ಗುರುವಾರ, ಏಪ್ರಿಲ್ 3, 2014

ಬಿಸಿಲನಾಡಿನಲ್ಲಿ ಅರಳಿದ ಹೊಸ ಸಂವೇದನೆ-ಸುಕನ್ಯಾ ಬಿ. ಮಾರುತಿ.



-ಸುಧಾ ಚಿದಾನಂದಗೌಡ


ಲಂಗ ತೊಡರಿ ಬಿದ್ದೆ,/ಪಂಚೆಉಟ್ಟ ಅವಗೆದ್ದ.
’ಅಂದು’ ಬಿದ್ದ ನಾನು/ಇನ್ನೂ ಎದ್ದೇ ಇಲ್ಲ..

ಎಂದು ಸರಳವಾಗಿ, ಸ್ಪಷ್ಟವಾಗಿ ಬೀಳುವ ಏಳುವ ಕ್ರಿಯೆಯನ್ನು ಸಾಮಾಜಿಕವಾಗಿ ಬುನಾದಿ ಇಟ್ಟುಕೊಂಡು ವೈಯಕ್ತಿಕ ಉದಾಹರಣೆ ಕೊಟ್ಟು ಬರೆದವರು ಸುಕನ್ಯಾ ಬಿ. ಇವರ ಇನ್ನೊಂದು ಸಾಕಷ್ಟು ಪ್ರಚಲಿತ ಮತ್ತು ಜನಪ್ರಿಯ ಕವಿತೆ ಹುಡುಗನಿಗೆಯ ಕೆಲಸಾಲುಗಳು ಹೀಗಿವೆ-

ನನ್ನ ಇಪ್ಪತ್ತೆಂಟನ್ನು
ಹದಿನೆಂಟಕ್ಕೆ ಇಳಿಸಿದ್ದಕ್ಕೆ
ನಿನಗೆ ಧನ್ಯವಾದ.

ಸುಕನ್ಯಾ ಎಂದೊಡನೆ ನೆನಪಾಗುವುದು ಈ ಕವಿತೆಯೇ. ಏಕೆಂದರೆ ನಾನು ಬಾಲ್ಯದಲ್ಲಿದ್ದಾಗ ಕೇಳಿದ ಈ ಕವನ ಆ ದಿನಗಳಲ್ಲಿ ಹೊಸಅಲೆಯನ್ನೇ ಎಬ್ಬಿಸಿತ್ತು. ಪ್ರಬುದ್ಧ ಮಹಿಳೆಯೊಬ್ಬಳು ತನಗಿಂತ ವಯಸಿನಲ್ಲಿ ಕಿರಿಯನಾದವನೊಬ್ಬ ತನ್ನನ್ನು ಛೇಡಿಸಿದಾಗಿನ ಪ್ರಸಂಗ ಈ ಕವಿತೆಯಲ್ಲಿ ಬರುತ್ತದೆ. ಮಹಿಳೆ ಮುಕ್ತವಾಗಿ ಬರೆಯುವುದನ್ನು ಸಮಾಜ ಬೆರಗುಗಣ್ಣಿನಿಂದ ಹಾಗೂ ಸ್ವಲ್ಪ  ಸಿಟ್ಟಿನಿಂದ ಕೂಡ ನೋಡುತ್ತಿದ್ದ, ದಲಿತ- ಬಂಡಾಯ-ಮಹಿಳಾ ಸಾಹಿತ್ಯದ ಬಿಸಿ ಕಾದು ನಿಗಿನಿಗಿಸುತ್ತಿದ್ದ ೭೦ರ ದಶಕದ ದಿನಗಳು ಅವು. ಲೇಖಕಿಯರನೇಕರು ಬಹುತೇಕ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದ ಈ ಕವನ ನನ್ನ ಕಿವಿಗೂ ಬಿದ್ದು ಅವರ ಬಗ್ಗೆ ಕುತೂಹಲ ತಳೆದು ನಮ್ಮೂರಿನವರೇ ಅಂತಲ್ಲಾ, ಎಲ್ಲಿದಾರೆ? ಎಂದು ಹುಡುಕಾಡುವ ಹೊತ್ತಿಗೆ ಸುಕನ್ಯಾ ಮೇಡಂ ಭೌಗೋಳಿಕವಾಗಿ ಬಳ್ಳಾರಿಜಿಲ್ಲೆಯಲ್ಲಿ ಇರಲೇ ಇಲ್ಲ. ೧೯೮೨ರಲ್ಲಿ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿಕೊಂಡ ಸುಕನ್ಯಾ ತವರಿನಿಂದ ಯಾರಾದರೂ ಸಾಹಿತ್ಯಾಸಕ್ತರು ಬಂದಾರಾ ಎಂದು ಎದುರುನೋಡುತ್ತಿರುತ್ತಾರೆ. ಭೇಟಿಯಾದಾಗ ಅಕ್ಕರೆ, ಆತ್ಮೀಯತೆಯಿಂದ ಹಚ್ಚಿಕೊಳ್ಳುವುದಲ್ಲದೆ ನಿನ್ನ ಕವನ ಇಲ್ಲಿ ಗೆದೈತಿ, ಇಲ್ಲಿ ಬಿದೈತಿ, ಇಲ್ಲಿ ಹೋಗೇಬಿಟೈತಿ ನೋಡು.. ಎಂದು ಕರಾರುವಾಕ್ಕಾಗಿ ಹಿಡಿದು ತೋರಿಸಬಲ್ಲ ಕನ್ನಡ ಗುರುವು ಹೌದು.

