ಸೋಮವಾರ, ಫೆಬ್ರವರಿ 27, 2012

ಸೈಪ್ ಜಾನ್ಸೆ ಕೊಟ್ಟೂರು.

ಸೈಫ್ ಕಿರು ಪರಿಚಯ


ಆರ್. ಎಸ್. ಇನಾಯತ್ ಮತ್ತು ಮೆಹಬೂಬ ಜಾನ್ ಅವರ ಮಗನಾಗಿ ೦೭ ಅಕ್ಟೋಬರ್ ೧೯೭೮ ರಲ್ಲಿ ಸೈಪುಲ್ಲಾ ಜನನ. ಬಿ.ಎ. ಬಿಇಡಿ ಪದವೀಧರರಾದ ಇವರು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಕೆ.ಮಲ್ಲಾಪುರದಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರು. ಸದ್ಯ ಕೂಡ್ಲಿಗಿ ತಾಲೂಕು ಕೊಟ್ಟೂರಿನಲ್ಲಿ ವಾಸವಾಗಿರುವ ಇವರು ಸೈಫ್ ಜಾನ್ಸೆ, ಕೊಟ್ಟೂರು ಎಂಬ ಹೆಸರಲ್ಲಿ ಪದ್ಯ ಬರೆಯುತ್ತಾರೆ. ಇದು ಅವರ ಮೊದಲ ಕವನ ಸಂಕಲನ ‘ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು’ ಪಲ್ಲವ ಪ್ರಕಾಶನದಿಂದ ಪ್ರಕಟವಾಗಿದೆ.

ಸೈಫ್ ಸಂಪರ್ಕ:
ಆರ್ .ಸೈಫುಲ್ಲಾ
ತಂದೆ ಆರ್ .ಎಸ್. ಇನಾಯತ್ ,
ಮೂಗ ಬಸವೇಶ್ವರ ಆಸ್ಪತ್ರೆ ಎದುರುಗಡೆ
ಉಜ್ಜಿನಿ ರಸ್ತೆ
ಕೊಟ್ಟೂರು - ೫೮೩೧೩೪
ಕೂಡ್ಲಿಗಿ ತಾಲೂಕು , ಬಳ್ಳಾರಿ ಜಿಲ್ಲೆ
ಮೋಬೈಲ್ ನಂ : ೯೭೩೧೭೦೯೩೧೭

ಕೃತಿ:
ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು (ಕವಿತೆಗಳು)
ಸೈಫ್ ಜಾನ್ಸೆ ಕೊಟ್ಟೂರು.
ಪಲ್ಲವ ಪ್ರಕಾಶನ, ಚನ್ನಪಟ್ಟಣ,
ಪು:೧೨+೭೮, ಬೆಲೆ:೮೦.೦೦, ೨೦೧೧
ಸಂಪರ್ಕ: ೯೪೮೦೩೫೩೫೦೭

ಪುಸ್ತಕ ವಿಮರ್ಶೆ:

