ಬುಧವಾರ, ಮಾರ್ಚ್ 7, 2012
ಡಾ. ಕುಂಬಾರ ವೀರಭದ್ರಪ್ಪ, ಕೊಟ್ಟೂರು.
ಕುಂವೀ ಎಂದೆ ಪ್ರಸಿದ್ಧಿಯನ್ನು ಪಡೆದ ಕುಂ.ವೀರಭದ್ರಪ್ಪ ಅವರು ಕೊಟ್ಟೂರು ಪರಿಸರದಲ್ಲಿ ಬೆಳೆದ ದೈತ್ಯ ಕಥೆಗಾರ. ಕಥೆಗಳನ್ನು ಬರೆಯುತ್ತಾ ಬರೆಯುತ್ತಾ ಕುಂ.ವಿ ಕಥನ ಮಾದರಿಯೊಂದನ್ನು ರೂಪಿಸಿದವರು. ಈ ಭಾಗದ ವಡ್ಡಾರಾಧನೆಯ ಶಿವಕೋಟ್ಯಾಚಾರ್ಯನ ನಂತರ ಕಥನದ ತನ್ನದೇ ಆದ ವಿಶಿಷ್ಟ ಮಾದರಿಯೊಂದನ್ನು ರೂಪಿಸಿದ ಕಥೆಗಾರ ಕುಂವಿ.ಅವರ ಕಥನಕ್ಕೆ ಸಿಕ್ಕ ಪ್ರಶಸ್ತಿಗಳು ಹಲವು. ಅವರ ಅರಮನೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಅವರ ಕಥನ ಕಾಯಕಕ್ಕೆ ಸಿಕ್ಕ ಶಿಖರ ಗೌರವ.
ಇದು ಬರಿ ಕಥೆಯಲ್ಲೋ ಅಣ್ಣಾ (ಸಮಗ್ರ ಕಥೆಗಳು) ಗಾಂಧಿ ಕ್ಲಾಸು ( ಆತ್ಮಕಥೆ) ಶಾಮಣ್ಣ, ಅರಮನೆ, ಆರೋಹಣ ಪ್ರಮುಖ ಕಾದಂಬರಿಗಳು. ಕುಂ.ವಿ ಕಥನಕ್ಕೆ ಇರುವ ವಿಶಿಷ್ಟ ಶಕ್ತಿ ಮಿತಿಯ ಆಗಿದೆ. ಅತಿರಂಜನೆ, ಅತಿ ಮಾನುಷ ವ್ಯಕ್ತಿತ್ವಗಳು ಅಸಹಜ ಅನ್ನಿಸಿಬಿಡುವುದೂ ಇದೆ. ಇಂತಹ ಕೆಲ ಮಿತಿಗಳನ್ನು ಹೊರತುಪಡಿಸಿದರೆ ಕುಂ.ವಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಬೆರಗು ಮೂಡಿಸುವ ಕಥನಕಾರ. ಅವರ ಕಥನ ಶಕ್ತಿ ಮತ್ತಷ್ಟು ಉತ್ಸಾಹದಿಂದ ಹೊರ ಹೊಮ್ಮಲಿ.
’ನನ್ನನ್ನು ಲೇಖಕನಾಗಿ ರೂಪಿಸಿದ ಪರಿಸರ’ (೧೯೯೮), ೧೯೯೮ರಲ್ಲಿ (ಹೂವಿನಹಡಗಲಿ) ನಡೆದ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣ. ಕನ್ನಡ ಅಧ್ಯಯನ ಸಂ ೬-೨, ಅಕ್ಟೋಬರ್ -ಡಿಸೆಂಬರ್, ೧೯೯೯, ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರಕಟವಾಗಿತ್ತು. ಈ ಬರಹವನ್ನೂ, ಮಾತು ತಲೆ ಎತ್ತುವ ಬಗೆ ಕೃತಿಯಲ್ಲಿ ಈ ಬರಹಕ್ಕೆ ರಹಮತ್ ತರೀಕೆರೆ ಅವರು ಬರೆದ ಟಿಪ್ಪಣಿಯನ್ನು ಇಲ್ಲಿ ಪ್ರಕಟಿಸಾಗಿದೆ. ಈ ಮಾತುಗಳು ಕುಂ.ವಿ ಅವರನ್ನು ಅರ್ಥವತ್ತಾಗಿ ಕಟ್ಟಿಕೊಡುತ್ತವೆ.
ನನ್ನನ್ನು ಲೇಖಕನಾಗಿ ರೂಪಿಸಿದ ಪರಿಸರ
ಕುಂವೀ
ಕಳೆದ ೨೫ ವರ್ಷಗಳಿಂದ ಕಥೆ, ಕಾದಂಬರಿ, ಮತ್ತಿತರ ಸಾಹಿತ್ಯಿಕ ಪ್ರಕಾರಗಳಲ್ಲಿ ತೊಡಗಿಸಿ ಕೊಂಡಿರುವ ನಾನು, ಅಕ್ಷರ ಕಲಿತದ್ದು ಎಷ್ಟು ಆಕಸ್ಮಿಕವೋ ಬರಹಕ್ಕೆ ತೊಡಗಿದ್ದೂ ಅಷ್ಟೇ ಆಕಸ್ಮಿಕ. ಎದೆ ಸೀಳಿದರೂ ಎರಡಕ್ಷರ ಗೋಚರಿಸದ ಕುಂಬಾರ ಜನಾಂಗದಿಂದ ಬಂದವನಾದ ನಾನು, ಅನೇಕ ಜನಪರ ಚಳುವಳಿಗಳ ಪರುಷಸ್ಪರ್ಶದಿಂದ ಲೇಖಕನಾದವನು; ಶ್ರಮಿಕ ವರ್ಗದೊಡಲಿಂದ ತಲೆಚಾಚಿ ಸಾಹಿತ್ಯಿಕ ಪರಿಭಾಷೆಯಲ್ಲಿ ಮಾತಾಡಲಾರಂಬಿsಸಿ ದವನು. ಅಕ್ಷರ ಸಂಸ್ಕೃತಿಯಿಂದ ನಾಗರಿಕ ಸೌಲಭ್ಯಗಳಿಂದ ದೂರವಿರುವೆ ಎಂದಾಗಲಿ, ಗೂಳ್ಯಂ ಮತ್ತಿತರ ಕುಗ್ರಾಮಗಳಲ್ಲಿ ಕಂಡುಂಡ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಲೆಂದೇ ಕಥೆ ಕಾದಂಬರಿ ಬರೆಯತೊಡಗಿದವನು. ನಾನು ನನ್ನ ಮಾನಸಿಕ ಸ್ವಾಸ್ಥ್ಯ ಕಾಪಾಡಿ ಕೊಳ್ಳಲಿಕ್ಕೆಂದೇ ಬರೆಯುತ್ತಿರು ವವನು; ಬರೆಯುವ ಮೂಲಕ ಕನ್ನಡ ಬಲ್ಲ ಓದುಗರೊಂದಿಗೆ ಸಂವಾದ ಸಂಪರ್ಕ ಇಟ್ಟು ಕೊಂಡವನು; ಈ ಮೂಲಕ ತಮ್ಮೆಲ್ಲರ ಪ್ರೀತಿ ಅಬಿsಮಾನ ಸಂಪಾದಿಸಿದವನು. ನಾನು ಕಳೆದ ಕಾಲು ಶತಮಾನದ ಅವದಿsಯಲ್ಲಿ ಸುಮಾರು ೨೫೦ ಕಥೆಗಳನ್ನು ಬರೆದಿರಬಹುದು, ಹತ್ತೋ ಹನ್ನೆರಡೋ ಕಾದಂಬರಿಗಳನ್ನು ಬರೆದಿರಬಹುದು. ವಿಮರ್ಶಕರು ಮೆಚ್ಚಿಕೊಂಡಿರಬಹುದು.
ವಿಷಾದದ ಸಂಗತಿ ಎಂದರೆ, ನನ್ನ ಕುಟುಂಬ ಪರಿಸರದ, ಅದರಲ್ಲೂ ಮುಖ್ಯವಾಗಿ ತಾಯಿ ಅಕ್ಕ ತಂಗಿ ತಮ್ಮಂದಿರು, ನನ್ನ ಒಂದೇ ಒಂದು ಕಥೆಯನ್ನು ಓದಿಲ್ಲದಿರುವುದು; ಅಷ್ಟೇ ಏಕೆ ನಾನು ಕೆಲಸ ಮಾಡಿದ ಮತ್ತು ಮಾಡುತ್ತಿರುವ ಶಾಲೆಯ ಸಹೋದ್ಯೋಗಿಗಳ ಪೈಕಿ, ಯಾರೊಬ್ಬರೂ ನನ್ನ ಒಂದೇ ಒಂದು ಕಥೆಯನ್ನು ಓದಿಲ್ಲದಿರುವುದು. ಮುಖ್ಯವಾಗಿ ನಾನಿಲ್ಲಿ ಹೇಳಬಯಸುತ್ತಿರುವುದೇನೆಂದರೆ, ನಾನು ಯಾರನ್ನು ಉದ್ದೇಶಿಸಿ ಮಾತಾಡುತ್ತಿರು ವೆನೋ, ಯಾರನ್ನು ಉದ್ದೇಶಿಸಿ ಬರೆಯುತ್ತಿರುವೆನೋ, ಅಂಥವರನ್ನು ನನ್ನ ಸಾಹಿತ್ಯ ತಲುಪುತ್ತಿಲ್ಲವೆಂಬುದು. ನನ್ನ ಈ ಪ್ರೀತಿಯ ಜಿಲ್ಲೆಯಲ್ಲಿ ಬಹಳಷ್ಟು ಮಂದಿ ’ಈತ ಇಂಥ ಸಿನಿಮಾಗಳಿಗೆ ಕಥೆ ಕಾದಂಬರಿ ಬರೆದಿದ್ದಾನೆ’ ಎಂದು ಗುರುತಿಸುತ್ತಿರುವರೇ ಹೊರತು, ಇಂಥದೊಂದು ಒಳ್ಳೆಯ ಕಥೆಯನ್ನು ಬರೆದಿದ್ದಾನೆಂದು ಗುರುತಿಸುತ್ತಿಲ್ಲ. ಅಂದರೆ ದೃಶ್ಯಮಾಧ್ಯಮದಷ್ಟು ಸಾಹಿತ್ಯಿಕ ಮಾಧ್ಯಮ ಸಶಕ್ತವಾಗಿಲ್ಲ.
