ಬುಧವಾರ, ಡಿಸೆಂಬರ್ 5, 2012

ಬಳ್ಳಾರಿ ಜಿಲ್ಲೆ :ಸಾಹಿತ್ಯದ ಹೊಸ ತಲೆಮಾರು


-ಡಾ.ಅರುಣ್ ಜೋಳದಕೂಡ್ಲಿಗಿ

  ಬಳ್ಳಾರಿ ಜಿಲ್ಲೆ ವಡ್ಡಾರಾಧನೆಯ ಕೇಶಿರಾಜನಿಂದ ಇಂದಿನ ದೈತ್ಯ ಕಥೆಗಾರ ಕುಂವಿ ವರೆಗೂ ಸಾಹಿತ್ಯವಲಯ ಸೂಕ್ಷ್ಮತೆಯನ್ನು ಕಾಪಿಟ್ಟುಕೊಂಡೆ ಬಂದಿದೆ. ಕಾಲಕಾಲಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಬರಹಗಾರರು ತಮ್ಮದೇ ಆದ ಸೃಜನಶೀಲ ಹುಡುಕಾಟ ಮಾಡಿಕೊಂಡು ಬಂದವರೆ ಆಗಿದ್ದಾರೆ. ಸದ್ಯಕ್ಕೆ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಬರೆವ ಬರಹಗಾರರ ಸಂಖ್ಯೆ ದೊಡ್ಡದಿದೆ. ಅಂತಹ ಕೆಲವು ಬರಹಗಾರರನ್ನು ಪರಿಚಯಿಸುವ ಟಿಪ್ಪಣಿ ರೂಪದ ಬರಹವಿದು. ಇಲ್ಲಿ ನನ್ನ ಗಮನಕ್ಕೆ ಬರದ ಬರಹಗಾರರು ಇರಬಹುದು ಎನ್ನುವುದು ನನ್ನ ನಂಬಿಕೆ. ನನ್ನ ಓದಿಗೆ ಸಿಕ್ಕ ಸಾಹಿತ್ಯದ ಹೊಸ ತಲೆಮಾರಿನ ಒಂದು ಚಿತ್ರವನ್ನು ಕಟ್ಟಿಕೊಡಲು ಇಲ್ಲಿ ಪ್ರಯತ್ನಿಸಿದ್ದೇನೆ.

ಕನ್ನಡದಲ್ಲಿ ಹೊಸ ತಲೆಮಾರು:

  ನನ್ನ ಮಾತುಗಳನ್ನು ಹೆಚ್. ಎಸ್. ಶಿವಪ್ರಕಾಶ್ ಅವರು ಕೇಂದ್ರ ಸಾಹಿತ್ಯ ಅಕಾದೆಮಿಯ ಇಂಡಿಯನ್ ಲಿಟರೇಚರ್ ಮ್ಯಾಗಜಿನ್ನಿಗೆ ಬರೆದ ಮಾತುಗಳ ಮೂಲಕ ಆರಂಭಿಸುತ್ತೇನೆ. ಅವು ಹೀಗಿವೆ: ‘ಯಾವುದೇ ಚಳವಳಿ ಇಲ್ಲದ ಈ ಕಾಲದಲ್ಲಿ, ಕನ್ನಡ ಕವಿಗಳು ತಮ್ಮದೇ ಆದ ತಾತ್ವಿಕ ಭಿತ್ತಿಯೊಂದನ್ನು ರೂಪಿಸಿಕೊಂಡು ಬರೆಯುತ್ತಿದ್ದಾರೆ. ಹೀಗೆ ಚಳವಳಿ ಇಲ್ಲದಿದ್ದರ  ಶಕ್ತಿ ಮತ್ತು ದೌರ್ಬಲ್ಯ ಎರಡನ್ನೂ ಒಳಗೊಂಡು  ತಮ್ಮದೇ ಆದ ಆ ಕ್ಷಣದ ಹೊಳಹುಗಳನ್ನು ಕಟ್ಟಿಕೊಡುತ್ತಾ ಒಂದು ಬಗೆಯ ಸಮ್ಮಿಶ್ರ ರೂಪಕಗಳನ್ನು ಸೃಷ್ಠಿಸುತ್ತಿದ್ದಾರೆ. ಹಾಗಾಗಿ ಸಂವೇದನಾಶೀಲತೆಯ ತೀವ್ರತೆಯ ಕೊರತೆ ಈ ಹೊತ್ತಿನ ಕಾವ್ಯದಲ್ಲಿ ಕಂಡು ಬರುತ್ತದೆ. ಒಳ್ಳೆಯ ಕವಿತೆ ಬರೆಯಬೇಕೆನ್ನುವ ಉತ್ಕಟತೆಗಿಂತ, ಕವಿ ನ್ನಿಸಿಕೊಳ್ಳಬೇಕೆನ್ನುವ ದಾವಂತಕ್ಕೆ ಕಟ್ಟುಬಿದ್ದು ಕಾವ್ಯ ಬರೆಯುತ್ತಾರೆ’ ಎನ್ನುತ್ತಾರೆ. ಈ ಮಾತು ಕನ್ನಡದ ಯುವ ಕವಿಗಳನ್ನು ಕುರಿತಾದದ್ದು. ಇದು ಪೂರ್ಣ ನಿಜವಲ್ಲದಿದ್ದರೂ ಈ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ.

  ಕನ್ನಡದಲ್ಲಿ ಹೊಸ ತಲೆಮಾರು ತುಂಬಾ ಕ್ರಿಯಾಶೀಲವಾಗಿದೆ. ಮುಖ್ಯವಾಗಿ ಕನ್ನಡದ ಹೊಸ ತಲೆಮಾರನ್ನು ಗುರುತಿಸುವ ಮತ್ತು ಚರ್ಚಿಸುವ ವಾತಾವರಣ ಉಂಟಾಗಿದೆ. ಅದು ತುಂಬಾ ಗಂಭೀರವಾದ ವಿಷಯ. ಪ್ರೊ. ರಹಮತ್ ತರೀಕೆರೆ ಅವರು ಹೊಸ ತಲೆಮಾರಿನ ತಲ್ಲಣ ಎನ್ನುವ ಒಂದು ಪುಸ್ತಕವನ್ನೇ ಸಂಪಾದಿಸಿದರು. ಅಲ್ಲಿ ಕನ್ನಡದ ಬಹುಮುಖ್ಯ ಯುವ ಬರಹಗಾರರು ತಮ್ಮ ಬರಹದ ತಲ್ಲಣಗಳನ್ನು ಹಂಚಿಕೊಂಡಿದ್ದಾರೆ. ತರೀಕೆರೆಯವರು ಯುವ ಬರಹಗಾರರನ್ನು ಕುರಿತು ಹೇಳುವ ಮಾತು ಹೀಗಿದೆ: ‘ಹೆಚ್ಚಿನವರು ಪ್ರಾಮಾಣಿಕವಾಗಿ ಗಂಬಿsರವಾಗಿ ಜೀವನೋತ್ಸಾಹ, ಶ್ರದ್ಧೆ ಮತ್ತು ಸೂಕ್ಷ್ಮತೆಗಳಿಂದ ಬರೆಯುತ್ತಿದ್ದಾರೆ. ತಮ್ಮ ಸುತ್ತಣ ವಿದ್ಯಮಾನಗಳ ಜತೆ ಕುತೂಹಲ, ಅವನ್ನು ಪರಿಶೀಲಿಸುವ ಎಚ್ಚರ, ಅವುಗಳ ಒಳಗಿನ ವೈರುಧ್ಯಗಳನ್ನು ಗಮನಿಸುವ ಸೂಕ್ಷ್ಮತೆ ಮತ್ತು ಅವನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ನಿಷ್ಠುರತೆ ಅವರಲ್ಲಿದೆ. ಕೆಲವರು ಈಗಷ್ಟೇ ಮೊದಲ ಬರೆಹದಲ್ಲೇ ಪ್ರತಿಭೆ ಪ್ರಕಟಿಸಿರುವವರು; ಕೆಲವರು ತಮ್ಮ ಅಸ್ಮಿತೆಯನ್ನು ಹುಡುಕಿಕೊಳ್ಳುತ್ತಿರುವರು. ಈ ಲೇಖಕರು ಪ್ರಕಟಿಸುತ್ತಿರುವ ಲೋಕದೃಷ್ಟಿ ಒಂದೇ ಅಲ್ಲ. ಹಲವು. ಆದರೆ ಹೆಚ್ಚಿನದೆಲ್ಲವೂ ಕನ್ನಡದ ಮಾನವತಾವಾದಿ ಪರಂಪರೆಯ ಚೌಕಟ್ಟಿನೊಳಗಿದೆ.  ಅತ್ಯುತ್ತಮ ಮನುಷ್ಯನ ಹುಡುಕಾಟ ಮತ್ತು ಅತ್ಯುತ್ತಮ ಸಮಾಜದ ಸೃಷ್ಟಿಯ ಹಂಬಲ ಇವರ ಬರೆಹದ ಆಶಯವಾಗಿದೆ.
    ತಲ್ಲಣ, ಅಸ್ಪಷ್ಟತೆ, ಹುಡುಕಾಟ, ಉತ್ಸಾಹ, ಉಮೇದುಗಳೆಲ್ಲವೂ ಸೇರಿದಂತಹ ಒಂದು ಸಂಕೀರ್ಣ ಸನ್ನಿವೇಶದಲ್ಲಿ ಬರೆಯುತ್ತಿರುವ ಹೊಸತಲೆಮಾರಿನ ಲೇಖಕರ ಬರೆಹದ ಮೂಲಕ, ಕನ್ನಡ ಸಾಹಿತ್ಯವು ೨೧ನೇ ಶತಮಾನದ ಈ ಮೊದಲ ಪಾದದಲ್ಲಿ, ಹೊಸ ಹೊರಳಿಕೆಯನ್ನು ಪಡೆಯಲು ಯತ್ನಿಸುತ್ತಿದೆ. ಈ ತಲೆಮಾರಿನ ಬರೆಹ ದೊಡ್ಡ ಸಾಧನೆ  ಮಾಡುವ ಸಾಧ್ಯತೆಗಳನ್ನಂತೂ ಪ್ರಕಟಿಸಿದೆ. ನಿಸ್ಸಂಶಯವಾಗಿ ಹೊಸತಾದುದು ಹುಟ್ಟುವ ಸಾಧ್ಯತೆಯಿರುವುದು ಈ ತಲೆಮಾರಿಂದಲೇ ಹೀಗೆ ಸಾಹಿತ್ಯದ ಹೊಸ ತಲೆಮಾರನ್ನು ಗುರುತಿಸಲು ಸಾದ್ಯವಿದೆ’ ಎನ್ನುತ್ತಾರೆ. ಈ ಮಾತುಗಳು ಕನ್ನಡ ಸಾಹಿತ್ಯದ ಹೊಸ ತಲೆಮಾರಿನ ಒಂದು ಲಕ್ಷಣವನ್ನು ಹೇಳುತ್ತಿವೆ. ಅಂತೆಯೇ ನಟರಾಜ ಹುಳಿಯಾರ ಅವರ ಸಂಪಾದಕತ್ವದಲ್ಲಿ ಬಂದ ಕನ್ನಡ ಟೈಮ್ಸ ಪತ್ರಿಕೆಯಲ್ಲಿಯೂ ಹೊಸ ತಲೆಮಾರು ಎಂದು ವಿಶೇಷ ಸಂಚಿಕೆಯನ್ನು ರೂಪಿಸಿ ಇಂತದ್ದೇ ಮಾತುಗಳನ್ನು ಆಡಿದ್ದರು.