ಕಾಲದ ತಲ್ಲಣಗಳ ತಣ್ಣನೆಯ ಗುರುತುಗಳು

‘ಹಸಿವಿನ ಚಿತೆಗೆ ಬೆಂಕಿ ಇಟ್ಟು/ ಬಾಯಿ ಮುಚ್ಚಿಸಬೇಕು/ ಜೋಳಿಗೆಗೆ ಜೋತು ಬಿದ್ದು/ ಹರಿದ ಕನಸುಗಳ ಆ ದಡದವರೆಗೆ/ ಹೊತ್ತು ಸಾಗಬೇಕಿದೆ/ದಣಿವಾಗಿದೆ ಆದರೂ ನಡೆಯಬೇಕು’ ಎನ್ನುತ್ತಾ ತನ್ನ ಕಾಲವನ್ನು ಭಿನ್ನವಾಗಿ ಕಾಣಿಸುವ ಕೊಟ್ಟೂರಿನ ಯುವ ಕವಿ ಸೈಫ್ ಜಾನ್ಸೆ ‘ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು’ ಎನ್ನುವ ಚೊಚ್ಚಲ ಸಂಕಲನದ ಮೂಲಕ ಮೊದಲ ಹೆಜ್ಜೆಗಳನ್ನಿಟ್ಟಿದ್ದಾರೆ. ಸೈಫ್ ಬಿಡಿ ಬಿಡಿಯಾಗಿ ಪತ್ರಿಕೆಗಳಲ್ಲಿ ಪದ್ಯ ಪ್ರಕಟಿಸಿ ಅಷ್ಟೇನು ಪರಿಚಿತರಲ್ಲ. ಒಮ್ಮೆಗೆ ೪೨ ಪದ್ಯಗಳೊಂದಿಗೆ ಸಂಕಲನದ ಮೂಲಕ ಕಾವ್ಯಾಸಕ್ತರ ಎದುರು ನಿಂತಿದ್ದಾರೆ. ಪಲ್ಲವ ಪ್ರಕಾಶನ ಅಂದವಾಗಿ ಪ್ರಕಟಿಸಿದೆ.

ಸೈಫ್ ಪದ್ಯಗಳಲ್ಲಿ ಈ ಕಾಲದ ತಲ್ಲಣಗಳ ತಣ್ಣನೆಯ ಪ್ರತಿಭಟನೆಯ ಎಳೆಯೊಂದು ಬೆರೆತಿದೆ. ಅದು ಕೇವಲ ಕೂಗಾಗದೆ, ಬಡಬಡಿಕೆಯಾಗದೆ ತೀವ್ರತೆರನಾದ ನೋವಿನ ಪ್ರಾಮಾಣಿಕ ಅಭಿವ್ಯಕ್ತಿಯಾಗಿದೆ. ಹಾಗಾಗಿ ಸೈಫ್ ಪದ್ಯಗಳನ್ನು ಮೊದಲ ಸಂಕಲನದ ಕವಿತೆಗಳು ಎನ್ನುವ ರಿಯಾಯಿತಿ ಕೊಟ್ಟು ಓದಬೇಕಿಲ್ಲ. ಈಚಿನ ಹೊಸ ಕವಿಗಳ ಪೈಕಿ ಸೈಫ್ ಗಟ್ಟಿಯಾಗಿ ನಿಲ್ಲಬಲ್ಲವರಾಗಿ ಗಮನಸೆಳೆಯುತ್ತಾರೆ.

ಮುಸ್ಸಂಜೆಯ ಹೊತ್ತು/ ಪಂಜುಗಳು ಉರಿಯುತ್ತಲೇ ಇವೆ/ಕಂದಮ್ಮಗಳು ನಿದ್ರೆಯಿಂದ/ ಜಾರದಿರಲಿ ಜೋಕೆ!/ ಗೆಲುವಿನ ಬೆನ್ನಟ್ಟಿ ಓಡುವ/ ನಿಮ್ಮ ಕಾಲ ಕೆಳಗೆ ನಮ್ಮ ಗೋರಿಗಳಿವೆ (ಗೋರಿಗಳಿವೆ) ಎನ್ನುವ ಕವಿ ‘ಹುಚ್ಚನೆಂಬ ಭಿತ್ತಿಪತ್ರವನ್ನು/ ಜನರು ಎಂದೋ ಅವನ ಕೊರಳಿಗೆ/ನೇತು ಹಾಕಿದ್ದಾರೆ/ ನನಗೇಕೋ ಅದರೊಂದಿಗೆ/ ಪೂರ್ಣ ಸಮ್ಮತಿ ಇದ್ದಂತಿಲ್ಲ/ ಪರೀಕ್ಷಿಸುವಷ್ಟು ಕುತೂಹಲವನ್ನು/ ನಾನಿನ್ನೂ ಉಳಿಸಿಕೊಂಡಿದ್ದೇನೆ’ (ಹುಚ್ಚನ ನಗುವನ್ನರಸುತ್ತಾ) ಎನ್ನುತ್ತಾ ಸಿನಿಕವಾಗದೆ ಪರೀಕ್ಷಿಸುವ ಕುತೂಹಲವನ್ನು ಉಳಿಸಿಕೊಂಡಿದ್ದಾರೆ. ಹಾಗಾಗಿಯೇ ‘ತುಳಿಯದಿರಿ/ ಹುಕ್ಕಿನ ಪಾದಗಳಲಿ/ ನೆಗ್ಗಲಿಯ ಮುಳ್ಳುಗಳೆಂದು/ ನಾವೂ ಒಂದಾಗುತ್ತಾ/ ನಿಮ್ಮ ತಲೆ ಕಾಲುಗಳನ್ನಾವರಿಸಿ/ ಹರಡಿ ಬೆಳೆಯುತ್ತೇವೆ/ ಗೆದ್ದಲಿನಂತೆ ಸಿಂಹಾಸನಗಳ/ ಪುಡಿಗಟ್ಟುತ್ತೇವೆ’ ( ಅನ್ನ ಮಾರುವವರ ಬಿಡಿ ಚಿತ್ರಗಳು) ಎನ್ನುವ ಆಶಾವಾದದೊಂದಿಗೆ ಜನರೊಳಗಿನ ಕಿಚ್ಚನ್ನು ಕವಿ ತೋರುತ್ತಾನೆ.