ಬದುಕು-ಬರಹ ಬೇರೆ ಬೇರೆಯಲ್ಲ ಎಂಬಂತೆ ಭಿನ್ನ ಭಿನ್ನವಾಗಿ ಸತತ ಮೂವತ್ತೈದು ವರ್ಷಗಳಿಂದ ಬರೆಯುತ್ತಿರುವ ಸುಕನ್ಯಾ ಈವರೆಗೆ ಪರಿಸರದಲ್ಲಿ, ಪಂಚಾಗ್ನಿ ಮಧ್ಯೆ, ನಾನು-ನನ್ನವರು, ತಾಜಮಹಲಿನ ಹಾಡು, ಬಿಂಬದೊಳಗಣ ಮಾತು ಎಂಬ ಐದು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇತ್ತೀಚೆಗೆ ೨೦೦೭ರಲ್ಲಿ ಈ ಎಲ್ಲ ಕವಿತೆಗಳನ್ನು ಒಟ್ಟುಗೂಡಿಸಿ ಸಪ್ನಾ ಬುಕ್ ಹೌಸ್ ನವರು ನಾನೆಂಬ ಮಾಯೆ ಶೀರ್ಷಿಕೆಯಡಿಯಲ್ಲಿ ಸಮಗ್ರ ಕವನಸಂಕಲನವನ್ನೂ ಪ್ರಕಟಸಿದ್ದಾರೆ. ಸಂಕೃತಿ, ಪ್ರಶಾಂತ, ಪ್ರಣಯಿನಿ ಎಂಬ ಪುಸ್ತಕಗಳನ್ನು ಸಹಸಂಪಾದಿಸಿದ್ದಾರೆ.

ಅಕ್ಷರ ಬೇತಾಳ/ಸುಮ್ಮನಿರಗೊಡುವುದಿಲ್ಲ,/ಬರೆಯದಿದ್ದರೆ ನನ್ನ ತಲೆಯನ್ನೇ/ಬಲಿ ಬೇಡುತ್ತದೆ.

   ಎಂದು  ಬೇತಾಳ ಕವಿತೆಯಲ್ಲಿ ಬರೆದಿರುವ ಸುಕನ್ಯಾ ಬರಹ ಎಂಬುದನ್ನೊಂದು ಕೆಲಸವೆಂದಾಗಲಿ, ಅನಿವಾರ್ಯವೆಂದಾಗಲಿ ಎಂದೂ ನಾ ಭಾವಿಸಲೇ ಇಲ್ಲ. ತಿಳಿದಾಗ, ತಾನಾಗೇ ಹುಟ್ಟಿದಾಗ ಕವಿತೆಗಳನ್ನು ಹರಿಬಿಟ್ಟೆ ಅಷ್ಟೇ. ಅದಕ್ಕೆ ಸುತ್ತಮುತ್ತಲಿನವರ ಪ್ರೋತ್ಸಾಹ ಧಾರಾಳ ಸಿಕ್ಕಿದ್ದರಿಂದ ಕವಯಿತ್ರಿ ಎನಿಸಿಕೊಂಡೆ ಹೊರತು ಬರೆಯಬೇಕೆಂದು ಕುಳಿತು ಬರೆದವಳಲ್ಲ ನಾನು. ಬದುಕು ಮಾತ್ರ ಸಾಕಷ್ಟು ಕಲಿಸಿತು. ಅದನ್ನೇ ಕವನಗಳನ್ನಾಗಿಸಿದೆ ಎಂದು ಪ್ರಾಂಜಲ ಮನಸಿನಿಂದ ಹೇಳಿಕೊಳ್ಳುವ ಸುಕನ್ಯಾ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ತುಂಬಿದ ಕುಟುಂಬದಲ್ಲಿ ಹುಟ್ಟಿದವರು. ಹೆತ್ತವರೇನೂ ಭಾರೀ ಜಾಣರಲ್ಲ. ನನ್ನ ಚಿಕ್ಕ ತಂಗಿಯರನ್ನು ಸೊಂಟದಲ್ಲಿ ಎತ್ತಿಕೊಂಡು ಅವರನ್ನೂ ಬೆಳೆಸುತ್ತ, ನಾನೂ ಬೆಳೆದ ಬಾಲ್ಯ ನನ್ನದು. ಅನಂತರ ಕೂಡಾ ನನ್ನೊಂದಿಗೇ ಧಾರವಾಡದಲ್ಲೇ ಇದ್ದರು. ತಂಗಿಯರ, ತಮ್ಮಂದಿರು, ಸಂಬಂಧಗಳು ಬಹುಮಟ್ಟಿಗೆ ಮಹಿಳೆಯನ್ನು ಬೆಳೆಸುವುದು ಹೌದು. ಸೋಲಿಸುವುದೂ ಹೌದು ಎನ್ನುವ ಸುಕನ್ಯಾ ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.

