ಸೋಮವಾರ, ಆಗಸ್ಟ್ 5, 2013

ಪುಸ್ತಕ ಪ್ರೀತಿ ಬೆಳೆಸುವುದೇ ನಮ್ಮ ಕಾಯಕ

 
 
 
 ಸೌಜನ್ಯ:ಪ್ರಜಾವಾಣಿ
 
ಶಾಲೆ, ವಿದ್ಯುತ್, ಬಸ್ಸು ಇತ್ಯಾದಿ ನಾಗರಿಕ ಸವಲತ್ತುಗಳಿಲ್ಲದ ಅಕ್ಷರಶಃ ಕೊಂಪೆಯಲ್ಲಿ ಹುಟ್ಟಿ ಬೆಳೆದವನು ನಾನು. ನನ್ನ ತಂದೆ ಬೇಸಾಯಗಾರನಾಗಿದ್ದರೂ ಸದಾ ಸಾಧು-ಸನ್ಯಾಸಿಗಳ ಸಂಗದಲ್ಲಿರುತ್ತಿದ್ದ. ಸನ್ಯಾಸಿಯೊಬ್ಬ ಕಾಣಿಕೆಯಾಗಿ ನೀಡಿದ್ದ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕವೊಂದನ್ನು ನನ್ನ ತಂದೆ ಜಗುಲಿಯ ಮೇಲಿಟ್ಟು ದಿನಕ್ಕೆ ಎರಡು ಬಾರಿ ತಪ್ಪದೇ ಪೂಜಿಸುತ್ತಿದ್ದ. ದಿನಸಿ ಅಂಗಡಿಯವನು ಕಟ್ಟಿಕೊಟ್ಟ ಪೊಟ್ಟಣದ ಕಾಗದವನ್ನು ನನ್ನ ತಂದೆ ಆಗಾಗ ನನ್ನಿಂದ ಓದಿಸುತ್ತಿದ್ದರು.

ಅಕ್ಷರಲೋಕದ ಸಂಪರ್ಕವೇ ಇರದ ನನ್ನ ತಂದೆಯ ಇಂಥ ನಡೆಗಳಿಂದಾಗಿ ನನಗೆ ಅಕ್ಷರದ ಮೋಹ ಉಂಟಾಯಿತು. ಇದು ಖಚಿತರೂಪ ಪಡೆದದ್ದು ಹೊಸಪೇಟೆಯ ಹತ್ತಿರದ ರಾಮಸಾಗರದ ಹೈಸ್ಕೂಲು ಸೇರಿದಾಗ. ಈ ಊರಿನ ಸಮಾಜ ಸೇವಕ ತಳವಾರ ಶಂಕ್ರಪ್ಪನವರ ಮನೆ ವೈಚಾರಿಕ ಕೃತಿಗಳಿಂದ ತುಂಬಿರುತ್ತಿತ್ತು. ಲೇಖಕ, ಪತ್ರಕರ್ತ ಲಂಕೇಶರ ಉಗ್ರ ಅಭಿಮಾನಿಗಳಾಗಿದ್ದ ಈ ಕುಟುಂಬದವರು ನನಗೆ ಅಂದಿನ ದಿನಗಳಲ್ಲಿಯೇ ಹಲವು ಪುಸ್ತಕಗಳನ್ನು ಓದಿಸುತ್ತಿದ್ದರು. ತಲೆಬುಡ ಅರ್ಥವಾಗದ ನಾನು ಪುಸ್ತಕಗಳನ್ನು ಮುದ್ದಾಡುತ್ತಿದ್ದೆ. ಹೀಗೆ ಕ್ರಮೇಣ ಪುಸ್ತಕಗಳನ್ನು ಕಲೆ ಹಾಕುವುದನ್ನು ರೂಢಿಸಿಕೊಂಡೆ. ಹೀಗೆ ನನ್ನಲ್ಲಿ ಹುಟ್ಟಿಕೊಂಡಿತು ಪುಸ್ತಕಪ್ರೀತಿ.