ಈ ಪದ್ಯಗಳನ್ನು ಓದಿದಾಗ ನಮ್ಮ ಕಾಲದಲ್ಲಿ ಉಸಿರುಗಟ್ಟಿದ ಧ್ವನಿ ಇಲ್ಲಿನ ಒಳತೋಟಿಯಾಗಿ ಉಸಿರಾಡಿದ ಅನುಭವವಾಗುತ್ತದೆ. ಪದ್ಯದೊಳಗಿನ ಲೋಕದೃಷ್ಠಿ ತನ್ನ ಕಾಲದ ಛಿದ್ರತೆಯನ್ನೂ, ಮೌನವೆಂಬ ಸಜ್ಜನಿಕೆಯ ಕ್ರೌರ್ಯವನ್ನೂ, ಸಾಮಾನ್ಯರ ಅಸಹಾಯಕತೆಯನ್ನೂ ಹೇಳುತ್ತಿವೆ. ಹಾಗಾಗಿ ಸೈಫ್ ಪದ್ಯಗಳಿಗೆ ಸಹಜವಾದ ಒಂದು ಜೀವಂತಿಕೆ ಬಂದಿದೆ. ನಮ್ಮ ಸುತ್ತಲಿನ ಅಣುಗಾತ್ರದ ಸಂಗತಿಗಳ ಆಯ್ದು, ಅವುಗಳ ಮೂಲಕ ಸೂಕ್ಷ್ಮವಾಗಿ ತನ್ನೆದುರಿನ ಕಾಲವನ್ನು ಕವಿ ಎದುರುಗೊಂಡಿದ್ದಾನೆ.
ಒಂದು ಹೊಸ ಮಿಂಚನ್ನು ಹೊಳೆಸಬಲ್ಲ ರೂಪಕ ಶಕ್ತಿ ಇಲ್ಲಿನ ಹಲವು ಕವಿತೆಗಳಿಗಿದೆ. ಹಾಗಾಗಿ ಶುದ್ಧ ಕಾವ್ಯದ ಚೌಕಟ್ಟಿಗೆ ಪದ್ಯಗಳ ತುರುಕಿ, ಕಸರತ್ತಿಗೆ ಏನನ್ನಾದರೂ ಹೇಳುವ ಬದಲು, ಈ ಕವಿಗೆ ವಾಚ್ಯವನ್ನು ಮೀರುವ, ಮತ್ತಷ್ಟು ಪಕ್ವವಾಗುವ ಗುಣ ದಕ್ಕಬೇಕಿದೆ. ಇನ್ನಷ್ಟು ಓದು ಧ್ಯಾನ ಏಕಾಂತ ದೊರೆತರೆ ಸೈಫ್ ಹೆಚ್ಚಿನದನ್ನು ಬರೆಯಬಲ್ಲ ಎಂದು ಹೇಳಬಹುದು.

