ಭಾನುವಾರ, ಡಿಸೆಂಬರ್ 25, 2011

ಮುದೇನೂರು ಸಂಗಣ್ಣ


ಟಿಪ್ಪಣಿ: ಪ್ರೊ.ರಹಮತ್ ತರೀಕೆರೆ ಅವರು ಮುದೇನೂರು ಸಂಗಣ್ಣ ಅವರ ಸಂದರ್ಶನ ಮಾಡಿದ್ದರು, ಸಂಗಣ್ಣ ಅವರ ಮಾತುಕತೆ ಅವರನ್ನು ಪರಿಚಯಿಸುವ ಬರಹಕ್ಕಿಂತ ಪರಿಣಾಮಕಾರಿಯಾಗಿದೆ.ಹಾಗಾಗಿ ಈ ಸಂದರ್ಶನವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಸಂದರ್ಶನ ಮತ್ತು ಟಿಪ್ಪಣಿ: ಪ್ರೊ.ರಹಮತ್ ತರೀಕೆರೆ


ಮುದೇನೂರ ಸಂಗಣ್ಣ (೧೯೨೭)

ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ದೊಡ್ಡ ವ್ಯಾಪಾರಿ ಹಾಗೂ ಜಮೀನುದಾರಿ ಕುಟುಂಬದಲ್ಲಿ ಸಂಗಣ್ಣನವರು ಜನಿಸಿದರು. ಅವರಿಗೆ ಬಾಲ್ಯದಿಂದಲೂ ಸಂಗೀತ ನಾಟಕ ಹುಚ್ಚು. ಬಳ್ಳಾರಿ ಸೀಮೆಯ ಈ ಸಿರಿವಂತ ಕುಟುಂಬಗಳ ಒಂದು ಲಕ್ಷಣವಿದು ಎಂದು ಕಾಣುತ್ತದೆ. ಜೋಳದರಾಶಿ ದೊಡ್ಡನಗೌಡರಿಗೂ ಇದಿತ್ತು. ಇದೇ ಕಾರಣಕ್ಕೆ ಸಂಗಣ್ಣನವರಿಗೆ ರಂಗಭೂಮಿಯ ವ್ಯಕ್ತಿತ್ವಗಳಾದ ಶಿವರಾಮ ಕಾರಂತ, ಕೆ ವಿ ಸುಬ್ಬಣ್ಣ ಮುಂತಾದವರ ಜತೆ ಗೆಳೆತನವಿತ್ತು. ಸಂಗಣ್ಣನವರು ತಂಬಾಕು ವ್ಯಾಪಾರ ಮಾಡಿಕೊಂಡೆ ಸಾಹಿತ್ಯದ ಕೆಲಸ ಮಾಡಿದರು. ಮುಖ್ಯವಾಗಿ ಜನಪದ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗಳನ್ನು ಮಾಡಿದರು. ಅವರ ಮುಖ್ಯ ಕೃತಿಗಳು ಇವು: ’ನವಿಲು ಕುಣಿದಾವ’ (ನಾಟಕ) ’ಚಿತ್ರಪಟ ರಾಮಾಯಣ’ (ಜನಪದ ನಾಟಕ), ’ಜನಪದ ಮುಕ್ತಕಗಳು’ (ಜನಪದ ಕಾವ್ಯ) ’ಆಆಜ್ಜ ಈಮೊಮ್ಮಗ’ (ಕಾವ್ಯ), ’ಗೊಂದಲಿಗ ದೇವೇಂದ್ರಪ್ಪನ ಹಾಡುಗಳು’ (ಜನಪದ ಆಟಗಳ ಸಂಗ್ರಹ) ’ಬಾಳಬಿsಕ್ಷುಕ’ (ನಾಟಕ) ’ಸೂಳೆಸಂಕವ್ವ’ (ನಾಟಕ) ’ಚಿಗಟೇರಿ ಪದಕೋಶ’ (ನಿಘಂಟು); ಸಂಗಣ್ಣನವರ ಪ್ರತಿಭೆ ಜಾನಪದದ ಪ್ರೇರಣೆಯಿಂದ ಅರೆಜಾನಪದ ಆಧುನಿಕ ಕೃತಿಗಳನ್ನು ರಚಿಸಿದೆ. ಮೇಲೆ ಕಾಣಿಸಿದ ಕೃತಿಗಳಲ್ಲಿ ಕೊನೆಯದು ಸಂಗಣ್ಣ ನವರ ಒಂದು ವಿದ್ವತ್ ಕಾರ್ಯವಾಗಿದೆ. ಇದು ಒಂದು ಹಳ್ಳಿಯಲ್ಲಿ ಇರುವ ವಿಶಿಷ್ಟ ಪದಗಳಿ ಗಾಗಿಯೆ ನಿರ್ಮಾಣವಾಗಿರುವ ಸಾಂಸ್ಕೃತಿಕ ಪದಕೋಶ. ಕರ್ನಾಟಕದಲ್ಲಿ ಒಂದೊಂದು ಸೀಮೆಯಲ್ಲಿ ಇಂತಹ ಕೋಶಗಳನ್ನು ಸಿದ್ಧಪಡಿಸುವ ಸಾಧ್ಯತೆಯನ್ನು ಊಹಿಸುವುದಾದರೆ, ಕನ್ನಡ ಭಾಷೆಯ ಸಮೃದ್ಧತೆಯ ಸ್ವರೂಪ ಗೊತ್ತಾದೀತು. ಸಂಗಣ್ಣನವರ ಈ ಕೆಲಸವನ್ನು ದ್ರಾವಿಡ ಭಾಷೆಗಳ ಸಂಘಟನೆಯು ಗುರುತಿಸಿ ಪ್ರಶಸ್ತಿ ನೀಡಿದೆ. ಪ್ರಸ್ತುತ ಮಾತುಕತೆಯನ್ನು ಹೊಸಪೇಟೆಯಲ್ಲಿ ಬಸವರಾಜ ಮಲಶೆಟ್ಟರ ಮನೆಯಲ್ಲಿ ಸಂಗಣ್ಣನವರು ನವೆಂಬರ್ ೧೯೯೯ರಂದು ಧ್ವನಿಮುದ್ರಣ ಮಾಡಿಕೊಳ್ಳಲಾಯಿತು.

ಸಂದರ್ಶನ

ನಿಮ್ಮ ಹೆಸರಲ್ಲಿರೋ ಮುದೇನೂರು ಎಲ್ಲಿದೆ? ನಿಮ್ಮ ಕುಟುಂಬದ ಹಿನ್ನೆಲೆ ಹೇಳಿ.

ಮುದೇನೂರು ಮೂರ್ನಾಲ್ಕಿದಾವ. ರಾಯಚೂರು ಡಿಸ್ಟ್ರಿಕ್ಟ್‌ನಲ್ಲಿ ಒಂದದ. ಬಿಜಾಪುರ ಡಿಸ್ಟ್ರಿಕ್ಟ್‌ನಲ್ಲಿ ಒಂದದೆಯಂತೆ. ಆಮೇಲೆ ರಾಣೆಬೆನ್ನೂರ ತಾಲ್ಲೂಕಿನಲ್ಲಿ ಒಂದು ಮುದೇನೂರಿದೆ. ಹಡಗಲಿ ತಾಲೂಕಿನಲ್ಲಿ ಒಂದದ. ನಮ್ಮದು ಯಾವುದು ಅನ್ನೋದು ಹೇಳೋದು ಕಷ್ಟ. ಈ ಚಿಗಟೇರಿಗೆ ನಮ್ಮುತ್ತಾತ ಯಾವಾಗ್ಲೊ ಬಂದಿರಬೇಕು. ನಮ್ಮ ತಂದೆ ಮುದೇನೂರು ಕೊಟ್ರಬಸಪ್ಪ ಅಂತ. ಎಳೆವಯಸ್ಸಿನಲ್ಲಿ ತಂದಿ ಕಳಕೊಂಡವರು. ಮತ್ತ ನಮ್ಮಜ್ಜ ಎಲ್ಲಾ ಬಡ್ಡಿಖಾತೆ ವ್ಯವಹಾರ ಮಾಡ್ತಿದ್ರು. ಯಾವ್ದೂ ಪತ್ರಗಳೇ ಇಲ್ಲದ ಹಾಗೆ ಎಲ್ಲಾ ವಿಶ್ವಾಸದಿಂದ ನಡೀತಾ ಇತ್ತು. ಇವ್ರು ಸಾಗರದ ಕಡೆ ವ್ಯಾಪಾರ ಮಾಡ್ತಿದ್ರು ಬಂಡಿಯಲ್ಲಿ.
ಏನ್ ವ್ಯಾಪಾರ?

ಈ ಕಡೆಯಿಂದ ಏನೇನು ಒಯ್ತಿದ್ರೊ ಏನೋ, ಆ ಕಡೆಯಿಂದ ಮರದ ಮುಟ್ಟು, ಪೆಟ್ಟಿಗೆ, ಲತ್ತೂಡಿ, ಉದ್ದೊಮಣಿ ತರ್ತಿದ್ರು. ಹ್ಞೂಂ. ಇಲ್ಲಿಗೆ ಬೇಕಾದದ್ದನ್ನೆಲ್ಲಾ ತರ್ತಿದ್ರು. ಒಳ್ಳೆ ಅಡಕಿ ತಗೊಂಡ್‌ಬಂದು ಮಾರತಿದ್ರು. ಅವರು ಆಸ್ತಿ ಮಾಡ್ಲಿಕ್ಕೆ ಹೋದವರಲ್ಲಾ. ನಮ್ಮಜ್ಜ ಕೊಟ್ಟಂಥಾ ಸಾಲದಲ್ಲಿ ಅವ್ರು ತೀರಿದ ಮ್ಯಾಲೆ, ಸುಮಾರು ೭೦೦ ಎಕರೆ ಜಮೀನು ನಮ್ಮ ಸ್ವಾದಿsನಕ್ಕ ಬಂತು. ’ಹಣ ಕೊಡ್ರಿ’ ಅಂದ್ರ ’ಈ ಜಮೀನ ತಗೊಂಡು ಮುಟ್ಸಿಕೊಳ್ರಿ’ ಅಂತ ಬಂದದ್ದು. ಇನ್ನ ಸಾವಿರಗಟ್ಲೆ ಎಕರೆ ಮಾಡಬಹುದಾಗಿತ್ತು. ಭೂದಾಹ ಇದ್ದಿಲ್ಲ ಅವರಿಗೆ. ಎಳೆವಯಸ್ಸಿನಲ್ಲಿ ಅವರು ರಾಜಕಾರಣದಲ್ಲಿ ಬಿದ್ದಿದ್ರು. ಬೆಳಗಾಂವಿಯಲ್ಲಿ ಆದಂಥ ಅಖಿಲಭಾರತ ಕಾಂಗ್ರೆಸ್ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಂಥವರು. ಕೊನೇವರಗೂ ರಾಜಕೀಯದಲ್ಲಿ ಸಕ್ರಿಯವಾಗಿ ಇದ್ರು. ಕಾಂಗ್ರೆಸ್‌ನಲ್ಲೇ ಇದ್ರು.

ನಿಮಗೆ ಸಾಹಿತ್ಯ ಕ್ಷೇತ್ರಕ್ಕೆ ಬರೋಕೆ ಏನು ಪ್ರೇರಣೆ?

ನಾನು ಚಿಕ್ಕವಯಸ್ಸಿನಲ್ಲಿ ಊರ್ನಬಲ್ಲಿ ಚೆಂಡು ಆಡೋದು, ಚಿಣಿ ಆಡೋದು ಇದ್ರೆ, ಸಾವ್ಕಾರ್ ಮಗ ಅಂತ ಪಾರ್ಟಿ ಕಟ್ಸಿ ಯಾವುದೋ ಒಂದು ಪಕ್ಷಕ್ಕ ಸೇರಿಸ್ತಿರ್ಲಿಲ್ಲ. ಕೆಲವರು ಯಾವಾಗಲೂ ಆಡೋದೇ, ಸೋಲೊ ಪ್ರಶ್ನೆ ಇಲ್ಲೇ ಇಲ್ಲ. ಹುಳಿಸೊಪು ಅಂತಾರ ಅದಕೆ. ಯಾವುದಕ್ಕ ಹಾಕಿದ್ರೂ ಹೊಂದಾಣಿಕೆ ಆಗ್ತದಂತೆ. ಹಂಗ ನಾನು ಬೆಳೆದವ. ಈ ಕಾರಣದಿಂದ ನನಗೆ ಕ್ರೀಡಾ ಮನೋಭಾವ ಇದ್ದಿಲ್ಲ. ಹರಪನಹಳ್ಳಿ ಹೈಸ್ಕೂಲಿಗೆ ಹೋದಮ್ಯಾಲೆ ನಾನು ಯಾವುದೂ ಸ್ಪೋರ್ಟ್ಸ್‌ಗೆ ಸೇರಲಿಲ್ಲ. ನನಗೊಂದ್ ನಮೂನಿ ಕೀಳರಿಮೆ ಅನಿಸ್ತು. ಶಾಲಾ ವಾರ್ಷಿಕೋತ್ಸವ ಇಟ್ಕೊಂಡ್ರು. ನಾನು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳೋಣ ಅಂತ ಹೆಡ್‌ಮಾಸ್ತರ್ ಹತ್ರ ಹೆಸರು ಕೊಡ್ಲಿಕ್ಕೆ ಹೊದ್ರೆ ”ನೀನೇನ್ ಭಾಷ್ಣ ಮಾಡ್ತಿಯೋ? ನಾಳಿ ಬಂದು ಕರ್ನಾಟಕ ಏಕೀಕರಣದ ಬಗ್ಗೆ ಒಂದೈದ್ ನಿಮಿಷ ಮಾತಾಡು ಅಂದ್ರು”. ಇದು ೪೫ನೇ ಇಸ್ವಿ ಸಮಾಚಾರ. ನನಗೆ ಪ್ರಥಮ ಬಹುಮಾನ ಬಂತು. ಅಲ್ಲಿ ಆವೇಶ ಬಂತು ನನಗೆ. ಆವಾಗ್ಲೆ ಒಂದ ಪದ್ಯ ಬರೆದೆ, ಮಾಸ್ತಿ ಮೇಲೆ. ಇನ್ನೂ ಆದಿ ಅಂತ್ಯದ ಪ್ರಾಸಗಳ ವ್ಯಾಮೋಹ ಇದ್ದಕಾಲ. ನಮ್ಮ ಗುರುಗಳು ಅದನ್ನ ತಿದ್ದಪಡಿ ಮಾಡಿಕೊಟ್ಟರು. ಅವರಾ ಮುದ್ರಣ ಮಾಡಿ ತರ್ಸಿದ್ರು. ಅಮ್ಯಾಲೆ ಓದಿ ಅದನ್ನ ಅಳವಡಿಸಿ ಸಣ್ಣ ಹುಡಿಗೇರಿಂದ ಹಾಡ್ಸಿದ್ರು. ಹಿಂಗಾಗಿ ಪ್ರೇರಣೆ ಬಂತು ನನಗ. ಮುಂದ ಹರಪನಹಳ್ಳಿಯ ಪ್ರೌಢಶಾಲೆಯಲ್ಲಿ ಆಗ್ತಾ ಇದ್ದಂಥಾ ವಾರ್ಷಿಕೋತ್ಸವಗಳಿಗೆ ಬೇಂದ್ರೆ ಬಂದು ಹೋದ್ರು ಬಿ ಎಂ ಶ್ರೀಕಂಠಯ್ಯ ಬಂದು ಹೋದ್ರು. ವಿ.ಸೀತಾರಾಮಯ್ಯ ಬಂದು ಹೋದ್ರು, ಅ.ನ.ಕೃಷ್ಣರಾಯರು ಮತ್ತಿನ್ನ್ಯಾವುದಕ್ಕೊ ಬಂದು ಹೋದ್ರು. ಹಿಂಗಾಗಿ ಅದೊಂದು ನಮೂನಿ ಗುಂಗು ಹಿಡಿಸೊ ವಾತಾವರಣ ಆಯಿತು. ಪದ್ಯ ಬರೀಲಿಕ್ಕೆ ಪ್ರಾರಂಭ ಮಾಡಿದೆ. ನಾನಿನ್ನಾ ಹೈಸ್ಕೂಲ ಸೆಕೆಂಡ್ ಇಯರ್. ನನ್ನ ಪದ್ಯಗಳು ಬಂದಿದ್ದು ’ಜಯಂತಿ’ಯಲ್ಲಿ; ಅವಾಗ ಅದs ಪ್ರತಿಷಿವಿತ ಪತ್ರಿಕೆ. ’ಜೀವನ’ ಕೂಡಾ ಅದೇ ಇನ್ನ ಹೊರಟಿತ್ತು. ಅದ್ರಲ್ಲಿ ಕಥೆ ಬರೀತಿದ್ದೆ, ಲೇಖನ ಬರೀತಿದ್ದೆ. ಅವರು ತಿದ್ತಾ, ಮಾರ್ಗದರ್ಶನ ಮಾಡ್ತಾ ಇದ್ರು.