ಇನ್ನೊಂದು ವಿಚಿತ್ರ ಸಂಗತಿ ಎಂದರೆ, ಇವತ್ತು ಲೇಖಕರಲ್ಲಿಯೇ ಓದುವ ಅಬಿsರುಚಿ ಕಡಿಮೆಯಾಗಿರುವುದು. ಮುಖ್ಯವಾಗಿ ಒಬ್ಬ ಲೇಖಕ ಇನ್ನೋರ್ವ ಕಿರಿಯ ಲೇಖಕನ ಕೃತಿಯನ್ನು ಓದುವ ತಾಳ್ಮೆ ಕಳೆದುಕೊಂಡಿರುವುದು. ನಾನು ಬರಹ ಆರಂಬಿsಸಿದ ಸಂದರ್ಭ ಹೀಗಿರಲಿಲ್ಲ. ಸಿದ್ಧಗಂಗಾ ಮಠದಲ್ಲಿ ಟಿ.ಸಿ.ಹೆಚ್. ಮಾಡುತ್ತಿರುವಾಗ ಮಲ್ಲೇಪುರಂ ವೆಂಕಟೇಶ್‌ರಂಥವರ ಸಹವಾಸದಿಂದ, ಪಂಪ ರನ್ನ ಕುಮಾರವ್ಯಾಸ ಕುವೆಂಪುರವರಂಥ ಅದ್ಭುತ ಲೇಖಕರ ಕೃತಿಗಳ ಪರಿಚಯವಾಯಿತು. ಇಂದಿರಾಗಾಂದಿs ಸರ್ವಾದಿsಕಾರಿ ಆಡಳಿತದ ವಿರುದ್ಧ ಜಯಪ್ರಕಾಶ ನಾರಾಯಣ ದೇಶದಾದ್ಯಂತ ಸಮರ ಸಾರಿದ್ದರು. ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಧಾರವಾಡದಲ್ಲಿ, ಲೇಖಕರು ವಿದ್ಯಾರ್ಥಿಗಳು ಬೀದಿಗೆ ಬಂದುಬಿಟ್ಟಿದ್ದರು. ಕನ್ನಡದ ಅನೇಕ ಮಹತ್ವದ ಲೇಖಕರನ್ನು ಧಾರವಾಡ ಕೈಬೀಸಿ ಕರೆಯುತ್ತಿತ್ತು. ’ಮಲ್ಲಿಗೆ ಅಲ್ಲಿಗೆ ನಾ ಬರುವೆ ಮೆಲ್ಲಗೆ, ರಸದೂಟವನು ಬಡಿಸು ನಿನ್ನ ಕವಿಗೆ’ ಎಂದು ಮುಂತಾಗಿ ಭಾವಗೀತೆಗಳನ್ನು ಬರೆಯುತ್ತಿದ್ದ ನಾನು, ಪಡಬಾರದ ಕಷ್ಟಪಟ್ಟು ಧಾರವಾಡಕ್ಕೆ ಹೋಗಿ ಆವತ್ತಿನ ನವನಿರ್ಮಾಣ ಚಳವಳಿಯಲ್ಲಿ ಭಾಗವಹಿಸಿದೆ. ಮಹಾಬಲೇಶ್ವರ ಕಾಟ್ರಹಳ್ಳಿ, ಹೊ. ಮ. ಪಂಡಿತಾರಾಧ್ಯ ಮುಂತಾದ ಗೆಳೆಯರು ಪರಿಚಯ ವಾದದ್ದು ಆ ಸಂದರ್ಭದಲ್ಲಿಯೇ; ಅನೇಕ ಚಳವಳಿಗಳ ರೂವಾರಿಯಾದ ಚಂದ್ರಶೇಖರ ಪಾಟೀಲರಿಂದ ಪ್ರತಿಭಟಿಸುವ ಪಾಠ ಕಲಿತದ್ದು ಅದೇ ಸಂದರ್ಭದಲ್ಲಿಯೇ; ಆ ಸಂದರ್ಭದಲ್ಲಿ ಆಳುವ ವರ್ಗವನ್ನು, ಮೂಢನಂಬಿಕೆಗಳನ್ನು, ಪ್ರಶ್ನಿಸಲೆಂದೇ ಪ್ರತಿಭಟಿಸಲೆಂದೇ ನಾನು- ನನ್ನಂಥ ಲೇಖಕರು ಹೊಸ ಕಸುವಿನಿಂದ ಬರೆಯಲಾರಂಬಿsಸಿದೆವು. ಈ ನೆಲದ ಪುಣ್ಯವೊ ಎಂಬಂತೆ, ಅಂದಿನ ಪ್ರಧಾನಿ ಇಂದಿರಾಗಾಂದಿsಯವರು ಭವ್ಯಭಾರತ ದೇಶವನ್ನು ತುರ್ತು ಪರಿಸ್ಥಿತಿಯ ಕಗ್ಗತ್ತಲೆಗೆ ತಳ್ಳಿ ಪುಣ್ಯ ಕಟ್ಟಿಕೊಂಡರು. ಯಾಕೆಂದರೆ ಸರ್ವಾದಿsಕಾರಿಗಳ ಬಾಯಿಗೆ ಮಣ್ಣು ಬಿದ್ದದ್ದು ಆ ಸಂದರ್ಭದಲ್ಲಿಯೇ; ಆ ತುರ್ತುಪರಿಸ್ಥಿತಿ ಸಂದರ್ಭವೇ ದೇಶದ ಲೇಖಕರ ಮೇಲ್‌ಮುಸುಗನ್ನು ಸರಿಸಿತು. ನಾನೂ ನನ್ನ ವಾರಿಗೆಯ ಅನೇಕ ಲೇಖಕರೂ, ನಮ್ಮದೇ ಆದ ರೀತಿಯಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಡ ತೊಡಗಿದೆವು. ಬರೆಯತೊಡಗಿದೆವು. ಕನ್ನಡ ಭಾಷೆಯನ್ನು ಮೊನಚಾಗಿ ಶಕ್ತಿಶಾಲಿಯಾಗಿ ಪರಿಣಾಮಕಾರಿ ಯಾಗಿ ಉಪಯೋಗಿಸುವು ದನ್ನು ನಮಗೆಲ್ಲ ಕಲಿಸಿದ್ದು, ಆ ತುರ್ತುಪರಿಸ್ಥಿತಿಯ ಸಂದರ್ಭ. ಅದೇ ಸಂದರ್ಭದಲ್ಲಿ ಧಾರವಾಡದಲ್ಲಿ ಚಂಪಾ, ಬೆಂಗಳೂರಿನಲ್ಲಿ ಪ್ರೊ. ನಂಜುಂಡಸ್ವಾಮಿ, ಪಿ. ಲಂಕೇಶ್, ಧರ್ಮ ಲಿಂಗಮ್, ಕಾಳೇಗೌಡ ನಾಗವಾರ, ಮೈಸೂರಲ್ಲಿ ರಾಮದಾಸ್, ಪೂರ್ಣಚಂದ್ರತೇಜಸ್ವಿ ಮುಂತಾದವರು, ಸ್ವಯಂಘೂಷಿತ ದೇವಮಾನವರ ಹಾಗೂ ಮೂಢನಂಬಿಕೆಗಳ ವಿರುದ್ಧ ಅರ್ಥಪೂರ್ಣವೂ ಐತಿಹಾಸಿಕವೂ ಆದ ಸಮರ ಸಾರಿದ್ದರು.
ಚಂಪಾರ ಪತ್ರಿಕಾ ಕರೆಗೆ ಓಗೊಟ್ಟು ಧಾರವಾಡಕ್ಕೆ ಓಡಿ, ದೇವಮಾನವನ ಪ್ರತಿಕೃತಿಯನ್ನು ಕತ್ತೆ ಮೇಲೆ ಕೂಡ್ರಿಸಿ ನಡೆದ ಅದ್ಭುತ ಮೆರವಣಿಗೆಯಲ್ಲಿ ಭಾಗವಹಿಸಿದ್ದು; ತದನಂತರ ಕರ್ನಾಟಕದಾದ್ಯಂತ ಅಬ್ರಹಾಂ ಟಿ. ಕೋವೂರ್‌ರವರು ಕೈಗೊಂಡ ಪ್ರವಾಸದಲ್ಲಿ ಭಾಗ ವಹಿಸಿದ್ದು; ಬಡತನದ ಕಡುಬೇಗೆಯಲ್ಲಿ ಬೆಂದದ್ದು; ಕರ್ನಾಟಕದ ಗಡಿಗೆ ಅಂಟಿ ಕೊಂಡಂತಿ ರುವ ಆಂಧ್ರದ ವಂದವಾಗಿಲಿಯಂಥ ಶಿಲಾಯುಗದ ಗ್ರಾಮದಲ್ಲಿ ಮಾಸ್ತರಿಕೆ ನೌಕರಿ ದೊರೆತದ್ದು; ತದನಂತರ ಅಲ್ಲಿನ ಜಮೀನ್ದಾರಿ ವ್ಯವಸ್ಥೆಯನ್ನು ವಿರೋದಿsಸಲೆಂದೋ ಅಥವಾ ಅದರ ಪ್ರಭಾವದಿಂದಾಗಿಯೋ ಕಸರತ್ತು ಮಾಡಿ ದೇಹ ಬೆಳಸಿದ್ದು- ಇವೆಲ್ಲವನ್ನು ನಿಮ್ಮೆದುರು ಹೇಳಿಕೊಳ್ಳಬೇಕೆನ್ನಿಸುತ್ತದೆ.
ತುರ್ತುಪರಿಸ್ಥಿತಿಯನ್ನು ವಿದಿsಸದಿದ್ದಲ್ಲಿ, ಅದರ ಕರಾಳ ಅನುಭವ ನಮಗಾಗದಿದ್ದಲ್ಲಿ, ನನ್ನಂಥ ಅನೇಕರು ಕವಿತೆ ಬರೆಯುತ್ತಿರಲಿಲ್ಲ. ’ಕುಮಾರರಾಮ ಸಾಂಗತ್ಯ’ದಲ್ಲಿ ವರ್ಣಿತವಾಗಿ ರುವ ವೇದಾವತಿ ಅಲಿಯಾಸ್ ಹಗರಿ ಪ್ರಾಂತದ ಹಳ್ಳಿಗಳಲ್ಲಿ ನಾನು ಮಾಸ್ತರಿಕೆ ಮಾಡದಿದ್ದಲ್ಲಿ, ನಾನು ಕಥೆಗಾರನಾಗಲೀ ಕಾದಂಬರೀಕಾರನಾಗಲೀ ಆಗುತ್ತಿರಲಿಲ್ಲ. ಅಲ್ಲಿನ ನಿರ್ಗತಿಕರ ಶೋಚನೀಯ ಬದುಕು ಅಬಿsವ್ಯಕ್ತಿಸಲು ನಾನು ಕಥೆ ಕಾದಂಬರಿ ಪ್ರಕಾರದ ಮೂಲಕ, ಹೊಸ ಇನ್ನಿಂಗ್ಸ್ ಆರಂಬಿsಸಬೇಕಾಯಿತು. ನಾನು ಈ ಇನ್ನಿಂಗ್ಸ್ ಆರಂಬಿsಸಿದ ಸಂದರ್ಭದಲ್ಲಿ, ಆ ಮುಗ್ಧ ಜನರಿಗೆ ಇಂಡಿಯಾದ ಬಗ್ಗೆ, ರಾಜಕೀಯ ಪರಿಸ್ಥಿತಿ ಬಗ್ಗೆ, ಪರಿಕಲ್ಪನೆಯೇ ಇರಲಿಲ್ಲ. ಆ ಭಾಗದ ದಲಿತರಿಗೆ ಅಡುಗೆ ಮಾಡುವುದಾಗಲೀ ಮೈಮುಚ್ಚು ವಂತೆ ಬಟ್ಟೆ ತೊಡುವುದರ ಬಗೆಗಾಗಲೀ ಅರಿವೇ ಇರಲಿಲ್ಲ. ಚಂದ್ರನೆಂಬ ದಲಿತನೋರ್ವ ನಾನು ಕೊಟ್ಟ ಅಂಗಿಯನ್ನು ತೊಟ್ಟುಕೊಂಡು, ಜಮೀನ್ದಾರರೆದುರು ಮೇಲ್ವರ್ಗದವರೆದುರು ಅಡ್ಡಾಡುವುದಾಗಲಿಲ್ಲ. ಅವನು ಆ ಅಂಗಿಯನ್ನು ಮಲಗುವಾಗ ತೊಡುತ್ತಿದ್ದ. ಎದ್ದೊಡನೆ ಬಿಚ್ಚಿಡುತ್ತಿದ್ದ. ಬ್ರೆಡ್ ತಿಂದರೆ ಅರಗಿಸಿಕೊಳ್ಳಲರಿಯದ, ಹಣವನ್ನು ಎಣಿಸಲು ಬಾರದ, ಶೂದ್ರ ದಲಿತರಿಂದಲೇ ತುಂಬಿರುವ ಅಂಥ ಹಳ್ಳಿಗಳೊಡನೆ, ನಾನು ತ್ರಿಕರಣಪೂರ್ವಕವಾಗಿ ಒಡನಾಡದಿದ್ದಲ್ಲಿ ಪ್ರಾಯಶಃ ಕಥೆಗಾರ ನಾಗುತ್ತಿರಲಿಲ್ಲ. ಒಂದು ಕೋಳಿ, ಒಂದು ಕ್ವಾರ್ಟರ್ ರಂ, ಒಂದು ಸಾವಿರ ರೂಪಾಯಿ ಕೊಟ್ಟರೆ ಕೊಲೆಮಾಡಲು ಹಿಂಜರಿಯದ ಮಂದಿಯ ಜೊತೆ ಒಡನಾಡದಿದ್ದಲ್ಲಿ, ನಾನು ಕಥೆಗಾರನಾಗುತ್ತಿರಲಿಲ್ಲ. ಸರಕಾರಿ ಶಾಲೆ, ರಸ್ತೆ, ನೀರಿನಂಥ ಪ್ರಾಥಮಿಕ ಸೌಲಭ್ಯಗಳಿಲ್ಲದ ಅಂಥ ಊರುಗಳಲ್ಲಿ, ಕುರಿತೋದದೆ ಇದ್ದರೂ ಬೆಳ್ಳಂ ಬೆಳಗು ಹಾಡು ಹೇಳುವ ಕವಿಗಳಿಗಾಗಲೀ, ಪುಂಖಾನುಪುಂಖವಾಗಿ ಕಥೆ ಹೇಳುವ ಕಥೆಗಾರರಿಗಾಗಲೀ ಬರವಿಲ್ಲ. ಅಂಥ ಊರುಗಳೇ ನನಗೆ ವಿಶ್ವವಿದ್ಯಾಲಯಗಳಾದವು; ಕೊಕ್ಕಬುಕ್ಕ, ನಾರಾಣಿ, ಡೋಮರಂಥ ಅನಾಗರಿಕರೇ ನನಗೆ ಪ್ರಾಧ್ಯಾಪಕರಾದರು. ವಂದವಾಗಿಲಿ, ಗೂಳ್ಯಂ, ಹೆಬ್ಬಂಟೆ, ತಾಳೂರು, ಊಳೂರು, ಉತ್ನೂರುಗಳೇ ನನಗೆ ಸಿಮ್ಲಾ ಡಾರ್ಜಿಲಿಂಗ್‌ಗಳಾದವು; ರಿಜರುಜಾಲಿ, ಲಂಟಾನ, ಕಳ್ಳಿಗಿಡ ಮರಗಳೇ ನನಗೆ ಶ್ರೀಗಂಧ, ಹೊನ್ನಿಗಳಾದವು. ಅಲ್ಲಿನ ಹಾಳು ಸುರಿಯುವ ಬಿಸಿಲ ಪ್ರದೇಶವೇ ನನಗೆ ಊಟಿಗಳಾದವು. ಐದಾರು ಕೊಲೆ ಮಾಡಿ ಬೋಧ ಸ್ವೀಕರಿಸಿ ಅವಧೂತ ಪದವಿ ಅಲಂಕರಿಸಿದ ಗುರುವನಂಥವರೇ, ನನಗೆ ರಮಣ ಮಹರ್ಷಿಗಳಾದರು.
