ಮಂಗಳವಾರ, ಮೇ 7, 2013

ಬರೆಯುವುದೆಂದರೆ ಧ್ಯಾನ, ಓದುವುದೆಂದರೆ ಯೋಗಾಭ್ಯಾಸ



ಕನ್ನಡ ಸಾಹಿತ್ಯದೊಂದಿಗೆ ತೆಲುಗು ಸಾಹಿತ್ಯವನ್ನೂ ನೀವು ಓದಿಕೊಂಡಿದ್ದೀರಿ. ತೆಲುಗಿನಿಂದ ಅನೇಕ ಕಥೆ, ಕವಿತೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಿರಿ. ಓದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು ಯಾವಾಗ? ಹೇಗೆ ಈ ಓದಿನ ಯಾನ ಶುರುವಾಯಿತು?
ತೆಲುಗು ಸಾಹಿತ್ಯ ನನ್ನ ಅರಿವಿಗೆ ನಿಲುಕಿದ್ದು ತೀರಾ ಅಕಸ್ಮಿಕ, ದಿ.ಇಂದಿರಾಗಾಂಧಿ ಈ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ಆ ಕಾಲಘಟ್ಟದ ಸೃಜನಶೀಲ ತಿಳಿವಳಿಕೆಗೆ ಹೊಸ ಆಯಾಮ ನೀಡಿತು. ಆ ಅವಧಿಯ ಏಳೆಂಟು ವರ್ಷಗಳಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ಸಂಭವಿಸಿದ ಸಮಾಜಮುಖಿ ಚಳವಳಿಗಳು ಆಗಿನ್ನೂ ಯುವಕರಿದ್ದ ನನ್ನಂಥವರ ಸಾಕ್ಷಿಪ್ರಜ್ಞೆಗೆ ಸಾಣೆ ಹಿಡಿದವು. ಅದಕ್ಕೆ ವಯಸ್ಸು ಮತ್ತು ಮನಸ್ಸು ಸಾಥ್ ನೀಡಿತು.
ಅರೆಸ್ಟಾಗಿ ದೇಶಭಕ್ತಿ ಮೆರೆಯಲೆಂದು ನಡೆಸಿದ ಹಸಿಹಸಿ ಹೋರಾಟ ಸಾಮಾಜಿಕರಿಗೊಂದೇ ಅಲ್ಲದೆ ನಮ್ಮ ಕುಟುಂಬ ಹಿರಿಯರಿಗೂ ತಲೆನೋವಾಗಿ ಪರಿಣಮಿಸಿತು. ನನ್ನಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದೋ, ನಿರುದ್ಯೋಗಿಯ ವೇಷದಲ್ಲಿದ್ದ ಪೀಡೆ ತೊಲಗಿದರಾಯಿತೆಂದೋ ನನ್ನನ್ನು ಆಂಧ್ರಪ್ರದೇಶಕ್ಕೆ ಎತ್ತಂಗಡಿ ಮಾಡಲಾಯಿತು. ಅಲ್ಲಿ ನನಗೆ ಮೇಸ್ಟ್ರಗಿರಿ ಲಭಿಸಿದ್ದು ತೀರಾ ಆಕಸ್ಮಿಕ.
ಎಪ್ಪತ್ತೆಂಬತ್ತರ ಅವಧಿಯಲ್ಲಿ ಸಾಹಿತ್ಯಕವಾಗಿ ಎಡಪಂಥೀಯ ಚಳವಳಿಗಳು ಆಂಧ್ರಪ್ರದೇಶದಾದ್ಯಂತ ಚಾಲ್ತಿಯಲ್ಲಿದ್ದವು, ಅಲ್ಲಿನ ಬಹುಪಾಲು ಲೇಖಕರು ತಮ್ಮಂದು ಕಾಲನ್ನು ಸೆರೆಮನೆಯಲ್ಲೂ, ಇನ್ನೊಂದು ಕಾಲನ್ನು ಬೀದಿಗಳಲ್ಲೂ ಇಟ್ಟು ಬರೆಯುತ್ತಿದ್ದರು. ಚಳವಳಿ ಸಂಜಾತ ಲೇಖಕನಾದ ನಾನು ಅಂಥವರನ್ನೂ ಅಂಥವರ ಸಾಹಿತ್ಯವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಲೆಂದೇ ತೆಲುಗು ಭಾಷೆಯನ್ನು ಕಲಿತೆ, ಓದು ಬರಹ ಮತ್ತು ಅನುವಾದವನ್ನು ರೂಢಿಸಿಕೊಂಡೆ.
ಎಪ್ಪತ್ನಾಲ್ಕರಲ್ಲಿ ಮೊದಲ ಬಾರಿಗೆ ತೆಲುಗಿನ ಪಿ. ಶ್ರೀನಿವಾಸಶಾಸ್ತ್ರಿ ಅವರ ಅಗ್ಗಿಪುಲ್ಲ (ಕಡ್ಡಿಪೊಟ್ಟಣ) ಎಂಬ ಕಥೆಯನ್ನು ಕನ್ನಡಕ್ಕೆ ಅನುವಾದಿಸಿದೆ. ಅದಕ್ಕೆ ಪೂರಕವಾಗಿ ತೆಲುಗಿನ ಎಡಪಂಥೀಯ ಸಾಹಿತ್ಯವೊಂದೇ ಅಲ್ಲದೆ ಆ ಸಾಹಿತ್ಯದ ಪ್ರಾಚೀನ ಅಭಿಜಾತ ಪರಂಪರೆಯನ್ನೂ ಅರಗಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಶ್ರೀಶ್ರೀ ಪ್ರಣೀತ ದಿಗಂಬರ ಕವಿಗಳನ್ನು ಇಷ್ಟಪಟ್ಟಂತೆ ಅಲ್ಲಸಾನಿ ಪೆದ್ದನನ ಮನುಚರಿತ್ರ, ಕೃಷ್ಣರಾಯ ವಿರಚಿತ ಆಮುಕ್ತಮಾಲ್ಯದ, ಶ್ರೀನಾಥನ ಶೃಂಗಾರ ನೈಷಧಂ, ನನ್ನಯನ ಭಾರತ ಇಂಥ ಹಳೆಕಾವ್ಯಗಳನ್ನೂ ಅಭ್ಯಸಿಸಿದೆ, ಅರಿವಿಗೆ ದಕ್ಕಿದ್ದನ್ನು, ದಕ್ಕಿ ಆನಂದ ನೀಡಿದ್ದನ್ನು ಅಕ್ಷರದ ನೆರವಿನಿಂದ ಅನ್ಯರಿಗೆ ವಿತರಿಸುವ ಸ್ವಭಾವ ನನ್ನದು.
ಅಲ್ಲದೆ ಮಾನಸಿಕ ಸ್ವಾಸ್ಥ್ಯ ರಕ್ಷಿಸಿಕೊಳ್ಳುವ ಉಮೇದಿನಿಂದ ಅಲ್ಲಿನ ಕಥೆ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನಾನು ಏನಿಲ್ಲವೆಂದರೂ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಕಥೆಗಳನ್ನು ಕನ್ನಡ ವಾಚಕರಿಗೆ ಪರಿಚಯಿಸಿರಬಹುದು. ಅವುಗಳನ್ನು ಸಂಕಲನಗಳಿಗೆ ಅಳವಡಿಸಿ ಪ್ರಕಟಿಸುವ ಇರಾದೆ ಎಳ್ಳಷ್ಟೂ ಇರಲಿಲ್ಲ. ಆದರೆ ಆವತ್ತಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದ ಸನ್ಮಿತ್ರ ಅಗ್ರಹಾರ ಕೃಷ್ಣಮೂರ್ತಿ ನನ್ನಿಂದ ಆ ಕೆಲಸವನ್ನು ವಿಧ್ಯುಕ್ತವಾಗಿ ಮಾಡಿಸಿ ಕಥೆಗಳ ಮೂರ‌್ನಾಲ್ಕು ಸಂಕಲನಗಳನ್ನು ಅಕಾಡೆಮಿ ದ್ವಾರಾ ಪ್ರಕಟಿಸಿದರು. ಆ ಆಂಧ್ರದ ಹಲವು ತೆಲುಗುಗಳನ್ನು ನನಗೆ ಪರಿಚಯಿಸಿದ ಆ ಪುಣ್ಯಾತ್ಮನನ್ನು ಮರೆಯುವುದು ಸಾಧ್ಯವಿಲ್ಲ. ಈಗಲೂ ಅಲ್ಲಿನ ಉತ್ತಮ ಕಥೆ ಕಾದಂಬರಿಗಳನ್ನು ಓದಿ ಅರಿವಿನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತ ಮುಂದುವರೆದಿದ್ದೇನೆ.
