ಗುರುವಾರ, ಏಪ್ರಿಲ್ 3, 2014

ಬಿಸಿಲನಾಡಿನಲ್ಲಿ ಅರಳಿದ ಹೊಸ ಸಂವೇದನೆ-ಸುಕನ್ಯಾ ಬಿ. ಮಾರುತಿ.



-ಸುಧಾ ಚಿದಾನಂದಗೌಡ


ಲಂಗ ತೊಡರಿ ಬಿದ್ದೆ,/ಪಂಚೆಉಟ್ಟ ಅವಗೆದ್ದ.
’ಅಂದು’ ಬಿದ್ದ ನಾನು/ಇನ್ನೂ ಎದ್ದೇ ಇಲ್ಲ..

ಎಂದು ಸರಳವಾಗಿ, ಸ್ಪಷ್ಟವಾಗಿ ಬೀಳುವ ಏಳುವ ಕ್ರಿಯೆಯನ್ನು ಸಾಮಾಜಿಕವಾಗಿ ಬುನಾದಿ ಇಟ್ಟುಕೊಂಡು ವೈಯಕ್ತಿಕ ಉದಾಹರಣೆ ಕೊಟ್ಟು ಬರೆದವರು ಸುಕನ್ಯಾ ಬಿ. ಇವರ ಇನ್ನೊಂದು ಸಾಕಷ್ಟು ಪ್ರಚಲಿತ ಮತ್ತು ಜನಪ್ರಿಯ ಕವಿತೆ ಹುಡುಗನಿಗೆಯ ಕೆಲಸಾಲುಗಳು ಹೀಗಿವೆ-

ನನ್ನ ಇಪ್ಪತ್ತೆಂಟನ್ನು
ಹದಿನೆಂಟಕ್ಕೆ ಇಳಿಸಿದ್ದಕ್ಕೆ
ನಿನಗೆ ಧನ್ಯವಾದ.

ಸುಕನ್ಯಾ ಎಂದೊಡನೆ ನೆನಪಾಗುವುದು ಈ ಕವಿತೆಯೇ. ಏಕೆಂದರೆ ನಾನು ಬಾಲ್ಯದಲ್ಲಿದ್ದಾಗ ಕೇಳಿದ ಈ ಕವನ ಆ ದಿನಗಳಲ್ಲಿ ಹೊಸಅಲೆಯನ್ನೇ ಎಬ್ಬಿಸಿತ್ತು. ಪ್ರಬುದ್ಧ ಮಹಿಳೆಯೊಬ್ಬಳು ತನಗಿಂತ ವಯಸಿನಲ್ಲಿ ಕಿರಿಯನಾದವನೊಬ್ಬ ತನ್ನನ್ನು ಛೇಡಿಸಿದಾಗಿನ ಪ್ರಸಂಗ ಈ ಕವಿತೆಯಲ್ಲಿ ಬರುತ್ತದೆ. ಮಹಿಳೆ ಮುಕ್ತವಾಗಿ ಬರೆಯುವುದನ್ನು ಸಮಾಜ ಬೆರಗುಗಣ್ಣಿನಿಂದ ಹಾಗೂ ಸ್ವಲ್ಪ  ಸಿಟ್ಟಿನಿಂದ ಕೂಡ ನೋಡುತ್ತಿದ್ದ, ದಲಿತ- ಬಂಡಾಯ-ಮಹಿಳಾ ಸಾಹಿತ್ಯದ ಬಿಸಿ ಕಾದು ನಿಗಿನಿಗಿಸುತ್ತಿದ್ದ ೭೦ರ ದಶಕದ ದಿನಗಳು ಅವು. ಲೇಖಕಿಯರನೇಕರು ಬಹುತೇಕ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದ ಈ ಕವನ ನನ್ನ ಕಿವಿಗೂ ಬಿದ್ದು ಅವರ ಬಗ್ಗೆ ಕುತೂಹಲ ತಳೆದು ನಮ್ಮೂರಿನವರೇ ಅಂತಲ್ಲಾ, ಎಲ್ಲಿದಾರೆ? ಎಂದು ಹುಡುಕಾಡುವ ಹೊತ್ತಿಗೆ ಸುಕನ್ಯಾ ಮೇಡಂ ಭೌಗೋಳಿಕವಾಗಿ ಬಳ್ಳಾರಿಜಿಲ್ಲೆಯಲ್ಲಿ ಇರಲೇ ಇಲ್ಲ. ೧೯೮೨ರಲ್ಲಿ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿಕೊಂಡ ಸುಕನ್ಯಾ ತವರಿನಿಂದ ಯಾರಾದರೂ ಸಾಹಿತ್ಯಾಸಕ್ತರು ಬಂದಾರಾ ಎಂದು ಎದುರುನೋಡುತ್ತಿರುತ್ತಾರೆ. ಭೇಟಿಯಾದಾಗ ಅಕ್ಕರೆ, ಆತ್ಮೀಯತೆಯಿಂದ ಹಚ್ಚಿಕೊಳ್ಳುವುದಲ್ಲದೆ ನಿನ್ನ ಕವನ ಇಲ್ಲಿ ಗೆದೈತಿ, ಇಲ್ಲಿ ಬಿದೈತಿ, ಇಲ್ಲಿ ಹೋಗೇಬಿಟೈತಿ ನೋಡು.. ಎಂದು ಕರಾರುವಾಕ್ಕಾಗಿ ಹಿಡಿದು ತೋರಿಸಬಲ್ಲ ಕನ್ನಡ ಗುರುವು ಹೌದು.

ಬದುಕು-ಬರಹ ಬೇರೆ ಬೇರೆಯಲ್ಲ ಎಂಬಂತೆ ಭಿನ್ನ ಭಿನ್ನವಾಗಿ ಸತತ ಮೂವತ್ತೈದು ವರ್ಷಗಳಿಂದ ಬರೆಯುತ್ತಿರುವ ಸುಕನ್ಯಾ ಈವರೆಗೆ ಪರಿಸರದಲ್ಲಿ, ಪಂಚಾಗ್ನಿ ಮಧ್ಯೆ, ನಾನು-ನನ್ನವರು, ತಾಜಮಹಲಿನ ಹಾಡು, ಬಿಂಬದೊಳಗಣ ಮಾತು ಎಂಬ ಐದು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇತ್ತೀಚೆಗೆ ೨೦೦೭ರಲ್ಲಿ ಈ ಎಲ್ಲ ಕವಿತೆಗಳನ್ನು ಒಟ್ಟುಗೂಡಿಸಿ ಸಪ್ನಾ ಬುಕ್ ಹೌಸ್ ನವರು ನಾನೆಂಬ ಮಾಯೆ ಶೀರ್ಷಿಕೆಯಡಿಯಲ್ಲಿ ಸಮಗ್ರ ಕವನಸಂಕಲನವನ್ನೂ ಪ್ರಕಟಸಿದ್ದಾರೆ. ಸಂಕೃತಿ, ಪ್ರಶಾಂತ, ಪ್ರಣಯಿನಿ ಎಂಬ ಪುಸ್ತಕಗಳನ್ನು ಸಹಸಂಪಾದಿಸಿದ್ದಾರೆ.

ಅಕ್ಷರ ಬೇತಾಳ/ಸುಮ್ಮನಿರಗೊಡುವುದಿಲ್ಲ,/ಬರೆಯದಿದ್ದರೆ ನನ್ನ ತಲೆಯನ್ನೇ/ಬಲಿ ಬೇಡುತ್ತದೆ.

   ಎಂದು  ಬೇತಾಳ ಕವಿತೆಯಲ್ಲಿ ಬರೆದಿರುವ ಸುಕನ್ಯಾ ಬರಹ ಎಂಬುದನ್ನೊಂದು ಕೆಲಸವೆಂದಾಗಲಿ, ಅನಿವಾರ್ಯವೆಂದಾಗಲಿ ಎಂದೂ ನಾ ಭಾವಿಸಲೇ ಇಲ್ಲ. ತಿಳಿದಾಗ, ತಾನಾಗೇ ಹುಟ್ಟಿದಾಗ ಕವಿತೆಗಳನ್ನು ಹರಿಬಿಟ್ಟೆ ಅಷ್ಟೇ. ಅದಕ್ಕೆ ಸುತ್ತಮುತ್ತಲಿನವರ ಪ್ರೋತ್ಸಾಹ ಧಾರಾಳ ಸಿಕ್ಕಿದ್ದರಿಂದ ಕವಯಿತ್ರಿ ಎನಿಸಿಕೊಂಡೆ ಹೊರತು ಬರೆಯಬೇಕೆಂದು ಕುಳಿತು ಬರೆದವಳಲ್ಲ ನಾನು. ಬದುಕು ಮಾತ್ರ ಸಾಕಷ್ಟು ಕಲಿಸಿತು. ಅದನ್ನೇ ಕವನಗಳನ್ನಾಗಿಸಿದೆ ಎಂದು ಪ್ರಾಂಜಲ ಮನಸಿನಿಂದ ಹೇಳಿಕೊಳ್ಳುವ ಸುಕನ್ಯಾ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ತುಂಬಿದ ಕುಟುಂಬದಲ್ಲಿ ಹುಟ್ಟಿದವರು. ಹೆತ್ತವರೇನೂ ಭಾರೀ ಜಾಣರಲ್ಲ. ನನ್ನ ಚಿಕ್ಕ ತಂಗಿಯರನ್ನು ಸೊಂಟದಲ್ಲಿ ಎತ್ತಿಕೊಂಡು ಅವರನ್ನೂ ಬೆಳೆಸುತ್ತ, ನಾನೂ ಬೆಳೆದ ಬಾಲ್ಯ ನನ್ನದು. ಅನಂತರ ಕೂಡಾ ನನ್ನೊಂದಿಗೇ ಧಾರವಾಡದಲ್ಲೇ ಇದ್ದರು. ತಂಗಿಯರ, ತಮ್ಮಂದಿರು, ಸಂಬಂಧಗಳು ಬಹುಮಟ್ಟಿಗೆ ಮಹಿಳೆಯನ್ನು ಬೆಳೆಸುವುದು ಹೌದು. ಸೋಲಿಸುವುದೂ ಹೌದು ಎನ್ನುವ ಸುಕನ್ಯಾ ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.

೧೯೫೬ರ ಮಾರ್ಚ್ ೧ ರಂದು ಹುಟ್ಟಿದ ಸುಕನ್ಯಾ ಮಾರುತಿಯವರು ವಿವಾಹದ ಬಳಿಕ ಹಲವರ್ಷ ಹೊಸಪೇಟೆಯಲ್ಲಿ ಇರಬೇಕಾಗಿ ಬಂತು. ಆಗ ಅಲ್ಲಿಯೇ ಇದ್ದ ಎಸ್.ಎಸ್.ಹಿರೇಮಠ ತಮ್ಮ ಪ್ರಕಾಶನದಿಂದ ಸುಕನ್ಯಾರ ಮೊದಲ ಕವನಸಂಕಲನವನ್ನು ೧೯೭೮ರಲ್ಲಿ ಹೊರತಂದರು. ತಮ್ಮ ಮಗನಿಗೆ ಸಂಗ್ರಾಮ ಎಂದು ನಾಮಕರಣ ಮಾಡಿ ಮಾಡಿದ್ದನ್ನೂ, ಎಸ್.ಎಸ್.ಹಿರೇಮಠ ಕೂಡ ತಮ್ಮ ಮಗನಿಗೂ ಸಂಗ್ರಾಮ ಎಂದು ಹೆಸರಿಟ್ಟಿದ್ದನ್ನು ನೆನಪಿಸಿಕೊಂಡು ಆಗ ನಾವುಗಳೆಲ್ಲಾ ಬಂಡಾಯವನ್ನೇ ಉಸಿರಾಡುತ್ತಿದ್ದೆವು ಎಂದು ಬರವಣಿಗೆ ಆರಂಭಿಸಿದ ಆ ದಿನಗಳನ್ನು ನೆನಪಿಸಿಕೊಂಡರು. ಅದು ದಲಿತ ಬಂಡಾಯ ಸಂವೇದನೆ ತೀವ್ರವಾಗಿದ್ದ ಕಾಲ. ಕನ್ನಡಸಾಹಿತ್ಯ ಓದಿಕೊಂಡಿದ್ದ ಸುಕನ್ಯಾ ಅವರಿಗೆ ಬರವಣಿಗೆಯ ಮಾಧ್ಯಮ ಕೈಗಂಟಿಕೊಂಡಾಗ ಸಹಜವಾಗಿಯೇ ಬಂಡಾಯದ ಆಶೋತ್ತರಗಳನ್ನು ತಮ್ಮದು ಮಾಡಿಕೊಂಡು, ಬಂಡಾಯ ಪ್ರಜ್ಞೆಯ ಭಾಗವಾದರು, ಅಲ್ಲಿಂದಾಚೆಗೆ ಬರೆಯುವುದರೊಟ್ಟಿಗೆ ಸಾಹಿತ್ಯದ ಇತರ ಸಮುದಾಯಿಕ ಕ್ರಿಯೆಗಳಲ್ಲೂ ಪಾಲ್ಗೊಳ್ಳಲು ಅವಕಾಶಗಳು ಬಂದಾಗ ಹಿಂಜರಿಯದೆ ಸಕ್ರಿಯವಾಗಿ ಜವಾಬ್ದಾರಿ ನಿರ‍್ವಹಿಸಿದರು. 

