ಶನಿವಾರ, ಮಾರ್ಚ್ 29, 2014

ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ-ಇಂತಿ ನಮಸ್ಕಾರಗಳು

ಸೌಜನ್ಯ:ಪ್ರಜಾವಾಣಿ


















  ಮೇಲುನೋಟಕ್ಕೆ ಭಿನ್ನವಾಗಿ ಕಾಣುವ, ಬೇರೆ ಬೇರೆ ತಲೆಮಾರುಗಳಿಗೆ ಸೇರಿದ ಡಿ.ಆರ್. ನಾಗರಾಜ್ ಹಾಗೂ ಲಂಕೇಶರನ್ನು ಜೊತೆಗಿಟ್ಟು ನೋಡುವುದು ಸಾಹಿತ್ಯ ವಿಮರ್ಶೆಯ ವಿದ್ಯಾರ್ಥಿಗಳಿಗೆ ಅಸಂಗತವಾಗಿ ಕಾಣಬಹುದು. ಆದರೂ ನಾನು ಅದೃಷ್ಟವಶಾತ್ ಒಡನಾಡಿದ ಕನ್ನಡದ ಎರಡು ದೊಡ್ಡ ಪ್ರತಿಭೆಗಳನ್ನು ಹೊರಳಿ ನೋಡುವ  ಹಾಗೂ ನನ್ನಂಥ ಒಬ್ಬ ಓದುಗನೊಳಗೆ, ಬರಹಗಾರನೊಳಗೆ ಇಪ್ಪತ್ತನೆಯ ಶತಮಾನದ ಇಬ್ಬರು ಶ್ರೇಷ್ಠ ಕನ್ನಡ ಲೇಖಕರು ಅಂತರ್‌ಪಠ್ಯೀಯವಾಗಿ ಬೆರೆತು ಹೋಗಿರುವ ರೀತಿಯನ್ನು ಗ್ರಹಿಸುವ ನಿರೂಪಣೆಯಿದು.
ವ್ಯಕ್ತಿಯೊಬ್ಬನ ನಿರ್ಗಮನದ ನಾಲ್ಕಾರು ವರ್ಷಗಳಲ್ಲೇ ನಾವು ನೋಡುವ ಕಣ್ಣು ಹೇಗೆ ಬದಲಾಗುತ್ತಿರುತ್ತದೆ! ಅವನ ಬಗೆಗಿನ ಪೂರ್ವಗ್ರಹಗಳು, ಅನಗತ್ಯ ಮೆದುತನ, ಇವನು ನಮ್ಮವನೆಂದು ಸುಮ್ಮನೆ ಉಕ್ಕುವ ಪ್ರೀತಿ, ಅತಿ ನಿಕಟತೆಯಿಂದ ಒಸರತೊಡಗುವ ಅಸಹನೆ... ಇವೆಲ್ಲ ಕಡಿಮೆಯಾಗಿ ಒಂದು ಬಗೆಯ ನಿರ್ಲಿಪ್ತ ದೃಷ್ಟಿ ನಿರ್ಮಾಣವಾಗತೊಡಗುತ್ತದೆ. ವ್ಯಕ್ತಿಗಳನ್ನು ಕುರಿತು ಬರೆಯಲು ಇದೇ ಸರಿಯಾದ ಮನಸ್ಥಿತಿ ಇರಬಹುದೇನೋ.
ಹಾಗೆಂದುಕೊಂಡು ಹಿಂದಿರುಗಿ ನೋಡಿದರೆ ಕಾಣುವ ಚಿತ್ರಗಳು: ಲಂಕೇಶ್ ಎಂದರೆ ನಿಷ್ಠುರತೆ, ಸೆಡವು; ತನ್ನ ಔದಾರ್ಯಕ್ಕೂ ಸಣ್ಣತನಕ್ಕೂ ತಾಳೆಯಾಗದ ವ್ಯಕ್ತಿತ್ವ; ತುಂಟತನ; ಯಾವ ಶಕ್ತಿಯೇ ಇರಲಿ, ಎದುರಾಗುವ ಛಲ; ಜಗಳಗಳೇ ಸೃಜನಶೀಲತೆಯ ಜೀವಾಳ ಎಂಬ ನಂಬಿಕೆ; ಎಲ್ಲವನ್ನೂ ಸೀಳಿ ನೋಡುವ ಚೂಪುಗಣ್ಣು; ವಂಚನೆಯನ್ನು ತಕ್ಷಣ ಪತ್ತೆ ಮಾಡಿಬಿಡಬಲ್ಲ ಹದ್ದುಗಣ್ಣು; ಆದರೆ ಪ್ರಾಮಾಣಿಕತೆಯ ಪತ್ತೆಯಲ್ಲಿ ಕೊಂಚ ಮಬ್ಬುಗಣ್ಣು! ಅನ್ಯರ ನೋವನ್ನು ತನ್ನದಾಗಿಸಿಕೊಂಡು ನವೆಯುವ ಒಳಗು; ಹೊಗಳಿಕೆಯ ಬಗ್ಗೆ ಕಾತರ, ಹೊಗಳುವವರ ಬಗ್ಗೆ ಸಂದೇಹ; ‘ಭಟ್ಟಂಗಿಗಳ ಸುಳ್ಳುಗಳಲ್ಲಿ ಲೇಖಕ ಸತ್ಯಕ್ಕಾಗಿ ತಡಕಾಡುವಂತಾಗುತ್ತದೆ’ ಎಂಬ ತಿಳಿವಳಿಕೆ; ಗೆಲ್ಲುವ, ಆಳುವ ಬಯಕೆ; ಆದರೆ ಎಲ್ಲ ದಿಗ್ವಿಜಯದ ನಿರರ್ಥಕತೆಯ ಅರಿವು; ಸಂತನಾಗುವುದನ್ನು ತಪ್ಪಿಸಿಕೊಳ್ಳಲು ಕಿಡಿಗೇಡಿಯಾಗಿ ಉಳಿವ ಬಯಕೆ...