  ಕರ್ನಾಟಕದಲ್ಲಿ ಹೊಸ ತಲೆಮಾರೊಂದು ತುಂಬಾ ಶಕ್ತಿಯುತವಾಗಿ ಬರೆಯುತ್ತಾರೆ. ಪೀರ್ ಭಾಷಾ, ವಿಕ್ರಮ ವಿಸಾಜಿ, ಚಿದಾನಂದ ಸಾಲಿ, ಕಲಿಗಣನಾಥ ಗುಡದೂರು, ತುರುವಿಹಾಳ ಚಂದ್ರು, ತಾರಿಣಿ ಶುಭದಾಯಿನಿ, ಕೆ. ಅಕ್ಷತಾ, ಅರವಿಂದ ಚೊಕ್ಕಾಡಿ, ಶಶಿ ಸಂಪಳ್ಳಿ, ವಿನಯಾ ವಕ್ಕುಂದ, ಎಂ.ಡಿ. ಒಕ್ಕುಂದ, ಸುನಂದಾ ಪ್ರಕಾಶ ಕಡಮೆ, ಚ.ಹ. ರಘುನಾಥ, ಸರ್ಜಾಶಂಕರ ಹರಳೀಮಠ, ರಮೇಶ್ ಅರೋಲಿ, ನಾಗಣ್ಣ ಕಿಲಾರಿ, ದೇವು ಪತ್ತಾರ, ಚಿದಾನಂದ ಕಮ್ಮಾರ್, ವಸುದೇಂದ್ರ, ಬಿ.ಶ್ರೀನಿವಾಸ, ಮಾಧವಿ ಭಂಡಾರಿ, ಶ್ರೀದೇವಿ ಕೆರೆಮನೆ, ಶಿವರಾಜ ಬೆಟ್ಟದೂರು, ಗಣೇಶ್ ಹೊಸಮನೆ, ಸಂದೀಪ ನಾಯಕ, ನಾಗಮಂಗಲ ಕೃಷ್ಣಮೂರ್ತಿ, ಟೀನಾ ಶಶಿಕಾಂತ, ವಿಕಾಸ ನೇಗಿಲೋಣಿ, ಕೆ. ಕರಿಸ್ವಾಮಿ, ಆರಿಫ್ ರಾಜಾ, ವೀರಣ್ಣ ಮಡಿವಾಳರ, ರೂಪಾ ಹಾಸನ, ಜ್ಯೋತಿ ಗುರುಪ್ರಸಾದ್, ಅನಸೂಯ ಕಾಂಬಳೆ, ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಡೆಯೇ ಇದೆ. ಇಲ್ಲಿ ಕಾವ್ಯ ಕಥೆ ಪ್ರಬಂಧ ಮುಂತಾದ ಪ್ರಾಕಾರಗಳಲ್ಲಿ ಒಂದು ಪ್ರಯೋಗ ನಡೆಯುತ್ತಿದೆ

  ಈ ಪ್ರಬಂಧದಲ್ಲಿ ಬಳ್ಳಾರಿ ಜಿಲ್ಲೆಯ ಯುವ ಬರಹಗಾರನ್ನಿಟ್ಟುಕೊಂಡು ಟಿಪ್ಪಣಿ ಮಾಡಿದ್ದೇನೆ. ಯಾಕೆಂದರೆ ಎಷ್ಟೋ ಬಾರಿ ರಾಜ್ಯದ ಯುವ ಬರಹಗಾರರು ಎಂದಾಗ ಕೆಲವರು ಮಾತ್ರ ಪರಿಗಣಿಸಲ್ಪಟ್ಟು ಬಹುತೇಕರು ಕಡೆಗಣಿಸಲ್ಪಡುತ್ತಾರೆ. ಹಾಗಾಗಿ ಬಳ್ಳಾರಿ ಜಿಲ್ಲೆಯ ಯುವ ಬರಹಗಾರರು ಇಂದು ಏನನ್ನು ಬರೆಯುತ್ತಿದ್ದಾರೆ? ಈ ಬರಹದ ಮೂಲಕ ನಾಡಿನ ಹೊಸ ತಲೆಮಾರಿಗೆ ಏನನ್ನು ಸೇರಿಸುತ್ತಿದ್ದಾರೆ? ಎನ್ನುವುದನ್ನು ಮುಖ್ಯವಾಗಿಟ್ಟುಕೊಂಡಿದ್ದೇನೆ. ಇಲ್ಲಿ ಸಾದ್ಯವಾದಷ್ಟು ಬಳ್ಳಾರಿ ಜಿಲ್ಲೆಯ ಬರಹಗಾರರನ್ನು ಗಮನಹರಿಸಲು ಪ್ರಯತ್ನಿಸಿದ್ದೇನೆ.
ಬಳ್ಳಾರಿ ಜಿಲ್ಲೆಯಲ್ಲಿ ಹೊಸ ತಲೆಮಾರು:
  ಬಳ್ಳಾರಿ ಜಿಲ್ಲೆಯಲ್ಲಿ ಕವಿಗಳ ಸಂಖ್ಯೆ ಹೆಚ್ಚಿದೆ. ಬಿ. ಪೀರ್ ಭಾಷಾ, ಮಲ್ಲಿಕಾರ್ಜುನಗೌಡ ತೂಲಹಳ್ಳಿ, ವೆಂಕಟಗಿರಿ ದಳವಾಯಿ, ಸಿದ್ದರಾಮ ಹಿರೇಮಠ, ಕಂಪ್ಲಿ ಶಿವಕುಮಾರ್, ಸಿದ್ದು ದೇವರಮನಿ, ಅಕ್ಕಿ ಬಸವೇಶ, ರಾಮಪ್ಪ ಮಾದರ, ಅಂಬಿಗರ ಮಂಜುನಾಥ, ಎಸ್. ಮಂಜುನಾಥ, ಕೆ.ಶಿವಲಿಂಗಪ್ಪ ಹಂದಿಹಾಳು, ಅಜಯ್ ಬಣಕಾರ್, ನಾಗರಾಜ ಬಣಕಾರ್, ಸೈಫ್ ಜಾನ್ಸೆ ಕೊಟ್ಟೂರು, ಸುಧಾ ಚಿದಾನಂದಗೌಡ, ಸುಜಾತ ಅಕ್ಕಿ, ಟಿ.ಎಂ. ಉಷಾರಾಣಿ, ಛಾಯಾ ಭಗವತಿ, ಪದ್ಮಾ ಜಾಗಟಗೇರಿ, ಗಿರಿಜಾ ಬೂದೂರು, ನಾಗಮಂಜುಳಾ ಜೈನ್ ಮುಂತಾದವರನ್ನು ಪ್ರಮುಖವಾಗಿ ಗುರುತಿಸಬಹುದು.

  ಬಿ.ಪೀರ್ ಭಾಷಾ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ತುಂಬಾ ಶಕ್ತಿಯುತವಾದ ಕವಿ. ಸಮಾಜವಾದಿ ಹೋರಾಟಗಾರರ ಸಂದರ್ಶನದ ಎರಡು ಸಂಪುಟಗಳನ್ನು ಪ್ರಕಟಿಸುವ ಮೂಲಕ ಸಂಶೋಧನೆ ವಿಮರ್ಶೆಯಲ್ಲಿಯೂ ಗಂಭೀರ ಕೆಲಸ ಮಾಡುತ್ತಿದ್ದಾರೆ. ಜೀವಬಂತು ಹಾದಿಗೆ, ಜಾಲಿ ಹೂಗಳ ನಡುವೆ, ದೇವರುಗಳೆಲ್ಲಾ ಮನುಷ್ಯರಾದ ದಿನ, ಈಚೆಗೆ ಅಕ್ಕ ಸೀತಾ ನೀನು ನನ್ನಂತೆ ಶಂಕಿತ ಎನ್ನುವ ಸಂಕಲನಗಳ ಮೂಲಕ ಕನ್ನಡ ಕಾವ್ಯಕ್ಕೆ ಬೇರೆಯದೇ ಆದ ಶಕ್ತಿಯನ್ನು ತುಂಬಿದವರು. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಎನ್ನುವ ಪದ್ಯದಲ್ಲಿ ಹೌದು ಅಕ್ಕ ಸೀತಾ/ ನಿನ್ನಂತೆ ನಾನೂ ಶಂಕಿತ/ನಿನ್ನ ಪಾತಿವ್ರತ್ಯದಂತೆಯೇ ನನ್ನ ದೇಶಭಕ್ತಿ/ ಸಾಬೀತು ಪಡಿಸುವುದಾದರೂ ಹೇಗೆ ಹೇಳು ಶೀಲ? ಯಾವ ಸಾಕ್ಷಿಗಳನ್ನು ತರುವುದು ಎಲ್ಲಿಂದ/ ನಮ್ಮ ಮನೆಯಲ್ಲಿಯೇ ನಾವು ನಿರಾಶ್ರಿತರು/ತುಂಬಿದ ನಾಡೊಳಗೆ ಪರಕೀಯರು/ನಮ್ಮ ನೆತ್ತರಿನಿಂದ ಅವರು/ ನಮ್ಮ ನೆಮ್ಮದಿಯನ್ನು ಕಿತ್ತುಕೊಂಡಿದ್ದಾರೆ/ಅಪವಾದದ ಹಸ್ತ್ರಗಳಿಂದ ಹೃದಯ/ ಗಾಯಗೊಳಿಸಿದ್ದಾರೆ.
ಅಕ್ಕ ಸೀತಾ/ ನಾವು ಈ ನೆಲದ ಮಕ್ಕಳು/ಪರೀಕ್ಷೆಯೆಂಬ ಪಿತೂರಿಯ/ ಬೆಂಕಿಯಲ್ಲೇಕೆ ನಾವು ಬೇಯಬೇಕು/ ಬೆನ್ನಿಗೆ ಬಾಣ ಬಿಡುವ ಕ್ರೌರ್ಯವೇಕೆ ನಮ್ಮನ್ನಾಳಬೇಕು. ಎಂದು ಸೂಕ್ಷ್ಮವಾಗಿ ಪ್ರಶ್ನಿಸುತ್ತಾರೆ. ಈ ಸಂಕಲನದ ಅಷ್ಟೂ ಕವಿತೆಗಳು ನಮ್ಮ ಕಾಲದ ವರ್ತಮಾನದ ಬಿಕ್ಕಟ್ಟುಗಳನ್ನು ಭಿನ್ನವಾಗಿ ತೋರಿಸುತ್ತಿವೆ.
  ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ನಮ್ಮ ನಡುವಿನ ಒಳ್ಳೆಯ ಕವಿ. ಅವರ ಶರೀಫನ ಬೊಗಸೆ ಮೂಲಕ ಹೊಸ ನುಡಿಗಟ್ಟುಗಳ ಶೋಧದಲ್ಲಿ ತೊಡಗಿದ್ದಾರೆ. ಕಣ್ಣಕದವಿಕ್ಕಿಕೊಂಡು/ ಅಳುತ್ತಿರುವ ಹೃದಯಗಳೇ/ ಬನ್ನಿ/ ನಿಮ್ಮೆಲ್ಲರಿಗೆ/ ಶರೀಪನ ಬೊಗಸೆಯಾಗುವೆ./ ಪ್ರೇಮ ವಂಚನೆಗೊಂಡು/ ಬೇಯುತ್ತಿರುವ ಮನಸ್ಸುಗಳೇ/ಬನ್ನಿ/ ನಿಮ್ಮೆಲ್ಲರಿಗೆ/ ಅಕ್ಕನ ದಾರಿ ತೋರುವೆ. ಎಂದು ಬರೆಯುತ್ತಾರೆ.
 
