ತೆ ಗೌರಿ. ಆದ್ರೆ ಹೆಣ್ಣುಮಕ್ಕಳ ಬದುಕಿಗೆ ಒಂದಲ್ಲ ಒಂದು ಗುರಿಯನ್ನು ಪ್ರಕೃತಿ ಕೊಟ್ಟಿದೆ ನೋಡು. ಸಾಯೋ ಹಕ್ಕನ್ನು ಮಾತ್ರ ಕೊಟ್ಟಿಲ್ಲ. ಯಾಕೆ ಗೊತ್ತಾ..? ಅವಳ ತಾಯ್ತನ…! ನಿನ್ನ ಮಕ್ಕಳನ್ನೇ ನೋಡು… ಪ್ರಳಯವಾದರೂ ನಿನ್ನ ಬಿಟ್ಟು ಇರಲಾರರು. ಅಲ್ವೇ..? ತಾಯಿ ಅಂದ್ರೆ ಏನು ಮತ್ತೆ..? ದೊಡ್ಡವರಾದ ಮೇಲಿನ ಕಥೆ ಬಿಡು. ಈಗಂತೂ ನೀನು ವಿಷ ಕೊಟ್ಟರೂ ಕುಡಿಯುತ್ವೆ ಮಕ್ಳು. ಹೌದು ತಾನೇ..?”
ಗೌರಿಯ ಮೊಗದಲ್ಲಿ ಚಲನೆ ಶುರುವಾಯ್ತು.
“ಮಕ್ಕಳನ್ನು ಸಾಯಿಸಿ, ನೀನೂ ಸಾಯೋದು ಎಷ್ಟು ಹೊತ್ತಿನ ಕೆಲಸ..? ಬಹಳ ಸುಲಭ .ಜನ ಕೂಡ ನಿನ್ನನ್ನ ಬಹಳ ಬೇಗ ಮರೆತು ಬಿಡ್ತಾರೆ. ಪೇಪರ್ನಲ್ಲಿ ಒಂದು ಸುದ್ದಿ ಬಂದುಹೋದರೆ ಮುಗೀತು. ನಿನ್ನ ಗಂಡ ಮತ್ತೆ ಮದುವೆಯಾಗ್ತಾನೆ. ಯಾವುದೂ ನಿಲ್ಲೋದಿಲ್ಲ.! ಎಲ್ಲ ನಡೀತಾನೇ ಇರುತ್ತೆ. ಆದ್ರೆ..ಯೋಚ್ಸು ಗೌರಿ.. ಬದುಕನ್ನೇ ಮುಗಿಸೋದಿಕ್ಕೆ ನಿನಗ್ಯಾವ ಹಕ್ಕಿದೆ..? ನೀನ್ಯಾರು ಅನ್ಕಂಡಿದೀ..? ಕರ್ತವ್ಯನಿರತ ತಾಯಿ. ನೀನು ಸ್ವತಂತ್ರಳು..! ನೀನು ಯೋಗ್ಯಳು ಕೂಡ..! ಮತ್ತೆ ಸಾಯುವ ಮಾತೇಕೆ..? ಅಪ್ಪನೂ ಬೇಡ ಗಂಡನೂ ಬೇಡ ಎಂದು ನೀನು ನಿರ್ಧರಿಸಿದರೂ ಏನೂ ತಪ್ಪಿಲ್ಲ. ಜೀವನ ನಿನಗೆ ಬದುಕುವ ಬೇಕಾದಷ್ಟು ಆಯ್ಕೆಗಳನ್ನು ಕೊಡುತ್ತೆ.”
ಗೌರಿ ಸುಮ್ಮನೆ ಕೇಳುತ್ತಲಿದ್ದಳು.
“ನೀನು ಸಹನಾಮಯಿ. ಗೊತ್ತು. ಆದರೆ ನಿನ್ನ ಸಹನೆಯ ಮಿತಿಯೂ ಕೊನೆಗೊಳ್ಳಬಹುದು. ಆಗ ನನ್ನನ್ನು ನೆನೆಸಿಕೋ.”
ಪರ್ಸ್‌ನಿಂದ ವಿಸಿಟಿಂಗ್ ಕಾರ್ಡ್ ತೆಗೆದು ಅವಳ ಕೈಗಿಟ್ಟೆ. ಗೌರಿ ಅದನ್ನು ಜೋಪಾನವಾಗಿ ತೆಗೆದುಕೊಂಡದ್ದು ಗಮನಿಸಿ ನೆಮ್ಮದಿಯೆನಿಸಿತು.
ಹೊರಗೆ ಮಕ್ಕಳ ನಗುವಿನ ಕಲರವ ಬದುಕಿನ ನೂರಾರು ದಾರಿಗಳಿಗೆ ಆಹ್ವಾನವೀಯುವ ದನಿಯಂತೆ ಕೇಳಿಸುತ್ತಿತ್ತು.

ಗುರುವಾರ, ಏಪ್ರಿಲ್ 5, 2012

ಅರುಣ್ ಜೋಳದಕೂಡ್ಲಿಗಿ


ಹೊಸ ತಲೆಮಾರಿನ ಲೇಖಕರು: ಅರುಣ್ ಜೋಳದಕೂಡ್ಲಿಗಿ

-ಪ್ರೊ.ರಹಮತ್ ತರೀಕೆರೆ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ `ಬಯಲು ಸಾಹಿತ್ಯ ವೇದಿಕೆ' ಎಂಬ ಒಂದು ಸಂಘಟನೆಯಿತ್ತು. ಅದೊಂದು ತರಹ ನಮ್ಮ ಹಿರಿಯ ತಲೆಮಾರಿನ ಲೇಖಕರು ಕಟ್ಟಿಕೊಂಡಿದ್ದ `ಗೆಳೆಯರ ಗುಂಪ'ನ್ನು ಹೋಲುವಂತಹುದು. ಅಲ್ಲಿ ಕೆಲವು ಯುವ ಲೇಖಕರು ವರ್ಷಕ್ಕೊಂದಾವರ್ತಿ ಕಲೆತು, ಯಾರಾದರೊಬ್ಬ ಹಿರಿಯ ಲೇಖಕರನ್ನು ಮುಂದಿಟ್ಟುಕೊಂಡು, ತಮ್ಮ ಬರೆಹದ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಸಾಹಿತ್ಯ ವೇದಿಕೆಯಿಂದ ಅನೇಕ ಜೀವಪರ ಲೇಖಕರು ಹೊಮ್ಮಿದರು. ಅವರು ವೇದಿಕೆಯಿಂದಲೇ ಹೊರಹೊಮ್ಮಿದವರು ಎಂಬುದಕ್ಕಿಂತ ವೇದಿಕೆಯಲ್ಲಿ ಅವರು ತಮ್ಮನ್ನು ತಾವು ಮಸೆದುಕೊಂಡು ಸ್ಪಷ್ಟತೆ ಪಡೆದುಕೊಂಡರು ಎನ್ನುವುದೇ ಹೆಚ್ಚು ಸರಿ.

ಆದರೆ ಬಯಲು ಸಾಹಿತ್ಯ ವೇದಿಕೆಯಿಂದ ಎಷ್ಟು ಲೇಖಕರು ರೂಪುಗೊಂಡರು ಎಂಬುದಕ್ಕಿಂತ ಅಲ್ಲಿ ಸೇರುತ್ತಿದ್ದ ಎಷ್ಟು ಲೇಖಕ ಲೇಖಕಿಯರು ಪರಸ್ಪರ ವರಿಸಿ ಬಾಳಸಂಗಾತಿಗಳಾದರು ಎಂಬ ಬಗ್ಗೆ ಅದರ ವಿರೋಧಿಗಳು ಲೆಕ್ಕ ಇಟ್ಟಿರುವುದುಂಟು. ವೇದಿಕೆಯ ಗುಪ್ತ ಅಜೆಂಡಾವೇ ಲಗ್ನದ್ದಾಗಿದ್ದು, ಸೂಕ್ತ ಸಂಗಾತಿಗಳು ಸಿಕ್ಕ ಬಳಿಕ ಬಯಲು ಸಾಹಿತ್ಯ ವೇದಿಕೆ ಬಯಲಾಯಿತು ಎಂದು ಅವರು ಆಪಾದನೆ ಮಾಡುತ್ತಾರೆ. ಹತ್ತು ವರ್ಷಗಳ ಬಳಿಕ ನೋಡುವಾಗ, ಬೆಂಗಳೂರಿನಾಚೆ ಸ್ಥಳೀಯ ಮಟ್ಟದಲ್ಲಿದ್ದ ಇಂಥ ಲೇಖಕರ ಗುಂಪುಗಳು, ಬರೆಹದ ಗುಟ್ಟುಗಳನ್ನೊ ಸಮಸ್ಯೆಗಳನ್ನೊ ಹಂಚಿಕೊಂಡಿದ್ದಕ್ಕಿಂತ, ನಮ್ಮ ಸುತ್ತಣ ಸಮಾಜದ ಬಗ್ಗೆ ವಿಮರ್ಶಾತ್ಮಕವಾದ ಜಾತ್ಯತೀತವಾದ ಧೋರಣೆಯನ್ನು ರೂಪಿಸಿಕೊಂಡವು ಎಂಬುದೇ ನನಗೆ ಮುಖ್ಯವಾಗಿ ಕಾಣುತ್ತದೆ. ಅರುಣ್ ಆ ವೇದಿಕೆಯಲ್ಲಿ ಸಕ್ರಿಯವಾಗಿದ್ದ ಲೇಖಕರಲ್ಲಿ ಒಬ್ಬರು.

ಯುವ ಲೇಖಕಿಯರ ವಿಳಾಸ ಮತ್ತು ಸೆಲ್ ನಂಬರ್ ಬೇಕಾದರೆ ಅರುಣ್ ಗೆ ಕೇಳಬೇಕು ಎಂಬ ಖ್ಯಾತಿಯನ್ನು ಗೆಳೆಯರಲ್ಲಿ ಗಳಿಸಿರುವ ಅರುಣ್, ಕುಂವೀಯವರ ಕೊಟ್ಟೂರು ಸೀಮೆಯವರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪುಟ್ಟಹಳ್ಳಿ ಜೋಳದಕೂಡ್ಲಿಗಿಯವರು. ತಂದೆ ಸಣ್ಣರೈತ. ತಾಯಿ ಅಂಗನವಾಡಿಯ ಕಾರ್ಯಕರ್ತರು. ಈ ಕಾರ್ಯಕರ್ತೆಯರ ಕಷ್ಟಗಳನ್ನು ಪ್ರಜಾವಾಣಿಯ ವಾಚಕರ ವಾಣಿಗೆ ಬರೆಯುವ ಮೂಲಕವೇ ಬರೆಹದ ಕಲೆ ಕಲಿತುಕೊಂಡೆ ಮೂಲತಃ ಕವಿಯಾಗಿರುವ ಅರುಣ್, ಕೆಲವು ಅತ್ಯುತ್ತಮ ಕವಿತೆಗಳನ್ನು ಬರೆದಿರುವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂಎ ಪದವಿ ಪಡೆದಿದ್ದು, ಕರ್ನಾಟಕದಲ್ಲಿ ಈತನಕ ನಡೆದಿರುವ ಜಾನಪದ ಅಧ್ಯಯನಗಳನ್ನು ತಾತ್ವಿಕವಾಗಿ ವಿಶ್ಲೇಷಣೆ ಮಾಡುವಂತಹ ಪಿಎಚ್.ಡಿ., ಸಂಶೋಧನೆಯನ್ನು ಮುಗಿಸಿರುವರು. ಸದ್ಯ ಮೈಸೂರಿನ ಸಿಐಐಎಲ್ನಲ್ಲಿ ಭಾಷೆ ಕುರಿತ ಒಂದು ಯೋಜನೆಯಲ್ಲಿ ಸಹಾಯಕರಾಗಿ ಕೆಲಸದಲ್ಲಿರುವರು. ಈತನಕ ಅರುಣ್ ಎರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಒಂದು- `ನೆರಳು ಮಾತನಾಡುವ ಹೊತ್ತು' (2004) ಎಂಬ ಕವನ ಸಂಕಲನ. ಇನ್ನೊಂದು- `ಸೊಂಡೂರು ಭೂಹೋರಾಟ' (2008) ಎಂಬ ಸಂಶೋಧನ ಕೃತಿ. ಅನೇಕ ಪತ್ರಿಕಾ ಬರೆಹಗಳನ್ನೂ ಸಣ್ಣಕತೆಗಳನ್ನೂ ಬಿಡಿಬಿಡಿಯಾಗಿ ಪ್ರಕಟಿಸಿರುವ ಅರುಣ್, ಅವಕ್ಕೆ ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ತಮ್ಮ ಕವಿತೆಗಳಿಗೆ ಪ್ರಜಾವಾಣಿ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿಯನ್ನೂ ದೊರಕಿಸಿಕೊಂಡಿದ್ದಾರೆ.

ಜೀವಂತಿಕೆಯಿಂದ ಪುಟಿಯುವ ಅರುಣ್, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬರೆಯುತ್ತ ಲೇಖಕರಾಗಿ ರೂಪುಗೊಂಡವರು. ನಮ್ಮ ಗ್ರಾಮಬದುಕಿನಲ್ಲಿರುವ ಬಾಳಿನ ಹೋರಾಟವನ್ನೂ ಮಾನವ ಪ್ರೀತಿಯನ್ನೂ ಸಣ್ಣತನ ಮತ್ತು ಕೊಳಕನ್ನೂ ಬರೆಹದಲ್ಲಿ ಮಿಡಿಸಿದವರು. ಅವರ ಬರೆಹದಲ್ಲಿ ಪ್ರೀತಿಗಾಗಿ ಹಾತೊರೆಯುವ ಜೀವವೊಂದರ ತುಡಿತಗಳಿವೆ. ಅದರಲ್ಲೂ ಅವರ ಪ್ರೇಮಪದ್ಯಗಳು ಬಹಳ ತೀವ್ರವಾಗಿವೆ. ಹೀಗೆ ಏಕಕಾಲಕ್ಕೆ ಆರ್ದ್ರವಾದ ಪ್ರೇಮಪ್ರೀತಿಯನ್ನೂ ಸಾಮಾಜಿಕ ರಾಜಕೀಯ ವಿದ್ಯಮಾನಗಳ ಬಗ್ಗೆ ನಿಷ್ಠುರವಾದ ನಿಲುವನ್ನೂ ಒಳಗೊಂಡಿರುವುದು ಹೊಸತಲೆಮಾರಿನ ಬಹುತೇಕ ಲೇಖಕರ ಗುಣವಾಗಿದೆ. ಇವರ ಜತೆಗೆ ಹೊರಜಗತ್ತಿನ ಬಗ್ಗೆ ಕಾಳಜಿಯಿಲ್ಲದ, ನಿರಾಳವಾದ ಸ್ಥಿತಿಯಲ್ಲಿ ಒಂದು ಅಂತರ್ಮುಖಿ ಜಗತ್ತನ್ನು ಕಟ್ಟಿಕೊಳ್ಳುವ ಲೇಖಕರೂ ಇದ್ದಾರೆ. ಅವರಲ್ಲಿ `ರಾಜಕೀಯ' ಎನ್ನಲಾಗುವ ವಿದ್ಯಮಾನಗಳ ಬಗ್ಗೆ ಒಂದು ಬಗೆಯ ಕೋಮಲ ಹಿಂಜರಿಕೆ, ನಿರ್ಲಿಪ್ತತೆ ಅಥವಾ ಅತಿ ಹುಷಾರುತನ ಇವೆ. ಲಹರಿ ರೂಪದಲ್ಲಿ ಮನದೊಳಗಿನ ಹೂಹಗುರ ಭಾವಗಳಿಗೆ ರೂಪಕೊಡುವ ಕಲಾತ್ಮಕತೆ ಅವರಿಗೆ ಪ್ರಿಯ. ಬರೆಹದ ಈ ಮನೋಧರ್ಮವನ್ನು ಕೆಲವು ಪತ್ರಿಕೆಗಳು ಅಥವಾ ಲೇಖಕರು ಮುಂದೆ ನಿಂತು ಓರಿಯಂಟ್ ಮಾಡಿರುವುದುಂಟು. ಸಾಮಾಜಿಕವಾಗಿ ಎಲ್ಲವನ್ನೂ ಎದುರಾಳಿ ಪರಿಕಲ್ಪನೆಯಲ್ಲೇ ಮಣಿಸಿ ನೋಡುವ ಆಕ್ರೋಶದಲ್ಲಿ ಹೂಂಕರಿಸುವ ಮನೋಧರ್ಮದಂತೆ, ಈ ಬಗೆಯ ವರ್ತಮಾನದ ದರ್ದಿಲ್ಲದ ನಿರಾಳತೆಯ ಮನೋಧರ್ಮ ಕೂಡ ಸಾಹಿತ್ಯದಲ್ಲಿ ಅನೇಕ ಮಿತಿಗಳಿಗೆ ಕಾರಣವಾಗಿದೆ.


ಆದರೆ ದಿಗ್ಭ್ರಮೆ ಮೂಡಿಸುವಂತಹ ವಿದ್ಯಮಾನಗಳು ಜರುಗುವ, ದಾರಿದ್ರ್ಯ ಮತ್ತು ಗುಡ್ಡೆಬಿದ್ದಿರುವ ಸಂಪತ್ತು ಎಂಬ ಅತಿಗಳಿರುವ ಬಳ್ಳಾರಿ ಸೀಮೆಯಲ್ಲಿ, ಇಲ್ಲಿನ ಯಾವುದೇ ಸೂಕ್ಷ್ಮಮನಸ್ಸಿನ ಲೇಖಕರಲ್ಲಿ ಸಹಜವಾಗಿ ಇರುವಂತೆ, ಅರುಣ್ ಬರೆಹದಲ್ಲೂ ತಲ್ಲಣಗಳಿವೆ; ಇಲ್ಲಿನ ಗಣಿಗಾರಿಕೆ, ಜಾತಿ ಮತ್ತು ರೊಕ್ಕದ ರಾಜಕಾರಣವು ಸಾಮಾನ್ಯ ಎಂದು ನಾವು ಕರೆಯುವ ಜನರಲ್ಲೂ ನಿರ್ಮಿಸಿರುವ ಮನೋಧರ್ಮದ ಬಗ್ಗೆ ಸೋಜಿಗದ ಒಳನೋಟಗಳು ಅವರಲ್ಲಿವೆ. ಇದರ ಸುಳಿವು ಅವರ ಆರಂಭದ ಪತ್ರಿಕಾ ಬರೆಹಗಳಲ್ಲಿಯೇ ಪ್ರಕಟವಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರ ಕಷ್ಟದ ಮೇಲೆ ಅವರು ಬರೆದ ಪತ್ರಿಕಾ ಲೇಖನ, ಸರ್ಕಾರದ ಇಲಾಖೆ ಎಚ್ಚೆತ್ತುಕೊಂಡು ತನ್ನ ದೋಷವನ್ನು ತಿದ್ದಿಕೊಳ್ಳುವಂತೆ ಮಾಡಿತು. ಇದು ಬರೆಹದ ಸಣ್ಣಶಕ್ತಿಯನ್ನು ತನಗೆ ಮನವರಿಕೆ ಮಾಡಿತು ಎಂದು ಒಂದೆಡೆ ಅವರು ಹೇಳಿಕೊಂಡೂ ಇದ್ದಾರೆ. ಆದರೆ ಸಮಸ್ಯೆಯನ್ನು ಬಗೆಹರಿಸುವ ಸರಳ ಆಕ್ಟಿವಿಸಂನ ಆಚೆಹೋಗಿ, ಚಿಂತನೆ ನಡೆಸುವ ದಿಸೆಯಲ್ಲಿ ಅವರ ಬರೆಹಗಳು ಚಲಿಸಿವೆ. ಕೆಲವೊಮ್ಮೆ ಅವರ ಪತ್ರಿಕಾ ಬರೆಹಗಳಲ್ಲಿ ಛೇಡಿಸುವಿಕೆಯ ತಮಾಷೆಯ ಗುಣದಿಂದ, ಸ್ತ್ರೀಸ್ವಾತಂತ್ರ್ಯದ ಬಗ್ಗೆ ಲಘುವಾದ ರೀತಿಯ ಧೋರಣೆಯ ಬರೆಹಗಳೂ ಬಂದಿರುವುದಿದೆ. ಇದರಿಂದ ಸಹಲೇಖಕಿಯರು ಅವರಿಗೆ ವಾಗ್ದಂಡನೆ ವಿಧಿಸಿರುವುದೂ ಉಂಟು. ಮುಖ್ಯವೆಂದರೆ, ತಂತಮ್ಮ ಹಳ್ಳಿಗಳಿಂದ ನಗರದ ನಾಗರಿಕ ಲೋಕಕ್ಕೆ ವಿಸ್ಮಯವೆನಿಸುವ ಮತ್ತು ರೋಚಕತೆ ಉಂಟುಮಾಡುವ ವಿಶಿಷ್ಟ ಆಚರಣೆಗಳ ಬಗ್ಗೆ ಬರೆವ ಆಮಿಷವನ್ನು ಅರುಣ್ ಬಿಟ್ಟುಕೊಟ್ಟಿರುವುದು. ಬದಲಿಗೆ ಅಲ್ಲಿನ ಜೀವನದ ದುಗುಡ ಮತ್ತು ಚೈನತ್ಯಶೀಲತೆಯನ್ನು ತೋರುವ ವಿಶ್ಲೇಷಕ ಬರೆಹಗಳನ್ನು ಮಾಡುತ್ತಿರುವುದು.