ಅತ್ತ, ಡಿ.ಆರ್. ಎಂದರೆ ಸಾಮಾನ್ಯವಾಗಿ ಸದಾ ಉರಿಯುವ ಬೌದ್ಧಿಕತೆ; ‘ಸುಟ್ಟಲ್ಲದೆ ಮುಟ್ಟೆನೆಂಬ’ ಹಟ; ಬೌದ್ಧಿಕ ಶಕ್ತಿ ತರಬಲ್ಲ ಅಧಿಕಾರದ ಬಗ್ಗೆ ಅಪಾರ ನಂಬಿಕೆ; ತಾತ್ವೀಕರಣಕ್ಕೆ ಸಿಕ್ಕದಿರುವುದು ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸ; ಕೆಲವೊಮ್ಮೆ ರಂಗಕ್ಕೆ ತಕ್ಕ ಬುದ್ಧಿಜೀವಿ ಜಿಗಿತ; ಮಗುವಾಗಬೇಕೆಂಬ ತಾತ್ವಿಕ ಬಯಕೆ; ಆದರೆ ಮಗುವಾಗಲಾರೆನೆಂಬ ಖಚಿತ ನಂಬಿಕೆ! ಲಂಕೇಶರಿಗೆ ಎಲ್ಲರನ್ನೂ, ಎಲ್ಲವನ್ನೂ ಕಠೋರವಾದ ನೈತಿಕ ಹಿಡಿಯಲ್ಲಿ ಹಿಡಿಯುವ ಹಟ; ಡಿ.ಆರ್.ಗೆ ಎಲ್ಲವನ್ನೂ ಸಿದ್ಧಾಂತದಲ್ಲಿ ಬಿಗಿಯುವ, ಎಲ್ಲಿಂದ ಎಲ್ಲಿಗೋ ಕೊಂಡಿಯಾಗಿಸುವ ಆಸೆ...
ಲಂಕೇಶರ ಕಣ್ಣಿನ ಸ್ಥಿತಿ ನೋಡಿ ನಮಗೆಲ್ಲಾ ಕಸಿವಿಸಿಯಾಗುತ್ತಿತ್ತು. ಇರುವ ಒಂದು ಕಣ್ಣೂ ಹೋದರೆ ಲಂಕೇಶರಿಗೆ ಇಷ್ಟವಾದ ಪುಸ್ತಕಗಳನ್ನೆಲ್ಲಾ ನಾನು ಅವರಿಗೆ ಓದಿ ಹೇಳಬೇಕು ಎಂದು ಕೂಡ ಒಂದು ದಿನ ಮುಗ್ಧವಾಗಿ ಅಂದುಕೊಂಡಿದ್ದೆ. ಕ್ರಮೇಣ ಅವರ ಒಂದು ಕಣ್ಣು ಉಳಿಯಿತು. ಆ ಘಟ್ಟದಿಂದಾಚೆಗೂ ಲಂಕೇಶರು ಓದುತ್ತಾ, ಬರೆಯುತ್ತಾ ಹೋದರು. ಒಂದೇ ದಿನದಲ್ಲಿ ಒಂದು ಪುಸ್ತಕ ಓದಿ ತೀಕ್ಷ್ಣವಾದ ರಿವ್ಯೂ ಬರೆದುಬಿಡುತ್ತಿದ್ದರು. ಲಂಕೇಶರ ವಿಮರ್ಶಾಕ್ರಮದ ಬಗ್ಗೆ ಎಷ್ಟೇ ಪ್ರಶ್ನೆಗಳಿರಬಹುದಾದರೂ ಅಷ್ಟೊಂದು ವಿಮರ್ಶಾ ಒಳನೋಟಗಳನ್ನು ಕೊಟ್ಟ ಕನ್ನಡ ವಿಮರ್ಶಕರು ಯಾರೂ ಇಲ್ಲವೆಂದೇ ನನ್ನ ನಂಬಿಕೆ.
ನುರಿತ ಅಕ್ಕಸಾಲಿಗನೊಬ್ಬ ಒಂದೇ ಏಟಿಗೆ ಇದು ಚಿನ್ನ, ಇದು ಕಬ್ಬಿಣ ಎಂದು ಬೇರ್ಪಡಿಸುವಷ್ಟು ಚುರುಕಾಗಿ ಅವರ ನೈತಿಕ ಕಣ್ಣು ಕೆಲಸ ಮಾಡುತ್ತಿತ್ತು. ಆ ಕಣ್ಣು ಮಂದವಾಗಲಿಲ್ಲ ಎಂದು ಹೇಳಲಾರೆ. ಆದರೆ ಆ ಕಣ್ಣು ಕನ್ನಡದ ಉಳಿದ ವಿಮರ್ಶಕರಿಗಿಂತ ಹೆಚ್ಚು ತೀಕ್ಷ್ಣವಾಗಿ ಸಾಹಿತ್ಯಕೃತಿಗಳ ದೋಷಗಳನ್ನು ಕಂಡಿದೆ ಹಾಗೂ ರಾಜಿಯಿಲ್ಲದೆ ಅದನ್ನು ಓದುಗರಿಗೆ ಕಾಣಿಸಿದೆ. ಶ್ರೇಷ್ಠವಾದದ್ದನ್ನು ಗುರುತಿಸುವಲ್ಲಿ ಆ ಕಣ್ಣು ಕೊಂಚ ಜಿಪುಣತನ ತೋರಿರುವುದು ನಿಜ. ಆ ನಡುವೆಯೂ ಅನೇಕ ಹೊಸ ಲೇಖಕ, ಲೇಖಕಿಯರನ್ನು ಅದು ಗುರುತಿಸಿದೆ; ಒಮ್ಮೆ ಅಪಾರವಾಗಿ ಮೆಚ್ಚಿದ್ದ ಲೇಖಕರನ್ನು ಮತ್ತೆ ಪರಿಶೀಲಿಸಿದೆ.