೧೯೫೬ರ ಮಾರ್ಚ್ ೧ ರಂದು ಹುಟ್ಟಿದ ಸುಕನ್ಯಾ ಮಾರುತಿಯವರು ವಿವಾಹದ ಬಳಿಕ ಹಲವರ್ಷ ಹೊಸಪೇಟೆಯಲ್ಲಿ ಇರಬೇಕಾಗಿ ಬಂತು. ಆಗ ಅಲ್ಲಿಯೇ ಇದ್ದ ಎಸ್.ಎಸ್.ಹಿರೇಮಠ ತಮ್ಮ ಪ್ರಕಾಶನದಿಂದ ಸುಕನ್ಯಾರ ಮೊದಲ ಕವನಸಂಕಲನವನ್ನು ೧೯೭೮ರಲ್ಲಿ ಹೊರತಂದರು. ತಮ್ಮ ಮಗನಿಗೆ ಸಂಗ್ರಾಮ ಎಂದು ನಾಮಕರಣ ಮಾಡಿ ಮಾಡಿದ್ದನ್ನೂ, ಎಸ್.ಎಸ್.ಹಿರೇಮಠ ಕೂಡ ತಮ್ಮ ಮಗನಿಗೂ ಸಂಗ್ರಾಮ ಎಂದು ಹೆಸರಿಟ್ಟಿದ್ದನ್ನು ನೆನಪಿಸಿಕೊಂಡು ಆಗ ನಾವುಗಳೆಲ್ಲಾ ಬಂಡಾಯವನ್ನೇ ಉಸಿರಾಡುತ್ತಿದ್ದೆವು ಎಂದು ಬರವಣಿಗೆ ಆರಂಭಿಸಿದ ಆ ದಿನಗಳನ್ನು ನೆನಪಿಸಿಕೊಂಡರು. ಅದು ದಲಿತ ಬಂಡಾಯ ಸಂವೇದನೆ ತೀವ್ರವಾಗಿದ್ದ ಕಾಲ. ಕನ್ನಡಸಾಹಿತ್ಯ ಓದಿಕೊಂಡಿದ್ದ ಸುಕನ್ಯಾ ಅವರಿಗೆ ಬರವಣಿಗೆಯ ಮಾಧ್ಯಮ ಕೈಗಂಟಿಕೊಂಡಾಗ ಸಹಜವಾಗಿಯೇ ಬಂಡಾಯದ ಆಶೋತ್ತರಗಳನ್ನು ತಮ್ಮದು ಮಾಡಿಕೊಂಡು, ಬಂಡಾಯ ಪ್ರಜ್ಞೆಯ ಭಾಗವಾದರು, ಅಲ್ಲಿಂದಾಚೆಗೆ ಬರೆಯುವುದರೊಟ್ಟಿಗೆ ಸಾಹಿತ್ಯದ ಇತರ ಸಮುದಾಯಿಕ ಕ್ರಿಯೆಗಳಲ್ಲೂ ಪಾಲ್ಗೊಳ್ಳಲು ಅವಕಾಶಗಳು ಬಂದಾಗ ಹಿಂಜರಿಯದೆ ಸಕ್ರಿಯವಾಗಿ ಜವಾಬ್ದಾರಿ ನಿರ‍್ವಹಿಸಿದರು. 

ನನ್ನಿಂದ ನಾ ದೂರಾಗಲು/ಕೊಸರಿ ಪಾರಾಗಲು/ಕಾಲನೊಂದಿಗೆ ಕಾಲು ಹಾಕುತ್ತ ನಿಂತ/ಒಂಟಿಗಾಲಿನ ತವಸಿ/
ಎಂದು ಬಸವನಿಗೆ ಹೇಳುವುದಾಗಲಿ,
ಕದಳಿಯ ದಾರಿ ನೀ ತೋರಿದರೆ/ಬೇನೆಯ ಬೆಸಲಾಗಿ/ಬಯಲಾಗಬೇಕೆಂದಿದ್ದೇನೆ/
ಸೀರೆಯ ಹಂಗು ಹರಿದು/ ನಿರ್ವಯಲಾಗಬೇಕೆಂದಿದ್ದೇನೆ
ಎಂದು ಅಕ್ಕನಲ್ಲಿ ನಿವೇದಿಸಿಕೊಳ್ಳುವುದಾಗಲಿ