ಇಂಥವರ ಒಡನಾಟವನ್ನು ಕಾಲು ಶತಮಾನ ಅನುಭವಿಸಿರುವ ನಾನು, ಕಾಲ್ಪನಿಕ ಕಥೆಗಾರನಲ್ಲ. ಒಂದೊಂದು ಕಥೆ ಬರೆದಾಗಲೂ ಒಂದೊಂದು ನಮೂನೆಯ ಸಂಕಟ ತಾಪತ್ರಯ ಅನುಭವಿಸಿರುವ ನನ್ನ ಮೇಲೆ, ಆಂಧ್ರದ ತೆಲಂಗಾಣದ ಶ್ರೀಕಾಕುಳಂ ಜಿಲ್ಲೆಯ ರೈತರ ಹೋರಾಟ, ಅದಕ್ಕೆ ಸಂಬಂದಿsಸಿದ ಸಾಹಿತ್ಯ ಬೀರಿರುವ ಪ್ರಭಾವ ದೊಡ್ಡದು. ಹಾಗೆಯೇ ಕನ್ನಡದ ಹಳಗನ್ನಡ ಹೊಸಗನ್ನಡದ ಅನೇಕ ಕೃತಿಗಳು ಬೀರಿರುವ ಪ್ರಭಾವ ದೊಡ್ಡದು. ದಾಸ್ತೋವಸ್ಕಿ, ಚೆಕಾಫ್, ಮಾರ್ಕ್ವೇಜ್ ರಂಥವರ ಕೃತಿಗಳು ಬೀರಿರುವ ಪ್ರಭಾವ ದೊಡ್ಡದು.
ಇಂಥ ಜಾಯಮಾನದ ನನ್ನನ್ನು ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿ ಗೌರವಿಸಿರುವ ನಿಮ್ಮಪ್ರೀತಿ ಅಬಿsಮಾನ ಬಹುದೊಡ್ಡದು. ಕುಂತಳ ನಾಡಿನ, ಬಂಧವಾಡಿಯ ಪ್ರದೇಶದ ಅನುಭವಗಳನ್ನೊಳಗೊಂಡ ನನ್ನ ಕೃತಿಗಳಿಗೆ ಸಂದ ಗೌರವವೆಂದೇ ಭಾವಿಸಿ, ಅವುಗಳ ನೆಪಮಾತ್ರದ ಲೇಖಕನಾಗಿರುವ ನಾನು ವಿನಯ ಮತ್ತು ಸಂಕೋಚದ ಮುದ್ದೆಯಾಗಿದ್ದೇನೆ. ಇದು ಕೇವಲ ರಾಜಕೀಯ ನಕ್ಷೆಯಲ್ಲಿ ಬರುವ ಬಳ್ಳಾರಿ ಜಿಲ್ಲೆಯ ಅನುಭವಗಳಿಗೆ ಮಾತ್ರ ಸಂದಿರುವ ಗೌರವವಲ್ಲ. ೧೯೫೬ರಲ್ಲಿ ಭಾಷಾವಾರು ಪ್ರಾಂತ ರಚನೆಯಾಗುವುದಕ್ಕಿಂತ ಪೂರ್ವದಲ್ಲಿ ಅಂದರೆ, ಕರ್ನೂಲು, ಅನಂತಪುರ ಪ್ರದೇಶವನ್ನೊಳ ಗೊಂಡಂತೆ ಅಖಂಡ ಬಳ್ಳಾರಿ ಜಿಲ್ಲೆಯ ಕಲೆಕ್ಟರರಾಗಿದ್ದ ಥಾಮಸ್ ಮನ್ರೋ ಕಾಲದ ಅನುಭವಗಳ ಅಬಿsವ್ಯಕ್ತಿಗೆ ಸಂದ ಗೌರವ ಇದಾಗಿದೆ ಎಂದು ವಿನಮ್ರತೆಯಿಂದ ಭಾವಿಸುತ್ತಿರುವೆ.
ಎಲ್ಲ ಇದ್ದು ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ಬಳ್ಳಾರಿ ಜಿಲ್ಲೆಗೆ ಶ್ರೀಮಂತ ಇತಿಹಾಸವಿದೆ. ಕೋಟ್ಯಂತರ ವರ್ಷಗಳ ಹಿಂದೆ ಪ್ರಪ್ರಥಮವಾಗಿ ಅನಾವರಣಗೊಂಡ ಭೂಭಾಗ ಹಂಪಿಯ ಕಿಷ್ಕಿಂಧೆಯ ಪರ್ವತಾಗ್ರ, ಸಂಗನಕಲ್ಲು, ಕಪ್ಪಗಲ್ಲು, ತೆಕ್ಕಲಕೋಟೆ ಮುಂತಾದ ಹಲವೆಡೆ ದೊರಕಿರುವ ಶಿಲಾಯುಗದ ಅವಶೇಷಗಳು, ನಮ್ಮ ಜಿಲ್ಲೆಯ ಪ್ರಾಚೀನತೆಗೆ ಸಾಕ್ಷಿ. ಕಮ್ಮಟದುರ್ಗದ ಕುಮಾರರಾಮನಂಥ ಕಲಿಗಳು, ಕುರುಗೋಡಿನ ರಾಚೋಟಿ ಮಲ್ಲನಂಥ ಮುತ್ಸದ್ದಿಗಳು, ಅಲ್ಲದೆ ಅನಂತಪುರವನ್ನು ಸ್ಥಾಪಿಸಿದ ಬಾಲದ ಹನುಮಪ್ಪನಾಯಕ ಇವರೆಲ್ಲ ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ವಿಜಯನಗರದ ಅರಸರ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ, ಓದಿದ್ದೇವೆ. ಚಿತ್ರದುರ್ಗದ ಮಾನ ಕಾಪಾಡಿದ ವೀರಮಹಿಳೆ ಒನಕೆ ಓಬವ್ವ ನಮ್ಮ ಜಿಲ್ಲೆಯವಳೆ. ಸಿಂಧವಾಡಿಯ ಪ್ರಮುಖ ಕೇಂದ್ರವಾಗಿದ್ದ ಸಿಂಧವಾಸ, ಬಲಕುಂದಿ ೩೦೦ನಾಡು, ಬಯಲಾಟ ಯಕ್ಷಗಾನ ಗಳಿಗೆ ತವರಾಗಿದ್ದ ಕುಡುತಿನಿ, ಪ್ರಮುಖ ಪಾಳ್ಯಗಳಾಗಿದ್ದ ಗುಡೇಕೋಟೆ ಮತ್ತು ಮೊನ್ನೆಮೊನ್ನೆ ಯವರೆಗೆ ನಮ್ಮ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ನಮ್ಮವೇ; ಭಾಷಾವಾರು ಪ್ರಾಂತ ವಿಂಗಡಣೆ ಯವರೆಗೆ ನಮ್ಮ ಜಿಲ್ಲೆಯಲ್ಲಿದ್ದ ಆದವಾನಿ, ಆಲೂರು, ರಾಯದುರ್ಗ ಭಾವನಾತ್ಮಕವಾಗಿ ನಮ್ಮವೆ. ಬಳ್ಳಾರಿ, ಅನಂತಪುರ ಪ್ರಾಂತದ ಕಲೆಕ್ಟರ್ ಆಗಿದ್ದ ಥಾಮಸ್ ಮನ್ರೋ ಎಂಬ ಮಹಾನುಭಾವನನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಸೂಕ್ತವೆಂದು ನನ್ನ ಭಾವನೆ. ೧೮೧೯ ರಲ್ಲಿ ಈ ಪ್ರಾಂತಕ್ಕೆ ಕಲೆಕ್ಟರ್ ಆಗಿ ಬಂದ ಆ ಪುಣ್ಯಾತ್ಮ, ಚಿಕ್ಕಪುಟ್ಟ ಪಾಳೆಗಾರರ ಜಮೀನ್ದಾರರ ಸೊಂಟಮುರಿದು, ರೈತರಿಗೆ ಭೂಮಿ ಹಂಚಿದ. ರೈತಾಪಿ ಮಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿದ. ಪತ್ತಿಕೊಂಡ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದಾಗ ಕಾಲರಾ ವ್ಯಾದಿsಗೆ ಬಲಿಯಾಗಿ, ೧೮೨೭ನೆ ಇಸ್ವಿ ಜುಲೈ ತಿಂಗಳು ೬ರಂದು ಸತ್ತ. ಆತ ಎಷ್ಟು ಜನಪ್ರಿಯ ವ್ಯಕ್ತಿಯಾಗಿದ್ದ ಎಂಬುದಕ್ಕೆ ಪತ್ತಿಕೊಂಡ, ಗುತ್ತಿ, ಅನಂತಪುರ ಪ್ರಾಂತದಲ್ಲಿ ಮನ್ರಪ್ಪ, ಮನ್ರಮ್ಮ ಎಂಬ ಹೆಸರುಗಳನ್ನು ನಾವು ಕೇಳಬಹುದು. ಆದರೆ ಥಾಮಸ್ ಮನ್ರೋ ಮಹಾಶಯನ ಬಗ್ಗೆ ಈ ಭಾಗದ ಜನರಿಗೆ ಅಷ್ಟಾಗಿ ತಿಳಿಯದು.