 ವೆಂಕಟಗಿರಿ ದಳವಾಯಿ ವಿಮರ್ಶೆ ಸಂಶೋಧನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಅಪಮಾನಗಳಿಗಿಲ್ಲ ವಿರಾಮ ಎನ್ನುವ ಮೊದಲ ಕಾವ್ಯ ಸಂಕಲನ ಒಂದು ಉತ್ತಮ ಪ್ರಯತ್ನವಾಗಿದೆ. ಸ್ಥಾವರಕ್ಕಳಿವುಂಟು ಎನ್ನುವ ಕವನದಲ್ಲಿ ಸ್ಮರಣೆಯ ನಾಲಿಗೆಗೆ ನೆಟ್ಟ ಮುಳ್ಳನು/ ಕಣ್ಣಿಂದ ಕೀಳಬೇಕಿದೆ ಹೂವಿನಂತೆ/ ಅಲ್ಲಮನ ಬಯಲು, ಕನಕನ ಕೋಣನ ಭಕ್ತಿ/ಷರೀಫನ ಸತೀತನಕ್ಕೆ ತೊಡಕಾಗುವ/ ಮುನ್ನ ಸುಡಬೇಕಿದೆ ಈ ಮುಳ್ಳನು ಬೇರು ಸಮೇತ. ಹೀಗೆ ಸ್ಥಾಪಿನ ನಂಬಿಕೆಗಳನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ.
   ಕೂಡ್ಲಿಗಿಯ ಸಿದ್ದರಾಮ ಹಿರೇಮಠ ಅವರು ಅವರ ಮೂವತ್ತೈದು ಗಜಲುಗಳು ೪೫ ಹೈಕುಗಳು ಎನ್ನುವ ಸಂಕಲನದಲ್ಲಿ ಗಜಲ್ ಪ್ರಾಕಾರವನ್ನು ಭಿನ್ನವಾಗಿ ದುಡಿಸಿಕೊಂಡಿದ್ದಾರೆ. ಬಂದೂಕಿನ ಬಾಯಲ್ಲಿ ಗುಂಡು ಸಿಡಿದರೂ ಗುಬ್ಬಿ ಗೂಡು ಕಟ್ಟಿದರೂ/ಬೆನ್ನು ಬಾಗಿಸಿ ಬೂಟು ಒರೆಸುವುದು ಇನ್ನೂ ತಪ್ಪಿಲ್ಲ ಈ ಕನಸುಗಳೇ ಹೀಗೆ!/ಪ್ರತಿ ಮನೆಯಲ್ಲೂ ಕಂಬನಿದುಂಬಿದ ಕಣ್ಣುಗಳಿವೆ/ಕಣ್ಣೊರೆಸುವ ಬಗೆಯ ತಿಳಿಯದಿರುವೆ ಹೇಗೆ ತೊಡೆಯಲಿ ಸಾಕಿ! ಎನ್ನುತ್ತಾ ಗಝಲ್ ಪ್ರಕಾರಕ್ಕೆ ತಮ್ಮದೇ ಆದ ವಿಶಿಷ್ಟತೆಯನ್ನು ಸೇರಿಸಿದ್ದಾರೆ.
 
   ಸಿರುಗುಪ್ಪ ಭಾಗದ ವಿ.ಹರಿನಾಥ ಬಾಬು ಕಾವ್ಯವನ್ನು ನಿರಂತರವಾಗಿ ಬರೆಯುತ್ತಿದ್ದಾರೆ. ಅವರ ಬೆಳಕ ಹೆಜ್ಜೆಯನರಸಿ ಸಂಕಲನ ಕಾವ್ಯಾಸಕ್ತರ ಗಮನ ಸೆಳೆದಿದೆ. ಬರೆಯಲಾರೆ ಮಗು ಕ್ಷಮಿಸು, ನಿನ್ನ ನಗು ಅಳುವಿಗಿಂತ ದೊಡ್ಡ ಕವಿತೆ ಎಂದು ವಿನಯದಿಂದಲೇ ಕೇಳುವ ಕವಿ ಸೂರ್ಯ ನಿನ್ನದೆಂಥ ಬಿಸಿಲು/ನಮ್ಮ ಹೊಟ್ಟೆಯ ಹಸಿವಿನ ಮುಂದೆ? /ಮೋಡಗಳೇ ನಿಮ್ಮದೆಂಥ ಮಳೆಯೋ/ ನಮ್ಮ ಬಡತನದ ಕಣ್ಣೀರ ಮುಂದೆ? ಎಂದು ತಣ್ಣಗೆ ಪ್ರಶ್ನಿಸುತ್ತಲೇ ಸಮಾಜದ ನಿಜ ಬದುಕನ್ನು ಕಾಣಿಸುತ್ತಾರೆ.
   ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಸಮೀಪದ ಜೋಗಿನಕಲ್ಲು ಗ್ರಾಮದ ಬಿ. ಶ್ರೀನಿವಾಸ ಅವರು ‘ಉರಿವ ಒಲೆಯ ಮುಂದೆ’ ಸಂಕಲನ ಪ್ರಕಟಿಸಿ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಸಾಲು ಸಾಲು ಪರದೆಗಳ ಹಿಂದೆ/ ಅದೆಷ್ಟು ಸವಾಲುಗಳಿವೆ? ಜಾಹೀರಾತಿನ ಪರದೆಯ ಹಿಂದೆ/ ಅದೆಷ್ಟು ಜೋಪಡಿಗಳಿವೆ? ಈತಹ ಸೂಕ್ಷ್ಮ ಸೆಳಕುಗಳು ಅವರ ಕಾವ್ಯದಲ್ಲಿದೆ. ಬಿ. ಶ್ರೀನಿವಾಸ್ ಕಥೆಗಾರರೂ ಕೂಡ. ಅವರ ಕಾಣದಾಯಿತೋ ಊರುಕೇರಿ ಸಂಕಲನದಲ್ಲಿ ಗಂಭೀರ ಕಥೆಗಳಿವೆ.
 