ನಮ್ಮ ಬಹುತೇಕ ಗ್ರಾಮೀಣ ಮೂಲದ ಲೇಖಕರಲ್ಲಿ ಇರುವಂತೆ, ಅಸಮಾನತೆ ಬಗ್ಗೆ ವ್ಯಗ್ರತೆ, ಕೋಮುವಾದದ ಬಗ್ಗೆ ಖಚಿತವಾದ ನಿಲುವು, ದುಡಿವ ಸಮುದಾಯದ ಸೆಣಸುಬಾಳಿನ ಬಗ್ಗೆ ಪ್ರೀತಿ, ಎಲ್ಲವನ್ನೂ ಅರುಣ್ ಬರೆಹ ಒಳಗೊಂಡಿದೆ. ನಾಡಿನ ಚಳುವಳಿ ಮತ್ತು ಹೋರಾಟಗಳ ಬಗ್ಗೆ ಆಳದಲ್ಲಿ ಸೆಳೆತವುಳ್ಳ ಅರುಣ್ ಕೊಂಚ ಭಾವುಕ ಲೇಖಕ. ಅದು ಕೆಲವೊಮ್ಮೆ ತೊಡಕೂ ಆಗಿದೆ. ಬದುಕಿನಲ್ಲಿರುವ ಜೀವಂತಿಕೆ ಹಾಸ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಇವರ ಲವಲವಿಕೆ ಪ್ರಕಟವಾಗಿರುವ ಬಿಡಿ ಕತೆಗಳಲ್ಲಿ ಕಾಣುತ್ತದೆ. ಇಲ್ಲಿ ತುಂಬಿರುವ ವಿನೋದ ಪ್ರಜ್ಞೆ ಆಪ್ತವಾಗಿದೆ. ಆದರೆ ಇದು ದೈತ್ಯಲೇಖಕ ಕುಂವಿಯವರ ಪ್ರಭಾವದಿಂದ ತಪ್ಪಿಸಿಕೊಂಡು ತಮ್ಮದೇ ಆದ ನುಡಿಗಟ್ಟನ್ನು ಕಂಡುಕೊಳ್ಳುವುದರ ಸವಾಲಿರುವುದನ್ನು ಸಹ ಈ ಲೇಖಕನಿಗೆ ಸೂಚಿಸುತ್ತದೆ. ಅತಿ ಗಂಭೀರತೆಯು ಬರೆಹಕ್ಕೆ ಸಹಜವಾಗಿ ಇರಬಹುದಾದ ವಿನೋದ ಪ್ರಜ್ಞೆಯನ್ನು ಕೊಂದು, ಜೋಭದ್ರ ಮುಖವನ್ನು ಜೋಡಿಸುತ್ತದೆ. ಬರಿಯ ವಿನೋದವು ವರ್ತಮಾನದಲ್ಲಿ ಏನೂ ಸಮಸ್ಯೆಯಿಲ್ಲ ಎಂಬಂತೆ ಕೇವಲ ಸಂಭ್ರಮದ ಬೇಹೊಣೆ ಮನೋಧರ್ಮವನ್ನು ಒಳಗೊಳ್ಳುತ್ತದೆ. ಈ ಎರಡು ದಡಗಳಲ್ಲಿ ನಮ್ಮ ಕೆಲವು ಹೊಸಬರೆಹಗಾರರು ತುಯ್ಯಲಾಡುವುದುಂಟು.

ಅರುಣ್ ಅವರಲ್ಲಿ ಮೊದಲಿದ್ದ ಭಾವುಕ ಪ್ರಧಾನತೆ ಕಡಿಮೆಗೊಂಡು ಚಿಂತನಶೀಲತೆ ಒದಗುತ್ತಿದೆ. ಇದಕ್ಕೆ ಕಾರಣ, ಕ್ಷೇತ್ರಕಾರ್ಯ ಮಾಡಿ ಜನರ ಜತೆ ಮಾತಾಡಿ ಬರೆದ `ಸೊಂಡೂರು ಭೂಹೋರಾಟ' ಎಂಬ ಕೃತಿಯೊ ತಿಳಿಯದು. ಕವಿತೆ ಅವರ ನಿಜವಾದ ಪ್ರಕಾರವಾಗಿದ್ದರೂ, ಯಾವ ಪ್ರಕಾರದಲ್ಲಿ ತಮ್ಮ ಸೃಜನಶೀಲತೆಯನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬ ಒಂದು ತೆರೆದ ಸ್ಥಿತಿಯಲ್ಲಿ ಅವರಿದ್ದಾರೆ. ಜೀವಪ್ರೀತಿಯೂ ವಿಶಿಷ್ಟ ಅನುಭವ ಲೋಕವೂ ಹದುಳದಾಯಕ ಮನಸ್ಸೂ ಇರುವ ಅರುಣ್ ಅವರ ಸಾಮಾಜಿಕ ಕಳಕಳಿ, ಅವರು ಬರೆಯುತ್ತಿರುವ ವಾಚಕರವಾಣಿ ಪತ್ರಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಈಗ ಪ್ರಕಟವಾಗುತ್ತಿರುವ `ಅವ್ವನ ಅಂಗನವಾಡಿ' ಎಂಬ ಸಂಕಲನವು ಅರುಣ್ ಕಾವ್ಯ ಪಡೆದಿರುವ ಹೊಸ ಮಜಲನ್ನು ತೋರಲಿದೆ.

ಬುಧವಾರ, ಮಾರ್ಚ್ 28, 2012

ವೆಂಕಟೇಶ ಉಪ್ಪಾರ

ಟಿಪ್ಪಣಿ: ಅರುಣ್ ಜೋಳದಕೂಡ್ಲಿಗಿ





ವೆಂಕಟೇಶ ಉಪ್ಪಾರ ಬಳ್ಳಾರಿ ಭಾಗದ ಸತ್ವಯುಕ ಕಥೆಗಾರ, ಜನಪದ ಹಾಡುಗಾರ, ಹಾಗು ಆಯುರ್ವೇದ ಔಷಧಿಗಳ ನಿಪುಣರಾದ ದಿವಂಗತ ಹನುಮಂತಪ್ಪ ಮತ್ತು ಶ್ರೀಮತಿ ಮಾರೆಮ್ಮನವರು.(ದಿವಂಗತ ) ಅವರ ಮಗನಾಗಿ ೦೧-೦೧- ೧೯೭೧ ರಲ್ಲಿ ಜನನ. ಹುಟ್ಟಿದ ಸ್ಥಳ ಈಗಿನ ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ವಡಿಗೆರ ಗ್ರಾಮದಲ್ಲಿ. ಪತ್ರಿಕೋದ್ಯಮವನ್ನು.( ಮೈಸೂರ ವಿಶ್ವವಿದ್ಯಾನಿಲಯ ) ಓದಿದ ಇವರು ರಾಯಚೂರು, ಯರಮರುಸ್ನಲ್ಲಿ ಪ್ರಾಥಮಿಕ ಶಿಕ್ಷಣ, ರಾಯಚೂರಿನ ಸರಕಾರಿ ಕಾಲೇಜು / ಎಲ್ .ವಿ.ಡಿ. ಕಾಲೇಜಿನಲ್ಲಿ ಓದು.

ಉಪ್ಪಾರರ ಮೊದಲ ಕಥೆ `ವಸಂತನ ಸುಮಾ' ರಾಯಚುರವಾಣಿಯಲ್ಲಿ (೧೯೮೮) ಪ್ರಕಟವಾಗಿತ್ತು. ಆ ಮೊದಲ ಕಥೆಯಲ್ಲೇ ವೆಂಕಟೇಶ್ ಕಥೆಗಾರರಾಗುವ ಉಮೇದನ್ನು ತೋರಿದ್ದರು. ಅವರ ಮೊದಲ ಕಥಾ ಸಂಕಲನ `ಹಗರಿ ದಂಡೆ' (೨೦೦೪ ರಲ್ಲಿ ಸುಭಾಷ್ ಭರಣಿ ವೇಧಿಕೆಯ ಸಾಂಸ್ಕೃತಿಕ ಪ್ರಕಾಶನ ಹೊರತಂದಿದೆ) ಹಲವು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗಲೂ ಉಪ್ಪಾರ್ ಅವರನ್ನು ನಾವು ಹಗರಿದಂಡೆ ವೆಂಕಟೇಶ್ ಎಂತಲೇ ಕರೆಯುತ್ತೇವೆ.

ಈ ಕಥನದಲ್ಲಿ ಬಳ್ಳಾರಿಯ ಭಾಷಾ ಸೊಗಡು.. ಜನಜೀವನದ ಚಿತ್ರಣ.. ಗ್ರಾಮೀಣ ಬದುಕು ಛಿದ್ರವಾಗುತ್ತಿರುವುದನ್ನು ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. ಎರಡನೇ ಕಥಾಸಂಕಲನ ಅವಶೇಷ: ೨೦೧೦ ರಲ್ಲಿ ಮೈಸೂರಿನ ಕಿಡಕಿ ಪ್ರಕಾಶನ ಹೊರತಂದಿದೆ.ಇಲ್ಲಿನ ಕಥೆಗಳಲ್ಲಿ ಉಪ್ಪಾರರ ಮತ್ತೊಂದು ಜಿಗಿತ ಕಾಣುತ್ತದೆ. ಇಲ್ಲಿ ಮೊದಲ ಕಥನ ಸಂಕಲನದಲ್ಲಿ ಕಾಣುತ್ತಿದ್ದ ವಾಚ್ಯವನ್ನು ಮೀರಲು ಪ್ರಯತ್ನಿಸಿದ್ದಾರೆ. ಈಗ ಉಪ್ಪಾರರು `ನಾಧವಿಲ್ಲದ ನದಿ' ಎನ್ನುವ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಬಳ್ಳಾರಿಯ ಇತ್ತೀಚಿನ ವಿದ್ಯಮಾನಗಳ ಕುರಿತಾಗಿದೆ ಎನ್ನುತ್ತಾರೆ. ಮೌನ ಮಲ್ಲಿಕಾ ಭಾವಗೀತೆಗಳ / ಘಜಲ್ ಗಳ ಸಂಕಲನ ಅಚ್ಚಿನಲ್ಲಿದೆ. ಇದಿಷ್ಟು ವೆಂಕಟೇಶ್ ಉಪ್ಪಾರರ ಸಾಹಿತ್ಯಿಕ ಪಯಣ.



ತಮ್ಮ ಮನೆಯಲ್ಲಿ ಸಾಹಿತ್ಯದ ಹಾಗು ಕನ್ನಡ ನಾಡು ನುಡಿಯ ಅಭಿಮಾನ ಮೂಡಿಸುವುದಕ್ಕೆ ತನ್ನ ಮಡದಿ ಶ್ರೀಮತಿ ಮಲ್ಲಿಕಾ ಇವರೇ ಕಾರಣ ಎನ್ನುವ ವೆಂಕಟೇಶ ಉಪ್ಪಾರ, ಇವರ ಇಬ್ಬರು ಮಕ್ಕಳು ಇಂದು ರಾಜ್ಯ ಮಟ್ಟದಲ್ಲಿ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತಗಾರರಾಗಿ ಹೆಸರು ಮಾಡಿದ್ದಾರೆ. ಮಗ ಹರ್ಷ ಉಪ್ಪಾರ, ಮಗಳು ಅಮೃತ ವರ್ಷಿಣಿ , ಈಗಾಗಲೇ ಕನ್ನಡ ಈ ಟೀವಿ ವಾಹಿನಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯಿಂದ ಪ್ರತಿನಿದಿಸಿರುವ ಪ್ರತಿಬೆಗಳು. ಹಾಗು ಕನ್ನಡದ ಅಭಿಮಾನಕ್ಕಾಗಿ ಅಂಗ್ಲ ಮಾಧ್ಯಮ ವನ್ನು ತೊರೆದು ಕನ್ನಡದ ಸರಕಾರಿ ಶಾಲೆಗಳಲ್ಲಿ ಓದು ಮುಂದುವರಿಕೊಂಡು ಬಂದು ಇತರರಿಗೆ ಮಾದರಿಯದಂತವರು.



ಉಪ್ಪಾರರು ಮೂಲತಃ ಮೌನಜೀವಿ. ಸಾವಧಾನದ ವ್ಯಕ್ತಿತ್ವ. ಸ್ನೇಹಜೀವಿ. ಇವರ ಕಥನದ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಿದೆ. ಉಪ್ಪಾರರು ಮತ್ತಷ್ಟು ಗಟ್ಟಿಯಾಗಿ ಬರಹಕ್ಕೆ ತೊಡಗಿಕೊಳ್ಳಬೇಕಿದೆ. ನಾವಂತೂ ಅವರ ನಾಧವಿಲ್ಲದ ನದಿ ಕಾದಂಬರಿಯನ್ನು ನಿರೀಕ್ಷೆಯಿಂದ ಕಾಯುತ್ತೇವೆ. ಈ ಕಾದಂಬರಿ ಉಪ್ಪಾರ್ ಅವರ ಕಥನದ ಮಾದರಿಯ ಮತ್ತೊಂದು ಜಿಗಿತದಂತೆ ಬರಲಿ ಎನ್ನುವುದು ನಮ್ಮ ಆಶಯ.


ಸಂಪರ್ಕ:
-ವೆಂಕಟೇಶ ಉಪ್ಪಾರ
upparavenkatesh55@gmail.co
ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ
ಪ್ರಥಮ ದರ್ಜೆ ಸಹಾಯಕ
ಬಳ್ಳಾರಿ
ಮೊಬೈಲ್: 9844947944

ಬುಧವಾರ, ಮಾರ್ಚ್ 14, 2012

ಭೀಮಣ್ಣ ಗಜಾಪುರ

ಟಿಪ್ಪಣಿ: ಅರುಣ್

ಬಾರಿಕರ ಭೀಮಪ್ಪ ಭೀಮಣ್ಣ ಗಜಾಪುರ ಆದ ಪಯಣದ ಕಥೆಯೇ ಸೊಗಸಾಗಿದೆ.

ಬಾರಿಕರ ಭರಮಪ್ಪ, ಬಾರಿಕರ ಗೌರಮ್ಮರ ಮಗನಾದ ಭೀಮಣ್ಣ ಹಳ್ಳಿ ಹುಡುಗರ ಸಾಮಾನ್ಯ ಬವಣೆಯನ್ನು ಅನುಭವಿಸಿಯೇ ಬಂದವರು. ಕಡು ಬಡತನ, ಅನಕ್ಷರಸ್ತ ಕುಟುಂಬದಲ್ಲಿ ೧೯೭೪ ರಲ್ಲಿ ಜನಿಸಿದ ಭೀಮಣ್ಣ ಗಜಾಪುರ ೦೧ ರಿಂದ ೦೪ ನೇ ತರಗತಿಯವರೆಗೆ ಸ.ಕಿ.ಪ್ರಾ. ಶಾಲೆ ಗಜಾಪುರದಲ್ಲಿ ಕಲಿತು ನಂತರ ೦೫ ನೇ ತರಗತಿಯನ್ನು ಕಂದಗಲ್ಲು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಪೂರೈಸಿ ನಂತರ ೦೬ ರಿಂದ ೦೭ ನೇ ತರಗತಿಯನ್ನು ಕೊಟ್ಟೂರಿನ ಶ್ರೀ ನಾಗರಾಜ ಸ.ಹಿ.ಪ್ರಾ.ಶಾಲೆಯಲ್ಲಿ ಓದಿ ನಂತರ ಹೈಸ್ಕೂಲ್ ಶಿಕ್ಷಣವನ್ನು ಕೊಟ್ಟೂರಿನ ಶ್ರೀ ಕೋಲಶಾಂತೇಶ್ವರ ಪ್ರೌಡಶಾಲೆಯಲ್ಲಿ ಪೂರೈಸಿದರು. ಕಾಲೇಜು ಶಿಕ್ಷಣವನ್ನು ಪಿ.ಯು.ಸಿ ಯಿಂದ ಬಿ.ಎ ವರೆಗೆ ಕೊಟ್ಟೂರಿನ ಶ್ರೀ ಗುರುಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ವ್ಯಾಸಾಂಗ ಮಾಡಿದ್ದು, ಇದೇ ಸಮಯದಲ್ಲಿ ಎನ್.ಸಿ.ಸಿ ಬಿ ಸರ್ಟಿಫಿಕೇಟ್ ಪಾಸ್ ಮಾಡಿ ಎನ್.ಎಸ್.ಎಸ್ ತರಬೇತಿ ಸಹ ಪಡೆದಿರುತ್ತಾರೆ. ಶಾಲಾ ದಾಖಲಾತಿಗಳಲ್ಲಿ ಬಾರಿಕರ ಭೀಮಪ್ಪ ಎಂದು ಹೆಸರು ಇದ್ದರೂ ಇವರು ಭೀಮಣ್ಣ ಗಜಾಪುರ ಎಂದು ಬರೆಯುತ್ತಾ ಬರೆಯುತ್ತಾ ಬಾರಿಕರ ಭೀಮಪ್ಪ ಭೀಮಣ್ಣ ಗಜಾಪುರವೇ ಆದರು.