ಜನಪದ ಸಾಹಿತ್ಯ ಸಂಗ್ರಹ ಯಾವಾಗ ಶುರು ಮಾಡಿದ್ರಿ?

ಜನಪದ ಸಾಹಿತ್ಯದ್ದು ಆಮ್ಯಾಲೆ. ನಮ್ಮ ಮನೆಯಲ್ಲಿ ಒಂಬತ್ತು ಸಂಬಳದ ಆಳುಗಳಿದ್ರು. ಅವರು ಬೀಸುವಾಗ, ಹಗ್ಗ ಹೊಸೆಯುವಾಗ, ಹೊಲದಲ್ಲಿ ಗೊಬ್ಬರ ಹೇರುವಾಗ ಹಾಡ್ತಿದ್ರು. ಹಾಡತಕ್ಕಂತದ್ದು, ಕಥೆ ಹೇಳತಕ್ಕಂತದ್ದು, ಜೀವನದ ಒಂದು ಭಾಗ ಆಗಿತ್ತು. ನನಗೆ ಅದರಲ್ಲಿ ವಿಶೇಷ ಏನ ಕಂಡಿದ್ದಿಲ್ಲ. ಅದರ ಮಹತಿ ಗೊತ್ತಾದದ್ದು ೪೭ರಲ್ಲಿ. ಆವಾಗ ನನಗೆ ದೊರೆತದ್ದು ’ಗರತಿಯ ಹಾಡು’ ಮತ್ತು ಎಲ್ ಗುಂಡಪ್ಪ ಅವರ ಜಾನಪದ ಪುಸ್ತಕ ಇರಬೇಕು ಕಾಣಸ್ತದ. ಹೆಚ್ಚಾಗಿ ’ಗರತಿಯ ಹಾಡು’ ನನ್ನ ಮ್ಯಾಲೆ ಪ್ರಭಾವ ಬೀರ್ತು. ’ಅರೇ! ಇದು ಬಹಳ ಅಪರೂಪದ ಸಾಹಿತ್ಯ. ಇದು ಜೀವನಾನ ನಿರ್ವಚಿಸ್ತದೆ’ ಹೀಗೆ ಅಂದ್ಕೊಂಡು ಆಕಡೆ ಲಕ್ಷ್ಯ ಹೋತು. ’ಹಳ್ಳಿಯ ಹಾಡುಗಳು’ ಅಂತೇನೊ ಹೆಸರು ಇರಬೇಕು, ನಾನೂ ವಿರೂಪಾಕ್ಷಗೌಡ್ರು ಅನ್ನವರು ಒಷ್ಟು ಸೇರ್ಸಿ, ಜಂಟಿ ಹೆಸರ್ಲಿಂದ ಪ್ರಕಟಣ ಆಯ್ತು.
ನೀವು ಬಳ್ಳಾರಿ ಜಿಲ್ಲೆಯವರು. ವಿಚಿತ್ರ ಅಂದರೆ ನಿಮ್ಮ ಸಂಪರ್ಕ ಹೆಚ್ಚು ಇರೋದು ದಕ್ಷಿಣ ಕನ್ನಡದಲ್ಲಿ.
ನಮ್ಮಂಗೆ ದಕ್ಷಿಣ ಕನ್ನಡ ಮದ್ರಾಸ್ ಸ್ಟೇಟ್‌ಗೆ ಸಂಬಂದಿsಸಿದ್ದು. ಆವಾಗ ಇದ್ದದ್ದಾ ಮಂಗಳೂರಿನಲ್ಲಿ ಒಂದೇ ಕಾಲೇಜು. ಹೆಚ್ಚಿಗೆ ಮಾರ್ಕ್ ಬಂದವರಿಗೆ ಅಲ್ಲಿ ಸೀಟು ಸಿಗತಿದ್ದು. ಉಳದೋರೆಲ್ಲರೂ ಈ ಮದನಪಲ್ಲಿ, ಮದ್ರಾಸು, ಅನಂತಪುರಕ್ಕಾ ಬರತಿದ್ರು. ಮದನಪಲ್ಲೀದು ಥಿಯಾಸಾಪಿsಕಲ್ ಕಾಲೇಜ್. ನಮ್ಮ ಗುರುಗಳು ಒಬ್ಬರು ಅನಂದರಾಯ ಅಂತ ಇದ್ರು. ಅವರ ರೆಕ್ಮೆಂಡ್ಮೇಶನ್ ಮ್ಯಾಲೆ ನಾನು ಥಿಯಾಸಾಪಿsಕಲ್ ಕಾಲೇಜ್ ಸೇರಿದೆ. ಅಲ್ಲಿ ಎಲ್ಲಾ ದೈತ್ಯ ಪ್ರತಿಭೆಯವರೇ ಇದ್ರು. ಡಾ.ಗುರುಮೂರ್ತಿ ಅಂತ ಇದ್ರು. ಬಹಳ ಅದ್ಭುತವಾದ ವ್ಯಕ್ತಿ ಅವ್ರು. ಏನ್ ಇಂಗ್ಲೀಶ್ ಅವರದು? ಡಾ.ರಾಧಾಕೃಷ್ಣನ್‌ಗೆ ಬಹಳ ಬೇಕಾದಂಥವ್ರು. ಬಹಳ ಸಾಮಾನ್ಯ, ಉದಾತ್ತ ಜೀವ್ನ ನಡಸ್ತ್ತಾ ಇದ್ದಂಥ ಪ್ರಾಧ್ಯಾಪಕವರ್ಗ ಇತ್ತು, ಅಲ್ಲಿ.

ಬ್ರಿಟಿಶರ ಕಾಲದಲ್ಲಿ ಬಾಲ್ಯ ಕಳೆದಿದ್ದೀರಿ. ಅದರ ನೆನಪುಗಳನ್ನು ಹೇಳಿ...

ಅವರ ಆಡಳಿತದಲ್ಲಿ ಬಹಳ ಶಿಸ್ತು ಇತ್ತು. ಸರಕಾರ ಭ್ರಷ್ಟವಾಗಿರಲಿಲ್ಲ. ಎಲ್ಲಾ ದೃಷ್ಟಿಯಿಂದಲೂ ಅವರು ನಿಗಾ ಇಟ್ಟಿರತಿದ್ರು. ಅದೇನೋ ’ಕತ್ತಿ ಪರದೇಶಿ ಆದರೆ ನೋವೆ, ನಮ್ಮವರೇ ಹದಹಾಕಿ ತಿವಿದರೆ ಅದು ಹೂವೆ’ ಅಂತ, ಕುವೆಂಪು ಹೇಳ್ತಾರಲ್ಲ, ತಿವಿಯಾದೆಲ್ಲ ಈಗಿನವರು. ಅವರು ವಸಾಹತುಶಾಹಿಗಳು. ಶೋಷಿಸತಿದ್ದರು ಹಾಗೆಹೀಗೆ ಅಂತ ಹೇಳತಾರೆ. ಏನ ಹೇಳಿದರೂ ಕೂಡಾ ಅವರ ಅಡಳಿತ ಸಡಿಲ ಇರಲಿಲ್ಲ. ಪ್ರಾಮಾಣಿಕತೆ ಹೆಚ್ಚಿತ್ತು ಅನ್ನಬೇಕು.
ಆದರೆ ಸ್ವಾತಂತ್ರ್ಯಕ್ಕಾಗಿ ಜನ ಮಾಡ್ತಿದ್ದ ಚಳವಳಿಗಳನ್ನ ದಮನ ಮಾಡತಿದ್ದರು.
ಮಾಡತಿದ್ದರು. ತಮ್ಮ ಸ್ವಾರ್ಥ ಇಟ್ಕೊಂಡೇ ಆಳತಾ ಇದ್ದಂಥವರು. ಅವಾಗ ಭಾಷಣ ಮಾಡಾಕ ದೊಡ್ಡಮೇಟಿ ಅಂದಾನಪ್ಪ, ಕಮಲಾದೇವಿ ಚಟ್ಟೋಪಾಧ್ಯಾಯ ಅಂಥವರೆಲ್ಲಾ ಬರತಿದ್ದರು ನಮ್ಮ ಕಡಿಗೆ. ”ಈ ಇಂಗ್ಲೆಂಡಿನವರು ಬೆಳೆಯೋದೆಲ್ಲಾ ಏಳ ವಾರಕ್ಕಾಗುವಷ್ಟು ಆಹಾರ. ಎಲ್ಲಾ ನಮ್ಮದಾ ಲೂಟಿ ಮಾಡಕೊಂಡ ಹೋಗತಾರ. ಅಲ್ಲಿ ಎಲ್ಲಾ ಉತ್ಪತ್ತಿಯಾಗೋದು ನಮ್ಮ ದೇಶದ ಕಚ್ಚಾ ಸರಕಲಿಂದ” ಹೀಂಗೆಲ್ಲಾ ನಮಗ ಆವೇಶ ತುಂಬತ್ತಿದ್ದರು.

ಆಗ ಬಳ್ಳಾರಿ ಭಾಗದಲ್ಲಿ ಈ ಹೋರಾಟಗಳ ನಾಯಕರು ಯಾರು?

ಟೇಕೂರ ಸುಬ್ರಹ್ಮಣ್ಯಂ ಇದ್ರು. ಬೂದಿಹಾಳ್ ಅನಂತಾಚಾರ್ ಇದ್ರು. ಬೆಲ್ಲದ ಚೆನ್ನಪ್ಪ ಇದ್ರು. ಡಾ.ನಾಗನಗೌಡರಿದ್ರು ಇಲ್ಲಿ. ಅಲ್ಲಿ ನಮ್ಮ ಭಾಗಕ್ಕ ಹೊಸಪಾಲಪ್ಪ ಅಂತ, ರಂ ರಾ ದಿವಾಕರರ ಸಹಪಾಠಿಗಳು ಇದ್ರು.
ಕೊಟ್ಟೂರು ಬಹುಶಃ ಆಗ ತುಂಬಾ ಆಕ್ಟೀವ್ ಆಗಿತ್ತು.
ಕೇಂದ್ರನೇ ಆಗಿತ್ತು. ಹರಪನಹಳ್ಳಿ ಏಕೀಕರಣ ಚಳುವಳಿಯಲ್ಲಿ ತೆಲುಗರನ್ನ ಹಿಮ್ಮೆಟಿಸಬೇಕು ಅಂದರ, ಹರಪನಹಳ್ಳಿ ಜನನಾ ಆಗಿದ್ದರು ಆವಾಗಾ.
ಹೈದರಾಬಾದು ನಿಜಾಂ ಪ್ರಾಂತ್ಯ ಬಳ್ಳಾರಿ ಜಿಲ್ಲೆಗೆ ತಗುಲಿಕೊಂಡೆ ಇತ್ತು. ಅಲ್ಲಿನ ಚಳುವಳಿಗಳ ಸಂಪರ್ಕ ಇತ್ತಾ ನಿಮಗೆ?
ಇಲ್ಲ, ನಮಗೆ ತಾಕಲಿಲ್ಲ. ತುಂಗಭದ್ರಾ ನದಿ ಆಚೀಚೆ ಇರತಕ್ಕಂತಹ ಊರುಗಳಿದ್ದವಲ್ಲಾ, ಆ ಮಟ್ಟಿಗೆ ಅಷ್ಟೆ ಒಡನಾಟಿತ್ತು. ಬರೋದಕ ಹೋಗೋದಕ ಏನ ತೊಂದರೆ ಇದ್ದಿಲ್ಲ.

ನಿಮಗೆ ಹಿಂದೂಸ್ತಾನಿ ಸಂಗೀತದ ಈ ಹುಚ್ಚು ಹ್ಯಾಗೆ ಬಂತು?
'
ಹ್ಯಾಗೆ ಅಂದರ, ನಮ್ಮೂರಿನಲ್ಲಿ ಒಬ್ಬರು ಕೊಟ್ರಯ್ಯಸ್ವಾಮಿ ಅಂತ ಇದ್ರು. ಪಂಚಾಕ್ಷರಿ ಗವಾಯಿಗಳ ಹತ್ರ ಸಂಗೀತ ಕಲತವರು. ಅದಕೂ ಮೊದ್ಲ ಸಿನೇಮಾ ಹಾಡುಗಳು ಹಿಂದೂಸ್ತಾನಿ ಶೈಲಿಯಲ್ಲಿ ನಮಗೆ ಖುಷಿ ಕೊಡತಿದ್ವು. ’ಜುಗ್ನು’ ’ಮೇಲಾ’ ’ದಿವಾಳಿ’ ಸಿನಿಮಾಗಳು ಪ್ರಭಾವ ಬೀರತಿದ್ವು. ಮತ್ತೆ ಸಿನೇಮಾ ಸಂಗೀತಕ್ಕ ರೇಡಿಯೋ ಸಿಲೋನ್, ರೇಡಿಯೋ ಗೋವಾ ಇದ್ದವು. ನಮ್ಮನೆಯಲ್ಲಿ ೩೩ನೇ ಇಸ್ವಿಯಲ್ಲಿ ಗ್ರಾಮಪೋನ್ ಇತ್ತು. ಆವಾಗ ಈ ಮರಾಠಿ ಹಾಡುಗಳು ಶಾಸ್ತ್ರೀಯ ಸಂಗೀತದವು. ನಮ್ಮೆಜಮಾನ್ರು ತಗೊಂಡ ಬಂದಿದ್ರು. ಎಳೇವಯಸಲಿಂದ ಸಂಗೀತದ ಕಡೀಗೆ ಒಲವು ಆಯಿತು.
ನೀವು ವೃತ್ತಿಯಲ್ಲಿ ತಂಬಾಕು ವ್ಯಾಪಾರಿಗಳು ಇಷ್ಟೊಂದು ಸಾಂಸ್ಕೃತಿಕ ಆಸಕ್ತಿಗಳನ್ನು ಇಟ್ಕೊಂಡಿದ್ದೀರಿ. ಏನೂ ವೈರುಧ್ಯ ಇರ್ಲಿಲ್ವಾ?
ಖಂಡಿತಾ ಇರ್ಲಿಲ್ಲ. ಕಾರಣ ಅಂದ್ರ, ಅದು ಸುಗ್ಗಿಯ ವ್ಯವಹಾರ. ಇಡೀ ೧೨ ತಿಂಗಳ ನಡೀತಕ್ಕಂಥದ್ದಲ್ಲ.ನಮ್ಮಲ್ಲಿ ಬೀಡಿ ತಂಬಾಕ ವಿಶೇಷ ಬೆಳೀತಾರ. ಅದರ ವ್ಯಾಪಾರಕ್ಕ ಮಹಾರಾಷ್ಟ್ರದಿಂದ, ಆಂಧ್ರದಿಂದ, ತಮಿಳನಾಡಿನಿಂದ ವ್ಯಾಪಾರಿಗಳು ಬರೋದು ಇರ್ತಿತ್ತು. ಆವಾಗ ಮೂರ್ನಾಲ್ಕು ತಿಂಗಳು ನಮ್ಮ ಮನೆ, ನಮ್ಮ ಅಂಗಡಿಯಲ್ಲೆಲ್ಲ ಮರಾಠಿ ವಾತಾವರಣ ಇರತಿತ್ತು. ವ್ಯಾಪಾರಿಗಳು, ನಮ್ಮಲ್ಲೆ ಉಳಿದು ಬಿಡ್ತಿದ್ದರು. ಆವಾಗ ಹೋಟೆಲುಗಳು ಏನೂ ಇದ್ದಿಲ್ಲ. ತಂಬಾಕದ ವ್ಯಾಪಾರದ ಪದ್ದತೀನ ಹಾಗ. ಬಂದವರ್ನ ತಮ್ಮನೆಯಲ್ಲೆ ಉಳಿಸಿಕೊಳ್ಳತಕ್ಕಂಥದ್ದು. ನಿಪ್ಪಾಣಿ ತಂಬಾಕದ ವ್ಯಾಪಾರದಲ್ಲಿ ಇಡೀ ದೇಶಕ್ಕೆ ಪ್ರಮುಖ ಕೇಂದ್ರ. ಆ ದೃಷ್ಟಿಯಿಂದ ಅಲ್ಲಿ ವ್ಯಾಪಾರಿಗಳು ಹೆಚ್ಚು ಬರ್ತಾ ಇದ್ದರು. ಮಹಾರಾಷ್ಟ್ರದ ಸಂಪರ್ಕದಿಂದ ನಾನು ಮರಾಠಿ ಕಲೀಬೇಕಾತು. ಅಲ್ಲಿಯ ವ್ಯಾಪಾರಿ ಮಿತ್ರರು ನನಗೆ ಮರಾಠಿ ನಾಟಕದಲ್ಲಿರೋ ಆಸಕ್ತಿ ನೋಡಿದರು. ಒಳ್ಳೆ ನಾಟಕ ಯಾವಾದ್ರು ಕೊಲ್ಲಾಪುರಕ್ಕ, ಸಾಂಗ್ಲಿಗೆ ಮೀರಜಗೆ ಬಂದ್ರ, ಟೆಲಿಗ್ರಾಂ ಕೊಟ್ಟು ಕರಿಸಿಕೊಳ್ಳತಿದ್ದರು.