ಇತಿಹಾಸವನ್ನು ಮನವರಿಕೆ ಮಾಡಿಕೊಡುವುದರ ಮೂಲಕ ನಮ್ಮ ಜಿಲ್ಲೆಯ ಜನತೆಯನ್ನು ಮಾನಸಿಕವಾಗಿ ಶ್ರೀಮಂತಗೊಳಿಸುವುದು, ಈ ಮೂಲಕ ಆತ್ಮಸ್ಥೈರ್ಯ ಜೀವನೋತ್ಸಾಹ ತುಂಬುವುದು ಸಾಹಿತ್ಯದ ಮುಖ್ಯ ಜವಾಬ್ದಾರಿ ಎಂದು ನಾನು ಭಾವಿಸು ತ್ತೇನೆ. ಇತಿಹಾಸವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿ ವರ್ತಮಾನವನ್ನು ಪ್ರೀತಿಸಲಾರ. ಚರಿತ್ರೆ ಯಿಂದ ದೂರವಿರುವಾತ ಚರಿತ್ರೆಗೆ ಮರುಸೃಷ್ಟಿಯನ್ನು ನೀಡುವುದು ಸಾಧ್ಯವಿಲ್ಲ. ವರ್ತ ಮಾನದ ಪದರೊಳಗಿರುವ ಇತಿಹಾಸವನ್ನೂ ಇತಿಹಾಸದ ಗೊಂಗಡಿಯೊಳಗೆ ಹಾಸುಹೊಕ್ಕಾಗಿ ರುವ ವರ್ತಮಾನದ ಎಳೆಗಳನ್ನೂ ಪತ್ತೆಹಚ್ಚುವುದು, ಅದರ ಬಗ್ಗೆ ಪುನರವಲೋಕನ ಮಾಡುವುದು ಮತ್ತು ಅದನ್ನು ಪರಿಷ್ಕರಿಸಿ ಪುನರ್‌ರೂಪಿಸುವುದು ಸೃಜನಶೀಲ ಕ್ರಿಯೆಯ ಮುಖ್ಯ ಕರ್ತವ್ಯವಾಗಿದೆ. ಹಾಗೆಯೇ ಇತಿಹಾಸವನ್ನು ಸಾಹಿತ್ಯದ ಮೂಲಕ, ಸಾಹಿತ್ಯವನ್ನು ಇತಿಹಾಸದ ಮೂಲಕ ಅರ್ಥ ಮಾಡಿಕೊಳ್ಳ ಬೇಕಿದೆ. ಇತಿಹಾಸವೆಂಬ ಮೌನವನ್ನು, ನಿಗೂಢತೆಯನ್ನು ಸಾಹಿತ್ಯದ ಮೂಲಕ ಭೇದಿಸಬೇಕು ಮತ್ತು ಪುನರ್‌ಸೃಷ್ಟಿಸಬೇಕು. ಇತಿಹಾಸದ ದುರ್ಬೀನ ಮೂಲಕ ವರ್ತಮಾನವನ್ನು ನೋಡುವುದು ಮುಖ್ಯ. ಇತಿಹಾಸದ ಮೂಲಕ ಜಾತಿ ವ್ಯವಸ್ಥೆಯ, ವರ್ಗವ್ಯವಸ್ಥೆಯ ವಿವಿಧ ಸ್ತರಗಳ ಸಂವೇದನೆಗಳನ್ನು, ಅನುಭವ ಗಳನ್ನು ಲೇಖಕ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಶತಮಾನಗಳ ವಸ್ತು, ಇತಿಹಾಸ ಪುರಾಣಗಳೇ ಆಗಿವೆ ಎಂಬುದನ್ನು ಮರೆಯಬಾರದು. ಅಂದಿನ ಕವಿಗಳು ತಮಗೆ ಆಶ್ರಯವಿತ್ತಿದ್ದ ರಾಜಾದಿsರಾಜರ, ಅವರ ಆರಾಧ್ಯ ದೈವಗಳ ಪುರಾಣಗಳನ್ನು, ಕಾವ್ಯಗಳ ಮೂಲಕ ಪುನರ್‌ಸೃಷ್ಟಿಸುವುದರ ಮೂಲಕವೇ ತಮಗಿದ್ದ ಸಾಮಾಜಿಕ ಎಚ್ಚರವನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸುವ ಯತ್ನ ಮಾಡಿದರು ಎಂಬುದನ್ನು ಮರೆಯಬಾರದು. ಹಳೆ ಕಾವ್ಯಗಳ ಕವಿಗಳ ಜೊತೆಗೆ, ಶಾಸನಗಳ ಮೂಲಕ ಶಾಸನ ಕವಿಗಳ ಬಗೆಗೂ ಆಲೋಚಿಸಬೇಕು.
ಉದಾಹರಣೆಗೆ ಇಲ್ಲೇ ಹತ್ತಿರದಲ್ಲಿರುವ ಕುರವತ್ತಿಯಲ್ಲಿ, ೧೧ನೇ ಶತಮಾನದ ಆಜುಬಾಜಿನಲ್ಲಿದ್ದ ಗುಣಪಾರ್ಯ, ಶ್ರೀಕಂಠಸೂರಿ, ಮೈಲಾರದಲ್ಲಿದ್ದ ನಾಗವಾರ ಮುಂತಾದ ಶಾಸನ ಕವಿಗಳನ್ನು ಅಭ್ಯಾಸ ಮಾಡುವ ಅಗತ್ಯವಿದೆ. ’ಧಾರಿಣಿಯೊಳು ಗುಲಗೋಜನರಿವ ನೆಂದೆಳೆ ಪೊಗಳ್ಗುಂ’ ಎಂದು ಶಾಸನಕವಿ ಶ್ರೀಕಂಠ ಸೂರಿ ಕುರವತ್ತಿಯ ಶಾಸನದಲ್ಲಿ ಪ್ರಸ್ತಾಪಿಸಿದ್ದಾನೆ. ಅಂದರೆ ಕುರವತ್ತಿಯಲ್ಲಿ ಗುಲಗೋಜನೆಂಬ ವಾಸ್ತುಶಿಲ್ಪ ಶಾಸ್ತ್ರಜ್ಞನಿದ್ದ. ಅವನು ಅಲ್ಲಿನ ಅಬಿsನವ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿದ. ಮೈಲಾರದ ಸೋಮೇಶ್ವರ ದೇವಾಲಯದ ಹೆಬ್ಬಾಗಿಲ ಬಳಿ ಇರುವ ಶಾಸನದ ಕವಿ, ಪ್ರತಿಭಾಸಂಪನ್ನನಾದ ನಾಗವರ್ಮ ಅಥವಾ ನಾಗವಾರ. ಅವನು ಆ ಕಾಲದ ಈ ಪ್ರದೇಶದ ಜನರ ಔದಾರ್ಯವನ್ನು ವರ್ಣಿಸಿದ್ದಾನೆ.
ಅಂದರೆ ನಾನೀ ಸಂದರ್ಭದಲ್ಲಿ ಇಂಥವರನ್ನು ಯಾಕೆ ಪ್ರಸ್ತಾಪಿಸುತ್ತಿರುವೆ ನೆಂದರೆ, ನಮ್ಮ ಪರಂಪರೆ ಬದುಕಿದ ಸಾಮಾಜಿಕ ವ್ಯವಸ್ಥೆಯೊಳಗೆ ಎಂಥೆಂಥ ಪ್ರತಿಭೆಗಳಿದ್ದವು ಎಂಬುದನ್ನು ನೆನಪಿಸುವ ಕಾರಣಕ್ಕಾಗಿ; ಐತಿಹಾಸಿಕ-ಧಾರ್ಮಿಕ-ಪೌರಾಣಿಕ ಮಹಾವ್ಯಕ್ತಿಗಳಿಂದ ನಮ್ಮ ಕವಿಗಳು-ಶಾಸನಕವಿಗಳು ಸ್ಫೂರ್ತಿ ಪಡೆದು, ಯಾವ ರೀತಿ ಅಬಿsವ್ಯಕ್ತಿಸಲು ಪ್ರಯತ್ನಿಸಿದರು ಎಂಬ ಕಾರಣಕ್ಕಾಗಿ; ಆಗಿನ ಸಾಮಾಜಿಕ ವ್ಯವಸ್ಥೆ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳು ವುದಕ್ಕಾಗಿ; ಈ ನೆಲದ ಮೇಲೆ ಇಂಥಿಂಥವರು ಇದ್ದರು ಎಂದು ಸ್ಮರಿಸುವುದು, ಈ ಮೂಲಕ ಲೇಖಕ ತನ್ನ ನೆಲದ ಬಗ್ಗೆ ಅಬಿsಮಾನ ತಾಳುವುದು ಮುಖ್ಯ. ನಮ್ಮ ಪರಂಪರೆಯನ್ನೂ ಇತಿಹಾಸವನ್ನೂ ಆಧುನಿಕವಾಗಿ ಹೇಗೆ ನೋಡಬಹುದು, ಹೇಗೆ ಪುನರ್ ವಿಮರ್ಶಿಸಬಹುದು, ಪುನರ್ ರೂಪಿಸಬಹುದು -ಎಂಬುದರ ಕಡೆ ಇಂದಿನ ಲೇಖಕ ಆಲೋಚಿಸುವುದು ಮುಖ್ಯ. ಜೊತೆಗೆ ನಮ್ಮ ಜನಪದ ಸಾಹಿತ್ಯವನ್ನೂ, ಮೌಖಿಕ ಪರಂಪರೆ ಯನ್ನೂ ಸಹ; ಹಳೆ ಬೇರಿನ ಸಹಾಯವಿರದಿದ್ದಲ್ಲಿ ಹೊಸಚಿಗುರಿಗೆ ಅರ್ಥವೇ ಇರುವುದಿಲ್ಲ. ಅಂತಃಕರಣ ಸ್ಥಾಯಿಯಾದ ನಮ್ಮ ಹಳಗನ್ನಡ ಸಾಹಿತ್ಯ ಅರ್ಥಮಾಡಿಕೊಳ್ಳದ ಹೊರತು, ಅರಗಿಸಿಕೊಳ್ಳದ ಹೊರತು, ಹೊಸ ಸೃಷ್ಟಿಕಡೆ ಕೈ ಚಾಚುವುದು ಎಷ್ಟರಮಟ್ಟಿಗೆ ಸರಿ?ಚಂಪೂಪ್ರಕಾರವನ್ನು ಸಾರಾಸಗಟಾಗಿ ತಿರಸ್ಕರಿಸಿ, ಅದರ ಸಂಸ್ಕೃತಭೂಯಿಷವಿ ವಾತಾವರಣ ದಿಂದ ಹೊರಬಂದು, ರಗಳೆ- ಷಟ್ಪದಿ ಪ್ರಕಾರಗಳ ಮೂಲಕ ಹೊಸವಾತಾವರಣವನ್ನು ಆವಿಷ್ಕರಿಸಿದ ಹರಿಹರ, ರಾಘವಾಂಕ, ಕುಮಾರವ್ಯಾಸರಂಥ ಮಹಾನ್ ಕವಿಗಳಿಗೆ ಜನ್ಮ ನೀಡಿದ ಈ ನೆಲದಲ್ಲಿಯೇ, ನಾವು ನೀವೆಲ್ಲ ಜನ್ಮ ಪಡೆದಿದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಮನುಜರ ಮೇಲೆ, ಸಾವವರ ಮೇಲೆ, ಕನಿಷವಿರ ಮೇಲೆ ಕಾವ್ಯಗಳನ್ನು ಸೃಷ್ಟಿಸಿದವರು, ನಮ್ಮ ನಿಮ್ಮ ಪೂರ್ವಿಕರ ನಡುವೆ ಇದ್ದರು. ಒಬ್ಬ ಬೆಸ್ತ, ಒಬ್ಬ ಒಕ್ಕಲಿಗ, ಒಬ್ಬ ಕುಂಬಾರ, ಒಬ್ಬ ಅಸಗರಂಥವರನ್ನು ತಮ್ಮ ಕಾವ್ಯಗಳಿಗೆ ಕಥಾನಾಯಕರನ್ನಾಗಿ ಮಾಡಿಕೊಂಡಿದ್ದಂಥವರು; ಆ ಮೂಲಕ ಇಡೀ ಶ್ರಮಿಕವರ್ಗದ ಬಗ್ಗೆ ಸಶಕ್ತವಾಗಿ ಮಾತಾಡಿದಂಥವರು; ಅಡ್ಡಾಡಿದ ಈ ಕೆಂಪು ನೆಲದ ಮೇಲೆ ಹತ್ತು ಜಿಲ್ಲಾ ಸಮ್ಮೇಳನಗಳೂ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳೂ ನಡೆದಿರುವುದು, ಯಾವುದೇ ಲೇಖಕನನ್ನು ರೋಮಾಂಚನ ಗೊಳಿಸುವಂಥ ಸಂಗತಿ. ಸಾಹಿತ್ಯ ಸಮ್ಮೇಳನಗಳಲ್ಲಿ ಹಾಜರಿರುವ ಕನ್ನಡಿಗರು, ಕನ್ನಡ ಸಾಹಿತ್ಯ ಪರಂಪರೆ ಪ್ರವಾಹದ ಒಂದು ಭಾಗವಾಗುವುದು ಬಹುಮುಖ್ಯ. ಸಾಹಿತ್ಯ ಸಮ್ಮೇಳನದ ಪುಸ್ತಕದ ಅಂಗಡಿಗಳಲ್ಲಿ ಕಾಲಿರಿಸುವ ಸಾಹಿತ್ಯಾಬಿsಮಾನಿ ಪಾಕಶಾಸ್ತ್ರಕ್ಕೆ ಸಂಬಂದಿsಸಿದ ಅಥವಾ ಕಂಪ್ಯೂಟರ್ ವಿeನಕ್ಕೆ ಸಂಬಂದಿsಸಿದ ಪುಸ್ತಕಗಳನ್ನು ಖರೀದಿಸುವುದ ಕ್ಕಿಂತ ಮೊದಲು, ರಾಘವಾಂಕನ ’ಹರಿಶ್ಚಂದ್ರ ಕಾವ್ಯ’ವನ್ನು ಖರೀದಿಸಿದನೆಂದರೆ, ಸಮ್ಮೇಳನದ ಸಾಹಿತ್ಯಿಕ ಸಂವಾದ ಸಾರ್ಥಕವಾದಂತೆಯೇ ಲೆಕ್ಕ. ಹಾಗೆಯೇ ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್‌ರವರ ಕೃತಿಗಳು ಪುಸ್ತಕದಂಗಡಿಗಳಲ್ಲಿ ಮೊದಲ ಸಾಲಲ್ಲಿ ಎದ್ದುಕಾಣುವಂತಿದ್ದರೆ, ಆ ಸಮ್ಮೇಳನದ ಸಂವಾದಗಳು ಸಾರ್ಥಕವಾದಂತೆಯೇ. ಇವೆಲ್ಲ ಸಫಲವಾಗಬೇಕಾದಲ್ಲಿ ಸಮ್ಮೇಳನಗಳು ಲೇಖಕನನ್ನು ಓದುಗ ನೊಂದಿಗೆ, ಓದುಗನನ್ನು ಲೇಖಕನೊಂದಿಗೆ, ಲೇಖಕ ಓದುಗರಿಬ್ಬರನ್ನೂ ಸಮಾಜದೊಂದಿಗೆ ಬೆಸೆಯುವ ಕೆಲಸವನ್ನು ಮಾಡಬೇಕು ಎಂಬುದು ನನ್ನ ಅಬಿsಪ್ರಾಯ. ಹೀಗಾದಾಗ ಯಾವುದೇ ಒಂದು ಸಾಹಿತ್ಯಿಕ ಕೃತಿ ಆಂಟೀನಾ ಆಗುತ್ತದೆ, ರಿಸೀವರ್ ಆಗುತ್ತದೆ. ಫ್ರಾನ್ಸ್, ರಷ್ಯಾ, ಚೀನಾ, ಲ್ಯಾಟಿನ್ ಅಮೇರಿಕ, ಆಪಿsಕಾ ರಾಷ್ಟ್ರಗಳಲ್ಲಿನ ಸಾಹಿತ್ಯವು, ಹೊಸ ಸಮಾಜದ ನಿರ್ಮಾಣಕ್ಕೆ ಸಂಬಂದಿsಸಿ ದಂತೆ ಯಾವ ಮೌಲಿಕ ಪಾತ್ರ ವಹಿಸಿತೋ, ಅಂಥ ಬದಲಾವಣೆ ನಮ್ಮ ಸಾಮಾಜಿಕ ಪರಿವೇಷ ದೊಳಗೂ ಆಗುತ್ತದೆ ಎಂಬುದು ನನ್ನ ಭಾವನೆ.