  ಅಗ್ನಿ ಕಿರೀಟ ಕವನ ಸಂಕಲನದ ಮೂಲಕ ಗಮನ ಸೆಳೆದ  ಶಿವಕುಮಾರ ಕಂಪ್ಲಿ ಅವರ ಒಂದು ಪದ್ಯ ಹೀಗಿದೆ:  ಸವಾಲಿಗೆ ಸೊಲ್ಲಾಗಿ/ಬೆಳಕಾದರೂನೂ ಬೆತ್ತಲೆ ಬಯಸುವ ಕಣ್ಣಿರುವಾಗ/ಗುಡಿಯಾದರೇನಂತೆ ರವಿಕೆ /ಸರಿಯಾಗಿದೆಯೇ ಇಣುಕಬೇಕು/ ಹೆಣ್ಣ ಬಣ್ಣಗಳೆಲ್ಲಾ ಜಾಗತೀಕರಣಕೆ ಸರಕು/ಚರಿತೆ ಸರಿದರೂ ಮತ್ತೆ ಬಡಜನರೇ ಬೇಕು ಬಲಿಗೆ  ||  /ಕಾಡು, ನೆಲ, ನೀರೆಲ್ಲಾ ಯಂತ್ರಗಳ ಕೈಸೇರಿ/ ದುಡಿದು ತಿನ್ನುವ  ಜನರು ಗುಳೆ ಎದ್ದು ಹೋದಾಗ/ಒಂಟಿ ಬಾಣತಿ ಕೂಸು ನಾಯಿ ಬಾಯಿಯ ತುತ್ತು/ಜೀವ ಹನಿಹನಿಯಾಗಿ ಕೆರೆ ಹಳ್ಳ ನಡುಗಿತ್ತು||
   ಡಾ. ಜಾಜಿ ದೇವೇಂದ್ರಪ್ಪ ಬಾನಬೆಡಗು ಎಂಬ ಕಾವ್ಯ ಸಂಕಲನವನ್ನೂ, ವಿಜಲುಗಳು ಎಂಬ ಗಝಲ್ ಮಾದರಿಯ ಕವನ ಸಂಕಲನವನ್ನೂ ತಂದಿದ್ದಾರೆ. ದೇವೇಂದ್ರಪ್ಪ ಸಂಶೋಧನೆ ಮತ್ತು ಅನುವಾದದಲ್ಲಿ ತಮ್ಮ ಸೃಜನಶೀಲ ಹುಡುಕಾಟವನ್ನು ಮುಂದುವರಿಸಿದ್ದಾರೆ. ವ್ಯಕ್ತಿನಾಮಗಳ ಬಗ್ಗೆ ಒಂದು ಗಂಭೀರ ಸಂಶೋಧನೆ ಮಾಡಿದ್ದಾರೆ. ಕಂಚ ಐಲಯ್ಯ ಅವರ ಪುಸ್ತಕವೊಂದನ್ನು ಅನುವಾದಿಸುತ್ತಿದ್ದಾರೆ. ಅದನ್ನು ಲಡಾಯಿ ಪ್ರಕಾಶನ ಪ್ರಕಟಿಸುತ್ತಿದೆ.
    ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’  ಸಂಕಲನದ ಮೂಲಕ ತನ್ನದೇ ಆದ ಒಂದು ವಿಶಿಷ್ಟ ಲಯವನ್ನು ಕಂಡುಕೊಂಡವರು ಸಿದ್ದು ದೇವರಮನಿ. ಒಂದು ಅಂಗಡಿಯಲ್ಲಿ ಕೂತು ಈ ಜಗತ್ತನ್ನು ಗ್ರಹಿಸಿದ ಒಬ್ಬರ ಗ್ರಹಿಕೆಗಳಾಗಿ ನನಗೆ  ಸಿದ್ದು ಅವರ ಕಾವ್ಯ ಕಾಣುತ್ತದೆ. ಬರದ ಭ್ರಮೆಗಳು ಎನ್ನುವ ಕವನದ ಸಾಲುಗಳು ಹೀಗಿವೆ: ಅಲ್ಲೆಲ್ಲೋ .. ಓಡುವ ಮೋಡ ನಿ೦ತು ಮಿ೦ಚಿದ೦ತೆ/ಅವಮಾನದ ಹಸಿವು ಮತ್ತೊಮ್ಮೆ ಕು೦ತು ಹೊ೦ಚಿದ೦ತೆ/ಗುಡಿ ಮೆಟ್ಟಿಲ ಹಣ್ಣು ಜೀವಕ್ಕೆ ಮರೆಯಾದ ಗ೦ಡನಲ್ಲದಿದ್ದರೂ/ಹನಿ ಮಳೆಯಾದರೂ ಬ೦ದೀತೆ೦ಬ ನಿರೀಕ್ಷೆ!/ಕೂಳು ಕಾದ ಕ೦ಗಳ ದ್ರವ ಜೀವಗಳೆಲ್ಲವು/ಕಾಣದ ಕತ್ತಲೆಯ ಮುಕ್ತಿಗೆ ಸೋಲಬೇಕೆ೦ದು ಸಾಲು ನಿ೦ತಿವೆ !/ಹರಿದ ತಾಳಿ ಒಡತಿಯ  ಕಣ್ಣೀರಿಗೆ ,ಬಿಸಿಲಲ್ಲದೆ/ಜೀವನದ ಯಾವ ಜಾದುವೂ ಜರ್ರಾ ಸಹಾಯಕ್ಕೆ ಬ೦ದ ನೆನಪಿಲ್ಲ ! ಹೀಗೆ ಕಾವ್ಯದ ಯಾವ ಪಟ್ಟುಗಳನ್ನು ಕಲಿಯದೆ ಸಹಜವಾಗಿ ಕಾವ್ಯ ಬರೆದು ಗಮನಸೆಳೆದಿದ್ದಾರೆ.
  ಹಗರಿಬೊಮ್ಮನಹಳ್ಳಿಯ ಭಾಗದಲ್ಲೊಂದು ಯುವ ಬರಹಗಾರರ ಪಡೆಯೇ ಸಿದ್ದಗೊಳ್ಳುತ್ತಿದೆ. ಅಕ್ಕಿ ಬಸವೇಶ ಈ ಭಾಗದ ಗಮನಸೆಳೆಯುವಂತಹ ಕವಿ ‘ಕೊಲ್ಲಬಹುದು ಯಾರಾದರೂ ಕವಿಯನ್ನು, ಆದರೆ ಸಾಯಬಲ್ಲವೆ ಅವನ ಕವಿತೆಗಳು’ ಎಂದು ಕೇಳುವ ಬಸವೇಶ ‘ನಿಜದ ಬೆಳಗು’ ಸಂಕಲನದ ಮೂಲಕ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ಬಸವೇಶ ಮೂಲತಃ ಪ್ರೇಮಕವಿ. ಆತನ ಕಾವ್ಯಗಳಲ್ಲಿ ಪ್ರೀತಿಯ ನವಿರಾದ ಸೆಳಕುಗಳು ಕಾಣುತ್ತವೆ. ಆತನ ಕವಿತೆಗಳು ಎನ್ನುವ ಕವನವೊಂದು ಹೀಗಿದೆ: ಮೊನ್ನೆ/ಹೇಳಿದರು ನಿನ್ನ ಕವಿತೆಗಳು/ ತಿನ್ನಲಿಕ್ಕೆ ಬರವು/ ಉಣ್ಣಲಿಕ್ಕೂ ಬರವು/ ಬಿಟ್ಟುಬಿಡು ಅವುಗಳ ಸಂಗ ಎಂದು/ಆದರೆ/ ಅವರಿಗೇನು ಗೊತ್ತು/ನನ್ನ ಕವಿತೆಗಳು ನನ್ನವಳ ಪ್ರೀತಿಯಂತೆ/ಪ್ರೀತಿಯನ್ನು ತಿನ್ನಲಿಕ್ಕೂ ಬರದು/ ಉಣ್ಣಲಿಕ್ಕೂ ಬರದು/ಯಾಕೋ ಪ್ರೀತಿಯಿಲ್ಲದೆ ಬದುಕಲಿಕ್ಕೂ ಬಾರದು.
ಬಸವೇಶ ‘ಹಾದಿ’ ಎನ್ನುವ ಕವನದಲ್ಲಿ ತನ್ನ ಬದುಕಿನ ಹಾದಿಯನ್ನೂ ಕಾಣಿಸಿದ್ದಾರೆ: ಈ ಹಾದಿ ಯಾರದೋ ಏನೋ/ನಡೆಯುತ್ತಲೇ ಇದ್ದೇನೆ ನಿರಂತರ/ಸವೆಸಬೇಕು ಕಲ್ಲುಮುಳ್ಳುಗಳ ಹಾದಿಯನ್ನು/ಸಹಿಸಬೇಕು ಕಡು ಬಿಸಿಲ ತಾಪವನ್ನು/ಬಯಸಬೇಕು ಕೊನೆಗೆ/ ದಾರಿ ಬದಿಯ ಮರಗಳ ನೆರಳನ್ನು / ಎನ್ನುತ್ತಾರೆ.
  ಅಂಬಿಗರ ಮಂಜುನಾಥ ಈಚೆಗೆ ಕೆಂಪು ದೀಪ ಎನ್ನುವ ಸಂಕಲನವನ್ನು ತಂದಿದ್ದಾರೆ. ವಿಳಾಸವಿಲ್ಲದವರು ಎನ್ನುವ ಪದ್ಯದಲ್ಲಿ : ಸದಾ ಉರುಳುವ ಕಾಲ ಚಕ್ರಕ್ಕೆ/ ತಲೆ ಒಡ್ಡುವವರು /ಇವರು; ತಲೆ ಹೋದರೂ ಪರವಾಗಿಲ್ಲ/ನೆಲೆ ಕಾಣಬೇಕೆನ್ನುವ/ ದಡ್ಡರು ಇವರು ಎನ್ನುವ  ತರಹದ ಹೊಳಹುಗಳಿರುವ ಪದ್ಯಗಳನ್ನು ಮಂಜುನಾಥ ಬರೆದಿದ್ದಾರೆ. ಹೂವಿನ ಹಡಗಲಿ ಹತ್ತಿರದ ಹಳ್ಳಿಯ ರಾಮಪ್ಪ ಮಾದರ ಅವರು ಕೆರ ಹೊತ್ತ ಬಸವ ಎನ್ನುವ ಸಂಕಲನವನ್ನು ತಂದಿದ್ದಾರೆ. ಈ ಸಂಕಲನ ವಿವಾದಕ್ಕೂ ಕಾರಣವಾಗಿತ್ತು. ಈ ಸಂಕಲನದಲ್ಲಿ ನನ್ನ ತಂಗಿಯನ್ನು ಕೊಂದರು ಎನ್ನುವ ಪದ್ಯ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಜೀವಂತವಾಗಿರುವ ಗೌಡಿಕೆಯ ದಬ್ಬಾಳಿಕೆಯನ್ನು ಹಳ್ಳಿಗಳಲ್ಲಿ ದಲಿತರ ಅಸಹಾಯಕತೆಯನ್ನು ತೋರಿಸುತ್ತಿದೆ.
   ಅರುಣ್ ಜೋಳದಕೂಡ್ಲಿಗಿ ‘ನೆರಳು ಮಾತನಾಡುವ ಹೊತ್ತು’ ‘ಅವ್ವನ ಅಂಗನವಾಡಿ’ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಸಂಡೂರು ಭೂ ಹೋರಾಟ ಸಂಶೋಧನ ಕೃತಿಗೆ ಗುಲ್ಬರ್ಗಾ ವಿವಿಯ ರಾಜ್ಯೋತ್ಸವ ಪ್ರಶಸ್ತಿಯೂ, ಕಸಾಪ ನೀಡುವ ‘ಅರಳು’ ಪ್ರಶಸ್ತಿಯೂ ದೊರೆತಿದೆ. ಅವರ ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು ಪಿಹೆಚ್ ಡಿ ಸಂಶೋಧನ ಕೃತಿ ಪ್ರಕಟವಾಗಿದೆ. ಅರುಣ್ ಕಾವ್ಯಕ್ಕೆ ಪ್ರಜಾವಾಣಿ, ಸಂಚಯ, ಸಂಕ್ರಮಣ ಪ್ರಶಸ್ತಿಗಳೂ ಬಂದಿವೆ. ಪ್ರೆಂಚ್ ಸಿನೆಮಾ ದಿ ಆರ‍್ಟಿಸ್ಟ್: ಕನ್ನಡ ನೋಟ, ಮಂಜಮ್ಮ ಜೋಗತಿಯ ಆತ್ಮಕಥನ ಪ್ರಕಟಣೆಯ ಹಂತದಲ್ಲಿವೆ.
  ಬಳ್ಳಾರಿಯ ಎಸ್. ಮಂಜುನಾಥ ಅವರು ಚುಕ್ಕಿ ಚಂದ್ರಮ ಎನ್ನುವ ವಿಜ್ಞಾನ ಪದ್ಯಗಳನ್ನೂ ವೈಚಾರಿಕ ಕವನಗಳು ಎನ್ನುವ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಯೋಗಾತ್ಮಕವಾಗಿ ಈ ಎರಡೂ ಸಂಕಲನಗಳನ್ನು ನೋಡಬಹುದಾದರೂ ಸಾಹಿತ್ಯಿಕ ಗುಣಗಳು ಮಂಜುನಾಥ ಅವರ ಪದ್ಯಗಳಿಗಿನ್ನು ದೊರಕಿಲ್ಲವೆಂದೇ ಹೇಳಬೇಕು. ಬಳ್ಳಾರಿ ಪಕ್ಕದ ಹಂದಿಹಾಳಿನ ಶಿವಲಿಂಗಪ್ಪ ಅವರ ನಾನು ಮತ್ತು ಕನ್ನಡಕ ಎನ್ನುವ ಕವನ ಸಂಕಲನದ ಮೂಲಕ ಗಮನಸೆಳೆದಿದ್ದಾರೆ. ಕಲ್ಲು ಕುಟ್ಟುವವರು ಎನ್ನುವ ಪದ್ಯದಲ್ಲಿ  ಆಕಾಶದ ಚಪ್ಪರದಡಿಯಲ್ಲಿ/ನೆಲದಾಸಿಗೆಯ ಮೇಲ್ಕೂತು/ಗೂಡೆ ಇಲ್ಲದ ನಾಡಲ್ಲಿ/ಬಾಳೇ ಇಲ್ಲದೆ ಬೀದಿಗಿಳಿದವರು/ಉಳಿ-ಸುತ್ತಿಗೆ ಹಿಡಿದು ಬಡಿದು/ ಅಳಿಯುತ್ತಿರುವವರು/ಕುಟ್ಟುವೆವು ನಾವು ಕಲ್ಲು/ ನಾವು ನಿಮ್ಮೊಂದಿಗೇ ಹುಟ್ಟಿದವರು/ನಿಮಗೆ ಸಂಬಂಧ ಪಟ್ಟರೂ ನಿಮ್ಮವರಾಗದವರು/ನಾವು ಕಲ್ಲು ಕುಟ್ಟುವವರು. ಎಂದು ಬರೆಯುತ್ತಾರೆ.
 ಕೊಟ್ಟೂರಿನ ಬಣಕಾರ ಸಹೋದರರಾದ ನಾಗರಾಜ, ಅಜಯ ಕಾವ್ಯ ಕಟ್ಟುವ ಕೆಲಸದಲ್ಲಿ ನಿರತರಾದವರು. ನಾಗರಾಜ ‘ಕನಸು ಕರಗುವ ಸಮಯ’ ಸಂಕಲನದಲ್ಲಿ ಭರವಸೆ ಮೂಡಿಸುತ್ತಾರೆ. ಪ್ರೀತಿ ಪದ್ಯಗಳನ್ನು ನವಿರಾಗಿ ಬರೆವ ನಾಗರಾಜ ಅವರು, ಆದರ್ಶ, ನೆನಪು, ಮಾತು ಎಲ್ಲವೂ ಬರಿ ನೆಪ ಮಾತ್ರ ಅವಳ ಮೌನ ಪ್ರೀತಿಯ ಮುಂದೆ ಎನ್ನುತ್ತಾರೆ. ರೋಡ್ ಅಗಲೀಕರಣದ ಭರಾಟೆಯಲ್ಲಿ ಕಾವ್ಯದಲ್ಲಿ ರಸ್ತೆ ಅಗಲೀಕರಣದ ಅಮಾನವೀಯ ಮುಖವೊಂದನ್ನು ಚೆನ್ನಾಗಿ ಹಿಡಿದಿದ್ದಾರೆ. ಅಜಯ್ ನೀನಿರದ ಭೂಮಿಯಲ್ಲಿ ಕವಿತೆಗಳಲ್ಲಿ ಹೊಸ ಹೊಳವುಗಳನ್ನು ಕಾಣಿಸಿದ್ದಾರೆ. ಮನೆ ಕಟ್ಟುವ ಮಹಿಳೆ ಕವಿತೆಯಲ್ಲಿ ‘ಮನೆ ಯಾರದಾದರೂ/ ಕಾಯಕದಿ ಮೋಸ ಗೈಯದೆ/ತನಗಿಲ್ಲದ ಮನೆಯ ನೆನೆಯದೆ/ಹೆಂಡೆ ರಾಶಿಯ ನಡುವೆ/ಮಗುವಿಗಾಲುಣಿಸಿ/ಜಲ್ಲಿಕಲ್ಲಿನ ಮೇಲೆ ಕೂಡಿಸಿ/ನೆಗೆವಳು ಜಿಂಕೆಯಂತೆ ಹೀಗೆ ಮಾನವೀಯ ತುಡಿತಗಳಿರುವ ಪದ್ಯಗಳನ್ನು ಅಜಯ್ ಬರೆದಿದ್ದಾರೆ.
   ಈಚೆಗೆ ಕೊಟ್ಟೂರಿನ ಸೈಫ್ ಜಾನ್ಸೆ ಕೊಟ್ಟೂರು ‘ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು’ ಎನ್ನುವ ಸಂಕಲನದ ಮೂಲಕ ಗಟ್ಟಿಯಾದ ಹೆಜ್ಜೆಯನ್ನು ಇರಿಸಿದ್ದಾನೆ. ಈ ಸಂಕಲನಕ್ಕೆ ೨೦೧೨ನೇ ಸಾಲಿನ ಬೇಂದ್ರೆ ಕಾವ್ಯ ಪ್ರಶಸ್ತಿ ಮತ್ತು ಅರಳು ಸಾಹಿತ್ಯ ಪ್ರಶಸ್ತಿ ಬಂದಿದೆ. ಮೆಟಲಿಂಗ್ ಕಲ್ಲುಗಳು ಪದ್ಯದಲ್ಲಿ ‘ರಸ್ತೆಯ ಬದಿಗೆ ಬಿದ್ದ/ಮೆಟಲಿಂಗ್ ಕಲ್ಲುಗಳು ಉಳಿಯಿಂದಾದ/ಗಾಯಗಳ ತೋರಿಕೊಂಡು ಅಳುತ್ತಿವೆ/ವಾಹನದ ದೇಹಗಳಿಂದ/ತುಳಿಸಿಕೊಂಡು , ತೂರಿಕೊಂಡು/ಸಿಡಿದು ಜನರನ್ನು ಗಾಯಗೊಳಿಸುವ/ಮೂಲಕ ತಮ್ಮ ಅಸಹನೆಯನ್ನು/ಹೊರದಬ್ಬುತ್ತಿವೆಯಾದರೂ ,/ಜನರು ಬ್ಯಾಂಡೇಜಿನಿಂದ ಮುಚ್ಚಿ/ಹಗಲು ಕಣ್ಣಾ - ಮುಚ್ಚಾಲೆ ಆಡುತ್ತಿದ್ದಾರೆ  ! ಎನ್ನುತ್ತಾರೆ. ಚಪ್ಪಲಿಗಳು ಪದ್ಯದಲ್ಲಿ ದೇಹದ ಅಷ್ಟು ಅಕಾಲ/ಅನ್ಯಾಯಗಳನ್ನು ಹೊತ್ತರೂ/ವಿಧೇಯತೆಯ ಷರಾ/ಪ್ರಕಟಿಸುತ್ತಾ ಮನಸ್ಸನ್ನು/ಹಗುರಾಗಿಸಿವೆ  !

