ಭಾನುವಾರ, ಜೂನ್ 24, 2012

ಸುಧಾ ಚಿದಾನಂದ ಗೌಡ

ಸುಧಾ ಚಿದಾನಂದ ಗೌಡ


ಟಿಪ್ಪಣಿ: ಅರುಣ್ ಜೋಳದಕೂಡ್ಲಿಗಿ


   ಕಳೆದ ವರ್ಷ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಳ್ಳಾರಿ ಜಿಲ್ಲಾ ಯುವ ಬರಹಗಾರರ ಬಗ್ಗೆ ಮಾತನಾಡಲು ಹೋಗಿದ್ದೆ. ಸರಿಸುಮಾರು ನನ್ನ ತಲೆಮಾರಿನ, ನನಗಿಂತ ಸ್ವಲ್ಪ ಹಿರಿಯರ ಕುರಿತು ಟಿಪ್ಪಣಿ ರೂಪದ ಮಾತನಾಡಿದೆ. ಅದೇ ಸಭೆಯಲ್ಲಿ ಮಹಿಳಾ ಸಾಹಿತ್ಯ ಕುರಿತಂತೆ ಸುಧಾ ಚಿದಾನಂದ ಗೌಡ ಅವರು ಮಾತನಾಡಲು ಬಂದಿದ್ದರು. ಪ್ರಮಾಣಿಕವಾಗಿ ಹೇಳಬೇಕೆಂದರೆ, ನಾನು ಮೊದಲು ಅವರ ಹೆಸರನ್ನು ಕೇಳಿದ್ದು ಆ ಸಭೆಯಲ್ಲಿ. ಆ ದಿನ ನನ್ನ ಮಾತುಗಳಲ್ಲಿ ಸುಧಾ ಅವರ ಹೆಸರನ್ನು ನಾನು ಪ್ರಸ್ತಾಪಿಸಿರಲಿಲ್ಲ. ಆಗ ಚಿದಾನಂದ ಗೌಡ ಅವರು ನಿಮಗೆ ಬಳ್ಳಾರಿ ಜಿಲ್ಲಾ ಬರಹಗಾರರ ಬಗ್ಗೆ ತಿಳಿದಿಲ್ಲ ಎಂದು ಪ್ರಶ್ನಿಸಿದ್ದರು. ಅವರು ಯಾವ ವಿಷಯವಾಗಿ ಹೇಳುತ್ತಿದ್ದಾರೆ ಎಂದು ನನಗೆ ಅರ್ಥವಾಗಿರಲಿಲ್ಲ.


  ಕೆಂಡಸಂಪಿಗೆ ವೆಬ್ ಮ್ಯಾಗಜಿನ್‌ನಲ್ಲಿ ಸುಧಾ ಅವರ ಬರಹ ನೋಡಿದ್ದೆನಾದರೂ ಅವರೇ ಇವರೆಂದು ತಿಳಿದಿರಲಿಲ್ಲ. ಬದಲಾಗಿ ಇವರು ಬಳ್ಳಾರಿ ಜಿಲ್ಲೆಗೆ ಸೇರಿದವರೆಂದೂ ಗೊತ್ತಿರಲಿಲ್ಲ. ಆ ನಂತರ ಟಿ.ಎಂ.ಉಷಾರಾಣಿ ಅವರಲ್ಲಿ ಅವರ ಬಗ್ಗೆ ಕೇಳಿ ತಿಳಿದೆ. ಆ ನಂತರ ಅವರ ಬರಹಗಳನ್ನು ಓದುತ್ತಾ, ಈ ಮೇಲ್,ಫೇಸ್ ಬುಕ್ ಮುಂತಾದ ಕಡೆ ಮಾತುಕತೆ ಸಾದ್ಯವಾಗಿ ಪರಿಚಯ ಗಟ್ಟಿಯಾಯಿತು. ಆ ನಂತರ ಅವರ ಪುಸ್ತಕಗಳನ್ನು ತರಿಸಿಕೊಂಡು ಓದಿದಾಗಲಂತೂ ಅವರ ಪರಿಚಯ ಸಾಹಿತ್ಯಿಕವಾಗಿಯೂ ನೆನಪಿನಲ್ಲಿ ಉಳಿಯುವಂತಾಯಿತು. ಹಿರಿಯರಾದ ಸುಧಾ ಚಿದಾನಂದಗೌಡ ಅವರಿಂದ ನಾವು ಕಲಿಯುವುದಿದೆ ಅನ್ನಿಸಿತು.


