ಸೋಮವಾರ, ಮೇ 21, 2012

ಸಣ್ಣ ಕಥೆ: ಕಾಯುತಿದೆ ಬದುಕು






(ಹಗರಿಬೊಮ್ಮನಹಳ್ಳಿಯ ಸುಧಾ ಚಿದಾನಂದಗೌಡ ಅವರು ದಶಕಗಳಿಂದ ಕಥೆಗಳನ್ನು ಬರೆಯುತ್ತಾ ಬಂದಿದ್ದಾರೆ. ಅವರ ಕಥೆಗಳು ಮಹಿಳಾ ಮೂಲದ ಸೂಕ್ಷ್ಮ ಶೋಧದಂತಿವೆ.  ಇಲ್ಲಿ ಪ್ರಕಟಿಸಲಾದ ಕಥೆ ಕೂಡ ಹೆಣ್ಣು ತಣ್ಣನೆಯ ಕ್ರೌರ್ಯದಲ್ಲಿ ಬಳಲುವಿಕೆಯನ್ನು ಸೂಕ್ಷ್ಮವಾಗಿ ದಾಖಲಿಸಿದ್ದಾರೆ.)


-ಸುಧಾ ಚಿದಾನಂದಗೌಡ.







“ಜಲ್ದೀ ಕೊಡ್ರೀ..ಜಲ್ದೀ ಕೊಡ್ರೀ.. ಲೇಟಾತು..” ಅವಸರದ ದನಿ ಕೇಳಿ, ಪರಿಚಿತವೆನ್ನಿಸಿ, ಪಕ್ಕಕ್ಕೆ ತಿರುಗಿದೆ.
“ಅರೆರೆ.. ಏನ್ ಮೇಷ್ಟ್ರೇ.. ನಮಸ್ತೆ. ಹೇಗಿದ್ದೀರಿ?”
“ಯಾರೂ.. ಓಹ್ ಮೀನಾಕ್ಷಿ.. ನೀನಾ ತಾಯಿ..? ಹೆಂಗಿದ್ದೀ..? ಏನ್ ಮಾಡ್ತಿದ್ದೀ..?”
“ನಿಮ್ ಆಶೀರ್ವಾದ ಮೇಷ್ಟ್ರೇ ಚೆನ್ನಾಗಿದ್ದೀನಿ. msw ಮಾಡಿಕೊಂಡೆ. ಸ್ವಲ್ಪ ದಿನ ಆಯ್ತು ಯೂನಿವರ್ಸಿಟಿಯಿಂದ ಬಂದು. ಇಲ್ಲಿನ ಎನ್‌ಜಿಒನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡ್ತದೀನಿ. ಏನಿಲ್ಲಿ? ತುಂಬ ಅವಸರದಲ್ಲಿದೀರಿ?”
“ಹೌದಮ್ಮಾ. ನನ್ನ ಮಗಳು ಈವೊತ್ತು ಗಂಡನ ಮನೆಗೆ, ಎರಡ್ನೇ ಹೆರಿಗೆ ಮುಗಿಸಿಕೊಂಡು ಹೊಂಟಾಳ. ದೊಡ್ಡ ಮೊಮ್ಮಗಳಿಗೆ ಹೊಸ ಬಟ್ಟಿ ತಗೊಂಡು, ಒಂದಿಷ್ಟು ಆಟದ ಸಮಾನು ತಗೊಂಡು , ಕೊಟ್ಟು ಕಳಿಸೋಣ ಅಂತ ಮಧ್ಯಾಹ್ನವೇ ಮನೆ ಬಿಟ್ಟೆ. ತಡ ಆಗಿಬಿಡ್ತು.”




ಮೇಷ್ಟ್ರು ಆಯಾಸದಿಂದ ಏದುಸಿರು ಬಿಡುವುದು ನೋಡಲಾರದೆ, ಅವರ ಕೈಯಿಂದ ಚೀಲಗಳನ್ನು ತೆಗೆದುಕೊಂಡೆ.
“ಅದೇನ್ ತಗೋಬೇಕೋ ತಗೊಳ್ಳಿ ಮೇಷ್ಟ್ರೇ, ನಾನು ಹಿಡ್ಕೊಂಡಿರ್ತೀನಿ.”
“ಅಯ್ಯೋ ಬೇಡಮ್ಮಾ, ನಿನಗ್ಯಾಕೆ ತೊಂದ್ರೆ?”
“ಇಲ್ಲ ಸರ್ ನೀವು ಹೀಗೆ ಹೇಳಿದ್ರೆ ನನ್ ಮನಸಿಗೆ ತೊಂದ್ರೆಯಾಗುತ್ತೆ ನೋಡಿ. ನೀವು ಪ್ರೈಮರಿ ಶಾಲೆಯಲ್ಲಿ ಅಆಇಈ ಹೇಳಿಕೊಡದಿದ್ರೆ ನಾವು ಇಷ್ಟೊಂದು ಓದೋದಿಕ್ಕೆ ಆಗುತ್ತಿತ್ತೇ? ಬುನಾದಿ ಹಾಕಿದವರೇ ನೀವಲ್ವೇ?”

“ಎಷ್ಟು ಚೆನ್ನಾಗಿ ಮಾತಾಡ್ತೀಯಮ್ಮಾ.? ದೊಡ್ಡೊಳಾಗಿಬಿಟ್ಟಿದೀಯಾ.!”