ರಾಮಸ್ಪರ್ಶಕ್ಕೆ/ಶಿಲೆ, ಸ್ಫೋಟವಾಗಿದೆ ಅಷ್ಟೇ/ಹೆಣ್ಣಾಗಲಿಲ್ಲ

ಎಂದು ಅಹಲ್ಯೆಯ ಮೂಲಕ ಒಪ್ಪಿಕೊಳ್ಳುವುದಾಗಲಿ ಕವಿ ವ್ಯಕ್ತಿತ್ವದ ತಾನಿಟ್ಟುಕೊಂಡ ಆದರ್ಶಗಳ ಕಲ್ಪನೆಗಳೇ ಆಗಿವೆ. ಆ ಆದರ್ಶಗಳ ಮುಲಕ ಅವಳಿಗೆ ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುವುದು ಸಾಧ್ಯವಾಗಿದೆ. ಈ ವಿಧಾನ ಇಂಥ ಸಂದರ್ಭಗಳಲ್ಲಿ ಬೇರೆ ಮಹಿಳಾ ಕವಿಗಳು ಅನುಸರಿಸಿದ ವಿಧಾನಗಳಿಗಿಂತ ವಿಶಿಷ್ಟವಾಗಿರುವುದರಿಂದ ಮಹತ್ವದ್ದೆನಿಸುತ್ತದೆ. 

ಅಸ್ಮಿತೆಯ ಬಗ್ಗೆ ಸುಕನ್ಯಾ ಅವರು ಹೊಂದಿರುವ ಕಾಳಜಿಗಳು ಗಟ್ಟಿಯಾಗುವ ಕ್ರಿಯೆಯ ಭಾಗಗಳೇ ಹೊರತು ಆತ್ಮರತಿಯ ಲಾಲಸೆಯ ಪರಿಣಾಮಗಳಲ್ಲ. ಗಟ್ಟಿಯಾದ ವ್ಯಕ್ತಿತ್ವ ಮಾತ್ರ ತನ್ನ ಪರಿಸರಕ್ಕೆ ಜೀವಂತವಾಗಿ, ಪ್ರಾಮಾಣಿಕವಾಗಿ ಸ್ಪಂದಿಸಬಲ್ಲದು. ಸುಕನ್ಯಾ ಅವರಲ್ಲಿ ಸಮಾಜಪ್ರಜ್ಞೆ ಸಾಕಷ್ಟು ಜಗ್ರತವಾಗಿಯೇ ಇದೆ ಎನ್ನುವುದಕ್ಕೆ ಈ ಸಂಕಲನದಲ್ಲಿ ಸಾಕಷ್ಟು  ನಿದರ್ಶನಗಳಿವೆ. ದಲಿತ ಸಮಾಜದಿಂದ ಬಂದ ಅವರು ಸಹಜವಾಗಿಯೇ ಈ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾರೆ, ಅವರ ನೋವಿನಲ್ಲಿ ಸಹಬಾಗಿಯಾಗುತ್ತಾರೆ. ಅವರ ಆಶೋತ್ತರಗಳಿಗೆ ಅಭಿವ್ಯಕ್ತಿ ನೀಡುತ್ತಾರೆ. ’ಬಡವರಯ್ಯ’, ’ಕಾಳ್ಗಿಚ್ಚು’, ’ಅಂತರ’, ’ಬೇಡತಿಯರು’, ’ಒಮ್ಮೆ ನಗುತ್ತೇವೆ’, ’ಕೈದಿಗಳು’, ’ದೇವದಾಸಿ’, ಇಂಥ ಹಲವಾರು ಕವಿತೆಗಳು ಈ ಸಂಕಲನದಲ್ಲಿವೆ. ಈ ಕವಿತೆಗಳಲ್ಲಿ ನಾವು ಕೇಳುವ ದನಿಯಲ್ಲಿ ಪ್ರತ್ಯೇಕತೆಗಿಂತ ಸಮಷ್ಠಿಪ್ರಜ್ಞೆಯೇ ದಟ್ಟವಾಗಿ ಮೂಡಿ ಬಂದಿಹುವುದು ಸಹಜವೇ ಆಗಿದೆ. ಇಲ್ಲಿ ಕಾವ್ಯ ಹಾಗೂ ಬದುಕುಗಳ ನಡುವಿನ ಅಂತರವೇ ಅಳಿಸಿ ಹೋಗುವುದರಿಂದ ಓದುಗರನ್ನು ನೇರವಾಗಿಯೇ ಒಳಗೊಳ್ಳುವ, ಪ್ರಭಾವಿಸುವ ಪ್ರಯತ್ನ ಕಂಡುಬರುತ್ತದೆ. 
ಮೇಲ್ನೋಟಕ್ಕೆ ನಾ/ಗಟ್ಟಿ ಕುಳಾನೇ ಆಗಿದ್ದೆ, ಆದ್ರ/ಒಳ್ಗೊಳ್ಗೇ ಹುಳ ತಿಂದದ್ದನ್ನ/ಯಾರ‍್ಗೂ ಹೇಳಿದ್ದಿಲ್ಲ

ಮಳೆ ಹೋದಾಗ/ರೈತ್ರ ಗೋಳ್ನ ಕೇಳ್ಲಾರ‍್ದೆ/ಏಳ್ ಹಗೇವ್ನೂ ಕಿತ್ತು/ಹಳ್ಳಿಗೆಲ್ಲಾ ಜ್ವಾಳಾ ಅಳ್ದೆ.