ನನ್ನಿಂದ ನಾ ದೂರಾಗಲು/ಕೊಸರಿ ಪಾರಾಗಲು/ಕಾಲನೊಂದಿಗೆ ಕಾಲು ಹಾಕುತ್ತ ನಿಂತ/ಒಂಟಿಗಾಲಿನ ತವಸಿ/
ಎಂದು ಬಸವನಿಗೆ ಹೇಳುವುದಾಗಲಿ,
ಕದಳಿಯ ದಾರಿ ನೀ ತೋರಿದರೆ/ಬೇನೆಯ ಬೆಸಲಾಗಿ/ಬಯಲಾಗಬೇಕೆಂದಿದ್ದೇನೆ/
ಸೀರೆಯ ಹಂಗು ಹರಿದು/ ನಿರ್ವಯಲಾಗಬೇಕೆಂದಿದ್ದೇನೆ
ಎಂದು ಅಕ್ಕನಲ್ಲಿ ನಿವೇದಿಸಿಕೊಳ್ಳುವುದಾಗಲಿ

ರಾಮಸ್ಪರ್ಶಕ್ಕೆ/ಶಿಲೆ, ಸ್ಫೋಟವಾಗಿದೆ ಅಷ್ಟೇ/ಹೆಣ್ಣಾಗಲಿಲ್ಲ

ಎಂದು ಅಹಲ್ಯೆಯ ಮೂಲಕ ಒಪ್ಪಿಕೊಳ್ಳುವುದಾಗಲಿ ಕವಿ ವ್ಯಕ್ತಿತ್ವದ ತಾನಿಟ್ಟುಕೊಂಡ ಆದರ್ಶಗಳ ಕಲ್ಪನೆಗಳೇ ಆಗಿವೆ. ಆ ಆದರ್ಶಗಳ ಮುಲಕ ಅವಳಿಗೆ ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುವುದು ಸಾಧ್ಯವಾಗಿದೆ. ಈ ವಿಧಾನ ಇಂಥ ಸಂದರ್ಭಗಳಲ್ಲಿ ಬೇರೆ ಮಹಿಳಾ ಕವಿಗಳು ಅನುಸರಿಸಿದ ವಿಧಾನಗಳಿಗಿಂತ ವಿಶಿಷ್ಟವಾಗಿರುವುದರಿಂದ ಮಹತ್ವದ್ದೆನಿಸುತ್ತದೆ. 

ಅಸ್ಮಿತೆಯ ಬಗ್ಗೆ ಸುಕನ್ಯಾ ಅವರು ಹೊಂದಿರುವ ಕಾಳಜಿಗಳು ಗಟ್ಟಿಯಾಗುವ ಕ್ರಿಯೆಯ ಭಾಗಗಳೇ ಹೊರತು ಆತ್ಮರತಿಯ ಲಾಲಸೆಯ ಪರಿಣಾಮಗಳಲ್ಲ. ಗಟ್ಟಿಯಾದ ವ್ಯಕ್ತಿತ್ವ ಮಾತ್ರ ತನ್ನ ಪರಿಸರಕ್ಕೆ ಜೀವಂತವಾಗಿ, ಪ್ರಾಮಾಣಿಕವಾಗಿ ಸ್ಪಂದಿಸಬಲ್ಲದು. ಸುಕನ್ಯಾ ಅವರಲ್ಲಿ ಸಮಾಜಪ್ರಜ್ಞೆ ಸಾಕಷ್ಟು ಜಗ್ರತವಾಗಿಯೇ ಇದೆ ಎನ್ನುವುದಕ್ಕೆ ಈ ಸಂಕಲನದಲ್ಲಿ ಸಾಕಷ್ಟು  ನಿದರ್ಶನಗಳಿವೆ. ದಲಿತ ಸಮಾಜದಿಂದ ಬಂದ ಅವರು ಸಹಜವಾಗಿಯೇ ಈ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾರೆ, ಅವರ ನೋವಿನಲ್ಲಿ ಸಹಬಾಗಿಯಾಗುತ್ತಾರೆ. ಅವರ ಆಶೋತ್ತರಗಳಿಗೆ ಅಭಿವ್ಯಕ್ತಿ ನೀಡುತ್ತಾರೆ. ’ಬಡವರಯ್ಯ’, ’ಕಾಳ್ಗಿಚ್ಚು’, ’ಅಂತರ’, ’ಬೇಡತಿಯರು’, ’ಒಮ್ಮೆ ನಗುತ್ತೇವೆ’, ’ಕೈದಿಗಳು’, ’ದೇವದಾಸಿ’, ಇಂಥ ಹಲವಾರು ಕವಿತೆಗಳು ಈ ಸಂಕಲನದಲ್ಲಿವೆ. ಈ ಕವಿತೆಗಳಲ್ಲಿ ನಾವು ಕೇಳುವ ದನಿಯಲ್ಲಿ ಪ್ರತ್ಯೇಕತೆಗಿಂತ ಸಮಷ್ಠಿಪ್ರಜ್ಞೆಯೇ ದಟ್ಟವಾಗಿ ಮೂಡಿ ಬಂದಿಹುವುದು ಸಹಜವೇ ಆಗಿದೆ. ಇಲ್ಲಿ ಕಾವ್ಯ ಹಾಗೂ ಬದುಕುಗಳ ನಡುವಿನ ಅಂತರವೇ ಅಳಿಸಿ ಹೋಗುವುದರಿಂದ ಓದುಗರನ್ನು ನೇರವಾಗಿಯೇ ಒಳಗೊಳ್ಳುವ, ಪ್ರಭಾವಿಸುವ ಪ್ರಯತ್ನ ಕಂಡುಬರುತ್ತದೆ. 
ಮೇಲ್ನೋಟಕ್ಕೆ ನಾ/ಗಟ್ಟಿ ಕುಳಾನೇ ಆಗಿದ್ದೆ, ಆದ್ರ/ಒಳ್ಗೊಳ್ಗೇ ಹುಳ ತಿಂದದ್ದನ್ನ/ಯಾರ‍್ಗೂ ಹೇಳಿದ್ದಿಲ್ಲ

ಮಳೆ ಹೋದಾಗ/ರೈತ್ರ ಗೋಳ್ನ ಕೇಳ್ಲಾರ‍್ದೆ/ಏಳ್ ಹಗೇವ್ನೂ ಕಿತ್ತು/ಹಳ್ಳಿಗೆಲ್ಲಾ ಜ್ವಾಳಾ ಅಳ್ದೆ.

ಇದ್ದೊಬ್ಬ ಮಗಳ್ಮದ್ವೆ ಮಾಡಿ/ಆಸ್ತೀನೆಲ್ಲಾ ಅಳಿಯನ್ಪಾಲು ಮಾಡಿ/ಗಟ್ಟಿಕುಳಾ ಅನ್ನೋ ಹೆಸರ‍್ನ ಉಳಿಸ್ಕೊಂಡ
ಸುದ್ದಿ ತಿಳ್ದು ಎದಿ ಒಡ್ದ/ಹೆಂಡ್ತೀನೂ ಕಳ್ಕೊಂಡು/ಬರಿಗೈನಲ್ಲಿ ಮಗಳ್ಮನಿ/ಬಾಗ್ಲಾಗ ನಿಂತ್ಕೊಂಡೆ.

ನಮ್ಮನಿ ಹೊಸ್ಲಿ ತುಳಿಬ್ಯಾಡ ಅಂತ/ಮಗ್ಳು-ಅಳಿಯಾ ಹೇಳಿದ್ದು ಕೇಳಿ/ಕಣ್ನೀರು ಫಳಕ್ಕಂತ ಉದುರ‍್ದಾಗ
ಹರ‍್ಕಂಗಿ ತೋಳ್ನಿಂದ ಒರಸ್ಕೊಂಡು/ಹಿಂಗ ದೇಶಾಂತ್ರ ಬಂದೆ.   

  ಪರದೇಶಿ ಹೆಸರಿನ ಈ ಕವಿತೆ ಓದುವಾಗ ಕಿಂಗ್ ಲಿಯರ್ ನೆನಪಿಗೆ ಬಂದರೆ ಆಶ್ಚರ‍್ಯವಿಲ್ಲ. ಮಕ್ಕಳನ್ನು ನಂಬಿದ ಹಿರಿಜೀವಗಳು ಇಳಿಗಾಲದಲ್ಲಿ ಚಡಪಡಿಸುವ, ಹರೆಯದ ಮದವೇರಿದ ಮಕ್ಕಳು ಸಂಸ್ಕೃತಿ-ಸಂಸ್ಕಾರಗಳನ್ನೆ ಮರೆತು ನಡೆದುಕೊಳ್ಳುವುದು ಹೃದಯವಿದ್ರಾವಕ ಸನ್ನಿವೇಶಗಳನ್ನು ಸೃಷ್ಟಿಸಿಬಿಡುತ್ತವೆ. ಇಲ್ಲಿ ನೈತಿಕತೆಗಿರುವ ಜವಾಬ್ದಾರಿ ಕಾನೂನು ಕಟ್ಟಳೆಗೆಲ್ಲಿಯದು ಎಮದು ವಿಷಾದದಿಂದ ಕೇಳಬೇಕಾಗುತ್ತದೆ. ಒಂದೊಮ್ಮೆ ವೈಭವದಿಂದ ಬಾಳಿದ ಜನ ವಿಧಿವಿಪರ‍್ಯಾಸಕ್ಕೋ, ಸ್ವಯಂಕೃತ ಅಪರಾಧಕ್ಕೋ ಬಲಿಪಶುಗಳಾಗಿ ಪರದೇಶಿಗಳಾಗಿಬಿಡುವುದು, ಹಿಂದಿನ ದಿನಗಳಲ್ಲಿ ಗಟ್ಟಿಕುಳವೆನಿಸಿಕೊಂಡು ಅದನ್ನುಳಿಸಿಕೊಳ್ಳಲು ಹೆಣಗಾಡುತ್ತಾ, ಕೊನೆದಿನಗಳನ್ನು ನೆಮ್ಮದಿ ಇಲ್ಲದೆ ಕಳೆಯುವ ಅನ್ನದಾತರ ಬದುಕು ಮನದುಂಬಿ ಬರುವಂತೆ ಮಾಡುತ್ತದೆ. ಇಂಥ ರೈತಕುಟುಂಬಗಳನ್ನು ನಿರೂಪಿಸುವಲ್ಲಿ ಸುಕನ್ಯಾ ಒಂದ್ಹೆಜ್ಜೆ ಮುಂದಿದ್ದಾರೆಂದು ಹೇಳಿದರೆ ತಪ್ಪೇನಿಲ್ಲ.

  ಹಾಗೆಯೇ ದೇಶದ ಸ್ಥಿತಿಗತಿಗಳಲ್ಲಿ ಪ್ರಜೆಗಳು ನಿರ್ಲಿಪ್ತತೆ ಕೂಡಾ ಒಂದುಬಗೆಯ ವಿಷದಂತೆ ಎಂಬುದನ್ನೂ ವಿವರಿಸುವ ಕವಿತೆಗಳು ಇಲ್ಲಿವೆ.