ಕ್ಷೀಣವಾಗಿ ನಕ್ಕ ಮೇಷ್ಟ್ರು ಮೊಮ್ಮಗಳಿಗೆ ನೆರಿಗೆನೆರಿಗೆಯ ಫ್ರಾಕು ತೆಗೆದುಕೊಳ್ಳುವುದನ್ನೇ ನೋಡುತ್ತಾ ನಿಂತೆ.. ನಂತರ, “ನಿಮ್ ಮನೆಗೆ ನಾನೂ ಬರ್ತೀನಿ ನಡೀರಿ ಮೇಷ್ಟ್ರೇ.”
“ಬಾ..ಬಾ..ಚಾ ಕುಡಿದು ಹೋಗುವಂತೆ.”
ಶಾಲೆಯ ಪಕ್ಕದಲ್ಲೇ ಮೇಷ್ಟ್ರ ಮನೆ. ಎರಡು-ಮೂರನೆಯ ತರಗತಿಯಲ್ಲಿ ಇದೇ ದಾರಿಯಲ್ಲೇ ಓಡಾಡಿದ ಬಾಲ್ಯದ ನೆನಪೇ ಸುಂದರ. ಮೇಷ್ಟ್ರು ಆತ್ಮೀಯತೆಯಿಂದ ಮಾತಾಡುತ್ತಾ ನಡೆದರು.


“ಮಗಳ ಬಗ್ಗೆಯೇ ನನಗೆ ಚಿಂತೆ ನೋಡು. ಆಕಿ ಗಂಡ ಬಾರೀ ವೀರಭಧ್ರನಂಥಾ ಮನುಷ್ಯ. ಭಾರೀ ದೌರ್ಜನ್ಯ. ಸ್ಟ್ರಿಕ್ಟು. ಎಷ್ಟು ಹೇಳಿದೆ-ಇನ್ನೊಂದೆರಡು ದಿನ ಬಿಟ್ಟು ಕಳಿಸ್ತೀನಪಾ ಅಂತ. ಎರಡು ಸಣ್ಣಹುಡುಗರನ್ನೂ ಇಟುಗೊಂಡು ಹೆಂಗೆ ಮಾಡಿಕೊಂತಾಳ ಮನ್ಯಾಗ ಅಂತ. ಈವೊತ್ತು ಕಳಿಸ್ಬೇಕು ಅಂದ್ರೆ ಕಳಿಸ್ಬೇಕು ಅಂತಾನೆ. ತಡ ಅಗ್ಹೋಯ್ತು ನೋಡು.”
ಮಾತಾಡುತ್ತಾ, ಮಾತಾಡುತ್ತಾ ಮನೆಯ ಬಳಿ ಬಂದ ಮೇಷ್ಟ್ರು ಅವಾಕ್ಕಾಗಿ ನಿಂತರು.
“ಅರೆ.. ಮನೆ ಬೀಗ ಹಾಕೈತಲ್ಲಾ.. ಗೌರಿ..?”
ನನಗೂ ಗಾಬರಿಯಾಗಿ ಚೀಲವನ್ನು ಕಟ್ಟೆಯ ಮೇಲಿಟ್ಟೆ.
“ಬೀಗ ತಗೋರಿ. ಗೌರಿ ಆಗಲೇ ಹೋದ್ಲು.”
ಪಕ್ಕದ ಮನೆಯ ಹೆಂಗಸು ಹೇಳಿದಾಗ, ಮೇಷ್ಟ್ರು ಬೆಚ್ಚಿಬಿದ್ದದ್ದು ಸ್ಪಷ್ಟವಾಗಿತ್ತು.
“ಹಂ.. ಯಾಕೆ ಹೋದ್ಲು? ಹೆಂಗೆ ಹೋದ್ಲು..?”
“ಸಣ್ಣ ಹುಡುಗೀನ್ನ ಎತ್ತಿಕೊಂಡು, ದೊಡ್ಡ ಹುಡುಗೀನ್ನ ನಡೆಸಿಕೊಂಡು ಹೋದ್ಲುರೀ. ಏನೂ ಹೇಳ್ಲಿಲ್ಲ. ನಾನು ಹೋಗೀನಿ ಅಂತ ಹೇಳಿ ಅಪ್ಪಗ ಬೀಗ ಕೊಡ್ರಿ ಅಂತ ಅಷ್ಟೇ ಹೇಳಿದ್ಳು.”

ಪಕ್ಕದ ಮನೆಯಾಕೆ ವಿವರಿಸಿದಳು. ಒಂದು ಕ್ಷಣ ಮೇಷ್ಟರಿಗೆ ಏನೂ ಅರ್ಥವಾದಂತೆ ತೋರಲಿಲ್ಲ. ನಾನೇ ಬೀಗ ತೆಗೆದುಕೊಂಡು, ಬಾಗಿಲು ತೆಗೆದು, ಚೀಲ ಒಳಗಿಟ್ಟೆ. ಅವರ ಮನೆಯಲ್ಲಿ ಅವರಿಗೇ ಉಪಚಾರ ಮಾಡಬೇಕಾದ ಮುಜುಗರ ಮುಚ್ಚಿಡಲು ಯತ್ನಿಸುತ್ತಾ, “ಕೂತ್ಕೊಳ್ಳಿ ಮೇಷ್ಟ್ರೇ. ಯಾಕೆ ಇದ್ದಕ್ಕಿದ್ದಂತೆ ಹೋಗಿರಬಹುದು ನಿಮ್ಮ ಮಗಳು?”