ಹ್ಹಾಂ! ಅಂದಹಾಗೆ ಓದಿನ ಗಂಭೀರತೆ ಮತ್ತದರ ಯಾನ ಕುರಿತು ಕೇಳಿರುವಿರಿ, ಅದು ಕನ್ನಡಕ್ಕೆ ಸಂಬಂಧಿಸಿದ್ದೋ! ತೆಲುಗಿಗೆ ಸಂಬಂಧಿಸಿದ್ದೋ! ಯಾವುದಾದರೊಂದು. ನನ್ನ ದೃಷ್ಟಿಯಲ್ಲಿ ಓದಿಸಿಕೊಳ್ಳುವ ಯಾವುದೇ ಭಾಷೆಯ ಕೃತಿ ಸಾಂತ್ವನ ಕೇಂದ್ರ. ವಾಚನಾಭಿರುಚಿ ಶುರುವಾದದ್ದು ಪ್ರಾಯಶಃ ತಾಯಿಯ ಗರ್ಭಾಶ್ರಯದಲ್ಲಿರಬೇಕು. ಮಹಾಭಾರತ, ರಾಮಾಯಣ ಹಾಗೂ ಭಾಗವತೀ ಸಾಹಿತ್ಯವನ್ನು ಸೃಜನಶೀಲವಾಗಿ ಅರಗಿಸಿಕೊಂಡಿದ್ದ ನನ್ನಪ್ಪ ಕಥೆಗಳನ್ನು ಕಪೋಲಕಲ್ಪಿತವಾಗಿಯೂ, ಕುತೂಹಲಕಾರಿಯಾಗಿಯೂ ಹೇಳುವ ಮೂಲಕ ಬಾಲಕರಿದ್ದ ನಮ್ಮ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ.
ಪಠ್ಯೇತರ ಕೃತಿಗಳನ್ನು ನಮ್ಮ ಎಳೆ ಕೈಗಳಿಗೆ ಎಟುಕುವಂತೆ ನಗಂದಿ ಮೇಲಿರಿಸುತ್ತಿದ್ದ, ಓದಲು ಪುಸಲಾಯಿಸುತ್ತಿದ್ದ. ವಿಚಿತ್ರವೆಂದರೆ ಗದ್ಯವನ್ನು ಗಮಕ ಶೈಲಿಯಲ್ಲಿ, ಅದು ತನ್ನ ದೃಷ್ಟಿಯಲ್ಲಿ ಭಾಷೆಗೆ ಕೊಡುವ ಕಿಮ್ಮತ್ತು, ಕುಲಕ್ಕೆ ಸಂಬಂಧಿಸಿದ ಕೀಳರಿಮೆ ನೀಗಿಸಿಕೊಳ್ಳಲೆಂದೋ, ಅಪಮಾನಗಳ ಮೂಲಕಾರಣಗಳನ್ನು ಬೆದಕಲೆಂದೋ ಕಥೆಕಾದಂಬರಿಗಳನ್ನು ಓದಲಾರಂಭಿಸಿದೆ. ಹದಿಹರೆಯದ ದುರ್ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ ನನ್ನನ್ನು ರಕ್ಷಿಸಿದ್ದು, ಜೀವನೋತ್ಸಾಹ ತುಂಬಿ ಈತನಕ ಕೈಹಿಡಿದು ನಡೆಸಿದ್ದು ಅವತ್ತು ಓದಿದ ಕೃತಿಗಳೆ. ಆದ್ದರಿಂದ ಓದು ಎಂಬ ಪದಕ್ಕೆ ಬದಲಾಗಿ ಪಾರಾಯಣ ಎನ್ನುವುದು ಸೂಕ್ತವೇನೊ!
ಆಂಧ್ರ ಪ್ರದೇಶದ ಹಲವು ಊರುಗಳಲ್ಲಿದ್ದು ವಿದ್ಯಾರ್ಥಿಗಳಿಗೆ ಕೆಲದಶಕಗಳ ಕಾಲ ಕಲಿಸಿದ್ದೀರಿ. ನಿಮ್ಮ ಈ ಶಿಕ್ಷಕ ವೃತ್ತಿಯ ನಡುವೆ ಯಾವ ಬಗೆಯ ಓದು ನಿಮ್ಮನ್ನು ಹೆಚ್ಚಾಗಿ ಆಕರ್ಷಿಸಿತು? ಸ್ವಂತ ಖುಷಿಗಾಗಿ ನಡೆಯುವ ಓದನ್ನು ನೀವು ಹೇಗೆ ನೋಡುತ್ತೀರಿ?
ಕೊಟ್ಟೂರಲ್ಲಿ ಹುಟ್ಟಿದ್ದು ಮಾತ್ರ. ರೆಕ್ಕೆ ಬಲಿಯದ ಮುನ್ನ ಹಕ್ಕಿ ಹಾರಲು ಹೋಗಿ ಎಂಬ ವೀಸಿಯವರ ಪದ್ಯಕ್ಕೂ ನನ್ನ ಹದಿಹರೆಯಕ್ಕೂ ನೇರ ಸಂಬಂಧವಿದೆ, ಒಂದು ಹೊತ್ತಿನ ಊಟ ಅಸ್ತಿತ್ವ ರಕ್ಷಿಸಿಕೊಳ್ಳಲು ಹೋರಾಡುವಂತೆ ಮಾಡಿತು. ಆದ್ದರಿಂದ ಪ್ರೇಮಿಸುವ ಕಾಮಿಸುವ, ಸೌಂದರ್ಯದ ಸಹಜಸಂವೇದನೆ ಆವಾಹಿಸಿಕೊಳ್ಳುವ ವಯಸ್ಸಿನಲ್ಲಿ ಅಕ್ಷರಶಃ ಅಲೆಮಾರಿಯಾದೆ. ಇಪ್ಪತ್ತರೊಳಗೆ ನೂರಾರು ಊರುಗಳಲ್ಲಿ ತಿರುಗಾಡಿರಬಹುದು, ಆ ಸಂದರ್ಭದಲ್ಲಿಯೇ ಬದುಕಿನ ಸಾವಿರಾರು ನಮೂನೆಗಳನ್ನೂ, ಜೀವನಾನುಭವಗಳನ್ನೂ ದಕ್ಕಿಸಿಕೊಂಡೆ. ಈ ಹಿನ್ನೆಲೆಯ ನಾನು ಕಲಿತದ್ದು ಕಲಿಸಿದ್ದು ಜನ್ಮಸ್ಥಳದ ಆಜುಬಾಜಲ್ಲ್ಲಲ.
ದೂರದ ಆಂಧ್ರಪ್ರದೇಶದ ವಂದವಾಗಿಲಿ, ಗೂಳ್ಯಂಗಳಂಥ ಗ್ರಾಮ ಕು(ಸು)ಗ್ರಾಮಗಳಲ್ಲಿ. ಆ ಹಳ್ಳಿಗಳು ಇದ್ದದ್ದು, ಇರುವುದು ಸ್ವಾತಂತ್ರ್ಯೋತ್ತರ ಕ್ರೌರ್ಯದ ಪರಿಸರದಲ್ಲಿ, ಜಮೀನ್ದಾರಿ ವ್ಯವಸ್ಥೆಯ ಪ್ರಭಾವಲಯದಲ್ಲಿ. ಇಂಥ ಪರಿಸರದಲ್ಲಿ ಆರಂಭಿಸಿದ ನನ್ನ ಬದುಕಿಗೆ ಎಡಪಂಥೀಯ ವಿಚಾರಧಾರೆಯ ಆಸರೆ ಮತ್ತು ಉಸ್ತುವಾರಿ ಇತ್ತು. ಗ್ರಾಮೀಣ ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಜೀವನದುದ್ದಕ್ಕೂ ಹೆಣಗಿದ ಮಹಾತ್ಮನ ಪ್ರಭಾವಳಿಯಲ್ಲಿದ್ದ ಗಾಂಧೀಜಿ ಮತ್ತು ಬುಡಕಟ್ಟು ಜನಾಂಗಗಳ ಶ್ರೇಯೋಭಿವೃದ್ಧಿ ಸಲುವಾಗಿ ಹೆಣಗಿದ ಪ್ರಸಿದ್ಧ ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಅಲ್ಲದೆ ಶ್ರವಣಬೆಳ್ಗೊಳದ ಚಂದ್ರಗಿರಿಯ ತುದಿಯಲ್ಲಿ ಅಜರಾಮರ ಮುಗುಳ್ನಗೆಯನ್ನು ನಿರ್ಮಿಸಿದ ಶಿಲ್ಪಿ ಅರಿಷ್ಠನೇಮಿ ಇದ್ದರು. ಈ ಎಲ್ಲ ಕಂದೀಲುಗಳ ಬೆಳಕಲ್ಲಿ ಆ ಹಳ್ಳಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ನಾನಾ ಪ್ರದೇಶಗಳಲ್ಲಿ ಶಿಕ್ಷಕನ ಛದ್ಮವೇಷ ಧರಿಸಿ ಭವಿಷ್ಯೋತ್ತರ ಪ್ರಜೆಗಳನ್ನು ರೂಪಿಸಿದೆ.