  ಇರಲಿ, ಸುಧಾ ಚಿದಾನಂದಗೌಡ ಅವರ ಬಗ್ಗೆ ಒಂದು ಪರಿಚಯಾತ್ಮಕ ಸಣ್ಣ ಟಿಪ್ಪಣಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವೆ. ಸುಧಾ ಅವರ ಜನನ ೧೯೭೧ ರ ಅಗಷ್ಟ್ ೧೭. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ. ೭ ನೇ ತರಗತಿಯಲ್ಲೇ ಕವಿತೆ ರಚನೆಯ ಗೀಳು ಹತ್ತಿಸಿಕೊಂಡ ಇವರು ೧೯೯೮ ರಲ್ಲಿ ಯುವಕರ ಸಂಘ ರಾಮನಗರ ಪ್ರಕಾಶನದಿಂದ ತಮ್ಮ ಮೊದಲ ಕಥಾ ಸಂಕಲನ ‘ಬದುಕು ಪ್ರಿಯವಾಗುವ ಬಗೆ’ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಜಾಣಗೆರೆ ಪತ್ರಿಕೆಯಲ್ಲಿ ನಿರಂತರವಾಗಿ ೫೨ ವಾರ ‘ಸ್ತ್ರೀದ್ವನಿ’ ಅಂಕಣ ಬರೆಯುವ ಮೂಲಕ ಸ್ತ್ರೀ ಸಂವೇದನೆಯ ಭಿನ್ನ ಟಿಪ್ಪಣಿಗಳನ್ನು ಬರೆದಿದ್ದಾರೆ.

   ಬದುಕು ಪ್ರಿಯವಾಗುವ ಬಗೆ ಸಂಕಲನದಲ್ಲಿ ಮೊದಲ ಕಥೆಗಳಿಗೆ ಇರುವ ಸಾಮಾನ್ಯ ಮಿತಿಗಳು ಇವೆ. ನಂತರದ ಅವರ ‘ದಿಟ್ಟಿಯು ನಿನ್ನೊಳು ನೆಟ್ಟಿರೆ’ ಸಂಕಲನದಲ್ಲಿ ಮೊದಲ ಸಂಕಲನದ ಮಿತಿಗಳನ್ನು ಮೀರಲು ಯತ್ನಿಸಿರುವುದು ಗೋಚರಿಸುತ್ತದೆ. ಕೇರಾಫ್ ಕಿಚನ್ ದಿನಗಳಲ್ಲಿ ತನ್ನ ಬಗ್ಗೆ ಮಾತನಾಡುತ್ತಾ ನನ್ನ ಪ್ರಪಂಚ ಸದಾ ಚಿಕ್ಕದೇ ಎಂದು ಹೇಳುತ್ತಲೇ ಕತೆಗಳಲ್ಲಿ ಅದನ್ನು ಮೀರಲು ಪ್ರಯತ್ನಿಸುತ್ತಾರೆ. ಅವರ ಲೇಡಿ ಲಕ್ಕವ್ವ ಕಥೆ ಹೆಣ್ಣಿನ ಬದುಕಿನ ಒಂದು ವಿಚಿತ್ರ ಮಗ್ಗಲನ್ನು ಕಾಣಿಸಲು ಯತ್ನಿಸಿದ್ದಾರೆ.  ಅಂತರಂಗದ ಆಯಾಮ ಕಥೆಯಲ್ಲಿ ಅಹಲ್ಯೆ ಬಗೆಗಿನ ಕಥನವನ್ನು ಮುರಿದುಕಟ್ಟಲು ಪ್ರಯತ್ನಿಸಿದ್ದಾರೆ. ಈ ಮೂಲಕ ಪುರಾಣದ ಕಥೆಯನ್ನು ವರ್ತಮಾನದ ಕಣ್ಣೋಟದಿಂದ ನೋಡುವ ವಿಶಿಷ್ಟ ಕ್ರಮ ಈ ಕಥೆಯಲ್ಲಿ ಕಾಣುತ್ತದೆ.  ಕಾಯುತಿದೆ ಬದುಕು ಕಥೆಯಲ್ಲಿ ಹೆಣ್ಣಿನ ಒಂದು ಸಂದಿಗ್ಧ ಜೀವನ ಗಾಥೆಯನ್ನು ತೋರಿಸಿದ್ದಾರೆ. ಹೀಗೆ ಅವರ ಹಲವು ಕಥನದಲ್ಲಿ ಹೆಣ್ಣಿನ ಭಿನ್ನ ಲೋಕಗಳನ್ನು ಕಾಣಿಸಲು ಪ್ರಯತ್ನಿಸಿರುವುದು ಕಾಣುತ್ತದೆ.

