ಗುರುವಾರ, ಏಪ್ರಿಲ್ 5, 2012

ಅರುಣ್ ಜೋಳದಕೂಡ್ಲಿಗಿ


ಹೊಸ ತಲೆಮಾರಿನ ಲೇಖಕರು: ಅರುಣ್ ಜೋಳದಕೂಡ್ಲಿಗಿ

-ಪ್ರೊ.ರಹಮತ್ ತರೀಕೆರೆ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ `ಬಯಲು ಸಾಹಿತ್ಯ ವೇದಿಕೆ' ಎಂಬ ಒಂದು ಸಂಘಟನೆಯಿತ್ತು. ಅದೊಂದು ತರಹ ನಮ್ಮ ಹಿರಿಯ ತಲೆಮಾರಿನ ಲೇಖಕರು ಕಟ್ಟಿಕೊಂಡಿದ್ದ `ಗೆಳೆಯರ ಗುಂಪ'ನ್ನು ಹೋಲುವಂತಹುದು. ಅಲ್ಲಿ ಕೆಲವು ಯುವ ಲೇಖಕರು ವರ್ಷಕ್ಕೊಂದಾವರ್ತಿ ಕಲೆತು, ಯಾರಾದರೊಬ್ಬ ಹಿರಿಯ ಲೇಖಕರನ್ನು ಮುಂದಿಟ್ಟುಕೊಂಡು, ತಮ್ಮ ಬರೆಹದ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಸಾಹಿತ್ಯ ವೇದಿಕೆಯಿಂದ ಅನೇಕ ಜೀವಪರ ಲೇಖಕರು ಹೊಮ್ಮಿದರು. ಅವರು ವೇದಿಕೆಯಿಂದಲೇ ಹೊರಹೊಮ್ಮಿದವರು ಎಂಬುದಕ್ಕಿಂತ ವೇದಿಕೆಯಲ್ಲಿ ಅವರು ತಮ್ಮನ್ನು ತಾವು ಮಸೆದುಕೊಂಡು ಸ್ಪಷ್ಟತೆ ಪಡೆದುಕೊಂಡರು ಎನ್ನುವುದೇ ಹೆಚ್ಚು ಸರಿ.

ಆದರೆ ಬಯಲು ಸಾಹಿತ್ಯ ವೇದಿಕೆಯಿಂದ ಎಷ್ಟು ಲೇಖಕರು ರೂಪುಗೊಂಡರು ಎಂಬುದಕ್ಕಿಂತ ಅಲ್ಲಿ ಸೇರುತ್ತಿದ್ದ ಎಷ್ಟು ಲೇಖಕ ಲೇಖಕಿಯರು ಪರಸ್ಪರ ವರಿಸಿ ಬಾಳಸಂಗಾತಿಗಳಾದರು ಎಂಬ ಬಗ್ಗೆ ಅದರ ವಿರೋಧಿಗಳು ಲೆಕ್ಕ ಇಟ್ಟಿರುವುದುಂಟು. ವೇದಿಕೆಯ ಗುಪ್ತ ಅಜೆಂಡಾವೇ ಲಗ್ನದ್ದಾಗಿದ್ದು, ಸೂಕ್ತ ಸಂಗಾತಿಗಳು ಸಿಕ್ಕ ಬಳಿಕ ಬಯಲು ಸಾಹಿತ್ಯ ವೇದಿಕೆ ಬಯಲಾಯಿತು ಎಂದು ಅವರು ಆಪಾದನೆ ಮಾಡುತ್ತಾರೆ. ಹತ್ತು ವರ್ಷಗಳ ಬಳಿಕ ನೋಡುವಾಗ, ಬೆಂಗಳೂರಿನಾಚೆ ಸ್ಥಳೀಯ ಮಟ್ಟದಲ್ಲಿದ್ದ ಇಂಥ ಲೇಖಕರ ಗುಂಪುಗಳು, ಬರೆಹದ ಗುಟ್ಟುಗಳನ್ನೊ ಸಮಸ್ಯೆಗಳನ್ನೊ ಹಂಚಿಕೊಂಡಿದ್ದಕ್ಕಿಂತ, ನಮ್ಮ ಸುತ್ತಣ ಸಮಾಜದ ಬಗ್ಗೆ ವಿಮರ್ಶಾತ್ಮಕವಾದ ಜಾತ್ಯತೀತವಾದ ಧೋರಣೆಯನ್ನು ರೂಪಿಸಿಕೊಂಡವು ಎಂಬುದೇ ನನಗೆ ಮುಖ್ಯವಾಗಿ ಕಾಣುತ್ತದೆ. ಅರುಣ್ ಆ ವೇದಿಕೆಯಲ್ಲಿ ಸಕ್ರಿಯವಾಗಿದ್ದ ಲೇಖಕರಲ್ಲಿ ಒಬ್ಬರು.