‘ಮನುಷ್ಯ ಮೂಲತಃ ಈವಿಲ್’ ಎಂದು ಲಂಕೇಶ್ ಒಂದು ಸಂಜೆ ಮತ್ತೊಮ್ಮೆ ಅಂದರು. ಈ ಮಾತು ಆ ಗಳಿಗೆಯ ಖಾಸಗಿ ಅನುಭವದ ಕಹಿಯಿಂದ ಬಂದಿದ್ದರೆ ಇದಕ್ಕೆ ಹೆಚ್ಚಿನ ವ್ಯಾಪ್ತಿ ಇರುತ್ತಿರಲಿಲ್ಲ. ಆದರೆ ಈ ಮಾತನ್ನು ಲಂಕೇಶ್ ಆಗಾಗ್ಗೆ ಆಡುತ್ತಾ ಬಂದಿದ್ದರು. ಈ ಬಗ್ಗೆ ಬರೆಯುತ್ತಾ ಬಂದಿದ್ದರು. ತಮ್ಮ ಸುಮಾರು ನಲವತ್ತು ವರ್ಷಗಳ ಬರವಣಿಗೆಯಲ್ಲಿ ಈವಿಲ್‌ನ -ಕೇಡಿನ- ಸ್ವರೂಪವನ್ನು ಶೋಧಿಸುತ್ತಾ ಬಂದಿದ್ದರು. ಆದ್ದರಿಂದ ಇದು ಅವರ ದರ್ಶನದ ಅಂತಿಮ ಹೇಳಿಕೆ ಕೂಡ ಇರಬಹುದು. ಇಷ್ಟು ನಿರಂತರವಾಗಿ ಒಂದು ವಸ್ತುವನ್ನು ಬೆನ್ನು ಹತ್ತಿದ ಮುಖ್ಯ ಕನ್ನಡ ಲೇಖಕ ಪ್ರಾಯಶಃ ಲಂಕೇಶ್ ಒಬ್ಬರೇ. ಅವರು ತಮ್ಮ ಪತ್ರಿಕೆಯ ಮೂಲಕ ಮಾಡಿದ್ದು ಕೂಡ ಈವಿಲ್‌ನ ವಿವಿಧ ಸಮಕಾಲೀನ ರೂಪಗಳ ಜೊತೆಗಿನ ಮುಖಾಮುಖಿಯೇ ಆಗಿತ್ತು.
ಈ ಶೋಧನೆಯನ್ನು ಲಂಕೇಶ್ ತಮ್ಮ ಬರವಣಿಗೆಯ ಮೊದಲ ಹಂತದ ನವ್ಯ ಘಟ್ಟದಲ್ಲೇ ಆರಂಭಿಸಿದರು. ಕಾಮದಲ್ಲಿ ಮನುಷ್ಯನೊಬ್ಬ ತೀವ್ರವಾಗಿ ವ್ಯಕ್ತವಾಗುವ ಹಾಗೆ ತನ್ನ ಕೇಡಿನಲ್ಲೂ ಅಷ್ಟೇ ತೀವ್ರವಾಗಿ ವ್ಯಕ್ತವಾಗುತ್ತಾನೆ. ಮುಂದಿನ ಗಳಿಗೆಯಲ್ಲಿ ಏನು ಮಾಡುತ್ತಾನೆ ಎಂದು ಊಹಿಸಲಾಗದ ಮನುಷ್ಯ ಯಾವಾಗಲೂ ನೈತಿಕ ಕೇಂದ್ರದಿಂದ ಪ್ರೇರಣೆ ಪಡೆದೇ ವರ್ತಿಸುತ್ತಾನೆ ಎಂದು ಹೇಳುವುದು ಕಷ್ಟ. ಆದ್ದರಿಂದಲೇ ಮಾನವವರ್ತನೆಯಲ್ಲಿರುವ ಮುಖ್ಯ ಚಾಲಕಶಕ್ತಿಗಳಲ್ಲೊಂದಾದ ಹಾಗೂ ಮನುಷ್ಯ ಸ್ವಭಾವವನ್ನು ಅರಿಯಲು ಬಹುಮುಖ್ಯ ಭಿತ್ತಿಯಾದ ಈವಿಲ್ ಲಂಕೇಶರ ವಸ್ತು, ಭಿತ್ತಿ, ಹುಡುಕಾಟ, ಒರೆಗಲ್ಲು ಎಲ್ಲವೂ ಆದಂತಿದೆ.