ಇಂಥ ಅಪರೂಪದ ಆಲೋಚನೆಗೆ, ಸೃಷ್ಟಿಗೆ ಅಗತ್ಯವಾದ ಸಾಮಾಜಿಕ ಸಾಹಿತ್ಯಿಕ ಸಂಪನ್ಮೂ ಲಗಳಿಗೆ ಭಾರತೀಯ ಸಂದರ್ಭದಲ್ಲಿ ಕೊರತೆ ಇಲ್ಲ. ಇಲ್ಲಿನ ಇತಿಹಾಸಕ್ಕೆ ಸಂಬಂದಿsಸಿದ ಅವಶೇಷಗಳು, ಅತ್ಯದ್ಭುತ ಸ್ಮಾರಕಗಳು, ಪುರಾಣ ಪುಣ್ಯ ಕಥೆಗಳು, ಬೆಟ್ಟಗುಡ್ಡ ನದಿಗಳಿತ್ಯಾದಿ ಗಳು, ಯಾವ ರೀತಿ ಅಂತಾರಾಷ್ಟ್ರೀಯವಾಗಿ ವಿಸ್ಮಯಗೊಳಿಸುತ್ತಿರುವವೋ; ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಜಾತಿವ್ಯವಸ್ಥೆ ವರ್ಗವ್ಯವಸ್ಥೆಗಳೂ ಸಾಮಾಜಿಕ ವ್ಯತ್ಯಾಸಗಳೂ ಅಂತಾರಾಷ್ಟ್ರೀಯವಾಗಿ ಅಚ್ಚರಿಪಡಿಸುತ್ತವೆ. ನಮ್ಮಲ್ಲಿನ ಅಸಮಾನತೆಯೇ, ಅಂತಾರಾಷ್ಟ್ರೀಯ ಮಟ್ಟದ ಕಾಂಗರೂ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಭಾರತಾಂಬೆಯ ತನುಜಾತೆ ಯಾದ ಕರ್ನಾಟಕವಾಗಲೀ ಭಾರತಾಂಬೆಯ ಅಸಂಖ್ಯಾತ ಮೊಮ್ಮಕ್ಕಳ ಪೈಕಿ ಒಂದಾದ ನಮ್ಮ ಬಳ್ಳಾರಿ ಜಿಲ್ಲೆಯಾಗಲೀ ಹೊರತಾಗಿಲ್ಲ ಎಂಬುದು, ಯಾವುದೇ ಲೇಖಕನಿಗೆ ಸಂತೋಷತರುವಂಥ ವಿಷಯ. ’ಸಂತೋಷ’ ಎಂಬ ಪದವನ್ನು ನಾನಿಲ್ಲಿ ಯಾಕೆ ಸೇರಿಸು ತ್ತಿರುವೆನೆಂದರೆ, ಸೃಜನಶೀಲ ಕ್ರಿಯೆಗೆ ಅಬಿsವ್ಯಕ್ತಿ ಆಲೋಚನಾಕ್ರಮಕ್ಕೆ ಪೂರಕವಾದ ಸಾಮಾಜಿಕ ಪರಿಸರ ನಮ್ಮ ಜಿಲ್ಲೆಯಲ್ಲಿದೆ. ಯಾವ ರೀತಿ ರಷ್ಯಾದ ತಳಮಳ ಅನುಭವಿಸ ದಿದ್ದಲ್ಲಿ ಒಬ್ಬ ಮನುಷ್ಯ ದಾಸ್ತೋವಸ್ಕಿಯಾಗಲೀ ಮ್ಯಾಕ್ಸಿಂ ಗಾರ್ಕಿಯಾಗಲೀ; ಯಾವ ರೀತಿ ಆಪಿsಕಾದ ದಾಸ್ಯ ಅನುಭವಿಸದಿದ್ದಲ್ಲಿ ಒಬ್ಬ ಮನುಷ್ಯ ವೊಲೆಸೊಯಿಂಕನಾಗಲೀ ಚಿನುವಾ ಅಚುಬೆಯಾಗಲೀ; ಯಾವ ರೀತಿ ಅರ್ಜೈಂಟೈನಾ, ಚಿಲಿ, ಕ್ಯೂಬಾ ಮೆಕ್ಸಿಕೋಗಳ ಅಮಾನುಷವಾದ ಜೀತವ್ಯವಸ್ಥೆ ಯನ್ನು ಅನುಭವಿಸದಿದ್ದಲ್ಲಿ ಒಬ್ಬ ಮನುಷ್ಯ ಗ್ಯಾಬ್ರಿಯಲ್ ಮಾರ್ಕ್ವೆಜ್‌ನಾಗಲೀ ಚೆಗುವಾರಾನಾಗಲೀ ಆಗುತ್ತಿರಲಿಲ್ಲವೋ, ಅದೇ ರೀತಿ, ಈ ಜಿಲ್ಲೆಯ ಹಗರಿಸಾಲಿನ ಕುಗ್ರಾಮಗಳಲ್ಲಿ ಜೀವಿಸದಿದ್ದಲ್ಲಿ, ಒಬ್ಬ ಮನುಷ್ಯನಾದ ನಾನು, ಕುಂ. ವೀರಭದ್ರಪ್ಪನಾಗುತ್ತಿರಲಿಲ್ಲ. ರಷ್ಯಾ, ಚೀನಾ, ಲ್ಯಾಟಿನ್ ಅಮೆರಿಕ ಮತ್ತು ಆಪಿsಕನ್ ರಾಷ್ಟ್ರಗಳಲ್ಲಿರುವಂಥ ಸಾಹಿತ್ಯಿಕ ಸಂಪನ್ಮೂಲಗಳೂ ಸಾಮಾಜಿಕ ವ್ಯವಸ್ಥೆಯೂ ನಮ್ಮ ಜಿಲ್ಲೆಯ ಪೂರ್ವಭಾಗದ ಗ್ರಾಮಗಳಲ್ಲಿವೆ. ಆ ಪ್ರದೇಶದಲ್ಲಿರುವ ಭಾಷೆ, ಆ ಭಾಷೆ ಯನ್ನಾಡುವ ಮಂದಿ, ಆ ಮಂದಿ ಬದುಕುತ್ತಿರುವ ಜೀವನಶೈಲಿ, ಜೀವನೋತ್ಸಾಹ -ಈ ಎಲ್ಲವೂ ನಿಜವಾದ ಯುನಿವರ್ಸಿಟಿಯ ಫ್ಯಾಕಲ್ಟಿಗಳೇ! ಆ ಎಲ್ಲ ಫ್ಯಾಕಲ್ಟಿಗಳು ನನ್ನಂಥ ಮನುಷ್ಯನನ್ನು ಲೇಖಕನನ್ನಾಗಿ ಪರಿವರ್ತಿಸು ತ್ತವೆ. ನನ್ನಂಥ, ನನಗಿಂತ ಮಿಗಿಲಾದ ನೂರಾರುಮಂದಿ ಮನುಷ್ಯರನ್ನು ಲೇಖಕರನ್ನಾಗಿ ಮಾಡುವ ಶಕ್ತಿ, ಮಾಂತ್ರಿಕ ಗುಣ, ನಮ್ಮ ಜಿಲ್ಲೆಯ ಮಣ್ಣಿನದು. ಅದಕ್ಕಾಗಿ ಈ ನನ್ನ ಜಿಲ್ಲೆಗೆ ಕೈ ಎತ್ತಿ ಮುಗಿಯುವೆ.
ನಾನು ನನ್ನ ಜಿಲ್ಲೆಯ ಸಾಹಿತ್ಯ ಪ್ರವಾಹದ ಒಂದು ಬಿಂದು ಮಾತ್ರ. ಲಿಖಿತ ಮತ್ತು ಮೌಖಿಕ ಪರಂಪರೆಯ ನೂರಾರು ಮಂದಿ ಸೃಜನಶೀಲ ಪ್ರತಿಭೆಗಳಿಗೆ ಜನ್ಮ ನೀಡುತ್ತಿರುವ ಗಂಗೋತ್ರಿ, ನಾಡಿನ ಎಲ್ಲ ಕಡೆಗಿರುವಂತೆಯೆ ನನ್ನ ಜಿಲ್ಲೆಯಲ್ಲೂ ಇದೆ- ಎಂದು ಆತ್ಮವಿಶ್ವಾಸ ದಿಂದ ಹೇಳಬಯಸುತ್ತೇನೆ. ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸರೇ ಮೊದಲಾದ ಆದಿವಂದ್ಯರಿಂದ ಆರಂಭಗೊಂಡ ಸಾಹಿತ್ಯ ಸ್ರವಂತಿಯ ಶಾಖೋಪಶಾಖೆಗಳು, ನಮ್ಮ ಜಿಲ್ಲೆಯ ಮೂಲೆಗೂ ಹರಡಿವೆ. ನಮ್ಮ ಜಿಲ್ಲೆಯ ಗ್ರಾಮೀಣ ಅಕ್ಷರಸ್ಥ, ಕಾವ್ಯವನ್ನು ಗಂಟಲಲ್ಲಿ ಪ್ರತಿಷಾವಿಪಿಸಿಕೊಂಡು ಬೀಗುತ್ತಿದ್ದಾನೆ. ಸಾಹಿತ್ಯದ ಪರಿಭಾಷೆಯಲ್ಲಿ ಮಾತಾಡಲು ಪ್ರಯತ್ನಿಸುತ್ತಿದ್ದಾನೆ. ಗ್ರಾಮೀಣ ನೋವು ನಲಿವುಗಳನ್ನು ಸಾರ್ವತ್ರೀಕರಿಸಲು ಪ್ರಯತ್ನಿಸುತ್ತಿ ದ್ದಾನೆ. ನನ್ನ ಜಿಲ್ಲೆಯ ಲೇಖಕ, ಎಲ್ಲೂ ಬೌದ್ಧಿಕ ಕಸರತ್ತುಗಳನ್ನು ತೋರಿಸುತ್ತಿಲ್ಲ. ಪೋಜು ಕೊಡುತ್ತಿಲ್ಲ. ಕೆಲವು ಕಡೆ ಯಶಸ್ವಿಯಾಗಿದ್ದಾನೆ; ಕೆಲವು ಕಡೆ ವಿಫಲನಾಗಿದ್ದಾನೆ. ಸೃಜನಶೀಲತೆಗೆ ಸಂಬಂಧ ಪಟ್ಟಂಥ ಹೊಸ ಹೊಸ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾನೆ. ಸಚಿನ್‌ನಂತೆ ಸಿಕ್ಸರ್ ಎತ್ತಲು ಹೋಗಿ, ಔಟಾಗಿ ಪೆವಿಲಿಯನ್ ಕಡೆ ವಾಪಸ್ಸಾಗುತ್ತಿದ್ದಾನೆ.