-ಡಾ.ಅರುಣ್ ಜೋಳದಕೂಡ್ಲಿಗಿ

ಒಂದೆರಡು ಪದ್ಯಗಳು:
ನೇಣುಗಂಬದ ಕೊನೆ ಸಾಲುಗಳು

ನ್ಯಾಯಧೀಶರ ಇತಿಹಾಸ ಕೆದಕುವುದರಿಂದ
ಆದ ನಿರ್ಧಾರದಲ್ಲಿ ವ್ಯತ್ಯಾಸವಾಗಲಾರದು
ತನ್ನ ಹತ್ಯೆಗೆ ತಾನೇ ಸಂಚು ಹೊಡಿದ್ದಾಳೆ .

ಕಬ್ಬಿಣದ ಸರಳುಗಳ ದಿನವೂ ದಿಟ್ಟಿಸುತ್ತಾಳೆ
ಆದರ ಕಠಿಣತೆ ಸ್ವಲ್ಪವೂ ಕರಗಿಲ್ಲ
ಕಿಟಕಿಯಿಂದ ಕಾಣಸಿಗುವ ಚಿಕ್ಕ ಬೆಳಕು
ಅವಳ ನಾಳೆಯನ್ನು ಬೆಳಗುವುದಿಲ್ಲ .

ಪ್ರೀತಿ ತೀವ್ರವಾಗಿ ಸೋತು ಸಣಕಲಾಗಿದೆ ,
ಅವಳೆದೆಯಲ್ಲಿ ಇನ್ನೂ ಉನ್ಮಾದಿತ ಬೆಂಕಿಯಾಗಿ ನರ್ತಿಸುತ್ತಿದೆ .
ಆಟ ಮೇಲಾಟಗಳ ಹೋರಾಟ ,
ನಿಲುವುಗಳ ಸಮಾಧಿಗೆ ಕಲ್ಲು ಜಡಿದಿವೆ .
ದೂಷಣೆಗಳ ಜನರ ಬಾಯಿಗೆ ಅಂಟಿಸಿ ,
ನಿರ್ಮಲ ಮೌನವನ್ನಾವರಿಸಿದ್ದಾಳೆ .

ನೇಣುಗಂಬದ ಸುತ್ತಲೂ ಹೂ ಸುಗಂಧ ,
ರಾಶಿ ಜನರ ಗುಲಾಮಿ ಶಾಂತಿ ,
ಜವ ಕುಣಿಕೆಯ ಅಲುಗಾಡುವಿಕೆ
ಕಪ್ಪು ಬಟ್ಟೆ ಕಣ್ಣ ಮುಚ್ಚಿದೆ .

ದೇವರೇ ಇಷ್ಟು ದಿನ ಬದುಕಲು ಅವಕಾಶ
ಕೊಟ್ಟಿದ್ದಕ್ಕೆ ಧನ್ಯವಾದಗಳು
ಪ್ರೀತಿಯ ಎರಡು ಹನಿ ಸಿಂಪಡಿಸಿದ್ದಕ್ಕೆ
ನಿನಗೆ ಋಣಿಯಾಗಿದ್ದೇನೆ .
ಇದು ಅವಳ ಕೊನೆಯ ಸಾಲುಗಳು .
***