“ಇನ್ನೇಕೆ ಹೋಗಿರ್ತಾಳೆ? ಗಂಡನ ಮನೆಗೆ ಹೋಗಿರ್ತಾಳೆ ಅಥವಾ ಎಲ್ಲಾದರೂ ಸಾಯೋಕೆ ಹೋಗಿರ್ತಾಳೆ.”
ಬೆಚ್ಚಿ ಬೀಳುವ ಸರದಿ ಈಗ ನನ್ನದು. ವಾತ್ಸಲ್ಯದಿಂದ ಪಾಠ ಹೇಳಿದ ಮೇಷ್ಟ್ರು.. ಕಠೋರ ಮಾತುಗಳ ಅಪ್ಪ..! ಎಷ್ಟು ವ್ಯತ್ಯಾಸ..!
“ಸರ್, ಯಾಕೆ? ಏನ್ ವಿಷ್ಯ?”
“ಏನ್ ವಿಷ್ಯ ಅಂತ ಹೇಳ್ಲಿ ಮೀನಾಕ್ಷಿ? ತಾಯಿ ಇದ್ದಾಗ ಇಬ್ರೂ ಹಠ ಮಾಡಿದ್ರು ಅಂತ ಓದಿಸ್ದೆ. ಕೆಲಸ ಮಾಡ್ತೀನಿ ಅಂತ ಹಠ ಮಾಡೋ ಹೊತ್ತಿಗೆ ಅವರಮ್ಮ ತೀರ್ಕೊಂಡ್ಲು. ಬೆಳೆದ ಹುಡುಗೀನ್ನ ಮನೇಲಿಟ್ಕೊಳ್ಳೊಕೆ ಭಯವಾಗಿ, ತಕ್ಷಣ ಮದುವೆ ಮಾಡಿ ಮುಗಿಸ್ದೆ. ಅವ್ನೂ ಒಳ್ಳೆಯವನೇ. ಆದ್ರೆ ಭಾರೀ ದೌರ್ಜನ್ಯ. ಒಂದೊಂದು ನಿಮಿಷಾನೂ ಎಲ್ಲಿದ್ದೆ, ಎಲ್ಲಿದ್ದೆ ಅಂತ ಕೇಳಿ ಕೇಳಿ ಅವಳನ್ನು ಹೆದರಿಸಿಬಿಟ್ಟಿದಾನೆ. ಕೆಲಸ ಮಾಡೋಕೂ ಬಿಡೋಲ್ಲ. ತಾನೂ ಸರಿಯಾಗಿ ಕಾಳಜಿ ಮಾಡೋದಿಲ್ಲ. ಮಾತು ಮಾತಿಗೂ ಗದರಿಸ್ತಾನೆ. ಈ ನಡುವೇನೇ ಎರಡು ಮಕ್ಕಳನ್ನೂ ಮಾಡಿಕೊಂಡಿದಾಳೆ. ಫಜೀತಿ. ಎರಡು ದಿನ ಇಲ್ಲಿರೋಕೆ ಬಿಡೋದಿಲ್ಲ. ಈ ಭಾಗ್ಯಕ್ಕೆ ಮದುವೆ ಬೇರೆ ಕೇಡು. ಯಾವಾಗಲೂ ಅಳ್ತಿರ್ತಾಳೆ. ಅದನ್ನು ನೋಡೋದಿಕ್ಕಿಂತ ಅವರಮ್ಮನ ಜೊತೆಗೆ ಇವಳೂ ಸತ್ತ್ಹೋದ್ರೆ ಸಾಕು ಅನಿಸಿದೆ. ಮುಖ ಎತ್ತಿಕೊಂಡಾದ್ರು ಓಡಾಡಬಹುದು.”
ಒಂದೇ ಉಸಿರಿಗೆ ಹೇಳಿ ಮುಗಿಸಿದರು. ನೀರವ ಮೌನದ ನಂತರ, “ಇಲ್ಲಿಗೇ ಕರ್ಕಂಬಂದುಬಿಡಿ ಸರ್,” ಎಂದೆ.
“ಕರ್ಕೊಂಬಂದು ತಲೆ ಮೇಲೆ ಸುರಕೊಳ್ಳೇನು? ಅಷ್ಟೆಲ್ಲಾ ವರದಕ್ಷಣೆ ಸುರಿದು ಮದುವೆ ಮಾಡಿ ಮುಗಿಸುವಷ್ಟರಲ್ಲಿ ಹಣ್ಣಾಗಿ ಹೋಗಿದೀನಿ. ಮಾಡ್ಕೊಂಡೋನಿಗೆ ಅರಿವಿರಂಗಿಲ್ಲೇನು? ನೋಡ್ಕೊಂತಾನೆ ಬಿಡು. ನಾನೇನು ಮಾಡ್ಲಿ?”

ನನ್ನ ಗಾಬರಿ ಹೆಚ್ಚಾಯ್ತು. ಗೌರಿ ನಿಜಕ್ಕೂ ಏನಾದರೂ ಅನಾಹುತ ಮಾಡಿಕೊಂಡಿದ್ದರೆ..? ಮೇಷ್ಟ್ರನ್ನು ಅಲ್ಲೇ ಬಿಟ್ಟು, ಎದ್ದು ಬಂದು ಬಿಟ್ಟೆ. ಎಲ್ಲಿಗೆ ಹೋಗಿದಾಳೆ ಅಂತ ಕೂಡಾ ಯೋಚಿಸ್ತಿಲ್ಲವಲ್ಲ ಇವ್ರು.? ಎಲ್ಲೀಂತ ಹುಡುಕೋದು?