ಈ ತಂಬಾಕ ವ್ಯಾಪಾರ ನಿಮ್ಮ ಹಿರೀಕರಿಂದ ಬಂದ ವೃತ್ತಿನಾ?

ಏನಲ್ಲಾ ನಮ್ಮ ತಂದೆ ವ್ಯಾಪಾರಿಗಳs ಅಲ್ಲ. ಅವರು ಭೂಸ್ವಾಮಿಗಳು.

ಹಾಗಾದ್ರೆ ಈ ತಂಬಾಕ ವ್ಯಾಪಾರ ಹೆಂಗೆ ಶುರುವಾಯಿತು?

ಆವಾಗ ನಮ್ಮಲ್ಲಿ ಬೇಳಿತಾ ಇದ್ದಂಥ ತಂಬಾಕನ, ಸರೀ ವ್ಯಾಪಾರ ಮಾಡಿ ಪಟ್ಟಿ ತೀರಸೋದಕ್ಕೆ ದಲ್ಲಾಳಿ ಬೇಕಿತ್ತು. ಬಹುಜನರು ನಮ್ಮ ತಂದಿಯವರಿಗೆ ಒತ್ತಡ ತಂದರು. ಗಾಂದಿs ಪ್ರಭಾವದಿಂದ ಆದರ್ಶ ಅನಕೊಂಡು ಅವರು ಒಪ್ಪಲಿಲ್ಲ. ಎಲ್ಲಾರದು ಒತ್ತಡ ಬಂತು. ನಾನ ವ್ಯಾಪಾರ ಮಾಡಬೇಕಾತು. ಇದರಿಂದ ದುಡಿದು ಹಣಾನ ಹಿಂದಕ್ಕ ಇಡದೇ ಇದ್ರೂ, ಹಲವು ಜನರದ ಪರಿಚಯ ಆತು. ಮನಸ್ಸನ್ನ ತೆರೆದುಕೊಳ್ಳೋದಕ್ಕ ಆತು. ಮಹಾರಾಷ್ಟ್ರದಲ್ಲಿ ಈ ಸಂಗೀತ ಸಾಹಿತ್ಯದಲ್ಲಿ ಆಸಕ್ತಿ ಇದ್ದಂಥಾ ವ್ಯಾಪಾರಿಗಳನ್ನ ನಾನು ಕಂಡಕೊಂಡೆ. ನಾನು ಹೋದ್ರ ಅವರು ಸಂಗೀತದ ಒಂದು ಗೋಷಿವಿನs ಏರ್ಪಾಟು ಮಾಡತಿದ್ದರು. ಆಮ್ಯಾಲೆ ಕೆಲವು ಮರಾಠಿ ಸಾಹಿತಿಗಳನ್ನ ಕೊಲ್ಲಾಪುರದಿಂದ ಕರಸಿ ಪರಿಚಯ ಮಾಡಿಕೊಡತಿದ್ದರು. ಈ ನನ್ನ ಅಬಿsರುಚಿಗಳಿಗೆ ಪ್ರೋತ್ಸಾಹ ಕೊಡದರಿಂದ್ರ ನಾನು ವ್ಯಾಪಾರಿಕವಾಗಿ ಹತ್ತಿರದವನಾಗ್ತೇನೆ ಅನ್ನತಕ್ಕಂಥಾ ದೃಷ್ಟಿ ಅವರಿಗೆ ಇತ್ತು. (ಕೆಳದನಿಯಲ್ಲಿ) ಇನ್ನೇನ ಮಾಡತಿದ್ದರು ಅಂದ್ರ, ಹೇಳತಿದ್ದರಪ್ಪಾ. ನಾನು ಸಂಪರ್ಕ ಪಡದ ಹೊತ್ತಿಗ ಕಡಿಮಿ ಆಗಿತ್ತು. ಉತ್ತರ ಹಿಂದೂಸ್ತಾನದ ವ್ಯಾಪಾರಿಗಳು ಬಂದ್ರ ಅವರ ತಿಂಗಳ ತಿಂಗಳ ಇರತಿದ್ದರು. ಬಂದವರೆಲ್ಲ ಆವಾಗ ನಾಚನಾರಿಲೋಗ ಇವರಲ್ಲೇ ಇಳಕೊಳ್ಳಬೇಕು. ಕೊಪ್ಪಾಪುರ ಮಿರಜ ಸಾಂಗ್ಲಿ ಅಲ್ಲಿಗೆ ಬೈಟಕಿ ಕರಕೊಂಡ ಹೋಗದು. ಅವರ್ನೆಲ್ಲ ಖುಶಿಯಾಗಿಡತಕ್ಕಂಥದ್ದು. ಮತ್ತ ನಾವ ಎಲ್ಲಿ ಹೋಗದಿಲ್ಲಾಂದರ ಇದ್ದಲ್ಲೆ ಈ ಸಂಗೀತ ಇಡಸೋದು.

ಅಂದರೆ ವ್ಯಾಪಾರಿ ಸಂಸ್ಕೃತಿಯ ಭಾಗವಾಗಿಯೇ ಈ ಕಲೆಗಳೆಲ್ಲ ಬದುಕಿದ್ದವು.

ಹೌಹೌದು. ನಮ್ಮ ಮಿತ್ರ ಸಾತಪ್ಪಣ್ಣ ಅಥಣಿ ಅಂತ ಹೇಳಿ ಇದ್ರು. ಅವರು ಬಂದು ತಮಾಷಾಕ ಕರಕೊಂಡ ಹೋದರು. ಹೋದರ, ನಾನ ಹೀಂಗ ಕುತಕೊಂಡೆ. ಅವರ ಹೀಂಗ ದುಂಡಗ ನನ್ನ ಆ ಪಕ್ಕದಾಗ ಕುಂಡಿಸಿಕೊಂಡರು. ’ನನಗ ಒಲ್ಲೆನ್ರಿ’ ಅಂತ ನಾನು. ’ನೀವು ಇದನ್ನ ತಿಳಕೊಳ್ಳದಕ ನಿಮ್ಮನ್ನ ಕರಕೊಂಡ ಬಂದಿರೋದು. ಇದು ಒಂದು ಜಾನಪದ ಪ್ರಕಾರ, ತಮಾಷಾ ಅಂತ ನೋಡ್ರಿ ಅದನ್ನ’ ಅಂತಂದ ಹೇಳಿ. ಅವರು ಕುಣಿದರು, ಹಾಡಿದರು. ಏನ ಲಯ? ಏನ ಗತ್ತು? ಭಾಳ ಅದ್ಭುತವಾಗಿತ್ತು. ಅವರು ಕಲಿಯೋದಕ ಎಷ್ಟು ಶ್ರಮ ಪಟ್ಟಿದ್ರೊ ಏನೊ? ಒಬ್ಬಾತ ’ನನ್ನ ತೊಡಿಮ್ಯಾಲೆ ಕುತಕೊಂಡರ ನಿನಗ ೧೦೦ ರೂಪಾಯಿ ಕೊಡತಿನಿ’ ಅಂದರ, ತೊಡಿಮ್ಯಾಲ ಕುತಗೊಂಡು ರೂಪಾಯಿ ಇಸಕೊಂಡ್ಳು; ಇನ್ನೊಬ್ಬನು ಬಾಯಲ್ಲಿ ೧೦೦ ರೂಪಾಯಿ ನೋಟ ಕಚ್ಚಿಕೊಂಡಿದ್ದೆ ’ನೀನು ತಗೋಬೇಕು’ ಅಂದರೆ, ಆಕಿ ಆಕಡೆ ಹೋಗಿ ಕಚ್ಚಿ ಕಿತ್ತಗೊಂಡ್ಳು.

ಈಗಲೂ ಈ ಸಂಪ್ರದಾಯ ಇದೆಯಾ?

(ವಿಷಾದದ ದನಿಯಲ್ಲಿ) ಈಗೆಲ್ಲಾ ಹೋಯಿತು. ಎಲ್ಲಾ ಹೋಯಿತು. ಅಲ್ಲಿ ಏನಾಗದ ಅಂದ್ರ, ನಾವು ಒಮ್ಮೆ ಸೊಲ್ಲಾಪುರಕ್ಕೆ ಹೋದಾಗ ಅಲ್ಲಿ ಸಿದ್ಧರಾಮನ ಜಾತ್ರಿ ಇತ್ತು. ಅಲ್ಲೊಂದು ತಮಾಷಾ ಕಂಪನಿ ಬಂದದಂದ್ರು. ನೋಡೋಣಾಂತ ಹೋದವಿ. ಹಗಲಹೊತ್ತಾ ಇತ್ತದು. ಹೋದರ ಅಲ್ಲೆಲ್ಲಾ ಸಿನೇಮಾ ಹಾಡುಗಳಿಗೆ ಫರಮಾಯಿಶ್ ಚೀಟಿಗಳು ಬಂದವು!

ಕರ್ನಾಟಕದಲ್ಲಿ ವ್ಯಾಪಾರ ಲೋಕದಲ್ಲಿ ಈ ಸಂಸ್ಕೃತಿ ಇದೆಯಾ?

ಇಲ್ಲ ಅಲ್ಲಿದು ಹೇಳಬೇಕೂ ಅಂದ್ರೆ, ಒಮ್ಮೆ ರಾತ್ರಿ ರೋಡಿನೊಳಗ ಹೋಗುವಾಗ ಜನ ಸೇರಿದ್ದರು. ಸಂಗೀತ ಕೇಳಿಸ್ತು. ’ಏನ ತಡ್ರಿ ನೋಡೋಣ’ ಅಂತಂದ ಹೇಳಿ ನೋಡಿದೆ. ಅವನು ಬಾರ್ಬರಿ! ’ಅವತ್ತು ತನ್ನ ಅಂಗಡಿ ಓಪನ್ ಮಾಡತಾನ. ಅದಕ ಸಂಗೀತ ಇಡಸ್ಯಾನ’ ಅಂತಂದ್ರಿ.
ಶಿವರಾಮ ಕಾರಂತರ ಜತೆ ನಿಮಗೆ ಗಾಢವಾದ ಸಂಬಂಧ ಇತ್ತು. ಈ ಜಾನಪದ ರಂಗಭೂಮಿ, ಸಂಗೀತ ಇವು ಅವರಿಗೂ ಪ್ರೀತಿಯ ಕ್ಷೇತ್ರಗಳು ತಾನೇ?

ನಿಮ್ಮ ಒಡನಾಟಕ್ಕೆ ಇವು ಕಾರಣವಾದವಾ?

ಒಮ್ಮೆ ಏನಾಯಿತು ಅಂದರ, ಕೆ.ವಿ.ಸುಬ್ಬಣ್ಣನವರು ಒಂದು ವಾರದ ಯಕ್ಷಗಾನದ ಶಿಬಿರ ಏರ್ಪಾಟ ಮಾಡಿದ್ದರು. ಪತ್ರಿಕೆಯಲ್ಲಿ ’ಆಪೇಕ್ಷೆ ಇದ್ದವರು ಬರಬಹುದು’ ಅಂತ ಇತ್ತು. ವೀರಭದ್ರನಾಯಕರಂಥ ಯಕ್ಷಗಾನದ ಹೇಮಾಹೇಮಿಗಳೆಲ್ಲರನ್ನ ಸೇರಿಸಿದ್ದರು ಅವರು. ಕಾರಂತರು ಬರ್ತಾರಂತ ಹೋದದ್ದು ನಾನು. ನನಗೆ ೫೪ನೇ ಇಸ್ವಿಯಿಂದ ಕಾರಂತರ ಪರಿಚಯ. ಅವರು ಬರೆದಂಥ ’ಕನ್ನಡ ಪಾಠಮಾಲೆ’ಯ ಪುಸ್ತಕಗಳು ನಮಗ ಪ್ರಾಥಮಿಕ ಶಾಲೆಯಲ್ಲಿ ಪಠ್ಯಗಳಾಗಿದ್ದವು. ಮತ್ತ ನಾನು ಹೈಸ್ಕೂಲಿನಲ್ಲಿ ಓದ್ತಾ ಇದ್ದಾಗಿನ ಚಿಲ್ಲರ-ಚಪಾಟಿ ಕೂಡಿ ಇಟಕೊಂಡು ’ಬಾಲ ಪ್ರಪಂಚ’ದ ಮೂರು ಭಾಗಗಳನ್ನ ತರಿಸಿ ಇಟಕೊಂಡಿದ್ದೆ. ಅಮ್ಯಾಲೆ, ಹಡಗಲಿ ನಾಡಹಬ್ಬಕ್ಕ ಕಾರಂತರು ಬಂದಾಗ ನಾನು ಅವರ ಜೊತೆಗೆ ಮೂರು ದಿವಸ ಇರತಿದ್ದೆ.
ಕನ್ನಡ ಸಂಸ್ಕೃತಿ ಕಳೆದ ಶತಮಾನ ಸೃಷ್ಟಿಸಿದ ದೊಡ್ಡ ವ್ಯಕ್ತಿತ್ವಗಳಲ್ಲಿ ಕಾರಂತರದ್ದೂ ಒಂದು. ಆದರೆ ಸಾರ್ವಜನಿಕ ಚರ್ಚೆಯ ವಿಷಯಗಳಲ್ಲಿ ಅವರು ತಾಳ್ಮೆಯನ್ನೆ ತೋರತಿರಲಿಲ್ಲ.
ಬಿsನ್ನಾಬಿsಪ್ರಾಯನೆಲ್ಲ ಸಹಾನುಭೂತಿಯಿಂದ ಕಾಣತಕ್ಕಂಥ ಒಂದು ಕಾಲಖಂಡ ಇತ್ತು. ಅದರ ನೆರಳನ್ನು ನಾವು ’ಮೈಮನಗಳ ಸುಳಿಯಲ್ಲಿ’ ಆಮೇಲೆ ’ನಂಬಿದವರ ನಾಕ ನರಕ’ದಲ್ಲಿ ಅದಕ್ಕಿಂತ ಹೆಚ್ಚಾಗಿ ’ಅಳಿದ ಮೇಲೆ’ಯಲ್ಲಿ ಕಾಣತೀವಿ. ಕಾರಂತರನ್ನು ಅವರ ಕಾದಂಬರಿಗಳಲ್ಲಿ ನಾವು ಕಾಣಬೇಕು ಅನಸತದ. ಆನಂತರದ ಅವರ ಬದುಕಲ್ಲಿ ಏನಾಯಿತೆಂದರೆ, ಆ ಅರಿವಿನ ಅನ್ವೇಷಣೆಯಲ್ಲಿ, ಬಹುಮುಖ ಪ್ರತಿಭೆಯಲ್ಲಿ ಈ ಯಾವ ಯಾವುದೋ ಹುಚ್ಚು ಇಟಕೊಂಡು ಆಕಡೆ ಈಕಡೆ ಅಡ್ಡಾಡುವುದರಲ್ಲಿ ಮಾನಸಿಕ ನೆಮ್ಮದಿಯನ್ನ ಕಾಣಲಿಲ್ಲ. ಒಬ್ಬ ವ್ಯಕ್ತಿ ಕುಟುಂಬದ ಯಜಮಾನನಾಗಿ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಮಾಡತಕ್ಕಂಥಾ ಕರ್ತವ್ಯಗಳಲ್ಲಿ ಏನೂ ಹೆಚ್ಚು ಕಡಿಮೆ ಕಾಣಲಿಲ್ಲ. ಇನ್ನೊಬ್ಬ ಗಾಂದಿs ಹಂಗ ವರ್ತನ ಮಾಡಿದರು. ಅವರಿಗೆ ತಮ್ಮ ಕೌಟುಂಬಿಕ ಬದುಕಿನ ಕಡಿಗೆ ಲಕ್ಷ್ಯ ಇರಲಿಲ್ಲಂತ ಈಗ ಹೇಳತಾರ. ಏನಿದ್ರು ಅರಿವಿನ ಹಂಬಲ, ಸಾಮಾಜಿಕ ಚಳುವಳಿ, ಇತ್ತೀಚೆಗೆಲ್ಲಾ ಪರಿಸರ ಅಂತ ಒಂದಲ್ಲ ಒಂದಕ್ಕ ಅಂಟಿಕೊಳ್ಳುತ್ತಿದ್ದರು. ದೊಡ್ಡ ಸಲಗವಾಗಿ ತಾವು ನಡೆದದ್ದ ಹಾದಿ ಅನ್ನೊಹಂಗ ತಮ್ಮಷ್ಟಕ್ಕ ಬದುಕಿದವರು. ಮತ್ತ ಅವರ ನಂಬಿಕೆಗಳಲ್ಲಿ ಬದಲಾವಣೆ ಆಗಿದ್ದನ್ನ ಕಾಣತೀವಿ. ಬದುಕು ಮಾಗಿದ ಹಾಗೆ ಯಾವುದೋ ಒಂದು ಸಂಪರ್ಕ ಇತ್ತಂತ ಕೇಳಿದೆ. ಆಮೇಲೆ ಅಷ್ಟಮಠಗಳ ಸಾನಿಧ್ಯದಲ್ಲಿ ಇವರು ಭಾಷಣ ಮಾಡಿದ್ದುಂಟು ಅಂತ ಕೇಳಿದೆ. ಇವೆಲ್ಲ ಅವರ ವಯಸ್ಸಿನ ಒಂದು ಹಂತ ಹೇಳತವೆ.