ಸೌಜನ್ಯದ ಸೋಗುಹಾಕಿ/ದೌರ್ಜನ್ಯ ಸಹಿಸುವ/ಧೀರರು ನಾವು,/ಅಕ್ಕ ಪಕ್ಕದವರು/ಪಕ್ಕೆಲುಬು ಮರಿದರೂ/ನಕ್ಕು ಸಹಿಸುವವರು.
ತಾಯ್ನುಡಿಯ ಅಡವಿಟ್ಟು/ಪರದೇಶಿಯಾಗಿ/ಹೊರದೇಶ ಭಾಷೆ ಕಡತಂದವರು,/ನಾವು ಕೊಡುತಲೆಯ/ಪರಶುರಾಮರು.

ಪಾವಗಡ ಸಾವಗಡವಾಗಿ/ಪ್ರಾಣಿ ರೂಪದಲ್ಲಿ ಪ್ರಾಣ ಹೀರುವ/ತೋಳಗಳಿಗೆ ಕೋಳ ಹಾಕಲಾರದ/’ಉತ್ತರೋತ್ತರರು’ ನಾವು.
ಶತ-ಶತಮಾನಗಳ/ಇತಿಹಾಸ ಕುರುಕುತ್ತ/ಉಬ್ಬಿ ಬಲೂನಾಗಿ/ಕೊಬ್ಬಿ ಕೋಣವಾಗಿ/’ಮಾರಿ’ಗೆ ಮಾರಿಕೊಂಡವರು/ನಾವು.

’ವ್ಯಕ್ತಿತ್ವ ನಿರಸನ’ದ/ತತ್ವ ಊದುತ್ತ/ನಿನ್ನ ಮೋರೆಗೆ/ಮಸಿ ಬಳಿದವರು ತಾಯಿ. 

 ಹೀಗೆ ದೇಶ ಮತ್ತು ರಾಜ್ಯಗಳ ಕೆಲವು ಅಧೋಗತಿಗಳಿಗೆ ಕಾರಣ ನಾವೇ ಅಲ್ಲದೆ ಇನ್ಯಾರು ಎಂಬ ಪ್ರಶ್ನೆ ಇಲ್ಲಿದೆ. ಸ್ವಾಭಿಮಾವನ್ನು ಕಳೆದುಕೊಂಡು, ವ್ಯಕ್ತಿತ್ವವನ್ನು ಅಲಕ್ಷಿಸಿಕೊಂಡು ಹೇಗೊ ಬದುಕಿದರಾಯ್ತು ಎಂದು ಯಾವ ಸಮಾಜದ ಜನ ತಿಳಿದಿರುತ್ತಾರೆಯೋ ಅಲ್ಲಿಯವರೆಗೆ ಅಧೋಗತಿಯೇ ದಿಕ್ಕು ಮಾತ್ರವಲ್ಲ ಅಂಥಾ ಜನಸಾಮಾನ್ಯರು ಸಮುದಾಯದ ಮೋರೆಗೆ ಮಸಿಬಳಿಯಬಲ್ಲವರು ಹೌದು. ಈ ಕವಿತೆಗೆ ಅವರು ಕೊಟ್ಟಿರುವ ಶೀರ್ಷಿಕೆ ನಾವು ತುಂಬ ಸಮಂಜಸವೂ, ಸಾಂಕೇತಿಕವೂ ಆದದ್ದು.

ಪಂಚಾಗ್ನಿಯ ಮಧ್ಯೆ ಅವರ ಕವನಂಕಲನದ ಹೆಸರೂ ಹೌದು. ಅದರಲ್ಲಂದು ಮನೋಜ್ಞ ಕವಿತೆ ಕವಿಗೋಷ್ಟಿಗೊಂದು ಕವಿತೆ.

ಅನ್ಯಾಯ, ಅತ್ಯಾಚಾರ, ಅಪಮಾನದ/ಪಂಚಾಗ್ನಿಯ ಮಧ್ಯೆ ಕುಳಿತು/ಕವಿಗೋಷ್ಠಿಗೊಂದು ಕವಿತೆ ಬರೆಯುತ್ತೇನೆ. 

  ಹೀಗೆ ಬರೆಯುವ ಸುಕನ್ಯಾ ವೈಯಕ್ತಿಕಸಂಗತಿಯನ್ನು ನಿಧಾನವಾಗಿ, ನವಿರಾಗಿ ಸಮುದಾಯಕ್ಕಿಳಿಸುತ್ತಾರೆ.ಹಾಗೆ ಬರೆಯುವಾಗ ಒಳಗಿನ ನೋವನ್ನು ಹೊರಹಾಕುವುದೆಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ತಾನು ಹೇಳಿದ ಸತ್ಯ ತಲುಪಬೇಕಾದಲ್ಲಲಿಗೆ ತಲುಪಿತೋ ಇಲ್ಲವೋ ಎಂಬ ಧಾವಂತ, ಸ್ತ್ರೀ ಅನುಭವಿಸುವ ಅನ್ಯಾಯ, ಮೂಕವೇದನೆಗಳನ್ನು ಹೀಗೆ ಅನಾವರಣಗೊಳಿಸಿದ್ದಾರೆ.

ಬಳೆಯಿನ್ನೂ ಕೊಳವಾಗೇ ಇದೆ,/ತಾಳಿ ಉರುಳಾಗಿ ಬಿಗಿಯುತ್ತಿದೆ./ ತಾಳಲಾರೆನು ಇನ್ನು ಹೇಳುವೆನಾದರೂ ಯಾರಿಗೆ? 

ಎಂಬ ಮಾತುಗಳಲ್ಲಿ ಸ್ತ್ರೀಗೆ ಹೇಗೆ ಸಮಾಜ ಉಡುಗೆತೊಡುಗೆಗಳಿಂದಲೇ ಬೇಡಿ ಹಾಕಿಡಲು ಯತ್ನಿಸುತ್ತದೆ ಎಂಬುದನ್ನು ವಿವರಿಸುತ್ತಾರೆ. ಹಾಗೆಯೆ ತರತಮ ಮಾಡುವ ಪುರುಷನಿಗೆ ನಾಟುವಂತೆ ನೇರವಾಗಿ ನಾನೂ ನಿನ್ನಂತೆಯೇ ಬೆಳೆದೆ, ವ್ಯತ್ಯಾಸವೇನೂ ಇಲ್ಲ ಎಂದು

ಹುಟ್ಟಿದ್ದು ಬೆಳೆದ್ದು/ನಿನ್ನಂತೆ, ತಾಯ/ಒಡಲಲ್ಲಿ, ಮಡಿಲಲ್ಲಿ
ದಟ್ಟ, ಪಂಚೆಗಳ ದಾರಿ ಕವಲೊಡೆದಾಗ/ನಾ ಬಿದ್ದೆ, ನೀನೆದ್ದುಕೊಂಡೆ

ಈ ಕವಿತೆಯ ಮೂಲಕ ಹೇಳಿದ್ದಾರೆ. ಪತಿಯೊಡನಿದ್ದೂ ಏಕಾಂಗಿಯಾಗಿರಬೇಕಾದ ಅನಿವಾರ್ಯತೆಯ ಬೇಸರದಲ್ಲಿ, ಸಹಜ ದಾಂಪತ್ಯ ಸುಖವೊಲ್ಲದ ಗೌತಮನನ್ನು 

ಸ್ವರ್ಗೀಯ ಸುಖಕೊಡಲು
ತುದಿಗಾಲಲ್ಲಿ ನಿಂತ ನನ್ನ
ಕಡೆಗಣಿಸಿದ್ದ ಬೈರಾಗಿ.

ಎಂದು ಅಹಲ್ಯೆ ಎಂಬ ಕವಿತೆಯಲ್ಲಿ ಕರೆದಿದ್ದಾರೆ. ಹೀಗೆ ವಿಷಮದಾಂಪತ್ಯದಿಮದ ಉಂಟಾಗುವ ಏರುಪೇರುಗಳಲ್ಲಿಯೂ ಮಹಿಳೆ ಶಿಕ್ಷೆಗೊಳಗಾಗುವ, ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಯಾವ ಅವಕಾಶವೂ ಇಲ್ಲದ ಅಸಹಾಯಕತೆಯನ್ನು ಚಿತ್ರಿಸಿರುವುದರಲ್ಲಿ ಅಹಲ್ಯೆಯದು ಒಂದು ಮುಖವಾದರೆ ಇನ್ನೊಂಡು ಮುಖ ವೇಶ್ಯೆಯರದ್ದು. ಬೇಡತಿಯರು ಎಂಬ ಕವಿತೆಯಲ್ಲಿ 

ನಾವು ವೇಶ್ಯೆರು/ನಿಮ್ಮ ದಾಸಿಯರು/ಆಗಿದ್ದ ಕಾಲ/ಈಗಿಲ್ಲ ಎನ್ನುವಂತಿಲ್ಲ,/ಆದರೂ ಅಲ್ಲಲ್ಲಿ/
ಕಾಸುತ್ತಿದ್ದೇವೆ/ನಿಮ್ಮ ಬುರುಡೆಗೆ/ ಬಿಸಿನೀರು.

ಎಂದು ಹೇಳುವಾಗ ಅವರಿಗೂ ಒಂದು ಕಾಲ ಒದಗಿಬರುವ ಆಶಾವಾದ ಮತ್ತು ನೆಮ್ಮದಿ ಎರಡನ್ನೂ ಕಾಣಬಹುದು. ಎಷ್ಟೇ ವಿದ್ಯಾವಂತೆಯದರೂ ಈ ದೇಶದ ಮಹಿಳೆ ದಮನಿಸಿಕೊಳ್ಳುವುದನ್ನೆ ಸಂಸ್ಕಾರ, ಸಂಸ್ಕೃತಿ ಎಂದು ಭಾವಿಸಿ ಸ್ವೀಕರಿಸುವುದನ್ನು ಕಲಿತಿದ್ದಾಳೆ ಎಂಬುದನ್ನು ಭಾರತೀಯಳು ಕವಿತೆಯಲ್ಲಿ

ನಿನ್ನ ಹುರಿದು/ಮುಕ್ಕುತ್ತೇನೆ ಕ್ಷಮಿಸು,
ನಾ ಭಾರತೀಯ ನಾರಿ/ಅನಿಸಿದ್ದನ್ನೆಲ್ಲಾ/ಹತ್ತಿಕ್ಕುತ್ತೇನೆ.

ಎಂದು ವ್ಯಕ್ತಪಡಿಸಿದ್ದಾರೆ. ಹೀಗೆಲ್ಲಾ ಭಾವನೆಗಳನ್ನು ಹತ್ತಿಕ್ಕಿಕೊಂಡು ಕೌಟುಂಬಿಕ ಕರ್ತವ್ಯಗಳನ್ನು ನಿರ್ವಹಿಸುವ ಮಹಿಳೆಗೆ ಕೊನೆಗೆ ಪ್ರತಿಫಲವಾಗಿ ಸಿಗುವುದೇನು..? ಸಂಬಂಧಗಳು ಪದ್ಯ ಹೀಗಿದೆ.

ಒದ್ದರೆ ಕಾಲು/ಹುದುಲಲ್ಲಿ ಹುದುಗುತ್ತವೆ/ಅಪ್ಪಲು ಹೋದ
ಸಂಬಂಧಗಳು/ತಪ್ಪಿಸಿಕೊಂಡು/ಗಹಗಹಿಸುತ್ತವೆ.

ಹೀಗೆ ಸಂಬಂಧಗಳೂ ಕೈಮೀರಿಹೋಗುತ್ತವೆ. ಹಾಗಾಗಿ ಇಂದು ಮುಳುಗಿದ ಸೂರ್ಯ ನಾಳೆ ಹುಟ್ಟುವನೆಂಬ ಭರವಸೆ ಇಲ್ಲ.
ಕಾಲ ಎಷ್ಟು ನಿಷ್ಕರುಣಿಯೆಂದರೆ ನನಗೆ ಏನನ್ನೂ ಕೊಡದೆ, ನನ್ನದೆಲ್ಲವನ್ನೂ ದೋಚುತ್ತಾ ಕಾಲ ಜಾರುತ್ತಲೇ ಇದೆ ಎಂಬ ನಿರಾಶಾವಾದವೂ ಒಮ್ಮೊಮ್ಮೆ ಕಾಡುತ್ತದೆ ಕವಯಿತ್ರಿಯನ್ನು. 

