ಬೋಸ್‌ವ್ಯಾರ್, ಡೋರಿಯಾ!
(ಶುಭ ಸಂಜೆ, ನಿಮಗಿದೋ ಸ್ವಾಗತ)
ಬಸ್ ನಿಲ್ದಾಣದಲ್ಲಿ ಫ್ರೆಂಚ್ ಮುಖವೊಂದು ಕಂಡ ತಕ್ಷಣ ಹಂಪಿಯ ಹುಡುಗರು ಬರಮಾಡಿಕೊಳ್ಳುವ ಪರಿ ಇದು. ಹಾಗೆಂದ ಮಾತ್ರಕ್ಕೆ ಅವರಿಗೆ ಫ್ರೆಂಚರ ಮೇಲಷ್ಟೇ ವಿಶೇಷ ಪ್ರೀತಿ ಎಂದುಕೊಳ್ಳುವ ಅಗತ್ಯವಿಲ್ಲ. ಚೀನಿಯರು ಬಂದರೂ ಅವರು ಅದೇ ಕಾಳಜಿಯಿಂದ ಕೇಳುತ್ತಾರೆ: ‘ವೊ ಕಾಯಿ ಬಾಂಗ್ ನಿ ಮಾ?’ (ನಿಮಗೆ ನನ್ನ ಸಹಾಯ ಬೇಕೇ) ಎಂದು. ಇಂಗ್ಲೆಂಡ್‌ನಿಂದ ಬಂದವರ ಕುಶಲೋಪರಿಯನ್ನು ಸಹ ಅವರು ವಿಚಾರಿಸದೆ ಬಿಡುವುದಿಲ್ಲ. ‘ಡು ಯು ಹ್ಯಾವ್ ಎನಿ ಪ್ರಾಬ್ಲಮ್ಸ್?’ (ನಿಮಗೆ ಏನಾದರೂ ಸಮಸ್ಯೆಗಳು ಇವೆಯೇ) ಎಂದು ಥೇಟ್ ಮನೆಯವರಂತೆ ಕಾಳಜಿ ಮಾಡುತ್ತಾರೆ.
ಅಂದಹಾಗೆ, ಹಂಪಿಯ ಈ ಹುಡುಗರು ಯಾವ ಕಾಲೇಜು ಕಟ್ಟೆಯನ್ನೂ ತುಳಿದವರಲ್ಲ. ವಿಶ್ವವಿದ್ಯಾಲಯದ ಮೆಟ್ಟಿಲೇರಿ ವಿದೇಶಿ ಭಾಷೆಗಳ ಮೇಲೆ ಪರಿಣಿತಿ ಸಾಧಿಸಿದವರಲ್ಲ. ಆದರೆ, ಅವರು ಹತ್ತಾರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಬಹುಭಾಷಾ ಚತುರರು. ಎಂಥವರನ್ನೂ ತಮ್ಮ ಮಾತಿನ ಮೋಡಿಯಿಂದ ಮರಳು ಮಾಡಬಲ್ಲ ವಾಕ್ಪಟುಗಳು.