ಗೌರಿಯನ್ನು ನೋಡಿ ತುಂಬ ದಿನಗಳೇ ಆಗಿಹೋದವು. ಎದುರಿಗೇ ಬಂದರೂ ನನ್ನನ್ನು ಅವಳು, ಅವಳನ್ನು ನಾನು ಗುರುತು ಹಿಡಿಯಲಾರೆವೇನೋ? ಇದನ್ನು ಹೀಗೇ ಬಿಡೋದಿಕ್ಕಂತೂ ನನ್ನಿಂದಾಗದು! ಮತ್ತೆ ಒಳಬಂದೆ.
“ಮೇಷ್ಟ್ರೇ, ನೀವು ಮಗಳೀಗಾಗಿ ಏನೇನೋ ಪರ್ಚೆಸ್ ಮಾಡಿಕೊಂಡು ಬಂದಿದೀರಿ. ಕೊಟ್ಟಾದ್ರೂ ಬರೋಣ ಬನ್ನಿ.”
“ಇಲ್ಲ. ನನಗೆ ಹೇಳದೆ, ಕೇಳದೆ ಮನೆ ಬಿಟ್ಟು ಹೋಗಿದಾಳೆ. ನನಗ್ಯಾಕೆ ಬೇಕು ಉಸಾಬರಿ. ಅವ್ನು ನೊಡ್ಕೊಂತಾನೆ ಬಿಡು.”
ದಿಗ್ಭ್ರಮೆಯೆನಿಸಿತು. ಮನುಷ್ಯರಿಗೆ ಎಷ್ಟೊಂದು ಮುಖ! ಏನು ಮಾಡಲಿ? ಬಾಗಿಲಲ್ಲಿ ನಿಂತು ಒಂದು ಕ್ಷಣ ಯೋಚಿಸಿದೆ. ಬೀಗದ ಕೈ ಕೊಟ್ಟಿದ್ದ ಹೆಣ್ಣುಮಗಳು ತಮ್ಮ ಮನೆಯ ಬಾಗಿಲಲ್ಲಿ ನಿಂತು ಇತ್ತಲೇ ನೋಡುತ್ತಿದ್ದುದನ್ನು ಗಮನಿಸಿದೆ. ಸೀದ ಅಲ್ಲಿಗೇ ಬಂದೆ.

“ಗಂಡನ ಮನೆಗೇ ಹೋಗಿದಾಳೇನ್ರೀ?” ಕೇಳಿದೆ.
“ಗೊತ್ತಿಲ್ಲ. ಏನೂ ಸರ್ಯಾಗಿ ಹೇಳ್ಲಿಲ್ಲ.” ಆಕೆ ಗಲಿಬಿಲಿಯಿಂದ ಹೊರಬಂದು, ನಂತರ ಮುಂದುವರಿಸಿದಳು.
“ಗಂಡನ ಮನ್ಯಾಗ ಸರಿ ಇಲ್ಲಂತೆ ಬಿಡ್ರೀ. ದಿನಾ ಜಗಳ ಆಡ್ತಿರ್ತಾರಂತ. ಇಲ್ಲಿ ಇರಾಕನೂ ಬಿಡಂಗಿಲ್ಲ ಆಯಪ್ಪ. ಏನೋ, ಏನ್ ಕಥಿನೋ..?”
“ಅವ್ರ ಮನಿ ನೋಡೀರೇನ್ರೀ? ಅಲ್ಲಿಗೇ ಹೋಗಿರಬಹುದಾ?”
“ಏನೋ ಗೊತ್ತಿಲ್ಲ್ರೀ..”
“ನಿಂ ಮನೇಲಿ ಯಾರಾದ್ರೂ ಸಣ್ಣ ಹುಡುಗರಿದ್ದರೆ..ಅವರೇನಾದ್ರೂ ನೋಡಿದಾರಾ..?”
ಆಕೆ, “ಇಲ್ಲ ಬಿಡ್ರೀ” ಅನ್ನುವಷ್ಟರಲ್ಲಿ,
“ಗೌರಕ್ಕನ ಮನೇನ..? ನಾ ನೋಡೀನ್ರೀ..!” ಎಂದು ಮುಂದೆ ಬಂದೇ ಬಿಟ್ಟ ಹತ್ತು ವರ್ಷದ ಪೋರ! ನನ್ನ ಪಾಲಿನ ಅವಧೂತ!
“ನನ್ನನ್ನ ಕರೆದುಕೊಂಡು ಹೋಗ್ತೀಯಾ ಪುಟ್ಟ?” ಕೇಳಿದ್ದಕ್ಕೆ
“ಹೂನ್ರೀ, ತೋರಿಸ್ತೀನ್ರೀ” ಎಂದು ತಾಯಿಯ ಅನುಮತಿಗೂ ಕಾಯದೆ ಹೊರಟುಬಿಟ್ಟ.
ಮರಳಿ ಮೇಷ್ಟ್ರ ಮನೆಯತ್ತ ನೋಡಿದರೆ, ಅವರು ಬಾಗಿಲ ಬಳಿಯಲ್ಲೇ ನಿಂತಿದ್ದರು.