ಯುವ ಲೇಖಕಿಯರ ವಿಳಾಸ ಮತ್ತು ಸೆಲ್ ನಂಬರ್ ಬೇಕಾದರೆ ಅರುಣ್ ಗೆ ಕೇಳಬೇಕು ಎಂಬ ಖ್ಯಾತಿಯನ್ನು ಗೆಳೆಯರಲ್ಲಿ ಗಳಿಸಿರುವ ಅರುಣ್, ಕುಂವೀಯವರ ಕೊಟ್ಟೂರು ಸೀಮೆಯವರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪುಟ್ಟಹಳ್ಳಿ ಜೋಳದಕೂಡ್ಲಿಗಿಯವರು. ತಂದೆ ಸಣ್ಣರೈತ. ತಾಯಿ ಅಂಗನವಾಡಿಯ ಕಾರ್ಯಕರ್ತರು. ಈ ಕಾರ್ಯಕರ್ತೆಯರ ಕಷ್ಟಗಳನ್ನು ಪ್ರಜಾವಾಣಿಯ ವಾಚಕರ ವಾಣಿಗೆ ಬರೆಯುವ ಮೂಲಕವೇ ಬರೆಹದ ಕಲೆ ಕಲಿತುಕೊಂಡೆ ಮೂಲತಃ ಕವಿಯಾಗಿರುವ ಅರುಣ್, ಕೆಲವು ಅತ್ಯುತ್ತಮ ಕವಿತೆಗಳನ್ನು ಬರೆದಿರುವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂಎ ಪದವಿ ಪಡೆದಿದ್ದು, ಕರ್ನಾಟಕದಲ್ಲಿ ಈತನಕ ನಡೆದಿರುವ ಜಾನಪದ ಅಧ್ಯಯನಗಳನ್ನು ತಾತ್ವಿಕವಾಗಿ ವಿಶ್ಲೇಷಣೆ ಮಾಡುವಂತಹ ಪಿಎಚ್.ಡಿ., ಸಂಶೋಧನೆಯನ್ನು ಮುಗಿಸಿರುವರು. ಸದ್ಯ ಮೈಸೂರಿನ ಸಿಐಐಎಲ್ನಲ್ಲಿ ಭಾಷೆ ಕುರಿತ ಒಂದು ಯೋಜನೆಯಲ್ಲಿ ಸಹಾಯಕರಾಗಿ ಕೆಲಸದಲ್ಲಿರುವರು. ಈತನಕ ಅರುಣ್ ಎರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಒಂದು- `ನೆರಳು ಮಾತನಾಡುವ ಹೊತ್ತು' (2004) ಎಂಬ ಕವನ ಸಂಕಲನ. ಇನ್ನೊಂದು- `ಸೊಂಡೂರು ಭೂಹೋರಾಟ' (2008) ಎಂಬ ಸಂಶೋಧನ ಕೃತಿ. ಅನೇಕ ಪತ್ರಿಕಾ ಬರೆಹಗಳನ್ನೂ ಸಣ್ಣಕತೆಗಳನ್ನೂ ಬಿಡಿಬಿಡಿಯಾಗಿ ಪ್ರಕಟಿಸಿರುವ ಅರುಣ್, ಅವಕ್ಕೆ ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ತಮ್ಮ ಕವಿತೆಗಳಿಗೆ ಪ್ರಜಾವಾಣಿ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿಯನ್ನೂ ದೊರಕಿಸಿಕೊಂಡಿದ್ದಾರೆ.