...ಈವಿಲ್‌ನಿಂದ ಮುಕ್ತವಾಗುವುದಕ್ಕೆ ಅಥವಾ ಕೇಡನ್ನು ಮೀರುವುದಕ್ಕೆ ಸಾಮಾನ್ಯವಾಗಿ ಅನೇಕ ಲೇಖಕರು ಹುಡುಕುವ ಆಶಾವಾದಿ, ನೀತಿವಾದಿ ಅಥವಾ ಆಧ್ಯಾತ್ಮಿಕ ಮಾರ್ಗದಲ್ಲಿ ಲಂಕೇಶರಿಗೆ ನಂಬಿಕೆ ಇರಲಿಲ್ಲ. ಬದಲಿಗೆ, ಮನುಷ್ಯ ತನ್ನ ತೀವ್ರ ತಾದಾತ್ಮ್ಯದ ಗಳಿಗೆಯಲ್ಲಿ ಅಥವಾ ‘ವೃಕ್ಷದ ವೃತ್ತಿ’ ಕಥೆಯ ಪಾರ್ವತಜ್ಜಿಯಂತೆ ಪರಿಸರದ ಜೊತೆಗೆ ಒಂದಾಗಿ ಕಂಡುಕೊಳ್ಳುವ ಸಾರ್ಥಕ್ಯದಲ್ಲಿ ತನ್ನ ಈವಿಲ್ ಗುಣವನ್ನು ಮೀರಬಹುದು ಎಂದು ಲಂಕೇಶರಿಗನ್ನಿಸಿತ್ತು. ಈ ಕಾರಣದಿಂದಾಗಿಯೇ ಅವರ ಸಾಹಿತ್ಯ ಕೃತಿಗಳಲ್ಲಿ ಕೇಂದ್ರ ಪಾತ್ರಗಳು ‘ಹೀರೋ’ಗಳಂತೆ ಆಡುವುದಿಲ್ಲ; ಈ ಹೀರೋಗಳು ಮಾತ್ರವೇ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಾರೆಂಬ ರಮ್ಯ ನಂಬಿಕೆ ಲಂಕೇಶರ ಕೃತಿಗಳಲ್ಲಿ ಕಡಿಮೆ. ಅಸಾಧಾರಣ ಗುರಿಗಳು ಹಾಗೂ ಆದರ್ಶ ಕ್ರಿಯೆಗಳಿಗಿಂತ, ಸಾಧಾರಣವಾದ, ಆದರೆ ತನ್ನ ಹೃದಯಕ್ಕೆ ಹತ್ತಿರವಾದ ಕ್ರಿಯೆಯಲ್ಲಿ ಅಥವಾ ಶ್ರಮದಲ್ಲಿ ಮುಳುಗಿದ ಹೆಣ್ಣು ಅಥವಾ ಗಂಡು ಸಾಧಿಸುವ ಉದಾತ್ತತೆಯ ಬಗ್ಗೆ ಲಂಕೇಶರಿಗೆ ಹೆಚ್ಚು ಭರವಸೆಯಿದ್ದಂತಿತ್ತು...
ಲಂಕೇಶರ ಜೊತೆಗಿನ ಸಂಜೆಯ ಮಾತುಕತೆಗಳು ಬಹುತೇಕವಾಗಿ ಲವಲವಿಕೆಯಿಂದಿರುತ್ತಿದ್ದವು. ನಮ್ಮೊಳಗನ್ನು ಬೆಳಗುವಂತಿರುತ್ತಿದ್ದವು. ಡಿ.ಆರ್. ಜೊತೆಗಿನ ಚರ್ಚೆಗಳು ಅದ್ಭುತವಾದ ಬೌದ್ಧಿಕ ಎತ್ತರಕ್ಕೆ ಕೊಂಡೊಯ್ಯುವಂತಿರುತ್ತಿದ್ದವು. ಉತ್ತಮ ಮದ್ಯಪಾನದ ಗಳಿಗೆಗಳಲ್ಲಂತೂ ಈ ಇಬ್ಬರೂ ಅತ್ಯಂತ ಬ್ರೈಟ್ ಆದ ಕ್ಷಣಗಳನ್ನು ಸೃಷ್ಟಿಸುತ್ತಿದ್ದರು. ಅವೆಲ್ಲ ನನ್ನ ಬದುಕಿನ ಅತ್ಯಂತ ಅರ್ಥಪೂರ್ಣ ಗಳಿಗೆಗಳು ಎಂಬ ಅನಿಸಿಕೆ ಈಗ ಇನ್ನಷ್ಟು ಗಾಢವಾಗತೊಡಗುತ್ತದೆ. ಅವು ನನ್ನೊಳಗೆ ಮತ್ತೆ ಮತ್ತೆ ಸುಳಿಯುವ, ತಂಗುವ, ಬೆಳೆಯುವ, ಜೀವಂತ ಗಳಿಗೆಗಳು ಎಂಬ ಭಾವ ವಿಚಿತ್ರ ನೆಮ್ಮದಿ ಕೊಡುತ್ತದೆ.
ಆದರೆ ಅವು ಮತ್ತೆ ಬಾರದ ಗಳಿಗೆಗಳು ಎಂಬ ವಾಸ್ತವ ಕುಟುಕಿದಾಗ, ಅಸಾಧ್ಯವಾದ ಸೆನ್ಸ್ ಆಫ್ ಲಾಸ್ ಮುತ್ತತೊಡಗುತ್ತದೆ. ವಿವಿಧ ಜ್ಞಾನಮಾರ್ಗಗಳ ಅಧ್ಯಯನಗಳ ಫಲವೆಲ್ಲ ಖಚಿತ ಮೆಥೆಡ್‌ಗಳ ಚೌಕಟ್ಟಿನಲ್ಲಿ ಹೊಸ ಆಕಾರ ಹಾಗೂ ಮಿಂಚುಗಳಲ್ಲಿ ಹೊರಬರುತ್ತಿರುವಂತೆ ಕಾಣುತ್ತಿದ್ದ ಡಿ.ಆರ್. ಮಾತುಗಳು; ಮಾನವನ ಕಠೋರ ಸತ್ಯಗಳ ಲೋಕದಲ್ಲಿ ತಾನು ಕಂಡದ್ದನ್ನು ಕಂಡ ಹಾಗೆ ಚಿಮ್ಮಿಸುತ್ತಿರುವಂತೆ ಕಾಣುತ್ತಿದ್ದ ಲಂಕೇಶರ ಶಬ್ದಗಳು, ತುಂಡುತುಂಡು ವಾಕ್ಯಗಳು... ಈ ಎರಡೂ ಮಾದರಿಗಳೂ ನನಗೆ ಸ್ಫೂರ್ತಿಯ ಸೆಲೆಗಳಾಗಿಯೇ ಉಳಿದಿವೆ.