“ಸರ್, ನಾನಾದ್ರೂ ಹೋಗಿಬರ್ಲಾ? ನೀವು ತಂದು ಕೊಟ್ಟಿರೊದನ್ನ ಕೊಟ್ಟು, ಮಾತಾಡ್ಸಿಯಾದ್ರೂ ಬರ್ತೀನಿ. ಆಗಬಹುದಾ?”
ಬೇಡ ಎಂದೇನಾದರೂ ಹೇಳಿದರೆ, ಖಂಡಿತವಾಗಿ ಜಗಳ ಆಡೆಬಿಡ್ತೀನಿ ಎಂದು ಮನಸಿನಲ್ಲೇ ನಿರ್ಧರಿಸುತ್ತಿರುವಾಗಲೇ, ಮೇಷ್ಟ್ರು, “ಸರಿ ತಗೊಂಡು ಹೋಗು. ಆದರೆ ನಾನಂತೂ ಬರಲ್ಲ,” ಎಂದರು.
ಅಬ್ಬಾ, ಅಷ್ಟಾದರೂ ಹೇಳಿದರಲ್ಲ! ತಡ ಮಾಡದೆ ಚೀಲಗಳನ್ನು ಹಿಡಿದು ಹೊರಬಂದು, ಆ ಹುಡುಗನನ್ನು ಬಾರೋ ಎಂದು ಕರೆದುಕೊಂಡು ಹೊರಟುಬಿಟ್ಟೆ.
“ಗೌರಕ್ಕ ಭಾಳ ಒಳ್ಳೇಕಿ. ತಿನ್ಲಿಕ್ಕೆ ತಿಂಡಿ, ಚಾ ಎಲ್ಲ ಕೊಡ್ತಿದ್ಲು. ಮಗಳನ್ನು ನನ್ನ ಹತ್ರ ಬಿಟ್ಟು ಆಟ ಆಡಿಸ್ತಿರು. ಚಾಕ್ಲೇಟು ಕೊಡಿಸ್ತೀನಿ ಅಂತಿದ್ಲು. ಆದ್ರ ಯಾವಾಗರ ಅತ್ಕೋತ ಕೂತಿರ್ತಿದ್ದು. ಈವೂತ್ತು ಹೋಗುವಾಗಲೂ ಅಳುಮಾರಿ ಮಾಡಿಕೊಂಡಿದ್ಲು..”
ಪುಟ್ಟ ದಾರಿಯುದ್ದಕ್ಕೂ ಹೇಳುತ್ತಲೇ ಇದ್ದ.
“ಅದೋ, ಅದೇ ನೋಡ್ರಿ ಗೌರಕ್ಕನ ಮನಿ… ಅಲ್ಲಿ ಭಾಳ ಜನ ನಿಂತಾರಲ…ಅದಾ..”
ದೇವ್ರೇ, ಜನ ಯಾಕೆ ನಿಂತಿದಾರೆ ಗೌರಿ ಮನೆ ಹತ್ರ..?! ಮಕ್ಕಳು ಬೇರೆ ಹೊತೇಲಿದ್ರು..! ಅನಾಹುತ ಮಾಡಿಕೊಂಡೇಬಿಟ್ಟಿದಾಳಾ..?! ನಾನು ಬರೋದು ತಡವಾಗಿ ಹೋಯ್ತೇ..? ಧಾವಂತದಿಂದ ಜೋರಾಗಿ ಓಡುನಡಿಗೆಯಲ್ಲಿ ಮನೆ ಬಳಿ ಬರುತ್ತಿದ್ದಂತೆ.. ಗಟ್ಟಿಯಾದ ಗಂಡಸಿನ ದನಿ ಕೇಳಿಸಿತು..
“ಯಾರ ಹತ್ರ ಮಾಡ್ತಿದೀ ನಾಟ್ಕಾನಾ..? ಐದು ಘಂಟಿಗೆ ಇಲ್ಲಿರಬೇಕು ಅಂತ ಹೇಳಿದ್ದಿಲ್ಲ? ಆರೂವರೆ ಆಗೇತಿ ಈಗ ಬಂದಿದೀ..? ಹೇಳಾರು ಕೇಳಾರು ಯಾರೂ ಇಲ್ಲ ನಿನಗ..? ಯಾರ ಜೊತಿ ಏನ್ ಮಾಡ್ಲಕ್ಹತ್ತಿದ್ದೀ..? ಆಂ..? ಮದುವ್ಯಾದ ಮ್ಯಾಲ ನನ್ನ ಮಾತಿಗೆ ಬೆಲಿ ಇರಬೇಕು, ತಿಳೀತ..? ಕಸ, ನೀರು, ಒಲಿ ನೋಡಾರು ದಿಕ್ಕಿಲ್ಲ ಈ ಮನ್ಯಾಗ. ಅಷ್ಟೂ ಅರುವಾಗಂಗಿಲ್ಲೇನು..?”
ಕಷ್ಟಪಟ್ಟು ಜನರ ಮಧ್ಯೆ ಜಾಗ ಮಾಡಿಕೊಂಡು ಮುಂದೆ ಬಂದು ನೋಡಿದೆ ಅತ್ಯಾತಂಕದಿಂದ.