ಹಂಪಿಯನ್ನು ಸುಸ್ತಿಲ್ಲದೆ ಸುತ್ತಾಡಿ ಒಂದೊಂದು ಸ್ಮಾರಕವನ್ನೂ ಬಿಡದಂತೆ ತೋರಿಸಬಲ್ಲ ಗೈಡ್‌ಗಳು, ಹೋಟೆಲ್ ಮಾಣಿಗಳು, ವಿದೇಶಿಯರ ಉಡುಗೆಗಳನ್ನು ಮಾರಾಟ ಮಾಡುವ ಹುಡುಗ–ಹುಡುಗಿಯರು, ವಸತಿಗೃಹಗಳನ್ನು ನಡೆಸುವವರು, ದೋಣಿಗೆ ಹರಿಗೋಲು ಹಾಕುವ ಬೆಸ್ತರು, ಅಪರ ಕರ್ಮ ಮಾಡಿಸುವ ಭಟ್ಟರು, ಡೋಲಕ್ ಮಾರುವ ಕುಶಲಕರ್ಮಿಗಳು, ಕೊನೆಗೆ ದೇಶೀ ಮಾದಕ ದ್ರವ್ಯಗಳನ್ನು ತಂದು ಕೊಡುವ ಫಟಿಂಗರು... ಎಲ್ಲರೂ ಇಲ್ಲಿ ಬಹುಭಾಷಾ ಚತುರರೇ. ಭಿಕ್ಷೆಗೆ ನಿಂತ ಮಕ್ಕಳು ಸಹ ‘ಕನನ್ ಝೀ ಮಿರ್ ಹೆಲ್ಪನ್’ (ನನಗೆ ಸಹಾಯ ಮಾಡುವಿರಾ) ಎಂದು ಕೇಳುವಷ್ಟರ ಮಟ್ಟಿಗೆ ಇಲ್ಲಿ ಹತ್ತಾರು ಭಾಷೆಗಳ ಸಂಗಮವಾಗಿದೆ. ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಚೈನೀಸ್, ಇಂಗ್ಲಿಷ್– ಕೊನೆಗೆ ದೇಸಿಭಾಷೆಗಳಾದ ಹಿಂದಿ, ತೆಲುಗು, ತಮಿಳು, ಬೆಂಗಾಲಿ... ನೀವು ಯಾವುದರಲ್ಲಿ ಸಂಭಾಷಣೆಗೆ ಬಯಸುತ್ತೀರಿ? ಅವರ ಬಳಿ ಅದೇ ಭಾಷೆಯಲ್ಲಿ ಮಾತಿನ ಬಾಣಗಳು ಸನ್ನದ್ಧ ಸ್ಥಿತಿಯಲ್ಲಿ ಇರುತ್ತವೆ.
ಮಾತು ಕೊಟ್ಟ ಜೀವನ
ಮುತ್ತು–ರತ್ನಗಳನ್ನು ಸೇರುಗಳಿಂದ ಅಳೆಯುತ್ತಿದ್ದ ಅದೇ ಹಂಪಿಯ ಬೀದಿ ಈಗ ಮುತ್ತಿನಂತಹ ಮಾತುಗಳು ಉದುರುವ ತಾಣ. ಗೈಡ್ ಕಿರಣ್, ಹೋಟೆಲ್ ಮಾಣಿ ರಾಮಣ್ಣ, ದೋಣಿ ನಡೆಸುವ ಮಲ್ಲಣ್ಣ, ಬಟ್ಟೆ ಮಾರುವ ರುಕ್ಮಿಣಿ, ಅಪರ ಕರ್ಮ ಮಾಡಿಸುವ ಪ್ರಸನ್ನ ಭಟ್ಟ ಯಾರನ್ನು ನಿಲ್ಲಿಸಿ ಮಾತನಾಡಿಸಿದರೂ ಹೈಸ್ಕೂಲ್‌ನಿಂದ ಆಚೆಗೆ ಓದಿದ ಒಬ್ಬರೂ ಸಿಗುವುದಿಲ್ಲ. ಕಡ್ಡಿರಾಂಪುರದ ದನಗಾಹಿ ಶಂಕರ ಎಂಬಾತನಂತೂ ಶಾಲೆಯ ಮುಖವನ್ನೇ ನೋಡಿಲ್ಲ. ಅರಳು ಹುರಿದಂತೆ ಪಟಪಟನೆ ಫ್ರೆಂಚ್‌ನಲ್ಲಿ ಮಾತನಾಡುತ್ತಾನೆ. ಇಂಗ್ಲಿಷ್‌ನಷ್ಟು ಸುಲಭವಾದ ಭಾಷೆ ಅದಲ್ಲ. ಯಾವ ಅಕ್ಷರಕ್ಕೋ ಅತಿಯಾಗಿ ಒತ್ತು ನೀಡಿ, ಮತ್ತೊಂದನ್ನು ತೇಲಿಸಿ, ಇನ್ನೊಂದನ್ನು ನುಂಗಿ ನುಡಿಯಬೇಕು. ಈ ಹಂಪಿ ಹೈಕಳ ಪಾಲಿಗೆ ಅಂತಹ ಕ್ಲಿಷ್ಟ ಭಾಷೆಗಳೂ ನೀರು ಕುಡಿದಷ್ಟು ಸಲೀಸು ಎನಿಸಿಬಿಟ್ಟಿವೆ.
ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳಿಗೆ ಅಲೆದಾಡಿ ಚಪ್ಪಲಿ ಸವೆಸಿ, ಸ್ನಾತಕೋತ್ತರ ಪದವಿ ಪೂರೈಸಿದವರೂ ಇಂಗ್ಲಿಷ್‌ನಲ್ಲಿ ಮಾತನಾಡಲು ತಿಣುಕಾಡುವ ಸನ್ನಿವೇಶದಲ್ಲಿ ಈ ಹುಡುಗರಿಗೆ ಹತ್ತಾರು ಭಾಷೆಗಳು ಸಿದ್ಧಿಸಿದವಾದರೂ ಹೇಗೆ? ‘ಎಲ್ಲವೂ ವಿರೂಪಾಕ್ಷನ ಕೃಪೆ’ ಎಂದುಬಿಟ್ಟರೆ ಈ ಕುಶಾಗ್ರಮತಿಗಳ ಅಸಾಧಾರಣ ಗ್ರಹಿಕೆಗೆ, ಮಾತಿನ ಮೋಡಿಗೆ ಅನ್ಯಾಯ ಬಗೆದಂತೆ.
ಹಂಪಿಯಲ್ಲಿ ನೆಲೆ ಕಂಡುಕೊಂಡವರು ಹೆಚ್ಚಾಗಿ ಸುತ್ತಲಿನ ಗ್ರಾಮಗಳಾದ ಕಡ್ಡಿರಾಂಪುರ, ಕಮಲಾಪುರ, ಆನೆಗೊಂದಿ, ಕಂಪ್ಲಿ, ಶ್ರೀರಾಮಪುರ ಮತ್ತು ಸುತ್ತಲಿನ ಗ್ರಾಮಗಳ ಜನ. ಹೊಸಪೇಟೆಯ ನೂರಾರು ಕುಟುಂಬಗಳಿಗೂ ಹಂಪಿಯೇ ಅಕ್ಷಯಪಾತ್ರೆ. ಬಹುಭಾಷಾ ಚತುರರ ಹಿನ್ನೆಲೆ ಕೆದಕಿದರೆ ಕಾಲ ಎರಡು ದಶಕ ಸರ್ರನೇ ಹಿಂದೆ ಸರಿಯುತ್ತದೆ. ಹಂಪಿಯ ಬೀದಿಯಲ್ಲಿ ಅಪ್ಪ–ಅಮ್ಮ ಹಾಕಿಕೊಂಡಿದ್ದ ಹಣ್ಣುಕಾಯಿ, ತಿಂಡಿ–ತಿನಿಸು, ತಂಪುಪಾನೀಯ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಪುಟಾಣಿಗಳು ಈಗ ಹಲವು ದೇಶದ ಜನರನ್ನು ಅವರ ಮಾತೃಭಾಷೆಯಲ್ಲೇ ಮಾತನಾಡಿಸುವಷ್ಟು ಪರಿಣಿತಿ ಸಾಧಿಸಿದ ಯುವಕರಾಗಿದ್ದಾರೆ.