೧೯೯೧ರ ಏಪ್ರಿಲ್‌ನಲ್ಲಿ ಮೈಸೂರಿನ ಕಥಾಕಮ್ಮಟದಲ್ಲಿ ಡಿ.ಆರ್. ‘ಒಂದು ಉತ್ತಮ ಸಣ್ಣಕತೆಯ ಬಂಧದೊಳಗೆ ಕನಸು ಮತ್ತು ಕಾಲಜ್ಞಾನ; ಪರಿಚಿತತೆ ಮತ್ತು ಅಪರಿಚಿತತೆ’ ಇರುವ ರೀತಿ ಕುರಿತು ಹೇಳಿದ್ದು ನಾನು ಬರೆಯುವ ಕತೆಗಳ ಬಗ್ಗೆ ಇನ್ನೊಂದು ದಿಕ್ಕಿನಿಂದ ಯೋಚಿಸುವಂತೆ ಮಾಡಿತು. ಅವತ್ತು ಕನ್ನಡ ಕತೆಯಲ್ಲಿ ಅವರ ಅಂತಿಮ ಐದು ಆಯ್ಕೆಗಳು ಇವು: ಲಂಕೇಶರ ‘ಸಹಪಾಠಿ’, ಅನಂತಮೂರ್ತಿಯವರ ‘ಸೂರ್ಯನ ಕುದುರೆ’, ಪೂರ್ಣಚಂದ್ರ ತೇಜಸ್ವಿಯವರ ‘ಅವನತಿ’, ದೇವನೂರ ಮಹಾದೇವರ ‘ಒಡಲಾಳ’, ಮಾಸ್ತಿಯವರ ‘ಸಂಜೀವನ ಸ್ವಪ್ನ’. ಈ ಐದೂ ಕತೆಗಳು ಜಾತಿಯ ನರಕವನ್ನು ಹಿಡಿದಿಟ್ಟ ಬಗೆಯನ್ನು ಡಿ.ಆರ್. ತಮ್ಮ ಭಾಷಣದಲ್ಲಿ ಚರ್ಚಿಸಿದ್ದರು.
ಈ ಭಾಷಣ ಮುಗಿಸಿ ಕಾರಿನಲ್ಲಿ ಬರುವಾಗ ನಾನು ಇದ್ದಕ್ಕಿದ್ದಂತೆ ನನ್ನ ಪ್ರೀತಿಯ ಹಳೆಯ ಹಿಂದಿ ಹಾಡುಗಳ ಕ್ಯಾಸೆಟ್ ಹಾಕಿದೆ. ಮುಖೇಶರ ‘ದಿಲ್ ಜಲ್ತಾ ಹೈ ತೋ ಜಲ್ನೇ ದೇ’ ಹಾಡು ಶುರುವಾಯಿತು. ಆ ಹಾಡಿನ ‘ಹಮ್ ಯಾದ್ ಲಗಾಯೇ ಬೈಠೆ ಹೈ... ತುಮ್ ವಾದಾ ಕರಕೇ ಭೂಲ್ ಗಯೇ’ ಎಂಬ ಸಾಲು ಬಂದ ತಕ್ಷಣ ‘ವೆರಿ ವೆರಿ ರೊಮ್ಯಾಂಟಿಕ್ ಸಾಂಗ್...’ ಎಂದ ಡಿ.ಆರ್. ಮುಖದಲ್ಲಿ ವಿಷಣ್ಣತೆ ಮೂಡತೊಡಗಿತು. ಡಿ.ಆರ್. ಅವರ ಪ್ರಖರ ಬೌದ್ಧಿಕತೆಯ ಮುಖವೇ ಹೆಚ್ಚು ಪರಿಚಯವಿದ್ದ ನಾನು ನಮ್ಮೆಲ್ಲರ ಹಾಗೆ ಅವರಿಗೂ ಇಂಥದೊಂದು ಭಾವನಾತ್ಮಕ ಮುಖವಿರುವುದನ್ನೇ ಮರೆತಿದ್ದೆ! ಈ ಬಗೆಯ ಭಾವುಕತೆ ಅವರಲ್ಲಿ ಮತ್ತೊಮ್ಮೆ ಮೂಡಿದ್ದನ್ನು ನಾನು ಕಂಡದ್ದು ಅವರು ಒಮ್ಮೆ ವಿದೇಶದಿಂದ ಹಿಂತಿರುಗಿದಾಗ.