ಇದ್ದೊಬ್ಬ ಮಗಳ್ಮದ್ವೆ ಮಾಡಿ/ಆಸ್ತೀನೆಲ್ಲಾ ಅಳಿಯನ್ಪಾಲು ಮಾಡಿ/ಗಟ್ಟಿಕುಳಾ ಅನ್ನೋ ಹೆಸರ‍್ನ ಉಳಿಸ್ಕೊಂಡ
ಸುದ್ದಿ ತಿಳ್ದು ಎದಿ ಒಡ್ದ/ಹೆಂಡ್ತೀನೂ ಕಳ್ಕೊಂಡು/ಬರಿಗೈನಲ್ಲಿ ಮಗಳ್ಮನಿ/ಬಾಗ್ಲಾಗ ನಿಂತ್ಕೊಂಡೆ.

ನಮ್ಮನಿ ಹೊಸ್ಲಿ ತುಳಿಬ್ಯಾಡ ಅಂತ/ಮಗ್ಳು-ಅಳಿಯಾ ಹೇಳಿದ್ದು ಕೇಳಿ/ಕಣ್ನೀರು ಫಳಕ್ಕಂತ ಉದುರ‍್ದಾಗ
ಹರ‍್ಕಂಗಿ ತೋಳ್ನಿಂದ ಒರಸ್ಕೊಂಡು/ಹಿಂಗ ದೇಶಾಂತ್ರ ಬಂದೆ.   

  ಪರದೇಶಿ ಹೆಸರಿನ ಈ ಕವಿತೆ ಓದುವಾಗ ಕಿಂಗ್ ಲಿಯರ್ ನೆನಪಿಗೆ ಬಂದರೆ ಆಶ್ಚರ‍್ಯವಿಲ್ಲ. ಮಕ್ಕಳನ್ನು ನಂಬಿದ ಹಿರಿಜೀವಗಳು ಇಳಿಗಾಲದಲ್ಲಿ ಚಡಪಡಿಸುವ, ಹರೆಯದ ಮದವೇರಿದ ಮಕ್ಕಳು ಸಂಸ್ಕೃತಿ-ಸಂಸ್ಕಾರಗಳನ್ನೆ ಮರೆತು ನಡೆದುಕೊಳ್ಳುವುದು ಹೃದಯವಿದ್ರಾವಕ ಸನ್ನಿವೇಶಗಳನ್ನು ಸೃಷ್ಟಿಸಿಬಿಡುತ್ತವೆ. ಇಲ್ಲಿ ನೈತಿಕತೆಗಿರುವ ಜವಾಬ್ದಾರಿ ಕಾನೂನು ಕಟ್ಟಳೆಗೆಲ್ಲಿಯದು ಎಮದು ವಿಷಾದದಿಂದ ಕೇಳಬೇಕಾಗುತ್ತದೆ. ಒಂದೊಮ್ಮೆ ವೈಭವದಿಂದ ಬಾಳಿದ ಜನ ವಿಧಿವಿಪರ‍್ಯಾಸಕ್ಕೋ, ಸ್ವಯಂಕೃತ ಅಪರಾಧಕ್ಕೋ ಬಲಿಪಶುಗಳಾಗಿ ಪರದೇಶಿಗಳಾಗಿಬಿಡುವುದು, ಹಿಂದಿನ ದಿನಗಳಲ್ಲಿ ಗಟ್ಟಿಕುಳವೆನಿಸಿಕೊಂಡು ಅದನ್ನುಳಿಸಿಕೊಳ್ಳಲು ಹೆಣಗಾಡುತ್ತಾ, ಕೊನೆದಿನಗಳನ್ನು ನೆಮ್ಮದಿ ಇಲ್ಲದೆ ಕಳೆಯುವ ಅನ್ನದಾತರ ಬದುಕು ಮನದುಂಬಿ ಬರುವಂತೆ ಮಾಡುತ್ತದೆ. ಇಂಥ ರೈತಕುಟುಂಬಗಳನ್ನು ನಿರೂಪಿಸುವಲ್ಲಿ ಸುಕನ್ಯಾ ಒಂದ್ಹೆಜ್ಜೆ ಮುಂದಿದ್ದಾರೆಂದು ಹೇಳಿದರೆ ತಪ್ಪೇನಿಲ್ಲ.

  ಹಾಗೆಯೇ ದೇಶದ ಸ್ಥಿತಿಗತಿಗಳಲ್ಲಿ ಪ್ರಜೆಗಳು ನಿರ್ಲಿಪ್ತತೆ ಕೂಡಾ ಒಂದುಬಗೆಯ ವಿಷದಂತೆ ಎಂಬುದನ್ನೂ ವಿವರಿಸುವ ಕವಿತೆಗಳು ಇಲ್ಲಿವೆ.