ಹೀಗೆ ಸಮಾಜದ ಬಹುಮುಖ ಸಮಸ್ಯೆಗಳನ್ನು, ಕಾಡುವ ಗಾಢ ಭಾವಗಳನ್ನು ಬರವಣಿಗೆ ಮೂಲಕ ಹರಿಬಿಟ್ಟ ಸುಕನ್ಯಾ ಬಿ. ಕನ್ನಡ ನಾಡುನುಡಿಯ ಕೆಲಸ ಮಾಡಿದವರೂ ಹೌದು. ಕರ್ನಾಟಕ ವಿವಿ, ಕನ್ನಡ ವಿವಿ, ಸೇರಿದಂತೆ ವಿವಿಗಳ ಸೆನೆಟ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ’ಪಂಪ ಪ್ರಶಸ್ತಿ’ ಆಯ್ಕೆ ಸಮಿತಿ ಸೇರಿದಂತೆ ಹಲವು ಸಂಘಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲು ಕವಿಗೋಷ್ಟಿಗಳಿಗಾಗಿ ಹೊಸಪದ್ಯ ಬರೆದುಕೊಂಡೆ ವೇದಿಕೆಯೇರುವ ಉತ್ಸಾಹಿ ಸುಕನ್ಯಾ ೨೦೧೩ರಲ್ಲಿ ನಡೆದ ಬಳ್ಳಾರಿಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಗೊಂಡಿದ್ದರು. ಇನ್ನೂ ಸಾಕಷ್ಟು ಕನ್ನಡದ ಕೆಲಸ ಮಾಡುವ ಆಸಕ್ತಿ ಉಳಿಸಿಕೊಂಡಿರುವ ಸುಕನ್ಯಾ ಅವರಿಗೆ ಶುಭಹಾರೈಸುವುದರೊಂದಿಗೆ, ಕೊನೆಯದಾಗಿ ಒಂದು ಮನಸಿನಲ್ಲಿ ಮಾಸದೆ ಉಳಿಯಬಲ್ಲ, ಅವರದೊಂದು ಪದ್ಯ ನನ್ನ ಹಾಡು 

ಒಮ್ಮೆ ತಾಯಾಗುತ್ತೇನೆ,/ದುಡಿದು ಬೇಸತ್ತಾಗ/ಗತಿಗೇಡಿ ನಾಯಾಗುತ್ತೇನೆ,
ಹಣ್ಣು ಕಳಿತು, ತುಂಬು ಕಳಚುತ್ತದೆ/ಅವ್ವನಂತೆ ನಾನೂ ಮಣ್ಣಾಗುತ್ತೇನೆ.