ಶತಶತಮಾನಗಳ ಕಾಲ ಅಕ್ಷರeನದ ಸವಲತ್ತುಗಳಿಂದ ವಂಚಿತಗೊಂಡಂಥ ಪರಿಸರ ದಿಂದ ಬಂದಂಥ ವ್ಯಕ್ತಿ, ಅಕ್ಷರದ ಕಂದೀಲು ಹಿಡಿದು ಬರ್ಬರ ವರ್ತಮಾನ ನೋಡಿ, ಎಲ್ಲರಂತೆ ತಾನೂ ದಿಗ್ಭ್ನ್ರಮೆಗೊಂಡೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ! ಕೆರಳಿದೆ. ರಟ್ಟೆಯಲ್ಲಿಲ್ಲದ ಶಕ್ತಿಯನ್ನು ಆವೇಶದಿಂದ ಪೆನ್ನಿಗೆ ಆವಾಹಿಸಿಕೊಂಡೆ. ನಾಶವಾಗಿರುವ ಸಾಮಾಜಿಕ ಸೌಂದರ್ಯದ ಬಗ್ಗೆ, ಅಸಮಾನತೆ ಕುರಿತು ನವ್ಯೋತ್ತರದ ಸಿದ್ಧಮಾಪನಗಳ ಸಹಾಯದಿಂದ ಬರೆಯತೊಡಗಿದೆ. ಫ್ರಾಯ್ಡ್‌ನ ರಿಪ್ಲೇಸ್‌ಮೆಂಟ್ ಸಿದ್ಧಾಂತದಂತೆ, ಬಡತನ ನೋವು ಸಂಕಟಗಳಿಗೆ ಕವಿತೆಯ ಅಬಿsವ್ಯಕ್ತಿ ಕೊಡಲು ಪ್ರಯತ್ನಿಸಿದೆ. ಕೈಗೆಟುಕಿದ ಭಾಷೆಯನ್ನು ಶಾಪಗ್ರಸ್ತವಾಗಿ ಉಪಯೋಗಿಸತೊಡಗಿದೆ. ಸುಡುಸುಡುವ ಪೆಂಡೆ ಪೆಂಡೆ ಕವಿತೆಗಳನ್ನು ಕಂಕುಳಲ್ಲಿಟ್ಟುಕೊಂಡು ಕವಿಸಮ್ಮೇಳನಗಳಲ್ಲಿ ವಾಚಿಸತೊಡಗಿದೆ. ನಮ್ಮ ಈ ಕವಿ ವಯೋ ಸಹಜ ಭಾವನೆಗಳಿಗೆ ದೈಹಿಕವಾಗಿ ಮಾನಸಿಕವಾಗಿ ಸ್ಪಂದಿಸಿದ ನವ್ಯೋತ್ತರ ಸಂದರ್ಭದಲ್ಲಿ, ಎರಡು ಮೂರು ದಶಕಗಳ ಹಿಂದೆ ಹುಟ್ಟಿರುವ ನನ್ನ ಪ್ರೀತಿಯ ಈ ಜ್ವಾಲಾಮುಖಿಯಂಥ ಬರಹಗಾರ, ನಾಡಿನ ಹಲವುಕಡೆ ಇರುವಂತೆ ನನ್ನ ಈ ಜಿಲ್ಲೆಯಲ್ಲೂ ಇದ್ದಾನೆ. ಸಾಹಿತ್ಯಿಕ ಮತ್ತು ಸಾಮಾಜಿಕ ಚಳವಳಿಗಳು, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮ ಪ್ರೀತಿಯ ಯುವ ಬರಹಗಾರನ ಮೇಲೆ ಗಾಢ ಪರಿಣಾಮ ಬೀರಿವೆ.
ಇಂದಿನ ಸಂದರ್ಭದಲ್ಲಿ ಸಾಹಿತ್ಯದ ಸೃಷ್ಟಿ ಪ್ರತಿಭೆಗೆ ಸಂಬಂಧಪಟ್ಟಿದ್ದು. ಸಾಹಿತ್ಯ ಮುಖ್ಯವಾಗಿ ಸಾಮಾಜಿಕವಾದದ್ದು. ’ಅಪಾರೇ ಕಾವ್ಯಸಂಸಾರೇ ಕವಿರೇವಃ ಪ್ರಜಾಪತಿಃ’ ಎಂಬ ’ಧ್ವನ್ಯಾಲೋಕ’ದ ಮಾತಿನಂತೆ, ಸಾಹಿತಿಯೇ ನಿಜವಾದ ಸೃಷ್ಟಿಕರ್ತ. ’ಯಥಾಸ್ಮೈರೋಚತೇ ವಿಶ್ವಂ, ತಥೇದಂ ಪರಿವರ್ತತೆ.’ ಅವನು ವಿಶ್ವದ ಪರಿವರ್ತನೆಯನ್ನು ತನ್ನ ಸಾಹಿತ್ಯದಲ್ಲಿ ಪ್ರತಿಬಿಂಬಿಸುತ್ತಾನೆ. ಆದ್ದರಿಂದ ಸಾಹಿತ್ಯ ಸೃಷ್ಟಿಗೆ ಮೂಲಧನವಾದ ಪ್ರತಿಭೆಯನ್ನು ರೂಡಿsಸಿ ಕೊಳ್ಳುವುದು ಮುಖ್ಯ. ಆಧುನಿಕ ಆಲೋಚನೆಗಳ ಮೂಲಕ ಪುರಾಣ ಮತ್ತು ಇತಿಹಾಸಗಳನ್ನು ಶೋದಿsಸುವ ಅಗತ್ಯ ತುಂಬ ಇದೆ. ರೂತ್ವೆನ್ ಹೇಳುವಂತೆ ಲೇಖಕ ಕೇವಲ ’ಲಿವಿಂಗ್ ಫಾಸಿಲ್ಸ್’ ಆಗಬಾರದು. ಬೌದ್ಧಿಕ ಹೆಳವನಾಗಬಾರದು. ವರ್ತಮಾನದಲ್ಲಿದ್ದು ಕೊಂಡೇ ಪುರಾಣ, ಇತಿಹಾಸಗಳಲ್ಲಿ ವಿಹರಿಸಬೇಕು. ನಮ್ಮ ಸೃಜನಶೀಲಕ್ರಿಯೆಗೆ ಚಲನಶೀಲತೆಯ ನೋಟವನ್ನು ಅಳವಡಿಸಬೇಕು. ಫ್ರೆಂಚ್ ಆದರ್ಶಗಳಿಗೆ ಒತ್ತುಕೊಟ್ಟ ಜರ್ಮನ್ ಕವಿ ಹೆನ್ರಿಕ್ ಹೈನ್, ತನ್ನನ್ನು ತಾನು ದಿsರಯೋಧನೆಂದು ಕರೆದುಕೊಂಡಿದ್ದು ಇಂದು ಹೆಚ್ಚು ಪ್ರಸ್ತುತವಾಗಿ ಕಾಣುತ್ತದೆ. ಸಾಹಿತ್ಯವು ಸಾಮಾಜಿಕ ಬದಲಾವಣೆಗೆ ಸಂಬಂದಿsಸಿ ದಂಥ ಪ್ರಮುಖ ಆಯುಧವಾಗಬೇಕು. ’ಕಾವ್ಯಾನಂದವು ಬ್ರಹ್ಮಾನಂದದ ಸಹೋದರ’ ಎಂಬ ಮಾತು ವರ್ತಮಾನ ಸಂದರ್ಭದಲ್ಲಿ ನಮ್ಮಂಥವರಿಗೆ ಅನ್ವಯಿಸುವುದಿಲ್ಲ. ನಾವು ಬರೆಯುವ ಸಾಹಿತ್ಯ, ಶ್ರೀಮಂತರ ಪ್ರತಿಷೆವಿಯ ಪ್ರದರ್ಶನದ ಅಥವಾ ಶೋಕೇಸಿನ ಆಲಂಕಾರಿಕ ವಸ್ತುವಾಗ ಬಾರದು. ಸಾಹಿತ್ಯಾಧ್ಯಯನ, ಕೌಶಲ್ಯ, ಸಾಮಾಜಿಕ ಪ್ರeಯ ಜೊತೆಗೆ ಮನೋವಿeನ, ತಳಿಶಾಸ್ತ್ರ, ಜೀವವಿeನ, ಪರಿಸರ ವಿeನ, ಅಪರಾಧಶಾಸ್ತ್ರ- ಇತ್ಯಾದಿ eನಗಳ ಶಾಖೋಪಶಾಖೆಗಳನ್ನು ಅಧ್ಯಯನ ಮಾಡುವ ಅಗತ್ಯ ತುಂಬ ಇದೆ. ಸಾವಿರ ಕಣ್ಣು, ಸಾವಿರ ಕಿವಿ, ಸಾವಿರಸಾವಿರ ಬಾಯಿಗಳ ಮೂಲಕ ಲೇಖಕ ಮಾತಾಡುವ ಅಗತ್ಯ ತುಂಬ ಇದೆ.