ಜೀವಂತಿಕೆಯಿಂದ ಪುಟಿಯುವ ಅರುಣ್, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬರೆಯುತ್ತ ಲೇಖಕರಾಗಿ ರೂಪುಗೊಂಡವರು. ನಮ್ಮ ಗ್ರಾಮಬದುಕಿನಲ್ಲಿರುವ ಬಾಳಿನ ಹೋರಾಟವನ್ನೂ ಮಾನವ ಪ್ರೀತಿಯನ್ನೂ ಸಣ್ಣತನ ಮತ್ತು ಕೊಳಕನ್ನೂ ಬರೆಹದಲ್ಲಿ ಮಿಡಿಸಿದವರು. ಅವರ ಬರೆಹದಲ್ಲಿ ಪ್ರೀತಿಗಾಗಿ ಹಾತೊರೆಯುವ ಜೀವವೊಂದರ ತುಡಿತಗಳಿವೆ. ಅದರಲ್ಲೂ ಅವರ ಪ್ರೇಮಪದ್ಯಗಳು ಬಹಳ ತೀವ್ರವಾಗಿವೆ. ಹೀಗೆ ಏಕಕಾಲಕ್ಕೆ ಆರ್ದ್ರವಾದ ಪ್ರೇಮಪ್ರೀತಿಯನ್ನೂ ಸಾಮಾಜಿಕ ರಾಜಕೀಯ ವಿದ್ಯಮಾನಗಳ ಬಗ್ಗೆ ನಿಷ್ಠುರವಾದ ನಿಲುವನ್ನೂ ಒಳಗೊಂಡಿರುವುದು ಹೊಸತಲೆಮಾರಿನ ಬಹುತೇಕ ಲೇಖಕರ ಗುಣವಾಗಿದೆ. ಇವರ ಜತೆಗೆ ಹೊರಜಗತ್ತಿನ ಬಗ್ಗೆ ಕಾಳಜಿಯಿಲ್ಲದ, ನಿರಾಳವಾದ ಸ್ಥಿತಿಯಲ್ಲಿ ಒಂದು ಅಂತರ್ಮುಖಿ ಜಗತ್ತನ್ನು ಕಟ್ಟಿಕೊಳ್ಳುವ ಲೇಖಕರೂ ಇದ್ದಾರೆ. ಅವರಲ್ಲಿ `ರಾಜಕೀಯ' ಎನ್ನಲಾಗುವ ವಿದ್ಯಮಾನಗಳ ಬಗ್ಗೆ ಒಂದು ಬಗೆಯ ಕೋಮಲ ಹಿಂಜರಿಕೆ, ನಿರ್ಲಿಪ್ತತೆ ಅಥವಾ ಅತಿ ಹುಷಾರುತನ ಇವೆ. ಲಹರಿ ರೂಪದಲ್ಲಿ ಮನದೊಳಗಿನ ಹೂಹಗುರ ಭಾವಗಳಿಗೆ ರೂಪಕೊಡುವ ಕಲಾತ್ಮಕತೆ ಅವರಿಗೆ ಪ್ರಿಯ. ಬರೆಹದ ಈ ಮನೋಧರ್ಮವನ್ನು ಕೆಲವು ಪತ್ರಿಕೆಗಳು ಅಥವಾ ಲೇಖಕರು ಮುಂದೆ ನಿಂತು ಓರಿಯಂಟ್ ಮಾಡಿರುವುದುಂಟು. ಸಾಮಾಜಿಕವಾಗಿ ಎಲ್ಲವನ್ನೂ ಎದುರಾಳಿ ಪರಿಕಲ್ಪನೆಯಲ್ಲೇ ಮಣಿಸಿ ನೋಡುವ ಆಕ್ರೋಶದಲ್ಲಿ ಹೂಂಕರಿಸುವ ಮನೋಧರ್ಮದಂತೆ, ಈ ಬಗೆಯ ವರ್ತಮಾನದ ದರ್ದಿಲ್ಲದ ನಿರಾಳತೆಯ ಮನೋಧರ್ಮ ಕೂಡ ಸಾಹಿತ್ಯದಲ್ಲಿ ಅನೇಕ ಮಿತಿಗಳಿಗೆ ಕಾರಣವಾಗಿದೆ.