ವಿದೇಶದಲ್ಲಿದ್ದ ಅವರ ಮಿತ್ರನೊಬ್ಬನ ಮದುವೆ ಮುರಿದು ಬಿದ್ದಿತ್ತು. ಆ ಮಿತ್ರ ತನ್ನ ಹೆಂಡತಿಯ ಜೊತೆಗಿನ ಸಂಬಂಧದ ಕೊನೆಯ ಗಳಿಗೆಗಳನ್ನು ನೆನೆಸಿಕೊಳ್ಳುತ್ತಾ ‘ನಾನೂ ಅವಳೂ ಕೊನೆಯ ಸಲ ಕಾಡಿಗೆ ಹೋದೆವು. ಅಲ್ಲಿ ವರ್ಡ್ಸ್‌ವರ್ತ್ ಪದ್ಯ ಓದಿದೆವು. ಅದಾದ ಮೇಲೆ ಬೇರೆಯಾದೆವು’ ಎಂದು ದುಃಖದಿಂದ ಹೇಳಿದ್ದ. ಡಿ.ಆರ್. ಇದನ್ನು ನನಗೆ ಹೇಳುತ್ತಾ ‘ಐ ವಾಸ್ ಮೂವ್ಡ್ ಇನ್‌ಟು ಟಿಯರ್ಸ್‌್’ ಎಂದರು. ನಾನು ಅವರನ್ನು ಈ ಮೂಡಿನಲ್ಲಿ ನೋಡಿದ್ದು ಇವೆರಡೇ ಸಲವೇನೋ. ಇದನ್ನು ಬರೆಯುತ್ತಿರುವಾಗ, ಡಿ.ಆರ್. ಕಾರು ಓಡಿಸುವಾಗ ಗುನುಗುತ್ತಿದ್ದ ‘ಏನಾಯಿತೋ ಸಖನೆ ಏನಾಯಿತೋ’ ಎಂಬ ತತ್ವಪದದ ಎರಡು ಸಾಲು ಕೂಡ ನೆನಪಾಗುತ್ತಿದೆ; ಜೊತೆಗೇ, ‘ಕಾರು ಓಡಿಸುವಾಗ ಹುಡುಗಿಯರ ಮೀನಖಂಡ ಕಂಡರೆ ಆಕ್ಸಿಡೆಂಟ್ ಗ್ಯಾರಂಟಿ, ನಟರಾಜ್!’ ಎಂಬ ಅವರ ವಿಶೇಷ ‘ಕಾಮ ಜ್ಞಾನ’ ಕೂಡ ! 
ಡಿ.ಆರ್. ಚರ್ಚಿಸುತ್ತಿದ್ದ ವಿಸ್ಮೃತಿಯ ಬಗ್ಗೆ ಯೋಚಿಸಿದಾಗ ಒಂದು ಪ್ರಶ್ನೆ ಎದುರಾಗುತ್ತದೆ: ಈ ಸಾಂಸ್ಕೃತಿಕ ಮರೆವು ಎನ್ನುವುದು ಭಾಗಶಃ ಮಾತ್ರ ಆಗುತ್ತದೆಯೇ? ಹಾಗಾದರೆ ಜಾತೀಯತೆ, ಅಸ್ಪೃಶ್ಯತೆಗಳು ಯಾಕೆ ವಿಸ್ಮೃತಿಗೊಳಗಾಗಿ ನಮ್ಮ ಜೀವನದಿಂದ ಕಣ್ಮರೆಯಾಗಲಿಲ್ಲ? ಹಾಗೆ ಆಗಿದ್ದರೆ ಭಾರತದಂಥ ಸಮಾಜದಲ್ಲಿ ಮರೆವೇ ವರದಾನವಾಗಿಬಿಡುತ್ತಿತ್ತೇನೋ. ಈ ಮರೆವು ಕೂಡ ಆಳುವ ವರ್ಗಗಳು ಜಾಣತನದಿಂದ ಸೃಷ್ಟಿಸುವ ಒಂದು ಸಂಕಥನವೆ? ಈ ಪ್ರಶ್ನೆಗಳಿಗೆ ಡಿ.ಆರ್. ಮುಂದೆ ಉತ್ತರ ಹುಡುಕುತ್ತಿದ್ದರೇನೋ. ಅದು ಆಗದಿದ್ದುದರಿಂದ ಈ ಮಾದರಿಯ ಸಂಸ್ಕೃತಿ ವಿಮರ್ಶೆಯನ್ನು ಮುಂದುವರೆಸುವವರು ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ.
ಆದರೆ ಈ ಬಗೆಯ ಹುಡುಕಾಟ ನಡೆಸುವ ಬೌದ್ಧಿಕ ಬದ್ಧತೆ ಹಾಗೂ ಸಿದ್ಧತೆ ಕನ್ನಡ ಸಂಸ್ಕೃತಿಯಲ್ಲಿ ಇಳಿಮುಖವಾಗುತ್ತಿರುವ ವಿಷಾದಕರ ಪರಿಸ್ಥಿತಿಯೂ ಈಗ ಇದೆ. ಡಿ.ಆರ್. ತಮ್ಮ ಆಧುನಿಕೋತ್ತರ ಚಿಂತನೆಯ ಘಟ್ಟದಲ್ಲಿ ಅವೈದಿಕ, ಶೂದ್ರ ಮತ್ತು ದಲಿತರ ಸಾಂಸ್ಕೃತಿಕ ಅಧಿಕಾರಗಳ ಬಗ್ಗೆ ಮಹತ್ವದ ಗ್ರಹಿಕೆಗಳನ್ನು ಮಂಡಿಸುತ್ತಿದ್ದಾಗ ಅವು ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಯಲ್ಲಿ ಚಲಾವಣೆ ಪಡೆಯಬೇಕಾಗಿತ್ತು; ಅಥವಾ ಈ ಬಗೆಯ ನೋಟಕ್ರಮಗಳ ಅಗತ್ಯವಿದ್ದ ‘ಅಹಿಂದ’ದಂಥ ಸಾಮಾಜಿಕ ವೇದಿಕೆಗಳು ಹಾಗೂ ದಲಿತ, ಶೂದ್ರ ಸಂಘಟನೆಗಳು ಈ ಬಗೆಯ ಚಿಂತನೆಗಳನ್ನು ತಮ್ಮ ತಾತ್ವಿಕ ತಳಹದಿಯಾಗಿ ಸ್ವೀಕರಿಸಬೇಕಾಗಿತ್ತು. ಬಿ.ಎಸ್.ಪಿ ರೀತಿಯ ರಾಜಕಾರಣದ ಜೊತೆಗೂ ಇದು ವ್ಯಾಪಕವಾಗಿ ಬೆರೆಯಬೇಕಾಗಿತ್ತು. ಹಾಗಾಗಲಿಲ್ಲ...