ಅನ್ನ ಮಾರುವವರ ಬಿಡಿ ಚಿತ್ರಗಳು


ರೈತರೇಂದರೆ
ಹಸಿರು ಟವೆಲ್ಲುಗಳಲ್ಲಿ ಹೂತು
ಹೋದವರೆಂದೋ ,
ಮುಷ್ಕರಗಳಲ್ಲಿ ಕಿವಿಗಟ್ಟುವ
ಧ್ವನಿವರ್ಧಕಗಳೆಂದೋ ,
ಸರ್ಕಾರಿ ಮೊಕ್ಕದಮೆಗಳಲ್ಲಿ
ಜಡಿಯಲ್ಪಟ್ಟ ಕ್ರಾಂತಿಯ ಮೊಳೆಗಳೆಂದೋ ,
ವರ್ಷದ ಒಂದು ಋತುವನ್ನು ಆಕಳಿಸುವ ಆಲಿಸಿಗಳೆಂದೋ ,
ಬೇಡಿಕೆಯ ಪುಟ್ಟಿಗಳನ್ನು ಹೊತ್ತು
ಸದಾ ಜಗಳ ಕಾಯುವ ಕದಡಿದ
ಕನಸ್ಸುಗಳೆಂದು ಆರೋಪಿಸುವ
ಒಂದು ವರ್ಗವನ್ನು ನಾನು ನೋಡಿದ್ದೇನೆ .


ಬೆಳೆಗಳನ್ನು ರಸ್ತೆಗೆ ಚೆಲ್ಲಿ
ಹುಚ್ಚರಂತೆ ತುಳಿದು ,
ನೀರಿಗಾಗಿ ಗಂಟಲಿನ ಪಸೆ
ಆರುವರೆಗೆ ಉಪವಾಸ ಕೂತು ,
ರಾಜಧಾನಿಯ ಮರ್ಜಿಗಾಗಿ
ಊರುಕೇರಿಗಳ ದಾಟಿ ಅಂಡಲೆದು ,
ಹಾಳು ರಸಗೊಬ್ಬರದ ಚೀಲಗಳಿಗೆ
ನೆತ್ತರು ಬಗೆದು ಕೊಟ್ಟಿದ್ದನ್ನು
ನಾನೇ ನನ್ನ ಕಣ್ಣಾರೇ ಕಂಡಿದ್ದೇನೆ .


ಅವರನ್ನು ಕುರಿತು ಆರೋಪಿಸುವುದಾದರೆ
ನನ್ನವೂ ಕೆಲವು ಆರೋಪಗಳಿವೆ
ತಾವೇ ಮಾರಿದ ರಾಶಿಗಳಲ್ಲಿ ಹಿಡಿಗಳನ್ನು
- ಕೊಳ್ಳಲಾರದೆ ತಿಣುಕುವ ಅಸಮರ್ಥರು ,
ಸ್ವಾಧೀನಕ್ಕೊಳಗಾದ ಭೂಮಿಯಲ್ಲಿ
ಸೈಟು ಕೊಳ್ಳದ ದೈನಾಸಿಗಳು ,
ತಾವೇ ತೊಳೆದು ಬಿಸಾಡಿದ
ಮತಗಳಿಂದ ಅಪಮಾನಕ್ಕೀಡಾದವರು ,
ದಲ್ಲಾಲರ ಜೋಕಾಲಿಗಳಲಿ
ನೇತಾಡುವ ಪ್ರೇತಾತ್ಮಗಳು ,
ಸಾಲದ ಹಿನ್ನೀರಿನಲ್ಲಿ ಸದಾ ಮುಳು
- ಗುತ್ತಿರುವ ದಡಗಳೆಂದು ಬರೆಯಬಹುದು .


ತುಳಿಯದಿರಿ
ಉಕ್ಕಿನ ಪಾದಗಳಲಿ
ನಗ್ಗಲಿಯ ಮುಳ್ಳಗಳೆಂದು ,
ನಾವೂ ಒಂದಾಗುತ್ತಾ
ನಿಮ್ಮ ತಲೆ ಕಾಲುಗಳನ್ನುವರಿಸಿ
ಹರಡಿ ಬೆಳೆಯುತ್ತೇವೆ .
ಗೆದ್ದಲಿನಂತೆ ಸಿಂಹಾಸನಗಳ
ಪುಡಿಗಟ್ಟುತ್ತೇವೆ .


ಹಸಿವಿನಿಂದ ಕಂಗೆಟ್ಟ ಹೆಬ್ಬಾವುಗಳು
ಭಿಕ್ಷೆಯ ಪಾತ್ರೆಗಳನ್ನು ಹಿಡಿದು
ಅನ್ನ ಮಾರುವರ ಬೀದಿಗಳಲ್ಲಿ
ತೆವಳುತ್ತಾ ರೋಧಿಸುವ
ಸದ್ದುಗಳನ್ನು ನಾವೀಗಾಗಲೇ
ಆಲಿಸುತ್ತಿದ್ದೇವೆ .