ಉರಿಮುಖ ಮಾಡಿಕೊಂಡು, ಕೈ ಝಾಡಿಸುತ್ತಾ ಮಾತವಾಡುತ್ತಿದ್ದ ಗಂಡಸಿನ ಎದುರಿಗೆ ಸುಮ್ಮನೆ ಕಲ್ಲಿನಂತೆ ನಿಂತಿದ್ದವಳೇ..ಹೌದು..ಯಾರೂ ಪರಿಚಯ ಮಾಡಿಕೊಡೋದೇ ಬೇಡ.. ಅವಳೇ ಗೌರಿ! ಕಂಕುಳಲ್ಲಿದ್ದ ಪುಟ್ಟಮಗು ಗಾಬರಿಯಿಂದ ಸಣ್ಣದನಿಯಲ್ಲಿ ಅಳುತ್ತಿದ್ದ..!!
ಅವನಿಗಿಂತ ಸ್ವಲ್ಪವೇ ದೊಡ್ಡದಾದ ಮಗಳು ತಾಯಿಯ ಸೀರೆ ನೆರಿಗೆಗಳಲ್ಲಿ ಅವಿತುಕೊಂಡು, ಅಮ್ಮನ ಕಾಲ್ಗಳನ್ನು ಅಪ್ಪಿಕೊಂಡು ಭಯದಿಂದ ಅಳುವುದನ್ನೂ ಮರೆತಂತೆ ನಿಂತಿದ್ದಳು. ಒಂದು ಕ್ಷಣ ಹೃದಯ ಅರಾಮಾಗಿ, ಎದೆ ಹಗುರಾಗಿ ಉಸಿರಾಡುವಂತಾಯ್ತು. ಗೌರಿ ಮತ್ತು ಮಕ್ಕಳು ಜೀವದಿಂದಲಾದರೂ ಇದಾರಲ್ಲ..ಅಷ್ಟೇ ಸಾಕು..!
“ಏನ್ರೀ, ತಮಾಷೆ ನೋಡ್ತಾ ಇದೀರಲ್ಲ? ನಿಂ ಮನೇಲೇನು ತೂತಿಲ್ಲದ ದೋಸೆ ಹೊಯ್ತಿರೇನು..? ನಡ್ರಿ, ನಡ್ರಿ.. ನೋಡೋದೇನಿದೆ ಇಲ್ಲಿ ಸ್ಪೆಷಲ್ಲು?”
ಆದಷ್ಟೂ ದನಿಯನ್ನು ಒರಟಾಗಿಸಿ ನೆರೆದಿದ್ದವರನ್ನು ಚೆದುರಿಸುವ ಪ್ರಯತ್ನ ಮಾಡತೊಡಗಿದಾಗ, ಗಂಡ ಹೆಂಡತಿ ಬಾಗಿಲಿನತ್ತ, ನನ್ನತ್ತ ತಿರುಗಿ ನೋಡಿದರು.ಚೀಲವನ್ನು ಕೈಯಲ್ಲಿ ಹಿಡಿದು ಸೀದಾ ಒಳಗೆ ಕಾಲಿಟ್ಟೆ.
“ಏನ್ ಗೌರಿ, ಹೇಳದೆ, ಕೇಳದೆ ಬಂದ ಬಿಡೋದೇ..? ನಾನು, ಅಪ್ಪ ಎಷ್ಟು ಗಾಬರಿಯಾಗಿದೀವಿ ಗೊತ್ತಾ?”
ಸಲಿಗೆಯಿಂದ ಹಳೆಯ ಗೆಳತಿಯಂತೆ ಜೋರುದನಿ ತೆಗೆದಾಗ, ಯಾರಿವರು?ಎಂಬ ಗಲಿಬಿಲಿ, ಗೊಂದಲಗಳೊಂದಿಗೆ ಗೌರಿಯ ಮುಖ ಕೊಂಚ ಕಳೆಯಾಯಿತು.
“ನಾನು ಗೌರಿಗೆ ಅಕ್ಕ ಆಗಬೇಕ್ರಿ. ವಿದ್ಯಾಭ್ಯಾಸದ ಕಾರಣದಿಂದ, ಮನೆಯಿಂದ ಭಾಳ ದಿನ ಹೊರಗಿದ್ದೆ. ಹಂಗಾಗಿ ನೀವು ನನ್ನನ್ನ ನೋಡಿಲ್ಲ. ಅಪ್ಪ ಗೌರಿಗೆ ಮತ್ತು ಮಕ್ಕಳಿಗೆ ಬಟ್ಟೆ ತರೋದಿಕ್ಕ ಬಜಾರಕ್ಕೆ ಹೋಗಿದ್ರು. ಸ್ವಲ್ಪ ಲೇಟಾಯ್ತು. ಅಷ್ಟರೊಳಗೆ, ಈಕಿ ತಾನ ಹೊಂಟುಬಂದುಬಿಟ್ಟಿದಾಳೆ. ನೋಡ್ರಿ. ಅಪ್ಪಾರಿಗೆ ಬ್ಯಾರೆ ಕೆಲಸವಿತ್ತು. ಅದಕ್ಕ ನಾನ ಬಂದೆ.”