ಹೆರಾಲ್ಡ್ ಬ್ಲೂಮ್ ಜಗತ್ತಿನ ಮಹಾಪ್ರತಿಭೆ­ಗಳನ್ನು ಕುರಿತು ಬರೆದ ‘ಜೀನಿಯಸ್’ ಎಂಬ ಪುಸ್ತಕದಲ್ಲಿ ಬರಹಗಾರನೊಬ್ಬ ತನ್ನ ಆಳದಿಂದ ಸಂಧಿಸಿ ತೀವ್ರವಾಗಿ ತನ್ಮಯವಾಗುವ ವಸ್ತುವಿಗೆ ಎದುರಾದಾಗ ಅವನ ಜೀನಿಯಸ್ ಉಕ್ಕಿ ಹರಿಯುವುದನ್ನು ತೋರಿಸಿಕೊಡುತ್ತಾನೆ. ಅಲ್ಲಮಲೋಕವನ್ನು ಸಂಧಿಸಿದಾಗ ಡಿ.ಆರ್. ಜೀನಿಯಸ್ ಹಾಗೆ ಉಕ್ಕಿ ಹರಿದಿರುವುದು ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯುದ್ದಕ್ಕೂ ಕಾಣುತ್ತದೆ. ತಮ್ಮ ಕೊನೆಯ ವರ್ಷಗಳಲ್ಲಿ ಈ ಕಥನವನ್ನು ಬೆನ್ನು ಹತ್ತಿದ ಕಾಲದಲ್ಲಿ ತಾವು ಸಾವಿನ ಆಸುಪಾಸಿನಲ್ಲಿರಬಹುದೆಂಬ ಸೂಚನೆ ಡಿ.ಆರ್.ಗೆ ಸಿಕ್ಕಿತ್ತೋ ಏನೋ...
ನನ್ನ ತಿಳಿವಳಿಕೆಯ ಪ್ರಕಾರ, ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕನ್ನಡದ ಅತ್ಯಂತ ಮಹತ್ವದ ಸಾಂಸ್ಕೃತಿಕ ಅಧ್ಯಯನ ಹಾಗೂ ಪ್ರಾಯಶಃ ಕನ್ನಡದ ಮೊದಲ ಪೂರ್ಣ ಪ್ರಮಾಣದ ಲಿಟರರಿ ಥಿಯರಿಯ ಪುಸ್ತಕ. ಇಲ್ಲಿ ಡಿ.ಆರ್. ಸಾಧಿಸಿರುವ ಥಿಯರೈಸೇಶನ್‌ನ ವ್ಯಾಪ್ತಿ; ಸಾಹಿತ್ಯಕೃತಿಗಳ ವ್ಯಾಖ್ಯಾನಗಳು; ದಾರ್ಶನಿಕ ವಾಗ್ವಾದಗಳ ಗ್ರಹಿಕೆ; ಕಾವ್ಯಮೀಮಾಂಸೆಗಳ ಸಂಘರ್ಷಗಳು ಸಾಮಾಜಿಕ ಸಂಘರ್ಷಗಳಾಗುವುದನ್ನು ವ್ಯಾಖ್ಯಾನಿಸುವ ಕ್ರಮ; ಅಲ್ಲಮಕಿಟಕಿಯ ಮೂಲಕ ವಿಶ್ವಸಾಹಿತ್ಯದ ಗ್ರಹಿಕೆಗಳು; ವಚನ ಸಾಹಿತ್ಯ- ಶೂನ್ಯ ಸಂಪಾದನೆ- ಮಂಟೇಸ್ವಾಮಿ ಕಾವ್ಯಗಳ ನಡುವಿನ ಕೊಂಡಿಗಳು ಹಾಗೂ ಭಿನ್ನತೆಗಳು; ಕಾವ್ಯದ ವ್ಯಾಪಕ ವ್ಯಾಖ್ಯಾನಗಳು ಮತ್ತು ಅದ್ಭುತವಾದ ಓದಿನ ಕ್ರಮಗಳು- ಈ ಎಲ್ಲದರಲ್ಲೂ ಡಿ.ಆರ್. ತಲುಪಿರುವ ಎತ್ತರ ಕನ್ನಡದ ಮಟ್ಟಿಗಂತೂ ಅಪೂರ್ವ ಎಂದು ಮತ್ತೆ ಮತ್ತೆ ಅನ್ನಿಸಿದೆ.
ಇವತ್ತು ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಪುಸ್ತಕವನ್ನು ಓದತೊಡಗಿದರೆ, ಇಪ್ಪತ್ತನೆಯ ಶತಮಾನದ ಹೊತ್ತಿಗೆ ಡಿ.ಆರ್. ಮೂಲಕ ಕನ್ನಡ ಸಾಹಿತ್ಯತತ್ವ ತಲುಪಿದ ಎತ್ತರ ಹಾಗೂ ಸೂಕ್ಷ್ಮತೆಗಳನ್ನು ಕಂಡು, ಅಲ್ಲಮನ ನಿಗೂಢ ಗುಹೆ ಹೊಕ್ಕ ಡಿ.ಆರ್. ಎಂಬ ಗುಹೇಶ್ವರನ ಎದುರು ‘ಇದ ಕಂಡು ಬೆರಗಾದೆ ಗುಹೇಶ್ವರಾ!’ ಎಂದು ವಿಸ್ಮಯದಿಂದ ನಿವೇದಿಸಿಕೊಳ್ಳಬೇಕೆನಿಸುತ್ತದೆ.