ದೈನಂದಿಕ ಅನುಭವಗಳನ್ನು ಕಥೆಕಾದಂಬರಿಗಳ ರೂಪದಲ್ಲಿ ಅಭಿವ್ಯಕ್ತಿಸಿದೆ. ಆದ್ದರಿಂದ ನನ್ನ ದೃಷ್ಟಿಯಲ್ಲಿ ನವ್ಯೋತ್ತರ ಅದರಲ್ಲೂ ಗ್ರಾಮೀಣ ಪರಿಸರ ಮೂಲದ ಲೇಖಕ ಕೇವಲ ಅಕ್ಷರಾವಲಂಬಿಯಾಗಿರದೆ ವಾರಿಯರ್, ಕ್ರುಸೇಡರ್ ಆಗಿರಬೇಕು, ಅಂಥ ಬದುಕನ್ನು ಅಕ್ಷರಶಃ ಬದುಕಿದ ಆತ್ಮತೃಪ್ತಿ ನನ್ನದು. ನನ್ನ ಪರಿಸರವನ್ನು ಚೈತನ್ಯಶೀಲವಾಗಿಡಲಿಕ್ಕೆ ಪೂರಕವಾದ ಸಾಹಿತ್ಯವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದೆ. ಸಾಹಿತ್ಯಿಕ ಕೃಷಿ ಮತ್ತು ಓದು ಯಾವುದೇ ವ್ಯಕ್ತಿಯ ಒಂಟಿತನವನ್ನು ನೀಗಿಸುತ್ತದೆ, ಸಮಾಜದ ಒಳವಿನ್ಯಾಸಗಳನ್ನು ಪರಿಚಯಿಸುತ್ತದೆ, ಆತ್ಮವಿಶ್ವಾಸವನ್ನು ನೂರ‌್ಮಡಿಗೊಳಿಸುತ್ತದೆ ಮತ್ತು ತನ್ನ ಓದುಗನನ್ನು ತ್ರಿಕಾಲಜ್ಞಾನಿಯನ್ನಾಗಿಸುತ್ತದೆ. ಇದಕ್ಕೆ ನಾನೇ ನಿದರ್ಶನ, ಇದು ಅಹಂಕಾರದ ಮಾತಲ್ಲ.
ಪುಸ್ತಕಗಳ ಹೊರತಾಗಿ ಬದುಕನ್ನು, ಅದರ ಅನುಭವವನ್ನು ನಿಕಟವಾಗಿ ಓದಲು ಶುರುಮಾಡಿದ್ದು ಯಾವಾಗ?
ಇದೆಲ್ಲ ನಡೆದದ್ದು ಬಾಲ್ಯ ಮತ್ತು ಪ್ರೌಢತೆಗಳ ನಡುವೆ ಅಥವಾ ಬಳಿಕ. ನನಗೆ ಪುಸ್ತಕ, ಸಾಹಿತ್ಯ, ವೈಯಕ್ತಿಕ ಬದುಕು ಇವೆಲ್ಲ ಸೆಕೆಂಡರಿ ಮತ್ತು ಈ ಎಲ್ಲ ಪರಿಕರಗಳು ಹತಾರಗಳು, ಮಿಂಚುಳಗಳು ಮಾತ್ರ. ನನ್ನ ಪ್ರಥಮ ಆದ್ಯತೆ ಎಂದರೆ ಸಾಮಾಜಿಕ ಬದುಕು. ಕಳೆದ ಮೂರೂವರೆ ದಶಕದಲ್ಲಿ ಅಪ್ರಕಟಿತ ಗ್ರಾಮೀಣ ಬದುಕಿನ ಪ್ರತಿಯೊಂದು ಪುಟವನ್ನು ಓದುವ ಪ್ರಯತ್ನ ಮಾಡಿದ್ದೆೀನೆ. ಓದಿನಿಂದ ದಕ್ಕಿದ ಅನುಭವವನ್ನು ಅಕ್ಷರ ಸಾನ್ನಿಧ್ಯದಲ್ಲಿ ನಾಡವರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅಂಥ ಪ್ರಯತ್ನದ ಫಲವೇ ಕಥೆಗಳು ಕಾದಂಬರಿಗಳು.
ಯಾವ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅವು ನಿಮ್ಮ ಬದುಕು ಮತ್ತು ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆ ಎಂದು ಅನ್ನಿಸಿದೆಯೇ?
ನನಗೆ ಮಾರ್ಕ್ಸೂ ಅಂಬೇಡ್ಕರೂ ಲೋಹಿಯಾ ಎಷ್ಟು ಮುಖ್ಯವೋ, ಶಂಕರಾಚಾರ್ಯರ ಸೌಂದರ್ಯಲಹರಿ, ಪಂಪ ರನ್ನ ಕುಮಾರವ್ಯಾಸರ ಭಾರತಗಳು ಸಹ ಅಷ್ಟೇ ಮುಖ್ಯ. ಅಲ್ಲದೆ ಕಸೂತಿ, ರಂಗವಲ್ಲಿ, ಪಾಕಕಲೆ, ಜ್ಯೋತಿಷ ಚರಿತ್ರೆ ವಗೈರೆಗಳೆಲ್ಲ ಇಷ್ಟ. ಕಾರಣ ಏನೆಲ್ಲ ಅರಗಿಸಿಕೊಂಡು ಹೊಸದೊಂದನ್ನು ಜಗತ್ತಿಗೆ ದಯಪಾಲಿಸುವ ಚತುಷ್ಪಾದಿ ಗಾರ್ದಭ ನನಗೆ ಮಾದರಿ. ಸೃಜನಶೀಲ ಲೇಖಕ ತನಗೆ ಆಶ್ರಯ ಕಲ್ಪಿಸಿರುವ ಕೋಣೆಯ ಎಲ್ಲಾ ಕಿಟಕಿ ಬಾಗಿಲು ಗವಾಕ್ಷಿಗಳನ್ನು ಸದಾ ತೆರೆದಿಟ್ಟಿರುವುದು ತೀರಾ ಮುಖ್ಯ. ಆದ್ದರಿಂದ ಇಂಥ ಕೃತಿ ಪ್ರಭಾವ ಬೀರಿದೆ ಎಂದು ಹೇಳಿದರದು ಆತ್ಮವಂಚನೆಯಾದೀತು. ಈ ಎಲ್ಲಾ ಓದು ವಿಭಿನ್ನ ಮಸೂರಗಳಿರುವ ದೂರದರ್ಶಕ, ಸೂಕ್ಷ್ಮದರ್ಶಕ.
ನಿಮ್ಮ ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಅಥವಾ ಇಷ್ಟವಾದ ಪುಸ್ತಕಗಳ ಬಗ್ಗೆ ಹೇಳಿ.
ಅಕ್ಷರ ಕಲಿತ ರೋಮಾಂಚನವನ್ನು ಸಾರ್ಥಕಗೊಳಿಸಿದ್ದು ಎ.ಆರ್. ಕೃಷ್ಣಶಾಸ್ತ್ರಿಗಳ `ವಚನಭಾರತ'- ಅದರ ಕೈದೀವಿಗೆ ಬೆಳಕಲ್ಲಿ ಗ್ರಂಥಾಲಯಗಳ ಕಪಾಟುಗಳು ತಂತಾನೆ ತೆರೆದುಕೊಂಡವು. ಅಸಂಖ್ಯಾತ ಕೃತಿಗಳು ಸಂತೋಷದಾಯಕ ಓದಿನ ಸಹಾಯದಿಂದ ಅಂತರಂಗವನ್ನು ಪ್ರವೇಶಿಸಿದವು. ಆದ್ದರಿಂದ ಅವು ಇಂಥವೇ ಎಂದು ಹೇಳುವ ಧೈರ್ಯವಿಲ್ಲ.
ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ, ಅದನ್ನು ಓದುತ್ತಿರುವವರು ಹೊತ್ತು ಕಳೆಯಲು ಓದುತ್ತಿರುವ ಹಿರಿಯರು ಎಂಬ ಮಾತುಗಳು  ಆಗಾಗ ಕೇಳಿಬರುತ್ತಲೇ ಇರುತ್ತವೆ. ಕನ್ನಡದ ಪ್ರಮುಖ ಗದ್ಯ ಲೇಖಕರಾಗಿ ನಿಮಗೆ ಕನ್ನಡದ ಸಂದರ್ಭದಲ್ಲಿ ಈ ಕುರಿತು ಏನನ್ನಿಸುತ್ತದೆ?
ಪುಸ್ತಕ ಓದುವವರು ಕಡಿಮೆಯಾಗಿದ್ದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಕಾಶಕರಾಗಲೀ, ಸಾಲಿಯಾನ ಸಹಸ್ರಗಟ್ಟಲೆ ಪುಸ್ತಕಗಳಾಗಲೀ ಯಾಕೆ ಪ್ರಕಟವಾಗುತ್ತಿದ್ದವು! ಪ್ರಭುಶಂಕರ್, ಶಿವರುದ್ರಪ್ಪ, ಕಣವಿ, ಸಿನ್ನಾರ್, ಎಚ್ಚೆಸ್ಸಾರ್‌ರಂಥವರೊಂದೇ ಅಲ್ಲದೆ ಐಟಿಬಿಟಿ ಕ್ಷೇತ್ರದಲ್ಲಿರುವ ಹೊಸತಲೆಮಾರಿನ ಯುವಕ ಯುವತಿಯರು ಗಂಭೀರ ವಾಚಕರಾಗಿದ್ದಾರೆ. ನನ್ನ ಹೆಚ್ಚಿನ ಕಥೆಕಾದಂಬರಿಗಳನ್ನು ಓದಿ ಪ್ರತಿಕ್ರಿಯಿಸುತ್ತಿರುವವರು ಇವರೇ. ನನ್ನ ಆತ್ಮಕತೆ `ಗಾಂಧಿಕ್ಲಾಸು', `ಅರಮನೆ'ಯನ್ನು ಓದಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವವರಲ್ಲಿ ಪೊಲೀಸರು, ಬಸ್ ಕಂಡಕ್ಟರುಗಳು, ಕೃಷಿಕಾರ್ಮಿಕರು, ಹಮಾಲಿಗಳೂ ಇದ್ದಾರೆ.