ಸೌಜನ್ಯದ ಸೋಗುಹಾಕಿ/ದೌರ್ಜನ್ಯ ಸಹಿಸುವ/ಧೀರರು ನಾವು,/ಅಕ್ಕ ಪಕ್ಕದವರು/ಪಕ್ಕೆಲುಬು ಮರಿದರೂ/ನಕ್ಕು ಸಹಿಸುವವರು.
ತಾಯ್ನುಡಿಯ ಅಡವಿಟ್ಟು/ಪರದೇಶಿಯಾಗಿ/ಹೊರದೇಶ ಭಾಷೆ ಕಡತಂದವರು,/ನಾವು ಕೊಡುತಲೆಯ/ಪರಶುರಾಮರು.

ಪಾವಗಡ ಸಾವಗಡವಾಗಿ/ಪ್ರಾಣಿ ರೂಪದಲ್ಲಿ ಪ್ರಾಣ ಹೀರುವ/ತೋಳಗಳಿಗೆ ಕೋಳ ಹಾಕಲಾರದ/’ಉತ್ತರೋತ್ತರರು’ ನಾವು.
ಶತ-ಶತಮಾನಗಳ/ಇತಿಹಾಸ ಕುರುಕುತ್ತ/ಉಬ್ಬಿ ಬಲೂನಾಗಿ/ಕೊಬ್ಬಿ ಕೋಣವಾಗಿ/’ಮಾರಿ’ಗೆ ಮಾರಿಕೊಂಡವರು/ನಾವು.

’ವ್ಯಕ್ತಿತ್ವ ನಿರಸನ’ದ/ತತ್ವ ಊದುತ್ತ/ನಿನ್ನ ಮೋರೆಗೆ/ಮಸಿ ಬಳಿದವರು ತಾಯಿ. 

 ಹೀಗೆ ದೇಶ ಮತ್ತು ರಾಜ್ಯಗಳ ಕೆಲವು ಅಧೋಗತಿಗಳಿಗೆ ಕಾರಣ ನಾವೇ ಅಲ್ಲದೆ ಇನ್ಯಾರು ಎಂಬ ಪ್ರಶ್ನೆ ಇಲ್ಲಿದೆ. ಸ್ವಾಭಿಮಾವನ್ನು ಕಳೆದುಕೊಂಡು, ವ್ಯಕ್ತಿತ್ವವನ್ನು ಅಲಕ್ಷಿಸಿಕೊಂಡು ಹೇಗೊ ಬದುಕಿದರಾಯ್ತು ಎಂದು ಯಾವ ಸಮಾಜದ ಜನ ತಿಳಿದಿರುತ್ತಾರೆಯೋ ಅಲ್ಲಿಯವರೆಗೆ ಅಧೋಗತಿಯೇ ದಿಕ್ಕು ಮಾತ್ರವಲ್ಲ ಅಂಥಾ ಜನಸಾಮಾನ್ಯರು ಸಮುದಾಯದ ಮೋರೆಗೆ ಮಸಿಬಳಿಯಬಲ್ಲವರು ಹೌದು. ಈ ಕವಿತೆಗೆ ಅವರು ಕೊಟ್ಟಿರುವ ಶೀರ್ಷಿಕೆ ನಾವು ತುಂಬ ಸಮಂಜಸವೂ, ಸಾಂಕೇತಿಕವೂ ಆದದ್ದು.

ಪಂಚಾಗ್ನಿಯ ಮಧ್ಯೆ ಅವರ ಕವನಂಕಲನದ ಹೆಸರೂ ಹೌದು. ಅದರಲ್ಲಂದು ಮನೋಜ್ಞ ಕವಿತೆ ಕವಿಗೋಷ್ಟಿಗೊಂದು ಕವಿತೆ.

ಅನ್ಯಾಯ, ಅತ್ಯಾಚಾರ, ಅಪಮಾನದ/ಪಂಚಾಗ್ನಿಯ ಮಧ್ಯೆ ಕುಳಿತು/ಕವಿಗೋಷ್ಠಿಗೊಂದು ಕವಿತೆ ಬರೆಯುತ್ತೇನೆ. 

  ಹೀಗೆ ಬರೆಯುವ ಸುಕನ್ಯಾ ವೈಯಕ್ತಿಕಸಂಗತಿಯನ್ನು ನಿಧಾನವಾಗಿ, ನವಿರಾಗಿ ಸಮುದಾಯಕ್ಕಿಳಿಸುತ್ತಾರೆ.ಹಾಗೆ ಬರೆಯುವಾಗ ಒಳಗಿನ ನೋವನ್ನು ಹೊರಹಾಕುವುದೆಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ತಾನು ಹೇಳಿದ ಸತ್ಯ ತಲುಪಬೇಕಾದಲ್ಲಲಿಗೆ ತಲುಪಿತೋ ಇಲ್ಲವೋ ಎಂಬ ಧಾವಂತ, ಸ್ತ್ರೀ ಅನುಭವಿಸುವ ಅನ್ಯಾಯ, ಮೂಕವೇದನೆಗಳನ್ನು ಹೀಗೆ ಅನಾವರಣಗೊಳಿಸಿದ್ದಾರೆ.