ಕಾರಂತರನ್ನ ಬಿಟ್ಟರೆ ಉಳಿದ ಲೇಖಕರ ಜೊತೆಗೆ ನಿಮ್ಮ ಒಡನಾಟ ಹೇಗಿತ್ತು? ಬೇಂದ್ರೆ ಜೊತೆಗೆ?

ಬೇಂದ್ರೆಯವರ ಜೊತೆಗೆ ಸಂಪರ್ಕ ಇತ್ತು. ಸ್ವಲ್ಪ ಬಿsನ್ನಬಿsಪ್ರಾಯ ಬಂದದ್ದೂ ಉಂಟು. ಅದು ಜಿeಸುಗಳ ಕೂಟ ಅಂತ ಒಂದ ಮಾಡಿದ್ದರು ಗೋಕಾಕರು. ಪ್ರತಿವರುಷ ಒಂದಂದೂರಿನಲ್ಲಿ ಸೇರತಕ್ಕದ್ದು. ಯಾರಾದರೂ ಒಬ್ಬರನ್ನ ಆಹ್ವಾನಿಸೋದು. ಆ ರೀತಿ ಇದ್ದಾಗ ಹಲಸಂಗಿಯಲ್ಲಿ ಒಮ್ಮೆ ಕೊಟ್ಟು ಇತ್ತು. ನಾನೂ ಗಿರಡ್ಡಿ ಹೋದ್ವಿ. ಅಲ್ಲಿ ’ಅರವಿಂದ ಮಂಡಳ’ ಅಂತ ಮಧುರಚೆನ್ನರು ಮಾಡಿದಂಥಾದ್ದು, ಅದರ ೨೫ನೇ ವಾರ್ಷಿಕೋತ್ಸವ ಇತ್ತು. ಅದಕ್ಕೆ ಮದರ್ ಅರವಿಂದಾಶ್ರಮದ ಒಬ್ಬ ಪ್ರತಿನಿದಿs ಕಳಿಸಿಕೊಟ್ಟಿದ್ದರು. ಒಂದ ಸಂದೇಶ ಪ್ರಿಂಟ್ ಮಾಡಿ, ಮದರ್‌ದು ಅರವಿಂದರದ್ದು ಪೋಟೋ ಎದುರಿಗೆ ಈ ಸಂದೇಶದ ಹಾಳಿಗಳನ್ನ ಇಟ್ಟು, ಒಬ್ಬೊಬ್ಬರ ನಮಸ್ಕಾರ ಮಾಡಿ ತಗೊಳ್ಳದು. ನಾವು ಹೋದ್ವಿ. ಸುಮ್ಮನ ತಗೊಂಡ್ವಿ. ಬಂದ್ವಿ. ಅವಾಗ ಅರವಿಂದ ಭಕ್ತರಿಗೆ ಸ್ವಲ್ಪ ನೋವ ಅನಿಸ್ತು. ನಮ್ಮ ಮುಖದಲ್ಲಿ ಭಕ್ತಿ ಕಾಣಲಿಲ್ಲ ಅವರಿಗೆ. ಗೊತ್ತಿಲ್ಲದವರಿಗೆ ಹೆಂಗ ಕೈ ಮುಗಿಯಾನ ಅಂತ ನಮ್ಮದು. ಮುಗಳಿ ಬೇಂದ್ರೆ ಅವರೆಲ್ಲಾ ಅರವಿಂದರ ಶಿಷ್ಯರು. ಗೋಕಾಕರ ಪರಮಾಪ್ತರು. ಭಾಷಣ ಮಾಡುವಾಗ ಬೇಂದ್ರೆಯವರು ಒಂದು ಬ್ಲಾಕ್ ಬೋರ್ಡ್ ತರಿಸಿ, ಅದರ ಮ್ಯಾಲೆ ಒಂದು ಆಶ್ಚರ್ಯದ ಚಿನ್ನೆ ಬರದರು. ಗಿರಡ್ಡಿವರ ಸರತಿ ಬಂತು ಮಾತಾಡದಕ. ಅವರಲಿ ವಂಡರಮಾರ್ಕ್ ಇನ್ನ ಹಂಗ ಇತ್ತು. ಗಿರಡ್ಡಿ ಅವರ ಮುಂದ ಪ್ರಶ್ನಾರ್ಥಕ ಚಿನ್ನೆ ಮಾಡಿದ್ರು. ಅವರಿಗೆ ಇನ್ನೂ ತೊಂದರಿ ಅನಿಸ್ತು. ಆಗ ಇನ್ನ ಯುವ ವಯಸ್ಸು ನಮ್ಮದು. ಸ್ವಲ್ಪ ಬಂಡೇಳೊ ಮಾತುಗಳು ಇರಬೇಕು. ಅಷ್ಟಾದ ಮ್ಯಾಲೆ ಅಂವ ಸನತ್ಕುಮಾರ ಬ್ಯಾನರ್ಜಿ ಏನ ಪ್ರತಿನಿದಿs ಬಂದಿದ್ದ ಪಾಂಡಿಚೆರಿಯಿಂದ, ’ವಿ ಶುಡ್ ಮೇಕ್ ದಿ ಸೌಲ್ ಆಕ್ಟೀವ್’ ಅಂದ ಭಾಷಣ ಮಾಡುವಾಗ. ನಾನು ಬೇಂದ್ರೆಯವರನ ಸಹಜವಾಗಿ ಕೇಳ್ದೆ: ”ಏನ್ ಸಾರ್ ಹಿಂಗಂತಾರ. ಸೌಲ್ ಆಕ್ಟಿವ್ ಆಗೆ ಇರತದ. ಮತ್ತ ಅದನ್ನೇನ ಆಕ್ಟಿವ್ ಮಾಡದು” ಅಂದೆ. ”ಅಲ್ಲೋ ನೀನೇನು ನನ್ನ ಪರೀಕ್ಷೆ ಮಾಡಾಕ ಕೇಳ್ತಿಯೊ ಏನ ಅರ್ಥ ಆಗಲಿಲ್ಲಾಂತ ಕೇಳ್ತಿಯೊ? ಅದು ಅನುಭವದಿಂದ ಅರ್ಥ ಆಗಬೇಕು. ನಿನ್ನ ಆತ್ಮ ನಿನಗೆ ಗೊತ್ತಾಗಬೇಕು. ಅದನ್ನ ಜಾಗ್ರತಗೊಳಿಸಬೇಕು” ಅಂತ ಇನ್ನೊಷ್ಟು ತಿಳೀದಂಗ ಏನೋ ಹೇಳಿದರು. ಅಲ್ಲಿಂದ ನನ್ನ ಪ್ರೀತಿಯಿಂದಲೆ ಕಾಣತಿದ್ದರನು ಕೂಡಾ ಮನಸ್ಸು ಭಾಳ ದೂರಾತು.

ಕಾರಂತರ ಜೊತೆಗೆ ನಿಮ್ಮ ಸಂಬಂಧ ಹತ್ತಿರ ಆಗಲು ಕಾರಣ ಏನು?

ಅವರ ಚಿಂತನ ಸ್ವಾತಂತ್ರ್ಯ ನನಗೆ ಭಾಳ ಮುಖ್ಯವಾಗಿ ಕಾಣಿಸ್ತು. ಆ ನಮೂನಿ ಮನೋಭಾವದ ಹೇಳಿಕೆಗಳನ್ನ, ನಾನು ಥಿಯಾಸಾಪಿsಕಲ್ ಕಾಲೇಜಲ್ಲಿ ಕೇಳತಿದ್ದೆ. ಜೆ ಎಚ್ ಕಸಿನ್ಸ್ ಅವರೆಲ್ಲರೂ ಅಲ್ಲಿಗೆ ಬರತಿದ್ದರು. ಹರೀಂದ್ರನಾಥ ಚಟ್ಟೋಪಾಧ್ಯಾಯ ಅಲ್ಲಿಗೆ ಬಂದು ಹೋದರು. ಸರೋಜಿನಿ ನಾಯ್ಡು ಬಂದು ಹೋದಂಥವರು. ಆ ನಮೂನಿ ಮುಕ್ತಚಿಂತನೆ ಮತ್ತು ದಿಟ್ಟವಾಗಿ ಹೇಳತಕ್ಕಂಥದ್ದು, ನನಗೆ ಭಾಳ ಖುಶಿಕೊಟ್ಟಿತು. ಅದೇ ಹೊತ್ತಲ್ಲಿ ಅವರ ’ಬಾಳ್ವೆಯೇ ಬೆಳಕು’ ಶಂಬಾ ಜೋಶಿ ಪ್ರಕಟ ಮಾಡಿದ್ದರು. ಒಂದು ರೂಪಾಯಿ ನಾಕಾಣೆ ಪುಸ್ತಕ. ಅವರು ಹೇಳಬೇಕಾದಂತಹ ಇಡೀ ಚಿಂತನೆಯನ್ನು ಸೂತ್ರರೂಪದಲ್ಲಿ ಅ ಪುಸ್ತಕದಲ್ಲಿ ಹೇಳಿದ್ದಾರಂತ ನಾನಿವತ್ತಿಗೂ ಅಂದುಕೊಂಡಿರುವೆ. ಅವರ ಪುಸ್ತಕಗಳ ರಾಶಿಗೆ ಅದೊಂದು ಶಿಖರಪ್ರಾಯ.



ನಿಮ್ಮ ಕೃತಿಗಳಲ್ಲಿ ಹೆಚ್ಚಿನವು ಜನಪದ ರಂಗಭೂಮಿಗೆ ಸಂಬಂದಿsಸಿದವು. ಇದಕ್ಕೆ ಕಾರಣ ಏನು?

ನಾನು ಜಾನಪದ ರಂಗಕಲೆಗಳೊಂದಿಗೇ ಬೆಳೆದವನು. ನಮ್ಮೂರಿನಲ್ಲಿ ಬಯಲಾಟ ಬಿಟ್ಟರೆ ಯಾವೂ ಇರ್ತಿದ್ದಿಲ್ಲ. ಕಂಪನಿ ನಾಟಕಗಳು ತುಂಬಾ ದಿವಸ ಇರ್ತಿದ್ದವು. ಒಮ್ಮೊಮ್ಮೆ ತಿಂಗಳು ಎರಡು ತಿಂಗಳು ಇರ್ತಿದ್ದವು. ಉತ್ತರ ಕರ್ನಾಟಕದ ಅನೇಕ ಕಂಪನಿ ನಾಟಕಗಳೆಲ್ಲಾ ಚಿಗಟೇರಿಯಿಂದ ಪ್ರೋತ್ಸಾಹ ಪಡೆದಂಥವು. ನಮ್ಮೂರಿನಲ್ಲಿ ಕೆಲವರು ಹಲಗೇರಿ ಜೀತಪ್ಪನ ಕಂಪನಿಯಲ್ಲಿ ಇದ್ದಂಥವರು. ನಮ್ಮೂರಲ್ಲೇ ದೊಡ್ಡಾಟ ಬರೆಯುವರಿದ್ದರು. ಹಳೆಮನಿ ಕೊಟ್ರಬಸಪ್ಪ ಅಂತ ಹೇಳಿ. ದೊಡ್ಡಾಟದ ಒಂದು ವಿಶೇಷ ಹೇಳಬೇಕೂ ಅಂದ್ರ, ನಮ್ಮೂರಿನಲ್ಲಿ ಮದ್ಲಿ ಫಕೀರಪ್ಪ ಅಂತ ಒಬ್ಬ ಪ್ರಸಿದ್ಧ ವ್ಯಕ್ತಿ, ಒಮ್ಮೆ ಬಯಲಾಟ ತಗೊಂಡು ಬಳ್ಳಾರಿಗೆ ಹೋಗಿದ್ದ. ಅವರಲ್ಲಿ ನಮ್ಮಪ್ಪಂದು ಒಂದು ಪಾತ್ರ. ಸಣ್ಣ ಹುಡುಗರಿದ್ವಿ ನಾವು. ಅಲ್ಲಿ ಇವರಿಗೆ ವಾಪಸ್ ಬರಲಿಕ್ಕೆ ಹಣದ ತೊಂದರಿ. ಯಾರೋ ವಕೀಲರ ಹತ್ತಿರ ನಮ್ಮಪ್ಪನ್ನ ವತ್ತಿ ಇಟ್ಟು, ಹಣ ತಗೊಂಡು ಊರಿಗೆ ಬಂದು, ಆಮ್ಯಾಲೆ ಬಿಡಿಸಕೊಂಡ ಬಂದರು.

ನಿಮಗೆ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರ ಪರಿಚಯವಿತ್ತಾ?

ತುಂಬಾ ಪರಿಚಯ ಇತ್ತು. ೧೯೪೫ರಿಂದ. ರಾಘವರಿಗೆ ಬೆಂಗಳೂರು ಒಡನಾಟವೂ ಇತ್ತು. ಆದರೆ ಕನ್ನಡಕಿಂತ ತೆಲುಗಿನಲ್ಲೇ ಅವರ ಕೆಲಸ ದೊಡ್ಡದು, ರಂಗಕಲೆಗಳಲ್ಲಿ. ಜೋಳದರಾಶಿ ಅದ್ಭುತ ವ್ಯಕ್ತಿ ಅವರು. ಶರಣ ಸಾಹಿತ್ಯವನ್ನು ತುಂಬಾ ಅಭ್ಯಾಸ ಮಾಡಿದಂಥವರು. ಆಗಿನ ಕಾಲದ ಸಾಮಾಜಿಕ ಆಗುಹೋಗುಗಳ ನೇತಾರ ಆಗಿದ್ದಂಥವರು. ಅವರು ಅಲ್ಲಿ ಪಂಚಾಯ್ತಿ ಪ್ರೆಸಿಡೆಂಟ್ ಆಗಿದ್ದರೆ, ನಾನಿಲ್ಲಿ ಪ್ರೆಸಿಡೆಂಟ್ ಆಗಿದ್ದೆ. ಅವರ ಗಮಕದ ರೀತಿ ಅದ್ವಿತೀಯ. ಮೈಸೂರು ಕಡೀ ಗಮಕಿಗಳದೆಲ್ಲ ಹೇಳಕಿ ಪದ್ದತಿ; ಲಯದಲ್ಲಿ ಹೆಚ್ಚು ಕರ್ನಾಟಕೀ ಪ್ರಭಾವ. ಇವರ ವೈಶಿಷ್ಟ್ಯ ಅಂದರ, ನಾಟಕೀಯ ಒಂದು ಡಂಗ್ ಬರಬೇಕು. ಅದಕ್ಕೆ ಅತ್ಯಂತ ಲಾಯಕ್ಕಾದದ್ದು ಅಂದರ ’ಹರಿಶ್ಚಂದ್ರ ಕಾವ್ಯ’. ೪೯ನೇ ಇಸ್ವಿಯಲ್ಲಿ ಅವರು ಹರಪನಹಳ್ಳಿಗೆ ಬಂದಿದ್ದರು. ’ಚಂದ್ರಮತಿಯ ಪ್ರಲಾಪ’ ವಾಚನ ಮಾಡ್ಡಾಗ ಕುಂತಂಥ ಜನ ಅತ್ತಿದ್ದನ್ನ ನಾನು ನೋಡಿದೆ.
ಆಶ್ಚರ್ಯ ಅಂದರೆ, ನೀವಿಬ್ಬರೂ ಬಳ್ಳಾರಿ ಜಿಲ್ಲೆಯ ಎರಡು ಭೂಮಾಲಿಕ ಕುಟುಂಬಗಳಿಂದ ಬಂದವರು. ಆದರೆ ಸಂಗೀತ ರಂಗಭೂಮಿಯಲ್ಲಿ ಕೆಲಸ ಮಾಡಿದವರು...
ನನ್ನ ಅನುಭವದಲ್ಲಿ ಹೇಳಬೇಕೂ ಅಂದ್ರ, ನಮ್ಮಪ್ಪ ಶ್ರೀಮಂತಿಕೆಯ ದರ್ಪ ಇದ್ದಂಥವರಲ್ಲಾ. ಸಾಮಾಜಿಕ ಆಗುಹೋಗುಗಳೊಂದಿಗೆ ತೊಡಗಿದಂಥಾ ವ್ಯಕ್ತಿ ಆತ. ನಮ್ಮ ತಂದೀದ ನಾ ಹೇಳಬಾರದು. ಊರಲ್ಲಿ ಯಾರಾದರೂ ಬಯಲಾಟ ಮಾಡತಾರಂದ್ರ ಮನೆಯಲ್ಲಿದ್ದ ಬಂಗಾರೆಲ್ಲ ಒಂದು ಪುಟ್ಯಾಗಿಟ್ಟು ಕೊಟ್ಟಬಿಡತಿದ್ರು.