ನನ್ನ ಮದುವೆಯಲ್ಲಿ ಬೀಗರು ಉಡುಗೊರೆಯಾಗಿ ಕೊಟ್ಟಿದ್ದ ಒಂದಿಷ್ಟು ಚಿನ್ನದ ಒಡವೆಗಳನ್ನು ಒತ್ತೆ ಇಟ್ಟು ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಇಳಿದೆ. ಹೀಗೆ ಶುರುವಾದ ಪುಸ್ತಕ ಪ್ರಕಟಣೆ ನಂತರ ಸಾತ್ವಿಕ ವ್ಯಸನದಂತೆ ನನ್ನನ್ನು ಬಿಡಲಾಗದಂತೆ ಅಂಟಿಕೊಂಡಿತು.

ಅಭಿರುಚಿಯ ಕಾರಣಕ್ಕಾಗಿ ಪುಸ್ತಕ ಪ್ರಕಾಶನ ಆರಂಭಿಸಿದರೂ, ಪುಸ್ತಕೋದ್ಯಮದ ಬದ್ಧತೆ, ಹೊಣೆಗಾರಿಕೆಯ ಅರಿವೂ ಇದೆ. ಪುಸ್ತಕಕ್ಕೆ ತೊಡಗಿಸಿರುವ ಹಣದ ಮೊತ್ತವನ್ನು ಮಾತ್ರ ನಾವು ನಿರೀಕ್ಷಿಸಿಸುತ್ತೇವೆಯೇ ಹೊರತು, ಇದನ್ನೊಂದು ವ್ಯವಹಾರ ಎಂದು ಭಾವಿಸಿಲ್ಲ. ಈವರೆಗೆ 80 ಪುಸ್ತಕಗಳನ್ನು ಪ್ರಕಟಿಸಿರುವ `ಪಲ್ಲವ ಪ್ರಕಾಶನ', ಮತ ಧರ್ಮ, ಜಾತಿ, ಹಿಂಸೆ ಇತ್ಯಾದಿ ಕೆಡುಕಿನ ಸಂಗತಿಗಳಿಂದ ಪಾರು ಮಾಡಿ ಜೀವಪರ ನಿಲುವನ್ನು ಸೃಜಿಸುವ ಬರಹಗಳಿಗೆ ಆದ್ಯತೆ ನೀಡುತ್ತದೆ.

ನಮ್ಮ ಪ್ರಕಟಣೆಗಳೇ ನಮ್ಮ ಧೋರಣೆಯನ್ನು ತೋರಿಸುತ್ತಿವೆ. ಹಿರಿಯ ಲೇಖಕರ ಕೃತಿಗಳ ಪ್ರಕಟಣೆಗೆ ತೋರುವ ಕಾಳಜಿ, ಉತ್ಸಾಹಗಳನ್ನೇ ಹೊಸ ಬರಹಗಾರರ ಕೃತಿಗಳ ಪ್ರಕಟಣೆಗೂ ತೋರಿಸಲಾಗುತ್ತದೆ. `ಕಾವ್ಯ'ವನ್ನು ಕೊಳ್ಳುವವರೇ ಇಲ್ಲ ಎಂದು ದೂರುತ್ತಿರುವ ದಿನಗಳಲ್ಲಿ ಅನೇಕ ಹೊಸಬರ ಸಂಕಲನಗಳನ್ನು ಪ್ರಕಟಿಸಿದ ಸಾಹಸವನ್ನು ಪಲ್ಲವ ತೋರಿಸಿದೆ.

ವಿಚಾರ, ವಿನ್ಯಾಸ, ಮುದ್ರಣ... ಹೀಗೆ ಅನೇಕ ಸಂಗತಿಗಳಿಂದಾಗಿ `ಪಲ್ಲವ'ದ ಪುಸ್ತಕಗಳು ಗಮನ ಸೆಳೆಯುತ್ತಿವೆ. ನಾವು ಪ್ರಕಟಿಸುವ ಪುಸ್ತಕಗಳ ವಿನ್ಯಾಸದ ಹಿಂದೆ ಲೇಖಕ, ಅನುವಾದಕ ಸುಜ್ಞಾನಮೂರ್ತಿಯವರ ಸೃಜನಶೀಲ ಶ್ರಮ ಕೆಲಸ ಮಾಡುತ್ತಿದೆ. ಮೂರು ಬಾರಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸೊಗಸಿನ ಕಾರಣಕ್ಕಾಗಿ ಪ್ರಶಸ್ತಿ ಪಡೆದದ್ದು ನಮಗೆ ಹೆಮ್ಮೆಯ ಸಂಗತಿ. ಇದನ್ನು ನಮ್ಮ ಪುಸ್ತಕಗಳ ಗುಣಮಟ್ಟವನ್ನು ಹೇಳುವ ಇನ್ನೊಂದು ಅಂಶ ಎಂದೇ ಹೇಳಬಹುದು.