ಕವಯಿತ್ರಿಯರು:
    ಬಳ್ಳಾರಿ ಜಿಲ್ಲೆಯ ಮಹಿಳಾ ಕಾವ್ಯಕ್ಕೆ ಒಂದು ಪರಂಪರೆ ಇದೆ. ಬೆಳೆಗೆರೆ ಪಾರ್ವತಮ್ಮ, ಹಗರಿಬೊಮ್ಮನಹಳ್ಳಿಯ ಪದ್ಮಾ ವಿಠಲ, ಎಂ.ಡಿ. ವೆಂಕಮ್ಮ, ಸುಶೀಲ ಶಿರೂರು, ಸುಧಾ ಚಿದಾನಂದ ಗೌಡ,  ಡಾ.ಟಿ.ಎಂ.ಉಷಾರಾಣಿ, ಛಾಯಾ ಭಗವತಿ, ಪದ್ಮಾ ಜಾಗಟಗೇರಿ, ಡಾ. ಗಿರಿಜಾ ಬೂದೂರ್(ವಸಂತ ಬಂದನು ಕವನ ಸಂಕಲನ), ನಾಗಮಂಜುಳ ಜೈನ್, ನಿರ್ಮಲಾ ಶಿವನಗುತ್ತಿ, ಮುಂತಾದವರು ಹೆಸರಿಸಬಹುದು.
  ಸುಜಾತ ಅಕ್ಕಿ ಕವಯಿತ್ರಿಯಾಗಿ, ಸಂಶೋಧಕಿಯಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ರಂಗ ನಟಿಯರ ಬಗ್ಗೆ ಅವರ ಸಂಶೋಧನೆ ಒಳ್ಳೆಯ ಮಾಹಿತಿ ಸಂಗ್ರಹವಾಗಿದೆ. ಸಾರತಿ ಎನ್ನುವ ಭಿನ್ನ ಕೃತಿಯನ್ನು ರಚಿಸಿದ್ದಾರೆ. ಈಚೆಗೆ ಚಾಮ ಚಲುವೆ ಎನ್ನುವ ನಾಟಕ ಬರೆದು ಗಮನ ಸೆಳೆದಿದ್ದಾರೆ. ಇದನ್ನು ಮಂಡ್ಯ ರಮೇಶ್ ಅವರ ತಂಡ ನಾಟಕ ಮಾಡಿಯೂ ಗಮನಸೆಳೆದಿದೆ.
  ಸುಧಾ ಚಿದಾನಂದ ಗೌಡ ಬಳ್ಳಾರಿ ಜಿಲ್ಲೆಯ ಸೂಕ್ಷ್ಮ ಬರಹಗಾರ್ತಿ. ಇವರು ೧೯೯೮ ರಲ್ಲಿ ಯುವಕರ ಸಂಘ ರಾಮನಗರ ಪ್ರಕಾಶನದಿಂದ ತಮ್ಮ ಮೊದಲ ಕಥಾ ಸಂಕಲನ ‘ಬದುಕು ಪ್ರಿಯವಾಗುವ ಬಗೆ’ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಜಾಣಗೆರೆ ಪತ್ರಿಕೆಯಲ್ಲಿ ನಿರಂತರವಾಗಿ ೫೨ ವಾರ ‘ಸ್ತ್ರೀದ್ವನಿ’ ಅಂಕಣ ಬರೆಯುವ ಮೂಲಕ ಸ್ತ್ರೀ ಸಂವೇದನೆಯ ಭಿನ್ನ ಟಿಪ್ಪಣಿಗಳನ್ನು ಬರೆದಿದ್ದಾರೆ. ಅವರ ಎರಡನೆ ಕಥಾ ಸಂಕಲನ ನಂತರದ ಅವರ ‘ದಿಟ್ಟಿಯು ನಿನ್ನೊಳು ನೆಟ್ಟಿರೆ’ ಸಂಕಲನದಲ್ಲಿ ಮೊದಲ ಸಂಕಲನದ ಮಿತಿಗಳನ್ನು ಮೀರಲು ಯತ್ನಿಸಿರುವುದು ಗೋಚರಿಸುತ್ತದೆ.
   ಸುಧಾ ಅವರ ಷೇಕ್ಸ್‌ಪಿಯರ್ ಸೃಷ್ಠಿಸಿದ ಅನನ್ಯಯರು ಒಂದು ಉತ್ತಮ ಸಂಶೋಧನೆ. ಷೇಕ್ಸ್‌ಪಿಯರ್ ಅವರು ಸೃಷ್ಠಿಸಿದ ಮಹಿಳಾ ಪಾತ್ರಗಳನ್ನು ತುಂಬಾ ಭಿನ್ನವಾಗಿ ನೋಡಿದ್ದಾರೆ. ಈ ಕಾರಣಕ್ಕೆ ಸುಧಾ ಅವರು ಕತೆಗಾರ್ತಿ, ಕವಯಿತ್ರಿ ಮಾತ್ರವಲ್ಲದೆ ಸಂಶೋಧಕಿಯೂ ಕೂಡ. ಈಚೆಗೆ ಸುಧಾ ಅವರ ಮೂರನೆ ಕಥಾ ಸಂಕಲನ ‘ಕನ್ನಡಿಯನ್ನು ನೋಡಲಾರೆ’ ಪ್ರಕಟಿಸಿದ್ದಾರೆ. ಈ ಕೃತಿಗೆ ಅಮ್ಮ ಪ್ರಶಸ್ತಿಯೂ ಲಭಿಸಿದೆ. 
  ಟಿ.ಎಂ.ಉಷಾರಾಣಿ ಅವರು ಅಣ್ಣ, ಅಮ್ಮನ ಪದ್ಯಗಳ ಸೇರಿಸಿ ‘ನಮ್ಮೊಳಗೆ’ ಎನ್ನುವ ಸಂಕಲನವನ್ನು ಪ್ರಕಟಿಸಿದ್ದಾರೆ. ಈಚೆಗೆ ಬರೆದ ಬಿಡಿ ಬಿಡಿ ಪದ್ಯಗಳಲ್ಲಿ ಉಷಾ ತುಂಬಾ ಆಪ್ತವಾದ ಸಂವೇದನೆಯನ್ನು ತೀರಾ ಭಿನ್ನವಾಗಿ ಗ್ರಹಿಸುತ್ತಿದ್ದಾರೆ. ಅವರ ‘ಒಂದು ದಿನಚರಿ’ ಎಂಬ ಪದ್ಯದ ಸಾಲುಗಳು ಹೀಗಿವೆ:ಕಣ್ಣು ತೆರೆಯಲೇ ಭಯ/ಹೆದರಿ ಮಂಜುಗತ್ತಲೆಗಲ್ಲ/ಬೆಳಕಿಗೆ ಕೊಡಬೇಕಾದ/ ಉತ್ತರದಿಂದ  /ನೆತ್ತಿ ಸೆರಗು ಜಾರದಂತೆ/ಮನೆಯ ಹೊಸ್ತಿಲಿನೊಂದಿಗೆ/ಹೃದಯಕ್ಕೂ ಮೊಳೆ/ಬಡಿಸಿಕೊಂಡ ದಿನದಿಂದ/ಗಂಡನ ಹೆಸರೇಳಿ/ತನ್ನನ್ನೇ ಮರೆತ ಮರೆವು/ಕುಳಿ ಬಿದ್ದ ಕಣ್ಣಿಗೆ/ಮರೀಚಿಕೆಯಾದ ಕನಸುಗಳು/ಬೆಳದಿಂಗಳ ಬಯಕೆಗಳ/ಸುಟ್ಟ ಕಾಮಕೇಳಿಯ ರಾತ್ರಿಗಳು/ಸಾಂತ್ವಾನ ಹೇಳಲರಿಯದ ಮೂಲೆಗೆ/ಅರ್ಥವಾಗದ ನಿವೇದನೆ/ಚುಕ್ಕಿಗಳ ನೋಡಿ ನೋಟ/ಮರೆತಾಳೆಂದರೂ/ಮುಗಿಲ ಮರೆಮಾಚಿದ ಮಾಳಿಗೆ/ಯಾತನೆಯ ಮೌನದ ಪುಟಕ್ಕೆ/ಸ್ವಚ್ಛಂದ ಬಯಸಿ ಗೆಳತಿ/ಬರೆದಿಟ್ಟ ದಿನಚರಿ. /ಧರಿಸಿದ್ದೆಲ್ಲವ ಕಳಚಿ/ಹಂಡೆ ಕಟ್ಟೆಗಿಟ್ಟು/ಬೆನ್ನ ಮೇಲೆ ನಿರಾಳ/ಹೆರಳ ರಾಶಿ ಚೆಲ್ಲಿ/ಹಾಯೆನಿಸುವ/ ಬಿಸಿನೀರಿನ ಆವಿಯೊಂದಿಗೆ/ತನ್ನ ಬಿಡುಗಡೆ/ಇಡೀ ಜಗತ್ತು/ಬಚ್ಚಲು ಮನೆಯಾದಂದು! ಎಂದು ಸೂಕ್ಷ್ಮವಾದಿ ಬರೆಯುತ್ತಾರೆ. ಉಷಾರಾಣಿಯು ಸಂಶೋಧಕಿಯೂ ಕೂಡ. ಮಹಿಳಾಸಾಹಿತ್ಯದ ಅಭಿವ್ಯಕ್ತಿ ನೆಲೆಗಳು ಕುರಿತಂತೆ ತುಂಬಾ ಗಂಭೀರವಾಗಿ ಸಂಶೋಧನೆಯನ್ನು ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುವಿಕೆಯಲ್ಲಿ ತಮ್ಮ ಸೃಜನಶೀಲತೆಯನ್ನು ಬಳಸಿಕೊಳ್ಳುತ್ತಿದ್ದಾರೆ.
 