***
ಅಯ್ಯಂಗಾರನ ಹತ್ತು ಪೈಸೆಯ ಬ್ರೆಡ್ಡು

ಹತ್ತು ಪೈಸೆಯ ಅಯ್ಯಂಗಾರನ ಬ್ರೆಡ್ಡು
ಕೊಯ್ದ ಹೆಣದ ಸಾವಿನ ಕಾರಣದಂತೆ
ನನ್ನ ನಿನ್ನೆ , ಇಂದು , ನಾಳೆಗಳನ್ನು
ಅಂಟಿಸುತ್ತಲೇ ಸಾಗಿದೆ .
ಅವ್ವನ ನೆರಿಗೆಗಳಲಿ
ಲೋಕದ ಬೆದರಿಕೆಗೆ
ಉಮ್ಮಳಿಸುವ ಬಿಕ್ಕುಗಳನ್ನು
ಹಿಡಿದು ಸಂತೈಸಿ ,
ನನ್ನ ಪುಟ್ಟ ಪಾದಗಳ ಇನ್ನಷ್ಟೂ
ಅಗಲವಾಗಿಸಿ ತಂದೆಯ ಹೆಣದ ಮುಂದೆ
ಭೊರ್ಗರೆದು ನಗುವ ನಿಷ್ಠುರತೆ
ಕಲಿಸಿದ್ದು ಬಹುಷ್ಯ ! ಅದೇ
ಅಯ್ಯಂಗಾರನ ಹತ್ತು ಪೈಸೆಯ ಬ್ರೆಡ್ಡು .
ಬೇಕರಿಗಳಲಿ ತೆರೆದಿಟ್ಟ
ಶೋಕೇಸ್‌ಗಳಲಿ ಆ ಬ್ರೆಡ್ಡಿನ ಮುಸುಕು
ಹೊದ್ದು ಮಲಗಿರುವ ದೇಹಗಳನ್ನು
ತಡಕಾಡುತ್ತೇನಾದರೂ , ನನ್ನ ತೃಷೆಯ
ತಣಿಸುವಷ್ಟು ಅಮಲು
ಅವಕ್ಕಿಲ್ಲವೆಂದೇ ಹೇಳಬೇಕು .
ಕಾಲದ ಸಿಕ್ಕುಗಳಲ್ಲಿ
ಸಿರೀನಿಂದ ಹೇನಾಗಿ ಬಡ್ತಿಹೊಂದುತ್ತಾ ,
ನನ್ನಂತೆಯೇ ಬದಲಾದ ವ್ಯವಸ್ಥೆಯ
ಹೆಜ್ಜೆಗಳನ್ನು ಕಾಣುತ್ತಾ ,
ಮರೆಯುವ ಪ್ರಯತ್ನಗಳ ಹಿಂದಿಕ್ಕಿ
ಪ್ರವಾಹಗ್ರಸ್ತ ಜಲದಂತೆ ಮುಳುಗಿಸುತ್ತಲೇ ಇದೆ .
ನನ್ನ ಬಾಲ್ಯದಷ್ಟೇ ಚಿಕ್ಕ ಮಕ್ಕಳು
ಪದೇ , ಪದೇ ಪೈವ್‌ಸ್ಟಾರ್ ಚಾಕೋಲೇಟಿಗಾಗಿ
ರಚ್ಚೆ ಹಿಡಿದು ಘೀಳಿಡುವಾಗ ,
ಆ ಹತ್ತು ಪೈಸೆಯ ಅಯ್ಯಂಗಾರನ ಬ್ರೆಡ್ಡು
ನನ್ನ ಅಸ್ಥಿ ಪಂಜರವ ಹಿಡಿದು
ಮಾತನಾಡಿಸುತ್ತದೆ .
**