ವಿದೇಶಿಯರ ಒಂದು ಮುಗುಳ್ನಗೆ, ಅವರ ಆಂಗಿಕ ಅಭಿನಯ, ಭಾವಗಳನ್ನು ಸಂಜ್ಞೆಗಳಲ್ಲಿ ವ್ಯಕ್ತಪಡಿಸುವ ಬಗೆ... ಪ್ರತಿಯೊಂದನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಇಲ್ಲಿನ ಮಕ್ಕಳು, ವಿದೇಶಿ ಭಾಷೆಗಳ ಉಚ್ಚಾರ, ಅದರ ಏರಿಳಿತಗಳನ್ನು ಅಷ್ಟೇ ಸ್ಪಷ್ಟವಾಗಿ ಗುರುತಿಸುತ್ತಾರೆ. ಹಾಗೆಯೇ ಅನುಕರಿಸುತ್ತಾ ಹೋಗುತ್ತಾರೆ. ಸಣ್ಣಪುಟ್ಟ ದೋಷಗಳನ್ನು ವಿದೇಶಿಯರೇ ತಿದ್ದುತ್ತಾರೆ. ದಣಿವರಿಯದೆ ಸುತ್ತಾಡುವ ಈ ಹುಡುಗರು ಯುರೋಪ್‌ ಸೇರಿದಂತೆ ಬೇರೆ ಭಾಗದಿಂದ ಬಂದವರನ್ನು ಬಯಸಿದಲ್ಲಿಗೆ ಕರೆದೊಯ್ಯುತ್ತಾರೆ. ಅವರ ಪ್ರತಿಯೊಂದು ಸಮಸ್ಯೆಗೂ ಇವರ ಬಳಿ ಪರಿಹಾರ ಇರುತ್ತದೆ. ಆತ್ಮೀಯತೆ ಹೆಚ್ಚಿದಂತೆ ಸಂವಹನ ಸುಲಭವಾಗುತ್ತದೆ. ಸಂಭಾಷಣೆ ಹರವು ದೊಡ್ಡದಾಗುತ್ತದೆ. ಹಂಪಿಯನ್ನು ಮೀರಿ, ಭಾರತ–ಯುರೋಪ್‌ಗಳವರೆಗೆ ಅದು ವಿಸ್ತರಿಸುತ್ತದೆ. ಭಾಷಾ ಪಾಂಡಿತ್ಯ ಬೆಳೆಯುವ ಬಗೆಯೇ ಇದಾಗಿದೆ.
ಎಳೆತನದ ಶಕ್ತಿ!
‘ಪುಟ್ಟ ಮಕ್ಕಳು ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಯಬಹುದು. ಎಳೆಯ ವಯಸ್ಸಿನಲ್ಲಿ ಅವರ ಮಿದುಳಿನ ಶಕ್ತಿಯೇ ಹಾಗಿರುತ್ತದೆ. ಹಂಪಿಯ ಹುಡುಗರ ಬಹುಭಾಷಾ ಪಾಂಡಿತ್ಯಕ್ಕೆ ಬಾಲ್ಯದಲ್ಲಿ ಅವರು ಅನುದಿನವೂ ಹತ್ತಾರು ಭಾಷೆಗಳನ್ನು ಕೇಳುತ್ತಿದ್ದುದೇ ಕಾರಣ’ ಎನ್ನುತ್ತಾರೆ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ವಿದ್ವಾಂಸರು.
ಹಂಪಿ ಸ್ಮಾರಕಗಳು, ಸುತ್ತಲಿನ ಗ್ರಾಮಗಳ ‘ಲೋ ಪ್ರೊಫೈಲ್‌’ ಹುಡುಗರ ಪಾಲಿಗೆ ಜೀವಂತ ಭಾಷಾ ಪ್ರಯೋಗಾಲಯಗಳಾಗಿ ಮಾರ್ಪಟ್ಟಿವೆ. ಲಕ್ಷಾಂತರ ರೂಪಾಯಿ ಡೊನೇಷನ್‌ ಪಡೆಯುವ ಶಾಲೆಗಳಲ್ಲೂ ವಿದೇಶಿ ಭಾಷೆಗಳನ್ನು ಕಲಿಸುವ ಶಿಕ್ಷಕರು ಸಿಗುವುದಿಲ್ಲ. ಮುದ್ರಿತ ಧ್ವನಿಗಳನ್ನು ಕೇಳಿಸುತ್ತಾ ಮಕ್ಕಳಿಗೆ ಬೇರೆ ಭಾಷೆಗಳನ್ನು ಕಲಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ಹಂಪಿಯಲ್ಲಿ ಬೇರೆ ಬೇರೆ ಭಾಷೆಗಳನ್ನು ಹೇಳಿಕೊಡುವ ಸಾವಿರಾರು ‘ಮೇಷ್ಟ್ರು’ಗಳು ಸಿಗುತ್ತಾರೆ, ಅದೂ ಉಚಿತವಾಗಿ!