ಎಂ ಎ ಪತ್ರಿಕೋದ್ಯಮ ಪದವಿಯನ್ನು ಹಂಪಿ ವಿಶ್ವವಿದ್ಯಾನಿಲಯದಿಂದ ಪಡೆದಿದ್ದು, ೧೯೯೫ ರಿಂದ ೨೦೧೦ ರವರೆಗೂ ನಿರಂತರವಾಗಿ ಫ್ರೀಲಾನ್ಸ್ ಪರ್ತಕರ್ತನಾಗಿ ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಸಂಜೆವಾಣಿ, ಸುಧಾ, ಕರ್ಮವೀರ, ತುಷಾರ, ಸಖಿ ಮುಂತಾದ ಪತ್ರಿಕೆಗಳು ಮತ್ತು ಮ್ಯಾಗಜಿನ್‌ಗಳಿಗೆ ೨೦೦ ಕ್ಕೂ ಹೆಚ್ಚು ಚಿತ್ರ-ಲೇಖನಗಳನ್ನು ದಣಿವಿಲ್ಲದೆ ಬರೆದಿದ್ದಾರೆ. ಅಲ್ಲದೆ ವಿಜಯ ಕರ್ನಾಟಕ ದಿನ ಪತ್ರಿಕೆಯ ಕೂಡ್ಲಿಗಿ ತಾಲ್ಲೂಕು ಪರ್ತಕರ್ತರಾಗಿ ೨೦೦೨ ರಿಂದ ೨೦೦೪ ರವರೆಗೆ ಒಟ್ಟು ೦೨ ವರ್ಷ ಸೇವೆ ಸಲ್ಲಿಸಿದ್ದು, ನಂತರ ಜೂನ್ ೨೦೦೪ ರಿಂದ ಕನ್ನಡ ಪ್ರಭ ಪತ್ರಿಕೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಗುರು ಕೊಟ್ಟೂರೇಶ್ವರ, ಉಜ್ಜಯಿನಿ ಪೀಠದ ಶ್ರೀ ಮರಳುಸಿದ್ದೇಶ್ವರ ಸ್ವಾಮಿ, ಕೂಲಹಳ್ಳಿ ಗೋಣಿ ಬಸವೇಶ್ವರ , ಗಾಣಗಟ್ಟ ಮಾಯಾಮ್ಮ, ಮಡ್ರಹಳ್ಳಿ ಚೌಡಮ್ಮ, ಗುಡಗೇರಿ ಧ್ಯಾಮವ್ವ ಸೇರಿದಂತೆ ಹತ್ತಾರು ಧಾರ್ಮಿಕ ಸ್ಥಳಗಳ ಚರಿತ್ರೆಗಳ ಆಡಿಯೋ ಮತ್ತು ವಿಡಿಯೋ ಕ್ಯಾಸೇಟ್‌ಗಳಿಗೆ ೨೦೦ ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ರಚಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಕೊಟ್ಟೂರು ದೊರೆ ಕ್ಯಾಸೇಟ್‌ನಲ್ಲಿ ಭೀಮಣ್ಣ ಗಜಾಪುರ ರಚಿಸಿದ ಸಾಹಿತ್ಯಕ್ಕೆ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಹಾಡಿರುವುದು ವಿಶೇಷ. ಕೂಡ್ಲಿಗಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿ ಭೀಮಣ್ಣ ಗಜಾಪುರ ಎಂದರೆ ಯಾರಾದರೂ ಗುರುತಿಸುವ ಹಂತಕ್ಕೆ ಭೀಮಣ್ಣ ತಲುಪಿದ್ದಾರೆ.

ಭೀಮಣ್ಣ ಬಿಸಿಲ ಬಸಿರು ಎನ್ನುವ ಕವನ ಸಂಕಲನ ಪ್ರಕಟಸಿದ್ದರೂ ಅವರು ಕವಿಯಾಗಿ ಯಶ ಕಂಡಿಲ್ಲ. ಕಾರಣ ಅವರ ಪತ್ರಿಕೋದ್ಯಮದ ಬರಹದ ಪ್ರಭಾವವೂ ಇರಬಹುದು. ಅವರ ಈಚಿನ ನೋವಿನ ಬಣ್ಣಗಳು ಕೃತಿಯಲ್ಲಿ ಗ್ರಾಮೀಣ ಪತ್ರಿಕೋದ್ಯಮದ ಭಿನ್ನ ಎಳೆಗಳನ್ನು ಕಾಣಬಹುದು. ಇಲ್ಲಿ ಒಬ್ಬ ಸಂವೇದನಾಶೀಲ ಪತ್ರಕರ್ತನ ಹುಡುಕಾಟದ ಭಿನ್ನ ಮಾದರಿಗಳು ಕಾಣುತ್ತವೆ. ಭೀಮಣ್ಣ ಅಲ್ಪತೃಪ್ತರು. ಇಲ್ಲಿನ ಬರಹಳಗ ಬೆನ್ನು ಹತ್ತಿ ಮತ್ತಷ್ಟು ಮಾಹಿತಿ ಕಲೆಹಾಕಿದರೆ, ಇವು ಕೇವಲ ವರದಿ ಮಾತ್ರವಲ್ಲದೆ, ಸಂಶೋಧನ ಲೇಖನಗಳೂ ಆಗುವ ಸಾದ್ಯತೆ ಇದೆ. ಈ ಬಗ್ಗೆ ಭೀಮಣ್ಣ ಅವರು ಆಲೋಚಿಸುವುದು ಒಳ್ಳೆಯದು. ಮತ್ತೊಂದು ಮಿತಿಯೆಂದರೆ ಅವರ ಬಳಸುವ ಭಾಷೆಯೂ ತೀರಾ ಹೊಸತಾಗಿರದೆ ಪುನರಾವರ್ತನೆ ಎದ್ದು ಕಾಣುತ್ತದೆ. ಬಹುಶಃ ಪತ್ರಿಕೆಗೆ ಬರೆಹ ಬರೆದ ಕಾರಣಕ್ಕೂ ಈ ಮಿತಿ ಇರಲಿಕ್ಕೆ ಸಾದ್ಯವಿದೆ. ಇನ್ನಷ್ಟು ಓದು ಸಾದ್ಯವಾದರೆ ಭೀಮಣ್ಣ ಈ ಮಿತಿಯನ್ನು ಮೀರಲು ಸಾದ್ಯವಿದೆ.

ಇಂತಹ ಮಿತಿಗಳ ಆಚೆಯೂ ಬಾರಿಕರ ಭೀಮಪ್ಪ ಬೀಮಣ್ಣ ಗಜಾಪುರ ಆಗಿ ಇನ್ನು ಬರೆಯುವುದು ಬಹಳ ಇದೆ. ಅವರ ಬರಹ ಮತ್ತಷ್ಟು ಸೂಕ್ಷ್ಮತೆಗೆ ತೆರೆದುಕೊಳ್ಳಲಿ.



ವಿಳಾಸ
: ಗಜಾಪುರ [ಪೊ] ಕೂಡ್ಲಿಗಿ [ತಾ]
ಬಳ್ಳಾರಿ ಜಿಲ್ಲೆ ಪಿನ್ ನಂ :-೫೮೩೧೩೪
ಪೋ:೯೪೪೮೭೧೭೫೧೮

ಭೀಮಣ್ಣ ಅವರ ಬರಹದ ಒಂದು ಮಾದರಿ:

ಹರಿದು ಬಂದಳು ಗಂಗೆ ಗೌರೀಪುರಕ್ಕೆ

ಆ ಹಳ್ಳಿ ಹಾಗೇ ಇತ್ತು. ನಮ್ಮ ದೇಶದ ಕುಗ್ರಾಮವೊಂದನ್ನು ಪ್ರತಿನಿದಿsಸುವ ಹಾಗೆ. ರಸ್ತೆ ಸರಿ ಇಲ್ಲ, ಬಸ್ಸೂ ಇಲ್ಲ, ಆಸ್ಪತ್ರೆ ದೂರದ ಮಾತು. ದೂರವಾಣಿಯ ಸೌಲಭ್ಯವಿಲ್ಲ. ಅವೆಲ್ಲ ಬಿಡಿ, ಕನಿಷ್ಟ ಕುಡಿಯುವ ನೀರಿನ ಸೌಲಭ್ಯ? ಅದೂ ಇಲ್ಲ ಎಂದರೆ ಆ ಊರಿನ ಜನರ ಬದುಕಿನ ಪರಿ ಅಲ್ಲಿ ಹೇಗಿದ್ದೀತು?

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿಗೆ ಸೇರಿದ ಗೌರೀಪುರದ ಚಿತ್ರಣವಿದು. ಈ ಹಳ್ಳಿಯ ಜನತೆಯ ನಿತ್ಯ ವ್ಯವಹಾರವೆಲ್ಲ ಬಳ್ಳಾರಿ ಜಿಲ್ಲೆಯ ಹತ್ತಿರದ ಕೊಟ್ಟೂರಿನಲ್ಲಿ. ಸುಮಾರು ನಾಲ್ಕು ವರ್ಷದಿಂದಲೂ ದೂರವಾಣಿಗೆ ಅರ್ಜಿ ಸಲ್ಲಿಸಿದ್ದರೂ ಗೌರೀಪುರ, ಬಳಿಗಾನೂರು, ಕೆಸರಹಳ್ಳಿ, ಬಸವನಾಳು ಗ್ರಾಮಗಳಿಗೆ ಇದುವರೆಗೂ ದೂರವಾಣಿ ಸೌಲಭ್ಯ ಇಲ್ಲ. ರಸ್ತೆ ಇದ್ದರೂ ಬಸ್ಸುಗಳ ಓಡಾಟ ಇಲ್ಲ. ಇಲ್ಲಿಯ ಐದಾರು ಹಳ್ಳಿಗಳ ಜನತೆಗೆ ಆಸ್ಪತ್ರೆಯಂತೂ ಕನಸಿನ ಮಾತು. ಗ್ರಾಮದ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಇದು ಉಲ್ಬಣ ಗೊಳ್ಳುತ್ತಿದ್ದರೂ ಜನಪ್ರತಿನಿದಿsಗಳಿಗೆ ಲಕ್ಷ್ಯವೇ ಇಲ್ಲ.

ಮುಂದೇನು ಎಂದು ಗೌರೀಪುರದ ಜನ ಚಿಂತಿಸಿದರು. ಸರಿ ಹೀಗೊಂದು ಪ್ರಯತ್ನ ಮಾಡೇ ಬಿಡುವ ಎಂದು ಗೌರೀಪುರದ ಎ.ಪಿ.ಎಂ.ಸಿ. ಸದಸ್ಯ ಬಿ. ವಸಂತನಗೌಡರು ಊರ ಜನರನ್ನು ಸಂಘಟಿಸಿದರು. ಅವರ ನೇತೃತ್ವದಲ್ಲಿ, ಜನರ ಶಕ್ತ್ಯಾನುಸಾರ ಹಣ ಸಂಗ್ರಹಿಸಿದರು. ಅಂತೂ ಇಂತೂ ಮುವತ್ತು ಸಾವಿರ ರೂಪಾಯಿಗಳು ಸಂಗ್ರಹವಾದವು. ಒಂದು ಶುಭಮುಹೂರ್ತದಲ್ಲಿ ಕೊಳವೆ ಬಾವಿಯನ್ನು ಕೊರೆಸಲು ಶುರು ಮಾಡಿದರು. ನೆಲ ಬಗೆದ ಕೊಳವೆ ತಂಪು ನೀರನ್ನು ಚಿಮ್ಮಿಸಿದಾಗ ನೆರೆದಿದ್ದ ಗ್ರಾಮಸ್ಥರ ಹರ್ಷ ಮುಗಿಲು ಮುಟ್ಟಿತ್ತು.

ಗೌರೀಪುರದ ಜನತೆ ಚುರುಕಾದರು. ಮಾರನೇ ದಿನವೇ ಮೋಟರ್ ಖರೀದಿಸಿ, ಕೊಳವೆ ಬಾವಿಗೆ ಇಳಿಸಿದರು. ಪಕ್ಕದ ಹಳೆಯ ನೀರು ಸರಬರಾಜಿನ ವಿದ್ಯುತ್ ಕಂಬಕ್ಕೆ ವಿದ್ಯುತ್ ಸ್ಟಾರ್ಟರ್ ಜೋಡಿಸಿದರು. ಸ್ವಿಚ್ ಅದುಮಿದರು. ಹಗರಿಯ ಪಕ್ಕದಲ್ಲಿ ನೀರು ಸುಮಾರು ಮಾರುದ್ದ ಜಿಗಿಯುತ್ತಿತ್ತು. ಊರ ಜನರೆಲ್ಲಾ ನೀರನ್ನು ನೋಡಿ ಖುಷಿಪಟ್ಟರು, ಅಂದೇ ಸಮೀಪದ ಊರಿಗೆ ಸರಬರಾಜು ಆಗುವಂತೆ ಪೈಪ್ ಹಾಕಲು ಊರವರೇ ಗುಂಡಿ ಅಗೆದರು. ಪೈಪು ಹಾಕಿದರು. ಸಿಹಿಯಾದ ನೀರು ಸದ್ದಿಲ್ಲದೇ ಮನೆ ಮನೆಯ ಹಂಡೆಗಳಲ್ಲಿ, ಕೊಡಗಳಲ್ಲಿ ತುಂಬಿದಾಗ ಗೌರೀಪುರದ ತುಂಬೆಲ್ಲ ಬರೀ ಗಂಗೆಯದೇ ಮಾತು.


"ನೋಡ್ರಿ ಸಾರ್, ನಮ್ಮೂರಿಗೆ ಕೇವಲ ಮುವ್ವತ್ತು ಸಾವಿರ ಖರ್ಚಿನಲ್ಲೇ, ಬೋರ್, ಮೋಟರ್, ಪೈಪ್‌ಲೈನ್ ಎಲ್ಲಾ ಕೆಲಸ ಮಾಡಿದಿವಿ. ಸರಕಾರ ಆಗಿದ್ರ, ಇಷ್ಟೇ ಕೆಲಸಕ್ಕೆ ಲPಂತರ ಹಣ ಖರ್ಚು ಮಾಡೀವಿ ಅಂತ ಲೆಕ್ಕ ತೋರಿಸ್ತಿತ್ತು"ಎನ್ನುತ್ತಾರೆ ಗೌರೀಪುರದ ನಾಗಪ್ಪ.

"ಅಲ್ರೀ ಸಾರ್, ಒಂದು ಲಕ್ಷನೇ ಖರ್ಚು ಮಾಡಿದ್ರೂ ಒಂದು ಬೋರ್ ಹಾಕ್ಸಿ ಊರಿಗೆ ನೀರು ಕೊಡ್ಲಿಕ್ಕೆ ಇನ್ನೂ ಒಂದು ವರ್ಷ ಬೇಕಾಗ್ತಿತ್ತೇನೋ ಅದಕ್ಕೆ ನಮ್ಮೂರಿನ ಜನಕ್ಕೆ, ದನಕ್ಕೆ ನೀರು ಸಿಗೋದಿಲ್ಲ ಅಂತ ನಾವೇ ಊರಿನ ಜನರತ್ರ ಅವ್ರವ್ರ ಸ್ಥಿತಿಗತಿ ಮೇಲೆ ಹಣ ಸಂಗ್ರಹಿಸಿ ಮುವ್ವತ್ತು ಸಾವಿರ ಕೂಡ್ಸಿ ನೀರು ಹರಿಸೀವಿ ನೊಡ್ರಿ" ಎನ್ನುತ್ತಾರೆ ಊರಿನ ಮುಖಂಡ ಬಿ. ವಸಂತನಗೌಡ.
ಹಿಂದೆ ಈ ಊರಿನಲ್ಲಿ ಸರಕಾರದ ಕಿರುನೀರು ಸರಬರಾಜು ಯೋಜನೆಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ಇವತ್ತು ಮೋಟರ್ ಇಳಿಸ್ತಾರೋ ನಾಳೇ ಇಳಿಸ್ತಾರೋ ಎಂದು ಜನ ನಾಲ್ಕು ತಿಂಗಳು ಕಾದಿದ್ದೇ ಕಾದದ್ದು. ಸರಕಾರ ಮಾತ್ರ ಕಣ್ಣುಮುಚ್ಚಿ ಕುಳಿತುಬಿಟ್ಟಿತ್ತು. ಆಗಲೇ ಗೌರೀಪುರದ ಜನತೆ ಸರ್ಕಾರಿ ಕೊಳವೆ ಬಾವಿಯ ಆಸೆಗೆ ಎಳ್ಳು ನೀರು ಬಿಟ್ಟು, ತಾವೇ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದು. ಹಣ ಖರ್ಚು ಮಾಡಿದ ಊರಿನವರಿಗೆ ಸರಕಾರ ಕಿರು ನೀರು ಸರಬರಾಜು ಯೋಜನೆಯಡಿ ಮಂಜೂರಾದ ಹಣವನನು ಕೊಡುತ್ತಾರೆಯೋ ಇಲ್ಲವೋ ಎನ್ನುವ ಅಳುಕಿದೆ. ಆ ಅಳುಕಿನ ಜತೆಗೇ ಈ ಕೊಳವೆ ಬಾವಿಗೂ ಮೋಟರ್ ಅಳವಡಿಸಿ ನೀರನ್ನು ಹರಿಸಬಹುದೆಂಬ ದೂರದ ಆಸೆಯೂ ಇದೆ.
ಗ್ರಾಮಸ್ಥರ ಭರವಸೆಯನ್ನು ಸರ್ಕಾರ ಸಾರ್ಥಕ ಮಾಡುತ್ತದೋ ನಿರರ್ಥಕ ಮಾಡುತ್ತದೋ ಕಾಲವೇ ಹೇಳಬೇಕು.
ಪ್ರಜಾವಾಣಿ, ಕರ್ನಾಟಕ ದರ್ಶನ
೨.೪.೨೦೦೩

ಸೋಮವಾರ, ಮಾರ್ಚ್ 12, 2012

ಬಳ್ಳಾರಿ ರಾಘವ ಕಲಾಮಂದಿರದಲ್ಲಿ ಪಲ್ಲವಿಸಿದ ಪುಸ್ತಕಗಳು


ಪಲ್ಲವ ಪ್ರಕಾಶನ ಪ್ರಕಟಿಸಿದ 12 ಪುಸ್ತಕಗಳು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ 11.03.12 ರಂದು ಬಿಡುಗಡೆಯಾದವು.ಪಲ್ಲವ ವೆಂಕಟೇಶ್ ಅವರು ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿ, ಪುಸ್ತಕ ಪ್ರಕಟಣೆಯ ಸಾರ್ಥಕಗೊಳಿಸಿದ ಲೇಖಕರನ್ನು ನೆನೆದರು. ಕನ್ನಡ ವಿಶ್ವವಿದ್ಯಾಲಯದ ಪ್ರೊ.ಟಿ.ಆರ್. ಚಂದ್ರಶೇಖರ್ ಅವರು ಬಿಡುಗಡೆ ಮಾಡಿದರು. ಅಮರೇಶ್ ನುಗಡೋಣಿ, ನಟರಾಜ ಹುಳಿಯಾರ ಪುಸ್ತಕ ಬಿಡುಗಡೆ ನೆಪದಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆಯ ಹೊಸ ದಾರಿಗಳ ಬಗ್ಗೆ, ಈ ಹೊತ್ತಿನ ಬರಹಗಾರನ ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ ಬಿಡುಗಡೆಯಾದ ಹನ್ನೆರಡು ಪುಸ್ತಕಗಳ ಎಳೆ ಹಿಡಿದೇ ವರ್ತಮಾನದ ಸಂಗತಿಗಳ ಬಗ್ಗೆ ಮಾತನಾಡಿದ್ದು ಹೆಚ್ಚು ಪ್ರಸ್ತುತ ಅನ್ನಿಸಿತು.


ಉಸ್ರುಬುಂಡೆ ಸಂಕಲನದ ಜ.ನಾ.ತೇಜಶ್ರೀ, ಈ ಲೋಕದ ಇನ್ನೊಂದು ಗಿಡ ಸಂಕಲನದ ಶಿವರಾಜ ಬೆಟ್ಟದೂರ್, ಕವಿತೆಯ ಕನಸು ಸಂಕಲನದ ಹೆಚ್.ಬಿ ರವೀಂದ್ರ, ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು ಸಂಕಲನದ ಸೈಫ್ ಜಾನ್ಸೆ ಕೊಟ್ಟೂರು, ಈ ಕವಿಗಳು ಹಾಜರಿದ್ದು ತನ್ನ ಒಂದೊಂದು ಕವಿತೆಗಳನ್ನು ಓದಿದರು. ಆರಿಫ್ ರಾಜಾ,ನಾಗಣ್ಣ ಕಿಲಾರಿ,ಅರುಣ್ ಪದ್ಯವಾಚಿಸಿ ಪುಸ್ತಕ ಬಿಡುಗಡೆಯ ಜತೆ ಕವಿಗೋಷ್ಠಿಯೂ ಮಿಳಿತವಾಯಿತು. ದನ ಕಾಯೋ ಹುಡುಗನ ದಿನಚರಿಯ ಟಿ.ಎಸ್. ಗೊರವರ ತನ್ನ ಅನುಭವ ಕಥನವನ್ನು ವಾಚಿಸಿದರು.