  ಛಾಯಾ ಭಗವತಿ ಹಗರಿಬೊಮ್ಮನಹಳ್ಳಿಯವರು, ಸದ್ಯಕ್ಕೆ ಬೆಂಗಳೂರಿನಲ್ಲಿರುವ ಛಾಯಾ ಅವರು ಮೊದಲ ಸಂಕಲನದ ಪುಟಾಣಿ ಕೆಂಪು ಶೂ ಲೋಹಿಯಾ ಪ್ರಕಾಶನದಿಂದ ಬಂತು. ನಿಜಕ್ಕೂ ಛಾಯಾ ಮೊದಲ ಸಂಕಲನದಲ್ಲೇ  ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ‘ಕಳೆದು ಹೋದ ಪುಟಾಣಿ ಕೆಂಪು ಶೂ’ ಏನೋ ತರಲೆಂದು ಬಟ್ಟೆಯಂಗಡಿಗೆ ಹೋದಾಗ/ತರುವುದನೆ ಮರೆತು ಮರುಳಾದದ್ದು/ಪುಟ್ಟ ಪುಟ್ಟ ಕೆಂಪು ಶೂಗಳಿಗೆ/ಬಗಲ ಕಂದನ ಚೋಟು ಪಾದಕ್ಕೆ ಅವು ತುಸು ದೊಡ್ಡವೆನಿಸಿದರೂ/ಆಸೆಯಾಗಿ ತಂದಿಟ್ಟುಕೊಂಡು ಕಾದದ್ದಾಯಿತು/ಪಾದ ಉದ್ದವಾಗಲೆಂದು/ ಮಗು ಬೆಳೆಯಿತು./ ಶೂಗಳು ಕಾತರದಿಂದ ಹೊರಬಂದು/ಮೃದುವಾದ ಪುಟಾಣಿ ಪಾದಗಳ/ಸುತ್ತಿಕೊಂಡವು/ಪೇಟೆಗೆ ಹೊರಟು ನಿಂತ ಆ ಕ್ಷಣ ಎಂಥ ಸಂಭ್ರಮ/ಮಗುವಿನ ಕಾಲುಗಳು ಬಡಿದಂತೆಲ್ಲ ಮೈ ಪುಳಕ/ಬಜಾರೆಲ್ಲ ಸುತ್ತಿ, ಗುಡಿಯ ದೇವರಿಗೊಂದು ಶರಣೆಂದು,/ಆಗಾಗ ಕೂಸಿನ ಕಾಲುಗಳತ್ತಲೇ ಗಮನ/ಕಣ್ಣು ನಿರುಕಿಸಿ, ‘ಇವೆ ಇವೆ ಉದುರಿಲ್ಲ’/ಸಮಾಧಾನ ಪಟ್ಟುಕೊಂಡು/ ಕಬ್ಬಿನ ಹಾಲೆಂದು ಹೊರಟು, ಅಲ್ಲಿ ಭಲೇ ಗಲಾಟೆ/ಹಾಗೂ ಹೀಗೂ ರಸ ಹೀರಿ, ನೊರೆಯೊರೆಸಿಕೊಂಡು/ಸ್ಕೂಟರೇರಿ ಮನೆಗೆ ಬಂದು/ಮಗುವಿನ ಉಚ್ಚೆ ಪಟ್ಟಿ ಸಡಿಲಿಸೋಣ ಅಂತ/ಶಾಲಿನ ಬಿಗಿಯಿಂದ ಅದ ಹೊರ ತೆಗೆದಾಗಲೇ/ಎದೆ ಝಲ್ಲೆಂದ ಕ್ಷಣ/ಒಂದು ಶೂ ಇಲ್ಲ.....!/ಬಂಗಾರದೊಡವೆ ಕಳೆದಾಗಲೂ ಆಗದ ನೋವು/ಅಯ್ಯೋ ಒಂದು ಕಳೆದೇ ಹೋಯಿತಲ್ಲ!/ಮತ್ತೊಂದ ಕೊಂಡು ತಂದೇನು....ಆದರೂ..../ಉಳಿದೊಂದು ಶೂ ಕಪಾಟಿನಲ್ಲಿ ಕುಳಿತಿದೆ/ಭದ್ರವಾಗಿ/ಕಳೆದು ಹೋದ ತನ್ನ ಜೊತೆಗಾರನ ನೆನೆಯುತ್ತ... ಎನ್ನುತ್ತಾರೆ.
 
  ಹೊಸಪೇಟೆಯ ಎಂ.ಪಿಪ್ರಕಾಶ್ ನಗರದ ಡಾ.ಗಿರಿಜಾ ಬೂದೂರು ಅವರು ವಸಂತ ಬಂದನು ಸಂಕಲನದ ಮೂಲಕ ಕಾವ್ಯಕ್ಕೆ ಪ್ರವೇಶ ಪಡೆದಿದ್ದಾರೆ. ಈ ಸಂಕಲನದಲ್ಲಿ ತೀರಾ ಗಟ್ಟಿ ಹೆಜ್ಜೆಗಳು ಇಲ್ಲವಾದರೂ, ಮುಂದೆ ಬರೆಯಬಲ್ಲರೆಂಬ ಒಂದು ನಿರೀಕ್ಷೆಯನ್ನಂತು ಹುಟ್ಟಿಸಿದ್ದಾರೆ. ಅವರ ಮಾತೆ ಎನ್ನುವ ಕವನದ ಸಾಲುಗಳು ಹೀಗಿವೆ: ಬೆಂಕಿಯಲ್ಲಿ ಅರಳಿದ್ದರೂ/ ಸುತ್ತಲೂ ಅದರ ಝಳವಿದ್ದರೂ/ಹಸನ್ಮುಖಳಾಗಿ ಸಾಗಿರುವೆ/ಕೆಂಡವು ಮಡಿಲಲ್ಲಿದ್ದರೂ/ಬಾಡಲಿಲ್ಲ ಈ ಮೊಗ/ಮರುಗಲಿಲ್ಲ ಈಮನ/ ನಿತ್ಯ ಸಾವಿಗೆ ಕಣ್ಣೀರು ಒರೆಸುವರಾರೆಂಬಂತೆ/ಅಳುಕದೆ ಅಂಜದೆ ನಡೆದಿರುವೆ ನೀ ಮುಂದೆ/ ವಿಧಿ ತೋರಿದ ಹಾದಿಯಲ್ಲಿ.

   ಅನಾಥ ರಸ್ತೆಗಳಿಗೆ ಮರದ ನೆರಳೇ ರಂಗೋಲಿ ಎಂದು ಬರೆಯುವ ಕೊಟ್ಟೂರಿನ ಪದ್ಮಾ ಜಾಗಟಗೆರೆ ಅವರ ಪದ್ಯಗಳು ಈ ಕಾಲದ ಎಚ್ಚರದ ದ್ವನಿಯಾಗುವಲ್ಲಿಯೂ ಯಶಸ್ವಿಯಾಗಿವೆ. ಪದ್ಮಾ ಜಾಗಟಗೆರೆ ಅವರು ಕೆರೆಯ ನೀರನು ಕೆರೆಗೆ ಚೆಲ್ಲಿ, ಹುಗ್ಗೇರ ಹಾಲಜ್ಜ ಮುಂತಾದ ಕಥೆಗಳ ಮೂಲಕ ಕಥನದ ಕ್ಷೇತ್ರದಲ್ಲಿ ಭರವಸೆ ಹುಟ್ಟಿಸುವ ಹಾಗೆ ಬರೆದಿದ್ದಾರೆ.
 