   ಸುಧಾ ಅವರ ಕಥನದಲ್ಲಿ ನನಗೆ ಎದ್ದು ಕಂಡದ್ದು ಕಥನದೊಳಗಿನ ನಾಟಕೀಯ ಗುಣ. ಇದನ್ನು ನೋಡಿದರೆ ಇವರು ನಾಟಕ ಬರೆದರೆ ಯಶಸ್ವಿ ನಾಟಕಕಾರರಾಗುವ ಎಲ್ಲಾ ಲಕ್ಷಣಗಳು ಅವರ ಕಥನದಲ್ಲಿ ಕಾಣುತ್ತದೆ.  ಅವರ ಕಥೆಗಳ ಶಿಲ್ಪದಲ್ಲಿ ಸಾಂದ್ರತೆಯ ಅಂಶ ಕಡಿಮೆ ಇದೆ ಅನ್ನಿಸುತ್ತದೆ. ಕಥನ ತಂತ್ರದ ಭಿನ್ನತೆಯೂ ಅಷ್ಟಾಗಿ ಕಾಣುವುದಿಲ್ಲ . ಕಥನ ಕ್ರಮದಲ್ಲಿ ಅವರದ್ದೇ ಆದ ಒಂದು ವಿಶಿಷ್ಟ ಲಯ ಇನ್ನು ಸಿದ್ದಿಸಿಲ್ಲ. ಹಾಗಾಗಿ ಅವರ ಕಥನಕ್ರಮದಲ್ಲಿ ಹಲವಾರು ಪ್ರಭಾವ ಪ್ರೇರಣೆಗಳು ಕಾಣುತ್ತವೆ. ಇಂತಹ ಕೆಲವು ಮಿತಿಗಳನ್ನು ಅವರ ಕಥನದ ಬಗ್ಗೆ ಹೇಳಬಹುದು.  ಅವರ ಕನ್ನಡಿಯನ್ನು ನೋಡಲಾರೆ ಹೊಸ ಕಥಾ ಸಂಕಲನವನ್ನು ಓದಲಾಗಿಲ್ಲ. ಅದರಲ್ಲಿ  ನಾನು ಗುರುತಿಸಿದ ಈ ಮೇಲಿನ ಮಿತಿಗಳನ್ನು ಮೀರಿದ್ದಾರೆಯೇ ನೋಡಬೇಕು. ಇರಲಿ ಇಲ್ಲಿನ ಮಾತುಗಳು ಈ ತಲೆಮಾರಿನ ಓದುಗನೊಬ್ಬ ಓದಿದಾಗ ಅನ್ನಿಸಿದ ಪ್ರಾಮಾಣಿಕ ಅನಿಸಿಕೆಗಳನ್ನು ಮಾತ್ರ ಹೇಳಿಕೊಂಡಿದ್ದೇನೆ. ಇದನ್ನು ವಿಮರ್ಶೆ ಎಂದು ತಿಳಿಯಬೇಕಾಗಿಲ್ಲ.

  ಸುಧಾ ಅವರ ಷೇಕ್ಸ್‌ಪಿಯರ್ ಸೃಷ್ಠಿಸಿದ ಅನನ್ಯಯರು ಒಂದು ಉತ್ತಮ ಸಂಶೋಧನೆ. ಷೇಕ್ಸ್‌ಪಿಯರ್ ಅವರು ಸೃಷ್ಠಿಸಿದ ಮಹಿಳಾ ಪಾತ್ರಗಳನ್ನು ತುಂಬಾ ಭಿನ್ನವಾಗಿ ನೋಡಿದ್ದಾರೆ. ಈ ಕಾರಣಕ್ಕೆ ಸುಧಾ ಅವರು ಕತೆಗಾರ್ತಿ, ಕವಯಿತ್ರಿ ಮಾತ್ರವಲ್ಲದೆ ಸಂಶೋಧಕಿಯೂ ಕೂಡ. ಅವರ ಸಂಶೋಧನೆಯ ವ್ಯಾಪ್ತಿ ವಿಸ್ತಾರವಾಗಲಿ. ಅವರ ಕಥನದ ಸಾದ್ಯತೆಗಳು ಹೆಚ್ಚಲಿ, ಇನ್ನಷ್ಟು ಮತ್ತಷ್ಟು ಶಕ್ತಿಯುತವಾದದ್ದನ್ನು ಬರೆಯಲಿ ಎಂದು ಆಶಿಸುತ್ತಾ ಈ ಪುಟ್ಟ ಟಿಪ್ಪಣಿಯನ್ನು ಮುಗಿಸುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