ಮುಖ್ಯವಾಗಿ ಕಥೆಗಾರ ವೆಂಕಟೇಶ್ ಉಪ್ಪಾರ್ ಅವರ ಮಗಳು ಅಮೃತ ಉಪ್ಪಾರ್, ಹರ್ಷ ಉಪ್ಪಾರ್, ಸಂದೀಪ ಉಪ್ಪಾರ ಅವರ ಪುಟ್ಟ ಪ್ರತಿಭೆಗಳ ಸಂಗೀತ ಕಛೇರಿ ಇಡೀ ಕಾರ್ಯಕ್ರಮದಲ್ಲಿ ನಾದದ ಅಲೆಯಲ್ಲಿ ಸಭಿಕರನ್ನು ತೇಲಿಸಿ, ಖಷಿಕೊಟ್ಟು ಎಲ್ಲರಿಂದ ಮೆಚ್ಚುಗೆಗೂ ಪಾತ್ರರಾದರು.
ಇಡಿಯಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅನವಶ್ಯಕ ಹೊಗಳಿಕೆ ಇಲ್ಲದೆ,ಆಪ್ತವಾಗಿತ್ತು.

ಗುರುವಾರ, ಮಾರ್ಚ್ 8, 2012

ಪಲ್ಲವ ಪ್ರಕಾಶನದ 12 ಪುಸ್ತಕಗಳ ಬಿಡುಗಡೆ

ಪಲ್ಲವ ಪ್ರಕಾಶನ ಕನ್ನಡದ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.ಬಳ್ಳಾರಿ ಜಿಲ್ಲೆಯಲ್ಲಿ ಲೋಹಿಯಾ ಪ್ರಕಾಶನದ ನಂತರ ಪುಸ್ತಕವನ್ನು ಹೆಚ್ಚು ಪ್ರೀತಿಯಿಂದ ಮಾಡುತ್ತಿರುವ ವೆಂಕಟೇಶ್ ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಪ್ರಕಾಶನದ ಚಾಪು ಮೂಡಿಸುತ್ತಿದ್ದಾರೆ. ಪಲ್ಲವ ಪ್ರಕಾಶನದಿಂದ 12 ಪುಸ್ತಕಗಳ ಬಿಡುಗಡೆ ಬಳ್ಳಾರಿಯಲ್ಲಿದೆ. ನೀವೂ ಬನ್ನಿ.

ಬುಧವಾರ, ಮಾರ್ಚ್ 7, 2012

ಡಾ. ಕುಂಬಾರ ವೀರಭದ್ರಪ್ಪ, ಕೊಟ್ಟೂರು.


ಕುಂವೀ ಎಂದೆ ಪ್ರಸಿದ್ಧಿಯನ್ನು ಪಡೆದ ಕುಂ.ವೀರಭದ್ರಪ್ಪ ಅವರು ಕೊಟ್ಟೂರು ಪರಿಸರದಲ್ಲಿ ಬೆಳೆದ ದೈತ್ಯ ಕಥೆಗಾರ. ಕಥೆಗಳನ್ನು ಬರೆಯುತ್ತಾ ಬರೆಯುತ್ತಾ ಕುಂ.ವಿ ಕಥನ ಮಾದರಿಯೊಂದನ್ನು ರೂಪಿಸಿದವರು. ಈ ಭಾಗದ ವಡ್ಡಾರಾಧನೆಯ ಶಿವಕೋಟ್ಯಾಚಾರ್ಯನ ನಂತರ ಕಥನದ ತನ್ನದೇ ಆದ ವಿಶಿಷ್ಟ ಮಾದರಿಯೊಂದನ್ನು ರೂಪಿಸಿದ ಕಥೆಗಾರ ಕುಂವಿ.ಅವರ ಕಥನಕ್ಕೆ ಸಿಕ್ಕ ಪ್ರಶಸ್ತಿಗಳು ಹಲವು. ಅವರ ಅರಮನೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಅವರ ಕಥನ ಕಾಯಕಕ್ಕೆ ಸಿಕ್ಕ ಶಿಖರ ಗೌರವ.

ಇದು ಬರಿ ಕಥೆಯಲ್ಲೋ ಅಣ್ಣಾ (ಸಮಗ್ರ ಕಥೆಗಳು) ಗಾಂಧಿ ಕ್ಲಾಸು ( ಆತ್ಮಕಥೆ) ಶಾಮಣ್ಣ, ಅರಮನೆ, ಆರೋಹಣ ಪ್ರಮುಖ ಕಾದಂಬರಿಗಳು. ಕುಂ.ವಿ ಕಥನಕ್ಕೆ ಇರುವ ವಿಶಿಷ್ಟ ಶಕ್ತಿ ಮಿತಿಯ ಆಗಿದೆ. ಅತಿರಂಜನೆ, ಅತಿ ಮಾನುಷ ವ್ಯಕ್ತಿತ್ವಗಳು ಅಸಹಜ ಅನ್ನಿಸಿಬಿಡುವುದೂ ಇದೆ. ಇಂತಹ ಕೆಲ ಮಿತಿಗಳನ್ನು ಹೊರತುಪಡಿಸಿದರೆ ಕುಂ.ವಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಬೆರಗು ಮೂಡಿಸುವ ಕಥನಕಾರ. ಅವರ ಕಥನ ಶಕ್ತಿ ಮತ್ತಷ್ಟು ಉತ್ಸಾಹದಿಂದ ಹೊರ ಹೊಮ್ಮಲಿ.


’ನನ್ನನ್ನು ಲೇಖಕನಾಗಿ ರೂಪಿಸಿದ ಪರಿಸರ’ (೧೯೯೮), ೧೯೯೮ರಲ್ಲಿ (ಹೂವಿನಹಡಗಲಿ) ನಡೆದ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣ. ಕನ್ನಡ ಅಧ್ಯಯನ ಸಂ ೬-೨, ಅಕ್ಟೋಬರ್ -ಡಿಸೆಂಬರ್, ೧೯೯೯, ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರಕಟವಾಗಿತ್ತು. ಈ ಬರಹವನ್ನೂ, ಮಾತು ತಲೆ ಎತ್ತುವ ಬಗೆ ಕೃತಿಯಲ್ಲಿ ಈ ಬರಹಕ್ಕೆ ರಹಮತ್ ತರೀಕೆರೆ ಅವರು ಬರೆದ ಟಿಪ್ಪಣಿಯನ್ನು ಇಲ್ಲಿ ಪ್ರಕಟಿಸಾಗಿದೆ. ಈ ಮಾತುಗಳು ಕುಂ.ವಿ ಅವರನ್ನು ಅರ್ಥವತ್ತಾಗಿ ಕಟ್ಟಿಕೊಡುತ್ತವೆ.

ನನ್ನನ್ನು ಲೇಖಕನಾಗಿ ರೂಪಿಸಿದ ಪರಿಸರ

ಕುಂವೀ

ಕಳೆದ ೨೫ ವರ್ಷಗಳಿಂದ ಕಥೆ, ಕಾದಂಬರಿ, ಮತ್ತಿತರ ಸಾಹಿತ್ಯಿಕ ಪ್ರಕಾರಗಳಲ್ಲಿ ತೊಡಗಿಸಿ ಕೊಂಡಿರುವ ನಾನು, ಅಕ್ಷರ ಕಲಿತದ್ದು ಎಷ್ಟು ಆಕಸ್ಮಿಕವೋ ಬರಹಕ್ಕೆ ತೊಡಗಿದ್ದೂ ಅಷ್ಟೇ ಆಕಸ್ಮಿಕ. ಎದೆ ಸೀಳಿದರೂ ಎರಡಕ್ಷರ ಗೋಚರಿಸದ ಕುಂಬಾರ ಜನಾಂಗದಿಂದ ಬಂದವನಾದ ನಾನು, ಅನೇಕ ಜನಪರ ಚಳುವಳಿಗಳ ಪರುಷಸ್ಪರ್ಶದಿಂದ ಲೇಖಕನಾದವನು; ಶ್ರಮಿಕ ವರ್ಗದೊಡಲಿಂದ ತಲೆಚಾಚಿ ಸಾಹಿತ್ಯಿಕ ಪರಿಭಾಷೆಯಲ್ಲಿ ಮಾತಾಡಲಾರಂಬಿsಸಿ ದವನು. ಅಕ್ಷರ ಸಂಸ್ಕೃತಿಯಿಂದ ನಾಗರಿಕ ಸೌಲಭ್ಯಗಳಿಂದ ದೂರವಿರುವೆ ಎಂದಾಗಲಿ, ಗೂಳ್ಯಂ ಮತ್ತಿತರ ಕುಗ್ರಾಮಗಳಲ್ಲಿ ಕಂಡುಂಡ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಲೆಂದೇ ಕಥೆ ಕಾದಂಬರಿ ಬರೆಯತೊಡಗಿದವನು. ನಾನು ನನ್ನ ಮಾನಸಿಕ ಸ್ವಾಸ್ಥ್ಯ ಕಾಪಾಡಿ ಕೊಳ್ಳಲಿಕ್ಕೆಂದೇ ಬರೆಯುತ್ತಿರು ವವನು; ಬರೆಯುವ ಮೂಲಕ ಕನ್ನಡ ಬಲ್ಲ ಓದುಗರೊಂದಿಗೆ ಸಂವಾದ ಸಂಪರ್ಕ ಇಟ್ಟು ಕೊಂಡವನು; ಈ ಮೂಲಕ ತಮ್ಮೆಲ್ಲರ ಪ್ರೀತಿ ಅಬಿsಮಾನ ಸಂಪಾದಿಸಿದವನು. ನಾನು ಕಳೆದ ಕಾಲು ಶತಮಾನದ ಅವದಿsಯಲ್ಲಿ ಸುಮಾರು ೨೫೦ ಕಥೆಗಳನ್ನು ಬರೆದಿರಬಹುದು, ಹತ್ತೋ ಹನ್ನೆರಡೋ ಕಾದಂಬರಿಗಳನ್ನು ಬರೆದಿರಬಹುದು. ವಿಮರ್ಶಕರು ಮೆಚ್ಚಿಕೊಂಡಿರಬಹುದು.

ವಿಷಾದದ ಸಂಗತಿ ಎಂದರೆ, ನನ್ನ ಕುಟುಂಬ ಪರಿಸರದ, ಅದರಲ್ಲೂ ಮುಖ್ಯವಾಗಿ ತಾಯಿ ಅಕ್ಕ ತಂಗಿ ತಮ್ಮಂದಿರು, ನನ್ನ ಒಂದೇ ಒಂದು ಕಥೆಯನ್ನು ಓದಿಲ್ಲದಿರುವುದು; ಅಷ್ಟೇ ಏಕೆ ನಾನು ಕೆಲಸ ಮಾಡಿದ ಮತ್ತು ಮಾಡುತ್ತಿರುವ ಶಾಲೆಯ ಸಹೋದ್ಯೋಗಿಗಳ ಪೈಕಿ, ಯಾರೊಬ್ಬರೂ ನನ್ನ ಒಂದೇ ಒಂದು ಕಥೆಯನ್ನು ಓದಿಲ್ಲದಿರುವುದು. ಮುಖ್ಯವಾಗಿ ನಾನಿಲ್ಲಿ ಹೇಳಬಯಸುತ್ತಿರುವುದೇನೆಂದರೆ, ನಾನು ಯಾರನ್ನು ಉದ್ದೇಶಿಸಿ ಮಾತಾಡುತ್ತಿರು ವೆನೋ, ಯಾರನ್ನು ಉದ್ದೇಶಿಸಿ ಬರೆಯುತ್ತಿರುವೆನೋ, ಅಂಥವರನ್ನು ನನ್ನ ಸಾಹಿತ್ಯ ತಲುಪುತ್ತಿಲ್ಲವೆಂಬುದು. ನನ್ನ ಈ ಪ್ರೀತಿಯ ಜಿಲ್ಲೆಯಲ್ಲಿ ಬಹಳಷ್ಟು ಮಂದಿ ’ಈತ ಇಂಥ ಸಿನಿಮಾಗಳಿಗೆ ಕಥೆ ಕಾದಂಬರಿ ಬರೆದಿದ್ದಾನೆ’ ಎಂದು ಗುರುತಿಸುತ್ತಿರುವರೇ ಹೊರತು, ಇಂಥದೊಂದು ಒಳ್ಳೆಯ ಕಥೆಯನ್ನು ಬರೆದಿದ್ದಾನೆಂದು ಗುರುತಿಸುತ್ತಿಲ್ಲ. ಅಂದರೆ ದೃಶ್ಯಮಾಧ್ಯಮದಷ್ಟು ಸಾಹಿತ್ಯಿಕ ಮಾಧ್ಯಮ ಸಶಕ್ತವಾಗಿಲ್ಲ.

ಇನ್ನೊಂದು ವಿಚಿತ್ರ ಸಂಗತಿ ಎಂದರೆ, ಇವತ್ತು ಲೇಖಕರಲ್ಲಿಯೇ ಓದುವ ಅಬಿsರುಚಿ ಕಡಿಮೆಯಾಗಿರುವುದು. ಮುಖ್ಯವಾಗಿ ಒಬ್ಬ ಲೇಖಕ ಇನ್ನೋರ್ವ ಕಿರಿಯ ಲೇಖಕನ ಕೃತಿಯನ್ನು ಓದುವ ತಾಳ್ಮೆ ಕಳೆದುಕೊಂಡಿರುವುದು. ನಾನು ಬರಹ ಆರಂಬಿsಸಿದ ಸಂದರ್ಭ ಹೀಗಿರಲಿಲ್ಲ. ಸಿದ್ಧಗಂಗಾ ಮಠದಲ್ಲಿ ಟಿ.ಸಿ.ಹೆಚ್. ಮಾಡುತ್ತಿರುವಾಗ ಮಲ್ಲೇಪುರಂ ವೆಂಕಟೇಶ್‌ರಂಥವರ ಸಹವಾಸದಿಂದ, ಪಂಪ ರನ್ನ ಕುಮಾರವ್ಯಾಸ ಕುವೆಂಪುರವರಂಥ ಅದ್ಭುತ ಲೇಖಕರ ಕೃತಿಗಳ ಪರಿಚಯವಾಯಿತು. ಇಂದಿರಾಗಾಂದಿs ಸರ್ವಾದಿsಕಾರಿ ಆಡಳಿತದ ವಿರುದ್ಧ ಜಯಪ್ರಕಾಶ ನಾರಾಯಣ ದೇಶದಾದ್ಯಂತ ಸಮರ ಸಾರಿದ್ದರು. ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಧಾರವಾಡದಲ್ಲಿ, ಲೇಖಕರು ವಿದ್ಯಾರ್ಥಿಗಳು ಬೀದಿಗೆ ಬಂದುಬಿಟ್ಟಿದ್ದರು. ಕನ್ನಡದ ಅನೇಕ ಮಹತ್ವದ ಲೇಖಕರನ್ನು ಧಾರವಾಡ ಕೈಬೀಸಿ ಕರೆಯುತ್ತಿತ್ತು. ’ಮಲ್ಲಿಗೆ ಅಲ್ಲಿಗೆ ನಾ ಬರುವೆ ಮೆಲ್ಲಗೆ, ರಸದೂಟವನು ಬಡಿಸು ನಿನ್ನ ಕವಿಗೆ’ ಎಂದು ಮುಂತಾಗಿ ಭಾವಗೀತೆಗಳನ್ನು ಬರೆಯುತ್ತಿದ್ದ ನಾನು, ಪಡಬಾರದ ಕಷ್ಟಪಟ್ಟು ಧಾರವಾಡಕ್ಕೆ ಹೋಗಿ ಆವತ್ತಿನ ನವನಿರ್ಮಾಣ ಚಳವಳಿಯಲ್ಲಿ ಭಾಗವಹಿಸಿದೆ. ಮಹಾಬಲೇಶ್ವರ ಕಾಟ್ರಹಳ್ಳಿ, ಹೊ. ಮ. ಪಂಡಿತಾರಾಧ್ಯ ಮುಂತಾದ ಗೆಳೆಯರು ಪರಿಚಯ ವಾದದ್ದು ಆ ಸಂದರ್ಭದಲ್ಲಿಯೇ; ಅನೇಕ ಚಳವಳಿಗಳ ರೂವಾರಿಯಾದ ಚಂದ್ರಶೇಖರ ಪಾಟೀಲರಿಂದ ಪ್ರತಿಭಟಿಸುವ ಪಾಠ ಕಲಿತದ್ದು ಅದೇ ಸಂದರ್ಭದಲ್ಲಿಯೇ; ಆ ಸಂದರ್ಭದಲ್ಲಿ ಆಳುವ ವರ್ಗವನ್ನು, ಮೂಢನಂಬಿಕೆಗಳನ್ನು, ಪ್ರಶ್ನಿಸಲೆಂದೇ ಪ್ರತಿಭಟಿಸಲೆಂದೇ ನಾನು- ನನ್ನಂಥ ಲೇಖಕರು ಹೊಸ ಕಸುವಿನಿಂದ ಬರೆಯಲಾರಂಬಿsಸಿದೆವು. ಈ ನೆಲದ ಪುಣ್ಯವೊ ಎಂಬಂತೆ, ಅಂದಿನ ಪ್ರಧಾನಿ ಇಂದಿರಾಗಾಂದಿsಯವರು ಭವ್ಯಭಾರತ ದೇಶವನ್ನು ತುರ್ತು ಪರಿಸ್ಥಿತಿಯ ಕಗ್ಗತ್ತಲೆಗೆ ತಳ್ಳಿ ಪುಣ್ಯ ಕಟ್ಟಿಕೊಂಡರು. ಯಾಕೆಂದರೆ ಸರ್ವಾದಿsಕಾರಿಗಳ ಬಾಯಿಗೆ ಮಣ್ಣು ಬಿದ್ದದ್ದು ಆ ಸಂದರ್ಭದಲ್ಲಿಯೇ; ಆ ತುರ್ತುಪರಿಸ್ಥಿತಿ ಸಂದರ್ಭವೇ ದೇಶದ ಲೇಖಕರ ಮೇಲ್‌ಮುಸುಗನ್ನು ಸರಿಸಿತು. ನಾನೂ ನನ್ನ ವಾರಿಗೆಯ ಅನೇಕ ಲೇಖಕರೂ, ನಮ್ಮದೇ ಆದ ರೀತಿಯಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಡ ತೊಡಗಿದೆವು. ಬರೆಯತೊಡಗಿದೆವು. ಕನ್ನಡ ಭಾಷೆಯನ್ನು ಮೊನಚಾಗಿ ಶಕ್ತಿಶಾಲಿಯಾಗಿ ಪರಿಣಾಮಕಾರಿ ಯಾಗಿ ಉಪಯೋಗಿಸುವು ದನ್ನು ನಮಗೆಲ್ಲ ಕಲಿಸಿದ್ದು, ಆ ತುರ್ತುಪರಿಸ್ಥಿತಿಯ ಸಂದರ್ಭ. ಅದೇ ಸಂದರ್ಭದಲ್ಲಿ ಧಾರವಾಡದಲ್ಲಿ ಚಂಪಾ, ಬೆಂಗಳೂರಿನಲ್ಲಿ ಪ್ರೊ. ನಂಜುಂಡಸ್ವಾಮಿ, ಪಿ. ಲಂಕೇಶ್, ಧರ್ಮ ಲಿಂಗಮ್, ಕಾಳೇಗೌಡ ನಾಗವಾರ, ಮೈಸೂರಲ್ಲಿ ರಾಮದಾಸ್, ಪೂರ್ಣಚಂದ್ರತೇಜಸ್ವಿ ಮುಂತಾದವರು, ಸ್ವಯಂಘೂಷಿತ ದೇವಮಾನವರ ಹಾಗೂ ಮೂಢನಂಬಿಕೆಗಳ ವಿರುದ್ಧ ಅರ್ಥಪೂರ್ಣವೂ ಐತಿಹಾಸಿಕವೂ ಆದ ಸಮರ ಸಾರಿದ್ದರು.

