ಶುಕ್ರವಾರ, ಜನವರಿ 4, 2013

79 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ.ಚೆ: ಬಳ್ಳಾರಿ ಜಿಲ್ಲೆಗೆ ಸಂಭ್ರಮ


 

79 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ.ಚೆ: ಬಳ್ಳಾರಿ ಜಿಲ್ಲೆಗೆ ಸಂಭ್ರಮ
 

  ಕೋ.ಚೆ ಅವರು 79 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಮಗೆಲ್ಲಾ ಅದು ಸಂಭ್ರಮದ ವಿಷಯ. ಬಳ್ಳಾರಿ ಜಿಲ್ಲೆಗಂತೂ ಈ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

   ನಿವೃತ್ತ ನ್ಯಾಯಾಧಿಶರಾದ ಕೋ. ಚೆನ್ನಬಸಪ್ಪನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು. ತಂದೆ ವೀರಣ್ಣ. ತಾಯಿ ಬಸಮ್ಮ. ಪ್ರೈಮರಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಕಾನಮಡುಗು ಹಳ್ಳಿಯಲ್ಲಿ. ನಂತರ ಪ್ರೌಢಶಾಲೆಗೆ ಬಳ್ಳಾರಿ. ಕಾಲೇಜು ವಿದ್ಯಾಭ್ಯಾಸ ಅನಂತಪುರ. ಆಗ ದೇಶಕ್ಕೆ ಹಬ್ಬಿದ್ದ ಸ್ವಾತಂತ್ರ್ಯದ ಬಿಸಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿ. ಬಂಧನ, ಸೆರೆಮನೆವಾಸ. ಬಿಡುಗಡೆಯ ನಂತರ ಬಿ.ಎ. ಪದವಿ. ಬೆಳಗಾವಿ ಕಾಲೇಜಿನಿಂದ ಲಾ ಪದವಿ. ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ.

 
    ೧೯೪೬ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿ. ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭ. ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕ. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ. ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ. ೧೯೭೧ರ ಸುಮಾರಿನಲ್ಲೆ ಅರವಿಂದಾಶ್ರಮದ ಒಡನಾಟ. ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭ. ಅಮೆರಿಕದಲ್ಲಿ ನಡೆದ ವೀರಶೈವ ವಾರ್ಷಿಕ ಅವೇಶನ, ಅರವಿಂದಾಶ್ರಮದ ಕಾರ‍್ಯಕ್ರಮಗಳಲ್ಲಿ ಪ್ರಮುಖ ಪಾತ್ರ. ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಬರೆದ ಅಪಾರ ಬರಹ. ಕನ್ನಡಪ್ರಭ ಪತ್ರಿಕೆಯಲ್ಲಿ ನ್ಯಾಯಾಧಿಶರ ನೆನಪುಗಳು ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ನ್ಯಾಯಾಲಯದಲ್ಲಿ ಸತ್ಯ ಕಥೆಗಳು ಪ್ರಕಟಿತ.

  ಪ್ರಕಟಿತ ಕೃತಿಗಳೇ ಸುಮಾರು ೮೦ಕ್ಕೂ ಮಿಕ್ಕು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳು. ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ ೬ ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ೮ ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು. ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಸಂಪಾದಿತ ಕೃತಿಗಳು.

ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವು.

 

  ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ರಹಮತ್ ತರೀಕೆರೆ ಅವರು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಕೋ.ಚೆ ಉತ್ತರಿಸುವುದು ಹೀಗೆ:

ಸಂ :    ನೀವು ಬಾಲ್ಯ ಕಳೆದ ಊರು ಹೇಗಿತ್ತು.  ಅದರ ಸಾಮಾಜಿಕ ಜೀವನದ ಬಗ್ಗೆ ತಿಳಿಯೋಕೆ  ಕೇಳ್ತಿದೇನೆ. ಈಗ ಅದು ಹೆಂಗೆ ಬದ್ಲಾಗಿದೆ?