ವಿದೇಶಿಯರು ತರುವ ಥರಾವರಿ ಕ್ಯಾಮೆರಾಗಳು, ಅವರ ಮತ್ತು ಇಲ್ಲಿನ ಮುಗ್ಧ ಹುಡುಗರ ನಡುವೆ ಸೇತುಬಂಧವಾಗಿ ಕಾರ್ಯ ನಿರ್ವಹಿಸುತ್ತವೆ. ಕ್ಯಾಮೆರಾಗಳಿಗೆ ಕಲ್ಲು–ಬಂಡೆಗಳ ಆಹಾರ ದೊಡ್ಡದಾಗಿ ಬೇಕು. ಅಂದರೆ ಬೆಳಗಿನಿಂದ ಸಂಜೆವರೆಗೆ ಕಲ್ಲುಗಳು ಕಥೆ ಹೇಳುವುದನ್ನು ಕೇಳಿಸಿಕೊಳ್ಳುತ್ತಾ ತಿರುಗುವ ಉಮೇದು ವಿದೇಶದಿಂದ ಬಂದ ಅಧ್ಯಯನಾಸಕ್ತ ಮಂದಿಗೆ ಇರುತ್ತದೆ. ಅವರಿಗೆ ಸರಿಸಮಾನವಾದ ಉಮೇದಿನಿಂದ ಕಲ್ಲು ಬಂಡೆಗಳನ್ನು ಹತ್ತಿ, ಇಳಿಸುತ್ತಾರೆ ಇಲ್ಲಿನ ಯುವಕರು. ಸಾಮಾನ್ಯವಾಗಿ ಈ ಹುಡುಗರು ನಂಬಿಕೆದ್ರೋಹ ಮಾಡುವುದಿಲ್ಲ. ಹೀಗಾಗಿ ಬಹುಬೇಗ ಅತಿಥಿಗಳ ವಿಶ್ವಾಸವನ್ನು ಗಳಿಸುತ್ತಾರೆ. ಜತೆಗೆ ಕೈತುಂಬಾ ಕಾಸೂ ಸಿಗುತ್ತದೆ.
ಬುಡಕಟ್ಟು ಜನಾಂಗದವರು, ಕಾಡಿನಿಂದ ನಮನಮೂನೆಯ ಹಣ್ಣು ಹೆಕ್ಕಿತರುವ ಲಂಬಾಣಿಗಳು, ಹಿಂದುಳಿದ ವರ್ಗದವರು, ದೋಣಿ ನಡೆಸುವ ಬೆಸ್ತರು, ವ್ಯಾಪಾರ ಮಾಡುವ ಶೆಟ್ಟರು, ಪೂಜೆ ಮಾಡುವ ಭಟ್ಟರು... ಹೀಗೆ ವಿದೇಶಿಯರಿಗೆ ಪ್ರತಿಯೊಬ್ಬರ ಸಹಾಯವೂ ಬೇಕು. ಹೀಗಾಗಿ ಎಲ್ಲ ವರ್ಗದವರೂ ಬಹುಭಾಷಾ ಪಂಡಿತರಾಗಿದ್ದಾರೆ. ಈ ವಿಷಯದಲ್ಲಿ ವರ್ಗ, ವರ್ಣ ತಾರತಮ್ಯಕ್ಕೆ ಯಾವ ಅವಕಾಶವೂ ಇಲ್ಲ. ಇಂಥವರಷ್ಟೇ ಕಲಿಯಬೇಕು ಎನ್ನಲಿಕ್ಕೆ ಈ ಭಾಷೆಗಳೇನು ಸಂಸ್ಕೃತವೂ ಅಲ್ಲ.