ಆದರೆ ದಿಗ್ಭ್ರಮೆ ಮೂಡಿಸುವಂತಹ ವಿದ್ಯಮಾನಗಳು ಜರುಗುವ, ದಾರಿದ್ರ್ಯ ಮತ್ತು ಗುಡ್ಡೆಬಿದ್ದಿರುವ ಸಂಪತ್ತು ಎಂಬ ಅತಿಗಳಿರುವ ಬಳ್ಳಾರಿ ಸೀಮೆಯಲ್ಲಿ, ಇಲ್ಲಿನ ಯಾವುದೇ ಸೂಕ್ಷ್ಮಮನಸ್ಸಿನ ಲೇಖಕರಲ್ಲಿ ಸಹಜವಾಗಿ ಇರುವಂತೆ, ಅರುಣ್ ಬರೆಹದಲ್ಲೂ ತಲ್ಲಣಗಳಿವೆ; ಇಲ್ಲಿನ ಗಣಿಗಾರಿಕೆ, ಜಾತಿ ಮತ್ತು ರೊಕ್ಕದ ರಾಜಕಾರಣವು ಸಾಮಾನ್ಯ ಎಂದು ನಾವು ಕರೆಯುವ ಜನರಲ್ಲೂ ನಿರ್ಮಿಸಿರುವ ಮನೋಧರ್ಮದ ಬಗ್ಗೆ ಸೋಜಿಗದ ಒಳನೋಟಗಳು ಅವರಲ್ಲಿವೆ. ಇದರ ಸುಳಿವು ಅವರ ಆರಂಭದ ಪತ್ರಿಕಾ ಬರೆಹಗಳಲ್ಲಿಯೇ ಪ್ರಕಟವಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರ ಕಷ್ಟದ ಮೇಲೆ ಅವರು ಬರೆದ ಪತ್ರಿಕಾ ಲೇಖನ, ಸರ್ಕಾರದ ಇಲಾಖೆ ಎಚ್ಚೆತ್ತುಕೊಂಡು ತನ್ನ ದೋಷವನ್ನು ತಿದ್ದಿಕೊಳ್ಳುವಂತೆ ಮಾಡಿತು. ಇದು ಬರೆಹದ ಸಣ್ಣಶಕ್ತಿಯನ್ನು ತನಗೆ ಮನವರಿಕೆ ಮಾಡಿತು ಎಂದು ಒಂದೆಡೆ ಅವರು ಹೇಳಿಕೊಂಡೂ ಇದ್ದಾರೆ. ಆದರೆ ಸಮಸ್ಯೆಯನ್ನು ಬಗೆಹರಿಸುವ ಸರಳ ಆಕ್ಟಿವಿಸಂನ ಆಚೆಹೋಗಿ, ಚಿಂತನೆ ನಡೆಸುವ ದಿಸೆಯಲ್ಲಿ ಅವರ ಬರೆಹಗಳು ಚಲಿಸಿವೆ. ಕೆಲವೊಮ್ಮೆ ಅವರ ಪತ್ರಿಕಾ ಬರೆಹಗಳಲ್ಲಿ ಛೇಡಿಸುವಿಕೆಯ ತಮಾಷೆಯ ಗುಣದಿಂದ, ಸ್ತ್ರೀಸ್ವಾತಂತ್ರ್ಯದ ಬಗ್ಗೆ ಲಘುವಾದ ರೀತಿಯ ಧೋರಣೆಯ ಬರೆಹಗಳೂ ಬಂದಿರುವುದಿದೆ. ಇದರಿಂದ ಸಹಲೇಖಕಿಯರು ಅವರಿಗೆ ವಾಗ್ದಂಡನೆ ವಿಧಿಸಿರುವುದೂ ಉಂಟು. ಮುಖ್ಯವೆಂದರೆ, ತಂತಮ್ಮ ಹಳ್ಳಿಗಳಿಂದ ನಗರದ ನಾಗರಿಕ ಲೋಕಕ್ಕೆ ವಿಸ್ಮಯವೆನಿಸುವ ಮತ್ತು ರೋಚಕತೆ ಉಂಟುಮಾಡುವ ವಿಶಿಷ್ಟ ಆಚರಣೆಗಳ ಬಗ್ಗೆ ಬರೆವ ಆಮಿಷವನ್ನು ಅರುಣ್ ಬಿಟ್ಟುಕೊಟ್ಟಿರುವುದು. ಬದಲಿಗೆ ಅಲ್ಲಿನ ಜೀವನದ ದುಗುಡ ಮತ್ತು ಚೈನತ್ಯಶೀಲತೆಯನ್ನು ತೋರುವ ವಿಶ್ಲೇಷಕ ಬರೆಹಗಳನ್ನು ಮಾಡುತ್ತಿರುವುದು.