ರಾಜಧಾನಿ ಬೆಂಗಳೂರಿನಿಂದ ದೂರ ಇರುವ ನಮ್ಮಂಥ ಪ್ರಕಾಶನಗಳಿಗೆ ಮಾರಾಟ ತುಸು ಕಷ್ಟದ ಕೆಲಸ. ಪುಸ್ತಕ ಮಾರಾಟಗಾರರನ್ನು ಸಂಪೂರ್ಣವಾಗಿ ನೆಚ್ಚಿಕೊಳ್ಳದ ನಾವು ನಾಡಿನ ತುಂಬ ಹರಡಿಕೊಂಡಿರುವ ಓದುಗರ ಬೇಡಿಕೆಗೆ ತಕ್ಷಣವೇ ಸ್ಪಂದಿಸುತ್ತೇವೆ.

ಪುಸ್ತಕಗಳನ್ನು ತಲುಪಿಸಲು ಕೊರಿಯರ್, ಅಂಚೆಯ ಖರ್ಚುಗಳನ್ನು ಓದುಗನಿಗೆ ಹೊರಿಸದೇ ಪ್ರಕಾಶನವೇ ಆ ಜವಾಬ್ದಾರಿಯನ್ನು  ನಿಭಾಯಿಸುತ್ತದೆ. ಸಾಧ್ಯವಾದಷ್ಟು ಓದುಗರ ಬೇಡಿಕೆಯನ್ನು ತಕ್ಷಣಕ್ಕೆ ಪೂರೈಸುತ್ತೇವೆ. ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ ದರದಲ್ಲಿ ಪುಸ್ತಕಗಳನ್ನು ನೀಡುವುದನ್ನು ನಾವು ನಮ್ಮ ಕರ್ತವ್ಯವೆಂದೇ ಭಾವಿಸಿದ್ದೇವೆ. ಈ ದಿಸೆಯಲ್ಲಿ ನಮಗೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿರುತ್ತವೆ. ಓದುಗರು ಎಲ್ಲಿದ್ದರೂ ಅವರಿಗೆ ಪುಸ್ತಕಗಳನ್ನು ಮುಟ್ಟಿಸುವುದು ನಮ್ಮ  ಮೊದಲ ಆದ್ಯತೆಯಾಗಿದೆ.

ಒಂದು ವರ್ಷದ ಅವಧಿಯಲ್ಲಿ ವಿಮರ್ಶೆ, ಕತೆ, ಕಾದಂಬರಿ, ಅನುವಾದ, ಸಂಪಾದನೆ... ಹೀಗೆ ಭಿನ್ನ ಬಗೆಯ ಪ್ರಕಾರಗಳಲ್ಲಿ ಕನ್ನಡದಲ್ಲಿ ಸುಮಾರು ಏಳು ಸಾವಿರ ಪುಸ್ತಕಗಳು ಮುದ್ರಣವಾಗುತ್ತವೆ ಎನ್ನುವ ಅಂದಾಜಿದೆ. ಆದರೆ ಹೀಗೆ ಪ್ರಕಟಗೊಂಡ ಬಹುಪಾಲು ಪುಸ್ತಕಗಳು ನೇರವಾಗಿ ಸರ್ಕಾರದ ಗ್ರಂಥಾಲಯ ಇಲಾಖೆಯ ಉಗ್ರಾಣ ಸೇರಿಕೊಳ್ಳುತ್ತವೆ.