ಮಾಧ್ಯಮ:
   ಮಾದ್ಯಮ ಕ್ಷೇತ್ರದಲ್ಲಿಯೂ ಬಳ್ಳಾರಿ ಜಿಲ್ಲೆಯ ಹೊಸತಲೆಮಾರೊಂದು ಕ್ರಿಯಾಶೀಲವಾಗಿದೆ. ಉಜ್ಜಿನಿ ರುದ್ರಪ್ಪ ಅವರು ತುಂಬಾ ಕ್ರಿಯಾಶೀಲವಾಗಿ ಬರವಣಿಗೆ ಮಾಡುತ್ತಿದ್ದಾರೆ. ಅವರ ಬರಹಗಳ ಸಂಕಲನ ‘ಕೌತುಕ’ ಪ್ರಕಟವಾಗಿದೆ. ಭೀಮಣ್ಣ ಗಜಾಪುರ ನೋವಿನ ಬಣ್ಣಗಳು, ಕನಸುಗಳಿಗೆ ರೆಕ್ಕೆ ಕಟ್ಟಿದವರು ಎಂಬ ಪತ್ರಿಕಾ ಬರಹಗಳ ಸಂಕಲನಗಳನ್ನು ತಂದಿದ್ದಾರೆ.  ಸ್ವರೂಪಾನಂದ ಕೊಟ್ಟೂರು ಪೋಲೀಸ್ ಇಲಾಖೆಯಲ್ಲಿದ್ದೂ ನಿರಂತರವಾಗಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಸಿದ್ದರಾಮ ಹಿರೇಮಠ ಅವರು ಒಡೇವು ಎನ್ನುವ ಪತ್ರಿಕಾ ಬರಹದ ಸಂಕಲನವನ್ನು ಪ್ರಕಟಿಸಿದ್ದಾರೆ. ಪರಮೇಶ ಸೊಪ್ಪಿನಮಠ, ಡಬ್ಲೂ ಬಸವರಾಜ, ಹುಡೇಂ ಕೃಷ್ಣ ಮೂರ್ತಿ, ಸೋಮೇಶ್ ಉಪ್ಪಾರ್ ಮುಂತಾದವರು ಪತ್ರಿಕೆ ಬರಹದಲ್ಲಿಯೂ ತಮ್ಮದೇ ಆದ ಸೃಜನಶೀಲತೆಯನ್ನು ಕಂಡುಕೊಳ್ಳುತ್ತಿದ್ದಾರೆ.
ಕಥೆಗಾರರು:
 ಕೊಟ್ಟೂರಿನ ವಿಶ್ವನಾಥ ಅಡಿಗ ಅವರು ‘ಕೇಳದೆ ನಿಮಗೀಗ’ ಎನ್ನುವ ಕಥಾ ಸಂಕಲನವನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ. ಅವರ ಮತ್ತೊಂದು ಸಂಕಲನವೂ ಪ್ರಕಟವಾಗಿದೆ. ಕೊಟ್ಟೂರಿನ ಬೆಣ್ಣೆ ಪ್ರಭು, ಪದ್ಮಾ ಜಾಗಟಗೆರೆ ಬಿಡಿ ಬಿಡಿಯಾಗಿ ಕಥೆಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ.

  ಹಗರಿ  ದಂಡೆ  ಕಥಾ  ಸಂಕಲನದ ಮೂಲಕ ಕಥಾ ಜಗತ್ತನ್ನು ಪ್ರವೇಶಿಸಿದ ವೆಂಕಟೇಶ್ ಉಪ್ಪಾರ ಅವರು ಗಮನಸೆಳೆದಿದ್ದಾರೆ. ಹಲವು  ವಿಮರ್ಶಕರಿಂದ  ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಅವರ ಅವಶೇಷ ಎನ್ನುವ ಎರಡನೇ ಕಥಾಸಂಕಲನವೂ ಪ್ರಕಟವಾಗಿದೆ. ಸದ್ಯಕ್ಕೆ ನಾಧವಿಲ್ಲದ ನದಿ ಎನ್ನುವ  ಕಾದಂಬರಿ ಬರೆವ ತಯಾರಿಯಲ್ಲಿದ್ದಾರೆ. ಇವರ ಗದ್ಯದಲ್ಲಿ  ಬಳ್ಳಾರಿ ಭಾಗದ, ಹಗರಿ ದಂಡೆಯ ಭಾಷೆಯ ವೈಶಿಷ್ಟ್ಯತೆ ಇದೆ
 
  ಸಂಪಿಗೆ ನಾಗರಾಜ ಅವರ ಕಥಾ ಸಂಕಲನ ‘ಖಾಲಿ ಕಣ್ಣಿನ ನಾನು’ ಮೂಲಕ ಕಥೆಗಾರರಾಗಿ ಭರವಸೆ ಹುಟ್ಟಿಸಿದ್ದಾರೆ. ನಾಗರಾಜ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ‘ಇಪ್ಪತ್ತನೆ ಶತಮಾನದ ಕೊನೆಯ ದಶಕಗಳಲ್ಲಿ ಸಾಂಸ್ಕೃತಿಕ ಪ್ರಶ್ನೆ’ (ಸಣ್ಣ ಕಥೆಗಳನ್ನು ಆಧರಿಸಿ) ಸಂಶೋಧನಾ ಪ್ರಬಂಧಕ್ಕೆ ಪಿಹೆಚ್.ಡಿ ಪದವಿಯನ್ನೂ ಪಡೆದಿದ್ದಾರೆ. ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಪುಸ್ತಕಗಳನ್ನು ಪ್ರಕಟಿಸುತ್ತಾ, ಸಾಹಿತ್ಯ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿಡುವ ಪ್ರಯತ್ನ ನಡೆದಿದೆ.
  ಮೂಲತಃ ಸಂಡೂರಿನವರಾದ ವಸುದೇಂದ್ರ ಅವರು ತಮ್ಮದೆ ಆದ ಕಥಾ ಲಯವೊಂದನ್ನು ಕಂಡುಕೊಂಡಿದ್ದಾರೆ. ಅವರ ಯುಗಾದಿ, ಚೇಳು, ಹಂಪಿ ಎಕ್ಸಪ್ರೆಸ್ ಮುಂತಾದ ಕಥಾ ಸಂಕಲನಗಳು ವಿಶಿಷ್ಟವಾಗಿವೆ. ವಸುದೇಂದ್ರ ಅವರು ಪ್ರಬಂಧ ಸಾಹಿತ್ಯದಲ್ಲಿಯೂ ಪ್ರಯೋಗ ಮಾಡಿದ್ದಾರೆ. ನಮ್ಮಮ್ಮ ಅಂದ್ರೆ ನಂಗಿಷ್ಟ ಪ್ರಬಂಧ ಸಂಕಲನ ತುಂಬಾ ಭಿನ್ನವಾಗಿದೆ. ಅವರ ಒಟ್ಟು ಬರಹ ಲಹರಿರೂಪದ್ದಾಗಿರುವುದೇ ಹೆಚ್ಚು. ಅವರ ಛಂದ ಪ್ರಕಾಶನದಿಂದ  ಸ್ಪರ್ಧೆ ಏರ್ಪಡಿಸುವುದು, ಪುಸ್ತಕ ಪ್ರಕಟಿಸುವುದೂ ಇದೆ.

   ಸಂಡೂರು ಭಾಗದ ಕಲಾವಿದ ಸೃಜನ್ ಕೂಡ ಬಳ್ಳಾರಿ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಗಮನಿಸಬೇಕಾದ ಹೆಸರು. ತಮ್ಮ ಕಲಾಕೃತಿಗಳ ಮೂಲಕ ನಾಡಿನ ಹಿರಿ ಕಿರಿಯ ಸಾಹಿತಿಗಳ ಕಾವ್ಯ, ಕಥೆ, ಪುಸ್ತಕಗಳಿಗೆ ತಮ್ಮದೇ ಆದ ವಿಶಿಷ್ಟ ಕಲೆಯ ಮೂಲಕ ಜೀವಂತಿಕೆಯನ್ನು ತಂದಿದ್ದಾರೆ. ಈಚೆಗೆ ತೆಲುಗಿನಿಂದ ಅನುವಾದಗಳನ್ನು ಮಾಡುತ್ತಿದ್ದಾರೆ. ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರ ಆತ್ಮ ಕಥನವನ್ನು ಕನ್ನಡಕ್ಕೆ ತರುತ್ತಿದ್ದಾರೆ.

 ಸಂಶೋಧನೆ:

  ಸಂಶೋಧನೆಯಲ್ಲಿ ಹೊಸ ತಲೆಮಾರೊಂದು ಕ್ರಿಯಾಶೀಲವಾಗಿದೆ.  ಡಾ. ಜಾಜಿ ದೇವೇಂದ್ರಪ್ಪ, ಡಾ. ಸಣ್ಣ ಪಾಪಯ್ಯ, ಡಾ. ಸತೀಶ್ ಪಾಟೀಲ್, ಡಾ.ಇಸ್ಮಾಯಿಲ್ ಜಬ್ಬೀರ್, ಡಾ. ಚಂದ್ರಪ್ಪ ಸೊಬಟಿ, ಡಾ. ಜೆ.ಕುಮಾರ್, ಡಾ. ಎಂ. ವಾಗೀಶ್, ಡಾ.ಟಿ.ಎಂ. ಉಷಾರಾಣಿ, ಡಾ.ಸುಜಾತ ಹಕ್ಕಿ, ಡಾ. ಬಿ.ಜಿ.ಕಲಾವತಿ, ಡಾ. ಗಿರಿಜಾ ಬೋದೂರು, ಗವಿಸಿದ್ದಪ್ಪ ಹಂದ್ರಾಳ್, ಡಾ.ಅರುಣ್ ಜೋಳದಕೂಡ್ಲಿಗಿ ಹೀಗೆ ಪಿಹೆಚ್.ಡಿ ಗಾಗಿ ಸಂಶೋಧನೆ ಮಾಡಿದ ಇನ್ನು ಹಲವಾರು ಪ್ರತಿಭಾವಂತ ಯುವಕ, ಯುವತಿಯರಿದ್ದಾರೆ, ಈ ಕುರಿತು ಪ್ರತ್ಯೇಕವಾಗಿ ಬರಹ ಮಾಡಿ ಗುರುತಿಸಬೇಕಿದೆ.
ಹೊಸ ತಲೆಮಾರನ್ನು ಪರಿಚಯಿಸುವ ಕೆಲಸವೂ ಇಲ್ಲಿ ನಡೆಯುತ್ತಿದೆ:

   ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಈ ಕೆಲಸವನ್ನು ತುಂಬಾ ಅರ್ಥಪೂರ್ಣವಾಗಿ ಆರಂಭಿಸಿದರು. ವಿಕ್ರಮ್ ವಿಸಾಜಿ, ಪೀರ್ ಭಾಷ, ದಸ್ತಗಿರಿ ಸಾಬ್ ದಿನ್ನಿ ಮುಂತಾದವರನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಹೆಚ್ಚುಗಾರಿಕೆ ಲೋಹಿಯಾ ಚನ್ನಬಸವಣ್ಣ ಅವರದು. ಅವರದೇ ಪ್ರಕಾಶನದಿಂದ ಬಂದ ಛಾಯಾ ಭಗವತಿ ಅವರ ಪೂಟಾಣಿ ಕೆಂಪು ಶೂ ಎನ್ನುವ ಸಂಕಲನದ ಮೂಲಕ ಒಬ್ಬ ಉತ್ತಮ ಕವಯಿತ್ರಿಯನ್ನು ಬೆಳಕಿಗೆ ತಂದರು.