ಚಂಪಾರ ಪತ್ರಿಕಾ ಕರೆಗೆ ಓಗೊಟ್ಟು ಧಾರವಾಡಕ್ಕೆ ಓಡಿ, ದೇವಮಾನವನ ಪ್ರತಿಕೃತಿಯನ್ನು ಕತ್ತೆ ಮೇಲೆ ಕೂಡ್ರಿಸಿ ನಡೆದ ಅದ್ಭುತ ಮೆರವಣಿಗೆಯಲ್ಲಿ ಭಾಗವಹಿಸಿದ್ದು; ತದನಂತರ ಕರ್ನಾಟಕದಾದ್ಯಂತ ಅಬ್ರಹಾಂ ಟಿ. ಕೋವೂರ್‌ರವರು ಕೈಗೊಂಡ ಪ್ರವಾಸದಲ್ಲಿ ಭಾಗ ವಹಿಸಿದ್ದು; ಬಡತನದ ಕಡುಬೇಗೆಯಲ್ಲಿ ಬೆಂದದ್ದು; ಕರ್ನಾಟಕದ ಗಡಿಗೆ ಅಂಟಿ ಕೊಂಡಂತಿ ರುವ ಆಂಧ್ರದ ವಂದವಾಗಿಲಿಯಂಥ ಶಿಲಾಯುಗದ ಗ್ರಾಮದಲ್ಲಿ ಮಾಸ್ತರಿಕೆ ನೌಕರಿ ದೊರೆತದ್ದು; ತದನಂತರ ಅಲ್ಲಿನ ಜಮೀನ್ದಾರಿ ವ್ಯವಸ್ಥೆಯನ್ನು ವಿರೋದಿsಸಲೆಂದೋ ಅಥವಾ ಅದರ ಪ್ರಭಾವದಿಂದಾಗಿಯೋ ಕಸರತ್ತು ಮಾಡಿ ದೇಹ ಬೆಳಸಿದ್ದು- ಇವೆಲ್ಲವನ್ನು ನಿಮ್ಮೆದುರು ಹೇಳಿಕೊಳ್ಳಬೇಕೆನ್ನಿಸುತ್ತದೆ.
ತುರ್ತುಪರಿಸ್ಥಿತಿಯನ್ನು ವಿದಿsಸದಿದ್ದಲ್ಲಿ, ಅದರ ಕರಾಳ ಅನುಭವ ನಮಗಾಗದಿದ್ದಲ್ಲಿ, ನನ್ನಂಥ ಅನೇಕರು ಕವಿತೆ ಬರೆಯುತ್ತಿರಲಿಲ್ಲ. ’ಕುಮಾರರಾಮ ಸಾಂಗತ್ಯ’ದಲ್ಲಿ ವರ್ಣಿತವಾಗಿ ರುವ ವೇದಾವತಿ ಅಲಿಯಾಸ್ ಹಗರಿ ಪ್ರಾಂತದ ಹಳ್ಳಿಗಳಲ್ಲಿ ನಾನು ಮಾಸ್ತರಿಕೆ ಮಾಡದಿದ್ದಲ್ಲಿ, ನಾನು ಕಥೆಗಾರನಾಗಲೀ ಕಾದಂಬರೀಕಾರನಾಗಲೀ ಆಗುತ್ತಿರಲಿಲ್ಲ. ಅಲ್ಲಿನ ನಿರ್ಗತಿಕರ ಶೋಚನೀಯ ಬದುಕು ಅಬಿsವ್ಯಕ್ತಿಸಲು ನಾನು ಕಥೆ ಕಾದಂಬರಿ ಪ್ರಕಾರದ ಮೂಲಕ, ಹೊಸ ಇನ್ನಿಂಗ್ಸ್ ಆರಂಬಿsಸಬೇಕಾಯಿತು. ನಾನು ಈ ಇನ್ನಿಂಗ್ಸ್ ಆರಂಬಿsಸಿದ ಸಂದರ್ಭದಲ್ಲಿ, ಆ ಮುಗ್ಧ ಜನರಿಗೆ ಇಂಡಿಯಾದ ಬಗ್ಗೆ, ರಾಜಕೀಯ ಪರಿಸ್ಥಿತಿ ಬಗ್ಗೆ, ಪರಿಕಲ್ಪನೆಯೇ ಇರಲಿಲ್ಲ. ಆ ಭಾಗದ ದಲಿತರಿಗೆ ಅಡುಗೆ ಮಾಡುವುದಾಗಲೀ ಮೈಮುಚ್ಚು ವಂತೆ ಬಟ್ಟೆ ತೊಡುವುದರ ಬಗೆಗಾಗಲೀ ಅರಿವೇ ಇರಲಿಲ್ಲ. ಚಂದ್ರನೆಂಬ ದಲಿತನೋರ್ವ ನಾನು ಕೊಟ್ಟ ಅಂಗಿಯನ್ನು ತೊಟ್ಟುಕೊಂಡು, ಜಮೀನ್ದಾರರೆದುರು ಮೇಲ್ವರ್ಗದವರೆದುರು ಅಡ್ಡಾಡುವುದಾಗಲಿಲ್ಲ. ಅವನು ಆ ಅಂಗಿಯನ್ನು ಮಲಗುವಾಗ ತೊಡುತ್ತಿದ್ದ. ಎದ್ದೊಡನೆ ಬಿಚ್ಚಿಡುತ್ತಿದ್ದ. ಬ್ರೆಡ್ ತಿಂದರೆ ಅರಗಿಸಿಕೊಳ್ಳಲರಿಯದ, ಹಣವನ್ನು ಎಣಿಸಲು ಬಾರದ, ಶೂದ್ರ ದಲಿತರಿಂದಲೇ ತುಂಬಿರುವ ಅಂಥ ಹಳ್ಳಿಗಳೊಡನೆ, ನಾನು ತ್ರಿಕರಣಪೂರ್ವಕವಾಗಿ ಒಡನಾಡದಿದ್ದಲ್ಲಿ ಪ್ರಾಯಶಃ ಕಥೆಗಾರ ನಾಗುತ್ತಿರಲಿಲ್ಲ. ಒಂದು ಕೋಳಿ, ಒಂದು ಕ್ವಾರ್ಟರ್ ರಂ, ಒಂದು ಸಾವಿರ ರೂಪಾಯಿ ಕೊಟ್ಟರೆ ಕೊಲೆಮಾಡಲು ಹಿಂಜರಿಯದ ಮಂದಿಯ ಜೊತೆ ಒಡನಾಡದಿದ್ದಲ್ಲಿ, ನಾನು ಕಥೆಗಾರನಾಗುತ್ತಿರಲಿಲ್ಲ. ಸರಕಾರಿ ಶಾಲೆ, ರಸ್ತೆ, ನೀರಿನಂಥ ಪ್ರಾಥಮಿಕ ಸೌಲಭ್ಯಗಳಿಲ್ಲದ ಅಂಥ ಊರುಗಳಲ್ಲಿ, ಕುರಿತೋದದೆ ಇದ್ದರೂ ಬೆಳ್ಳಂ ಬೆಳಗು ಹಾಡು ಹೇಳುವ ಕವಿಗಳಿಗಾಗಲೀ, ಪುಂಖಾನುಪುಂಖವಾಗಿ ಕಥೆ ಹೇಳುವ ಕಥೆಗಾರರಿಗಾಗಲೀ ಬರವಿಲ್ಲ. ಅಂಥ ಊರುಗಳೇ ನನಗೆ ವಿಶ್ವವಿದ್ಯಾಲಯಗಳಾದವು; ಕೊಕ್ಕಬುಕ್ಕ, ನಾರಾಣಿ, ಡೋಮರಂಥ ಅನಾಗರಿಕರೇ ನನಗೆ ಪ್ರಾಧ್ಯಾಪಕರಾದರು. ವಂದವಾಗಿಲಿ, ಗೂಳ್ಯಂ, ಹೆಬ್ಬಂಟೆ, ತಾಳೂರು, ಊಳೂರು, ಉತ್ನೂರುಗಳೇ ನನಗೆ ಸಿಮ್ಲಾ ಡಾರ್ಜಿಲಿಂಗ್‌ಗಳಾದವು; ರಿಜರುಜಾಲಿ, ಲಂಟಾನ, ಕಳ್ಳಿಗಿಡ ಮರಗಳೇ ನನಗೆ ಶ್ರೀಗಂಧ, ಹೊನ್ನಿಗಳಾದವು. ಅಲ್ಲಿನ ಹಾಳು ಸುರಿಯುವ ಬಿಸಿಲ ಪ್ರದೇಶವೇ ನನಗೆ ಊಟಿಗಳಾದವು. ಐದಾರು ಕೊಲೆ ಮಾಡಿ ಬೋಧ ಸ್ವೀಕರಿಸಿ ಅವಧೂತ ಪದವಿ ಅಲಂಕರಿಸಿದ ಗುರುವನಂಥವರೇ, ನನಗೆ ರಮಣ ಮಹರ್ಷಿಗಳಾದರು.

ಇಂಥವರ ಒಡನಾಟವನ್ನು ಕಾಲು ಶತಮಾನ ಅನುಭವಿಸಿರುವ ನಾನು, ಕಾಲ್ಪನಿಕ ಕಥೆಗಾರನಲ್ಲ. ಒಂದೊಂದು ಕಥೆ ಬರೆದಾಗಲೂ ಒಂದೊಂದು ನಮೂನೆಯ ಸಂಕಟ ತಾಪತ್ರಯ ಅನುಭವಿಸಿರುವ ನನ್ನ ಮೇಲೆ, ಆಂಧ್ರದ ತೆಲಂಗಾಣದ ಶ್ರೀಕಾಕುಳಂ ಜಿಲ್ಲೆಯ ರೈತರ ಹೋರಾಟ, ಅದಕ್ಕೆ ಸಂಬಂದಿsಸಿದ ಸಾಹಿತ್ಯ ಬೀರಿರುವ ಪ್ರಭಾವ ದೊಡ್ಡದು. ಹಾಗೆಯೇ ಕನ್ನಡದ ಹಳಗನ್ನಡ ಹೊಸಗನ್ನಡದ ಅನೇಕ ಕೃತಿಗಳು ಬೀರಿರುವ ಪ್ರಭಾವ ದೊಡ್ಡದು. ದಾಸ್ತೋವಸ್ಕಿ, ಚೆಕಾಫ್, ಮಾರ್ಕ್ವೇಜ್ ರಂಥವರ ಕೃತಿಗಳು ಬೀರಿರುವ ಪ್ರಭಾವ ದೊಡ್ಡದು.

ಇಂಥ ಜಾಯಮಾನದ ನನ್ನನ್ನು ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿ ಗೌರವಿಸಿರುವ ನಿಮ್ಮಪ್ರೀತಿ ಅಬಿsಮಾನ ಬಹುದೊಡ್ಡದು. ಕುಂತಳ ನಾಡಿನ, ಬಂಧವಾಡಿಯ ಪ್ರದೇಶದ ಅನುಭವಗಳನ್ನೊಳಗೊಂಡ ನನ್ನ ಕೃತಿಗಳಿಗೆ ಸಂದ ಗೌರವವೆಂದೇ ಭಾವಿಸಿ, ಅವುಗಳ ನೆಪಮಾತ್ರದ ಲೇಖಕನಾಗಿರುವ ನಾನು ವಿನಯ ಮತ್ತು ಸಂಕೋಚದ ಮುದ್ದೆಯಾಗಿದ್ದೇನೆ. ಇದು ಕೇವಲ ರಾಜಕೀಯ ನಕ್ಷೆಯಲ್ಲಿ ಬರುವ ಬಳ್ಳಾರಿ ಜಿಲ್ಲೆಯ ಅನುಭವಗಳಿಗೆ ಮಾತ್ರ ಸಂದಿರುವ ಗೌರವವಲ್ಲ. ೧೯೫೬ರಲ್ಲಿ ಭಾಷಾವಾರು ಪ್ರಾಂತ ರಚನೆಯಾಗುವುದಕ್ಕಿಂತ ಪೂರ್ವದಲ್ಲಿ ಅಂದರೆ, ಕರ್ನೂಲು, ಅನಂತಪುರ ಪ್ರದೇಶವನ್ನೊಳ ಗೊಂಡಂತೆ ಅಖಂಡ ಬಳ್ಳಾರಿ ಜಿಲ್ಲೆಯ ಕಲೆಕ್ಟರರಾಗಿದ್ದ ಥಾಮಸ್ ಮನ್ರೋ ಕಾಲದ ಅನುಭವಗಳ ಅಬಿsವ್ಯಕ್ತಿಗೆ ಸಂದ ಗೌರವ ಇದಾಗಿದೆ ಎಂದು ವಿನಮ್ರತೆಯಿಂದ ಭಾವಿಸುತ್ತಿರುವೆ.

ಎಲ್ಲ ಇದ್ದು ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ಬಳ್ಳಾರಿ ಜಿಲ್ಲೆಗೆ ಶ್ರೀಮಂತ ಇತಿಹಾಸವಿದೆ. ಕೋಟ್ಯಂತರ ವರ್ಷಗಳ ಹಿಂದೆ ಪ್ರಪ್ರಥಮವಾಗಿ ಅನಾವರಣಗೊಂಡ ಭೂಭಾಗ ಹಂಪಿಯ ಕಿಷ್ಕಿಂಧೆಯ ಪರ್ವತಾಗ್ರ, ಸಂಗನಕಲ್ಲು, ಕಪ್ಪಗಲ್ಲು, ತೆಕ್ಕಲಕೋಟೆ ಮುಂತಾದ ಹಲವೆಡೆ ದೊರಕಿರುವ ಶಿಲಾಯುಗದ ಅವಶೇಷಗಳು, ನಮ್ಮ ಜಿಲ್ಲೆಯ ಪ್ರಾಚೀನತೆಗೆ ಸಾಕ್ಷಿ. ಕಮ್ಮಟದುರ್ಗದ ಕುಮಾರರಾಮನಂಥ ಕಲಿಗಳು, ಕುರುಗೋಡಿನ ರಾಚೋಟಿ ಮಲ್ಲನಂಥ ಮುತ್ಸದ್ದಿಗಳು, ಅಲ್ಲದೆ ಅನಂತಪುರವನ್ನು ಸ್ಥಾಪಿಸಿದ ಬಾಲದ ಹನುಮಪ್ಪನಾಯಕ ಇವರೆಲ್ಲ ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ವಿಜಯನಗರದ ಅರಸರ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ, ಓದಿದ್ದೇವೆ. ಚಿತ್ರದುರ್ಗದ ಮಾನ ಕಾಪಾಡಿದ ವೀರಮಹಿಳೆ ಒನಕೆ ಓಬವ್ವ ನಮ್ಮ ಜಿಲ್ಲೆಯವಳೆ. ಸಿಂಧವಾಡಿಯ ಪ್ರಮುಖ ಕೇಂದ್ರವಾಗಿದ್ದ ಸಿಂಧವಾಸ, ಬಲಕುಂದಿ ೩೦೦ನಾಡು, ಬಯಲಾಟ ಯಕ್ಷಗಾನ ಗಳಿಗೆ ತವರಾಗಿದ್ದ ಕುಡುತಿನಿ, ಪ್ರಮುಖ ಪಾಳ್ಯಗಳಾಗಿದ್ದ ಗುಡೇಕೋಟೆ ಮತ್ತು ಮೊನ್ನೆಮೊನ್ನೆ ಯವರೆಗೆ ನಮ್ಮ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ನಮ್ಮವೇ; ಭಾಷಾವಾರು ಪ್ರಾಂತ ವಿಂಗಡಣೆ ಯವರೆಗೆ ನಮ್ಮ ಜಿಲ್ಲೆಯಲ್ಲಿದ್ದ ಆದವಾನಿ, ಆಲೂರು, ರಾಯದುರ್ಗ ಭಾವನಾತ್ಮಕವಾಗಿ ನಮ್ಮವೆ. ಬಳ್ಳಾರಿ, ಅನಂತಪುರ ಪ್ರಾಂತದ ಕಲೆಕ್ಟರ್ ಆಗಿದ್ದ ಥಾಮಸ್ ಮನ್ರೋ ಎಂಬ ಮಹಾನುಭಾವನನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಸೂಕ್ತವೆಂದು ನನ್ನ ಭಾವನೆ. ೧೮೧೯ ರಲ್ಲಿ ಈ ಪ್ರಾಂತಕ್ಕೆ ಕಲೆಕ್ಟರ್ ಆಗಿ ಬಂದ ಆ ಪುಣ್ಯಾತ್ಮ, ಚಿಕ್ಕಪುಟ್ಟ ಪಾಳೆಗಾರರ ಜಮೀನ್ದಾರರ ಸೊಂಟಮುರಿದು, ರೈತರಿಗೆ ಭೂಮಿ ಹಂಚಿದ. ರೈತಾಪಿ ಮಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿದ. ಪತ್ತಿಕೊಂಡ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದಾಗ ಕಾಲರಾ ವ್ಯಾದಿsಗೆ ಬಲಿಯಾಗಿ, ೧೮೨೭ನೆ ಇಸ್ವಿ ಜುಲೈ ತಿಂಗಳು ೬ರಂದು ಸತ್ತ. ಆತ ಎಷ್ಟು ಜನಪ್ರಿಯ ವ್ಯಕ್ತಿಯಾಗಿದ್ದ ಎಂಬುದಕ್ಕೆ ಪತ್ತಿಕೊಂಡ, ಗುತ್ತಿ, ಅನಂತಪುರ ಪ್ರಾಂತದಲ್ಲಿ ಮನ್ರಪ್ಪ, ಮನ್ರಮ್ಮ ಎಂಬ ಹೆಸರುಗಳನ್ನು ನಾವು ಕೇಳಬಹುದು. ಆದರೆ ಥಾಮಸ್ ಮನ್ರೋ ಮಹಾಶಯನ ಬಗ್ಗೆ ಈ ಭಾಗದ ಜನರಿಗೆ ಅಷ್ಟಾಗಿ ತಿಳಿಯದು.
ಇತಿಹಾಸವನ್ನು ಮನವರಿಕೆ ಮಾಡಿಕೊಡುವುದರ ಮೂಲಕ ನಮ್ಮ ಜಿಲ್ಲೆಯ ಜನತೆಯನ್ನು ಮಾನಸಿಕವಾಗಿ ಶ್ರೀಮಂತಗೊಳಿಸುವುದು, ಈ ಮೂಲಕ ಆತ್ಮಸ್ಥೈರ್ಯ ಜೀವನೋತ್ಸಾಹ ತುಂಬುವುದು ಸಾಹಿತ್ಯದ ಮುಖ್ಯ ಜವಾಬ್ದಾರಿ ಎಂದು ನಾನು ಭಾವಿಸು ತ್ತೇನೆ. ಇತಿಹಾಸವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿ ವರ್ತಮಾನವನ್ನು ಪ್ರೀತಿಸಲಾರ. ಚರಿತ್ರೆ ಯಿಂದ ದೂರವಿರುವಾತ ಚರಿತ್ರೆಗೆ ಮರುಸೃಷ್ಟಿಯನ್ನು ನೀಡುವುದು ಸಾಧ್ಯವಿಲ್ಲ. ವರ್ತ ಮಾನದ ಪದರೊಳಗಿರುವ ಇತಿಹಾಸವನ್ನೂ ಇತಿಹಾಸದ ಗೊಂಗಡಿಯೊಳಗೆ ಹಾಸುಹೊಕ್ಕಾಗಿ ರುವ ವರ್ತಮಾನದ ಎಳೆಗಳನ್ನೂ ಪತ್ತೆಹಚ್ಚುವುದು, ಅದರ ಬಗ್ಗೆ ಪುನರವಲೋಕನ ಮಾಡುವುದು ಮತ್ತು ಅದನ್ನು ಪರಿಷ್ಕರಿಸಿ ಪುನರ್‌ರೂಪಿಸುವುದು ಸೃಜನಶೀಲ ಕ್ರಿಯೆಯ ಮುಖ್ಯ ಕರ್ತವ್ಯವಾಗಿದೆ. ಹಾಗೆಯೇ ಇತಿಹಾಸವನ್ನು ಸಾಹಿತ್ಯದ ಮೂಲಕ, ಸಾಹಿತ್ಯವನ್ನು ಇತಿಹಾಸದ ಮೂಲಕ ಅರ್ಥ ಮಾಡಿಕೊಳ್ಳ ಬೇಕಿದೆ. ಇತಿಹಾಸವೆಂಬ ಮೌನವನ್ನು, ನಿಗೂಢತೆಯನ್ನು ಸಾಹಿತ್ಯದ ಮೂಲಕ ಭೇದಿಸಬೇಕು ಮತ್ತು ಪುನರ್‌ಸೃಷ್ಟಿಸಬೇಕು. ಇತಿಹಾಸದ ದುರ್ಬೀನ ಮೂಲಕ ವರ್ತಮಾನವನ್ನು ನೋಡುವುದು ಮುಖ್ಯ. ಇತಿಹಾಸದ ಮೂಲಕ ಜಾತಿ ವ್ಯವಸ್ಥೆಯ, ವರ್ಗವ್ಯವಸ್ಥೆಯ ವಿವಿಧ ಸ್ತರಗಳ ಸಂವೇದನೆಗಳನ್ನು, ಅನುಭವ ಗಳನ್ನು ಲೇಖಕ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಶತಮಾನಗಳ ವಸ್ತು, ಇತಿಹಾಸ ಪುರಾಣಗಳೇ ಆಗಿವೆ ಎಂಬುದನ್ನು ಮರೆಯಬಾರದು. ಅಂದಿನ ಕವಿಗಳು ತಮಗೆ ಆಶ್ರಯವಿತ್ತಿದ್ದ ರಾಜಾದಿsರಾಜರ, ಅವರ ಆರಾಧ್ಯ ದೈವಗಳ ಪುರಾಣಗಳನ್ನು, ಕಾವ್ಯಗಳ ಮೂಲಕ ಪುನರ್‌ಸೃಷ್ಟಿಸುವುದರ ಮೂಲಕವೇ ತಮಗಿದ್ದ ಸಾಮಾಜಿಕ ಎಚ್ಚರವನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸುವ ಯತ್ನ ಮಾಡಿದರು ಎಂಬುದನ್ನು ಮರೆಯಬಾರದು. ಹಳೆ ಕಾವ್ಯಗಳ ಕವಿಗಳ ಜೊತೆಗೆ, ಶಾಸನಗಳ ಮೂಲಕ ಶಾಸನ ಕವಿಗಳ ಬಗೆಗೂ ಆಲೋಚಿಸಬೇಕು.
ಉದಾಹರಣೆಗೆ ಇಲ್ಲೇ ಹತ್ತಿರದಲ್ಲಿರುವ ಕುರವತ್ತಿಯಲ್ಲಿ, ೧೧ನೇ ಶತಮಾನದ ಆಜುಬಾಜಿನಲ್ಲಿದ್ದ ಗುಣಪಾರ್ಯ, ಶ್ರೀಕಂಠಸೂರಿ, ಮೈಲಾರದಲ್ಲಿದ್ದ ನಾಗವಾರ ಮುಂತಾದ ಶಾಸನ ಕವಿಗಳನ್ನು ಅಭ್ಯಾಸ ಮಾಡುವ ಅಗತ್ಯವಿದೆ. ’ಧಾರಿಣಿಯೊಳು ಗುಲಗೋಜನರಿವ ನೆಂದೆಳೆ ಪೊಗಳ್ಗುಂ’ ಎಂದು ಶಾಸನಕವಿ ಶ್ರೀಕಂಠ ಸೂರಿ ಕುರವತ್ತಿಯ ಶಾಸನದಲ್ಲಿ ಪ್ರಸ್ತಾಪಿಸಿದ್ದಾನೆ. ಅಂದರೆ ಕುರವತ್ತಿಯಲ್ಲಿ ಗುಲಗೋಜನೆಂಬ ವಾಸ್ತುಶಿಲ್ಪ ಶಾಸ್ತ್ರಜ್ಞನಿದ್ದ. ಅವನು ಅಲ್ಲಿನ ಅಬಿsನವ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿದ. ಮೈಲಾರದ ಸೋಮೇಶ್ವರ ದೇವಾಲಯದ ಹೆಬ್ಬಾಗಿಲ ಬಳಿ ಇರುವ ಶಾಸನದ ಕವಿ, ಪ್ರತಿಭಾಸಂಪನ್ನನಾದ ನಾಗವರ್ಮ ಅಥವಾ ನಾಗವಾರ. ಅವನು ಆ ಕಾಲದ ಈ ಪ್ರದೇಶದ ಜನರ ಔದಾರ್ಯವನ್ನು ವರ್ಣಿಸಿದ್ದಾನೆ.