ಜನಪದ ಸಾಹಿತ್ಯ ರಂಗಭೂಮಿ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾದರೆ ಆ ಕಲೆಯನ್ನುಳ್ಳ ಸಮುದಾಯದ ಜೊತೆ ಆತ್ಮೀಯ ಸಂಪರ್ಕ ಇಟಕೋಬೇಕು. ಇದಕ್ಕೆ ನಿಮ್ಮ ರಾಜಕೀಯ ಆರ್ಥಿಕ ಅಂತಸ್ತು ಸಹಾಯಕವಾಗಿದ್ದವೊ ಕಷ್ಟಕೊಡುತ್ತಿದ್ದವೊ?

ಈ ನಾಟಕ ಇವೆಲ್ಲಾ ಏನ ಇದಾವಲ್ಲ, ಇವಕ್ಕೂ ಸ್ಟೇಟಸ್‌ಗೂ ಸಂಬಂದಿsಲ್ಲ. ಸ್ವಾಭಾವಿಕ ವಾಗಿ ಎಲ್ಲಾ ಕುಲದವರು ಎಲ್ಲಾ ವರ್ಗದವರು ಸೇರತಕ್ಕಂಥ ಒಂದು ಕಣ್ವಾಶ್ರಮ ಅಂದರ ರಂಗಭೂಮಿ. ಅದಿsಕಾರದ ಮನೋಭಾವ ನಮ್ಮ ತಂದಿಯವರಿಗೂ ಇರಲಿಲ್ಲ. ಇಲ್ಲಿ ರಾಮಕ್ಕನಹಳ್ಳಿ ಅಂತ ಒಂದು ಹಳ್ಳೀ ಅದ. ಅಲ್ಲಿ ಜೋಗೇರ ಒಂದಿಬ್ಬರು ಮಾಡತಾ ಇದ್ದ ಉದ್ಯೋಗ ಅಂದ್ರೆ, ತತ್ವಪದ ಹೇಳೋದು. ಅವರು ಬಂದ್ರ ಹಾಡಿಸಿ, ಬಟ್ಟೆ, ಹಣ, ಜ್ವಾಳ ಕೊಟ್ಟು ಕಳಸತಿದ್ದರು.
ಸಂಗೀತ, ಜನಪದ ರಂಗಭೂಮಿ, ಜನಪದ ಸಾಹಿತ್ಯ ಸಂಗ್ರಹ ಮಾಡ್ತಾ ಇದ್ದ ನಿಮಗೆ, ನಗರದ ಶಿಷ್ಟ ನಾಗರಿಕ ಸಮುದಾಯದ ಜೊತೆಗೆ ಒಂದು ಸಂಬಂಧ ಏರ್ಪಟ್ಟಿತು.

ಆಗ ಇಲ್ಲಿನ ಜನ ಸಮುದಾಯಗಳ ಒಳಗಡೆ ನಿಮ್ಮ ಕೆಲಸಗಳಿಗೆ ಎಂಥ ಪ್ರತಿಕ್ರಿಯೆ ಬರ್ತಿತ್ತು?

ಯಾವಾಗಲೂ ನಮ್ಮ ಭಾಗದ ಜನಪದ ಕಲಾವಿದರ ಜೊತೆಗೆ ನಂದು ಹೆಚ್ಚು ಒಡನಾಟ. ಬಹುತೇಕ ಅವರು ಗೊತ್ತಿರತಕ್ಕಂಥವರು. ಅವರನ್ನು ಪ್ರೀತಿಯಿಂದ ಕಂಡುಬಿಟ್ಟರೆ, ಅವರು ತೆರೆದ ಹೃದಯಿಗಳಾಗತಾರೆ. ಯಾವುದೇ ಹಿಂಜರಿಕೆ ಇರೋದಿಲ್ಲ.
ನನ್ನ ಪ್ರಶ್ನೆ ಏನೆಂದರೆ, ಸಂಗ್ರಾಹಕರು ಹೊರಗಿನವರಾಗಿ ಬಂದು ಸಂಗ್ರಹ ಮಾಡಿಕೊಂಡು ಹೋಗಿದ್ದಾರೆ. ನೀವು, ಸಿಂಪಿ ಲಿಂಗಣ್ಣ, ಮಧುರಚೆನ್ನ, ಕೆ ವಿ ಸುಬ್ಬಣ್ಣ ಒಂದು ಹಳ್ಳಿಯನ್ನೇ ಕೇಂದ್ರ ಮಾಡಿಕೊಂಡು ಕೆಲಸ ಮಾಡ್ತಾ ಅಲ್ಲೇ ಉಳಿದವರು. ಯಾವುದಾದರೂ ಕಲೆಗಳಲ್ಲಿ ಭಾಗವಹಿಸ್ತಾನೇ ಬದುಕಬೇಕಾದಂಥ ವಾತಾವರಣದಲ್ಲಿ ಸಂಗ್ರಹ ಮಾಡೋದು, ಪುಸ್ತಕ ಮಾಡೋದು ಇವೆಲ್ಲ ಚಟುವಟಿಕೆ ಹಳ್ಳಿಗಳಲ್ಲಿ ಪರಕೀಯವಾಗಿ ಉಳಿದವು ಅನಿಸಲಿಲ್ಲವಾ?
ಇಲ್ಲ ನಮಗೇನೂ ಅನ್ಸಲಿಲ್ಲಾ. ನಮ್ಮ ಭಾಗದ ಕೆಲಸ ನಾವು ಮಾಡ್ತೇವೆ. ಆ ನಮೂನಿಯ ಒಂದು ಮನೋಭಾವ ನಮಗಿತ್ತು. ನಾವು ಸಂಗ್ರಹ ಮಾಡೋದ ’ನಮ್ಮನ್ನ ಗುರುತಿಸಿದರಲ್ಲಾ. ನಮ್ಮನ್ನ ಹತ್ರ ಕರಕೊಳ್ಳತಾರಲ್ಲ ಇವರು’ ಅಂತ ಅವರಿಗೆ ದೊಡ್ಡದಾಗಿ ಕಾಣಸ್ತಿತ್ತು.

ನಿಮ್ಮ ಸಂಗ್ರಹಕಾರ್ಯದಲ್ಲಿ ವಿಶಿಷ್ಟ ನೆನಪಾಗಿ ಉಳಿದಿರೊ ಅನುಭವ ಹೇಳಿ.

ಮತ್ತಿಹಳ್ಳಿಗೆ ನಾನು ಈ ’ಲPಪತಿರಾಜ’ ಕತೆ ಸಂಗ್ರಹ ಮಾಡಲಿಕ್ಕೆ ಹೋಗಿದ್ದೆ. ಬಂಡಿ ಕಟ್ಟಿಸಿಕೊಂಡು, ಟೇಪ್ ರೆಕಾರ್ಡರ್ ಹೇರಕೊಂಡು ಹಳ್ಳಿಗೆ ಹೋಗಿ ರಾತ್ರಿ ಇಡಿಸಿದಿವಿ. ಸಾಕಷ್ಟು ಜನ ಸೇರಿದ್ರು, ಟೇಪ್ ರೆಕಾರ್ಡರ್ ನೋಡೋದಕ. ಜೋಗೇರ ಗೊಣೆಪ್ಪ ಅಂತ ಅಂವ್ಞ. ಕುಡುದಾ ಕುಡುದಾ... ಎಷ್ಟ್ ಕುಡುದಾ ಅಂದ್ರ, ಯಾವಾಗ ಅರ್ಜುನ, ಯಾವಾಗ ಕರ್ಣ, ಯಾವಾಗ ಬಿsಮ ಆತಗಾ ಗೊತ್ತಿಲ್ಲದಂಗಾತು. ಕೊನಿಗೆ ಅಡ್ಡ ಮಲಗಿಬಿಟ್ಟ. ಮುಂದೆ ಆತನಿಂದ ಸುಮಾರು ೧೪ ತಾಸಿನ ಭಾರತ ನಾನು ಸಂಗ್ರಹ ಮಾಡಿದೆ. ಅಲ್ಲಿಯ ರಾಮನಾಗಲಿ, ಸೀತೆಯಾಗಲಿ, ಕೃಷ್ಣನಾಗಲೀ ಅವರೆಲ್ಲಾ ತೀರಾ ಸಾಮಾನ್ಯರು.

’ಚಿತ್ರಪಟ ರಾಮಾಯಣ’ ಎಲ್ಲಿ ಸಿಕ್ತು ನಿಮಗೆ?

ಶಿವರುದ್ರಪ್ಪ ಅಂತ ಇದ್ದ ಮೈದೂರಲ್ಲಿ. ಆ ಊರ ಸ್ಪೆಶಾಲಿಟಿನೇ ’ಚಿತ್ರಪಟ ರಾಮಾಯಣ’; ಏನೂ ಇಲ್ಲಾ ಅಂದ್ರ, ಮುಂಜಾನೆ ಒಂದು ಗೂಟ ಹುಗದು ರಾತ್ರಿಗೆ ಅಡೆಬಿಡದಾ ಅದನ್ನ. ಅಷ್ಟು ಹೃದ್ಗತ ಆದಂಥಾದ್ದು ಆ ಊರಿಗೆ ಅದು. ಅಲ್ಲಿಂದ ನಾನು ಪ್ರತಿ ತಗಸಿದೆ. ರೋಮಾಂಚನದ ಅನುಭವ ಅಂದ್ರ, ಈ ಗೊಂದಲಿಗರ ದೇವೇಂದ್ರಪ್ಪನ ’ಶೀಲಾವತಿ’ ಮೊದಲ ನಾನು ಆಡಸಿ ನೋಡಿದೆ. ಆತ ಪಾತ್ರಗಳನ್ನ ಕಥೆಯ ಮೂಲಕ ಸೃಷ್ಟಿ ಮಾಡತಾ ಇದ್ದಂಥಾ ರೀತಿ, ಆಯಾ ಪಾತ್ರವಾಡುವಾಗ ತೋರಿಸ್ತಾ ಇದ್ದಂಥ ತಾಟಸ್ಥ್ಯ, ಶೀಲಾವತೀದಕೂ ಕಳ್ಳಂದಕ್ಕೂ ಆಯಾ ದನಿಯಲ್ಲಿ ಬಂದಾಗ ಆತ ಅದರಲ್ಲಿ ತನ್ನಯ ಆಗ್ತಿದ್ದಂಥ ರೀತಿ, ಮತ್ತೆ ಕೂಡಲೇ ಇನ್ನೊಂದು ಪಾತ್ರದ ಮೈಯಲ್ಲಿ ಸೇರಿಕೊಂಡಂಥ ರೀತಿ, ಅದನ್ನ ಕಥಾರೂಪಕ್ಕೆ ತರತಾ ಇದ್ದಂಥ ರೀತಿ, ಭಾಳ ಅದ್ಭುತವಾಗಿ ಕಾಣಿಸ್ತು ನನಗೆ. ಆ ಕಥಾ ನಿರೂಪಣೆಯಲ್ಲಿಯ ನಾಟಕೀಯತೆ ನಾನು ಮೊದಲನೇ ಸಾರಿ ಕಂಡುಕೊಂಡಿದ್ದು.

’ಚಿತ್ರಪಟ ರಾಮಾಯಣ’ ಉಡುಪಿಯ ಆರ್‌ಆರ್‌ಸಿಯಿಂದ ಪ್ರಕಟವಾಯ್ತು. ಅದರ ಸಂಪರ್ಕ ಹೇಗಾಯಿತು?

ಆರ್‌ಆರ್‌ಸಿ ಸ್ಥಾಪನಾ ಮಾಡಿದ ಮ್ಯಾಲೆ ಅದಕ್ಕೆ ಪ್ರಥಮ ಯಜಮಾನಿಕೆ ಇದ್ದದ್ದು ಕಾರಂತರದು. ಕಾರಂತರು ಚಿಗಟೇರಿಗೆ ಬಂದಾಗ ನಾನು ರೆಕಾರ್ಡ್ ಮಾಡಿದ್ದೆಲ್ಲಾ ಅವರೆದುರಿಗೆ ಹಾಕಿ ತೋರಸ್ತಿದ್ದೆ. ತೋರಸಿದಾಗ ’ಇಲ್ಲೇನೋ ವಿಶೇಷ ನಿದಿs ಇದೆ. ಈ ಮನುಷ್ಯ ಏನೇನೋ ನೆರವಾಗಬಲ್ಲ’ ಅಂತ ಹೇಳಿ ನನ್ನನ್ನ ಆರ್‌ಆರ್‌ಸಿಗೆ ಸಂಪರ್ಕಿಸಿದರು.

ಆರ್‌ಆರ್‌ಸಿ ಬಿಟ್ರೆ ನೀವು ಸಂಪರ್ಕವಿಟ್ಟುಕೊಂಡು ಬಂದ ಇನ್ನೊಂದು ಸಂಸ್ಥೆ ’ನೀನಾಸಂ’. ಈ ಎರಡೂ ಸಂಸ್ಥೆಗಳು ಫೋರ್ಡ್ ನೆರವು ಪಡೀತಾ ಇದ್ದಂಥವು. ವಿದೇಶಿ ಫೌಂಡೇಶನ್ನುಗಳ ಸಂಪರ್ಕ ಅಂದ್ರೆ ಪ್ರತಿಷೆವಿಯ ಸಂಕೇತವಾಗಿದ್ದ ಕಾಲವಿತ್ತು. ಈಗೀಗ ಇದಕ್ಕೆ ಬೇರೆ ರಾಜಕೀಯ ಆಯಾಮಗಳಿರೋ ಸಂಗತಿ ತಿಳೀತಾ ಇದೆ. ನಿಮಗೇನು ಅನುಮಾನ ಅನಿಸಲಿಲ್ವಾ?

ನನಗೆ ಅನುಮಾನ ಅನಿಸಿದಾಗ ಅದನ್ನ ಹರಿದಾಸಭಟ್ಟರಲ್ಲಿ ಹೇಳಿದೆ. ಕಾರಂತರಲ್ಲೀನೂ ಹೇಳಿದೆ. ”ಅವರು ಕೊಟ್ಟ ಹಣಕ್ಕೆ ನಮ್ಮಿಂದ ಒಂದು ತುಂಡು ಕಾಗದ ಕೂಡಾ ಪಡಿಯೋದಿಲ್ಲ. ನಮ್ಮಿಂದ ಅವರು ಏನಾದರೂ ಒಂದು ಕ್ಯಾಸೆಟ್ ಆದರೂ ಒಯ್ದ್ನ್ರಾ? ಏನು ಸಂಗ್ರಹ ಮಾಡತೀರಿ ಅದನ್ನ ನಿಮ್ಮಲ್ಲೆ ಇಟಕೊಳ್ರಿ ಅಂತಾರೆ” ಅಂದ್ರು; ಅವರು ಒಂದು ಎದುರ್ ಪ್ರಶ್ನೆ ಹಾಕಿದರು ನನಗೆ. ”ಇದನ್ನ ಇನ್ಯಾರಾದ್ರು ಮಾಡವರಿದ್ರ ಮಾಡ್ಲಿ. ಇಲ್ಲಿಯವರಿಗ ಕೊಟ್ಟು ಮಾಡಿಸಲಿ. ನಾವೇ ಮಾಡಬೇಕು ಅಂತ ಇಲ್ಲ. ನಾವೂ ಮಾಡಲಿಲ್ಲ. ಮಂದಿಗೂ ಮಾಡಗೊಡಲಿಲ್ಲ ಅನ್ನದು ಇದು ಯಾವುದು?”

ನಮ್ಮ ಜಾನಪದವನ್ನು ಸಂಗ್ರಹ ಮಾಡಿ ಪ್ರಕಟಿಸೋದು ಒಂದಿದೆ. ಇನ್ನೊಂದು ಇದನ್ನ ಸೃಜನಶೀಲವಾಗಿ ಬಳಸಿಕೊಂಡು ಹೊಸ ಸಾಹಿತ್ಯ ಸೃಷ್ಟಿಸೋ ವಿಧಾನ ಇದೆ. ನೀವು ಎರಡೂ ಮಾಡಿದ್ದೀರಿ. ಅರ್ಥಪೂರ್ಣ ಅನಿಸೋದು ಯಾವುದು?