ಶನಿವಾರ, ಮಾರ್ಚ್ 29, 2014

ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ-ಇಂತಿ ನಮಸ್ಕಾರಗಳು

ಸೌಜನ್ಯ:ಪ್ರಜಾವಾಣಿ


















  ಮೇಲುನೋಟಕ್ಕೆ ಭಿನ್ನವಾಗಿ ಕಾಣುವ, ಬೇರೆ ಬೇರೆ ತಲೆಮಾರುಗಳಿಗೆ ಸೇರಿದ ಡಿ.ಆರ್. ನಾಗರಾಜ್ ಹಾಗೂ ಲಂಕೇಶರನ್ನು ಜೊತೆಗಿಟ್ಟು ನೋಡುವುದು ಸಾಹಿತ್ಯ ವಿಮರ್ಶೆಯ ವಿದ್ಯಾರ್ಥಿಗಳಿಗೆ ಅಸಂಗತವಾಗಿ ಕಾಣಬಹುದು. ಆದರೂ ನಾನು ಅದೃಷ್ಟವಶಾತ್ ಒಡನಾಡಿದ ಕನ್ನಡದ ಎರಡು ದೊಡ್ಡ ಪ್ರತಿಭೆಗಳನ್ನು ಹೊರಳಿ ನೋಡುವ  ಹಾಗೂ ನನ್ನಂಥ ಒಬ್ಬ ಓದುಗನೊಳಗೆ, ಬರಹಗಾರನೊಳಗೆ ಇಪ್ಪತ್ತನೆಯ ಶತಮಾನದ ಇಬ್ಬರು ಶ್ರೇಷ್ಠ ಕನ್ನಡ ಲೇಖಕರು ಅಂತರ್‌ಪಠ್ಯೀಯವಾಗಿ ಬೆರೆತು ಹೋಗಿರುವ ರೀತಿಯನ್ನು ಗ್ರಹಿಸುವ ನಿರೂಪಣೆಯಿದು.
ವ್ಯಕ್ತಿಯೊಬ್ಬನ ನಿರ್ಗಮನದ ನಾಲ್ಕಾರು ವರ್ಷಗಳಲ್ಲೇ ನಾವು ನೋಡುವ ಕಣ್ಣು ಹೇಗೆ ಬದಲಾಗುತ್ತಿರುತ್ತದೆ! ಅವನ ಬಗೆಗಿನ ಪೂರ್ವಗ್ರಹಗಳು, ಅನಗತ್ಯ ಮೆದುತನ, ಇವನು ನಮ್ಮವನೆಂದು ಸುಮ್ಮನೆ ಉಕ್ಕುವ ಪ್ರೀತಿ, ಅತಿ ನಿಕಟತೆಯಿಂದ ಒಸರತೊಡಗುವ ಅಸಹನೆ... ಇವೆಲ್ಲ ಕಡಿಮೆಯಾಗಿ ಒಂದು ಬಗೆಯ ನಿರ್ಲಿಪ್ತ ದೃಷ್ಟಿ ನಿರ್ಮಾಣವಾಗತೊಡಗುತ್ತದೆ. ವ್ಯಕ್ತಿಗಳನ್ನು ಕುರಿತು ಬರೆಯಲು ಇದೇ ಸರಿಯಾದ ಮನಸ್ಥಿತಿ ಇರಬಹುದೇನೋ.
ಹಾಗೆಂದುಕೊಂಡು ಹಿಂದಿರುಗಿ ನೋಡಿದರೆ ಕಾಣುವ ಚಿತ್ರಗಳು: ಲಂಕೇಶ್ ಎಂದರೆ ನಿಷ್ಠುರತೆ, ಸೆಡವು; ತನ್ನ ಔದಾರ್ಯಕ್ಕೂ ಸಣ್ಣತನಕ್ಕೂ ತಾಳೆಯಾಗದ ವ್ಯಕ್ತಿತ್ವ; ತುಂಟತನ; ಯಾವ ಶಕ್ತಿಯೇ ಇರಲಿ, ಎದುರಾಗುವ ಛಲ; ಜಗಳಗಳೇ ಸೃಜನಶೀಲತೆಯ ಜೀವಾಳ ಎಂಬ ನಂಬಿಕೆ; ಎಲ್ಲವನ್ನೂ ಸೀಳಿ ನೋಡುವ ಚೂಪುಗಣ್ಣು; ವಂಚನೆಯನ್ನು ತಕ್ಷಣ ಪತ್ತೆ ಮಾಡಿಬಿಡಬಲ್ಲ ಹದ್ದುಗಣ್ಣು; ಆದರೆ ಪ್ರಾಮಾಣಿಕತೆಯ ಪತ್ತೆಯಲ್ಲಿ ಕೊಂಚ ಮಬ್ಬುಗಣ್ಣು! ಅನ್ಯರ ನೋವನ್ನು ತನ್ನದಾಗಿಸಿಕೊಂಡು ನವೆಯುವ ಒಳಗು; ಹೊಗಳಿಕೆಯ ಬಗ್ಗೆ ಕಾತರ, ಹೊಗಳುವವರ ಬಗ್ಗೆ ಸಂದೇಹ; ‘ಭಟ್ಟಂಗಿಗಳ ಸುಳ್ಳುಗಳಲ್ಲಿ ಲೇಖಕ ಸತ್ಯಕ್ಕಾಗಿ ತಡಕಾಡುವಂತಾಗುತ್ತದೆ’ ಎಂಬ ತಿಳಿವಳಿಕೆ; ಗೆಲ್ಲುವ, ಆಳುವ ಬಯಕೆ; ಆದರೆ ಎಲ್ಲ ದಿಗ್ವಿಜಯದ ನಿರರ್ಥಕತೆಯ ಅರಿವು; ಸಂತನಾಗುವುದನ್ನು ತಪ್ಪಿಸಿಕೊಳ್ಳಲು ಕಿಡಿಗೇಡಿಯಾಗಿ ಉಳಿವ ಬಯಕೆ...
ಅತ್ತ, ಡಿ.ಆರ್. ಎಂದರೆ ಸಾಮಾನ್ಯವಾಗಿ ಸದಾ ಉರಿಯುವ ಬೌದ್ಧಿಕತೆ; ‘ಸುಟ್ಟಲ್ಲದೆ ಮುಟ್ಟೆನೆಂಬ’ ಹಟ; ಬೌದ್ಧಿಕ ಶಕ್ತಿ ತರಬಲ್ಲ ಅಧಿಕಾರದ ಬಗ್ಗೆ ಅಪಾರ ನಂಬಿಕೆ; ತಾತ್ವೀಕರಣಕ್ಕೆ ಸಿಕ್ಕದಿರುವುದು ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸ; ಕೆಲವೊಮ್ಮೆ ರಂಗಕ್ಕೆ ತಕ್ಕ ಬುದ್ಧಿಜೀವಿ ಜಿಗಿತ; ಮಗುವಾಗಬೇಕೆಂಬ ತಾತ್ವಿಕ ಬಯಕೆ; ಆದರೆ ಮಗುವಾಗಲಾರೆನೆಂಬ ಖಚಿತ ನಂಬಿಕೆ! ಲಂಕೇಶರಿಗೆ ಎಲ್ಲರನ್ನೂ, ಎಲ್ಲವನ್ನೂ ಕಠೋರವಾದ ನೈತಿಕ ಹಿಡಿಯಲ್ಲಿ ಹಿಡಿಯುವ ಹಟ; ಡಿ.ಆರ್.ಗೆ ಎಲ್ಲವನ್ನೂ ಸಿದ್ಧಾಂತದಲ್ಲಿ ಬಿಗಿಯುವ, ಎಲ್ಲಿಂದ ಎಲ್ಲಿಗೋ ಕೊಂಡಿಯಾಗಿಸುವ ಆಸೆ...
ಲಂಕೇಶರ ಕಣ್ಣಿನ ಸ್ಥಿತಿ ನೋಡಿ ನಮಗೆಲ್ಲಾ ಕಸಿವಿಸಿಯಾಗುತ್ತಿತ್ತು. ಇರುವ ಒಂದು ಕಣ್ಣೂ ಹೋದರೆ ಲಂಕೇಶರಿಗೆ ಇಷ್ಟವಾದ ಪುಸ್ತಕಗಳನ್ನೆಲ್ಲಾ ನಾನು ಅವರಿಗೆ ಓದಿ ಹೇಳಬೇಕು ಎಂದು ಕೂಡ ಒಂದು ದಿನ ಮುಗ್ಧವಾಗಿ ಅಂದುಕೊಂಡಿದ್ದೆ. ಕ್ರಮೇಣ ಅವರ ಒಂದು ಕಣ್ಣು ಉಳಿಯಿತು. ಆ ಘಟ್ಟದಿಂದಾಚೆಗೂ ಲಂಕೇಶರು ಓದುತ್ತಾ, ಬರೆಯುತ್ತಾ ಹೋದರು. ಒಂದೇ ದಿನದಲ್ಲಿ ಒಂದು ಪುಸ್ತಕ ಓದಿ ತೀಕ್ಷ್ಣವಾದ ರಿವ್ಯೂ ಬರೆದುಬಿಡುತ್ತಿದ್ದರು. ಲಂಕೇಶರ ವಿಮರ್ಶಾಕ್ರಮದ ಬಗ್ಗೆ ಎಷ್ಟೇ ಪ್ರಶ್ನೆಗಳಿರಬಹುದಾದರೂ ಅಷ್ಟೊಂದು ವಿಮರ್ಶಾ ಒಳನೋಟಗಳನ್ನು ಕೊಟ್ಟ ಕನ್ನಡ ವಿಮರ್ಶಕರು ಯಾರೂ ಇಲ್ಲವೆಂದೇ ನನ್ನ ನಂಬಿಕೆ.
ನುರಿತ ಅಕ್ಕಸಾಲಿಗನೊಬ್ಬ ಒಂದೇ ಏಟಿಗೆ ಇದು ಚಿನ್ನ, ಇದು ಕಬ್ಬಿಣ ಎಂದು ಬೇರ್ಪಡಿಸುವಷ್ಟು ಚುರುಕಾಗಿ ಅವರ ನೈತಿಕ ಕಣ್ಣು ಕೆಲಸ ಮಾಡುತ್ತಿತ್ತು. ಆ ಕಣ್ಣು ಮಂದವಾಗಲಿಲ್ಲ ಎಂದು ಹೇಳಲಾರೆ. ಆದರೆ ಆ ಕಣ್ಣು ಕನ್ನಡದ ಉಳಿದ ವಿಮರ್ಶಕರಿಗಿಂತ ಹೆಚ್ಚು ತೀಕ್ಷ್ಣವಾಗಿ ಸಾಹಿತ್ಯಕೃತಿಗಳ ದೋಷಗಳನ್ನು ಕಂಡಿದೆ ಹಾಗೂ ರಾಜಿಯಿಲ್ಲದೆ ಅದನ್ನು ಓದುಗರಿಗೆ ಕಾಣಿಸಿದೆ. ಶ್ರೇಷ್ಠವಾದದ್ದನ್ನು ಗುರುತಿಸುವಲ್ಲಿ ಆ ಕಣ್ಣು ಕೊಂಚ ಜಿಪುಣತನ ತೋರಿರುವುದು ನಿಜ. ಆ ನಡುವೆಯೂ ಅನೇಕ ಹೊಸ ಲೇಖಕ, ಲೇಖಕಿಯರನ್ನು ಅದು ಗುರುತಿಸಿದೆ; ಒಮ್ಮೆ ಅಪಾರವಾಗಿ ಮೆಚ್ಚಿದ್ದ ಲೇಖಕರನ್ನು ಮತ್ತೆ ಪರಿಶೀಲಿಸಿದೆ.
‘ಮನುಷ್ಯ ಮೂಲತಃ ಈವಿಲ್’ ಎಂದು ಲಂಕೇಶ್ ಒಂದು ಸಂಜೆ ಮತ್ತೊಮ್ಮೆ ಅಂದರು. ಈ ಮಾತು ಆ ಗಳಿಗೆಯ ಖಾಸಗಿ ಅನುಭವದ ಕಹಿಯಿಂದ ಬಂದಿದ್ದರೆ ಇದಕ್ಕೆ ಹೆಚ್ಚಿನ ವ್ಯಾಪ್ತಿ ಇರುತ್ತಿರಲಿಲ್ಲ. ಆದರೆ ಈ ಮಾತನ್ನು ಲಂಕೇಶ್ ಆಗಾಗ್ಗೆ ಆಡುತ್ತಾ ಬಂದಿದ್ದರು. ಈ ಬಗ್ಗೆ ಬರೆಯುತ್ತಾ ಬಂದಿದ್ದರು. ತಮ್ಮ ಸುಮಾರು ನಲವತ್ತು ವರ್ಷಗಳ ಬರವಣಿಗೆಯಲ್ಲಿ ಈವಿಲ್‌ನ -ಕೇಡಿನ- ಸ್ವರೂಪವನ್ನು ಶೋಧಿಸುತ್ತಾ ಬಂದಿದ್ದರು. ಆದ್ದರಿಂದ ಇದು ಅವರ ದರ್ಶನದ ಅಂತಿಮ ಹೇಳಿಕೆ ಕೂಡ ಇರಬಹುದು. ಇಷ್ಟು ನಿರಂತರವಾಗಿ ಒಂದು ವಸ್ತುವನ್ನು ಬೆನ್ನು ಹತ್ತಿದ ಮುಖ್ಯ ಕನ್ನಡ ಲೇಖಕ ಪ್ರಾಯಶಃ ಲಂಕೇಶ್ ಒಬ್ಬರೇ. ಅವರು ತಮ್ಮ ಪತ್ರಿಕೆಯ ಮೂಲಕ ಮಾಡಿದ್ದು ಕೂಡ ಈವಿಲ್‌ನ ವಿವಿಧ ಸಮಕಾಲೀನ ರೂಪಗಳ ಜೊತೆಗಿನ ಮುಖಾಮುಖಿಯೇ ಆಗಿತ್ತು.