ಅಂದರೆ ನಾನೀ ಸಂದರ್ಭದಲ್ಲಿ ಇಂಥವರನ್ನು ಯಾಕೆ ಪ್ರಸ್ತಾಪಿಸುತ್ತಿರುವೆ ನೆಂದರೆ, ನಮ್ಮ ಪರಂಪರೆ ಬದುಕಿದ ಸಾಮಾಜಿಕ ವ್ಯವಸ್ಥೆಯೊಳಗೆ ಎಂಥೆಂಥ ಪ್ರತಿಭೆಗಳಿದ್ದವು ಎಂಬುದನ್ನು ನೆನಪಿಸುವ ಕಾರಣಕ್ಕಾಗಿ; ಐತಿಹಾಸಿಕ-ಧಾರ್ಮಿಕ-ಪೌರಾಣಿಕ ಮಹಾವ್ಯಕ್ತಿಗಳಿಂದ ನಮ್ಮ ಕವಿಗಳು-ಶಾಸನಕವಿಗಳು ಸ್ಫೂರ್ತಿ ಪಡೆದು, ಯಾವ ರೀತಿ ಅಬಿsವ್ಯಕ್ತಿಸಲು ಪ್ರಯತ್ನಿಸಿದರು ಎಂಬ ಕಾರಣಕ್ಕಾಗಿ; ಆಗಿನ ಸಾಮಾಜಿಕ ವ್ಯವಸ್ಥೆ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳು ವುದಕ್ಕಾಗಿ; ಈ ನೆಲದ ಮೇಲೆ ಇಂಥಿಂಥವರು ಇದ್ದರು ಎಂದು ಸ್ಮರಿಸುವುದು, ಈ ಮೂಲಕ ಲೇಖಕ ತನ್ನ ನೆಲದ ಬಗ್ಗೆ ಅಬಿsಮಾನ ತಾಳುವುದು ಮುಖ್ಯ. ನಮ್ಮ ಪರಂಪರೆಯನ್ನೂ ಇತಿಹಾಸವನ್ನೂ ಆಧುನಿಕವಾಗಿ ಹೇಗೆ ನೋಡಬಹುದು, ಹೇಗೆ ಪುನರ್ ವಿಮರ್ಶಿಸಬಹುದು, ಪುನರ್ ರೂಪಿಸಬಹುದು -ಎಂಬುದರ ಕಡೆ ಇಂದಿನ ಲೇಖಕ ಆಲೋಚಿಸುವುದು ಮುಖ್ಯ. ಜೊತೆಗೆ ನಮ್ಮ ಜನಪದ ಸಾಹಿತ್ಯವನ್ನೂ, ಮೌಖಿಕ ಪರಂಪರೆ ಯನ್ನೂ ಸಹ; ಹಳೆ ಬೇರಿನ ಸಹಾಯವಿರದಿದ್ದಲ್ಲಿ ಹೊಸಚಿಗುರಿಗೆ ಅರ್ಥವೇ ಇರುವುದಿಲ್ಲ. ಅಂತಃಕರಣ ಸ್ಥಾಯಿಯಾದ ನಮ್ಮ ಹಳಗನ್ನಡ ಸಾಹಿತ್ಯ ಅರ್ಥಮಾಡಿಕೊಳ್ಳದ ಹೊರತು, ಅರಗಿಸಿಕೊಳ್ಳದ ಹೊರತು, ಹೊಸ ಸೃಷ್ಟಿಕಡೆ ಕೈ ಚಾಚುವುದು ಎಷ್ಟರಮಟ್ಟಿಗೆ ಸರಿ?ಚಂಪೂಪ್ರಕಾರವನ್ನು ಸಾರಾಸಗಟಾಗಿ ತಿರಸ್ಕರಿಸಿ, ಅದರ ಸಂಸ್ಕೃತಭೂಯಿಷವಿ ವಾತಾವರಣ ದಿಂದ ಹೊರಬಂದು, ರಗಳೆ- ಷಟ್ಪದಿ ಪ್ರಕಾರಗಳ ಮೂಲಕ ಹೊಸವಾತಾವರಣವನ್ನು ಆವಿಷ್ಕರಿಸಿದ ಹರಿಹರ, ರಾಘವಾಂಕ, ಕುಮಾರವ್ಯಾಸರಂಥ ಮಹಾನ್ ಕವಿಗಳಿಗೆ ಜನ್ಮ ನೀಡಿದ ಈ ನೆಲದಲ್ಲಿಯೇ, ನಾವು ನೀವೆಲ್ಲ ಜನ್ಮ ಪಡೆದಿದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಮನುಜರ ಮೇಲೆ, ಸಾವವರ ಮೇಲೆ, ಕನಿಷವಿರ ಮೇಲೆ ಕಾವ್ಯಗಳನ್ನು ಸೃಷ್ಟಿಸಿದವರು, ನಮ್ಮ ನಿಮ್ಮ ಪೂರ್ವಿಕರ ನಡುವೆ ಇದ್ದರು. ಒಬ್ಬ ಬೆಸ್ತ, ಒಬ್ಬ ಒಕ್ಕಲಿಗ, ಒಬ್ಬ ಕುಂಬಾರ, ಒಬ್ಬ ಅಸಗರಂಥವರನ್ನು ತಮ್ಮ ಕಾವ್ಯಗಳಿಗೆ ಕಥಾನಾಯಕರನ್ನಾಗಿ ಮಾಡಿಕೊಂಡಿದ್ದಂಥವರು; ಆ ಮೂಲಕ ಇಡೀ ಶ್ರಮಿಕವರ್ಗದ ಬಗ್ಗೆ ಸಶಕ್ತವಾಗಿ ಮಾತಾಡಿದಂಥವರು; ಅಡ್ಡಾಡಿದ ಈ ಕೆಂಪು ನೆಲದ ಮೇಲೆ ಹತ್ತು ಜಿಲ್ಲಾ ಸಮ್ಮೇಳನಗಳೂ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳೂ ನಡೆದಿರುವುದು, ಯಾವುದೇ ಲೇಖಕನನ್ನು ರೋಮಾಂಚನ ಗೊಳಿಸುವಂಥ ಸಂಗತಿ. ಸಾಹಿತ್ಯ ಸಮ್ಮೇಳನಗಳಲ್ಲಿ ಹಾಜರಿರುವ ಕನ್ನಡಿಗರು, ಕನ್ನಡ ಸಾಹಿತ್ಯ ಪರಂಪರೆ ಪ್ರವಾಹದ ಒಂದು ಭಾಗವಾಗುವುದು ಬಹುಮುಖ್ಯ. ಸಾಹಿತ್ಯ ಸಮ್ಮೇಳನದ ಪುಸ್ತಕದ ಅಂಗಡಿಗಳಲ್ಲಿ ಕಾಲಿರಿಸುವ ಸಾಹಿತ್ಯಾಬಿsಮಾನಿ ಪಾಕಶಾಸ್ತ್ರಕ್ಕೆ ಸಂಬಂದಿsಸಿದ ಅಥವಾ ಕಂಪ್ಯೂಟರ್ ವಿeನಕ್ಕೆ ಸಂಬಂದಿsಸಿದ ಪುಸ್ತಕಗಳನ್ನು ಖರೀದಿಸುವುದ ಕ್ಕಿಂತ ಮೊದಲು, ರಾಘವಾಂಕನ ’ಹರಿಶ್ಚಂದ್ರ ಕಾವ್ಯ’ವನ್ನು ಖರೀದಿಸಿದನೆಂದರೆ, ಸಮ್ಮೇಳನದ ಸಾಹಿತ್ಯಿಕ ಸಂವಾದ ಸಾರ್ಥಕವಾದಂತೆಯೇ ಲೆಕ್ಕ. ಹಾಗೆಯೇ ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್‌ರವರ ಕೃತಿಗಳು ಪುಸ್ತಕದಂಗಡಿಗಳಲ್ಲಿ ಮೊದಲ ಸಾಲಲ್ಲಿ ಎದ್ದುಕಾಣುವಂತಿದ್ದರೆ, ಆ ಸಮ್ಮೇಳನದ ಸಂವಾದಗಳು ಸಾರ್ಥಕವಾದಂತೆಯೇ. ಇವೆಲ್ಲ ಸಫಲವಾಗಬೇಕಾದಲ್ಲಿ ಸಮ್ಮೇಳನಗಳು ಲೇಖಕನನ್ನು ಓದುಗ ನೊಂದಿಗೆ, ಓದುಗನನ್ನು ಲೇಖಕನೊಂದಿಗೆ, ಲೇಖಕ ಓದುಗರಿಬ್ಬರನ್ನೂ ಸಮಾಜದೊಂದಿಗೆ ಬೆಸೆಯುವ ಕೆಲಸವನ್ನು ಮಾಡಬೇಕು ಎಂಬುದು ನನ್ನ ಅಬಿsಪ್ರಾಯ. ಹೀಗಾದಾಗ ಯಾವುದೇ ಒಂದು ಸಾಹಿತ್ಯಿಕ ಕೃತಿ ಆಂಟೀನಾ ಆಗುತ್ತದೆ, ರಿಸೀವರ್ ಆಗುತ್ತದೆ. ಫ್ರಾನ್ಸ್, ರಷ್ಯಾ, ಚೀನಾ, ಲ್ಯಾಟಿನ್ ಅಮೇರಿಕ, ಆಪಿsಕಾ ರಾಷ್ಟ್ರಗಳಲ್ಲಿನ ಸಾಹಿತ್ಯವು, ಹೊಸ ಸಮಾಜದ ನಿರ್ಮಾಣಕ್ಕೆ ಸಂಬಂದಿsಸಿ ದಂತೆ ಯಾವ ಮೌಲಿಕ ಪಾತ್ರ ವಹಿಸಿತೋ, ಅಂಥ ಬದಲಾವಣೆ ನಮ್ಮ ಸಾಮಾಜಿಕ ಪರಿವೇಷ ದೊಳಗೂ ಆಗುತ್ತದೆ ಎಂಬುದು ನನ್ನ ಭಾವನೆ.