ಓದನ್ನು ಹೆಚ್ಚು ವ್ಯಾಪಕಗೊಳಿಸಲು ನಮ್ಮ ಪ್ರಕಾಶಕರು, ಲೇಖಕರು ಏನು ಮಾಡಬಹುದು?
ಓದನ್ನು ಜನಪ್ರಿಯಗೊಳಿಸಲು ಕನ್ನಡದ ಹಲವು ಪ್ರಕಾಶಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಲೇ ಇದ್ದಾರೆ. ರಾಜಸ್ತಾನಿ ಮೂಲದ ಸಪ್ನ ಬುಕ್ ಹೌಸ್ ಅತ್ಯಾಕರ್ಷಕ ಬುಕ್ ಮಾಲ್ ವಿನ್ಯಾಸಗೊಳಿಸಿದೆ,  ಕಿರಿಯ ಪ್ರಕಾಶಕ ಐಟಿ ಪದವೀಧರ ಗುರುಪ್ರಸಾದ್ ಪ್ರತಿ ರವಿವಾರ ಲೇಖಕರನ್ನು ತಮ್ಮ ಆಕೃತಿ ಪುಸ್ತಕ ಮಳಿಗೆಗೆ ಬರಮಾಡಿಕೊಂಡು ಸಂವಾದ ಏರ್ಪಡಿಸುತ್ತಿದ್ದಾರೆ. ಓದನ್ನು ವ್ಯಾಪಕಗೊಳಿಸಲು ಮುಖ್ಯವಾಗಿ ಲೇಖಕರು `ಟಾಡಾ' (ಟಿಎ+ಡಿಎ) ಕೈದಿಗಳಾಗಬಾರದು. ಅರ್ಥವಾಗದ ಸಾಹಿತ್ಯಕ ಪರಿಭಾಷೆಯನ್ನು ತ್ಯಜಿಸಿ ಸರಳತೆಯನ್ನು ರೂಢಿಸಿಕೊಳ್ಳಬೇಕು. ಚಾರ್ಲ್ಸ್ ಡಿಕನ್ಸ್ ಸಾಮಾನ್ಯ ಜನರಿರುವಲ್ಲಿಗೆ ಹೋಗಿ ತನ್ನ ಅಪ್ರಕಟಿತ ಕಾದಂಬರಿಯ ಭಾಗಗಳನ್ನು ವಾಚಿಸುತ್ತಿದ್ದನಂತೆ. ಆದರೆ ಇದೆಲ್ಲ ಲೇಖಕ ಅಹಂ ತ್ಯಜಿಸಿದಾಗ ಮಾತ್ರ.
 ಈಗ ಏನನ್ನು ಓದುತ್ತಿದ್ದೀರಿ, ಬರೆಯುತ್ತಿದ್ದೀರಿ ?
ಕಳೆದೆರಡು ದಿವಸಗಳಿಂದ ಓದುತ್ತಿರುವ ಪುಸ್ತಕ ಪ್ರೊ. ಸಿ.ಎನ್. ರಾಮಚಂದ್ರನ್ ಅವರ ಆತ್ಮಕತೆ `ನೆರಳುಗಳ ಬೆನ್ನುಹತಿ'್ತ ಮತ್ತು ಡಾ. ಎಚ್.ಎಸ್. ರಾಘವೇಂದ್ರರಾವ್ ಕನ್ನಡಕ್ಕೆ ತಂದಿರುವ ಕಪ್ಪುಕವಿತೆಗಳ ಸಂಕಲನ. ಓದಿನ ವಿರಾಮದ ನಡುವೆ ವಾರಕ್ಕೊಂದು ಕಥೆ ಬರೆಯುತ್ತಿರುವೆ. ಕಥೆಗಳನ್ನು ಬರೆಯದೆ ತುಂಬ ದಿವಸಗಳಾಗಿದ್ದವು ಅದಕ್ಕೆ. ನಲವತ್ತು ಕಥೆಗಳನ್ನು ಪೂರೈಸಿದ ಬಳಿಕ ಒಂದೆರಡು ಕಾದಂಬರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ನನಗೆ ಬರೆಯುವುದೆಂದರೆ ಧ್ಯಾನ, ಓದುವುದೆಂದರೆ ಯೋಗಾಭ್ಯಾಸ.
ನೀವು ಬರೆಯಲು ಆರಂಭಿಸಿದ ದಿನಮಾನಗಳಿಗೆ ಹೋಲಿಸಿದರೆ ನಿಮ್ಮ ಬರಹಗಳಿಗೆ ಓದುಗರ ಸ್ಪಂದನ ಹೇಗಿದೆ ? ನಿಮ್ಮ ಯಾವ ಕೃತಿಗೆ ಓದುಗರ ಹೆಚ್ಚಿನ ಪ್ರತಿಕ್ರಿಯೆ ಬರುತ್ತದೆ?
ಸಮಾಜದ ಎಲ್ಲಾ ರಂಗದ ಎಲ್ಲಾ ಜಾಯಮಾನದ ಓದುಗರು ನನ್ನ ಕೃತಿಗಳಂಗಳದಲ್ಲಿದ್ದಾರೆ, ಅಥವಾ ನನ್ನ ಬಹುಪಾಲು ಕೃತಿಗಳು ವಾಚಕರ ಅಭಿಮಾನದಂಗಳದಲ್ಲಿವೆ. ವಾಚಕರ ಅಭಿಮಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾನು ಅದೃಷ್ಟವಂತ. ಆದರೆ ನನ್ನ ಶಾಮಣ್ಣ, ಅರಮನೆಯಂಥ ಕಾದಂಬರಿಗಳು, ಆತ್ಮಕತೆ ಗಾಂಧಿಕ್ಲಾಸು ಮತ್ತು ಅಂಕಣ ಬರಹಗಳ ಸಂಕಲನ ರಾಯಲಸೀಮೆ ಹೆಚ್ಚು ಜನಪ್ರಿಯಗೊಂಡಿರುವ ಕೃತಿಗಳು.
ಮಕ್ಕಳ ಓದಿಗೆ ಯಾವ ಲೇಖಕ/ ಕೃತಿಯನ್ನು ನೀವು ಶಿಫಾರಸು ಮಾಡಲು ಬಯಸುತ್ತೀರಿ?
ಒಂದಾನೊಂದು ಕಾಲದಲ್ಲಿ ಚಿಕ್ಕವರಿದ್ದ ನಮಗೆ ಥಟ್ಟನೆ ನೆನಪಾಗುವುದು ಪಂಜೆ, ರಾಜರತ್ನಂ, ಬಿರಾದಾರ ಗುಂಡಣ್ಣರಂಥ ಲೇಖಕರ ಮಕ್ಕಳ ಪದ್ಯಗಳು, ಆಗ ಬಾಯಿಪಾಠ ಮಾಡಿದ ಹಲವು ಪದ್ಯಗಳು ಈಗಲೂ ನೆನಪಲ್ಲಿವೆ. ಕಾರಣ ಆ ಕಾಲದಲ್ಲಿ ಕನ್ನಡ ಉಪಾಧ್ಯಾಯರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ವಿಸ್ಮಯ ಹುಟ್ಟಿಸುವ ರೀತಿಯಲ್ಲಿ ಬೋಧಿಸುತ್ತಿದ್ದರು. ನಮ್ಮಳಗಿನ ಎಳಸು ಬರಹಗಾರನನ್ನು ಪ್ರೋತ್ಸಾಹಿಸುತ್ತಿದ್ದರು. ಆ ಕಾಲದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪಠ್ಯಕ್ರಮವೂ ಭಾಷೆ ಮತ್ತು ಸಾಹಿತ್ಯಕ್ಕೆ ಪೂರಕವಾಗಿತ್ತು. ಆದರೆ ಬದಲಾಗಿರುವ ಸನ್ನಿವೇಶದಲ್ಲಿ ಕನ್ನಡ ಪಠ್ಯ ಇರುವುದು ಕಣ್ಣೊರೆಸುವುದಕ್ಕೆ ಮಾತ್ರ. ಕಲಿಕೆ ಮತ್ತು ಕಲಿಸುವುದರ ನಡುವೆ ಆಸಕ್ತಿ ವಿಸ್ಮಯಗಳಿಲ್ಲ. ಇವೆಲ್ಲ ಗಮನದಲ್ಲಿಟ್ಟುಕೊಂಡು ನವೋದಯ ಕಾಲದ ಶಿಶುಸಾಹಿತ್ಯವನ್ನು ವರ್ತಮಾನ ಸಂದರ್ಭದಲ್ಲಿ ಅಳವಡಿಸುವುದು ಮುಖ್ಯ.