ಕಾಲಧರ್ಮಕ್ಕೆ ಅನುಸರಿಸಿ ಸಾಮಾಜಿಕ ಬದುಕಿನಲ್ಲಿ ಈ ಸಮೂಹ ಮಾಧ್ಯಮಗಳಲ್ಲಿ ಬದಲಾವಣೆ ಕಾಣತಿವಿ. ಗೊಂದಲಿಗರು ಪ್ರಯೋಗ ಮಾಡತಾ ಇರತಕ್ಕಂಥ ರೀತಿಯಲ್ಲೆ ಆಟ ಯಾರೂ ನೋಡಲಿಕ್ಕೆ ತಯಾರಿಲ್ಲ. ಯಾಕಂದ್ರೆ ಮಾತಿನಲ್ಲಿ ಹೇಳೋದನ್ನ ಅವು ಪದ್ಯದಲ್ಲಿ ಹೇಳತಾರ; ಪದ್ಯದಲ್ಲಿ ಹೇಳಿರೋದನ್ನ ಮಾತಿನಲ್ಲಿ ಹೇಳತಾರ; ಅಷ್ಟು ದಡ್ಡರು ಈಗಿಲ್ಲ. ಎರಡೂವರಿ ತಾಸಿನಲ್ಲಿ ಎಲ್ಲ ಮುಗೀಬೇಕು ಅನ್ನೋದ ಇರುವಾಗ, ಪರಂಪರಾಗತವಾಗಿ ಬಂದಂಥ ಕಲೆಗಳನ್ನು ಇಂದಿನ ಕಾಲದ ಅಬಿsರುಚಿಗೆ ಅನುಸರಿಸಿ ಯಾವ ರೀತಿಯಲ್ಲಿ ಸುಧಾರಿಸಿಕೊಂಡು ನಾವೂ ಪ್ರಯೋಗ ಮಾಡಿದರ, ಅವು ಬದುಕಿಯಾವು. ಈ ಟೀವಿಯಲ್ಲಿ ಬರತಕ್ಕಂಥಾ ಗೊಂದಲಿಗರ ಆಟ ನೋಡಬಲ್ಲರೆ ಹೊರತಾಗಿ, ಅವರನ್ನೇ ಪ್ರಾಯೋಜನೆ ಮಾಡಿ ನೋಡೊ ಬುದ್ದಿ ಈಗ ಯಾರಿಗಿದೆ? ರಾತ್ರಿಯೆಲ್ಲಾ ಎಚ್ಚರಿದ್ದು ನೋಡಲಿಕ್ಕೆ ತಯಾರಿ ಇಲ್ಲ. ಮದುವಿಯಲ್ಲಿ ಗೊಂದಲದ ವಿದಿs ಆಚರಣೆ ಅದಾವು. ಕಲಾತ್ಮಕ ದೃಷ್ಟಿಯಿಂದ ಅದನ್ನ ಉಳಿಸಿಕೊಂಡು ಬೆಳೆಸೋದಕ್ಕೆ ಯಾರಿಂದಲೂ ಪ್ರೋತ್ಸಾಹ ಇಲ್ಲ. ಅವು ಇರೋಸ್ಥಿತಿಯಲ್ಲಿ ಯಾರನ್ನೂ ತಾಕೋದಿಲ್ಲ. ಆದ ಕಾರಣ, ಅವನ್ನ ಬೇರೆ ರೀತಿಯಾಗಿ ನಾವು ದುಡಿಸಿಕೊಳ್ಳಬಾರದು ಯಾಕೆ? ಈಗ ಬಹುತೇಕ ಗೊಂದಲಿಗರು ಬೇರೆಬೇರೆ ವ್ಯಾಪಾರದಲ್ಲಿ ತೊಡಗಿದಾರೆ. ಸಿಲಾವರ ಸಾಮಾನದ ವ್ಯಾಪಾರ ಮಾಡತಾರೆ; ಸಂಡೂರ ಕಂಪನಿಯಲ್ಲಿದ್ದಾರೆ. ’ಆಟ ಆಡೋದು ಬಿsಕ್ಷೆ ಬೇಡತಕ್ಕಂಥ ಹೀನ ಕೆಲಸ’ ಅಂತ ಅಂದುಕೊಳ್ತಾರೆ.

ಹೊಸ ತಲೆಮಾರಿನವರಲ್ಲಿ ಈ ಅಬಿsಪ್ರಾಯವಿದ್ರೆ, ಅದು ಸರಿ ಅಂತ ಅನಸಲ್ವಾ?

ಖಂಡಿತಾ ಸರಿ. ಯಾರಲ್ಲಂತಾರ? ಅದರಿಂದ ಹೊಟ್ಟಿ ತುಂಬುದು ಸಾಧ್ಯ ಇಲ್ಲ. ಬಿsಕ್ಷೆ ಬೇಡಾದು ಬೇಡ ಅಂತಕ್ಕಂಥ ಆತ್ಮಾಬಿsಮಾನ ಏನದೆ. ಅದನ್ನ ಗೌರವಿಸಬೇಕು. ಅವರು ಹಂಗ ಇರಲಿ, ಅವರ ಕಲೆ ಉಳೀತೈತಿ ಅಂತ ಅಲ್ಲ. ಆ ಕಲೆಯನ್ನ ತಗೊಂಡು ನಾವು ಬೇರೆ ರೀತಿ ಯಲ್ಲಿ ದುಡಿಸಿಕೊಳ್ಳೋಣ. ಉದಾಹರಣೆಗೆ ಕಂಬಾರರ ’ಜೋಕುಮಾರಸ್ವಾಮಿ’ ಅದರಾಗೆ ಮೊದಲಿನ ಪ್ರಸಂಗ ಏನ ಬರ್ತದಲ್ಲ, ’ನಿಮ್ಮ ದೇವರು ಏನ ಕರ್ಕಿ ಪತ್ರೀನ...’ ಅದು ಪಾರಿಜಾತದೊಳಗಿಂದು. ಅದನ್ನು ಅವರು ಬಳಸಿಕೊಂಡಾರ ತಮ್ಮದೇ ಆದ ರೀತಿಯಲ್ಲಿ.
ಜಾನಪದವನ್ನು ಆಧುನಿಕ ಲೇಖಕರು ಸೃಜನಶೀಲ ಮರುಸೃಷ್ಟಿಗೆ ದುಡಿಸಿಕೊಳ್ಳೋದು ಒಂದು. ಆದರೆ ಅದನ್ನ ಹಾಗಾಗೇ ಬಳಸಿಕೊಳ್ಳೋದು ಇನ್ನೊಂದು. ಇದರ ಬಗ್ಗೆ ಕನ್ನಡದಲ್ಲಿ ಗೊಂದಲ ಇದ್ದಂತಿದೆ.
ಬೇರೊಂದು ರೂಪಕೊಟ್ಟು ಬಳಸತಕ್ಕಂತಾದ್ದು ಏನಿದೆ ಅದನ್ನ ಮೆಚ್ಚತಕ್ಕದ್ದು. ಯಥಾವ ತ್ತಾಗಿ ತಗೊಂಡು ತಮ್ಮ ಹೆಸರ ಏನ ಹಾಕ್ಕೊಳ್ತಾರೆ, ಇದು ಸಾಹಿತಿಗಳು ಮಾಡಬೇಕಾದ ಕೆಲಸವಲ್ಲ. ಕಂಬಾರರು ’ಸಂಗ್ಯಾಬಾಳ್ಯಾ’ ಸಂಗ್ರಹ ಮಾಡಿ ಪ್ರಕಟಣ ಮಾಡಿದರು. ಜೊತೆಗೆ ಕೀರ್ತಿನಾಥ ಕುರ್ತಕೋಟಿ ಹೆಸರು ಕೂಡಾ ಇದೆ!
ಸಂಗ್ರಾಹಕರ ಸಮಸ್ಯೆ ಅಂದರೆ, ನಾಗರಿಕ ಜಗತ್ತಿಗೆ ಗೊತ್ತಿರದಿದ್ದನ್ನು ಕೊಡಬೇಕು ಅನ್ನೋ ಮನೋಭಾವವೇ ಮುಖ್ಯವಾಗಿರೋದು. ಕಲೆಯನ್ನ ಸೃಷ್ಟಿಸ್ತಾ ಅದರಲ್ಲಿ ಬದುಕ್ತಾ ಇರೋ ಸಮುದಾಯಕ್ಕೆ, ಆ ಕಲೆಯ ಜೊತೆಗಿನ ಸಂಬಂಧಗಳು ಬದಲಾಗ್ತಾ ಇರೋ ಸಂಗತಿಯನ್ನು ಗಮನಿಸೋಕೆ ಹೋಗೋಲ್ಲ.
ಬಳಸಿಕೊಳ್ಳೋರು ಕೂಡ ಯಾವುದೋ ಒಂದು ಫಾರಮ್ಮನ್ನ ಇಡಿಯಾಗಿ ಬಳಿಸಿಕೊಳ್ಳತಾ ಇಲ್ಲ. ಇದನ್ನಷ್ಟು ಅದನ್ನಷ್ಟು ತಗೊಂಡು ಮಿಸಳಭಾಜಿ ಅಂತಾರಲ್ಲ. ಹಂಗ ಮಾಡ್ತಾರೆ. ಆಕಡೀಗೆ ಮಂಟೇಸ್ವಾಮಿ ಪದಾನೂ ಬಳಸುತ್ತಾರೆ. ಈಕಡೀಗೆ ವೀರಭದ್ರ ದೇವರ ಒಡಪಗಳ ರೀತಿಯನ್ನೂ ಬಳಸತಾರೆ. ಇದರಿಂದ ಒಂದು ಕಲೆಗೆ ನ್ಯಾಯ ಒದಗಿಸಿ ಕೊಟ್ಟಂಗ ಆಗೋದಿಲ್ಲ. ಆ ಕಲೆಗಳನ್ನು ಪುನರುಜ್ಜೀವಿಸಬೇಕು. ಅವನ್ನ ಹೊಸ ರೀತಿಯಲ್ಲಿ ದುಡಿಸಿಕೊಳ್ಳೋದಕ್ಕ ಮೊದಲು, ಅದರಲ್ಲಿ ಏನ ಸಾಧ್ಯತೆ ಇದೆ, ಏನ ಪರಿಮಿತಿ ಇದೆ ಅನ್ನೋದನ್ನ ಚಿತ್ತ ಸಮಾಧಾನದಿಂದ ಯೋಚನೆ ಮಾಡಿ, ಅದರ ಫಾರಂ ಏನದ ಅನ್ನೋದನ್ನ ಕಂಡುಕೊಂಡು, ಸೃಷ್ಟಿಮಾಡಿದರ ಅದಕ ಅರ್ಥ ಇರತದ. ಬೇಂದ್ರೆಯವರು ಜಾನಪದ ಸತ್ವ ಹೀರಿಕೊಂಡು ತಮ್ಮದನ್ನಾಗಿ ಮಾಡಿಕೊಂಡು, ಸ್ವಂತಿಕೆಯ ಮುದ್ರಿ ಒತ್ತಿದಾರ.

ಓದುಗರಾಗಿ ಕಾರಂತ ಕುವೆಂಪು ಬೇಂದ್ರೆಯವರಲ್ಲಿ ನಿಮಗೆ ಹಿಡಿಸಿದ ಸಂಗತಿಗಳ್ಯಾವುವು?

ಕಾದಂಬರಿಗಳನ್ನ ತಗೊಂಡ್ರ ಕಾರಂತರು. ಪದ್ಯಗಳನ್ನು ತಗೊಂಡ್ರ ಬಹುಮಟ್ಟಿಗೆ ಜನರಿಗೆ ನಿಲುಕತಕ್ಕಂತಹ ಬೇಂದ್ರೆಯವರು ಅದ್ಭುತ ರಸದೃಷ್ಟಿ ಮತ್ತು ಪ್ರೌಢವಾಗಿ ಬರದಂಥ ಪುಟ್ಟಪ್ಪನವರು, ನನಗೆ ಹತ್ತಿರದವರಾಗಿ ಕಂಡರು. ೪೫ನೇ ಇಸ್ವಿಯಲ್ಲಿ ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ನಾ ಓದಿದ್ದೇ ಅಷ್ಟೆ. ಮತ್ತ ಓದಲಿಲ್ಲ.

’ಜಾನಪದವನ್ನ ರಕ್ಷಣೆ ಮಾಡಬೇಕು. ಇದು ನಾಶವಾಗ್ತಾ ಇದೆ’ ಅನ್ನೋ ಹಳಹಳಿಕೆ ನಿಮ್ಮೆಲ್ಲ ಸಂಗ್ರಹಗಳ ಮುನ್ನುಡಿಗಳಲ್ಲಿ ಕೆಲಸ ಮಾಡಿದೆ. ಇದು ಕನ್ನಡದಲ್ಲಿ ಪ್ರಚಲಿತವಾಗಿರೊ ಒಂದು ನಿಲುವು. ಈಗ ನಿಲುವನ್ನು ಬದಲಾಯಿಸಿಕೊಳ್ಳಬೇಕು ಅಂತ ಅನಿಸಿದೆಯಾ?

ಯಥಾವತ್ತಾಗಿ ಅದನ್ನ ರಕ್ಷಿಸಬೇಕು ಅಂತ ನನಗನಸೋದಿಲ್ಲ. ಇಂದಿನ ಅಗತ್ಯಕ್ಕೆ ತಕ್ಕ ಹಾಗೆ ಸದಬಿsರುಚಿಯನ್ನು ಮೂಡಿಸೋ ರೀತಿಯಲ್ಲಿ ಅದನ್ನ ಒಂದು ಮಾಧ್ಯಮವಾಗಿ ದುಡಿಸಿಕೊಳ್ಳೋದಕ್ಕೆ ಅವಕಾಶ ಇದೆ.
ಈ ಜನಪದ ಸಾಹಿತ್ಯ ಕಲೆ ಹುಟ್ಟಿ ಬೆಳೆದು ಬದುಕ್ತಾ ಇರೋ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಪ್ಯೂಡಲಿಸಂ ಇದೆ, ಹೆಣ್ಣನ್ನು ಕೀಳಾಗಿ ನೋಡುವಂಥ ಪ್ರವೃತ್ತಿ ಇದೆ. ಇದರ ನಿಮ್ಮ ಮುನ್ನುಡಿಗಳಲ್ಲಿ ಯಾವುದೇ ವಿಮರ್ಶೆಯಿಲ್ಲ. ಈ ದೃಷ್ಟಿಕೋನ ನಮ್ಮ ಸಮಾಜವನ್ನು ಅರ್ಥ ಮಾಡಿಕೊಳ್ಳೋಕೆ ತೊಡಕಲ್ಲವಾ?
ನನಗೆ ಹಾಗೆ ಅನಿಸಿಲ್ಲಾ. ನಮ್ಮ ಪರಂಪರೆಯನ್ನ, ನಮ್ಮ ನಿನ್ನೆಯನ್ನ, ಸಹಾನುಭೂತಿಯಿಂದ ಕಾಣದೆ ನಾವು ಇವತ್ತು ಪ್ರಸ್ತುತಗೊಳಿಸಲಿಕ್ಕೆ ಏನು ಸಾಧ್ಯ?
ನಿಮ್ಮ ಚಿಂತನೆಗಳಲ್ಲಿ ವಚನಕಾರರ ಸುಳಿವು ಇಲ್ಲ. ಲಿಂಗಾಯತ ಸಮಾಜದ ಜೊತೆಗೆ ನಿಮ್ಮ ಸಂಬಂಧಗಳ ಬಗ್ಗೆ ಕುತೂಹಲವಿದೆ.
ನಮ್ಮ ಪ್ರದೇಶದಲ್ಲಿ ಎರಡು ವಿಧ ಇದೆ. ಗುರುಸ್ಥಲ ವಿರಕ್ತಸ್ಥಲ ಅಂತ. ಉಜ್ಜನಿ ಹತ್ತಿರ ಇರೋದರಿಂದ ನಮ್ಮ ಭಾಗದಲ್ಲೆಲ್ಲ ಈ ಗುರು ಪರಂಪರೆಯ ಪ್ರಾಧಾನ್ಯತೆ ಹೆಚ್ಚು. ನಮ್ಮ ಭಾಗದಲ್ಲಿ ನಾನು ೪೫ರಲ್ಲಿ ಮೊದಲನೆ ಸಾರಿ ಬಸವ ಜಯಂತಿ ಮಾಡಿದೆ. ನನ್ನ ಜಾತಿಯವರು ವಿರೋಧ ಮಾಡಿದರು. ಇಷ್ಟೆ ಅಲ್ಲ, ’ಬಸವಪುರಾಣ’ದ ಜೊತೆಗೆ ಹಳೆ ಮೂಗಹರಕ ಚಪ್ಪಲಿ ಇಟ್ಟು, ಸುಟ್ಟಿದ್ದರಂತ. ಅದಕ ಕಾರಣ ಅಂದರೆ ಬಸವಣ್ಣ ಮಾದಿಗರನ್ನ, ಎಲ್ಲರನ್ನ ಏಕ ಮಾಡಿದ ಅಂತ. ನಾನು ಅ ನ ಕೃಷ್ಣರಾಯರು ಸಂಪಾದಿಸಿದ ’ಮರುಳಸಿದ್ಧ ಕಾವ್ಯ’ ಕೊಂಡು, ನಮ್ಮ ಊರಿನ ಲೈಬ್ರರಿಗೆ ಕೊಟ್ಟಿದ್ದೆ. ಅದನ ತಗೊಂಡು ಒಲಿ ಉರಿ ಹಚ್ಚಿದ್ದು ನಮಗೆ ಆಮ್ಯಾಲೆ ಗೊತ್ತಾತು. ಇಷ್ಟು ವಿರೋಧ ಇದ್ದ ಜಾಗ ಇದು.