ಓದುಗನಿಗೆ ಪುಸ್ತಕ ದೊರೆಯದ ಹೊರತು ಹೀಗೆ ಉಗ್ರಾಣಗಲ್ಲಿ ದೂಳು ತಿನ್ನುವ ಪುಸ್ತಕಗಳಿಂದ ಆಗುವ ಪ್ರಯೋಜವಾದರೂ ಏನು? ಮರುಮುದ್ರಣಗೊಂಡ ಪುಸ್ತಕಗಳ ಆಯ್ಕೆಯ ವಿಷಯದಲ್ಲಿ ಸದ್ಯ ಇರುವ ಗ್ರಂಥಾಲಯದ ನಿಯಮಗಳು ಬದಲಾಗಬೇಕಾಗಿದೆ. ಪುಸ್ತಕ ಪ್ರೀತಿಯ ಕಾರಣಕ್ಕಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶಕರನ್ನು ಸರ್ಕಾರ ಉದಾರವಾಗಿ ಪ್ರೋತ್ಸಾಹಿಸಬೇಕು.

ಹರೆಯದ ಓದುಗರು,ಕ್ರೈಂ, ಹಿಂಸೆ, ಸೆಕ್ಸ್‌ನಂಥ ಪುಸ್ತಕಗಳನ್ನು ಕೇಳಿಕೊಂಡು ಮಳಿಗೆಗಳಿಗೆ ಬರುತ್ತಾರೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪುಸ್ತಕ ಮಳಿಗೆ ತೆರೆದ ನಾನು ಅನುಭವಿಸಿದ ಸಂಕಟ ಇದು. ಮಾದಕತೆಯ ಓದಿನಿಂದ ಪಾರು ಮಾಡಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪುಸ್ತಕಗಳನ್ನು ನಾವು ನೀಡಬೇಕಾಗಿದೆ. ಸಾಹಿತ್ಯದ ಓದು ಅಂಥ ಆತ್ಮವಿಶ್ವಾಸವನ್ನು ಹುಡುಗರಲ್ಲಿ ಮೂಡಿಸಬಹುದು.

ಡಾ. ನಟರಾಜ್ ಹುಳಿಯಾರ್ ಅವರ ಲಂಕೇಶ್-ಡಿ.ಆರ್. ನಾಗರಾಜ ಅವರ ಕುರಿತ `ಇಂತಿ ನಮಸ್ಕಾರಗಳು', ಎಸ್.ಎಫ್. ಯೋಗಪ್ಪನವರ್ ಅವರು ಅನುವಾದಿಸಿರುವ `ಬೋದಿಲೇರ್: ಐವತ್ತು ಗದ್ಯ ಕವಿತೆಗಳು', ಸುಜ್ಞಾನಮೂರ್ತಿ ಅವರ `ತೆಲಂಗಾಣ ಹೋರಾಟ' ಕುರಿತ ಅನುವಾದ ಹಾಗೂ ಅರುಣ್ ಜೋಳದಕೂಡ್ಲಗಿ ಅವರ ಮಂಜವ್ವ ಜೋಗತಿಯ ಬದುಕಿನ ಕುರಿತ `ನಡುವೆ ಸುಳಿವಾತ್ಮ'  ತಕ್ಷಣ ಬರುವ ಕೃತಿಗಳಾಗಿವೆ.

ಇದೇ ಬಗೆಯ ಇನ್ನೂ ಉತ್ತಮ ಪುಸ್ತಕಗಳು ನಮ್ಮ ಪ್ರಕಾಶನದಿಂದ ಇನ್ನು ಮುಂದೆಯೂ ಪ್ರಕಟವಾಗುವ ವಿಶ್ವಾಸ ನಮ್ಮದು. ಬರಹಗಾರರು ಹಾಗೂ ಓದುಗರ ನಡುವಿನ ವಿಶ್ವಾಸದ ಕೊಂಡಿಯಾಗಿರುವ ಪಲ್ಲವ, ತನ್ನ ಪುಸ್ತಕಯಾನದಲ್ಲಿ ಪ್ರಜ್ಞಾಪೂರ್ವಕವಾಗಿ ಪುಸ್ತಕ ಪ್ರೀತಿಯನ್ನೇ ಮುಖ್ಯ ಕಾಯಕವನ್ನಾಗಿಸಿಕೊಂಡು ಮುಂದಕ್ಕೆ ಸಾಗುತ್ತಿದೆ.