  ಹಗರಿಬೊಮ್ಮನಹಳ್ಳಿಯ ಹಿರಿಯ ಸಾಹಿತಿಗಳಾದ ಗುರುಮೂರ್ತಿ ಪೆಂಡಕೂರ್ ಅವರು ತಮ್ಮ ಗೆಳೆಯರ ಬಳಗ ಪ್ರಕಾಶನದ ಮೂಲಕ ಹಲವು ಯುವ ಬರಹಗಾರರನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಕುಂ.ವಿ ಅವರ ಮೊದಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ಈ ಪ್ರಕಾಶನಕ್ಕಿದೆ. ಈಚೆಗೆ ಈಪ್ರಕಾಶನ ಒಂದಷ್ಟು ಮಂಕಾದಂತೆ ಕಾಣುತ್ತಿದೆ.

   ಈ ಕೆಲಸವನ್ನು ಚನ್ನಪಟ್ಟಣದ ಡಾ. ಕೆ. ವೆಂಕಟೇಶ್ ಅವರು ಪಲ್ಲವ ಪ್ರಕಾಶನದ ಮೂಲಕವೂ ಮಾಡುತ್ತಿದ್ದಾರೆ. ಸೈಫ್ ಜಾನ್ಸೆಯ ‘ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು’ ವಿಠ್ಠಲ ದಳವಾಯಿ ಅವರ ‘ಬೋದಿ ನೆರಳಿನ ದಾರಿ’ ಮುಂತಾದ ಯುವ ಸಾಹಿತಿಗಳ ಕೃತಿಗಳನ್ನು ತುಂಬಾ ಮುತುವರ್ಜಿಯಿಂದ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ.  ಕಂಪ್ಲಿ ಶಿವಕುಮಾರ್ ಅವರು ತಮ್ಮದೇ ಆದ ಕೆಂಗುಲಾಬಿ ಪ್ರಕಾಶನವನ್ನು ಮಾಡಿ ವೀರಣ್ಣ ಮಡಿವಾಳರ ಅವರ ನೆಲದ ಕರುಣೆಯ ದನಿ ಸಂಕಲನವನ್ನೂ, ಅನಸೂಯ ಕಾಂಬಳೆ ಅವರ ಮತ್ಸ್ಯಗಂಧಿಯ ಹಾಡು ಸಂಕಲನವನ್ನೂ ತಂದಿದ್ದಾರೆ. ನೆಲದ ಕರುಣೆಯ ದನಿ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾದೆಮಿ ಯುವ ಪ್ರಶಸ್ತಿ ಬಂದಿರುವುದನ್ನು ಗಮನಿಸಬಹುದು.
 ಸಿ.ಮಂಜುನಾಥ ಅವರು ಭರಣಿ ಸಾಂಸ್ಕೃತಿಕ ವೇದಿಕೆಯಿಂದ ಪ್ರಶಸ್ತಿಗಳನ್ನು ಕೊಡುವುದು, ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡುತ್ತಿದ್ದಾರೆ. ಈಚೆಗೆ ವಿ.ಆರ್. ಕಾರ್ಪೆಂಟರ್ ಅವರ ನೀಲಿಗ್ರಾಮ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಸುಭಾಷ್ ಭರಣಿಯವರ ವ್ಯಕ್ತಿ ವೈಭವೀಕರಣದ ಮಿತಿಯೂ ಈ ಕೆಲಸದ ಹಿಂದೆ ಇದೆ.
  ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ನಾವು ನಮ್ಮಲ್ಲಿ ಕಾರ್ಯಕ್ರಮದ ಈ ಮೂಲಕ ಹೊಸ ತಲೆಮಾರು ಒಂದೆಡೆ ಸೇರಿ ಸಂವಾದ ಚರ್ಚೆ ಮಾಡಲು ಅನುವಾಗುವಂತಹ ಒಂದು ಸಮಾಸಕ್ತರ ವೇದಿಕೆ. ಇದು ದೊಡ್ಡ ಬಳಗವನ್ನೇ ಹೊಂದಿದೆ. ಅಂಚೆ ಕೊಟ್ರೇಶ್, ಹೆಚ್. ಎಂ. ನಿರಂಜನ್, ಆನಂದ ಋಗ್ವೇದಿ, ಚಿದಾನಂದ ಸಾಲಿ, ವಿಕ್ರಮ ವಿಸಾಜಿ, ಮುಂತಾದ ಇಂದು ಬರೆಯುತ್ತಿರುವ ಹೊಸ ತಲೆಮಾರಿನ ಬರಹಗಾರರಿಗೆ ನಾವು ನಮ್ಮಲ್ಲಿ ವೇದಿಕೆಯಾಗಿರುವುದು ಕೂಡ ಬಳ್ಳಾರಿ ಜಿಲ್ಲೆಗೆ ಸಲ್ಲುವ ಒಂದು ಗೌರವ ಅಂತಲೇ ಭಾವಿಸಬಹುದಾಗಿದೆ.
  ನಾವು ನಮ್ಮಲ್ಲಿ ಬಳಗ ಮೈಸೂರಿನಲ್ಲಿ ‘ವರ್ತಮಾನ ಕರ್ನಾಟಕ’ ಚಿತ್ರದುರ್ಗದಲ್ಲಿ ‘ಮಾದ್ಯಮ ಕರ್ನಾಟ’ ಕುಪ್ಪಳ್ಳಿಯಲ್ಲಿ ‘ಕರ್ನಾಟಕ ಕಂಡ ಚಳವಳಿಗಳು’ ಕಾರ್ಯಕ್ರಮವನ್ನು ಮಾಡುವ ಮೂಲಕ ಕರ್ನಾಟಕದ ವಿದ್ವತ್ ಲೋಕವು ಗಂಭೀರವಾಗಿ ಗಮನಿಸುವಂತೆಯೂ, ಆಲೋಚಿಸುವಂತೆಯೂ ಮಾಡಿದೆ. ನಾವು ನಮ್ಮಲ್ಲಿ ಬಳಗ ಶಿವಮೊಗ್ಗದ ಅಹರ್ನಿಷಿ ಪ್ರಕಾಶನದ ಒಟ್ಟುಗೂಡಿ ಅರುಣ್ ಜೋಳದಕೂಡ್ಲಿಗಿ ‘ಅವ್ವನ ಅಂಗನವಾಡಿ’  ಎಸ್. ಕುಮಾರ್ ಅವರ ‘ಚಳಿಗಾಲದ ಎಳೆಸಾಲು’ ಟಿ.ಕೆ. ದಯಾನಂದ ಅವರ ‘ರಸ್ತೆ ನಕ್ಷತ್ರ’ ಪುಸ್ತಕಗಳನ್ನು ಪ್ರಕಟಿಸಿದೆ.
  ಸಿರಿಗೆರೆಯ ಅನ್ನಪೂರ್ಣ ಪ್ರಕಾಶನವೂ ಕೆಲವು ಪುಸ್ತಕಗಳನ್ನು ಪ್ರಕಟಿಸುವ ಮೂಲಕ, ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಜೀವಂತಗೊಳಿಸಿದೆ. ಸಿರಿಗೆರೆ ಯರಿಸ್ವಾಮಿ ಅವರು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

  ಮೂಲತಃ ಬಳ್ಳಾರಿಜಿಲ್ಲೆಯವರಾದ ಅನೇಕ ಬರಹಗಾರರು ಬದುಕಿನ ಅನಿವಾರ್ಯತೆಗೆ ಬೇರೆ ಬೇರೆಡೆ ನೆಲೆಸಿರುವುದೂ ಇದೆ. ಕನ್ನಡದ ಬಹುದೊಡ್ಡ ಇತಿಹಾಸಕಾರರಾದ ಷ.ಶೆಟ್ಟರ್ ಅವರೂ ಕೂಡ ಹಗರಿಬೊಮ್ಮನಹಳ್ಳಿ ತಾಲೂಕಿನವರು. ಹೀಗೆ ಅನೇಕರನ್ನು ಗುರುತಿಸಬಹುದು. ಇಲ್ಲಿ ಮುಖ್ಯವಾಗಿ ಯುವ ಬರಹಗಾರರನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ. ನನ್ನ ಗಮನಕ್ಕೆ ಬರದ ಬರಹಗಾರರ ಹೆಸರು ಬಿಟ್ಟುಹೋಗಿರುವ ಸಾದ್ಯತೆಯೂ ಇದೆ. ಈ ಮಿತಿಯ ಮಧ್ಯೆಯೂ ಬಳ್ಳಾರಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಹೊಸ ನಡಿಗೆಯೊಂದನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ.
***

2 ಕಾಮೆಂಟ್‌ಗಳು:

  1. ಅದ್ಬುತವಾಗಿದೆ ಬಳ್ಳಾರಿ ಜಿಲ್ಲೆಯ ಸಾಹಿತ್ಯ...

    ಪ್ರತ್ಯುತ್ತರಅಳಿಸಿ
  2. ಬರಹಕ್ಕೊಂದು ಸೌಜನ್ಯತೆ ಇರಬೇಕು.ಈರ್ಷೆ ಇರಬಾರದು ಅರುಣ್. ಯಾಕೆ ನಾನೂ ನಿಮ್ಮಂತೆ ಬಳ್ಳಾರಿ ಜಿಲ್ಲೆಯವನಲ್ಲವೇ..ಇಲ್ಲಿ ದಾಖಲಿಸಿರುವ ನಿಮ್ಮ ಬರಹವನ್ನು ಇಂದು ಪ್ರೀತಿಯಿಂದ,ಕುತೂಹಲದಿಂದ ಓದಿದೆ.ನಿಮ್ಮ ಬಗೆಗೆ ನೀವೇ ಎರೆಡೆರೆಡು ಸಾರಿ ಬರೆದುಕೊಂಡಿದ್ದೀರಿ! ನಿಂಗಪ್ಪ ಮುದೇನೂರು ಅಂತ ಒಬ್ಬ ಕವಿ ಇದ್ದಾನೆ ಎಂದಷ್ಟೇ ಹೇಳಬಹುದಿತ್ತು...

    ಪ್ರತ್ಯುತ್ತರಅಳಿಸಿ