ಭಾಷೆಯಿಂದ ಬಾಂಧವ್ಯ
ಕಲಿತ ಭಾಷೆ ದೊಡ್ಡ ಬಾಂಧವ್ಯಗಳಿಗೂ ಬೆಸುಗೆ ಹಾಕಿದೆ. ಉದಾಹರಣೆಗೆ ಮ್ಯಾಂಚೆಸ್ಟರ್‌ನಿಂದ ಬಂದ ಯುವತಿಗೆ ಹಂಪಿ ಹುಡುಗನ ಸಾಂಗತ್ಯವೇ ಬೇಕೆನಿಸುತ್ತದೆ. ರೋಮ್‌ನ ಡ್ಯಾನಿಯಲ್‌ಗೆ ಶ್ರೀರಾಪುರದ ಹುಡುಗಿ ಅಪ್ಯಾಯಮಾನವಾಗಿ ಕಾಣುತ್ತಾಳೆ. ಪ್ಯಾರಿಸ್‌ ಪಕ್ಕದ ಯಾವುದೋ ಪಟ್ಟಣದಿಂದ ಹಂಪಿ ಹುಡುಗನೊಬ್ಬನಿಗೆ ಇ–ಮೇಲ್‌ ಬರುತ್ತದೆ: ‘ಮೆರ್ಸಿ (ಥ್ಯಾಂಕ್‌ ಯು), ನನಗೆ ಹೆಣ್ಣು ಮಗು ಜನಿಸಿದೆ!’.
ಹಂಪಿಯ ನೂರಾರು ಯುವಕರ ಬಳಿ ಪಾಸ್‌ಪೋರ್ಟ್‌ ಇದೆ. ಎಷ್ಟೋ ಹುಡುಗರು ಪ್ರಪಂಚದ ಹಲವು ದೇಶಗಳನ್ನು ಸುತ್ತಿ ಬಂದಿದ್ದಾರೆ. ಗಟ್ಟಿಯಾದ ‘ಸಂಬಂಧ’ ವಿದೇಶಿಯರನ್ನು ಮತ್ತೆ ಮತ್ತೆ ಹಂಪಿಗೆ ಧಾವಿಸಿ ಬರುವಂತೆ ಮಾಡುತ್ತದೆ. ಲಂಬಾಣಿ ಹಾಡುಗಳನ್ನು ಕಲಿತ ವಿದೇಶಿಯರೂ ಇದ್ದಾರೆ. ಹಬ್ಬದ ದಿನಗಳಲ್ಲಿ ಹನುಮಂತನಂತೆ ಬಾಲ ಹಚ್ಚಿಕೊಂಡು, ಗದೆ ಹಿಡಿದು ಕುಣಿಯುತ್ತಾರೆ. ವಿರೂಪಾಪುರ ಗಡ್ಡೆಯಲ್ಲಿ ಅವರು ನಡೆಸುವ ಚೇಷ್ಟೆಗಳನ್ನು ಮಾತ್ರ ಸಹಿಸಿಕೊಳ್ಳೋದು ಕಷ್ಟ.
ದೇಶ ಭಾಷೆಗಳ ಗಡಿಗಳನ್ನೂ ದಾಟಿ ಇವರೆಲ್ಲ ಇ–ಮೇಲ್‌ನಲ್ಲಿ ನಿತ್ಯ ಸಂಪರ್ಕದಲ್ಲಿ ಇರುತ್ತಾರೆ. ಹಲವು ಜನ ಹಂಪಿ ಮತ್ತು ಸುತ್ತಲಿನ ಮಕ್ಕಳಿಗಾಗಿ ದೇಣಿಗೆ ಕಳಿಸುತ್ತಾರೆ. ಹಳ್ಳಿಗಳಲ್ಲಿ ಓಡಾಡಿ ಜನರ ಕಷ್ಟ–ಸುಖ ವಿಚಾರಿಸುತ್ತಾರೆ. ವಿಜಯನಗರ ಅರಸರ ಆಸ್ಥಾನದಲ್ಲಿ ದುಭಾಷಿಗಳು ಹೆಚ್ಚಾಗಿದ್ದರಂತೆ. ಹಲವು ಭಾಷೆಗಳನ್ನು ಬಲ್ಲ ವಿದ್ವಾಂಸರು ಬೆರಳೆಣಿಕೆಯಷ್ಟು ಜನ ಇದ್ದರಂತೆ. ಆ ಮಣ್ಣಿನ ಗುಣದ ಪ್ರಭಾವವೋ ಏನೋ, ಹಂಪಿಯ ಬೀದಿಯಲ್ಲಿ ಈಗ ಬಹುಭಾಷಾ ಪಂಡಿತರೇ ತುಂಬಿದ್ದಾರೆ!