ಗುರುವಾರ, ಮೇ 2, 2013

ಬದಲಾವಣೆ ನಿರೀಕ್ಷೆಯಲ್ಲಿ ತುಯ್ದಾಡುತ್ತಿರುವ ಬಳ್ಳಾರಿ

-ದಿನೇಶ್ ಅಮಿನ್ ಮಟ್ಟು


ಸೌಜನ್ಯ: ಪ್ರಜಾವಾಣಿ


 `ನಳದಲ್ಲಿ ದಿನಾ ಉಪ್ಪು ನೀರು ಬಿಡ್ತಾರೆ, ಮೂರು ದಿವ್ಸಕ್ಕೊಮ್ಮೆ ಒಂದು ತಾಸು ಸಿಹಿನೀರು. ಸವುಳು ನೀರು ಕುಡಿದು ಮಕ್ಕಳ ಕೈಕಾಲೆಲ್ಲ ಸೊಟ್ಟಗಾಗಿವೆ' ಎಂದು ಗೋಳಾಡಿದರು ಮೋಕಾ ಗ್ರಾಮದ ಜಲಜಮ್ಮ. `ಎಂಟನೆ ತರಗತಿ ವರೆಗೆ ಮಾತ್ರ ಇಲ್ಲಿ ಸಾಲಿ ಇದೆ, ಮುಂದೆ ಕಲಿಯುವವರು ಬಳ್ಳಾರಿಗೆ (23 ಕಿ.ಮೀ. ದೂರ) ಹೋಗ್ಬೇಕು, ಮಕ್ಕಳು ನಡೆದುನಡೆದು ಸವೆದುಹೋಗ್ಯಾವೆ' ಎಂದು ದುಃಖಿಸಿದರು ಕಾರೇಕಲ್ ಗ್ರಾಮದ ಈರಮ್ಮ.