ಈ ಭಾಗದಲ್ಲಿ ಶರಣರ ಪ್ರಭಾವ ಇಲ್ಲದಿರೋದಕ್ಕೇ ಇನ್ನೇನು ಕಾರಣ ಇರಬಹುದು?

ಮುಖ್ಯ ಕಾರಣ ಅಂದ್ರೆ ಇದೆ, ಗುರುಸ್ಥಲದ್ದು. ಪಂಚಾಚಾರ್ಯದ್ದು ಇಲ್ಲಿ ಭಾಳ ಇತ್ತು. ಅದಕ ನಡಕೊಳ್ಳತಕ್ಕಂತಹ ಮಠಗಳಿದ್ದವು. ಮಡಿಮೈಲಿಗೆ ಭಾಳ ಇತ್ತು. ಲಿಂಗಾಯತರಲ್ಲಿಯ ಒಳಪಂಗಡಗಳಲ್ಲಿಯೇಪರಸ್ಪರರಲ್ಲಿ ಊಟ ಮಾಡ್ತಿದ್ದಿಲ್ಲ. ನಾವು ಪಂಚಮಸಾಲಿ. ನಮ್ಮೂರಿನ ಲಿಂಗಾಯತ ನೇಕಾರರ ಮನೆಯಲ್ಲಿ ಊಟ ಮಾಡಿದ್ದಕ್ಕೆ ನಮ್ಮಪ್ಪಗ ಐದು ಪಾವಲಿ ಜುಲ್ಮಾನೆ ಹಾಕಿದ್ದರು.

ಶರಣರ ಪ್ರಭಾವ ಈ ಭಾಗದಲ್ಲಿ ಕಡಿಮೆ. ಆದರೆ ಬಸವಣ್ಣನವರನ್ನು ಕುರಿತು ಜನಪದರು ಎಷ್ಟೊಂದು ಹಾಡಿದ್ದಾರೆ?

ಹಾಂ. ಬಸವಣ್ಣನ ಹೆಸರೆ ಎತ್ತಿಗೂ ಸಮೀಪಿಸಿಕೊಂಡಿದೆ ಕನ್ನಡದಲ್ಲಿ. ಎತ್ತು ಬದುಕಿನ ಕಾರ್ಯಕ್ಕೆ ಹತ್ತಿರ ಆಗಿರೋದ್ರಿಂದ ಬಸವಣ್ಣರ ಜನಪ್ರಿಯತೆ ಸಾಮಾಜಿಕವಾಗಿ ಹೆಚ್ಚಾತೇನೋ ಅಂತ ನನಗನಿಸತದ. ಶರಣ ಪಂಥಕ್ಕೆ ಸೇರಿದವರನ ಬಿಟ್ಟು ಕೂಡಾ ಬಸವಣ್ಣ ಯಾಕ ಜನಸಾಮಾನ್ಯರಬಾಯಲ್ಲಿದ್ದಾನೆ ಅಂದರೆ, ಆಕೃಷಿಗೆ ಬಳಸತಕ್ಕಂತಹ ಎತ್ತು. ಬಸವ ಜಯಂತಿ ದಿನ ಎತ್ತಿನ ಮೆರವಣಿಗಿನ ಹೊರಡಸತಾರ.

ನೀವೊಂದು ಮಾತು ಹೇಳಿದ್ರಿ. ಬದಲಾದ ಕಾಲಕ್ಕೆ ಜಾನಪದವನ್ನು ಹೊಸರೂಪದಲ್ಲಿ ಬಳಕೆ ಮಾಡಬೇಕು ಅಂತ. ಆದರೆ ಆ ಬಳಕೆ ಮಾಡ್ತಿರೋ ಶಕ್ತಿಗಳಲ್ಲಿ ಬೇರೆ ಬೇರೆ ಇವೆ. ಮಾರುಕಟ್ಟೆ ಶಕ್ತಿಗಳೂ ಇವೆ.

ಜಾನಪದ ಪ್ರಕಾರಗಳು ಅಗಣಿತವಾಗಿರತಕ್ಕಂಥವು. ಅವೆಲ್ಲವೂ ಇವತ್ತು ಸುಸಂಗತವಾಗಿರ ಲಾರವು. ಅದರಲ್ಲಿ ಬಹಳಷ್ಟು ಆರಾಧನೆಗೆ ಹೊಂದಿಕೊಂಡಂಥವು. ಕಲಾತ್ಮಕವಾಗಿ ಉಳಿ ಬೇಕಾದಂಥವು ಕೆಲವು. (ಮರೆತಂತಾಗಿ)... ನೀವೇನ ಪ್ರಶ್ನೆ ಕೇಳಿದ್ರಿ?
ಕಲೆ-ಆಚರಣೆ-ಸಾಹಿತ್ಯವನ್ನು ಬಳಕೆ ಮಾಡೋಕೆ ತಯಾರಾಗಿರೋ ಶಕ್ತಿಗಳು ಬೇಂದ್ರೆ ತರಹ ಸೃಜನಶೀಲ ಶಕ್ತಿಗಳು ಮಾತ್ರ ಇಲ್ಲ ಅಂದೆ.
ಅಲ್ಲರಿ, ಇವು ಹುಟ್ಟಿಕೊಂಡದ್ದೂ ಬದುಕ ಬೇಕಾದದ್ದೂ ಸಮೂಹದ ಮಧ್ಯದಲ್ಲಿ. ಜನರಿಗೇ ಬ್ಯಾಡಾದದ್ದನ್ನು ನಾವೇನ ಮಾಡಿ ಉಳಸೋದಕ ಸಾಧ್ಯ?
ಸೂಪಿs ಸಂಗೀತ ಅಧ್ಯಯನ ಮಾಡಿದೀರಿ. ಇದರ ಹಿನ್ನೆಲೇಲಿ ಕರ್ನಾಟಕದ ಸಂಸ್ಕೃತಿಯನ್ನ ಹೊಸತಾಗಿ ನೋಡೋಕೆ ಸಾಧ್ಯವಾ?
ಬಹುಮಟ್ಟಿಗೆ ನನಗೆ ಅನಸೋದು, ಬಳ್ಳಾರಿ ಜಿಲ್ಲೆಯ ಮುಸಲ್ಮಾನರ ಒಡನಾಟಂತಲೆ ಅನ್ನೋನು. ನೇರವಾಗಿ ಇಲ್ಲಿ ಗೋಡೆ ಕಟ್ಟಿಕೊಂಡು ಇರೋದಾಗಿಲ್ಲ. ಮೊಹರಂ ಹಬ್ಬ ಗಳನ್ನು ನಮ್ಮನೆಯಲ್ಲಿ ಆಚರಣೆ ಮಾಡತಾ ಇದ್ದ ನೆನಪದೆ ನನಗೆ. ನಮ್ಮ ಅಜ್ಜಿ ಮನೆಯಲ್ಲಿ ತಗಣಿ ಜಾಸ್ತಿಯಾದಾಗ ಒಂದನಾಕ ಗಿದ್ನ ಹುಳ್ಳಿ ಒಯ್ದು ಅಲಾಬಿ ಕೆಂಡದಲ್ಲಿ ಹಾಕಸತಿದ್ದಳು, ಮನೆಯಲ್ಲಿದ್ದವು ಸಾಯತಾವೆ ಅಂತ. ಹುಳ್ಳಿ ಆಕಾರಕ ಇರತಾವ ತಗಣಿ. ಫಕೀರಪ್ಪ ಅಂತ ಹೆಸರಿಡತಿದ್ದರು. ಫಕೀರಯ್ಯ ಅಂತ ಜಂಗಮರು ನಮ್ಮಲ್ಲಿದ್ದರು. ಈಗಲೂ ಕೆಲವು ಊರುಗಳಲ್ಲಿ ಮುಸಲ್ಮಾನರದು ಒಂದೇ ಮನಿ ಇದ್ದರೆ, ಆ ದೇವರನ್ನ ಹೊರತಕ್ಕಂಥವರು ಎಲ್ಲರೂ ಹಿಂದುಗಳೆ. ಯಾರು ಒಕ್ಕಲತನದ ಸಂಪರ್ಕದಲ್ಲಿ ಇರತಾರೆ, ಅಲ್ಲಿ ಜಾತಿ ಕೆಲಸ ಮಾಡೋದಿಲ್ಲ.
ಆದರೆ ಇವತ್ತಿಗೂ ಈ ಜಾತಿಪದ್ಧತಿಯ ಕ್ರೌರ್ಯಗಳು ಈಗಲೂ ರಿಪೋರ್ಟಾಗ್ತಾ ಇರೋದು ಫ್ಯೂಡಲಿಸಂ ಇರೋ ಒಕ್ಕಲುತನದ ಹಳ್ಳಿಗಳಲ್ಲಿ.
ಫ್ಯೂಡಲಿಸಂ ಇದ್ದೆ ಇತ್ತು. ಅವಾಗ ಈಗಿಂತ ಹೆಚ್ಚು ಬಡತನವಿತ್ತು. ಜಾಗೃತಿ ಇರಲಿಲ್ಲ. ದಲಿತ ವರ್ಗಗಳಲ್ಲಿ ನಾಕ ರೂಪಾಯಿ ಸಂಬಳದಲ್ಲಿ ಏನನ್ನೆಲ್ಲ ಕಳೀಬೇಕಿತ್ತವರು. ಸಂಬಳದ ಆಳುಗಳು ಅಂದರೆ ಅವರೆ. ಈ ಕಾರ್ಯಗಳಲ್ಲಿ ಕೈ ಮುಟ್ಟಿ ಕೆಲಸ ಮಾಡತಕ್ಕಂತವರು ಕೂಡೊಕ್ಕಲಾಗಿ ಒಂದಾಗಿ ಕೆಲಸ ಮಾಡತಿದ್ದರು. ಎಲ್ಲಾ ಕೈಗಳು ಸೇರಿ ಅಲ್ಲಿ ಕುಲದ ಪ್ರಶ್ನೆ ಬರತಿರಲಿಲ್ಲ.ಆದರೆ ಆರ್ಥಿಕವಾದ ಅಂತರ ಹಾಗೆ ಇರತಿತ್ತು.

ಜಾನಪದದಲ್ಲಿ ನಮ್ಮ ಚೈತನ್ಯಕ್ಕೆ ಬೇಕಾದ ಸಂಗತಿಗಳು ಇರೋ ಹಾಗೆ ನಾವು ಆಧುನಿಕವಾಗಿ ಒಪ್ಪಲಾಗದ ಸಂಗತಿಗಳಿವೆಯಂತ ಅನಸಲ್ವಾ ನಿಮಗೆ?

ಯಾವಾಗಲೂ ಜಾನಪದ ಅಂದರೆ, ಬರೀ ಜುಳು-ಜುಳು ಹರೀತಕ್ಕಂಥಾ ತಿಳಿನೀರಿನ ಒಂದು ಪ್ರವಾಹ ಅಂತ ನಾವಂದಕೊಳ್ಳೋದು ಯಾಕ? ಅದು ಮಹಾಪ್ರವಾಹ ಅದರಲ್ಲಿ ಕಸಕಡ್ಡಿಕೊಳಚೆ ಎಲ್ಲಾ ಇರತದ. ಅದರಲ್ಲಿ ಬೇಡಾದದ್ದ ತಗಿಯೋದ ಬಹಳಷ್ಟು ಅದ. ಹೇಳಬೇಕು ಅಂದರೆ ಶರಣರ ವಚನಗಳಲ್ಲಿ ಸಾಕಷ್ಟು ಅಸಂಬದ್ಧ ಅದಾವು.

ನಿಮ್ಮ ಜನಪದ ಕಲಾವಿದರ ಸಂಪರ್ಕದ ಬಗ್ಗೆ ಮತ್ತಷ್ಟು ಹೇಳಿ. ಅದನ್ನ ಸಂಗ್ರಹ ಮಾಡಿದಿರಾ

ಪನ್ನಿತಿರಕಪ್ಪ ಅಂತಂದ ಹೇಳಿ ಅದ್ಭುತ ಕಥೆಗಾರ ಬಹಳ ಚೆನ್ನಾಗಿ ಹೇಳತಿದ್ದ. ಸೀದಾ ನಮ್ಮ ಮನಃಪಟಲದ ಮ್ಯಾಲೆ ನಾಟಕ ನಡೆದಂಗ ಆಗಬೇಕು. ತಾಳಮದ್ದಳೆ ಪ್ರಸಂಗಾನ ಹಲವರು ಸೇರಕೊಂಡ ಮಾಡಿದರೆ, ಇವನೊಬ್ಬನ ಅದನ ಎಲ್ಲ ಮಾಡತಿದ್ದ, ಹಾಡ ಇದ್ದಿಲ್ಲ ಅಷ್ಟೆ. ಒಂದೊಂದು ಪಾತ್ರಕ್ಕೆ ವಿಶಿಷ್ಟವಾದಂಥ ಮುದ್ರಿ ಒತ್ತುತ್ತಿದ್ದ ಕಥೆಗಾರ. ಎ ಕೆ ರಾಮಾನುಜನ್‌ಗೆ ಕಳಿಸಿಕೊಟ್ಟೆ. ೩೭ ಡಾಲರ್ ರೊಕ್ಕ ಕಳಿಸಿದರು. ’ರಸದಾಳರಾಜ’ ಅಂತ ಒಬ್ಬ ರಾಜನ ಕತೆ. ನಾಲ್ಕು ಗಂಟೆ ಎನ್ಯಾಕ್ಟ್ ಮಾಡದು, ಹಾಡೋದು, ಮಾತ ಎಲ್ಲಾ ಬರತದಲ್ಲ ಅದರೊಳಗ.
ಜನಪದ ಪ್ರತಿಭೆ ಒಂದು ಕತೆಯನ್ನ ಹಾಡಾಗಿ, ನಾಟ್ಯವಾಗಿ ಪರಿವರ್ತನೆ ಮಾಡಬಲ್ಲದು. ಅಂದರೆ ಸಂಗೀತ, ರಂಗಭೂಮಿ ಕಥೆ, ಹೀಗೆ ಬಹುರೂಪಿಯಾದ ಆಯಾಮಗಳೆಲ್ಲ ಒಂದೇ ಪಠ್ಯದ ಏಕಕೇಂದ್ರದಲ್ಲೆ ಇರತಾವೆ.
ಅದಕ ಕಾರಣ ಅಂದರ, ಒಬ್ಬ ವ್ಯಕ್ತಿ ಮನೆಯಲ್ಲಿ ಕಲಾವಿದ ಅಲ್ಲ. ಕಥಾ ರೂಪದಲ್ಲಿ ಅಜ್ಜಿ ಇದನ್ನ ಹೇಳತಾಳ. ಗೊಂದಲಿಗರು ಅಥವಾ ಕಿನ್ನರ ಜೋಗಿಗಳು ಅದನ್ನ ನಿರೂಪಣೆ ಮಾಡತಾರ ರಾತ್ರಿಯೆಲ್ಲಾ. ಈ ಬೇರೆ ಬೇರೆ ವಾದ್ಯಗಳನ್ನ ಬಳಸೋದಿದ್ರ, ಇಷ್ಟು ಜನರು ಬರೀ ಕಟಗೊಂತ ಇರಬಾರದಂತ ಸಂದರ್ಭ ಬಂದಾಗ ಅವರೆಲ್ಲರೂ ಒಂದೊಂದು ಪಾತ್ರವಾಗಿ ನುಡಿತಾರೆ. ಇದೇ ಟೈಮನಲ್ಲಿ ಹಿಂದೆ ಹಿಮ್ಮೇಳಾಗಿ ಅವರು ಹಾಡತಾರೆ.
ಯಕ್ಷಗಾನಗಳನ್ನೂ ದೊಡ್ಡಾಟಗಳನ್ನು ನೋಡಿದ್ದೀರಿ. ನಮ್ಮ ಬಳ್ಳಾರಿಭಾಗದ ದೊಡ್ಡಾಟಗಳು ಸೊರಗಿ ಸಾಯ್ತಾ ಇರೋ ಹಾಗೆ ಕಾಣತವೆ. ಕಾರಣ ಏನು?
ಕಾರಣ ಅಂದರೆ, ಯಕ್ಷಗಾನಕ್ಕೆ ವೃತ್ತಿಪರತೆ ಇದೆ. ದೇವಸ್ಥಾನದ ಸಂಪರ್ಕ ಇದೆ. ಆ ಚಿಟ್ಟಾಣಿ ರಾಮಚಂದ್ರ ಅನ್ನಾತನಿಗೆ ಒಂದು ಸೀಜನ್ನಿಗೆ ೫೦ ಸಾವಿರ ಕೊಡತಾರೆ. ಇಲ್ಲಿ ಉಮೇದಿಗೆ ೨೦ ದಿವಸ ಕಲ್ತು ಆಡಿಬಿಡಕ್ಕಂಥವರು. ಅದರಲ್ಲಿ ವೃತ್ತಿಪರತೆಯನ್ನ ಕೃತಿಶುದ್ಧತೆಯನ್ನು ನೀವು ಲೆಕ್ಕಕ್ಕೆ ತಗೊಳ್ಳೋ ಹಾಗಿಲ್ಲ. ಹಾಡುವಾತ ಭಾಗವತ ಒಬ್ಬಾತ್ನ ಇದ್ದುದರಲ್ಲಿ ವಾಸಿ. ಬಯಲಾಟದ ಪ್ರೇಕ್ಷಕರು ಊರಿನವರು; ನಟರ ಸಂಬಂದಿsಕರು. ಪಾತ್ರದವನು ಇನ್ನ ಬಾಯನ ತಗೆದಿರಲಿಲ್ಲ, ಆಗಲೇ ಆಹೆರ ಕೊಡಲಿಕ್ಕೆ ಚಾಲೂ.