ಸಾಯುವವರಿಗೆ ಸಾವಿನ ಸೂಚನೆ ಮೊದಲೇ ಇರುತ್ತದೆಯೇ? ನಾವು ಬಲ್ಲವರು ಸಾವಿಗೆ ಕೆಲವು ದಿನಗಳ ಹಿಂದೆ ಸಾವನ್ನು ಕುರಿತು ಆಡಿದ ಮಾತುಗಳನ್ನು ಮೆಲುಕು ಹಾಕುತ್ತಾ ನಾವು ಅವುಗಳಲ್ಲಿ ಸಾವಿನ ಸೂಚನೆಗಳನ್ನು ಹುಡುಕುತ್ತಿರುತ್ತೇವೆ. ಡಿ.ಆರ್. ತೀರಿಕೊಳ್ಳುವ ಕೆಲವೇ ದಿನಗಳ ಹಿಂದೆ ಇದ್ದಕ್ಕಿದ್ದಂತೆ ‘ನನಗೆ ಸಾಯಲು ಇಷ್ಟವಿಲ್ಲ’ ಎಂದಿದ್ದರಂತೆ. ಲಂಕೇಶರು ಆಗಾಗ್ಗೆ ಸಾವಿನ ಬಗ್ಗೆ ಮಾತಾಡಿ, ಸಾವಿನ ಹತ್ತಿರ ಹೋಗಿ, ವಾಪಸು ಬಂದು ಅದನ್ನೆಲ್ಲ ಪತ್ರಿಕೆಯಲ್ಲಿ ಬರೆದುಬಿಡುತ್ತಿದ್ದುದರಿಂದ ಅವರು ತಮ್ಮ ಕೊನೆಯ ದಿನಗಳಲ್ಲಿ ಸಾವನ್ನು ಕುರಿತು ಆಡುತ್ತಿದ್ದ ಮಾತುಗಳನ್ನು ನಾವೆಲ್ಲ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ‘ನಾನು ನಮ್ಮವ್ವನ ಥರ. ನಮ್ಮವ್ವ ಯಾವಾಗ್ಲೂ ಸಾಯ್ತಿನಿ, ಸಾಯ್ತಿನಿ ಅಂತ ಕೊರಗ್ತಾ ಇರೋಳು. ಆದರೆ ಹೋಗ್ತಿರಲಿಲ್ಲ!’ ಎಂದು ಲಂಕೇಶ್ ತಮಾಷೆ ಮಾಡಿಕೊಳ್ಳುತ್ತಿದ್ದರು.
ನಾನು ತೀವ್ರವಾಗಿ ಮಿಡಿದ ಡಿ.ಆರ್. ನಾಗರಾಜ್ ಹಾಗೂ ಪಿ. ಲಂಕೇಶ್ ಇಬ್ಬರೂ ತಂತಮ್ಮ ಬದುಕನ್ನು ಬಾಳುವಾಗ ಅದಕ್ಕೆ ತಕ್ಕಂಥ ಕನಸು, ಸಿದ್ಧತೆ, ತಡಕಾಟ, ಸ್ಪಷ್ಟತೆ, ದುಡುಕು, ಆದರ್ಶಗಳ ಹಾದಿಯಲ್ಲಿ ಸಾಗಿದವರು. ಅವರ ಬರಹಗಳಲ್ಲಿ, ಸಾಮಾಜಿಕ-ಸಾಂಸ್ಕೃತಿಕ ವಿಶ್ಲೇಷಣೆಗಳಲ್ಲಿ, ಪ್ರತಿಕ್ರಿಯೆಗಳಲ್ಲಿ, ಅವರು ತೆರೆಯಲೆತ್ನಿಸಿದ ಹಾಗೂ ತೋರಿಸಿದ ಮಾರ್ಗಗಳಲ್ಲಿ ನಿಜಕ್ಕೂ ಅರ್ಥಪೂರ್ಣವಾದದ್ದು ನೂರಾರು ಜನರಲ್ಲಿ ಬೆಳೆಯುತ್ತಾ ಹೋಗುತ್ತದೆ; ಅಥವಾ ಅದನ್ನು ಬೆಳೆಸಬಲ್ಲ ವ್ಯಕ್ತಿಗಳು, ಸಣ್ಣಪುಟ್ಟ ತಂಡಗಳು ಹುಟ್ಟಿಕೊಳ್ಳುತ್ತವೆ... ಇದೆಲ್ಲದರ ಜೊತೆಗೆ, ಕನ್ನಡನಾಡಿನ ಈ ಇಬ್ಬರು ಶ್ರೇಷ್ಠ ಚಿಂತಕರ ಮಾರ್ಗಗಳನ್ನು ಹೊಸಹೊಸ ಓದುಗಳ ಮೂಲಕ ಬೆಳೆಸಬೇಕಾದ ಮುಕ್ತ ವಿಮರ್ಶಾ ವಲಯವೂ ಹೊಸ ತಲೆಮಾರುಗಳೂ ಇಲ್ಲಿ ಸಿದ್ಧವಾಗಬೇಕಾಗುತ್ತದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