ಬಳೆಯಿನ್ನೂ ಕೊಳವಾಗೇ ಇದೆ,/ತಾಳಿ ಉರುಳಾಗಿ ಬಿಗಿಯುತ್ತಿದೆ./ ತಾಳಲಾರೆನು ಇನ್ನು ಹೇಳುವೆನಾದರೂ ಯಾರಿಗೆ? 

ಎಂಬ ಮಾತುಗಳಲ್ಲಿ ಸ್ತ್ರೀಗೆ ಹೇಗೆ ಸಮಾಜ ಉಡುಗೆತೊಡುಗೆಗಳಿಂದಲೇ ಬೇಡಿ ಹಾಕಿಡಲು ಯತ್ನಿಸುತ್ತದೆ ಎಂಬುದನ್ನು ವಿವರಿಸುತ್ತಾರೆ. ಹಾಗೆಯೆ ತರತಮ ಮಾಡುವ ಪುರುಷನಿಗೆ ನಾಟುವಂತೆ ನೇರವಾಗಿ ನಾನೂ ನಿನ್ನಂತೆಯೇ ಬೆಳೆದೆ, ವ್ಯತ್ಯಾಸವೇನೂ ಇಲ್ಲ ಎಂದು

ಹುಟ್ಟಿದ್ದು ಬೆಳೆದ್ದು/ನಿನ್ನಂತೆ, ತಾಯ/ಒಡಲಲ್ಲಿ, ಮಡಿಲಲ್ಲಿ
ದಟ್ಟ, ಪಂಚೆಗಳ ದಾರಿ ಕವಲೊಡೆದಾಗ/ನಾ ಬಿದ್ದೆ, ನೀನೆದ್ದುಕೊಂಡೆ

ಈ ಕವಿತೆಯ ಮೂಲಕ ಹೇಳಿದ್ದಾರೆ. ಪತಿಯೊಡನಿದ್ದೂ ಏಕಾಂಗಿಯಾಗಿರಬೇಕಾದ ಅನಿವಾರ್ಯತೆಯ ಬೇಸರದಲ್ಲಿ, ಸಹಜ ದಾಂಪತ್ಯ ಸುಖವೊಲ್ಲದ ಗೌತಮನನ್ನು 

ಸ್ವರ್ಗೀಯ ಸುಖಕೊಡಲು
ತುದಿಗಾಲಲ್ಲಿ ನಿಂತ ನನ್ನ
ಕಡೆಗಣಿಸಿದ್ದ ಬೈರಾಗಿ.

ಎಂದು ಅಹಲ್ಯೆ ಎಂಬ ಕವಿತೆಯಲ್ಲಿ ಕರೆದಿದ್ದಾರೆ. ಹೀಗೆ ವಿಷಮದಾಂಪತ್ಯದಿಮದ ಉಂಟಾಗುವ ಏರುಪೇರುಗಳಲ್ಲಿಯೂ ಮಹಿಳೆ ಶಿಕ್ಷೆಗೊಳಗಾಗುವ, ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಯಾವ ಅವಕಾಶವೂ ಇಲ್ಲದ ಅಸಹಾಯಕತೆಯನ್ನು ಚಿತ್ರಿಸಿರುವುದರಲ್ಲಿ ಅಹಲ್ಯೆಯದು ಒಂದು ಮುಖವಾದರೆ ಇನ್ನೊಂಡು ಮುಖ ವೇಶ್ಯೆಯರದ್ದು. ಬೇಡತಿಯರು ಎಂಬ ಕವಿತೆಯಲ್ಲಿ 

ನಾವು ವೇಶ್ಯೆರು/ನಿಮ್ಮ ದಾಸಿಯರು/ಆಗಿದ್ದ ಕಾಲ/ಈಗಿಲ್ಲ ಎನ್ನುವಂತಿಲ್ಲ,/ಆದರೂ ಅಲ್ಲಲ್ಲಿ/
ಕಾಸುತ್ತಿದ್ದೇವೆ/ನಿಮ್ಮ ಬುರುಡೆಗೆ/ ಬಿಸಿನೀರು.

ಎಂದು ಹೇಳುವಾಗ ಅವರಿಗೂ ಒಂದು ಕಾಲ ಒದಗಿಬರುವ ಆಶಾವಾದ ಮತ್ತು ನೆಮ್ಮದಿ ಎರಡನ್ನೂ ಕಾಣಬಹುದು. ಎಷ್ಟೇ ವಿದ್ಯಾವಂತೆಯದರೂ ಈ ದೇಶದ ಮಹಿಳೆ ದಮನಿಸಿಕೊಳ್ಳುವುದನ್ನೆ ಸಂಸ್ಕಾರ, ಸಂಸ್ಕೃತಿ ಎಂದು ಭಾವಿಸಿ ಸ್ವೀಕರಿಸುವುದನ್ನು ಕಲಿತಿದ್ದಾಳೆ ಎಂಬುದನ್ನು ಭಾರತೀಯಳು ಕವಿತೆಯಲ್ಲಿ

ನಿನ್ನ ಹುರಿದು/ಮುಕ್ಕುತ್ತೇನೆ ಕ್ಷಮಿಸು,
ನಾ ಭಾರತೀಯ ನಾರಿ/ಅನಿಸಿದ್ದನ್ನೆಲ್ಲಾ/ಹತ್ತಿಕ್ಕುತ್ತೇನೆ.