ಈ ಶೋಧನೆಯನ್ನು ಲಂಕೇಶ್ ತಮ್ಮ ಬರವಣಿಗೆಯ ಮೊದಲ ಹಂತದ ನವ್ಯ ಘಟ್ಟದಲ್ಲೇ ಆರಂಭಿಸಿದರು. ಕಾಮದಲ್ಲಿ ಮನುಷ್ಯನೊಬ್ಬ ತೀವ್ರವಾಗಿ ವ್ಯಕ್ತವಾಗುವ ಹಾಗೆ ತನ್ನ ಕೇಡಿನಲ್ಲೂ ಅಷ್ಟೇ ತೀವ್ರವಾಗಿ ವ್ಯಕ್ತವಾಗುತ್ತಾನೆ. ಮುಂದಿನ ಗಳಿಗೆಯಲ್ಲಿ ಏನು ಮಾಡುತ್ತಾನೆ ಎಂದು ಊಹಿಸಲಾಗದ ಮನುಷ್ಯ ಯಾವಾಗಲೂ ನೈತಿಕ ಕೇಂದ್ರದಿಂದ ಪ್ರೇರಣೆ ಪಡೆದೇ ವರ್ತಿಸುತ್ತಾನೆ ಎಂದು ಹೇಳುವುದು ಕಷ್ಟ. ಆದ್ದರಿಂದಲೇ ಮಾನವವರ್ತನೆಯಲ್ಲಿರುವ ಮುಖ್ಯ ಚಾಲಕಶಕ್ತಿಗಳಲ್ಲೊಂದಾದ ಹಾಗೂ ಮನುಷ್ಯ ಸ್ವಭಾವವನ್ನು ಅರಿಯಲು ಬಹುಮುಖ್ಯ ಭಿತ್ತಿಯಾದ ಈವಿಲ್ ಲಂಕೇಶರ ವಸ್ತು, ಭಿತ್ತಿ, ಹುಡುಕಾಟ, ಒರೆಗಲ್ಲು ಎಲ್ಲವೂ ಆದಂತಿದೆ.
...ಈವಿಲ್‌ನಿಂದ ಮುಕ್ತವಾಗುವುದಕ್ಕೆ ಅಥವಾ ಕೇಡನ್ನು ಮೀರುವುದಕ್ಕೆ ಸಾಮಾನ್ಯವಾಗಿ ಅನೇಕ ಲೇಖಕರು ಹುಡುಕುವ ಆಶಾವಾದಿ, ನೀತಿವಾದಿ ಅಥವಾ ಆಧ್ಯಾತ್ಮಿಕ ಮಾರ್ಗದಲ್ಲಿ ಲಂಕೇಶರಿಗೆ ನಂಬಿಕೆ ಇರಲಿಲ್ಲ. ಬದಲಿಗೆ, ಮನುಷ್ಯ ತನ್ನ ತೀವ್ರ ತಾದಾತ್ಮ್ಯದ ಗಳಿಗೆಯಲ್ಲಿ ಅಥವಾ ‘ವೃಕ್ಷದ ವೃತ್ತಿ’ ಕಥೆಯ ಪಾರ್ವತಜ್ಜಿಯಂತೆ ಪರಿಸರದ ಜೊತೆಗೆ ಒಂದಾಗಿ ಕಂಡುಕೊಳ್ಳುವ ಸಾರ್ಥಕ್ಯದಲ್ಲಿ ತನ್ನ ಈವಿಲ್ ಗುಣವನ್ನು ಮೀರಬಹುದು ಎಂದು ಲಂಕೇಶರಿಗನ್ನಿಸಿತ್ತು. ಈ ಕಾರಣದಿಂದಾಗಿಯೇ ಅವರ ಸಾಹಿತ್ಯ ಕೃತಿಗಳಲ್ಲಿ ಕೇಂದ್ರ ಪಾತ್ರಗಳು ‘ಹೀರೋ’ಗಳಂತೆ ಆಡುವುದಿಲ್ಲ; ಈ ಹೀರೋಗಳು ಮಾತ್ರವೇ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಾರೆಂಬ ರಮ್ಯ ನಂಬಿಕೆ ಲಂಕೇಶರ ಕೃತಿಗಳಲ್ಲಿ ಕಡಿಮೆ. ಅಸಾಧಾರಣ ಗುರಿಗಳು ಹಾಗೂ ಆದರ್ಶ ಕ್ರಿಯೆಗಳಿಗಿಂತ, ಸಾಧಾರಣವಾದ, ಆದರೆ ತನ್ನ ಹೃದಯಕ್ಕೆ ಹತ್ತಿರವಾದ ಕ್ರಿಯೆಯಲ್ಲಿ ಅಥವಾ ಶ್ರಮದಲ್ಲಿ ಮುಳುಗಿದ ಹೆಣ್ಣು ಅಥವಾ ಗಂಡು ಸಾಧಿಸುವ ಉದಾತ್ತತೆಯ ಬಗ್ಗೆ ಲಂಕೇಶರಿಗೆ ಹೆಚ್ಚು ಭರವಸೆಯಿದ್ದಂತಿತ್ತು...
ಲಂಕೇಶರ ಜೊತೆಗಿನ ಸಂಜೆಯ ಮಾತುಕತೆಗಳು ಬಹುತೇಕವಾಗಿ ಲವಲವಿಕೆಯಿಂದಿರುತ್ತಿದ್ದವು. ನಮ್ಮೊಳಗನ್ನು ಬೆಳಗುವಂತಿರುತ್ತಿದ್ದವು. ಡಿ.ಆರ್. ಜೊತೆಗಿನ ಚರ್ಚೆಗಳು ಅದ್ಭುತವಾದ ಬೌದ್ಧಿಕ ಎತ್ತರಕ್ಕೆ ಕೊಂಡೊಯ್ಯುವಂತಿರುತ್ತಿದ್ದವು. ಉತ್ತಮ ಮದ್ಯಪಾನದ ಗಳಿಗೆಗಳಲ್ಲಂತೂ ಈ ಇಬ್ಬರೂ ಅತ್ಯಂತ ಬ್ರೈಟ್ ಆದ ಕ್ಷಣಗಳನ್ನು ಸೃಷ್ಟಿಸುತ್ತಿದ್ದರು. ಅವೆಲ್ಲ ನನ್ನ ಬದುಕಿನ ಅತ್ಯಂತ ಅರ್ಥಪೂರ್ಣ ಗಳಿಗೆಗಳು ಎಂಬ ಅನಿಸಿಕೆ ಈಗ ಇನ್ನಷ್ಟು ಗಾಢವಾಗತೊಡಗುತ್ತದೆ. ಅವು ನನ್ನೊಳಗೆ ಮತ್ತೆ ಮತ್ತೆ ಸುಳಿಯುವ, ತಂಗುವ, ಬೆಳೆಯುವ, ಜೀವಂತ ಗಳಿಗೆಗಳು ಎಂಬ ಭಾವ ವಿಚಿತ್ರ ನೆಮ್ಮದಿ ಕೊಡುತ್ತದೆ.
ಆದರೆ ಅವು ಮತ್ತೆ ಬಾರದ ಗಳಿಗೆಗಳು ಎಂಬ ವಾಸ್ತವ ಕುಟುಕಿದಾಗ, ಅಸಾಧ್ಯವಾದ ಸೆನ್ಸ್ ಆಫ್ ಲಾಸ್ ಮುತ್ತತೊಡಗುತ್ತದೆ. ವಿವಿಧ ಜ್ಞಾನಮಾರ್ಗಗಳ ಅಧ್ಯಯನಗಳ ಫಲವೆಲ್ಲ ಖಚಿತ ಮೆಥೆಡ್‌ಗಳ ಚೌಕಟ್ಟಿನಲ್ಲಿ ಹೊಸ ಆಕಾರ ಹಾಗೂ ಮಿಂಚುಗಳಲ್ಲಿ ಹೊರಬರುತ್ತಿರುವಂತೆ ಕಾಣುತ್ತಿದ್ದ ಡಿ.ಆರ್. ಮಾತುಗಳು; ಮಾನವನ ಕಠೋರ ಸತ್ಯಗಳ ಲೋಕದಲ್ಲಿ ತಾನು ಕಂಡದ್ದನ್ನು ಕಂಡ ಹಾಗೆ ಚಿಮ್ಮಿಸುತ್ತಿರುವಂತೆ ಕಾಣುತ್ತಿದ್ದ ಲಂಕೇಶರ ಶಬ್ದಗಳು, ತುಂಡುತುಂಡು ವಾಕ್ಯಗಳು... ಈ ಎರಡೂ ಮಾದರಿಗಳೂ ನನಗೆ ಸ್ಫೂರ್ತಿಯ ಸೆಲೆಗಳಾಗಿಯೇ ಉಳಿದಿವೆ.
೧೯೯೧ರ ಏಪ್ರಿಲ್‌ನಲ್ಲಿ ಮೈಸೂರಿನ ಕಥಾಕಮ್ಮಟದಲ್ಲಿ ಡಿ.ಆರ್. ‘ಒಂದು ಉತ್ತಮ ಸಣ್ಣಕತೆಯ ಬಂಧದೊಳಗೆ ಕನಸು ಮತ್ತು ಕಾಲಜ್ಞಾನ; ಪರಿಚಿತತೆ ಮತ್ತು ಅಪರಿಚಿತತೆ’ ಇರುವ ರೀತಿ ಕುರಿತು ಹೇಳಿದ್ದು ನಾನು ಬರೆಯುವ ಕತೆಗಳ ಬಗ್ಗೆ ಇನ್ನೊಂದು ದಿಕ್ಕಿನಿಂದ ಯೋಚಿಸುವಂತೆ ಮಾಡಿತು. ಅವತ್ತು ಕನ್ನಡ ಕತೆಯಲ್ಲಿ ಅವರ ಅಂತಿಮ ಐದು ಆಯ್ಕೆಗಳು ಇವು: ಲಂಕೇಶರ ‘ಸಹಪಾಠಿ’, ಅನಂತಮೂರ್ತಿಯವರ ‘ಸೂರ್ಯನ ಕುದುರೆ’, ಪೂರ್ಣಚಂದ್ರ ತೇಜಸ್ವಿಯವರ ‘ಅವನತಿ’, ದೇವನೂರ ಮಹಾದೇವರ ‘ಒಡಲಾಳ’, ಮಾಸ್ತಿಯವರ ‘ಸಂಜೀವನ ಸ್ವಪ್ನ’. ಈ ಐದೂ ಕತೆಗಳು ಜಾತಿಯ ನರಕವನ್ನು ಹಿಡಿದಿಟ್ಟ ಬಗೆಯನ್ನು ಡಿ.ಆರ್. ತಮ್ಮ ಭಾಷಣದಲ್ಲಿ ಚರ್ಚಿಸಿದ್ದರು.
ಈ ಭಾಷಣ ಮುಗಿಸಿ ಕಾರಿನಲ್ಲಿ ಬರುವಾಗ ನಾನು ಇದ್ದಕ್ಕಿದ್ದಂತೆ ನನ್ನ ಪ್ರೀತಿಯ ಹಳೆಯ ಹಿಂದಿ ಹಾಡುಗಳ ಕ್ಯಾಸೆಟ್ ಹಾಕಿದೆ. ಮುಖೇಶರ ‘ದಿಲ್ ಜಲ್ತಾ ಹೈ ತೋ ಜಲ್ನೇ ದೇ’ ಹಾಡು ಶುರುವಾಯಿತು. ಆ ಹಾಡಿನ ‘ಹಮ್ ಯಾದ್ ಲಗಾಯೇ ಬೈಠೆ ಹೈ... ತುಮ್ ವಾದಾ ಕರಕೇ ಭೂಲ್ ಗಯೇ’ ಎಂಬ ಸಾಲು ಬಂದ ತಕ್ಷಣ ‘ವೆರಿ ವೆರಿ ರೊಮ್ಯಾಂಟಿಕ್ ಸಾಂಗ್...’ ಎಂದ ಡಿ.ಆರ್. ಮುಖದಲ್ಲಿ ವಿಷಣ್ಣತೆ ಮೂಡತೊಡಗಿತು. ಡಿ.ಆರ್. ಅವರ ಪ್ರಖರ ಬೌದ್ಧಿಕತೆಯ ಮುಖವೇ ಹೆಚ್ಚು ಪರಿಚಯವಿದ್ದ ನಾನು ನಮ್ಮೆಲ್ಲರ ಹಾಗೆ ಅವರಿಗೂ ಇಂಥದೊಂದು ಭಾವನಾತ್ಮಕ ಮುಖವಿರುವುದನ್ನೇ ಮರೆತಿದ್ದೆ! ಈ ಬಗೆಯ ಭಾವುಕತೆ ಅವರಲ್ಲಿ ಮತ್ತೊಮ್ಮೆ ಮೂಡಿದ್ದನ್ನು ನಾನು ಕಂಡದ್ದು ಅವರು ಒಮ್ಮೆ ವಿದೇಶದಿಂದ ಹಿಂತಿರುಗಿದಾಗ.
ವಿದೇಶದಲ್ಲಿದ್ದ ಅವರ ಮಿತ್ರನೊಬ್ಬನ ಮದುವೆ ಮುರಿದು ಬಿದ್ದಿತ್ತು. ಆ ಮಿತ್ರ ತನ್ನ ಹೆಂಡತಿಯ ಜೊತೆಗಿನ ಸಂಬಂಧದ ಕೊನೆಯ ಗಳಿಗೆಗಳನ್ನು ನೆನೆಸಿಕೊಳ್ಳುತ್ತಾ ‘ನಾನೂ ಅವಳೂ ಕೊನೆಯ ಸಲ ಕಾಡಿಗೆ ಹೋದೆವು. ಅಲ್ಲಿ ವರ್ಡ್ಸ್‌ವರ್ತ್ ಪದ್ಯ ಓದಿದೆವು. ಅದಾದ ಮೇಲೆ ಬೇರೆಯಾದೆವು’ ಎಂದು ದುಃಖದಿಂದ ಹೇಳಿದ್ದ. ಡಿ.ಆರ್. ಇದನ್ನು ನನಗೆ ಹೇಳುತ್ತಾ ‘ಐ ವಾಸ್ ಮೂವ್ಡ್ ಇನ್‌ಟು ಟಿಯರ್ಸ್‌್’ ಎಂದರು. ನಾನು ಅವರನ್ನು ಈ ಮೂಡಿನಲ್ಲಿ ನೋಡಿದ್ದು ಇವೆರಡೇ ಸಲವೇನೋ. ಇದನ್ನು ಬರೆಯುತ್ತಿರುವಾಗ, ಡಿ.ಆರ್. ಕಾರು ಓಡಿಸುವಾಗ ಗುನುಗುತ್ತಿದ್ದ ‘ಏನಾಯಿತೋ ಸಖನೆ ಏನಾಯಿತೋ’ ಎಂಬ ತತ್ವಪದದ ಎರಡು ಸಾಲು ಕೂಡ ನೆನಪಾಗುತ್ತಿದೆ; ಜೊತೆಗೇ, ‘ಕಾರು ಓಡಿಸುವಾಗ ಹುಡುಗಿಯರ ಮೀನಖಂಡ ಕಂಡರೆ ಆಕ್ಸಿಡೆಂಟ್ ಗ್ಯಾರಂಟಿ, ನಟರಾಜ್!’ ಎಂಬ ಅವರ ವಿಶೇಷ ‘ಕಾಮ ಜ್ಞಾನ’ ಕೂಡ ! 