`ಮೂರು ವರ್ಷಗಳಿಂದ ಮಳೆ ಇಲ್ಲ, ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಐದು ಸಾವಿರ ರೂಪಾಯಿ ಪರಿಹಾರ ಕೊಡ್ತೇವೆ ಎಂದು ಹೇಳಿ ಹೋದರು, ಕೈಗೆ ಬಂದದ್ದು 500 ರೂಪಾಯಿ' ಎಂದು ದೂರಿದರು ೀಳ್ಳಗುರ್ಕಿಯ ರೈತ ಶಂಕ್ರಪ್ಪ. `ಊರಲ್ಲೊಂದು ಸರ್ಕಾರಿ ದವಾಖಾನೆ ಇದೆ, ಅಲ್ಲಿ ಡಾಕ್ಟರ್ ಇಲ್ಲ, ಯಾರು ಹೋಗಿ ಕೇಳಿದರೂ ಅಲ್ಲಿರುವ ನರ್ಸಮ್ಮ ಔಷಧಿ ಇಲ್ಲ ಎಂದು ರಾಗ ತೆಗೆಯುತ್ತಾಳೆ' ಎಂದು ಸಿಟ್ಟುಮಾಡಿಕೊಂಡರು ವೀರಾಪುರದ ಸಮಾಜ ಸೇವಕ ಹೊನ್ನೂರಪ್ಪ...

ಈ ಗ್ರಾಮಗಳ ಜನರ ಕರುಣಾಜನಕ ಬದುಕಿನ ಕತೆಯನ್ನು ಹೀಗೆ ಹೇಳುತ್ತಲೇ ಹೋಗಬಹುದು. ಇವರೆಲ್ಲ ಆಂಧ್ರಪ್ರದೇಶದ ಗಡಿಯಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚೇಳ್ಳಗುರ್ಕಿ, ವೀರಾಪುರ, ಕಾರೇಕಲ್, ಮೋಕಾ ಗ್ರಾಮಗಳಿಗೆ ಸೇರಿದವರು. ಈ ಕ್ಷೇತ್ರದ ಹಾಲಿ ಶಾಸಕ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಶ್ರಿರಾಮುಲು.

ಈ ಗ್ರಾಮಗಳಿಗೆ ಹೋಗುವ ದಾರಿಯಲ್ಲಿಯೇ ಸಿಗುವ ಜೋಳದರಾಶಿಯಲ್ಲಿ ಅರಮನೆಯಂತೆ ಕಟ್ಟಿದ ರಾಮುಲು ಅವರ ಕುಟುಂಬದ ಮೂಲ ಮನೆ ಇದೆ. `ನಮ್ಮೂರಿಗೆ ಯಜಮಾನರೇ ಇಲ್ಲದಂಗ್ ಆಗಿದೆ' ಎಂದಷ್ಟೇ ಹೇಳಿ ತನ್ನ ಹೆಸರನ್ನೂ ತಿಳಿಸದೆ ಆ ಮನೆ ಕಡೆ ಬೆರಳು ಮಾಡಿ ಹೊರಟೇ ಹೋದ ಬಸ್ಸಿಗೆ ಕಾಯುತ್ತಾ ನಿಂತಿದ್ದ ರಾಜವೀರಪ್ಪ.

`ನೀವು ಹೋಗಿದ್ದು ನಾಲ್ಕೈದು ಹಳ್ಳಿಗಳು ಮಾತ್ರ ಸಾರ್, ಇಡೀ ಬಳ್ಳಾರಿ ಜಿಲ್ಲೆ ಹೀಗೆಯೇ ಇದೆ' ಎಂದರು ನನ್ನ ಪ್ರವಾಸದ ಅನುಭವವನ್ನು ಕೇಳಿದ ಬಳ್ಳಾರಿಯ ಪತ್ರಕರ್ತ ಮಿತ್ರರು. 
 
ಹೀಗಿದ್ದರೂ ಶ್ರಿರಾಮುಲು ಈ ಬಾರಿಯೂ ಗೆದ್ದುಬಿಟ್ಟರೆ ನನಗಂತೂ ಆಶ್ಚರ್ಯವಾಗಲಾರದು. ಇದಕ್ಕೆ ಕಾರಣ ತಮ್ಮ ಕಷ್ಟ-ಕಾರ್ಪಣ್ಯಗಳನ್ನೆಲ್ಲ ನೋವಿನಿಂದ ತೋಡಿಕೊಂಡ ಜನರ ಇನ್ನೊಂದು ಮುಖದ ದರ್ಶನ. `ಜೆಡಿಎಸ್' ಎಂದು ಸ್ನೇಹಿತರಿಂದಲೇ ಆರೋಪಕ್ಕೊಳಗಾದ ಚೇಳ್ಳಗುರ್ಕಿಯ ಶಂಕ್ರಪ್ಪ ಅವರನ್ನು ಹೊರತುಪಡಿಸಿ ಉಳಿದಂತೆ ಜಲಜಮ್ಮ, ಈರಮ್ಮ, ಹೊನ್ನೂರಪ್ಪ ಮತ್ತಿತರರು ಶ್ರಿರಾಮುಲು ವಿರುದ್ಧ ಚಕಾರ ಎತ್ತಲಿಲ್ಲ.

`ರಾಮುಲು ಒಳ್ಳೆ ಮನುಷ್ಯ, ಸುತ್ತ ಇರೋ ಜನ ಸರಿ ಇಲ್ಲ', `ಆಯಪ್ಪ ಏನ್ ಮಾಡ್ಲಿಕಾಗ್‌ತ್ತೆ, ಇಡೀ ರಾಜ್ಯ ಸುತ್ತಬೇಕು', `ನಮ್ ಹಣೇಲಿ ಇದೇ ರೀತಿ ಬರೆದುಬಿಟ್ಟಿರುವಾಗ ಬೇರೆಯವರನ್ನು ದೂರಿ ಏನ್ ಲಾಭ?' ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅವರೆಲ್ಲ ಪರೋಕ್ಷವಾಗಿ ಶ್ರೀರಾಮುಲು ಅವರನ್ನು ಸಮರ್ಥಿಸತೊಡಗಿದ್ದರು. ಊರಿನ ಸಮಸ್ಯೆಗಳನ್ನು ಭೂತಾಕಾರವಾಗಿ ಬಣ್ಣಿಸಿದ ಚೇಳ್ಳಗುರ್ಕಿಯ ಹಿರಿಯರೊಬ್ಬರು ಕೊನೆಗೆ ಶ್ರೀರಾಮುಲು ಅವರನ್ನು ಹೊಗಳತೊಡಗಿದಾಗ ಪಕ್ಕದಲ್ಲಿದ್ದ ಹಿರಿಯನೊಬ್ಬ ಬಳಿಬಂದು ಪಿಸುದನಿಯಲ್ಲಿ `ಅವನ ಜಾತಿ ಕೇಳಿಬಿಡಿ ಸತ್ಯ ಗೊತ್ತಾಗುತ್ತದೆ' ಎಂದ. ನಾನು ಕೇಳಲಿಲ್ಲ ಸತ್ಯ ಗೊತ್ತಾಗಿತ್ತು.
ಅಂದಾಜು ಎರಡರಿಂದ ನಾಲ್ಕು ಸಾವಿರದವರೆಗೆ ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಲ್ಲಿ ಬಹುಸಂಖ್ಯೆಯಲ್ಲಿರುವವರು ಶ್ರೀರಾಮುಲು ಅವರು ಸೇರಿರುವ ನಾಯಕ ಜಾತಿಯವರು. ಈ ಮುಗ್ಧ ಜನರ ದೂರು, ದುಮ್ಮಾನಗಳೆಲ್ಲ ಮತಯಂತ್ರದ ಬಟನ್ ಒತ್ತುವ ಗಳಿಗೆಯಲ್ಲಿ ಉಕ್ಕಿಬರುವ ಜಾತಿ ಪ್ರೀತಿ ಎದುರು ಕರಗಿಹೋಗುತ್ತದೆ. ಇದು ಶ್ರಿರಾಮುಲು ಅವರಿಗೆ ಮಾತ್ರವಲ್ಲ, ಕೇವಲ ಜಾತಿ ಮತ್ತು ದುಡ್ಡನ್ನಷ್ಟೇ ಬಳಸಿಕೊಂಡು ರಾಜಕೀಯ ಮಾಡುವ ಎಲ್ಲರಿಗೂ ಗೊತ್ತಿರುವ ಸತ್ಯ.