ಇಂಥ ಅಪರೂಪದ ಆಲೋಚನೆಗೆ, ಸೃಷ್ಟಿಗೆ ಅಗತ್ಯವಾದ ಸಾಮಾಜಿಕ ಸಾಹಿತ್ಯಿಕ ಸಂಪನ್ಮೂ ಲಗಳಿಗೆ ಭಾರತೀಯ ಸಂದರ್ಭದಲ್ಲಿ ಕೊರತೆ ಇಲ್ಲ. ಇಲ್ಲಿನ ಇತಿಹಾಸಕ್ಕೆ ಸಂಬಂದಿsಸಿದ ಅವಶೇಷಗಳು, ಅತ್ಯದ್ಭುತ ಸ್ಮಾರಕಗಳು, ಪುರಾಣ ಪುಣ್ಯ ಕಥೆಗಳು, ಬೆಟ್ಟಗುಡ್ಡ ನದಿಗಳಿತ್ಯಾದಿ ಗಳು, ಯಾವ ರೀತಿ ಅಂತಾರಾಷ್ಟ್ರೀಯವಾಗಿ ವಿಸ್ಮಯಗೊಳಿಸುತ್ತಿರುವವೋ; ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಜಾತಿವ್ಯವಸ್ಥೆ ವರ್ಗವ್ಯವಸ್ಥೆಗಳೂ ಸಾಮಾಜಿಕ ವ್ಯತ್ಯಾಸಗಳೂ ಅಂತಾರಾಷ್ಟ್ರೀಯವಾಗಿ ಅಚ್ಚರಿಪಡಿಸುತ್ತವೆ. ನಮ್ಮಲ್ಲಿನ ಅಸಮಾನತೆಯೇ, ಅಂತಾರಾಷ್ಟ್ರೀಯ ಮಟ್ಟದ ಕಾಂಗರೂ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಭಾರತಾಂಬೆಯ ತನುಜಾತೆ ಯಾದ ಕರ್ನಾಟಕವಾಗಲೀ ಭಾರತಾಂಬೆಯ ಅಸಂಖ್ಯಾತ ಮೊಮ್ಮಕ್ಕಳ ಪೈಕಿ ಒಂದಾದ ನಮ್ಮ ಬಳ್ಳಾರಿ ಜಿಲ್ಲೆಯಾಗಲೀ ಹೊರತಾಗಿಲ್ಲ ಎಂಬುದು, ಯಾವುದೇ ಲೇಖಕನಿಗೆ ಸಂತೋಷತರುವಂಥ ವಿಷಯ. ’ಸಂತೋಷ’ ಎಂಬ ಪದವನ್ನು ನಾನಿಲ್ಲಿ ಯಾಕೆ ಸೇರಿಸು ತ್ತಿರುವೆನೆಂದರೆ, ಸೃಜನಶೀಲ ಕ್ರಿಯೆಗೆ ಅಬಿsವ್ಯಕ್ತಿ ಆಲೋಚನಾಕ್ರಮಕ್ಕೆ ಪೂರಕವಾದ ಸಾಮಾಜಿಕ ಪರಿಸರ ನಮ್ಮ ಜಿಲ್ಲೆಯಲ್ಲಿದೆ. ಯಾವ ರೀತಿ ರಷ್ಯಾದ ತಳಮಳ ಅನುಭವಿಸ ದಿದ್ದಲ್ಲಿ ಒಬ್ಬ ಮನುಷ್ಯ ದಾಸ್ತೋವಸ್ಕಿಯಾಗಲೀ ಮ್ಯಾಕ್ಸಿಂ ಗಾರ್ಕಿಯಾಗಲೀ; ಯಾವ ರೀತಿ ಆಪಿsಕಾದ ದಾಸ್ಯ ಅನುಭವಿಸದಿದ್ದಲ್ಲಿ ಒಬ್ಬ ಮನುಷ್ಯ ವೊಲೆಸೊಯಿಂಕನಾಗಲೀ ಚಿನುವಾ ಅಚುಬೆಯಾಗಲೀ; ಯಾವ ರೀತಿ ಅರ್ಜೈಂಟೈನಾ, ಚಿಲಿ, ಕ್ಯೂಬಾ ಮೆಕ್ಸಿಕೋಗಳ ಅಮಾನುಷವಾದ ಜೀತವ್ಯವಸ್ಥೆ ಯನ್ನು ಅನುಭವಿಸದಿದ್ದಲ್ಲಿ ಒಬ್ಬ ಮನುಷ್ಯ ಗ್ಯಾಬ್ರಿಯಲ್ ಮಾರ್ಕ್ವೆಜ್‌ನಾಗಲೀ ಚೆಗುವಾರಾನಾಗಲೀ ಆಗುತ್ತಿರಲಿಲ್ಲವೋ, ಅದೇ ರೀತಿ, ಈ ಜಿಲ್ಲೆಯ ಹಗರಿಸಾಲಿನ ಕುಗ್ರಾಮಗಳಲ್ಲಿ ಜೀವಿಸದಿದ್ದಲ್ಲಿ, ಒಬ್ಬ ಮನುಷ್ಯನಾದ ನಾನು, ಕುಂ. ವೀರಭದ್ರಪ್ಪನಾಗುತ್ತಿರಲಿಲ್ಲ. ರಷ್ಯಾ, ಚೀನಾ, ಲ್ಯಾಟಿನ್ ಅಮೆರಿಕ ಮತ್ತು ಆಪಿsಕನ್ ರಾಷ್ಟ್ರಗಳಲ್ಲಿರುವಂಥ ಸಾಹಿತ್ಯಿಕ ಸಂಪನ್ಮೂಲಗಳೂ ಸಾಮಾಜಿಕ ವ್ಯವಸ್ಥೆಯೂ ನಮ್ಮ ಜಿಲ್ಲೆಯ ಪೂರ್ವಭಾಗದ ಗ್ರಾಮಗಳಲ್ಲಿವೆ. ಆ ಪ್ರದೇಶದಲ್ಲಿರುವ ಭಾಷೆ, ಆ ಭಾಷೆ ಯನ್ನಾಡುವ ಮಂದಿ, ಆ ಮಂದಿ ಬದುಕುತ್ತಿರುವ ಜೀವನಶೈಲಿ, ಜೀವನೋತ್ಸಾಹ -ಈ ಎಲ್ಲವೂ ನಿಜವಾದ ಯುನಿವರ್ಸಿಟಿಯ ಫ್ಯಾಕಲ್ಟಿಗಳೇ! ಆ ಎಲ್ಲ ಫ್ಯಾಕಲ್ಟಿಗಳು ನನ್ನಂಥ ಮನುಷ್ಯನನ್ನು ಲೇಖಕನನ್ನಾಗಿ ಪರಿವರ್ತಿಸು ತ್ತವೆ. ನನ್ನಂಥ, ನನಗಿಂತ ಮಿಗಿಲಾದ ನೂರಾರುಮಂದಿ ಮನುಷ್ಯರನ್ನು ಲೇಖಕರನ್ನಾಗಿ ಮಾಡುವ ಶಕ್ತಿ, ಮಾಂತ್ರಿಕ ಗುಣ, ನಮ್ಮ ಜಿಲ್ಲೆಯ ಮಣ್ಣಿನದು. ಅದಕ್ಕಾಗಿ ಈ ನನ್ನ ಜಿಲ್ಲೆಗೆ ಕೈ ಎತ್ತಿ ಮುಗಿಯುವೆ.
ನಾನು ನನ್ನ ಜಿಲ್ಲೆಯ ಸಾಹಿತ್ಯ ಪ್ರವಾಹದ ಒಂದು ಬಿಂದು ಮಾತ್ರ. ಲಿಖಿತ ಮತ್ತು ಮೌಖಿಕ ಪರಂಪರೆಯ ನೂರಾರು ಮಂದಿ ಸೃಜನಶೀಲ ಪ್ರತಿಭೆಗಳಿಗೆ ಜನ್ಮ ನೀಡುತ್ತಿರುವ ಗಂಗೋತ್ರಿ, ನಾಡಿನ ಎಲ್ಲ ಕಡೆಗಿರುವಂತೆಯೆ ನನ್ನ ಜಿಲ್ಲೆಯಲ್ಲೂ ಇದೆ- ಎಂದು ಆತ್ಮವಿಶ್ವಾಸ ದಿಂದ ಹೇಳಬಯಸುತ್ತೇನೆ. ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸರೇ ಮೊದಲಾದ ಆದಿವಂದ್ಯರಿಂದ ಆರಂಭಗೊಂಡ ಸಾಹಿತ್ಯ ಸ್ರವಂತಿಯ ಶಾಖೋಪಶಾಖೆಗಳು, ನಮ್ಮ ಜಿಲ್ಲೆಯ ಮೂಲೆಗೂ ಹರಡಿವೆ. ನಮ್ಮ ಜಿಲ್ಲೆಯ ಗ್ರಾಮೀಣ ಅಕ್ಷರಸ್ಥ, ಕಾವ್ಯವನ್ನು ಗಂಟಲಲ್ಲಿ ಪ್ರತಿಷಾವಿಪಿಸಿಕೊಂಡು ಬೀಗುತ್ತಿದ್ದಾನೆ. ಸಾಹಿತ್ಯದ ಪರಿಭಾಷೆಯಲ್ಲಿ ಮಾತಾಡಲು ಪ್ರಯತ್ನಿಸುತ್ತಿದ್ದಾನೆ. ಗ್ರಾಮೀಣ ನೋವು ನಲಿವುಗಳನ್ನು ಸಾರ್ವತ್ರೀಕರಿಸಲು ಪ್ರಯತ್ನಿಸುತ್ತಿ ದ್ದಾನೆ. ನನ್ನ ಜಿಲ್ಲೆಯ ಲೇಖಕ, ಎಲ್ಲೂ ಬೌದ್ಧಿಕ ಕಸರತ್ತುಗಳನ್ನು ತೋರಿಸುತ್ತಿಲ್ಲ. ಪೋಜು ಕೊಡುತ್ತಿಲ್ಲ. ಕೆಲವು ಕಡೆ ಯಶಸ್ವಿಯಾಗಿದ್ದಾನೆ; ಕೆಲವು ಕಡೆ ವಿಫಲನಾಗಿದ್ದಾನೆ. ಸೃಜನಶೀಲತೆಗೆ ಸಂಬಂಧ ಪಟ್ಟಂಥ ಹೊಸ ಹೊಸ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾನೆ. ಸಚಿನ್‌ನಂತೆ ಸಿಕ್ಸರ್ ಎತ್ತಲು ಹೋಗಿ, ಔಟಾಗಿ ಪೆವಿಲಿಯನ್ ಕಡೆ ವಾಪಸ್ಸಾಗುತ್ತಿದ್ದಾನೆ.
ಶತಶತಮಾನಗಳ ಕಾಲ ಅಕ್ಷರeನದ ಸವಲತ್ತುಗಳಿಂದ ವಂಚಿತಗೊಂಡಂಥ ಪರಿಸರ ದಿಂದ ಬಂದಂಥ ವ್ಯಕ್ತಿ, ಅಕ್ಷರದ ಕಂದೀಲು ಹಿಡಿದು ಬರ್ಬರ ವರ್ತಮಾನ ನೋಡಿ, ಎಲ್ಲರಂತೆ ತಾನೂ ದಿಗ್ಭ್ನ್ರಮೆಗೊಂಡೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ! ಕೆರಳಿದೆ. ರಟ್ಟೆಯಲ್ಲಿಲ್ಲದ ಶಕ್ತಿಯನ್ನು ಆವೇಶದಿಂದ ಪೆನ್ನಿಗೆ ಆವಾಹಿಸಿಕೊಂಡೆ. ನಾಶವಾಗಿರುವ ಸಾಮಾಜಿಕ ಸೌಂದರ್ಯದ ಬಗ್ಗೆ, ಅಸಮಾನತೆ ಕುರಿತು ನವ್ಯೋತ್ತರದ ಸಿದ್ಧಮಾಪನಗಳ ಸಹಾಯದಿಂದ ಬರೆಯತೊಡಗಿದೆ. ಫ್ರಾಯ್ಡ್‌ನ ರಿಪ್ಲೇಸ್‌ಮೆಂಟ್ ಸಿದ್ಧಾಂತದಂತೆ, ಬಡತನ ನೋವು ಸಂಕಟಗಳಿಗೆ ಕವಿತೆಯ ಅಬಿsವ್ಯಕ್ತಿ ಕೊಡಲು ಪ್ರಯತ್ನಿಸಿದೆ. ಕೈಗೆಟುಕಿದ ಭಾಷೆಯನ್ನು ಶಾಪಗ್ರಸ್ತವಾಗಿ ಉಪಯೋಗಿಸತೊಡಗಿದೆ. ಸುಡುಸುಡುವ ಪೆಂಡೆ ಪೆಂಡೆ ಕವಿತೆಗಳನ್ನು ಕಂಕುಳಲ್ಲಿಟ್ಟುಕೊಂಡು ಕವಿಸಮ್ಮೇಳನಗಳಲ್ಲಿ ವಾಚಿಸತೊಡಗಿದೆ. ನಮ್ಮ ಈ ಕವಿ ವಯೋ ಸಹಜ ಭಾವನೆಗಳಿಗೆ ದೈಹಿಕವಾಗಿ ಮಾನಸಿಕವಾಗಿ ಸ್ಪಂದಿಸಿದ ನವ್ಯೋತ್ತರ ಸಂದರ್ಭದಲ್ಲಿ, ಎರಡು ಮೂರು ದಶಕಗಳ ಹಿಂದೆ ಹುಟ್ಟಿರುವ ನನ್ನ ಪ್ರೀತಿಯ ಈ ಜ್ವಾಲಾಮುಖಿಯಂಥ ಬರಹಗಾರ, ನಾಡಿನ ಹಲವುಕಡೆ ಇರುವಂತೆ ನನ್ನ ಈ ಜಿಲ್ಲೆಯಲ್ಲೂ ಇದ್ದಾನೆ. ಸಾಹಿತ್ಯಿಕ ಮತ್ತು ಸಾಮಾಜಿಕ ಚಳವಳಿಗಳು, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮ ಪ್ರೀತಿಯ ಯುವ ಬರಹಗಾರನ ಮೇಲೆ ಗಾಢ ಪರಿಣಾಮ ಬೀರಿವೆ.

ಇಂದಿನ ಸಂದರ್ಭದಲ್ಲಿ ಸಾಹಿತ್ಯದ ಸೃಷ್ಟಿ ಪ್ರತಿಭೆಗೆ ಸಂಬಂಧಪಟ್ಟಿದ್ದು. ಸಾಹಿತ್ಯ ಮುಖ್ಯವಾಗಿ ಸಾಮಾಜಿಕವಾದದ್ದು. ’ಅಪಾರೇ ಕಾವ್ಯಸಂಸಾರೇ ಕವಿರೇವಃ ಪ್ರಜಾಪತಿಃ’ ಎಂಬ ’ಧ್ವನ್ಯಾಲೋಕ’ದ ಮಾತಿನಂತೆ, ಸಾಹಿತಿಯೇ ನಿಜವಾದ ಸೃಷ್ಟಿಕರ್ತ. ’ಯಥಾಸ್ಮೈರೋಚತೇ ವಿಶ್ವಂ, ತಥೇದಂ ಪರಿವರ್ತತೆ.’ ಅವನು ವಿಶ್ವದ ಪರಿವರ್ತನೆಯನ್ನು ತನ್ನ ಸಾಹಿತ್ಯದಲ್ಲಿ ಪ್ರತಿಬಿಂಬಿಸುತ್ತಾನೆ. ಆದ್ದರಿಂದ ಸಾಹಿತ್ಯ ಸೃಷ್ಟಿಗೆ ಮೂಲಧನವಾದ ಪ್ರತಿಭೆಯನ್ನು ರೂಡಿsಸಿ ಕೊಳ್ಳುವುದು ಮುಖ್ಯ. ಆಧುನಿಕ ಆಲೋಚನೆಗಳ ಮೂಲಕ ಪುರಾಣ ಮತ್ತು ಇತಿಹಾಸಗಳನ್ನು ಶೋದಿsಸುವ ಅಗತ್ಯ ತುಂಬ ಇದೆ. ರೂತ್ವೆನ್ ಹೇಳುವಂತೆ ಲೇಖಕ ಕೇವಲ ’ಲಿವಿಂಗ್ ಫಾಸಿಲ್ಸ್’ ಆಗಬಾರದು. ಬೌದ್ಧಿಕ ಹೆಳವನಾಗಬಾರದು. ವರ್ತಮಾನದಲ್ಲಿದ್ದು ಕೊಂಡೇ ಪುರಾಣ, ಇತಿಹಾಸಗಳಲ್ಲಿ ವಿಹರಿಸಬೇಕು. ನಮ್ಮ ಸೃಜನಶೀಲಕ್ರಿಯೆಗೆ ಚಲನಶೀಲತೆಯ ನೋಟವನ್ನು ಅಳವಡಿಸಬೇಕು. ಫ್ರೆಂಚ್ ಆದರ್ಶಗಳಿಗೆ ಒತ್ತುಕೊಟ್ಟ ಜರ್ಮನ್ ಕವಿ ಹೆನ್ರಿಕ್ ಹೈನ್, ತನ್ನನ್ನು ತಾನು ದಿsರಯೋಧನೆಂದು ಕರೆದುಕೊಂಡಿದ್ದು ಇಂದು ಹೆಚ್ಚು ಪ್ರಸ್ತುತವಾಗಿ ಕಾಣುತ್ತದೆ. ಸಾಹಿತ್ಯವು ಸಾಮಾಜಿಕ ಬದಲಾವಣೆಗೆ ಸಂಬಂದಿsಸಿ ದಂಥ ಪ್ರಮುಖ ಆಯುಧವಾಗಬೇಕು. ’ಕಾವ್ಯಾನಂದವು ಬ್ರಹ್ಮಾನಂದದ ಸಹೋದರ’ ಎಂಬ ಮಾತು ವರ್ತಮಾನ ಸಂದರ್ಭದಲ್ಲಿ ನಮ್ಮಂಥವರಿಗೆ ಅನ್ವಯಿಸುವುದಿಲ್ಲ. ನಾವು ಬರೆಯುವ ಸಾಹಿತ್ಯ, ಶ್ರೀಮಂತರ ಪ್ರತಿಷೆವಿಯ ಪ್ರದರ್ಶನದ ಅಥವಾ ಶೋಕೇಸಿನ ಆಲಂಕಾರಿಕ ವಸ್ತುವಾಗ ಬಾರದು. ಸಾಹಿತ್ಯಾಧ್ಯಯನ, ಕೌಶಲ್ಯ, ಸಾಮಾಜಿಕ ಪ್ರeಯ ಜೊತೆಗೆ ಮನೋವಿeನ, ತಳಿಶಾಸ್ತ್ರ, ಜೀವವಿeನ, ಪರಿಸರ ವಿeನ, ಅಪರಾಧಶಾಸ್ತ್ರ- ಇತ್ಯಾದಿ eನಗಳ ಶಾಖೋಪಶಾಖೆಗಳನ್ನು ಅಧ್ಯಯನ ಮಾಡುವ ಅಗತ್ಯ ತುಂಬ ಇದೆ. ಸಾವಿರ ಕಣ್ಣು, ಸಾವಿರ ಕಿವಿ, ಸಾವಿರಸಾವಿರ ಬಾಯಿಗಳ ಮೂಲಕ ಲೇಖಕ ಮಾತಾಡುವ ಅಗತ್ಯ ತುಂಬ ಇದೆ.

ಲೇಖಕ ವಿರಾಟ್ ಸ್ವರೂಪ ಪ್ರಕಟಿಸುವುದಕ್ಕೆ ಭಾರತೀಯ ವರ್ತಮಾನ ಸಂದರ್ಭ ಹೇಳಿ ಮಾಡಿಸಿದಂತಿದೆ. ಮೂಲಭೂತವಾದಿಗಳು ಹಿಂದೆಂದಿಗಿಂತ ಹೆಚ್ಚು ವಿಜೃಂಬಿsಸುತ್ತಿ ದ್ದಾರೆ. ಅಲ್ಪಸಂಖ್ಯಾತರ ನೆಮ್ಮದಿಗೆ ಅಗ್ನಿಸ್ಪರ್ಶ ಮಾಡಲಾಗುತ್ತಿದೆ. ಪುರಾಣವನ್ನು ಭೂತವನ್ನು ಪುನರ್ ಪ್ರತಿಷಾವಿಪಿಸುವುದರ ಮೂಲಕ ವರ್ತಮಾನವನ್ನು ಕುರೂಪಗೊಳಿಸ ಲಾಗುತ್ತಿದೆ. ಮಾನವೀಯತೆಯನ್ನು ಗಲ್ಲಿಗೇರಿಸಲು ಎಲ್ಲ ಸಿದ್ಧತೆಯನ್ನು ಮಾಡಲಾಗುತ್ತಿದೆ. ಶ್ರಮ ಮತ್ತು ಬೆವರನ್ನು ವ್ಯವಸ್ಥಿತವಾಗಿ ದರೋಡೆ ಮಾಡುವ ನೀಚ ಕೃತ್ಯಗಳಿಗೆ, ಪಾವಿತ್ರ್ಯದ ಲೇಪನ ಬಳಿಯಲಾಗುತ್ತಿದೆ. ನೂರಾರು ದಾಸ್ತೋವಸ್ಕಿ- ಮಾರ್ಕ್ವೇಜುಗಳಿಗೆ ಜನ್ಮ ಕೊಡುವ ಶಕ್ತಿ, ಇಂಡಿಯಾದ ಪ್ರಸ್ತುತ ಸಂದರ್ಭಕ್ಕಿದೆ. ಒಬ್ಬ ವ್ಯಂಗ್ಯಚಿತ್ರಕಾರನನ್ನು, ಒಬ್ಬ ಪತ್ರಕರ್ತ ನನ್ನು, ಗ್ರಹಾಂ ಸ್ಟೈನನಂಥ ಕುಷ್ಟರೋಗಿಗಳ ಒಬ್ಬ ಸೇವಕನನ್ನು ಕೊಲ್ಲುವಂಥ ವ್ಯವಸ್ಥೆ, ನಮ್ಮ ಈ ಜಂಬೂದ್ವೀಪದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿದೆ. ಇಂಡಿಯಾದ ಬೌದ್ಧಿಕತೆಗೆ ಪ್ರತಿಭಟನೆಗೆ ವೈಚಾರಿಕತೆಗೆ ಕವಿದಿರುವ ಮಂಕಿನ ಬಗ್ಗೆ, ಇಲ್ಲಿ ಪ್ರಸ್ತಾಪಿಸುವುದು ಹೆಚ್ಚು ಸೂಕ್ತ ಎಂದು ನಾನು ಭಾವಿಸುತ್ತೇನೆ. ತುರ್ತುಪರಿಸ್ಥಿತಿ ಹಿಂದು ಮುಂದಿನ ದಿನಗಳಲ್ಲಿ, ಒಂದು ಬೆಲ್ಚಿಯ ಬಗ್ಗೆ, ಒಬ್ಬ ಅನಸೂಯಮ್ಮಳ ಸಾವಿನ ಬಗ್ಗೆ, ತಂಡೋಪತಂಡವಾಗಿ ಬೀದಿಗಿಳಿದು ಧ್ವನಿ ಎತ್ತುತ್ತಿದ್ದ ಲೇಖಕ, ಇಂದು ಅಂಥ ನೂರಾರು ಘಟನೆಗಳೂ ನಡೆಯುತ್ತಿ ದ್ದರೂ ಯಾಕೇಂತ ಪಂಚೇಂದ್ರಿಯಗಳನ್ನು ಬಂದ್ ಮಾಡಿಕೊಂಡು ನೆಮ್ಮದಿಯಿಂದ ಕೂತಿದ್ದಾನೆ? ಇದು ಈ ಸಂದರ್ಭದ ಯಕ್ಷಪ್ರಶ್ನೆ.