ಆದರೆ ಕೃಷ್ಣಪಾರಿಜಾತ, ತೊಗಲುಗೊಂಬೆ ಆಟಗಳಿಗೆ ವೃತ್ತಿಪರತೆ ಇದೆ.

ಹೌದೌದು. ಖಂಡಿತಾ ಅವು ಹುಟ್ಟಿದ್ದೆ ಆ ರೀತಿಯಾಗಿ. ಇದು ಬರೇ ಉಮೇದಿಗೆ. ಅದು ವೃತ್ತಿಪರತೆ ಅನ್ನೋದಕ್ಕಿಂತ ಅನುವಂಶಿಕ ನಿರ್ದಿಷ್ಟ ಜಾತಿಯವರೇ ಮಾಡತಕ್ಕದ್ದು. ಗೊಂದಲಿಗರದ್ದು ಆಗಲಿ, ಕಿನ್ನರಿ ಜೋಗಿಗಳದ್ದು ಆಗಲಿ ಮಂಟೇಸ್ವಾಮೀದ ಆಗಲಿ ಅದಕ ಮೀಸಲಾದಂಥದ್ದು.
ದೊಡ್ಡಾಟ ಸೊರಗಲಿಕ್ಕೆ ಕಾರಣ ಚರ್ಚಿಸ್ತಾ ಇದ್ದಿವಿ...
ಕಾರಣ ಒಳಗೇನೆ ಅದಾವ. ಅಂತಹ ಅಚ್ಚ ಬಯಲಾಟದ ಹಳೆ ಕಥೆಗಳು ನೋಡಿದರೆ ಅವು ಅತ್ಯಂತ ಹಳೆಗನ್ನಡ ಭೂಯಿಷವಿವಾಗಿಯೆ ಇದಾವ.

ನೀವು ’ಚಿಗಟೇರಿ ಪದಕೋಶ’ ಪ್ರಕಟ ಮಾಡಿದಿರಿ. ಗ್ರಾಮೀಣ ವಿಶಿಷ್ಟ ಪದಗಳನ್ನು ಸಂಗ್ರಹಿಸಿ ಪ್ರಕಟಿಸೋದಕ್ಕ ಒತ್ತಡ ಏನು?

ಇದು ಮುಖ್ಯವಾದ ಪ್ರಶ್ನೆ. ನನಗಿದ್ದದ್ದು ಇಡೀ ಬಳ್ಳಾರಿ ಜಿಲ್ಲೆಯ ಪದಕೋಶ ಸಂಗ್ರಹ ಮಾಡದು. ಆಮೇಲೆ ಬಳ್ಳಾರಿದಲ್ಲ, ನಮ್ಮ ಭಾಗದ್ದ ಮಾಡಕೆ ಕೂಡಾ ನನ್ನ ಆಯುಷ್ಯ ಸಾಲದು ಅನಿಸ್ತು. ಯಾಕಂದರೆ ಒಂದೂರಿಗೂ ಇನ್ನೊಂದೂರಿಗೂ ಒಂದೇ ಶಬ್ದಕ್ಕ ಹೆಚ್ಚು ಕಡಿಮೆ ಆಗತದ. ಬಹಳಷ್ಟು ಶಬ್ದಗಳು ಸತ್ತು ಹೋಗತಾ ಇವೆ.

ನಮ್ಮ ಭಾಷೆ ಸಾಯೋದನ್ನ ತಡೆಯೋಕೆ ಸಾಧ್ಯ ಅನಿಸುತ್ತಾ? ಹೇಗೆ?

ಮನಸ ಮಾಡಿದರ ತಡೀಬೌದು. ಇದು ಸಾಮೂಹಿಕವಾಗಿ ಆಗಬೇಕಾದಂತಹ ಕೆಲಸ. ಒಂದು ಹೊಲಕ್ಕ ಯಾವುದಾದರೂ ಒಂದು ರೋಗ ಬಿದ್ರ, ನಮ್ಮ ಹೊಲಕ್ಕ ಒಂದ ನಾವು ಔಷದ ಹೊಡಕೊಂಡ್ರ? ಮುಂದ್ಲ ಹೊಲಕ ಹೋಗಿ ಮತ್ತ ಹರಡ್ತದ. ಆ ಭಾಗದ ಜನ ಎಲ್ಲ ಸೇರಕೊಂಡು ಔಷದ ಹೊಡದರ ಆ ರೋಗ ಹೋದೀತು.

ನಮ್ಮ ಶಬ್ದ ಸಂಪತ್ತು ಉಳಿಸಿಕೊಳ್ಳಬೇಕು ಅಂದರ ಅವುಗಳನ್ನ ಒಂದು ಪುಸ್ತಕ ರೂಪದಲ್ಲಿ ಸಂಗ್ರಹ ಮಾಡೋದ?

ಬಳಸಿಕೊಳ್ಳಬೇಕು ದಿನನಿತ್ಯ ಜೀವನದಲ್ಲಿ. ಆ bsಲಬೇಕು, ಅದರ ಅನಿವಾರ್ಯವಾದ ಶಬ್ಬಗಳನ್ನು ತಗೊಳ್ರಿ. ಬದಲಾವಣೆ ಮಾಡವರೆಲ್ಲಾ ನಾವ ಅಲ್ಲ ಸಾರ್. ಸ್ಪೇನ್‌ನಲ್ಲಿ ಕಡ್ಡಾಯದಿಂದ ಯಾವುದೋ ಒಂದು ಜನಾಂಗದ ಭಾಷೆ ಮೇಲೆ ಇವರು ಹೇರಲಿಕ್ಕೆ ಹೋದರು.ಅವರು ನಿರಾಕರಿಸಿದರು.ಅದೇ ರೀತಿಯಲ್ಲಿ ಐರ್ಲೆಂಡಿನಲ್ಲಿ ಇಂಗ್ಲಿಷ್ ಭಾಷೆಯನ್ನ ಹೇರಲಿಕ್ಕೆ ಹೋದರು. ಅವರು ಒಪ್ಪಲಿಲ್ಲ. ತಮ್ಮ ಭಾಷೆಗಳನ್ನು ಉಳಿಸಿಕೊಂಡರು. ರಷ್ಯಾದಲ್ಲಿ ವಿeನಿಗಳು ಇಂಗ್ಲಿಷ್ ಶಬ್ದಗಳನ್ನೇ ಬಳಸಲಿಲ್ಲ.

ಆಧುನಿಕ ಚರಿತ್ರೆಯ ಬಹಳ ಸಂಕೀರ್ಣವಾದ ಒಂದು ಸಂಗತಿಯನ್ನು ಹೇಳತಾ ಇದೀರಿ. ಭಾರತದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತಿರುವ ಜಾಗತಿಕ ಶಕ್ತಿಗಳನ್ನು ಇನ್ನೂ ಬೇರೆ ತರಹ ಅರ್ಥಮಾಡಿಕೊಳ್ಳಬೇಕಿದೆ. ಇಲ್ಲದಿದ್ರೆ ಇವೆಲ್ಲ ಅಬಿsಮಾನದ ಮಾತಾಗಿ ಬಿಡುವ ಅಪಾಯವಿದೆ.

ಅಬಿsಮಾನ ಯಾಕೆ, ದುಡಿಸಿಕೊಳ್ಳಬೇಕಲ್ಲ. ಭಾಷೆ ಮೇಲೆ ನಮ್ಮ ಬದುಕು ಆಧರಿಸದ. ನಾವು ನಮ್ಮನ್ನು ಇನ್ನೊಬ್ಬರಿಗೆ ತೋಡಿಕೊಳ್ಳೋದಕ ಭಾಷೆ ಬೇಕಲ್ಲರಿ. ಇದೊಂದ ಹೇಳತಿನಿ. ಚಿಗಟೇರಿ ಪದಕೋಶದಲ್ಲಿ ಮಳೆ ಬೀಳೋದನ್ನ ೨೪ ನಮೂನಿ ಗುರತಿಸಿದಾರೆ. ಅವು ಇವತ್ತ ಕಳೆದು ಹೋಗತಾವ. ಎಷ್ಟು ಮಳಿ ಬಂತ ಅಂತ ಹೇಳೋದು ಕಷ್ಟ ಅಗತದ. ಬಹಳಷ್ಟು ವಿಷಯಗಳಲ್ಲಿ ನಮ್ಮನ್ನು ನಾವು ತೋಡಿಕೊಳ್ಳೋದಕ್ಕೆ ನಮ್ಮ ಭಾಷೆ ಅಸಮರ್ಥ ಅಂತಲೊ ಅಥವಾ ನಾವೇ ಅಸಮರ್ಥ ಅದೀವಿ ಅನ್ನೋದನ್ನ ಹೆಜ್ಜೆಹೆಜ್ಜೆಗೂ ತೋರಿಸಿಕೊಳ್ಳತಾ ಇದ್ದೀವಿ.

ಟಿಪ್ಪಣಿ

ಸಂಗಣ್ಣನವರ ಸಂದರ್ಶನದಲ್ಲಿ ಸಂಗೀತ ನಾಟಕ ಮತ್ತು ವ್ಯಾಪಾರಲೋಕಗಳಿಗೆ ಇದ್ದ ವಿಚಿತ್ರ ಸಂಬಂಧಗಳ ಬಗ್ಗೆ ಕೆಲವು ಸೂಚನೆಗಳಿವೆ. ಕಲೆಗಳನ್ನು ನಮ್ಮ ಸಂಸ್ಕೃತಿಯ ಅಬಿsವ್ಯಕ್ತಿ, ಕಲಾವಿದರ ಪ್ರತಿಭೆಯ ಅಬಿsವ್ಯಕ್ತಿ ಎಂಬ ವ್ಯಾಖ್ಯಾನಗಳು ಎಷ್ಟು ಅರೆಸತ್ಯ ಎಂದು ಇಲ್ಲಿ ಗೊತ್ತಾಗುತ್ತದೆ. ಜನಪದ ಕಲೆಗಳು ಹಾಗೂ ಸಮುದಾಯಗಳ ನಡುವಣ ಸಂಬಂಧಗಳ ಬಗ್ಗೆ ಸಂಗಣ್ಣನವರ ಸಂದರ್ಶನದಲ್ಲಿ ಹೊಳಹುಗಳಿವೆ. ಭಾಷೆಯನ್ನು ಉಳಿಸಿಕೊಳ್ಳುವ ಅವರ ಆತಂಕ ಮತ್ತು ಶ್ರದ್ಧೆಯಲ್ಲಿ ಜಾನಪದವನ್ನು ಆಧುನಿಕ ಬೆಳವಣಿಗೆಗಳಲ್ಲಿ ನಾಶವಾಗುವುದರಿಂದ ಉಳಿಸಿಕೊಳ್ಳಬೇಕು ಎಂಬ ನಿಲುವೇ ಕೆಲಸ ಮಾಡಿದೆ. ಈ ನಿಲುವು ಯಾವಾಗಲೂ ಕಾಲ್ಪನಿಕ ಶತ್ರುವಿನ ಎದುರು ರಕ್ಷಣಾತ್ಮಕ ನೆಲೆಯಲ್ಲಿಯೇ ನಮ್ಮನ್ನು ಉಳಿಸಿಬಿಡುತ್ತದೆ. ಈ ಬಗೆಯ ಸ್ವರಕ್ಷಣೆಯ ನಿಲುವನ್ನು ಬಿಟ್ಟು ಯಾವುದು ವೈರಿಯೆನ್ನಲಾಗಿದೆಯೋ ಅದರ ಮುಖಾಬಿಲೆಯನ್ನು ಬೇರೊಂದು ಬಗೆಯಲ್ಲಿ ಅನುಸಂಧಾನ ಮಾಡಿದರೆ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಯನ್ನು ಎತ್ತಲು ಆಗಿಲ್ಲ. ಆದರೆ ಸಂಗಣ್ಣನವರು ತಮ್ಮ ನಾಟಕ ಹಾಗೂ ಕಾವ್ಯಗಳಲ್ಲಿ ಈ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ ಕೂಡ. ಭಾಷೆ ಸಂಸ್ಕೃತಿಯನ್ನು ಹೋರಾಡಿ ಉಳಿಸಿಕೊಳ್ಳಬೇಕು ಎಂಬ ಅವರ bsಲ, ಉಳಿಸಿಕೊಳ್ಳಬಹುದು ಎಂಬ ಭರವಸೆ ಚೈತನ್ಯ ಶೀಲವಾಗಿದೆ. ತೋರಿಕೆಗೆ ಸಂಪ್ರದಾಯವಾದಿಯಂತೆ ಕಾಣುವ ಸಂಗಣ್ಣ, ಕಲೆ ಮತ್ತು ಜೀವನ ಎರಡೂ ಬಂದಾಗ, ಕಲೆನಾಶವಾದರೂ ಪರವಾಗಿಲ್ಲ, ಕಲಾವಿದರು ಘನತೆಯಿಂದ ಬದುಕುವಂತಾದರೆ ಸಾಕು ಎಂಬ ಜೀವಪರ ನಿಲುವನ್ನು ತಳೆಯಲು ಹಿಂಜರಿಯುವುದಿಲ್ಲ. ಆದರೆ ಅವರಿಗೆ ನಮ್ಮ ಸಂಸ್ಕೃತಿ ಜಾನಪದ ಇವುಗಳ ಬಗ್ಗೆ ವಿದೇಶಿ ಹಿತಾಸಕ್ತಿಗಳು ಸಂಗ್ರಹ ಮಾಡುವ ರಾಜಕಾರಣದ ಬಗ್ಗೆ ಒಂದು ಬಗೆಯ ಮುಗ್ಧತೆಯಿದೆ. ವಿಶೇಷ ಎಂದರೆ ಸಂಗಣ್ಣನವರು ತಮ್ಮ ಪ್ರಿಯ ಬರೆಹಗಾರನನ್ನಾಗಿ ಕಾರಂತರನ್ನು ಆರಿಸಿಕೊಳ್ಳುವುದು. ಹೆಚ್ಚುಕಡಿಮೆ ಜಾನಪದದ ಬಗ್ಗೆ ಕಾರಂತರ ನಿಲುವುಗಳು ಇಂತಹವೇ ಆಗಿವೆ. ಸಂಗಣ್ಣನವರು ನಮ್ಮ ಸಾಮಾಜಿಕ ಸನ್ನಿವೇಶದ ಬಗ್ಗೆ ಹೇಳುವ ಅನೇಕ ಸಂಗತಿಗಳು ಕರ್ನಾಟಕ ಸಂಸ್ಕೃತಿಯ ಬಗ್ಗೆ ಭಾವುಕವಾಗಿ ಮಾತಾಡುವವರನ್ನು ಕಂಗೆಡಿಸಬಲ್ಲವು. ಅದರಲ್ಲಿ ’ಬಸವಪುರಾಣ’ ದಹನ ಮಾಡಿದ ಪ್ರಸಂಗವೂ ಒಂದು.

ಭಾನುವಾರ, ಡಿಸೆಂಬರ್ 18, 2011

ಬಳ್ಳಾರಿ ಜಿಲ್ಲಾ ಬರಹಗಾರರು

ಈ ಬ್ಲಾಗ್ ಬಳ್ಳಾರಿ ಜಿಲ್ಲಾ ಬರಹಗಾರರನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತದೆ. ಅದು ಚರಿತ್ರೆಯ ಬರಹಗಾರರಿಂದಿಡಿದು ಈ ತನಕದ ಹೊಸ ಬರಹಗಾರರನ್ನೂ ಸಹ ಒಳಗೊಳ್ಳುವ ಉದ್ದೇಶವನ್ನು ಹೊಂದಿದೆ.ಇಲ್ಲಿ ಜಿಲ್ಲಾ ಬರಹಗಾರರ ಬರಹ, ಅವರ ಬಗ್ಗೆ ಬಂದ ವಿಮರ್ಶೆ, ಹೀಗೆ ಎಲ್ಲವನ್ನೂ ಒಳಗೊಳ್ಳುವ ಪ್ರಯತ್ನವಿದು. ಶೀಘ್ರದಲ್ಲಿ ಬರಹಗಳನ್ನು ಅಪ್ ಲೋಡ್ ಮಾಡಲಾಗುವುದು.

-ಅರುಣ್ ಜೋಳದಕೂಡ್ಲಿಗಿ