ಲೇಖಕ ವಿರಾಟ್ ಸ್ವರೂಪ ಪ್ರಕಟಿಸುವುದಕ್ಕೆ ಭಾರತೀಯ ವರ್ತಮಾನ ಸಂದರ್ಭ ಹೇಳಿ ಮಾಡಿಸಿದಂತಿದೆ. ಮೂಲಭೂತವಾದಿಗಳು ಹಿಂದೆಂದಿಗಿಂತ ಹೆಚ್ಚು ವಿಜೃಂಬಿsಸುತ್ತಿ ದ್ದಾರೆ. ಅಲ್ಪಸಂಖ್ಯಾತರ ನೆಮ್ಮದಿಗೆ ಅಗ್ನಿಸ್ಪರ್ಶ ಮಾಡಲಾಗುತ್ತಿದೆ. ಪುರಾಣವನ್ನು ಭೂತವನ್ನು ಪುನರ್ ಪ್ರತಿಷಾವಿಪಿಸುವುದರ ಮೂಲಕ ವರ್ತಮಾನವನ್ನು ಕುರೂಪಗೊಳಿಸ ಲಾಗುತ್ತಿದೆ. ಮಾನವೀಯತೆಯನ್ನು ಗಲ್ಲಿಗೇರಿಸಲು ಎಲ್ಲ ಸಿದ್ಧತೆಯನ್ನು ಮಾಡಲಾಗುತ್ತಿದೆ. ಶ್ರಮ ಮತ್ತು ಬೆವರನ್ನು ವ್ಯವಸ್ಥಿತವಾಗಿ ದರೋಡೆ ಮಾಡುವ ನೀಚ ಕೃತ್ಯಗಳಿಗೆ, ಪಾವಿತ್ರ್ಯದ ಲೇಪನ ಬಳಿಯಲಾಗುತ್ತಿದೆ. ನೂರಾರು ದಾಸ್ತೋವಸ್ಕಿ- ಮಾರ್ಕ್ವೇಜುಗಳಿಗೆ ಜನ್ಮ ಕೊಡುವ ಶಕ್ತಿ, ಇಂಡಿಯಾದ ಪ್ರಸ್ತುತ ಸಂದರ್ಭಕ್ಕಿದೆ. ಒಬ್ಬ ವ್ಯಂಗ್ಯಚಿತ್ರಕಾರನನ್ನು, ಒಬ್ಬ ಪತ್ರಕರ್ತ ನನ್ನು, ಗ್ರಹಾಂ ಸ್ಟೈನನಂಥ ಕುಷ್ಟರೋಗಿಗಳ ಒಬ್ಬ ಸೇವಕನನ್ನು ಕೊಲ್ಲುವಂಥ ವ್ಯವಸ್ಥೆ, ನಮ್ಮ ಈ ಜಂಬೂದ್ವೀಪದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿದೆ. ಇಂಡಿಯಾದ ಬೌದ್ಧಿಕತೆಗೆ ಪ್ರತಿಭಟನೆಗೆ ವೈಚಾರಿಕತೆಗೆ ಕವಿದಿರುವ ಮಂಕಿನ ಬಗ್ಗೆ, ಇಲ್ಲಿ ಪ್ರಸ್ತಾಪಿಸುವುದು ಹೆಚ್ಚು ಸೂಕ್ತ ಎಂದು ನಾನು ಭಾವಿಸುತ್ತೇನೆ. ತುರ್ತುಪರಿಸ್ಥಿತಿ ಹಿಂದು ಮುಂದಿನ ದಿನಗಳಲ್ಲಿ, ಒಂದು ಬೆಲ್ಚಿಯ ಬಗ್ಗೆ, ಒಬ್ಬ ಅನಸೂಯಮ್ಮಳ ಸಾವಿನ ಬಗ್ಗೆ, ತಂಡೋಪತಂಡವಾಗಿ ಬೀದಿಗಿಳಿದು ಧ್ವನಿ ಎತ್ತುತ್ತಿದ್ದ ಲೇಖಕ, ಇಂದು ಅಂಥ ನೂರಾರು ಘಟನೆಗಳೂ ನಡೆಯುತ್ತಿ ದ್ದರೂ ಯಾಕೇಂತ ಪಂಚೇಂದ್ರಿಯಗಳನ್ನು ಬಂದ್ ಮಾಡಿಕೊಂಡು ನೆಮ್ಮದಿಯಿಂದ ಕೂತಿದ್ದಾನೆ? ಇದು ಈ ಸಂದರ್ಭದ ಯಕ್ಷಪ್ರಶ್ನೆ.
ನಮ್ಮ ಬಳ್ಳಾರಿ ಜಿಲ್ಲೆಯೊಳಗೂ ಒಂಚೂರು ಬಿಹಾರಿದೆ. ಒಂಚೂರು ಕಾರ್ಗಿಲ್ಲಿದೆ. ಒಂಚೂರು ತೆಲಂಗಾಣದ ಶ್ರೀಕಾಕುಳಂ ಇದೆ. ಅಲ್ಲದೆ ಚೂರುಪಾರು ಚಿಲಿ, ಕ್ಯೂಬಾ, ಮೆಕ್ಸಿಕೋ, ನೈಜೀರಿಯಾ, ಜಾಂಬಿಯಾಗಳಿವೆ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಚಳವಳಿಗಳೂ ನಮ್ಮ ಜಿಲ್ಲೆಯನ್ನೂ ಪ್ರವೇಶಿಸಿ, ’ಹಲೋ’ ಎಂದು ಮಾತಾಡಿಸಿ ಹೋಗಿವೆ. ೮-೧೦ ವರ್ಷಗಳ ಹಿಂದೆ ಯಾವ ಕವಿತೆಯನ್ನು ಹಿಡಿದುಕೊಂಡರೂ ಬೆರಳುಗಳಿಗೆ ರಕ್ತ ಹತ್ತಿದ ಅನುಭವವಾಗುತ್ತಿತ್ತು. ಯಾವ ಬರಹಗಾರನ ಹತ್ತಿರ ಮಾತಾಡಿದರೂ ಡೈನಾಮೈಟಿನೊಂದಿಗೆ ಮಾತಾಡಿದ ಅನುಭವವಾಗುತ್ತಿತ್ತು. ಈ ಬಗೆಯ ಎಷ್ಟೊಂದು ತಳಮಳ ತುಂಬಿಕೊಂಡಿದ್ದ ನಮ್ಮ ಜಿಲ್ಲೆ, ದರಿ ಮತ್ತು ಪುಲಿಗಳ ನಡುವೆ ಸೃಜನಶೀಲ ಸಂದಿಗ್ಧತೆಯನ್ನೂ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ನಮ್ಮ ಜಿಲ್ಲೆಯ ಲೇಖಕ ಸಂಕೋಚದ ಹಾಸಿಗೆ ಮೇಲೆ, ಕೀಳರಿಮೆಯ ಗೊಂಗಡಿಯನ್ನು ಹೊದ್ದು ಕೂತಿರುವುದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ಸಮ್ಮೇಳನಗಳು ಸಂವಾದಗಳು, ಆವರಿಸಿರುವ ಹೊಗೆಮಂಜನ್ನು ಹೊಡೆದೋಡಿಸು ವಂಥ ಇಂಧನಗಳನ್ನು ಅನ್ವೇಷಿಸುವ ಕೆಲಸ ಮಾಡಬೇಕು.
ಇನ್ನೇನು ಕೆಲವು ತಿಂಗಳಲ್ಲಿ ಮೊದಲಘಟ್ಟದ ಬಳಿ ತುಂಗಭದ್ರೆಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆಯಿಂದಾಗಿ ಕುಂತಳನಾಡಿನ ವಡ್ಡಾರಾಧನೆಗೂ ಭಾಮಿನಿ ಷಟ್ಪದಿಗೂ ಸಂಪರ್ಕ ಏರ್ಪಡಲಿರುವುದು ಸಂತೋಷದ ಸಂಗತಿಯಾಗಿದೆ. ಇಂಥ ಸಂದರ್ಭದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ್ಯ ಸ್ಥಾನದಲ್ಲಿ ಕಿರಿಯನಾದ ನನ್ನನ್ನು ಕೂಡ್ರಿಸಿರುವುದು ನಿಮ್ಮೆಲ್ಲರ ದೊಡ್ಡಗುಣ. ಇದರಿಂದಾಗಿ ನನ್ನಲ್ಲಿ ಉಡಾಳತನ ಕಡಿಮೆ ಯಾಗಿದೆ. ಸಜ್ಜನಿಕೆ ಮತ್ತು ವಿನಯ ಮೊಳಕೆ ಚಾಚುತ್ತಿದೆ. ಸಾಹಿತ್ಯಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ನನ್ನ ಮುಂದಿನ ದಿನಗಳ ಬಗ್ಗೆ ನೀವೆಲ್ಲರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವಿರಿ. ನಿಮ್ಮ ನಿರೀಕ್ಷೆಯನ್ನು ಈಡೇರಿಸಲು ಸೃಜನಶೀಲವಾಗಿ ಪ್ರಯತ್ನಿಸುವೆ ಎಂದು ವಿನಯಪೂರ್ವಕವಾಗಿ ತಮ್ಮಲ್ಲಿ ಹೇಳಿಕೊಳ್ಳುತ್ತ ನನ್ನ ಮಾತುಗಳನ್ನು ಮುಗಿಸುತ್ತಿ ರುವೆ.
(೧೯೯೮)
ರಹಮತ್ ತರೀಕೆರೆ ಅವರ ಟಿಪ್ಪಣಿ:
ಹೆಸರಾಂತ ಕತೆಗಾರರಲ್ಲಿ ಒಬ್ಬರಾಗಿರುವ ಕುಂವೀ (೧೯೫೩) ಅವರ ಹೆಚ್ಚಿನ ಕತೆಗಳ ವಸ್ತು, ಹಳ್ಳಿಗಾಡಿನ ಭೂಮಾಲಿಕ ವ್ಯವಸ್ಥೆಯಲ್ಲಿ ಸಿಲುಕಿರುವ ಜನಸಮುದಾಯದ ಜೀವನವಾಗಿದೆ. ತಾವು ಕತೆಗಾರರಾಗಲು ’ಶಿಲಾಯುಗ’ದ ಹಳ್ಳಿಗಳ ಪರಿಸರವೇ ಕಾರಣವೆಂದು ನಂಬಿಕೆ ಕುಂವಿಗೆ. ಒಬ್ಬ ಲೇಖಕನಾಗಲು ಏನೇನು ಸಂಗತಿಗಳು ಹಿನ್ನೆಲೆಯಲ್ಲಿ ದುಡಿದಿರುತ್ತವೆ ಎಂದು ಆಶ್ಚರ‍್ಯವಾಗುತ್ತದೆ. ಬಡತನದ ಬಾಲ್ಯ, ಆಧುನಿಕ ಶಿಕ್ಷಣ, ವಾಸಿಸುವ ಕುಗ್ರಾಮಗಳು, ಸಂಪರ್ಕಕ್ಕೆ ಬಂದ ಚಳುವಳಿಗಳು, ಜಗತ್ತಿನ ದೊಡ್ಡ ಲೇಖಕರು ಬರೆದ ಸಾಹಿತ್ಯದ ಓದು, ದೇಶ ಎದುರಿಸಿದ ಬಿಕ್ಕಟ್ಟುಗಳು. ಕನ್ನಡ ಲೇಖಕರ ಪ್ರೇರಣೆಗಳ ಸಂಕೀರ್ಣ ಹಿನ್ನೆಲೆಯನ್ನು ಚಿತ್ರಿಸುವ ಈ ಲೇಖನ ಕುತೂಹಲಕರವಾಗಿದೆ.
ತಮಗೆ ಪ್ರೇರಕವಾದ ಅನೇಕ ಸಂಗತಿಗಳನ್ನು ಕುರಿತು ಹೇಳಿದರೂ ಆಂಧ್ರದ ಹಳ್ಳಿಗಳ ಪರಿಸರಕ್ಕೆ ವಿಶೇಷ ಆದ್ಯತೆಯನ್ನು ಕುಂವೀ ನೀಡಿದ್ದಾರೆ. ಅಂದರೆ ಜನಸಮುದಾಯದ ಭಾಗವಾಗಿ ಬದುಕುವ ಲೇಖಕರು ಆ ಪರಿಸರದಿಂದ ಕಲಿಯುವ ಮತ್ತು ಬೆಳೆಯುವ ಸಾಧ್ಯತೆಯನ್ನು ಹೇಳುವುದು ಇಲ್ಲಿನ ವಾದವಾಗಿದೆ. ಪಾಂಡಿತ್ಯ ಪ್ರತಿಭೆಗಳಿಗಿಂತ ಲೇಖಕರನ್ನು ರೂಪಿಸುವುದು ಅವರು ಹಾಯುವ ಅಪರೂಪದ ಅನುಭವ ಜಗತ್ತಿನಿಂದ ಎಂದು ಹೇಳುವುದು; ’ಶಿಲಾಯುಗದ ಹಳ್ಳಿ’ಯ ಅನುಭವಗಳೇ ತಮ್ಮನ್ನು ಲೇಖಕನ್ನಾಗಿ ಮಾಡಿದವು ಎಂಬುದನ್ನು ಹೇಳುವಾಗ ಕಾಣುವ ಅಬಿsಮಾನ ಸಂತೋಷ ಖಚಿತತೆ ಗಮನಿಸಬೇಕು. ಆ ಹಳ್ಳಿಗಳನ್ನು ಅವರು ’ವಿಶ್ವವಿದ್ಯಾಲಯಗಳು’ ಎನ್ನುತ್ತಾರೆ. ಅಲ್ಲಿನ ಜನರನ್ನು ’ಗುರುಗಳು’ ಎಂದು ಕರೆಯುತ್ತಾರೆ. ಇದೊಂದು ಬಗೆಯಲ್ಲಿ ಉದ್ದೇಶಪೂರ್ವಕ ಅನುಭವ ವಾದಿ ಮೀಮಾಂಸೆ. ಆದರೆ ಕೇವಲ ಅನುಭವಗಳೇ ಲೇಖಕರನ್ನು ರೂಪಿಸುವುದಿಲ್ಲ. ಹೀಗಾಗುವು ದಿದ್ದರೆ ಈ ಅನುಭವಗಳ ಭಾಗವಾಗಿರುವ ಜನರೇ ದೊಡ್ಡ ಲೇಖಕರಾಗಿರುತ್ತಿದ್ದರು. ಈ ಅನುಭವಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ’ವಸ್ತು’ವನ್ನಾಗಿ ಒಳಗೆ ಸ್ವೀಕರಿಸುವ ಹಾಗೂ ಅವನ್ನು ಕಲೆಯ ರೂಪಾಂತರದಲ್ಲಿ ಕತೆಯನ್ನಾಗಿ ಅಬಿsವ್ಯಕ್ತಿ ಮಾಡುವ ಕ್ರಿಯೆಗಳು ಇಲ್ಲಿ ಸಂಭವಿಸಿವೆ. ಇವು ಬಂದಿದ್ದು ಲೇಖಕರಲ್ಲಿರುವ ’ಹೊರ’ಗಿನ ಪ್ರe ಕುಶಲತೆಯಿಂದ. ಈ ಪ್ರe ಬಂದಿದ್ದು ಆಧುನಿಕ ಶಿಕ್ಷಣದಿಂದ; ಪಡೆದ ಅನುಭವ ಕಲೆಯಾಗುವ ನಡುವಿನ ಸಂಕೀರ್ಣವಾದ ಸಂಘರ್ಷಗಳನ್ನು ಲೇಖನವು ಉತ್ಪ್ರೇಕ್ಷಿತ ಶೈಲಿಯಲ್ಲಿ ಕೊಂಚ ಸರಳೀಕರಿಸಿ ಚಿತ್ರಿಸುತ್ತಿದೆ.