ನಮ್ಮ ಬಳ್ಳಾರಿ ಜಿಲ್ಲೆಯೊಳಗೂ ಒಂಚೂರು ಬಿಹಾರಿದೆ. ಒಂಚೂರು ಕಾರ್ಗಿಲ್ಲಿದೆ. ಒಂಚೂರು ತೆಲಂಗಾಣದ ಶ್ರೀಕಾಕುಳಂ ಇದೆ. ಅಲ್ಲದೆ ಚೂರುಪಾರು ಚಿಲಿ, ಕ್ಯೂಬಾ, ಮೆಕ್ಸಿಕೋ, ನೈಜೀರಿಯಾ, ಜಾಂಬಿಯಾಗಳಿವೆ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಚಳವಳಿಗಳೂ ನಮ್ಮ ಜಿಲ್ಲೆಯನ್ನೂ ಪ್ರವೇಶಿಸಿ, ’ಹಲೋ’ ಎಂದು ಮಾತಾಡಿಸಿ ಹೋಗಿವೆ. ೮-೧೦ ವರ್ಷಗಳ ಹಿಂದೆ ಯಾವ ಕವಿತೆಯನ್ನು ಹಿಡಿದುಕೊಂಡರೂ ಬೆರಳುಗಳಿಗೆ ರಕ್ತ ಹತ್ತಿದ ಅನುಭವವಾಗುತ್ತಿತ್ತು. ಯಾವ ಬರಹಗಾರನ ಹತ್ತಿರ ಮಾತಾಡಿದರೂ ಡೈನಾಮೈಟಿನೊಂದಿಗೆ ಮಾತಾಡಿದ ಅನುಭವವಾಗುತ್ತಿತ್ತು. ಈ ಬಗೆಯ ಎಷ್ಟೊಂದು ತಳಮಳ ತುಂಬಿಕೊಂಡಿದ್ದ ನಮ್ಮ ಜಿಲ್ಲೆ, ದರಿ ಮತ್ತು ಪುಲಿಗಳ ನಡುವೆ ಸೃಜನಶೀಲ ಸಂದಿಗ್ಧತೆಯನ್ನೂ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ನಮ್ಮ ಜಿಲ್ಲೆಯ ಲೇಖಕ ಸಂಕೋಚದ ಹಾಸಿಗೆ ಮೇಲೆ, ಕೀಳರಿಮೆಯ ಗೊಂಗಡಿಯನ್ನು ಹೊದ್ದು ಕೂತಿರುವುದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ಸಮ್ಮೇಳನಗಳು ಸಂವಾದಗಳು, ಆವರಿಸಿರುವ ಹೊಗೆಮಂಜನ್ನು ಹೊಡೆದೋಡಿಸು ವಂಥ ಇಂಧನಗಳನ್ನು ಅನ್ವೇಷಿಸುವ ಕೆಲಸ ಮಾಡಬೇಕು.
ಇನ್ನೇನು ಕೆಲವು ತಿಂಗಳಲ್ಲಿ ಮೊದಲಘಟ್ಟದ ಬಳಿ ತುಂಗಭದ್ರೆಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆಯಿಂದಾಗಿ ಕುಂತಳನಾಡಿನ ವಡ್ಡಾರಾಧನೆಗೂ ಭಾಮಿನಿ ಷಟ್ಪದಿಗೂ ಸಂಪರ್ಕ ಏರ್ಪಡಲಿರುವುದು ಸಂತೋಷದ ಸಂಗತಿಯಾಗಿದೆ. ಇಂಥ ಸಂದರ್ಭದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ್ಯ ಸ್ಥಾನದಲ್ಲಿ ಕಿರಿಯನಾದ ನನ್ನನ್ನು ಕೂಡ್ರಿಸಿರುವುದು ನಿಮ್ಮೆಲ್ಲರ ದೊಡ್ಡಗುಣ. ಇದರಿಂದಾಗಿ ನನ್ನಲ್ಲಿ ಉಡಾಳತನ ಕಡಿಮೆ ಯಾಗಿದೆ. ಸಜ್ಜನಿಕೆ ಮತ್ತು ವಿನಯ ಮೊಳಕೆ ಚಾಚುತ್ತಿದೆ. ಸಾಹಿತ್ಯಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ನನ್ನ ಮುಂದಿನ ದಿನಗಳ ಬಗ್ಗೆ ನೀವೆಲ್ಲರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವಿರಿ. ನಿಮ್ಮ ನಿರೀಕ್ಷೆಯನ್ನು ಈಡೇರಿಸಲು ಸೃಜನಶೀಲವಾಗಿ ಪ್ರಯತ್ನಿಸುವೆ ಎಂದು ವಿನಯಪೂರ್ವಕವಾಗಿ ತಮ್ಮಲ್ಲಿ ಹೇಳಿಕೊಳ್ಳುತ್ತ ನನ್ನ ಮಾತುಗಳನ್ನು ಮುಗಿಸುತ್ತಿ ರುವೆ.
(೧೯೯೮)

ರಹಮತ್ ತರೀಕೆರೆ ಅವರ ಟಿಪ್ಪಣಿ:

ಹೆಸರಾಂತ ಕತೆಗಾರರಲ್ಲಿ ಒಬ್ಬರಾಗಿರುವ ಕುಂವೀ (೧೯೫೩) ಅವರ ಹೆಚ್ಚಿನ ಕತೆಗಳ ವಸ್ತು, ಹಳ್ಳಿಗಾಡಿನ ಭೂಮಾಲಿಕ ವ್ಯವಸ್ಥೆಯಲ್ಲಿ ಸಿಲುಕಿರುವ ಜನಸಮುದಾಯದ ಜೀವನವಾಗಿದೆ. ತಾವು ಕತೆಗಾರರಾಗಲು ’ಶಿಲಾಯುಗ’ದ ಹಳ್ಳಿಗಳ ಪರಿಸರವೇ ಕಾರಣವೆಂದು ನಂಬಿಕೆ ಕುಂವಿಗೆ. ಒಬ್ಬ ಲೇಖಕನಾಗಲು ಏನೇನು ಸಂಗತಿಗಳು ಹಿನ್ನೆಲೆಯಲ್ಲಿ ದುಡಿದಿರುತ್ತವೆ ಎಂದು ಆಶ್ಚರ‍್ಯವಾಗುತ್ತದೆ. ಬಡತನದ ಬಾಲ್ಯ, ಆಧುನಿಕ ಶಿಕ್ಷಣ, ವಾಸಿಸುವ ಕುಗ್ರಾಮಗಳು, ಸಂಪರ್ಕಕ್ಕೆ ಬಂದ ಚಳುವಳಿಗಳು, ಜಗತ್ತಿನ ದೊಡ್ಡ ಲೇಖಕರು ಬರೆದ ಸಾಹಿತ್ಯದ ಓದು, ದೇಶ ಎದುರಿಸಿದ ಬಿಕ್ಕಟ್ಟುಗಳು. ಕನ್ನಡ ಲೇಖಕರ ಪ್ರೇರಣೆಗಳ ಸಂಕೀರ್ಣ ಹಿನ್ನೆಲೆಯನ್ನು ಚಿತ್ರಿಸುವ ಈ ಲೇಖನ ಕುತೂಹಲಕರವಾಗಿದೆ.

ತಮಗೆ ಪ್ರೇರಕವಾದ ಅನೇಕ ಸಂಗತಿಗಳನ್ನು ಕುರಿತು ಹೇಳಿದರೂ ಆಂಧ್ರದ ಹಳ್ಳಿಗಳ ಪರಿಸರಕ್ಕೆ ವಿಶೇಷ ಆದ್ಯತೆಯನ್ನು ಕುಂವೀ ನೀಡಿದ್ದಾರೆ. ಅಂದರೆ ಜನಸಮುದಾಯದ ಭಾಗವಾಗಿ ಬದುಕುವ ಲೇಖಕರು ಆ ಪರಿಸರದಿಂದ ಕಲಿಯುವ ಮತ್ತು ಬೆಳೆಯುವ ಸಾಧ್ಯತೆಯನ್ನು ಹೇಳುವುದು ಇಲ್ಲಿನ ವಾದವಾಗಿದೆ. ಪಾಂಡಿತ್ಯ ಪ್ರತಿಭೆಗಳಿಗಿಂತ ಲೇಖಕರನ್ನು ರೂಪಿಸುವುದು ಅವರು ಹಾಯುವ ಅಪರೂಪದ ಅನುಭವ ಜಗತ್ತಿನಿಂದ ಎಂದು ಹೇಳುವುದು; ’ಶಿಲಾಯುಗದ ಹಳ್ಳಿ’ಯ ಅನುಭವಗಳೇ ತಮ್ಮನ್ನು ಲೇಖಕನ್ನಾಗಿ ಮಾಡಿದವು ಎಂಬುದನ್ನು ಹೇಳುವಾಗ ಕಾಣುವ ಅಬಿsಮಾನ ಸಂತೋಷ ಖಚಿತತೆ ಗಮನಿಸಬೇಕು. ಆ ಹಳ್ಳಿಗಳನ್ನು ಅವರು ’ವಿಶ್ವವಿದ್ಯಾಲಯಗಳು’ ಎನ್ನುತ್ತಾರೆ. ಅಲ್ಲಿನ ಜನರನ್ನು ’ಗುರುಗಳು’ ಎಂದು ಕರೆಯುತ್ತಾರೆ. ಇದೊಂದು ಬಗೆಯಲ್ಲಿ ಉದ್ದೇಶಪೂರ್ವಕ ಅನುಭವ ವಾದಿ ಮೀಮಾಂಸೆ. ಆದರೆ ಕೇವಲ ಅನುಭವಗಳೇ ಲೇಖಕರನ್ನು ರೂಪಿಸುವುದಿಲ್ಲ. ಹೀಗಾಗುವು ದಿದ್ದರೆ ಈ ಅನುಭವಗಳ ಭಾಗವಾಗಿರುವ ಜನರೇ ದೊಡ್ಡ ಲೇಖಕರಾಗಿರುತ್ತಿದ್ದರು. ಈ ಅನುಭವಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ’ವಸ್ತು’ವನ್ನಾಗಿ ಒಳಗೆ ಸ್ವೀಕರಿಸುವ ಹಾಗೂ ಅವನ್ನು ಕಲೆಯ ರೂಪಾಂತರದಲ್ಲಿ ಕತೆಯನ್ನಾಗಿ ಅಬಿsವ್ಯಕ್ತಿ ಮಾಡುವ ಕ್ರಿಯೆಗಳು ಇಲ್ಲಿ ಸಂಭವಿಸಿವೆ. ಇವು ಬಂದಿದ್ದು ಲೇಖಕರಲ್ಲಿರುವ ’ಹೊರ’ಗಿನ ಪ್ರe ಕುಶಲತೆಯಿಂದ. ಈ ಪ್ರe ಬಂದಿದ್ದು ಆಧುನಿಕ ಶಿಕ್ಷಣದಿಂದ; ಪಡೆದ ಅನುಭವ ಕಲೆಯಾಗುವ ನಡುವಿನ ಸಂಕೀರ್ಣವಾದ ಸಂಘರ್ಷಗಳನ್ನು ಲೇಖನವು ಉತ್ಪ್ರೇಕ್ಷಿತ ಶೈಲಿಯಲ್ಲಿ ಕೊಂಚ ಸರಳೀಕರಿಸಿ ಚಿತ್ರಿಸುತ್ತಿದೆ.

ಕೆಲವು ಬಾರಿ ನಮ್ಮ ’ದೇಶೀ’ ಲೇಖಕರು ನಾಗರಿಕ ಸಮಾಜದ ಕೃತಕತೆ ಶಿಷ್ಟತೆಗಳನ್ನು ಟೀಕಿಸಲು ಗ್ರಾಮೀಣ ಬದುಕನ್ನು ವೈಭವೀಕರಿಸುವುದುಂಟು. ಅಂತಹ ಅಂಶ ಇಲ್ಲೂ ಕೆಲಸ ಮಾಡಿದಂತಿದೆ. ಅನುಭವವಾದದ ಸಮಸ್ಯೆಯೆಂದರೆ, ಒಳ್ಳೇ ಲೇಖಕರು ಹುಟ್ಟಲು ಅಪರೂಪದ ಅನುಭವ ಕೊಡುವ ಸಾಮಾಜಿಕ ಪರಿಸ್ಥಿತಿಯ ಅಗತ್ಯವಿದೆ ಎಂಬ ಅರ್ಥ ಬರುವಂತೆ ವಾದಿಸುವುದು. ಈ ದಾರುಣ ಜೀವನಸ್ಥಿತಿ ಚಾರಿತ್ರಿಕವಾಗಿ ಯಾಕೆ ಬಂತು. ಇದರ ವಿರುದ್ಧ ಅಲ್ಲಿನ ಜನ ಹೇಗೆ ಪ್ರತಿರೋಧ ಮಾಡುತ್ತಿದ್ದಾರೆ ಅಥವಾ ಇಂತಹ ಪರಿಸ್ಥಿತಿ ಬದಲಾಗಲು ಏನು ಮಾಡಬೇಕಾಗಿದೆ -ಮುಂತಾದ ಪ್ರಶ್ನೆಗಳಿಗಿಂತ, ಇಂತಹ ಅಪರೂಪದ ಜಗತ್ತಿನಲ್ಲಿ ತಾನು ಇದ್ದು ಬಂದಿರುವ ಹೆಮ್ಮೆಯೇ ಮುಖ್ಯವಾಗಿ ಬಿಡುವ ರೀತಿ ಇಲ್ಲಿನದು. ಈ ತರ್ಕದ ಒಳಗೇ ಇದ್ದು ’ಅನುಭವವನ್ನು ಪಡೆದು ಲೇಖಕರಾಗುವವರು, ಪ್ರತಿಯಾಗಿ ಆ ಪರಿಸರಕ್ಕೆ ಕೊಟ್ಟದ್ದೇನು ಎಂಬ ಪ್ರಶ್ನೆ ಕೇಳಿಕೊಂಡರೆ’, ಅನುಭವವಾದದ ಮಿತಿಗಳು ಹೊಳೆಯುತ್ತವೆ. ವರ್ತಮಾನದ ಬಿsಕರ ವಾಸ್ತವದೊಂದಿಗೆ ಬದುಕುವುದು ಲೇಖಕನಿಗೆ ಮುಖ್ಯ ಎಂದು ಹೇಳುತ್ತಾ, ಕುಂವಿ ಜಗತ್ತಿನ ಅನೇಕರು ಚಾರಿತ್ರಿಕ ಇಕ್ಕಟ್ಟುಗಳಲ್ಲಿ ಬದುಕಿದ್ದೇ ಅವರು ಲೇಖಕರಾಗಲು ಕಾರಣ ಎನ್ನುತ್ತಾರೆ. ಈ ಉದಾಹರಣೆ ತಾವು ಆಂಧ್ರದ ಭೂಮಾಲೀಕರ ಆಳ್ವಿಕೆಯಿರುವ ಹಳ್ಳಿಗಳಲ್ಲಿ ಬದುಕಿದ್ದೇ ಲೇಖಕರಾಗಲು ಕಾರಣ ಎನ್ನುವುದಕ್ಕೆ ಸಮೀಕರಣಗೊಳ್ಳುತ್ತದೆ. ಆದರೆ ಲೇಖನ ಉಲ್ಲೇಖಿಸುವ ಲೇಖಕರು ತಾವು ಬದುಕಿದ್ದ ವಾತಾವರಣವನ್ನು ಬದಲಿಸಲು ಹೋರಾಟ ಮಾಡುತ್ತ ಅನುಭವ ಗಳಿಸಿದವರು.

ಲೇಖಕರು ತಮ್ಮ ಪ್ರದೇಶದ ಚರಿತ್ರೆಯ ಪ್ರe ಹೊಂದಿರಬೇಕು. ಜನರಿಗೆ ಇತಿಹಾಸ ಪ್ರe ಮೂಡಿಸುವುದು ಲೇಖಕನ ಜವಾಬ್ದಾರಿ, ಎಂಬ ಅಬಿsಪ್ರಾಯಗಳು ಇಲ್ಲಿ ಬಂದಿವೆ. ಕುಂವಿ ಇತಿಹಾಸದ ವಿವರಗಳನ್ನು ಪ್ರಾಂತೀಯ ಅಬಿsಮಾನದಿಂದ ಮಂಡಿಸುವುದನ್ನು ನೋಡಿದರೆ, ಲೇಖಕರು ಇತಿಹಾಸ ಅರಿಯುವ ಪ್ರಯೋಜನದ ಬಗ್ಗೆ ಅನುಮಾನ ಹುಟ್ಟುತ್ತದೆ. ಫ್ಯೂಡಲಿಸಂ ಮಾಡುವ ದಮನಗಳ ಅರಿವುಳ್ಳ ಲೇಖಕರಂತಹ ತನ್ನನ್ನು ಕುಮಾರವ್ಯಾಸ ಹರಿಹರ ರಾಘವಾಂಕ ಜನತೆಯ ಕವಿಗಳ ಜತೆ ಗುರುತಿಸಿಕೊಳ್ಳುವುದು ಸರಿ. ಆದರೆ ಶಾಸನ ಕವಿಗಳ ಬಗ್ಗೆ ಹೇಳುವಾಗ ಅವರು ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗಿದ್ದರು ಎಂಬುದನ್ನು ಮರೆತುಬಿಡುವುದು ಸೋಜಿಗ. ಈಗಿನ ಭೂಮಾಲೀಕ ವ್ಯವಸ್ಥೆಯ ಬೇರುಗಳು ಇದೇ ಚರಿತ್ರೆಯ ನೆಲದೊಳಗಿರಬಹುದಲ್ಲವೇ? ಸಾಹಿತ್ಯ ಸಮ್ಮೇಳನದ ಭಾಷಣವಾಗಿರುವುದರಿಂದ ಮಾತುಗಳು ಅಬಿsಮಾನ ಸಹಜವಾಗಿ ಬಂದಿವೆ ಎನ್ನಬಹುದು. ಆದರೆ ತನ್ನ ನೆಲದ ಬಗ್ಗೆ ಅಬಿsಮಾನ ತಾಳುವುದು ಮುಖ್ಯ ಎನ್ನುವುದು ನಿಜವಾಗಿಯೂ ಲೇಖಕನ ನಂಬಿಕೆಯೇ ಆಗಿದ್ದರೆ, ಅದೀಗ ವೈರುಧ್ಯ.

ಸಾಹಿತ್ಯ ಮತ್ತು ಓದುಗರ ಸಂಬಂಧದ ಬಗೆಗಿನ ಇಲ್ಲಿನ ಮಾತುಗಳು ಕೂಡ ಚರ್ಚಾಸ್ಪದವಾಗಿದೆ. ಒಬ್ಬ ಓದುಗ ಕಂಪ್ಯೂಟರ್ ಪುಸ್ತಕಕ್ಕಿಂತ ’ಹರಿಶ್ಚಂದ್ರ ಕಾವ್ಯ’ ಕೊಂಡರೆ, ಸಾಹಿತ್ಯಕ ಸಂವಾದ ಸಾರ್ಥಕವಾದಂತೆ ಎನ್ನುವುದು ಪಕ್ಕಾ ಸಾಹಿತ್ಯಕೇಂದ್ರಿತ ಆಲೋಚನೆಯಿಂದ ಹುಟ್ಟಿದ ಅಬಿsಪ್ರಾಯ. ಇದೇ ಲೇಖನದಲ್ಲಿ ಸಾಹಿತ್ಯ ಅಧ್ಯಯನಕಾರರು ಜೀವವಿeನ ಮುಂತಾದ ಸಾಹಿತ್ಯವಲ್ಲದ eನವನ್ನು ಅಧ್ಯಯನ ಮಾಡುವ ಅಗತ್ಯದ ಮಾತು ಬರುತ್ತದೆ. ಸಾಹಿತ್ಯ ಮತ್ತು ಸಮಾಜ ಬದಲಾವಣೆಯ ವಿಷಯದಲ್ಲಿ ಇಲ್ಲಿ ಅನೇಕ ಭಾವುಕ ಹೇಳಿಕೆಗಳಿವೆ. ಸಾಹಿತಿಯೇ ನಿಜವಾದ ಸೃಷ್ಟಿಕರ್ತ ಎಂಬ ಧ್ವನ್ಯಾಲೋಕದ ಮಾತನ್ನು ಒಪ್ಪಿಕೊಳ್ಳುವ ಲೇಖಕ, ಸೃಷ್ಟಿಶೀಲತೆಗೆ ಅನೇಕ ಆಯಾಮಗಳಿವೆ ಎಂಬುದನ್ನು ಮರೆಯುತ್ತಾರೆ. ಲೇಖಕರ ಆಕ್ಟಿವಿಸಂ ಬಗ್ಗೆ ನಂಬಿಕೆ ಇರುವ ಕುಂವೀ ಸಮಾಜದ ವರ್ತಮಾನದ ದುಸ್ಥಿತಿಯನ್ನು ಚಿತ್ರಿಸುವುದು, ಅದಕ್ಕೆ ಮಿಡಿಯದೆ ಇರುವ ಲೇಖಕರ ಬಗ್ಗೆ ವಿಷಾದ ಪಡುವುದು, ಬಂಡಾಯ ಸಾಹಿತ್ಯಮೀಮಾಂಸೆಯ ದೃಷ್ಟಿಕೋನದಿಂದ ಸಹಜವಾಗಿದೆ. ಆದರೆ ಹಿಂದುಳಿದ ಹಳ್ಳಿಗಳ ಮತ್ತು ಲೇಖಕನ ಸಂಬಂಧದ ವ್ಯಾಖ್ಯಾನಗಳು ಮಾತ್ರ ಸಮಸ್ಯಾತ್ಮಕ ವಾಗಿವೆ.