ಹೇಳುತ್ತ ಹೇಳುತ್ತ ಬ್ಯಾಗನ್ನು ಇರಿಸಿ, ಪುಟ್ಟ ಮಗುವನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದೆ. ಅವನು ಇನ್ನಷ್ಟು ತಾಯಿಗೆ ಕವುಚಿಕೊಂಡ. ಮಗಳತ್ತ ಕೈ ಚಾಚಿದರೆ, ಅವಳೂ ಅಷ್ಟೇ..! ಅಮ್ಮನ ಕಾಲ್ಗಳನ್ನು ಇನ್ನಷ್ಟು ತಬ್ಬಿಕೊಂಡಳು. ಗೌರಿ ಗಂಡ, “ಏನ್ ಮಹಾ ಸಾಮಾನು ತಂದಿರ್ತಾನೆ ಇವರಪ್ಪ? ಇದು ಬೇರೆ ಕೇಡು.” ಗೊಣಗುತ್ತ ಚಪ್ಪಲಿ ಮೆಟ್ಟಿ, ಹೊರಹೋದ. ಒಳ್ಳೇದೇ ಆಯ್ತು. “ಕೂತ್ಕೋ ಗೌರಿ.” ಎಂದು ನಾನೂ ಕುಳಿತೆ.
“ನಾನು ಏಳನೆಯ ಕ್ಲಾಸಿನಲ್ಲಿ ಓದುತ್ತಿದ್ದಾಗ ನೀನು ಐದನೆಯದು ಓದುತ್ತಿದ್ದೆ. ಈಗ ನೋಡು, ನಾನಿನ್ನೂ ಮದುವೇನೇ ಆಗಿಲ್ಲ. ನೀನಾಗಲೇ ಎರಡು ಮಕ್ಕಳ ತಾಯಿ. ಎಷ್ಟು ಮುದ್ದಾಗಿದಾವೆ ಹುಡುಗರು!”
ಗೌರಿಯ ಮುಖದಲ್ಲಿ ಬೆಳಕು ಪೂರಾ ಹೊತ್ತಿಕೊಂಡಿತು.
“ಹಾಂ! ಮೂಲಿ ಮನಿ ಮೀನಕ್ಕ!? ದಿನಾ ದಾಸವಾಳ ಹೂ ತಂದುಕೊಡ್ತಿದ್ದಿ! ಈಗ ಹೀಂಗ ..!”
ಉದ್ಗರಿಸಿ ಸುಮ್ಮನಾದಳು. ನಾನೂ ಮೌನವಾಗಿದ್ದೆ. ಮಕ್ಕಳೂ ಸೈಲೆಂಟಾಗಿದ್ದವು… ಅಪ್ಪ ಹೊರಗೆ ಹೋಗಿದ್ದೇ ಸಾಕೆಂಬಂತೆ..! ನೀರವ ಮೌನ ಕೆಲಹೊತ್ತು ಬಿದ್ದುಕೊಂಡಿತು. ಕೆಲನಿಮಿಷದ ಬಳಿಕ, ಗೌರಿ ಮೆಲ್ಲಗೆ ಉಸುರಿದಳು..
“ಅಪ್ಪ ಎಷ್ಟು ಬೇಜಾರು ಮಾಡಿಕೊಂಡರೋ ಏನೋ..? ಏನನ್ಕೊಂಡ್ರೋ.. ಹೇಳದೆ ಬಂದುಬಿಟ್ಟೆ.!.. ಲೇಟಾಗಿ ಬಂದ್ರೆ ಇವ್ರು ಬಾಯಿಗೆ ಸಿಕ್ಕಂತೆ ಬೈತಾರೆ.. ಅಕ್ಕಪಕ್ಕದವರೆಲ್ಲಾ ಬಂದುಬಿಡ್ತಾರೆ.. ಸುಮ್ಮನೆ ಗಲಾಟೆ.. ಮರ್ಯಾದೆ ಹೋದ್ಹಾಗಾಗುತ್ತೆ..”
“ಮರ್ಯಾದೆ ಬಗ್ಗೆ ಹೆಣ್ಣೇ ಯಾಕೆ ಯೋಚಿಸ್ಬೇಕು? ಗಂಡಿಗೆ ಮರ್ಯಾದೆ ಇರೋಲ್ವೇನು..?”
ಆದಷ್ಟೂ ಹಗುರಾಗಿ, ಅರಾಮಾಗಿ ಹೇಳಲು ಯತ್ನಿಸಿದೆ.
“ಅಪ್ಪನ ಬಗ್ಗೆ ಚಿಂತಿಸ್ಬೇಡ. ಅವರೇನೂ ತಿಳ್ಕಳ್ಳೋದಿಲ್ಲ. ಅವರಿಗಷ್ಟು ಅರ್ಥವಾಗೋಲ್ವೇ..? ಏನೂ ಯೋಚ್ನೆ ಮಾಡಬೇಡ.” ಎಂದೆ. ಸತ್ಯ ಹೇಳಿ ಮತ್ತಷ್ಟು ಅಳಿಸುವುದೇಕೆ? ಮತ್ತೆ ಮೌನ ತಡೆಯಲಾಗದೆ, ಅವಳ ಕೈ ಹಿಡಿದು ಹೇಳಿದೆ..
“ನನಗೆ ತುಂಬಾ ಹೆದರಿಕೆಯಾಗಿತ್ತು ಕಣೇ! ನಿನ್ನ ನೋಡಿ ತುಂಬಾ ಸಂತೋಷವಾಯಿತು.”
“ಸಂತೋಷ ಪಡೋಕೆ ಏನಿದೆ ಬಿಡಿ ಮೀನಕ್ಕ.  ಸಾಕಾಗ್ಹೋಗಿದೆ.. ಸಾಯೋದೇ ಒಳ್ಳೇದು. ನನ್ನಂಥೋರಿಂದ ಯಾರಿಗೇನು ಪ್ರಯೋಜನ..?” ಗೌರಿ ಬಿಕ್ಕಿದಳು.