ಕೆಲವು ಬಾರಿ ನಮ್ಮ ’ದೇಶೀ’ ಲೇಖಕರು ನಾಗರಿಕ ಸಮಾಜದ ಕೃತಕತೆ ಶಿಷ್ಟತೆಗಳನ್ನು ಟೀಕಿಸಲು ಗ್ರಾಮೀಣ ಬದುಕನ್ನು ವೈಭವೀಕರಿಸುವುದುಂಟು. ಅಂತಹ ಅಂಶ ಇಲ್ಲೂ ಕೆಲಸ ಮಾಡಿದಂತಿದೆ. ಅನುಭವವಾದದ ಸಮಸ್ಯೆಯೆಂದರೆ, ಒಳ್ಳೇ ಲೇಖಕರು ಹುಟ್ಟಲು ಅಪರೂಪದ ಅನುಭವ ಕೊಡುವ ಸಾಮಾಜಿಕ ಪರಿಸ್ಥಿತಿಯ ಅಗತ್ಯವಿದೆ ಎಂಬ ಅರ್ಥ ಬರುವಂತೆ ವಾದಿಸುವುದು. ಈ ದಾರುಣ ಜೀವನಸ್ಥಿತಿ ಚಾರಿತ್ರಿಕವಾಗಿ ಯಾಕೆ ಬಂತು. ಇದರ ವಿರುದ್ಧ ಅಲ್ಲಿನ ಜನ ಹೇಗೆ ಪ್ರತಿರೋಧ ಮಾಡುತ್ತಿದ್ದಾರೆ ಅಥವಾ ಇಂತಹ ಪರಿಸ್ಥಿತಿ ಬದಲಾಗಲು ಏನು ಮಾಡಬೇಕಾಗಿದೆ -ಮುಂತಾದ ಪ್ರಶ್ನೆಗಳಿಗಿಂತ, ಇಂತಹ ಅಪರೂಪದ ಜಗತ್ತಿನಲ್ಲಿ ತಾನು ಇದ್ದು ಬಂದಿರುವ ಹೆಮ್ಮೆಯೇ ಮುಖ್ಯವಾಗಿ ಬಿಡುವ ರೀತಿ ಇಲ್ಲಿನದು. ಈ ತರ್ಕದ ಒಳಗೇ ಇದ್ದು ’ಅನುಭವವನ್ನು ಪಡೆದು ಲೇಖಕರಾಗುವವರು, ಪ್ರತಿಯಾಗಿ ಆ ಪರಿಸರಕ್ಕೆ ಕೊಟ್ಟದ್ದೇನು ಎಂಬ ಪ್ರಶ್ನೆ ಕೇಳಿಕೊಂಡರೆ’, ಅನುಭವವಾದದ ಮಿತಿಗಳು ಹೊಳೆಯುತ್ತವೆ. ವರ್ತಮಾನದ ಬಿsಕರ ವಾಸ್ತವದೊಂದಿಗೆ ಬದುಕುವುದು ಲೇಖಕನಿಗೆ ಮುಖ್ಯ ಎಂದು ಹೇಳುತ್ತಾ, ಕುಂವಿ ಜಗತ್ತಿನ ಅನೇಕರು ಚಾರಿತ್ರಿಕ ಇಕ್ಕಟ್ಟುಗಳಲ್ಲಿ ಬದುಕಿದ್ದೇ ಅವರು ಲೇಖಕರಾಗಲು ಕಾರಣ ಎನ್ನುತ್ತಾರೆ. ಈ ಉದಾಹರಣೆ ತಾವು ಆಂಧ್ರದ ಭೂಮಾಲೀಕರ ಆಳ್ವಿಕೆಯಿರುವ ಹಳ್ಳಿಗಳಲ್ಲಿ ಬದುಕಿದ್ದೇ ಲೇಖಕರಾಗಲು ಕಾರಣ ಎನ್ನುವುದಕ್ಕೆ ಸಮೀಕರಣಗೊಳ್ಳುತ್ತದೆ. ಆದರೆ ಲೇಖನ ಉಲ್ಲೇಖಿಸುವ ಲೇಖಕರು ತಾವು ಬದುಕಿದ್ದ ವಾತಾವರಣವನ್ನು ಬದಲಿಸಲು ಹೋರಾಟ ಮಾಡುತ್ತ ಅನುಭವ ಗಳಿಸಿದವರು.
ಲೇಖಕರು ತಮ್ಮ ಪ್ರದೇಶದ ಚರಿತ್ರೆಯ ಪ್ರe ಹೊಂದಿರಬೇಕು. ಜನರಿಗೆ ಇತಿಹಾಸ ಪ್ರe ಮೂಡಿಸುವುದು ಲೇಖಕನ ಜವಾಬ್ದಾರಿ, ಎಂಬ ಅಬಿsಪ್ರಾಯಗಳು ಇಲ್ಲಿ ಬಂದಿವೆ. ಕುಂವಿ ಇತಿಹಾಸದ ವಿವರಗಳನ್ನು ಪ್ರಾಂತೀಯ ಅಬಿsಮಾನದಿಂದ ಮಂಡಿಸುವುದನ್ನು ನೋಡಿದರೆ, ಲೇಖಕರು ಇತಿಹಾಸ ಅರಿಯುವ ಪ್ರಯೋಜನದ ಬಗ್ಗೆ ಅನುಮಾನ ಹುಟ್ಟುತ್ತದೆ. ಫ್ಯೂಡಲಿಸಂ ಮಾಡುವ ದಮನಗಳ ಅರಿವುಳ್ಳ ಲೇಖಕರಂತಹ ತನ್ನನ್ನು ಕುಮಾರವ್ಯಾಸ ಹರಿಹರ ರಾಘವಾಂಕ ಜನತೆಯ ಕವಿಗಳ ಜತೆ ಗುರುತಿಸಿಕೊಳ್ಳುವುದು ಸರಿ. ಆದರೆ ಶಾಸನ ಕವಿಗಳ ಬಗ್ಗೆ ಹೇಳುವಾಗ ಅವರು ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗಿದ್ದರು ಎಂಬುದನ್ನು ಮರೆತುಬಿಡುವುದು ಸೋಜಿಗ. ಈಗಿನ ಭೂಮಾಲೀಕ ವ್ಯವಸ್ಥೆಯ ಬೇರುಗಳು ಇದೇ ಚರಿತ್ರೆಯ ನೆಲದೊಳಗಿರಬಹುದಲ್ಲವೇ? ಸಾಹಿತ್ಯ ಸಮ್ಮೇಳನದ ಭಾಷಣವಾಗಿರುವುದರಿಂದ ಮಾತುಗಳು ಅಬಿsಮಾನ ಸಹಜವಾಗಿ ಬಂದಿವೆ ಎನ್ನಬಹುದು. ಆದರೆ ತನ್ನ ನೆಲದ ಬಗ್ಗೆ ಅಬಿsಮಾನ ತಾಳುವುದು ಮುಖ್ಯ ಎನ್ನುವುದು ನಿಜವಾಗಿಯೂ ಲೇಖಕನ ನಂಬಿಕೆಯೇ ಆಗಿದ್ದರೆ, ಅದೀಗ ವೈರುಧ್ಯ.
ಸಾಹಿತ್ಯ ಮತ್ತು ಓದುಗರ ಸಂಬಂಧದ ಬಗೆಗಿನ ಇಲ್ಲಿನ ಮಾತುಗಳು ಕೂಡ ಚರ್ಚಾಸ್ಪದವಾಗಿದೆ. ಒಬ್ಬ ಓದುಗ ಕಂಪ್ಯೂಟರ್ ಪುಸ್ತಕಕ್ಕಿಂತ ’ಹರಿಶ್ಚಂದ್ರ ಕಾವ್ಯ’ ಕೊಂಡರೆ, ಸಾಹಿತ್ಯಕ ಸಂವಾದ ಸಾರ್ಥಕವಾದಂತೆ ಎನ್ನುವುದು ಪಕ್ಕಾ ಸಾಹಿತ್ಯಕೇಂದ್ರಿತ ಆಲೋಚನೆಯಿಂದ ಹುಟ್ಟಿದ ಅಬಿsಪ್ರಾಯ. ಇದೇ ಲೇಖನದಲ್ಲಿ ಸಾಹಿತ್ಯ ಅಧ್ಯಯನಕಾರರು ಜೀವವಿeನ ಮುಂತಾದ ಸಾಹಿತ್ಯವಲ್ಲದ eನವನ್ನು ಅಧ್ಯಯನ ಮಾಡುವ ಅಗತ್ಯದ ಮಾತು ಬರುತ್ತದೆ. ಸಾಹಿತ್ಯ ಮತ್ತು ಸಮಾಜ ಬದಲಾವಣೆಯ ವಿಷಯದಲ್ಲಿ ಇಲ್ಲಿ ಅನೇಕ ಭಾವುಕ ಹೇಳಿಕೆಗಳಿವೆ. ಸಾಹಿತಿಯೇ ನಿಜವಾದ ಸೃಷ್ಟಿಕರ್ತ ಎಂಬ ಧ್ವನ್ಯಾಲೋಕದ ಮಾತನ್ನು ಒಪ್ಪಿಕೊಳ್ಳುವ ಲೇಖಕ, ಸೃಷ್ಟಿಶೀಲತೆಗೆ ಅನೇಕ ಆಯಾಮಗಳಿವೆ ಎಂಬುದನ್ನು ಮರೆಯುತ್ತಾರೆ. ಲೇಖಕರ ಆಕ್ಟಿವಿಸಂ ಬಗ್ಗೆ ನಂಬಿಕೆ ಇರುವ ಕುಂವೀ ಸಮಾಜದ ವರ್ತಮಾನದ ದುಸ್ಥಿತಿಯನ್ನು ಚಿತ್ರಿಸುವುದು, ಅದಕ್ಕೆ ಮಿಡಿಯದೆ ಇರುವ ಲೇಖಕರ ಬಗ್ಗೆ ವಿಷಾದ ಪಡುವುದು, ಬಂಡಾಯ ಸಾಹಿತ್ಯಮೀಮಾಂಸೆಯ ದೃಷ್ಟಿಕೋನದಿಂದ ಸಹಜವಾಗಿದೆ. ಆದರೆ ಹಿಂದುಳಿದ ಹಳ್ಳಿಗಳ ಮತ್ತು ಲೇಖಕನ ಸಂಬಂಧದ ವ್ಯಾಖ್ಯಾನಗಳು ಮಾತ್ರ ಸಮಸ್ಯಾತ್ಮಕ ವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕುಂ.ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹೆಮ್ಮೆ. ಅವರ ಗಾಂಧಿಕ್ಲಾಸು ಆತ್ಮ ಕಥನ ಬಳ್ಳಾರಿ ಜಿಲ್ಲೆಯ ಆತ್ಮಚರಿತ್ರೆಯೂ ಆಗಿದೆ.
ಪ್ರತ್ಯುತ್ತರಅಳಿಸಿ-ಪಂಪಾರೆಡ್ಡಿ.