ಜಾತಿ ಆಗಲೇ ಶ್ರಿರಾಮುಲು ಅವರನ್ನು ಅರ್ಧ ಗೆಲ್ಲಿಸಿದೆ, ಇನ್ನರ್ಧ ಗೆಲುವು ಸಂಪಾದನೆಗಾಗಿ ಅವರು `ಕೊಡುಗೈ ದಾನಿ'ಗಳಾಗಬೇಕು. ಮೋಕಾದಲ್ಲಿ ನಮ್ಮ ಕಾರು ಕಂಡು ಆಸೆಯಿಂದ ಓಡಿಬಂದ ಮಧ್ಯವಯಸ್ಕರ ಗುಂಪೊಂದು ವಿಷಯ ತಿಳಿದು `ಹಿಂದೆಲ್ಲ ಇಷ್ಟೊತ್ತಿಗೆ ಒಂದು ರೌಂಡು ಮುಗಿದುಹೋಗುತ್ತಿತ್ತು, ಈ ಬಾರಿ ಬಹಳ ಸ್ಟ್ರಿಕ್ಟ್ ಅಂತೆ ಏನೂ ಬಂದಿಲ್ಲ' ಎಂದು ನಿರಾಶೆ ವ್ಯಕ್ತಪಡಿಸಿದರು. `ಲೀಡರ್‌ಗಳ ಕೈಗೆ ಕೊಟ್ಟು ಹೋಗಿದ್ದಾರಂತೆ, ನಮ್ಮ ಕೈಗೆ ಬಂದಿಲ್ಲ' ಎಂದರು ಇನ್ನೊಬ್ಬ ವ್ಯಕ್ತಿ ದೂರು ಹೇಳುವ ದನಿಯಲ್ಲಿ..

`ಹಿಂದಿನ ಚುನಾವಣೆಯ ಕಾಲದಷ್ಟು ದುಡ್ಡು ಈಗ ಹರಿದಾಡುತ್ತಿಲ್ಲ' ಎನ್ನುವ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿದೆ. ಜನಾರ್ದನ ರೆಡ್ಡಿಯವರ ಅಣ್ಣ ಸೋಮಶೇಖರ ರೆಡ್ಡಿ ಚುನಾವಣೆಯಿಂದ ಹಿಂದೆ ಸರಿದದ್ದು, ಮತ್ತೊಬ್ಬ ಅಣ್ಣ ಕರುಣಾಕರ ರೆಡ್ಡಿ ಬಿಜೆಪಿಯಲ್ಲಿಯೇ ಉಳಿದದ್ದು,  ಶ್ರಿರಾಮುಲು ಅವರ ಬಂಟ ನಾಗೇಂದ್ರ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು... ಈ ಬೆಳವಣಿಗೆಗಳೆಲ್ಲ ಬಳ್ಳಾರಿ ಜನರನ್ನು ಗೊಂದಲಕ್ಕೆ ತಳ್ಳಿದೆ. `ರೆಡ್ಡಿ ಕುಟುಂಬ ಮತ್ತು ಶ್ರಿರಾಮುಲು ಸಂಬಂಧ ಕೆಟ್ಟುಹೋಗಿದೆ, ಅದಕ್ಕೆ ದುಡ್ಡಿಲ್ಲ' ಎನ್ನುವವರು ಇದ್ದಹಾಗೆಯೇ `ಇವೆಲ್ಲ ಅವರೇ ಕೂಡಿ ಮಾಡುತ್ತಿರುವ ನಾಟಕ' ಎನ್ನುವವರೂ ಇದ್ದಾರೆ.
`ಈ 10-12 ವರ್ಷಗಳಲ್ಲಿ ನಮ್ಮ ಜನರ ಆತ್ಮಸಾಕ್ಷಿಯೇ ಸತ್ತುಹೋಗಿದೆ' ಎಂದು ಸಿಟ್ಟಿನಿಂದಲೇ ಹೇಳಿದರು ಲೋಹಿಯಾ ಪ್ರಕಾಶನದ  ಚೆನ್ನಬಸವಣ್ಣ ಬಳ್ಳಾರಿಯ ಕತೆಯನ್ನು ಬಣ್ಣಿಸುತ್ತಾ.  ಹೆಚ್ಚುಕಡಿಮೆ ದಶಕದ ಅವಧಿಯಲ್ಲಿ ಕಣ್ಣೆದುರೇ ಬದಲಾಗಿ ಹೋದ ಬಳ್ಳಾರಿಯ ಮುಖಗಳನ್ನು ಸಮೀಪದಿಂದ ನೋಡಿ ಸಂಕಟಪಡುತ್ತಿರುವವರು ಅವರು.