ಮನೆ ತೋರಿಸಿದ್ದ ಹುಡುಗ ಗೌರಿಯ ಮಗಳನ್ನಾಗಲೇ ಕರೆದೊಯ್ದಿದ್ದ. ಇಬ್ಬರ ನಗುವನ್ನು ಕೇಳಿಸಿಕೊಳ್ಳುತ್ತಾ ಹೇಳಿದೆ..
“ಎಲ್ಲರಿಗೂ ಒಂದಲ್ಲ ಒಂದು ದಿನ ಸಾಕಾಗ್ಹೋಗುತ್ತೆ ಗೌರಿ. ಆದ್ರೆ ಹೆಣ್ಣುಮಕ್ಕಳ ಬದುಕಿಗೆ ಒಂದಲ್ಲ ಒಂದು ಗುರಿಯನ್ನು ಪ್ರಕೃತಿ ಕೊಟ್ಟಿದೆ ನೋಡು. ಸಾಯೋ ಹಕ್ಕನ್ನು ಮಾತ್ರ ಕೊಟ್ಟಿಲ್ಲ. ಯಾಕೆ ಗೊತ್ತಾ..? ಅವಳ ತಾಯ್ತನ…! ನಿನ್ನ ಮಕ್ಕಳನ್ನೇ ನೋಡು… ಪ್ರಳಯವಾದರೂ ನಿನ್ನ ಬಿಟ್ಟು ಇರಲಾರರು. ಅಲ್ವೇ..? ತಾಯಿ ಅಂದ್ರೆ ಏನು ಮತ್ತೆ..? ದೊಡ್ಡವರಾದ ಮೇಲಿನ ಕಥೆ ಬಿಡು. ಈಗಂತೂ ನೀನು ವಿಷ ಕೊಟ್ಟರೂ ಕುಡಿಯುತ್ವೆ ಮಕ್ಳು. ಹೌದು ತಾನೇ..?”
ಗೌರಿಯ ಮೊಗದಲ್ಲಿ ಚಲನೆ ಶುರುವಾಯ್ತು.
“ಮಕ್ಕಳನ್ನು ಸಾಯಿಸಿ, ನೀನೂ ಸಾಯೋದು ಎಷ್ಟು ಹೊತ್ತಿನ ಕೆಲಸ..? ಬಹಳ ಸುಲಭ .ಜನ ಕೂಡ ನಿನ್ನನ್ನ ಬಹಳ ಬೇಗ ಮರೆತು ಬಿಡ್ತಾರೆ. ಪೇಪರ್ನಲ್ಲಿ ಒಂದು ಸುದ್ದಿ ಬಂದುಹೋದರೆ ಮುಗೀತು. ನಿನ್ನ ಗಂಡ ಮತ್ತೆ ಮದುವೆಯಾಗ್ತಾನೆ. ಯಾವುದೂ ನಿಲ್ಲೋದಿಲ್ಲ.! ಎಲ್ಲ ನಡೀತಾನೇ ಇರುತ್ತೆ. ಆದ್ರೆ..ಯೋಚ್ಸು ಗೌರಿ.. ಬದುಕನ್ನೇ ಮುಗಿಸೋದಿಕ್ಕೆ ನಿನಗ್ಯಾವ ಹಕ್ಕಿದೆ..? ನೀನ್ಯಾರು ಅನ್ಕಂಡಿದೀ..? ಕರ್ತವ್ಯನಿರತ ತಾಯಿ. ನೀನು ಸ್ವತಂತ್ರಳು..! ನೀನು ಯೋಗ್ಯಳು ಕೂಡ..! ಮತ್ತೆ ಸಾಯುವ ಮಾತೇಕೆ..? ಅಪ್ಪನೂ ಬೇಡ ಗಂಡನೂ ಬೇಡ ಎಂದು ನೀನು ನಿರ್ಧರಿಸಿದರೂ ಏನೂ ತಪ್ಪಿಲ್ಲ. ಜೀವನ ನಿನಗೆ ಬದುಕುವ ಬೇಕಾದಷ್ಟು ಆಯ್ಕೆಗಳನ್ನು ಕೊಡುತ್ತೆ.”
ಗೌರಿ ಸುಮ್ಮನೆ ಕೇಳುತ್ತಲಿದ್ದಳು.
“ನೀನು ಸಹನಾಮಯಿ. ಗೊತ್ತು. ಆದರೆ ನಿನ್ನ ಸಹನೆಯ ಮಿತಿಯೂ ಕೊನೆಗೊಳ್ಳಬಹುದು. ಆಗ ನನ್ನನ್ನು ನೆನೆಸಿಕೋ.”
ಪರ್ಸ್‌ನಿಂದ ವಿಸಿಟಿಂಗ್ ಕಾರ್ಡ್ ತೆಗೆದು ಅವಳ ಕೈಗಿಟ್ಟೆ. ಗೌರಿ ಅದನ್ನು ಜೋಪಾನವಾಗಿ ತೆಗೆದುಕೊಂಡದ್ದು ಗಮನಿಸಿ ನೆಮ್ಮದಿಯೆನಿಸಿತು.
ಹೊರಗೆ ಮಕ್ಕಳ ನಗುವಿನ ಕಲರವ ಬದುಕಿನ ನೂರಾರು ದಾರಿಗಳಿಗೆ ಆಹ್ವಾನವೀಯುವ ದನಿಯಂತೆ ಕೇಳಿಸುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