ಕೋಚೆ:  ಮೈಸೂರು ಗಡಿ ದಾಟಿದ ಕೂಡ್ಲೇನೆ ನಮ್ಮೂರು ಕಾನಾಮಡಗು. ಅದು ರೆವಿನ್ಯೂ ದಾಖಲೆನಲ್ಲಿ ಆಲೂರು ಅಂತಿತ್ತು. ಆಕ್ಚುಲಿ ಕಾನಾಮಡಗು ಅಂತ, ಇಟ್ ವಾಸ್ ಎ ಹ್ಯಾಮ್ಲೆಟ್ ಆಫ್ ಆಲೂರು. ಮೊದಲು ನಮ್ಮ ಊರ ಮಧ್ಯದಲ್ಲಿನೇ ಮೊಹರಂ ಪಂಜೆ ಇಡ್ತಕ್ಕಂಥ  ಜಾಗ ಇತ್ತು. ಅದು ಈಗಿಲ್ಲ. ಅದು ಯಾವಾಗಲೂ ಖಾಲಿ ಇರ‍್ತಿತ್ತು. ಮೊಹರಂ ಮುಗುದ ಮೇಲೆ ಪೀರ‍್ಲು ದೇವರ ಪೆಟ್ಟಿಗೆಯನ್ನು ಮೇಲ್ಗಡೆ ಜಂತಿಗೆ ಕಟ್ಟಿರ‍್ತಿದ್ರು. ಮುಂದಿನ ವರ್ಷ ಬಂದಾಗ ಅದನ್ನ ಇಳಿಸ್ತಿದ್ರು. ಯಾರಾದ್ರೂ ಈ ಕಲಾಯಿ ಮಾಡೋರು ಅಥವಾ ಈ ಗೋಣಿಯವರು ಬಂದಾಗ ಅಲ್ಲಿ ಇರ‍್ತಿದ್ರು. ಅದರ ಮುಂದೇನೆ ಒಂದು ಅಲಾವಿ ಕುಣಿಯಿತ್ತು. ಆಗಿನ ಕಾಲ್ದಲ್ಲಿ ಅಲ್ಲಿ ದೊಡ್ಡ ಶ್ರೀಮಂತ್ರು ಇದ್ರು. ೫-೧೦ ಮನೆ ವ್ಯಾಪಾರ ಮಾಡೋರು. ನಮ್ದೊಂದು ನಮ್ಮ ಚಿಕ್ಕಪ್ಪನ್ದೊಂದು ಎರಡೇ ಮನೆಗಳಿದ್ವು. ನಾವು ಬಳ್ಳಾರಿತನಕ ಹೋಗಿ ಸಾಮಾನು ತರೋರು. ನಮ್ಮ ಚಿಕ್ಕಪ್ಪ ನೂಲು ತರೋರು. ನಾವು ಈ ಸಕ್ರೆ, ಅಕ್ಕಿ, ಗೋದಿs, ಬೀಡಿ ತರೋರು. ಹೋಲ್ಸೇಲ್ ವ್ಯಾಪಾರ ಮಾಡ್ತಿದ್ವಿ. ಅಲ್ಲೆಲ್ಲ ಮಳೆ ಬೆಳೆ ಎಲ್ಲ ಸುಖವಾಗಿ  ಇರ‍್ತಿತ್ತು. ಬಡವರೂ ಇದ್ರು. ಆದ್ರೆ ಬಡತನದ ಬೇಗೆ ಈಗಿನಷ್ಟು ಅನುಭವಿಸ್ತಿದ್ರು ಅಂತ ಹೇಳ್ಲಾರೆ.

ಕೋ.ಚೆ ಅವರಿಗೆ ಬಳ್ಳಾರಿ ಜಿಲ್ಲಾ ಸಾಹಿತ್ಯ ಪರಂಪರೆ ಬ್ಲಾಗ್ ಪರವಾಗಿ  ಅಭಿನಂದನೆ.