ನಮ್ಮ ಬಹುತೇಕ ಗ್ರಾಮೀಣ ಮೂಲದ ಲೇಖಕರಲ್ಲಿ ಇರುವಂತೆ, ಅಸಮಾನತೆ ಬಗ್ಗೆ ವ್ಯಗ್ರತೆ, ಕೋಮುವಾದದ ಬಗ್ಗೆ ಖಚಿತವಾದ ನಿಲುವು, ದುಡಿವ ಸಮುದಾಯದ ಸೆಣಸುಬಾಳಿನ ಬಗ್ಗೆ ಪ್ರೀತಿ, ಎಲ್ಲವನ್ನೂ ಅರುಣ್ ಬರೆಹ ಒಳಗೊಂಡಿದೆ. ನಾಡಿನ ಚಳುವಳಿ ಮತ್ತು ಹೋರಾಟಗಳ ಬಗ್ಗೆ ಆಳದಲ್ಲಿ ಸೆಳೆತವುಳ್ಳ ಅರುಣ್ ಕೊಂಚ ಭಾವುಕ ಲೇಖಕ. ಅದು ಕೆಲವೊಮ್ಮೆ ತೊಡಕೂ ಆಗಿದೆ. ಬದುಕಿನಲ್ಲಿರುವ ಜೀವಂತಿಕೆ ಹಾಸ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಇವರ ಲವಲವಿಕೆ ಪ್ರಕಟವಾಗಿರುವ ಬಿಡಿ ಕತೆಗಳಲ್ಲಿ ಕಾಣುತ್ತದೆ. ಇಲ್ಲಿ ತುಂಬಿರುವ ವಿನೋದ ಪ್ರಜ್ಞೆ ಆಪ್ತವಾಗಿದೆ. ಆದರೆ ಇದು ದೈತ್ಯಲೇಖಕ ಕುಂವಿಯವರ ಪ್ರಭಾವದಿಂದ ತಪ್ಪಿಸಿಕೊಂಡು ತಮ್ಮದೇ ಆದ ನುಡಿಗಟ್ಟನ್ನು ಕಂಡುಕೊಳ್ಳುವುದರ ಸವಾಲಿರುವುದನ್ನು ಸಹ ಈ ಲೇಖಕನಿಗೆ ಸೂಚಿಸುತ್ತದೆ. ಅತಿ ಗಂಭೀರತೆಯು ಬರೆಹಕ್ಕೆ ಸಹಜವಾಗಿ ಇರಬಹುದಾದ ವಿನೋದ ಪ್ರಜ್ಞೆಯನ್ನು ಕೊಂದು, ಜೋಭದ್ರ ಮುಖವನ್ನು ಜೋಡಿಸುತ್ತದೆ. ಬರಿಯ ವಿನೋದವು ವರ್ತಮಾನದಲ್ಲಿ ಏನೂ ಸಮಸ್ಯೆಯಿಲ್ಲ ಎಂಬಂತೆ ಕೇವಲ ಸಂಭ್ರಮದ ಬೇಹೊಣೆ ಮನೋಧರ್ಮವನ್ನು ಒಳಗೊಳ್ಳುತ್ತದೆ. ಈ ಎರಡು ದಡಗಳಲ್ಲಿ ನಮ್ಮ ಕೆಲವು ಹೊಸಬರೆಹಗಾರರು ತುಯ್ಯಲಾಡುವುದುಂಟು.

ಅರುಣ್ ಅವರಲ್ಲಿ ಮೊದಲಿದ್ದ ಭಾವುಕ ಪ್ರಧಾನತೆ ಕಡಿಮೆಗೊಂಡು ಚಿಂತನಶೀಲತೆ ಒದಗುತ್ತಿದೆ. ಇದಕ್ಕೆ ಕಾರಣ, ಕ್ಷೇತ್ರಕಾರ್ಯ ಮಾಡಿ ಜನರ ಜತೆ ಮಾತಾಡಿ ಬರೆದ `ಸೊಂಡೂರು ಭೂಹೋರಾಟ' ಎಂಬ ಕೃತಿಯೊ ತಿಳಿಯದು. ಕವಿತೆ ಅವರ ನಿಜವಾದ ಪ್ರಕಾರವಾಗಿದ್ದರೂ, ಯಾವ ಪ್ರಕಾರದಲ್ಲಿ ತಮ್ಮ ಸೃಜನಶೀಲತೆಯನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬ ಒಂದು ತೆರೆದ ಸ್ಥಿತಿಯಲ್ಲಿ ಅವರಿದ್ದಾರೆ. ಜೀವಪ್ರೀತಿಯೂ ವಿಶಿಷ್ಟ ಅನುಭವ ಲೋಕವೂ ಹದುಳದಾಯಕ ಮನಸ್ಸೂ ಇರುವ ಅರುಣ್ ಅವರ ಸಾಮಾಜಿಕ ಕಳಕಳಿ, ಅವರು ಬರೆಯುತ್ತಿರುವ ವಾಚಕರವಾಣಿ ಪತ್ರಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಈಗ ಪ್ರಕಟವಾಗುತ್ತಿರುವ `ಅವ್ವನ ಅಂಗನವಾಡಿ' ಎಂಬ ಸಂಕಲನವು ಅರುಣ್ ಕಾವ್ಯ ಪಡೆದಿರುವ ಹೊಸ ಮಜಲನ್ನು ತೋರಲಿದೆ.