ಎಂದು ವ್ಯಕ್ತಪಡಿಸಿದ್ದಾರೆ. ಹೀಗೆಲ್ಲಾ ಭಾವನೆಗಳನ್ನು ಹತ್ತಿಕ್ಕಿಕೊಂಡು ಕೌಟುಂಬಿಕ ಕರ್ತವ್ಯಗಳನ್ನು ನಿರ್ವಹಿಸುವ ಮಹಿಳೆಗೆ ಕೊನೆಗೆ ಪ್ರತಿಫಲವಾಗಿ ಸಿಗುವುದೇನು..? ಸಂಬಂಧಗಳು ಪದ್ಯ ಹೀಗಿದೆ.

ಒದ್ದರೆ ಕಾಲು/ಹುದುಲಲ್ಲಿ ಹುದುಗುತ್ತವೆ/ಅಪ್ಪಲು ಹೋದ
ಸಂಬಂಧಗಳು/ತಪ್ಪಿಸಿಕೊಂಡು/ಗಹಗಹಿಸುತ್ತವೆ.

ಹೀಗೆ ಸಂಬಂಧಗಳೂ ಕೈಮೀರಿಹೋಗುತ್ತವೆ. ಹಾಗಾಗಿ ಇಂದು ಮುಳುಗಿದ ಸೂರ್ಯ ನಾಳೆ ಹುಟ್ಟುವನೆಂಬ ಭರವಸೆ ಇಲ್ಲ.
ಕಾಲ ಎಷ್ಟು ನಿಷ್ಕರುಣಿಯೆಂದರೆ ನನಗೆ ಏನನ್ನೂ ಕೊಡದೆ, ನನ್ನದೆಲ್ಲವನ್ನೂ ದೋಚುತ್ತಾ ಕಾಲ ಜಾರುತ್ತಲೇ ಇದೆ ಎಂಬ ನಿರಾಶಾವಾದವೂ ಒಮ್ಮೊಮ್ಮೆ ಕಾಡುತ್ತದೆ ಕವಯಿತ್ರಿಯನ್ನು. 

ಹೀಗೆ ಸಮಾಜದ ಬಹುಮುಖ ಸಮಸ್ಯೆಗಳನ್ನು, ಕಾಡುವ ಗಾಢ ಭಾವಗಳನ್ನು ಬರವಣಿಗೆ ಮೂಲಕ ಹರಿಬಿಟ್ಟ ಸುಕನ್ಯಾ ಬಿ. ಕನ್ನಡ ನಾಡುನುಡಿಯ ಕೆಲಸ ಮಾಡಿದವರೂ ಹೌದು. ಕರ್ನಾಟಕ ವಿವಿ, ಕನ್ನಡ ವಿವಿ, ಸೇರಿದಂತೆ ವಿವಿಗಳ ಸೆನೆಟ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ’ಪಂಪ ಪ್ರಶಸ್ತಿ’ ಆಯ್ಕೆ ಸಮಿತಿ ಸೇರಿದಂತೆ ಹಲವು ಸಂಘಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲು ಕವಿಗೋಷ್ಟಿಗಳಿಗಾಗಿ ಹೊಸಪದ್ಯ ಬರೆದುಕೊಂಡೆ ವೇದಿಕೆಯೇರುವ ಉತ್ಸಾಹಿ ಸುಕನ್ಯಾ ೨೦೧೩ರಲ್ಲಿ ನಡೆದ ಬಳ್ಳಾರಿಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಗೊಂಡಿದ್ದರು. ಇನ್ನೂ ಸಾಕಷ್ಟು ಕನ್ನಡದ ಕೆಲಸ ಮಾಡುವ ಆಸಕ್ತಿ ಉಳಿಸಿಕೊಂಡಿರುವ ಸುಕನ್ಯಾ ಅವರಿಗೆ ಶುಭಹಾರೈಸುವುದರೊಂದಿಗೆ, ಕೊನೆಯದಾಗಿ ಒಂದು ಮನಸಿನಲ್ಲಿ ಮಾಸದೆ ಉಳಿಯಬಲ್ಲ, ಅವರದೊಂದು ಪದ್ಯ ನನ್ನ ಹಾಡು 

ಒಮ್ಮೆ ತಾಯಾಗುತ್ತೇನೆ,/ದುಡಿದು ಬೇಸತ್ತಾಗ/ಗತಿಗೇಡಿ ನಾಯಾಗುತ್ತೇನೆ,
ಹಣ್ಣು ಕಳಿತು, ತುಂಬು ಕಳಚುತ್ತದೆ/ಅವ್ವನಂತೆ ನಾನೂ ಮಣ್ಣಾಗುತ್ತೇನೆ.