ಡಿ.ಆರ್. ಚರ್ಚಿಸುತ್ತಿದ್ದ ವಿಸ್ಮೃತಿಯ ಬಗ್ಗೆ ಯೋಚಿಸಿದಾಗ ಒಂದು ಪ್ರಶ್ನೆ ಎದುರಾಗುತ್ತದೆ: ಈ ಸಾಂಸ್ಕೃತಿಕ ಮರೆವು ಎನ್ನುವುದು ಭಾಗಶಃ ಮಾತ್ರ ಆಗುತ್ತದೆಯೇ? ಹಾಗಾದರೆ ಜಾತೀಯತೆ, ಅಸ್ಪೃಶ್ಯತೆಗಳು ಯಾಕೆ ವಿಸ್ಮೃತಿಗೊಳಗಾಗಿ ನಮ್ಮ ಜೀವನದಿಂದ ಕಣ್ಮರೆಯಾಗಲಿಲ್ಲ? ಹಾಗೆ ಆಗಿದ್ದರೆ ಭಾರತದಂಥ ಸಮಾಜದಲ್ಲಿ ಮರೆವೇ ವರದಾನವಾಗಿಬಿಡುತ್ತಿತ್ತೇನೋ. ಈ ಮರೆವು ಕೂಡ ಆಳುವ ವರ್ಗಗಳು ಜಾಣತನದಿಂದ ಸೃಷ್ಟಿಸುವ ಒಂದು ಸಂಕಥನವೆ? ಈ ಪ್ರಶ್ನೆಗಳಿಗೆ ಡಿ.ಆರ್. ಮುಂದೆ ಉತ್ತರ ಹುಡುಕುತ್ತಿದ್ದರೇನೋ. ಅದು ಆಗದಿದ್ದುದರಿಂದ ಈ ಮಾದರಿಯ ಸಂಸ್ಕೃತಿ ವಿಮರ್ಶೆಯನ್ನು ಮುಂದುವರೆಸುವವರು ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ.
ಆದರೆ ಈ ಬಗೆಯ ಹುಡುಕಾಟ ನಡೆಸುವ ಬೌದ್ಧಿಕ ಬದ್ಧತೆ ಹಾಗೂ ಸಿದ್ಧತೆ ಕನ್ನಡ ಸಂಸ್ಕೃತಿಯಲ್ಲಿ ಇಳಿಮುಖವಾಗುತ್ತಿರುವ ವಿಷಾದಕರ ಪರಿಸ್ಥಿತಿಯೂ ಈಗ ಇದೆ. ಡಿ.ಆರ್. ತಮ್ಮ ಆಧುನಿಕೋತ್ತರ ಚಿಂತನೆಯ ಘಟ್ಟದಲ್ಲಿ ಅವೈದಿಕ, ಶೂದ್ರ ಮತ್ತು ದಲಿತರ ಸಾಂಸ್ಕೃತಿಕ ಅಧಿಕಾರಗಳ ಬಗ್ಗೆ ಮಹತ್ವದ ಗ್ರಹಿಕೆಗಳನ್ನು ಮಂಡಿಸುತ್ತಿದ್ದಾಗ ಅವು ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಯಲ್ಲಿ ಚಲಾವಣೆ ಪಡೆಯಬೇಕಾಗಿತ್ತು; ಅಥವಾ ಈ ಬಗೆಯ ನೋಟಕ್ರಮಗಳ ಅಗತ್ಯವಿದ್ದ ‘ಅಹಿಂದ’ದಂಥ ಸಾಮಾಜಿಕ ವೇದಿಕೆಗಳು ಹಾಗೂ ದಲಿತ, ಶೂದ್ರ ಸಂಘಟನೆಗಳು ಈ ಬಗೆಯ ಚಿಂತನೆಗಳನ್ನು ತಮ್ಮ ತಾತ್ವಿಕ ತಳಹದಿಯಾಗಿ ಸ್ವೀಕರಿಸಬೇಕಾಗಿತ್ತು. ಬಿ.ಎಸ್.ಪಿ ರೀತಿಯ ರಾಜಕಾರಣದ ಜೊತೆಗೂ ಇದು ವ್ಯಾಪಕವಾಗಿ ಬೆರೆಯಬೇಕಾಗಿತ್ತು. ಹಾಗಾಗಲಿಲ್ಲ...
ಹೆರಾಲ್ಡ್ ಬ್ಲೂಮ್ ಜಗತ್ತಿನ ಮಹಾಪ್ರತಿಭೆ­ಗಳನ್ನು ಕುರಿತು ಬರೆದ ‘ಜೀನಿಯಸ್’ ಎಂಬ ಪುಸ್ತಕದಲ್ಲಿ ಬರಹಗಾರನೊಬ್ಬ ತನ್ನ ಆಳದಿಂದ ಸಂಧಿಸಿ ತೀವ್ರವಾಗಿ ತನ್ಮಯವಾಗುವ ವಸ್ತುವಿಗೆ ಎದುರಾದಾಗ ಅವನ ಜೀನಿಯಸ್ ಉಕ್ಕಿ ಹರಿಯುವುದನ್ನು ತೋರಿಸಿಕೊಡುತ್ತಾನೆ. ಅಲ್ಲಮಲೋಕವನ್ನು ಸಂಧಿಸಿದಾಗ ಡಿ.ಆರ್. ಜೀನಿಯಸ್ ಹಾಗೆ ಉಕ್ಕಿ ಹರಿದಿರುವುದು ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯುದ್ದಕ್ಕೂ ಕಾಣುತ್ತದೆ. ತಮ್ಮ ಕೊನೆಯ ವರ್ಷಗಳಲ್ಲಿ ಈ ಕಥನವನ್ನು ಬೆನ್ನು ಹತ್ತಿದ ಕಾಲದಲ್ಲಿ ತಾವು ಸಾವಿನ ಆಸುಪಾಸಿನಲ್ಲಿರಬಹುದೆಂಬ ಸೂಚನೆ ಡಿ.ಆರ್.ಗೆ ಸಿಕ್ಕಿತ್ತೋ ಏನೋ...
ನನ್ನ ತಿಳಿವಳಿಕೆಯ ಪ್ರಕಾರ, ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕನ್ನಡದ ಅತ್ಯಂತ ಮಹತ್ವದ ಸಾಂಸ್ಕೃತಿಕ ಅಧ್ಯಯನ ಹಾಗೂ ಪ್ರಾಯಶಃ ಕನ್ನಡದ ಮೊದಲ ಪೂರ್ಣ ಪ್ರಮಾಣದ ಲಿಟರರಿ ಥಿಯರಿಯ ಪುಸ್ತಕ. ಇಲ್ಲಿ ಡಿ.ಆರ್. ಸಾಧಿಸಿರುವ ಥಿಯರೈಸೇಶನ್‌ನ ವ್ಯಾಪ್ತಿ; ಸಾಹಿತ್ಯಕೃತಿಗಳ ವ್ಯಾಖ್ಯಾನಗಳು; ದಾರ್ಶನಿಕ ವಾಗ್ವಾದಗಳ ಗ್ರಹಿಕೆ; ಕಾವ್ಯಮೀಮಾಂಸೆಗಳ ಸಂಘರ್ಷಗಳು ಸಾಮಾಜಿಕ ಸಂಘರ್ಷಗಳಾಗುವುದನ್ನು ವ್ಯಾಖ್ಯಾನಿಸುವ ಕ್ರಮ; ಅಲ್ಲಮಕಿಟಕಿಯ ಮೂಲಕ ವಿಶ್ವಸಾಹಿತ್ಯದ ಗ್ರಹಿಕೆಗಳು; ವಚನ ಸಾಹಿತ್ಯ- ಶೂನ್ಯ ಸಂಪಾದನೆ- ಮಂಟೇಸ್ವಾಮಿ ಕಾವ್ಯಗಳ ನಡುವಿನ ಕೊಂಡಿಗಳು ಹಾಗೂ ಭಿನ್ನತೆಗಳು; ಕಾವ್ಯದ ವ್ಯಾಪಕ ವ್ಯಾಖ್ಯಾನಗಳು ಮತ್ತು ಅದ್ಭುತವಾದ ಓದಿನ ಕ್ರಮಗಳು- ಈ ಎಲ್ಲದರಲ್ಲೂ ಡಿ.ಆರ್. ತಲುಪಿರುವ ಎತ್ತರ ಕನ್ನಡದ ಮಟ್ಟಿಗಂತೂ ಅಪೂರ್ವ ಎಂದು ಮತ್ತೆ ಮತ್ತೆ ಅನ್ನಿಸಿದೆ.
ಇವತ್ತು ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಪುಸ್ತಕವನ್ನು ಓದತೊಡಗಿದರೆ, ಇಪ್ಪತ್ತನೆಯ ಶತಮಾನದ ಹೊತ್ತಿಗೆ ಡಿ.ಆರ್. ಮೂಲಕ ಕನ್ನಡ ಸಾಹಿತ್ಯತತ್ವ ತಲುಪಿದ ಎತ್ತರ ಹಾಗೂ ಸೂಕ್ಷ್ಮತೆಗಳನ್ನು ಕಂಡು, ಅಲ್ಲಮನ ನಿಗೂಢ ಗುಹೆ ಹೊಕ್ಕ ಡಿ.ಆರ್. ಎಂಬ ಗುಹೇಶ್ವರನ ಎದುರು ‘ಇದ ಕಂಡು ಬೆರಗಾದೆ ಗುಹೇಶ್ವರಾ!’ ಎಂದು ವಿಸ್ಮಯದಿಂದ ನಿವೇದಿಸಿಕೊಳ್ಳಬೇಕೆನಿಸುತ್ತದೆ.
ಸಾಯುವವರಿಗೆ ಸಾವಿನ ಸೂಚನೆ ಮೊದಲೇ ಇರುತ್ತದೆಯೇ? ನಾವು ಬಲ್ಲವರು ಸಾವಿಗೆ ಕೆಲವು ದಿನಗಳ ಹಿಂದೆ ಸಾವನ್ನು ಕುರಿತು ಆಡಿದ ಮಾತುಗಳನ್ನು ಮೆಲುಕು ಹಾಕುತ್ತಾ ನಾವು ಅವುಗಳಲ್ಲಿ ಸಾವಿನ ಸೂಚನೆಗಳನ್ನು ಹುಡುಕುತ್ತಿರುತ್ತೇವೆ. ಡಿ.ಆರ್. ತೀರಿಕೊಳ್ಳುವ ಕೆಲವೇ ದಿನಗಳ ಹಿಂದೆ ಇದ್ದಕ್ಕಿದ್ದಂತೆ ‘ನನಗೆ ಸಾಯಲು ಇಷ್ಟವಿಲ್ಲ’ ಎಂದಿದ್ದರಂತೆ. ಲಂಕೇಶರು ಆಗಾಗ್ಗೆ ಸಾವಿನ ಬಗ್ಗೆ ಮಾತಾಡಿ, ಸಾವಿನ ಹತ್ತಿರ ಹೋಗಿ, ವಾಪಸು ಬಂದು ಅದನ್ನೆಲ್ಲ ಪತ್ರಿಕೆಯಲ್ಲಿ ಬರೆದುಬಿಡುತ್ತಿದ್ದುದರಿಂದ ಅವರು ತಮ್ಮ ಕೊನೆಯ ದಿನಗಳಲ್ಲಿ ಸಾವನ್ನು ಕುರಿತು ಆಡುತ್ತಿದ್ದ ಮಾತುಗಳನ್ನು ನಾವೆಲ್ಲ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ‘ನಾನು ನಮ್ಮವ್ವನ ಥರ. ನಮ್ಮವ್ವ ಯಾವಾಗ್ಲೂ ಸಾಯ್ತಿನಿ, ಸಾಯ್ತಿನಿ ಅಂತ ಕೊರಗ್ತಾ ಇರೋಳು. ಆದರೆ ಹೋಗ್ತಿರಲಿಲ್ಲ!’ ಎಂದು ಲಂಕೇಶ್ ತಮಾಷೆ ಮಾಡಿಕೊಳ್ಳುತ್ತಿದ್ದರು.
ನಾನು ತೀವ್ರವಾಗಿ ಮಿಡಿದ ಡಿ.ಆರ್. ನಾಗರಾಜ್ ಹಾಗೂ ಪಿ. ಲಂಕೇಶ್ ಇಬ್ಬರೂ ತಂತಮ್ಮ ಬದುಕನ್ನು ಬಾಳುವಾಗ ಅದಕ್ಕೆ ತಕ್ಕಂಥ ಕನಸು, ಸಿದ್ಧತೆ, ತಡಕಾಟ, ಸ್ಪಷ್ಟತೆ, ದುಡುಕು, ಆದರ್ಶಗಳ ಹಾದಿಯಲ್ಲಿ ಸಾಗಿದವರು. ಅವರ ಬರಹಗಳಲ್ಲಿ, ಸಾಮಾಜಿಕ-ಸಾಂಸ್ಕೃತಿಕ ವಿಶ್ಲೇಷಣೆಗಳಲ್ಲಿ, ಪ್ರತಿಕ್ರಿಯೆಗಳಲ್ಲಿ, ಅವರು ತೆರೆಯಲೆತ್ನಿಸಿದ ಹಾಗೂ ತೋರಿಸಿದ ಮಾರ್ಗಗಳಲ್ಲಿ ನಿಜಕ್ಕೂ ಅರ್ಥಪೂರ್ಣವಾದದ್ದು ನೂರಾರು ಜನರಲ್ಲಿ ಬೆಳೆಯುತ್ತಾ ಹೋಗುತ್ತದೆ; ಅಥವಾ ಅದನ್ನು ಬೆಳೆಸಬಲ್ಲ ವ್ಯಕ್ತಿಗಳು, ಸಣ್ಣಪುಟ್ಟ ತಂಡಗಳು ಹುಟ್ಟಿಕೊಳ್ಳುತ್ತವೆ... ಇದೆಲ್ಲದರ ಜೊತೆಗೆ, ಕನ್ನಡನಾಡಿನ ಈ ಇಬ್ಬರು ಶ್ರೇಷ್ಠ ಚಿಂತಕರ ಮಾರ್ಗಗಳನ್ನು ಹೊಸಹೊಸ ಓದುಗಳ ಮೂಲಕ ಬೆಳೆಸಬೇಕಾದ ಮುಕ್ತ ವಿಮರ್ಶಾ ವಲಯವೂ ಹೊಸ ತಲೆಮಾರುಗಳೂ ಇಲ್ಲಿ ಸಿದ್ಧವಾಗಬೇಕಾಗುತ್ತದೆ...