`ಕಕ್ಕ, ಮಾಮಾ, ಅಣ್ಣಾ ಈ ರೀತಿ ಸಂಬಂಧ ಹಚ್ಚಿ ಮಾತನಾಡಿಯೇ ನಮಗೆ ಅಭ್ಯಾಸ. ಹಿಂದೆಯೂ ಇಲ್ಲಿಯೂ ಒಂದಷ್ಟು ಗೂಂಡಾಗಿರಿ, ದರ್ಪ ದೌರ್ಜನ್ಯಗಳಿದ್ದವು. ಆದರೆ ಸಾಮಾನ್ಯ ಜನರು ಅವರ ಪಾಡಿಗೆ ಬದುಕಲು ತೊಂದರೆ ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾಗಿ ಹೋಯಿತು. ಗಣಿಲೂಟಿಕೋರರು ನಡೆಸಿದ ಅಟ್ಟಹಾಸದಿಂದ ನಲುಗಿಹೋಗಿರುವ ನಮ್ಮ ಬಳ್ಳಾರಿ ಸುಧಾರಿಸಿಕೊಳ್ಳಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು' ಎಂದು ನಿಟ್ಟುಸಿರುಬಿಟ್ಟರು ಚೆನ್ನಬಸವಣ್ಣ.
`ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಬದಿಯಲ್ಲಿ ಮುತ್ತುರತ್ನ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು...' ಎಂಬ ಕತೆಯನ್ನು ಕೇಳುತ್ತಾ ಬೆಳೆದವರು ಬಳ್ಳಾರಿಯ ಜನ. ಇದ್ದಕ್ಕಿದ್ದ ಹಾಗೆ ಅವರು ಗತವೈಭವವನ್ನೇ ಹೋಲುವ ಘಟನಾವಳಿಗಳಿಗೆ ಮೂಕ ಸಾಕ್ಷಿಯಾಗುವಂತಾಯಿತು. `ರೆಡ್ಡಿಗಳು ಬೆಳಿಗ್ಗೆ ತಿಂಡಿತಿನ್ನಲು ಬೆಂಗಳೂರಿಗೆ, ಮಧ್ಯಾಹ್ನ ಬಿರಿಯಾನಿ ತಿನ್ನಲು ಹೈದರಾಬಾದ್‌ಗೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರಂತೆ', `ರೆಡ್ಡಿಗಳು ಚಿನ್ನದ ಕುರ್ಚಿಯಲ್ಲಿ ಕೂರ‌್ತಾರಂತೆ, ಚಿನ್ನದ ಚಮಚದಲ್ಲಿ ಊಟ ಮಾಡ್ತಾರಂತೆ' ಎಂಬಿತ್ಯಾದಿ ಸುದ್ದಿಗಳು ಬಳ್ಳಾರಿಯ ಗಾಳಿಯಲ್ಲಿ ನಿತ್ಯ ಹಾರಾಡುತ್ತಿದ್ದುದನ್ನು ಇಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ಮೆರೆದಾಡಿದ, ಇಡೀ ಸರ್ಕಾರ ತಮ್ಮ ಅಂಗೈಮುಷ್ಟಿಯಲ್ಲಿದೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ ರೆಡ್ಡಿಸೋದರರು ಕನಿಷ್ಠ ಬಳ್ಳಾರಿ ನಗರದ ಸುಧಾರಣೆಯನ್ನಾದರೂ ಮಾಡಬಹುದಿತ್ತು. ಒಂದೆರಡು ಮುಖ್ಯ ರಸ್ತೆಗಳನ್ನು ಹೊರತುಪಡಿಸಿದರೆ ಬಳ್ಳಾರಿ ನಗರ ದೊಡ್ಡ ಕೊಳೆಗೇರಿಯಂತಿದೆ. ಗುಂಡಿಬಿದ್ದ ರಸ್ತೆಗಳು, ಕಿತ್ತುಹೋಗಿರುವ ಕಾಲ್ದಾರಿಗಳು, ಅನಿಯಂತ್ರಿತವಾಗಿ ನಡೆಯುತ್ತಿರುವ ಒತ್ತುವರಿಗಳು, ಕೈಕೊಡುತ್ತಲೇ ಇರುವ ವಿದ್ಯುತ್, ಮರೀಚಿಕೆಯಂತೆ ಕಾಡುತ್ತಿರುವ ಕುಡಿಯುವ ನೀರು- ಒಂದು ನಗರಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ್ಯಾವುದೂ ಈ ನಗರದಲ್ಲಿ ಇಲ್ಲ.

`ಯಾಕೆ ಇಲ್ಲ ಎಂದರೆ ಬೇಕು ಎಂದು ಕೇಳುವವರೇ ಇಲ್ಲ ಸಾರ್ ಇಲ್ಲಿ. ಎಲ್ಲವನ್ನೂ ಸಹಿಸಿಕೊಂಡು ಇವೆಲ್ಲ ಸಾಮಾನ್ಯ ಎಂಬಂತೆ ಜನ ಬದುಕುತ್ತಿದ್ದಾರೆ. ಬೇರೆ ನಗರಗಳನ್ನು ನೋಡಿ ಬಂದ ನಮಗೆ ಇವೆಲ್ಲ ನೋಡಿ ಅಸಹ್ಯ ಅನಿಸುತ್ತಿದೆ' ಎಂದ ನಿವೃತ್ತ ಎಂಜಿನಿಯರ್ ಶಿವರಾಮಯ್ಯನವರ ಮಾತಿನಲ್ಲಿ ಅಸಹಾಯಕತೆ ಇತ್ತು.

`ಜನರಲ್ಲಿ ದುಡ್ಡಿನ ಲೋಭವನ್ನು ಹುಟ್ಟಿಸಿದ್ದು ಬಿಟ್ಟರೆ ಅವರೇನೂ ಮಾಡಲಿಲ್ಲ, ಕೆಟ್ಟುಹೋದವರಲ್ಲಿ ಹೆಚ್ಚಿನವರು ಯುವಕರು. ಒಂದು ತಲೆಮಾರು ಹಾಳಾಗಿ ಹೋಯಿತು' ಎಂದರು ವೀರಾಪುರದಲ್ಲಿರುವ ತಮ್ಮ ಮನೆಗೆ ಬಳ್ಳಾರಿಯಿಂದ ಬಂದಿದ್ದ ವಕೀಲ ಜಯರಾಮಯ್ಯ. `ಬದಲಾವಣೆ ಎಂದರೆ ಏನು?' ಒಬ್ಬ ಗಣಿಧಣಿಯನ್ನು ಸೋಲಿಸಿ ಇನ್ನೊಬ್ಬನನ್ನು ಆರಿಸುವುದೇ? ಸುಮ್ಮನೆ ರೆಡ್ಡಿ ಸೋದರರನ್ನು ದೂರಿ ಏನು ಪ್ರಯೋಜನ ಸಾರ್. ಈ ಕಾಂಗ್ರೆಸ್ ಪಕ್ಷದವರೇ ಗಣಿಲೂಟಿಯ ಮೂಲಪುರುಷರು. ಅವರು ಹೋಗಿ ಇವರು ಬರಬಹುದು. ಬಳ್ಳಾರಿಗೆ ಗಣಿಲೂಟಿಕೋರರಿಂದ ಮುಕ್ತಿ ಇಲ್ಲ' ಎಂದು ಸಣ್ಣಭಾಷಣವನ್ನೇ ಮಾಡಿಬಿಟ್ಟ ತನ್ನನ್ನು ವಿದ್ಯಾರ್ಥಿ ಮುಖಂಡ ಎಂದು ಪರಿಚಯಿಸಿಕೊಂಡ ಚೇತನ್.

`ಅಷ್ಟೊಂದು ನಿರಾಶರಾಗಬೇಕಾದ ಅಗತ್ಯವೂ ಇಲ್ಲ. ಅತಿರೇಕದ ಎರಡು ತುದಿಗಳನ್ನು ನಾವು ನೋಡಿ ಆಗಿದೆ. ದುಡ್ಡಿನ ಬಲದಿಂದ ನಿರ್ಲಜ್ಜರೀತಿಯಲ್ಲಿ ಮೆರೆದವರನ್ನೂ ನೋಡಿದ್ದೇವೆ. ಆ ರೀತಿ ಮೆರೆದವರು ಜೈಲು ಕಂಬಿ ಎಣಿಸುತ್ತಿರುವುದನ್ನೂ ನೋಡಿದ್ದೇವೆ. ಈ ಬೆಳವಣಿಗೆಗಳನ್ನು ಬಳ್ಳಾರಿಯ ಜನ ಹೇಗೆ ಸ್ವೀಕರಿಸಿದ್ದಾರೆ? ಅವರು ಕಲಿತ ಪಾಠವೇನು? ಇದು ಈ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗಲಿದೆ' ಎಂದು ಹೇಳಿದ ಚೆನ್ನಬಸವಣ್ಣ ಅವರ ಮಾತಿನಲ್ಲಿ ಬಳ್ಳಾರಿಯ ಜನರ ಬಗ್ಗೆ ಭರವಸೆ ಇತ್ತು.