ಭಾನುವಾರ, ಫೆಬ್ರವರಿ 9, 2014

ಶಿವಶಂಕರ್ `ಬಣಗಾರ್ ಬಿಂಬ' ಗಳ ಚಿತ್ರ ಜನಪದ





  -ಅರುಣ್ ಜೋಳದಕೂಡ್ಲಿಗಿ

    ಕಳೆದ ವರ್ಷ ನೇಪಾಳದ ಕಠಮಂಡುವಿಗೆ ಅಂತರಾಷ್ಟ್ರೀಯ ಸೆಮಿನಾರಿಗೆ ಹೋದಾಗ ಅಂಡಮಾನ್ ನಿಕೋಬಾರ್ ದ್ವೀಪವನ್ನು ಅಧ್ಯಯನ ಮಾಡಿದ ಜಾನಪದ ವಿದ್ವಾಂಸರೊಬ್ಬರು `ಪೋಟೋ ಫೋಕ್ ಇನ್ ಅಂಡಮಾನ್ ನಿಕೋಬಾರ್' ಎನ್ನುವ ತರಹದ ಒಂದು ಪ್ರಬಂಧವೊಂದನ್ನು ಮಂಡಿಸಿದರು. ಆತ ಕೆಲವು ಬುಡಕಟ್ಟುಗಳ ಸಾಂಸ್ಕೃತಿಕ ಸಂದರ್ಭಗಳ ಫೋಟೋಗಳನ್ನು ಪವರ್ ಪಾಯಿಂಟ್ ನಲ್ಲಿ   ಡಿಸ್ ಪ್ಲೆ ಮಾಡುತ್ತಾ ಒಂದು ಚಿತ್ರ ಹೇಗೆ ಜಾನಪದವನ್ನು ದೃಶ್ಯೀಕರಿಸುತ್ತದೆ ಎನ್ನುವಂತಹ ವಿವರಣೆ ನೀಡುತ್ತಿದ್ದ. ಈ ವಿವರಣೆಯಲ್ಲಿ ವಿದ್ವತ್ ಪೂರ್ಣ ವಿಶ್ಲೇಷಣೆಯೇನೂ ಇಲ್ಲವಾದರೂ ನನಗೆ ಚಿತ್ರ ಜಾನಪದ  ಎನ್ನುವ ಪದವೊಂದು ನನ್ನನ್ನು ಕಾಡತೊಡಗಿತು. ನಮ್ಮ ಜಾನಪದ ಅಧ್ಯಯನದ ಮೊದ ಮೊದಲ  ಸಂಗ್ರಹಗಳಲ್ಲಿ ಜಾನಪದ ಕಲಾವಿದರ ಚಿತ್ರಗಳನ್ನು ಕಲಾವಿದರಿಂದ ರೇಖೆಗಳನ್ನು ಮಾಡಿಸಿಯೂ, ಕೆಲವು ಕಲೆಗಳ ಚಿತ್ರಗಳನ್ನು ತೆಗೆಸಿಯೂ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಅಂತಹ ಕಡೆಗಳಲ್ಲೆಲ್ಲಾ ಆಯಾ ಆಚರಣೆಯ ವಿವರಣೆಗಿಂದ ಚಿತ್ರವೊಂದು ಆಯಾ ಜಾನಪದದ  ಆಚರಣೆಯ ಸಂವಹನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದವು. ಆದರೆ ಅಲ್ಲಿನ ಜಾನಪದ ವಿದ್ವಾಂಸರ ವಿವರಣೆಗಳೇ ತೀರಾ ಬಡಕಲಾಗಿರುತ್ತಿದ್ದವು. ಇದನ್ನು ನೋಡಿದರೆ ಕನ್ನಡದಲ್ಲಿ ಫೋಕ್ ಲೋರ್ ಫೋಟೋ ಎನ್ ಸೈಕ್ಲೋಪೀಡಿಯಾ  ಒಂದನ್ನು ತಯಾರಿಸುವ ಅಗತ್ಯವಿದೆ ಅನ್ನಿಸುತ್ತದೆ. ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರು ಸಂಪಾದಿಸಿದ ಕರ್ನಾಟಕ ಜಾನಪದ ವಿಶ್ವಕೋಶ  ಒಂದರ್ಥದಲ್ಲಿ ಕರ್ನಾಟಕ ಜನಪದ ಕಲೆಗಳ ಫೋಟೋ ಎನ್ ಸೈಕ್ಲೋಪೀಡಿಯಾ  ತರವೇ ಕಾಣುತ್ತದೆ.

 ಇಷ್ಟೆಲ್ಲಾ ಹಿನ್ನೆಲೆಯಲ್ಲಿ ನಾನು ಹೇಳ ಹೊರಟಿರುವುದು ಪೋಟೋ ಫೋಕ್ ಎನ್ನುವ ಪದ ಅಥವಾ ಚಿಂತನೆ ಕನ್ನಡ ಸಂದರ್ಭದಲ್ಲಿ ಅಪರಿಚ ಪದವೇ ಸರಿ. ಈಗಲಾದರೂ ಪೋಟೋ ಫೋಕ್ ಅಥವಾ ಚಿತ್ರ ಜಾನಪದದ ಬಗ್ಗೆ ಯೋಚಿಸಬೇಕಾಗಿದೆ. ಈ ನೆಲೆಯಲ್ಲಿ ದೃಶ್ಯ ಜಾನಪದದ ಸಾಧ್ಯತೆಗಳ ಬಗ್ಗೆ ನಾವು ಆಲೋಚಿಸಬೇಕಾಗಿದೆ. ಇಂದು ನಾವು ನಮ್ಮ ಜಾನಪದವನ್ನು  ಇತರೆ ಭಾಷೆಯವರಿಗೆ, ಇತರೆ ದೇಶದವರಿಗೆ ಪರಿಣಾಮಕಾರಿಯಾಗಿ ಸಂವಹನ ಮಾಡಲು ಸಾಧ್ಯವಿರುವುದು ಫೋಟೋ ಮತ್ತು ವೀಡಿಯೋ ಮೂಲಕ ಮಾತ್ರ.  ಈ ನೆಲೆಯಲ್ಲಿ ಪೇಸ್ ಬುಕ್ ನಲ್ಲಿ ಹೊಸಪೇಟೆಯ ಶಿವಶಂಕರ್ ಬಣಗಾರ್ ಅವರ ಗ್ರಾಮೀಣ ಭಾಗದ ಚಿತ್ರಲೋಕವನ್ನು ನೋಡುವಾಗಲೆಲ್ಲಾ `ಪೋಟೋ ಫೋಕ್' ಎನ್ನುವ ಪದ ಮತ್ತೆ ಮತ್ತೆ ಕಾಡುತ್ತಿತ್ತು. ಇಲ್ಲಿ ಕೆಲವು ಆಯ್ದ ಚಿತ್ರಗಳನ್ನು ಕೊಡಲಾಗಿದೆ. ಈ ಚಿತ್ರಕ್ಕೆ ವಿವರಣೆಯನ್ನು ನೋಡಿದವರೆಲ್ಲಾ ಒಂದೊಂದು ರೀತಿಯಲ್ಲಿ ಕೊಡುತ್ತಾರೆ ಕೂಡ. ಅದು ಬಣಗಾರ್ ಪೇಸ್ ಬುಕ್ ಗೆ ಅಪ್ ಲೋಡ್ ಮಾಡಿದ ಚಿತ್ರಗಳಿಗೆ ಬಂದ ಕಾಮೆಂಟುಗಳಿಂದಲೂ ತಿಳಿಯುತ್ತದೆ. ಅಂತೆಯೇ ಬಣಗಾರ್ ಸಹ  ಒಂದೊಂದು ಶೀರ್ಷಿಕೆಯನ್ನು ಕೊಟ್ಟಾಗಲೂ ಆ ಶೀರ್ಷಿಕೆಯ  ಆಚೆಯೂ ಚಿತ್ರವೊಂದು ಮಾಡುವ ಸಂವಹನ ವಿಶಿಷ್ಟವಾಗಿರುತ್ತದೆ. ಅಂತೆಯೇ ಒಂದು ಚಿತ್ರವೊಂದು ತನ್ನ ನೆನಪುಗಳ ಚಿತ್ರಗಳನ್ನು ತೆರೆಸುತ್ತೆ. ಉದಾ: ಬಾಲ್ಯ   ಎಂದು ಹಾಕಿದ ಚಿತ್ರಗಳು ನೋಡುಗರ ಬಾಲ್ಯದ ನೂರಾರು ಚಿತ್ರಗಳನ್ನು ಸೃಜಿಸುತ್ತಿರುತ್ತದೆ. ಅಂತೆಯೇ ನೋಡುಗರ ಮನದಲ್ಲಿಯೇ ನೂರಾರು ಚಿತ್ರಗಳ ಕ್ಲಿಕ್ ಆಗುತ್ತಿರುತ್ತದೆ. ಈ ನೆಲೆಯಲ್ಲಿ ಚಿತ್ರ ಜನಪದವೊಂದು ಈ ಚಿತ್ರಗಳ ನೋಡುವಿಕೆಯಲ್ಲಿಯೇ ಹುಟ್ಟುತ್ತಿರುತ್ತದೆ.

   ಬೇರೆ ಬೇರೆ ದೇಶಗಳ `ಫೋಟೋ ಎನ್ ಸೈಕ್ಲೋಪೀಡಿಯಾ' ಗಳು ಪರೋಕ್ಷವಾಗಿ ಫೋಟೋ ಪೋಕ್ ಅನ್ನು ಹುಟ್ಟಿಸುತ್ತಿರುತ್ತದೆ. ನಾನು ಗಮನಿಸಿದ ಆಪ್ರಿಕನ್ ಫೋಕ್ ಲೋರ್  ಎನ್ ಸೈಕ್ಲೋಪೀಡಿಯಾ' ಮತ್ತು ಅಮೆರಿಕಾ `ಫೋಕ್ ಲೋರ್  ಎನ್ ಸೈಕ್ಲೋಪೀಡಿಯಾ' ಗಳು ಪರೋಕ್ಷವಾಗಿ ಫೋಟೋ ಫೋಕ್ ನ್ನು  ಧೃಡಪಡಿಸುತ್ತಿವೆ. ನಾವು ಕನ್ನಡದ ಸಂದರ್ಭದಲ್ಲಿ ಈ ನೆಲೆಯಲ್ಲಿ ಯೋಚಿಸುವ ಅಗತ್ಯವಿದೆ ಎಂದು ಅನ್ನಿಸುತ್ತದೆ. 

   ಶಿವಶಂಕರ್ ಬಣಗಾರ್ ತಮ್ಮ ಚಿತ್ರಗಳ ಮೂಲಕ ನಾವು ನೋಡಿದ ಸಂಗತಿಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿಯೂ, ಸೂಕ್ಷ್ಮವಾಗಿಯೂ ಸೆರೆ ಹಿಡಿಯುತ್ತಿದ್ದಾರೆ. ಹಾಗೆ ನೋಡಿದರೆ ಬಣಗಾರ್ ಅವರ ಹಂಪಿಯ ಫೋಟೋಗಳನ್ನು ಒಟ್ಟಾಗಿಸಿಕೊಂಡು ನೋಡಿದಾಗ ನಾವು ನೋಡದ ಹಂಪಿಯನ್ನು ತಮ್ಮ ಫೋಟೋಗಳ ಮೂಲಕ ತೋರಿಸುತ್ತಾರೆ. ಹಾಗೆ ನೋಡಿದರೆ ಬಣಗಾರ್ ಚಿತ್ರಗಳ ಹಂಪಿಯೇ ಸೃಜನೆಗೊಂಡುಬಿಟ್ಟಿದೆ ಅಂದರೂ ತಪ್ಪಾಗಲಾರದು. ಕುವೆಂಪು `ಇಲ್ಲಿ ಯಾವುದೂ ಮುಖ್ಯವಲ್ಲ ಯಾವುದೂ ಅಮುಖ್ಯವೂ ಅಲ್ಲ..ಎನ್ನುತ್ತಾ ನೀರೆಲ್ಲವೂ ತೀರ್ಥ.. ಎನ್ನುತ್ತಾರೆ. ಈ ಮಾತನ್ನು ಬಣಗಾರ್ ತಮ್ಮ ಚಿತ್ರಗಳ ಸೆರೆ ಹಿಡಿಯುವಲ್ಲಿ ಕುವೆಂಪು ಮಾತನ್ನು ಪಾಲಿಸುತ್ತಿದ್ದಾರೆ ಅನ್ನಿಸುತ್ತದೆ. ಹಾಗಾಗಿ ಒಂದೊಂದು ಹುಲ್ಲುಕಡ್ಡಿಯನ್ನೂ ಸಹ ಬಣಗಾರ್ ಜೂಮ್ ನಲ್ಲಿ ಸೆರೆಹಿಡಿದು ಅದರ ಅಸ್ಥಿತ್ವವನ್ನು ದೊಡ್ಡದಾಗಿ ತೋರಿಸುತ್ತಾರೆ. ಬಣಗಾರ್ ಬಿಂಬಗಳ ಜಗತ್ತು ಮತ್ತಷ್ಟು ಹಿಗ್ಗಲಿ ಎಂದು ಆಶಿಸುತ್ತಾ ಈ ಪುಟ್ಟ ಟಿಪ್ಪಣಿಯನ್ನು ಮುಗಿಸುತ್ತೇನೆ, ಉಳಿದಂತೆ ಚಿತ್ರಗಳಿಗೆ ಶೀರ್ಷಿಕೆ ಕೊಡಲು ಹೋಗಿಲ್ಲ ನೋಡಿದ ನಿಮ್ಮ ಮನದೊಳಗೆ ಹತ್ತಾರು ಶೀರ್ಷಿಕೆಗಳು ಹುಟ್ಟಲಿ..